Agriculture and Rural Development

ಬೆಂಗಳೂರು ಹತ್ತಿರದ ದೊಡ್ಡಬಳ್ಳಾಪುರದಲ್ಲಿ ಶ್ರೀಕಾಂತ ಬೊಲ್ಲಪಲ್ಲಿ ಅವರ 52 ಎಕ್ರೆ ಹೂವಿನ ಕೃಷಿ ನೋಡುವುದೇ ಕಣ್ಣಿಗೆ ಹಬ್ಬ. ಅಲ್ಲಿ 12 ವಿವಿಧ ಹೂಗಳನ್ನು ಬೆಳೆಯುವ ಅವರು ರೂ.70 ಕೋಟಿ ವಾರ್ಷಿಕ ವಹಿವಾಟಿನಿಂದ ಗಳಿಸುವ ಲಾಭ ಸುಮಾರು ರೂ.5 ಕೋಟಿ ಎಂಬುದು ಪುಷ್ಪ ಕೃಷಿಯ ಸಾಧ್ಯತೆಗಳ ದಿಕ್ಸೂಚಿ.

ಅವರು ಸಾಗಿ ಬಂದ ಹಾದಿಯನ್ನು ಹಿಂತಿರುಗಿ ನೋಡಿದಾಗ ಅದೇನೂ ಹೂವಿನ ಹಾದಿ ಆಗಿರಲಿಲ್ಲ. ನಮ್ಮನ್ನು ಬೆರಗಾಗಿಸುವ ಈ ಸಾಧನೆಯ ಹಿನ್ನೆಲೆಯಲ್ಲಿದೆ ಅವರ ದಶಕಗಳ ಶ್ರಮ ಹಾಗೂ ದೃಢ ನಿರ್ಧಾರ. ತೆಲಂಗಾಣದ ನಿಜಾಮಾಬಾದ್ ಜಿಲ್ಲೆಯ ಬೋಧನ್ ಪಟ್ಟಣದ ಕೃಷಿ ಕುಟುಂಬದಲ್ಲಿ ಜನಿಸಿದ ಶ್ರೀಕಾಂತರ ಬಾಲ್ಯ ಬಡತನದಲ್ಲೇ ಕಳೆಯಿತು. ಅವರು 10ನೇ ತರಗತಿಯಲ್ಲಿ ಕಲಿಯುತ್ತಿದ್ದಾಗ, ಅವರ ಹೆತ್ತವರು ಮುಂದಿನ ವಿದ್ಯಾಭ್ಯಾಸಕ್ಕೆ ಹಣ ಹೊಂದಿಸಲು ತಮ್ಮಿಂದಾಗದು ಎಂದರು..

ಅವರ ಕುಟುಂಬದ ಜಮೀನಿನಲ್ಲಿ ಮಾಡುತ್ತಿದ್ದ ಬೇಸಾಯದಿಂದ ಹೆಚ್ಚೇನೂ ಲಾಭವಿರಲಿಲ್ಲ. ಹಾಗಾಗಿ ಅವರ ಕುಟುಂಬ ಸಾಲದ ಹೊರೆಯಲ್ಲಿ ಮುಳುಗಿತ್ತು. ಅಂತಹ ಪರಿಸ್ಥಿತಿಯಲ್ಲಿ, ದುಡಿದು ಹಣ ಗಳಿಸುವ ಆಶಯದಿಂದ ಅವರು ಬೆಂಗಳೂರು ಸೇರಿಕೊಂಡರು. ಹೂವಿನ ಬೇಸಾಯದಲ್ಲಿ ತೊಡಗಿದ್ದ ಸಂಬಂಧಿಕರೊಬ್ಬರ ನೆಲಮಂಗಲದ ಫಾರ್ಮಿನಲ್ಲಿ 1995ರಲ್ಲಿ ತಮ್ಮ 16ನೆಯ ವಯಸ್ಸಿನಲ್ಲೇ ಕೆಲಸ ಮಾಡತೊಡಗಿದರು. ಆರಂಭದಲ್ಲಿ ದಿನಕ್ಕೆ ಸುಮಾರು 18 ಗಂಟೆ ದುಡಿದು ಅವರು ಗಳಿಸುತ್ತಿದ್ದ ಸಂಬಳ ತಿಂಗಳಿಗೆ ಕೇವಲ ರೂ.1,000/-. 

ತಮ್ಮ ಕುಟುಂಬದ ಸಾಂಪ್ರದಾಯಿಕ ಕೃಷಿಯಿಂದ ಹೆಚ್ಚಿನ ಲಾಭ ಗಳಿಸಲು ಸಾಧ್ಯವಿಲ್ಲ ಎಂದು ಅರಿತಿದ್ದ ಶ್ರೀಕಾಂತರ ಗಮನ ಸೆಳೆದದ್ದು ಆಗ ಚಾಲ್ತಿಗೆ ಬರುತ್ತಿದ್ದ ಪುಷ್ಪೋದ್ಯಮಕ್ಕೆ ಉತ್ತಮ ಭವಿಷ್ಯವಿದೆ ಎಂಬ ಮಾಹಿತಿ. ಎರಡು ವರುಷ ಅಲ್ಲಿ ದುಡಿದ ಶ್ರೀಕಾಂತ್, ಹೂಗಳ ಬೇಸಾಯ, ಕೊಯ್ಲು, ಮಾರಾಟ ಮತ್ತು ರಫ್ತು ಬಗ್ಗೆ ಸಮಗ್ರವಾಗಿ ಕಲಿತುಕೊಂಡರು.  

,

1)ಎಪ್ರಿಲ್ 20ರ ನಂತರದ ಅಮವಾಸ್ಯೆಯ ಹಿಂದೆ-ಮುಂದೆ, “ಮಿ" ತಿಥಿ" ಹೊರತು ಪಡಿಸಿ, ಶನಿವಾರ ಅಥವಾ ಬುಧವಾರ ಈ ಕೆಳಗಿನ ತರಕಾರಿ ಬೀಜ ಬಿತ್ತಬೇಕು: ("ಮಿ" ತಿಥಿ ಅಂದರೆ ನವಮಿ, ದಶಮಿ, ಸಪ್ತಮಿ, ಅಷ್ಟಮಿ ಇತ್ಯಾದಿ)
ಸೋರೆಕಾಯಿ, ಪಡುವಲಕಾಯಿ, ದಾರಳೆ, ಋಷಿಕೇಶ ದಾರಳೆ, ಹಾಗಲಕಾಯಿ, ಅಲಸಂಡೆ, ಕುಂಬಳಕಾಯಿ, ಚೀನಿಕಾಯಿ
ಈ ಬೀಜಗಳನ್ನು ಗೊಬ್ಬರ ಹಾಕಿ ಹದ ಮಾಡಿದ ಮಣ್ಣಿನ ಏರುಮಡಿಗಳಲ್ಲಿ ಎರಡರಿಂದ ಮೂರಿಂಚು ಆಳದಲ್ಲಿ ಬಿತ್ತಬೇಕು. ಬಿತ್ತಿದ ನಂತರ, ಬೀಜಗಳಿಗೆ ನೀರು ಹಾಕಲೇ ಬಾರದು. ಮಳೆ ಬಂದು, ಸ್ವಾಭಾವಿಕವಾಗಿ ಬೀಜ ಮೊಳೆಯಬೇಕು. 

2) ಮೇ ಕೊನೆಯ ಅಮವಾಸ್ಯೆಯ ಅಕ್ಕ-ಪಕ್ಕ, “ಮಿ" ತಿಥಿ ಹೊರತು ಪಡಿಸಿ, ಶನಿವಾರ ಅಥವಾ ಬುಧವಾರ ಬೆಂಡೆ ಬೀಜ ಬಿತ್ತಬೇಕು. 

3)ಮಳೆಗಾಲ ಶುರುವಾದ ಕೂಡಲೇ ಬೇಸಿಗೆಯಲ್ಲಿ ಬೆಳೆಸಿದ್ದ ಬದನೆ ಗಿಡಗಳ ಗೆಲ್ಲುಗಳನ್ನು ಸವರಿ, ಸಾಲು ಬಿಡಿಸಿ, ಗೊಬ್ಬರ ಹಾಕಿದರೆ, ಫಸಲು ಸಮೃದ್ಧ. 

4)ಜೂನ್ ಕೊನೆ ವಾರ/ ಜುಲಾಯಿ ಮೊದಲ ವಾರದ ಅಮವಾಸ್ಯೆ ದಿನ (ಆರ್ಧ್ರಾ ನಕ್ಷತ್ರ) ಮುಳ್ಳುಸೌತೆ ಬೀಜ ಬಿತ್ತಬೇಕು. 

5)ಜುಲಾಯಿ ಕೊನೆಯ ವಾರ ಅಥವಾ ಆಗಸ್ಟ್ ಮೊದಲ ವಾರದ ಆಟಿ-ಅಮವಾಸ್ಯೆಯ ಆಸುಪಾಸಿನಲ್ಲಿ ಸೌತೆ, ಕುಂಬಳಕಾಯಿ ಮತ್ತು ಚೀನಿಕಾಯಿ ಬೀಜ ಬಿತ್ತಬೇಕು. ಬಸಳೆಯನ್ನೂ ಆಗಲೇ ನೆಡಬೇಕು.

6)ಈ ಮೇಲೆ (5)ರಲ್ಲಿ ತಿಳಿಸಿದ ದಿನವೇ ಬದನೆ ಬೀಜ ಬಿತ್ತಬೇಕು. ಇದು ಅಕ್ಟೋಬರಿನಲ್ಲಿ ಬದನೆ ಸಸಿಗಳನ್ನು ನೆಡುವುದಕ್ಕಾಗಿ ಪೂರ್ವ ತಯಾರಿ. 

7)ಆಗಸ್ಟ್ ತಿಂಗಳಿನ ಕೊನೆಯಲ್ಲಿ ತೊಂಡೆ ಬಳ್ಳಿ ನೆಡಬೇಕು ಮತ್ತು ಕಳೆದ ವರುಷ ನೆಟ್ಟು ಬೆಳೆಸಿದ ಬಳ್ಳಿ ಕತ್ತರಿಸಬೇಕು.

8)ಅಕ್ಟೋಬರ್ 20ರಿಂದ 30 ಅವಧಿಯಲ್ಲಿ ಬದನೆ ಸಸಿಗಳನ್ನು ನೆಡಬೇಕು.

9)ನವಂಬರ್ ಕೊನೆಯ ವಾರದಲ್ಲಿ ಬೆಂಡೆ ಬೀಜ ಬಿತ್ತಬೇಕು.

10)ನವಂಬರ್ ಕೊನೆ ವಾರ ಅಥವಾ ಡಿಸೆಂಬರ್ ಮೊದಲ ವಾರದಲ್ಲಿ “ಆಟಿಸೌತೆ" ಬೆಳೆಸಿದ ಮಣ್ಣಿನ ಸಾಲುಗಳನ್ನು ಬಿಡಿಸಿ, ಮಣ್ಣು ಕೊಚ್ಚಿ, ಹರಿವೆ ಬೀಜ ಬಿತ್ತಬೇಕು.

,

“ತರಕಾರಿ ಬಿತ್ತನೆಗೆ ನಾನೊಂದು ಕ್ಯಾಲೆಂಡರ್ ಕೊಡ್ತೇನೆ. ಅದರ ಪ್ರಕಾರ ಆಯಾ ಬೀಜಗಳ ಬಿತ್ತನೆ ಮಾಡಿ, ಗಿಡ-ಬಳ್ಳಿಗಳು ಬೆಳೆದಂತೆ ಸಾಕಷ್ಟು ಗೊಬ್ಬರ ಕೊಡುತ್ತಾ ಬಂದರೆ ಫಸಲು ಸಮೃದ್ಧ. ಇದು ನನ್ನ ಮೂವತ್ತು ವರುಷಗಳ ಅನುಭವದ ಬಲದಿಂದ ನಾನು ಕೊಡುತ್ತಿರುವ ಸಲಹೆ. ನಾನಂತು ಈ ಕ್ಯಾಲೆಂಡರನ್ನೇ ಅನುಸರಿಸಿ ತರಕಾರಿ ಕೃಷಿ ಮಾಡ್ತಿದ್ದೇನೆ. ಈ ಅವಧಿಯಲ್ಲಿ ನನ್ನ ಮನೆ ಬಳಕೆಗೆ ಮಾರುಕಟ್ಟೆಯಿಂದ ತರಕಾರಿ ಖರೀದಿಸಿ ತಂದದ್ದೇ ಇಲ್ಲ. ಮನೆಯಲ್ಲಿ ಸಮಾರಂಭಗಳು ಆದಾಗಲೂ ಎಲ್ಲ ಅತಿಥಿಗಳ ಊಟಕ್ಕೆ ನಮ್ಮದೇ ತರಕಾರಿ” ಎಂದು ಪಿ. ಶಿವಪ್ರಸಾದ್ ವರ್ಮುಡಿ ಹೇಳುತ್ತಿದ್ದರೆ ನಮಗೆ ಅಚ್ಚರಿ. ಜೊತೆಗೆ ಇದನ್ನು ನಂಬುವುದು ಹೇಗೆ ಎಂಬ ಪ್ರಶ್ನೆ. 

ಆದರೆ ಕಾಸರಗೋಡಿನ ಪೆರ್ಲದ ಹತ್ತಿರವಿರುವ ಅವರ ಜಮೀನಿಗೊಮ್ಮೆ ಭೇಟಿ ನೀಡಿ, ಅವರ ತರಕಾರಿ ಕೃಷಿ ಕಣ್ಣಾರೆ ಕಂಡರೆ ಅವರ ಮಾತನ್ನು ನಂಬಲೇ ಬೇಕಾಗುತ್ತದೆ. ಯಾಕೆಂದರೆ ಅಲ್ಲಿದೆ ಬೆಂಡೆ, ತೊ೦ಡೆ, ಅಲಸಂಡೆ, ಟೊಮೆಟೋ, ಹರಿವೆ, ಬಸಳೆ, ಸೌತೆ, ಮುಳ್ಳುಸೌತೆ, ಪಡುವಲ, ಸೋರೆ, ಕುಂಬಳ, ಚೀನಿಕಾಯಿ ಇತ್ಯಾದಿ ತರಕಾರಿಗಳ ಸಮೃದ್ಧ ಬೇಸಾಯ. ಶಿವಪ್ರಸಾದ್ ವರ್ಮುಡಿಯವರ ಈ ಸಾಧನೆಯ ಹಿನ್ನೆಲೆಯಲ್ಲಿದೆ ಅವರ ದಶಕಗಳ ಪ್ರಯತ್ನ, ಪ್ರಯೋಗ ಮತ್ತು ಕಲಿಯುವ ಛಲ. 

ಇವೆಲ್ಲದರ ಫಲವಾಗಿ ಅವರು ಯಾವ್ಯಾವ ತರಕಾರಿ ಬಿತ್ತನೆ ಯಾವಾಗ ಮಾಡಬೇಕು ಎಂಬ ಕ್ಯಾಲೆಂಡರ್ ಸಿದ್ಧಪಡಿಸಿದ್ದಾರೆ. ಇದರ ಬಗ್ಗೆ ಅವರು ಹೇಳುವ ಮಾತು: “ನಮ್ಮ ಮನೆಯಲ್ಲಿ ಮದುವೆ, ಮುಂಜಿ, ನಾಮಕರಣ ಇತ್ಯಾದಿ ಎಲ್ಲ ಶುಭ ಸಮಾರಂಭಗಳಿಗೂ “ದಿನ” ನೋಡಿ, ಶುಭದಿನದಂದು ಶುಭಮುಹೂರ್ತದಲ್ಲಿ ಅದನ್ನು ನಡೆಸುತ್ತೇವೆ. ಹಾಗೆಯೇ ತರಕಾರಿ ಬೀಜ ಬಿತ್ತನೆಗೆ ಮತ್ತು ಸಸಿ ನಾಟಿಗೆ ಶುಭದಿನಗಳಿವೆ.” ಜೊತೆಗೆ, ಅವರು ಹಲವು ನಿರ್ದಿಷ್ಟ ವಿಧಾನಗಳನ್ನು ಅನುಸರಿಸುತ್ತಾರೆ. 

ಎಲ್ಲದಕ್ಕಿಂತ ಮುಖ್ಯವಾಗಿ, ಶಿವಪ್ರಸಾದ್ ವರ್ಮುಡಿಯವರ ತರಕಾರಿ ಕೃಷಿಯಲ್ಲಿ ಗಮನಿಸಬೇಕಾದ ಎರಡು ಸಂಗತಿಗಳು:
ಅವರದು ಸಾವಯವ ತರಕಾರಿ ಕೃಷಿ; ತರಕಾರಿ ಬೆಳೆಸುವಾಗ ಅವರು ಯಾವುದೇ ರಾಸಾಯನಿಕ ಬಳಸುವುದಿಲ್ಲ. ಹಾಗೂ ಅವರದು ಗೋ-ಆಧಾರಿತ ತರಕಾರಿ ಕೃಷಿ. 

,

ಹಲವರು ಕೃಷಿ ತೊರೆದು, ನಗರಗಳಲ್ಲಿ ನೆಲೆಸುತ್ತಿರುವ ಇಂದಿನ ಕಾಲಘಟ್ಟದಲ್ಲಿ, ಕೃಷಿಯಲ್ಲೇ ಬದುಕು ಕಟ್ಟಿಕೊಂಡಿರುವ ಶ್ರೀಹರಿ ದರ್ಬೆ ಆ ಟ್ರೆಂಡಿಗೆ ವಿನಾಯ್ತಿ. ಕೃಷಿಯ ಜೊತೆಗೆ ಅನೇಕ ಹವ್ಯಾಸಗಳಲ್ಲಿ ತೊಡಗಿಕೊಂಡು, ಸಮಾಜಮುಖಿ ಕೆಲಸಗಳಲ್ಲಿ ತೊಡಗಿಕೊಂಡಿರುವ ಶ್ರೀಹರಿ ದರ್ಬೆಯವರೊಂದಿಗೆ ಅವರ ತೋಟಕ್ಕೊಂದು ಸುತ್ತು ಬಂದಾಗ ಕೃಷಿ ಬದುಕಿನ ಸಾಧ್ಯತೆಗಳ ಅನಾವರಣ. 
ದಕ್ಷಿಣ ಕನ್ನಡದ ಪುತ್ತೂರಿನಿಂದ ಕಾರಿನಲ್ಲಿ ಹೊರಟು, ಅಡ್ಕಸ್ಥಲ ಸೇತುವೆ ದಾಟಿ, ಗುಡ್ಡದ ರಸ್ತೆಯಲ್ಲಿ ಸಾಗುತ್ತಿದ್ದೆವು. ಆಗ ಬಲಬದಿಯಲ್ಲಿ ಆಳದ ಕಣಿವೆಯಲ್ಲಿ "ಸೀರೆ ಹೊಳೆ” ಯ ಹರಿವಿಗೆ ಅಡ್ಡವಾಗಿ ಕಾಣಿಸಿತು,“ದರ್ಬೆ ಕಟ್ಟ”.
ಅದು ಅಲ್ಲಿನ 25 ಕುಟುಂಬದವರು ಸಾಮೂಹಿಕ ಶ್ರಮದಾನದಿಂದ ಹೊಳೆ ನೀರಿನ ಹರಿವು ತಡೆಯಲು ಹೊಳೆಗೆ ಅಡ್ಡವಾಗಿ ವರುಷಕ್ಕೊಮ್ಮೆ ನಿರ್ಮಿಸುವ ಕಟ್ಟ. ಅದರ ಫಲಾನುಭವಿಗಳಲ್ಲಿ ಒಬ್ಬರು ಶ್ರೀಹರಿ ದರ್ಬೆ. ನಾವು ಕಾರಿನಿಂದ ಇಳಿಯುತ್ತಲೇ ಎದುರಾದರು ಶ್ರೀಹರಿ. 
ಅನಂತರ, ಅವರೊಂದಿಗೆ ನಡೆಯುತ್ತಾ ಅವರ ತೋಟ ದಾಟಿದೊಡನೆ ಎದುರಾಯಿತು 180 ಅಡಿ ಉದ್ದದ ದರ್ಬೆ ಕಟ್ಟ. ರೂ.4,500 ಬೆಲೆಯ ವಿಶಾಲವಾದ ಪ್ಲಾಸ್ಟಿಕ್ ಹಾಳೆ ಬಳಸಿ ನಿರ್ಮಿಸಿದ ಕಟ್ಟ. ಪ್ಲಾಸ್ಟಿಕ್ ಹಾಳೆಯ ಮೇಲೆ ಹಿತಾಚಿ ಯಂತ್ರದಿಂದ ಮರಳು ಅಗೆದುಅಗೆದು ಹಾಕಿ, ಮರಳಿನ ತಡೆಗೋಡೆ ಐದಡಿ ಎತ್ತರವಾದಾಗ, ಎರಡೂ ಬದಿಗಳಿಂದ ಪ್ಲಾಸ್ಟಿಕ್ ಹಾಳೆ ಎತ್ತಿ, ತಡೆಗೋಡೆಯನ್ನು ಮುಚ್ಚಿದರೆ ಆ ನೀರಿನ ಕಟ್ಟ ತಯಾರು. ಈ ವಿಧಾನದ ಅನಾನುಕೂಲ: ಪ್ರತಿ ವರುಷ ಹೊಸ ಪ್ಲಾಸ್ಟಿಕ್ ಹಾಳೆ ಅಗತ್ಯ. 
ಈ ಕಟ್ಟ ಕಟ್ಟುವುದು ಡಿಸೆಂಬರ್‍ನಲ್ಲಿ. ಕಟ್ಟ ನಿರ್ಮಿಸುವ ವೆಚ್ಚವನ್ನು ಎಲ್ಲ ಫಲಾನುಭವಿ ಕುಟುಂಬಗಳು ಹಂಚಿಕೊಳ್ಳುವುದು ವಾಡಿಕೆ. ಹಿತಾಚಿ ಯಂತ್ರದ 19 ಗಂಟೆ ಬಾಡಿಗೆ ಮತ್ತು ಪ್ಲಾಸ್ಟಿಕ್ ಹಾಳೆಯ ವೆಚ್ಚ ಸೇರಿಸಿ, ಒಟ್ಟು ಆದ ವೆಚ್ಚ ರೂ.28,000. ಇದರಲ್ಲಿ ಶ್ರೀಹರಿ ಅವರ ಪಾಲು ರೂ.3,000. ಇಷ್ಟೇ ವೆಚ್ಚದಲ್ಲಿ ಅವರ ತೋಟಕ್ಕೆ ಸಮೃದ್ಧ ನೀರು. ಕಟ್ಟದ ನೀರನ್ನು ಪಂಪ್-ಸೆಟ್ಟಿನಿಂದ ಎತ್ತುವವರು ಹದಿನಾರು ಕೃಷಿಕರು. ಇನ್ನೊಂದು ಲಾಭ 10 ಅಡಿ ಆಳದ ಕಟ್ಟದ ಕೆರೆಯಿಂದ ಸಿಗುವ ಕ್ವಿಂಟಾಲುಗಟ್ಟಲೆ ಮೀನು. 

ರಾಜಸ್ಥಾನದ ನಗೌರ್ ಜಿಲ್ಲೆಯ ರಾಜಪುರ ಗ್ರಾಮದ ರಾಖೇಶ್ ಚೌಧರಿ ಬಿ. ಎಸ್ಸಿ. ಪದವಿ ಶಿಕ್ಷಣ ಮುಗಿಸಿ, ಹಳ್ಳಿಗೆ ಮರಳಿದರು. ಔಷಧೀಯ ಸಸ್ಯಗಳ ಕೃಷಿ ಮಾಡುವ ತನ್ನ ಯೋಜನೆಯನ್ನು ಕುಟುಂಬದವರಿಗೂ ಸ್ನೇಹಿತರಿಗೂ ತಿಳಿಸಿದಾಗ ಅವರಿಗೆ ಸಿಕ್ಕಿದ ಪ್ರತಿಕ್ರಿಯೆಗಳು: “ಇದರಲ್ಲಿ ನಿನಗೆ ಸೋಲು ಖಂಡಿತ”, “ನೀನು ಎಲ್ಲ ಹಣವನ್ನೂ ಕಳೆದುಕೊಳ್ಳುತ್ತಿ”.

“ಇದರಲ್ಲೇನೂ ಅಚ್ಚರಿಯಿಲ್ಲ. ಯಾಕೆಂದರೆ, ನೀವು ಡಿಗ್ರಿ ಗಳಿಸಿದರೆ ಸಂಬಳದ ಕೆಲಸಕ್ಕೆ ಹೋಗಬೇಕೆಂದು ಜನರು ನಿರೀಕ್ಷಿಸುತ್ತಾರೆ. ಈಗಿನ ಯುವಜನರಿಗಂತೂ ಕೃಷಿಯ ಬದಲಾಗಿ ಕೆಲವು ಸಾವಿರ ರೂಪಾಯಿ ಸಂಬಳದ ಕೆಲಸವೇ ಇಷ್ಟ” ಎನ್ನುತ್ತಾರೆ ರಾಖೇಶ್. 

2003ರಲ್ಲಿ ತಮ್ಮ ಕೃಷಿ ಜಮೀನಿನ ನಿರ್ವಹಣೆಯಲ್ಲಿ ತಂದೆಗೆ ಸಹಕರಿಸುತ್ತಿದ್ದ ರಾಖೇಶ್ ಕೃಷಿಯ ಹೊಸ ಸಾಧ್ಯತೆಗಳ ಬಗ್ಗೆ ಮಾಹಿತಿ ಪರಿಶೀಲಿಸುತ್ತಿದ್ದರು. ಆಗ ಅವರಿಗೆ ರಾಜಸ್ಥಾನ ಔಷಧೀಯ ಸಸ್ಯಗಳ ಬೋರ್ಡಿನ “ಒಪ್ಪಂದ ಕೃಷಿ ಸ್ಕೀಮ್” ಬಗ್ಗೆ ತಿಳಿಯಿತು. ಔಷಧೀಯ ಸಸ್ಯಗಳ ಒಪ್ಪಂದ ಕೃಷಿ ಮಾಡುವ ಕೃಷಿಕರಿಗೆ ಆ ಬೋರ್ಡ್ ಸಹಾಯಧನ ಒದಗಿಸುತ್ತಿತ್ತು. ಕೃಷಿ ಉತ್ಪನ್ನಗಳ ಉತ್ಪಾದನೆ ಮತ್ತು ಒದಗಣೆಗಾಗಿ ಕೃಷಿಕರು ಹಾಗೂ ಸಂಸ್ಕರಣೆ ಮತ್ತು/ ಅಥವಾ ಮಾರ್ಕೆಟಿಂಗ್ ಘಟಕಗಳ ನಡುವಣ ಒಪ್ಪಂದವೇ ಒಪ್ಪಂದ ಕೃಷಿ. ಆದರೆ ಆ ಕಾಲಘಟ್ಟದಲ್ಲಿ ಅವರ ಪ್ರದೇಶದಲ್ಲಿ ಅವರ ಕುಟುಂಬದ ಸಹಿತವಾಗಿ ಯಾರೊಬ್ಬರೂ ಪಾರಂಪರಿಕ ಕೃಷಿಯ ಹೊರತಾಗಿ ಬೇರೇನನ್ನೂ ಕೈಗೆತ್ತಿಕೊಳ್ಳಲು ತಯಾರಿರಲಿಲ್ಲ. 

ಅದೇನಿದ್ದರೂ ಈ ಅವಕಾಶವನ್ನು ಬಳಸಿಕೊಳ್ಳಲು ರಾಖೇಶ್ ನಿರ್ಧರಿಸಿದರು. ಔಷಧೀಯ ಸಸ್ಯಗಳ ಇಲಾಖೆಯ ಅಧಿಕಾರಿಗಳು ಭಾರೀ ಲಾಭದಾಯಕ ಔಷಧೀಯ ಸಸ್ಯಗಳ ಬಗ್ಗೆ ಇವರಿಗೆ ಮಾಹಿತಿ ನೀಡಿದರು. 

ಆದರೆ ಹೊಸ ಯೋಜನೆಯನ್ನು ಕಾರ್ಯಗತಗೊಳಿಸುವುದು ಸುಲಭದ ಕೆಲಸವಾಗಿರಲಿಲ್ಲ. ರಾಖೇಶರಿಗೆ ಹಣ ಹೊಂದಿಸುವುದೇ ದೊಡ್ಡ ಸವಾಲಾಗಿತ್ತು. ಸಾಲ ಪಡೆಯಲು ಭದ್ರತೆ ಒದಗಿಸಲೇ ಬೇಕಾಗಿತ್ತು. ಆದರೆ ಅವರದ್ದೇ ಆದ ಜಮೀನು ಇರಲಿಲ್ಲ. ಹಾಗಾಗಿ ಪತ್ನಿಯ ಒಡವೆಗಳನ್ನು ಅಡವಿಟ್ಟು ಸಾಲ ಪಡೆದರು. ಮನೆಯಲ್ಲಿದ್ದ ಕೆಲವು ದನಕರುಗಳನ್ನೂ ಮಾರಾಟ ಮಾಡಿ, ತನ್ನ ಮೊದಲನೆಯ ಬಿತ್ತನೆಗಾಗಿ ಹಣ ಹೊಂದಿಸಿದರು ರಾಖೇಶ್. 

,

ದಕ್ಷಿಣ ಕನ್ನಡದ ಬೆಳ್ತಂಗಡಿ ತಾಲೂಕಿನ ಮಿತ್ತಬಾಗಿಲು ಗ್ರಾಮದ ಬಿ. ಕೆ. ದೇವರಾಯರು 13 ಸಪ್ಟಂಬರ್ 2023ರಂದು ನವದೆಹಲಿಯಲ್ಲಿ ಭಾರತದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ “ಸಸ್ಯ ತಳಿ ರಕ್ಷಕ ಕೃಷಿಕ” ಪ್ರಶಸ್ತಿ ಸ್ವೀಕರಿಸಿದ್ದು ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಯಿತು. ಯಾಕೆಂದರೆ, ಮೊಟ್ಟಮೊದಲ ಕೃಷಿಕರ ಹಕ್ಕುಗಳ  ಗ್ಲೋಬಲ್ ಸಿಂಪೋಸಿಯಮ್‌ನಲ್ಲಿ ಆ ಪ್ರತಿಷ್ಠಿತ ಪ್ರಶಸ್ತಿ ಸ್ವೀಕರಿಸಿದ 16 ಕೃಷಿಕರಲ್ಲಿ ಅವರೊಬ್ಬರು. 

ಆ ಸುದ್ದಿ ತಿಳಿದಾಗ ನಮ್ಮ ಜಿಲ್ಲೆಯ “ಭತ್ತದ ತಳಿ ರಕ್ಷಕ ತಪಸ್ವಿ” ಇಂತಹ ಸಮ್ಮಾನಕ್ಕೆ ಪಾತ್ರರಾದ ಸಂತಸ. ಜೊತೆಗೆ ಮಂಗಳೂರಿನ “ಸಾವಯವ ಕೃಷಿಕ ಗ್ರಾಹಕ ಬಳಗ (ರಿ.)” ಸದಸ್ಯರ ಜೊತೆಗೆ ಅವರ ಜಮೀನಿಗೆ ಭೇಟಿಯಿತ್ತಾಗ ಅವರು ನಮಗೆ ಹಾಕಿದ್ದ ಸವಾಲು ನೆನಪಾಯಿತು: “ನನ್ನಷ್ಟು ಶ್ರೀಮಂತ ಯಾರೂ ಇಲ್ಲ ಅಂತೇನೆ. ಯಾಕಂದ್ರೆ ನನ್ನ ಉಗ್ರಾಣ ತುಂಬಿದೆ – ಭತ್ತದ ಗೋಣಿಗಳಿಂದ. ಅದೆಲ್ಲ ನಾನೇ ಬೆಳೆಸಿದ ಭತ್ತ. ಅದ್ರಿಂದ ಅಕ್ಕಿ ಮಾಡಿ ವರ್ಷಗಟ್ಟಲೆ ಊಟ ಮಾಡಬಹುದು. ಇಂತಹ ಶ್ರೀಮಂತಿಕೆ ಯಾರಿಗುಂಟು ಹೇಳಿ!” 

ವಯಸ್ಸು 80 ದಾಟಿರುವ ಹಿರಿಯ ದೇವರಾಯರು ಸಂರಕ್ಷಿಸಿರುವುದು ಒಂದೆರಡಲ್ಲ, 240 ಭತ್ತದ ತಳಿಗಳನ್ನು. ಅವುಗಳಲ್ಲಿ ಬಹುಪಾಲು ದೇಸಿ ಭತ್ತದ ತಳಿಗಳು. ಜೀರ್-ಸಾಲೆ, ಗಂಧಸಾಲೆ, ಪೀಟ್-ಸಾಲೆ, ಕಯಮೆ, ಕುಟ್ಟಿಕಯಮೆ, ರಾಜಕಯಮೆ, ಸುಗ್ಗಿಕಯಮೆ, ಅತಿಕರಾಯ, ಸಣ್ಣ-ಅತಿಕರಾಯ, ಉಬರಮುಂಡ ಇತ್ಯಾದಿ. ಪ್ರತಿ ವರುಷ 240 ವಿವಿಧ ಭತ್ತದ ತಳಿ ಬೀಜಗಳನ್ನು ಪುಟ್ಟಪುಟ್ಟ ತಾಕುಗಳಲ್ಲಿ ತಾವೇ ಬಿತ್ತಿ ಬೆಳೆದು ಅವುಗಳ ಬೀಜಗಳ ಜೀವಚೈತನ್ಯ ಉಳಿಸಿಕೊಳ್ಳುತ್ತಾರೆ ದೇವರಾಯರು. ಆ ಸಾಧನೆಯನ್ನು ಗುರುತಿಸಿ, ಅಹ್ಮದಾಬಾದಿನ ಸೃಷ್ಠಿ ಫೌಂಡೇಷನಿನಿಂದ ಅವರಿಗೆ 2017ರ ರಾಷ್ಟ್ರಮಟ್ಟದ “ಸೃಷ್ಠಿ ಸಮ್ಮಾನ” ಹಾಗೂ 2 ನವಂಬರ್ 2019ರಂದು ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ. 

“ನಮ್ಮ ಜಿಲ್ಲೆಯ ರೈತರು ಬಾಳೆಗೊನೆಗಳ ಕೊಯ್ಲಿನ ನಂತರ ಬಾಳೆಗಿಡಗಳನ್ನು ಕಸವೆಂದು ಬಿಸಾಡುತ್ತಿದ್ದುದನ್ನು ನಾನು ಬಾಲ್ಯದಿಂದಲೂ ನೋಡುತ್ತಿದ್ದೆ. ಅದರಿಂದ ಏನೇನೆಲ್ಲ ಮಾಡಬಹುದೆಂದು ಸಂಶೋಧನೆ ಮಾಡುವ ತನಕ ನನಗೂ ಅದೊಂದು ದೊಡ್ಡ ಆದಾಯದ ಮೂಲವಾಗಬಹುದೆಂದು ತಿಳಿದಿರಲಿಲ್ಲ" ಎನ್ನುತ್ತಾರೆ ಮಧ್ಯಪ್ರದೇಶದ ಮೆಹುಲ್ ಶ್ರೋಫ್. 

ಈಗ ಅವರ “ಶ್ರೋಫ್ ಇಂಡಸ್ಟ್ರೀಸ್” ಘಟಕವು ತಿಂಗಳಿಗೆ ಐದು ಟನ್ ಬಾಳೆನಾರಿನಿಂದ ವಿವಿಧ ಪರಿಸರಸ್ನೇಹಿ ಉತ್ಪನ್ನಗಳನ್ನು ಉತ್ಪಾದಿಸುತ್ತಿದೆ. ಚೀಲಗಳು, ಬುಟ್ಟಿಗಳು, ಸಸಿಗಳ ಕುಂಡಗಳು, ಯೋಗಾಸನ ಚಾಪೆಗಳು, ಗೋಡೆ ಗಡಿಯಾರಗಳು, ಚಾಪೆಗಳು, ಕಸಬರಿಕೆಗಳು, ಹಗ್ಗ ಇತ್ಯಾದಿಗಳನ್ನು ಮಾರಾಟ ಮಾಡುವ ಅವರ ಘಟಕದ ವಾರ್ಷಿಕ ಆದಾಯ ರೂ.30 ಲಕ್ಷ. 

ಎಂ.ಬಿ.ಎ. ಸ್ನಾತಕೋತ್ತರ ಪದವಿ ಗಳಿಸಿದ ಮೆಹುಲ್ ಶ್ರೋಫ್, ನಂತರ ತನ್ನ ಕುಟುಂಬದ ವ್ಯವಹಾರದಲ್ಲಿ ತೊಡಗಿಸಿಕೊಂಡರು. ಆದರೆ ಅವರಿಗೊಂದು ಕನಸು: ತನ್ನದೇ ಪರಿಸರಸ್ನೇಹಿ ಉದ್ಯಮವೊಂದನ್ನು ಸ್ಥಾಪಿಸಬೇಕೆಂದು. 

ಈ ನಿಟ್ಟಿನಲ್ಲಿ ಮಧ್ಯಪ್ರದೇಶದ  ಬುರ್-ಹಾನ್‌ಪುರದ ನವ್‌ಸಾರಿ ಕೃಷಿ ವಿಶ್ವವಿದ್ಯಾಲಯ ಮತ್ತು ಜಿಲ್ಲಾಡಳಿತ ಸಂಘಟಿಸಿದ ಕಾರ್ಯಾಗಾರದಲ್ಲಿ ಅವರು ಭಾಗವಹಿಸಿದರು. ಅದರಲ್ಲಿ ಬಾಳೆನಾರಿನಿಂದ ಕಾಗದ, ಉಡುಪುಗಳು ಮತ್ತು ಕರಕುಶಲ ವಸ್ತುಗಳನ್ನು ತಯಾರಿಸುವ ಬಗ್ಗೆ ತನಗೆ ಮಾಹಿತಿ ಸಿಕ್ಕಿತು ಎಂದವರು ತಿಳಿಸುತ್ತಾರೆ. ಅನಂತರ ಎರಡು ವರುಷ ಮೆಹುಲ್ ಶ್ರೋಫ್ ಬಾಳೆನಾರಿನಿಂದ ಏನೇನೆಲ್ಲ ಮಾಡಬಹುದು ಎಂಬ ಬಗ್ಗೆ ಅಧ್ಯಯನ ನಡೆಸಿ ಯೋಜನೆಯೊಂದನ್ನು ರೂಪಿಸಿದರು. ಅದರ ಅನುಸಾರ 2018ರಲ್ಲಿ “ಶ್ರೋಫ್ ಇಂಡಸ್ಟ್ರೀಸ್” ಘಟಕ ಸ್ಥಾಪಿಸಿದರು. 

ಬುರ್-ಹಾನ್‌ಪುರದಲ್ಲಿರುವ 16,000 ಎಕರೆಗಳ ಬಾಳೆತೋಟದಲ್ಲಿ ಟನ್ನುಗಟ್ಟಲೆ ಬಾಳೆಕಾಂಡ ಮತ್ತು ಎಲೆಗಳನ್ನು ಕಸವೆಂದು ಎಸೆಯಲಾಗುತ್ತಿದೆ. ಕೊಳೆತು ಹೋಗಬಹುದಾಗಿದ್ದ ಅದೆಲ್ಲವನ್ನು ತಂದು “ಕಸದಿಂದ ರಸ” ಉತ್ಪಾದಿಸುತ್ತಿರುವುದು ಮೆಹುಲ್ ಅವರ ದೊಡ್ಡ ಸಾಧನೆ. ತನ್ನ ಘಟಕದಲ್ಲಿ ಕೆಲಸ ಮಾಡಲು ಬುರ್-ಹಾನ್‌ಪುರದ ಗ್ರಾಮೀಣ ಪ್ರದೇಶಗಳ ಮಹಿಳೆಯರಿಗೆ ತರಬೇತಿ ನೀಡಿ 40 ಮಹಿಳೆಯರಿಗೆ ಉದ್ಯೋಗ ನೀಡಿರುವುದು ಅವರ ಇನ್ನೊಂದು ಸಾಧನೆ. 

ಈಗ ಇಂಟರ್ನೆಟ್ ಮಾರಾಟದ ಕಾಲ. ಅಲ್ಲಿ ಸಾಧ್ಯತೆಗಳು ವಿಪುಲ. ದನದ ಸೆಗಣಿಯ ಬೆರಣಿಗೂ ಈಗ ಬಂಗಾರದ ಬೆಲೆ! “ಇಬೇ.ಇನ್” ಎಂಬ ಇಂಟರ್ನೆಟ್ ಮಾರಾಟ ತಾಣದಲ್ಲಿ “ವಿಲೇಜ್ ಪ್ರಾಡಕ್ಟ್ಸ್” ಎಂಬ ಮಳಿಗೆ 35 ಬೆರಣಿಗಳನ್ನು ರೂ.525ಕ್ಕೆ 2016ರಲ್ಲೇ ಮಾರಾಟಕ್ಕಿಟ್ಟಿತ್ತು. ಆಗಲೇ “ಅಮೆಜಾನ್” ಮಾರಾಟ ತಾಣದಲ್ಲಿ “ಹವನ ಕುಂಡ” ಮಳಿಗೆಯಲ್ಲಿ 9 ಬೆರಣಿಗಳ ಮಾರಾಟ ಬೆಲೆ ರೂ.999.

ಜನವರಿ 2024ರ ಆರಂಭದಲ್ಲಿ ಅಂತರ್ಜಾಲದಲ್ಲಿ ಲಭ್ಯವಿದ್ದ ಕೆಲವು ದನದ ಸೆಗಣಿ ಬೆರಣಿಗಳ ಬೆಲೆ:
ಉತ್ಪಾದಕರ ಹೆಸರು            ಬೆಲೆ (ರೂ.)
ಗವ್ಯಮಾರ್ಟ್ ಡಾಟ್ ಇನ್        60/-
ಧೇನುಮ್                65/-
ಗೋಕುಲ ಗೋಬರ್ ಉಪ್ಲ        100/-
ಶ್ರೀ ನಾರಾಯಣ್            119/- 
ಗಾವೋ ಹರ್-ಸಿದ್ಧ            800/-
ಕಾತ್ಯಾಯನಿ                1,950/-
ಬಿಗ್ ಬಾಸ್ಕೆಟ್ (5 ಬೆರಣಿ)        16/-
ಶುದ್ಧಮ್ ಗೋಶಾಲಾ (100 ಬೆರಣಿ)             270/-
ಅಮೆಜಾನ್ ಡಾಟ್ ಇನ್ (100 ಬೆರಣಿ)             294/- 
ಆರ್ ಎಫ್ ಎಲ್ (ಪ್ಲಿಫ್‌ಕಾರ್ಟ್ ಮೂಲಕ) (25 ಬೆರಣಿ)     399/- 
(ಈ ಉತ್ಪಾದಕರ ಬೆರಣಿಗಳ ಬೆಲೆಗಳನ್ನು ಹೋಲಿಸಲು ಸಾಧ್ಯವಿಲ್ಲ. ಯಾಕೆಂದರೆ ಪ್ಯಾಕೆಟಿನ ತೂಕ ನಮೂದಿಸಿಲ್ಲ. ಕೊನೆಯ ನಾಲ್ಕು ಉತ್ಪಾದಕರು ಒಂದು ಪ್ಯಾಕೆಟಿನಲ್ಲಿರುವ ಬೆರಣಿಗಳ ಸಂಖ್ಯೆ ನಮೂದಿಸಿದ್ದರೂ, ಬೆರಣಿಯ ವ್ಯಾಸ ಮತ್ತು ತೂಕ ನಮೂದಿಸಿಲ್ಲ. ಗವ್ಯಮಾರ್ಟ್ ಹೊರತಾಗಿ ಇತರ ೯ ಉತ್ಪಾದಕರು “ಸಾಗಾಟ ಪುಕ್ಕಟೆ” ಎಂದು ನಮೂದಿಸಿದ್ದಾರೆ.) 
ಉಡುಪಿ ಜಿಲ್ಲೆಯ ಕುಕ್ಕೆ ಹಳ್ಳಿಯ ಜನನಿ ಫಾರ್ಮಿನ “ಗೋಜನನಿ” ಬ್ರಾಂಡಿನ 30 ಬೆರಣಿ ಬಿಲ್ಲೆಗಳ (ಬಿಲ್ಲೆಯ ವ್ಯಾಸ ಎರಡು ಇಂಚು) ಪ್ಯಾಕೆಟಿನ ಬೆಲೆ ರೂ.60. ಪ್ರತಿ ದಿನ ಅಗ್ನಿಹೋತ್ರ ಮಾಡಲು ಇದರ ಬಳಕೆ.  

ಉತ್ಪಾದನಾ ವೆಚ್ಚ ಪರಿಗಣಿಸಿದರೆ, 600 ಗ್ರಾಮ್ ಸೆಗಣಿಯಿಂದ ತಯಾರಿಸಬಹುದಾದ ಐದಾರು ಬೆರಣಿಗಳ ಮಾರಾಟ ಬೆಲೆ ಕೇವಲ ರೂ.20. ಆದರೆ ಇದನ್ನೇ ರೂ.500ರಿಂದ ರೂ.1,000 ಬೆಲೆಗೆ ಇಂಟರ್ನೆಟ್ ಜಾಲದಲ್ಲಿ ಮಾರುತ್ತಿದ್ದಾರೆ! ಜನ ಮರುಳೋ ಜಾತ್ರೆ ಮರುಳೋ!

ಭಾರತದ ಸಾಂಬಾರ ಪದಾರ್ಥಗಳಲ್ಲಿ ಕೇಸರಿಗೆ ಬಂಗಾರದ ಬೆಲೆ. ಇದಕ್ಕೆ ಬಹಳ ಬೇಡಿಕೆಯಿದ್ದರೂ ಇದರ ಉತ್ಪಾದನೆ ಕಾಶ್ಮೀರದ ಒಂದು ಸಣ್ಣ ವಲಯಕ್ಕೆ ಸೀಮಿತ. ಈಗ ಶೈಲೇಶ್ ಮೋದಕ್ ಎಂಬ ಸಾಫ್ಟ್-ವೇರ್ ಇಂಜಿನಿಯರ್ ಪುಣೆಯಲ್ಲಿ ಇದರ ಕೃಷಿ ಮಾಡಬಹುದೆಂದು ತೋರಿಸಿದ್ದಾರೆ.  

ಹದಿಮೂರು ವರುಷ ಉದ್ಯೋಗ ಮಾಡುತ್ತಾ ಪ್ರತಿ ತಿಂಗಳೂ ವೇತನ ಪಡೆಯುತ್ತಿದ್ದ ಶೈಲೇಶ್ ಮೋದಕ್, ಅದನ್ನು ತೊರೆದು ಕೇಸರಿ ಕೃಷಿ ಶುರು ಮಾಡಿದ್ದೊಂದು ಸಾಹಸ. ಅವರು ನೌಕಾ ಕನ್-ಟೈನರಿನಲ್ಲಿ ಜಲಕೃಷಿ (ಹೈಡ್ರೋಫೋನಿಕ್ಸ್) ವಿಧಾನ ಅನುಸರಿಸಿ ಕೇಸರಿ ಬೆಳೆಯುತ್ತಿದ್ದಾರೆ. ಮೊದಲ ಕೇಸರಿ ಬೆಳೆಯಲ್ಲಿ ಅವರ ಇಳುವರಿ ಕೇವಲ 875 ಗ್ರಾಮ್. ಅದನ್ನು ಗ್ರಾಮ್‌ಗೆ ರೂ.500 ದರದಲ್ಲಿ ಮಾರಲು ಅವರಿಗೆ ಸಾಧ್ಯವಾಯಿತು. 

ನಾಸಿಕದ ಮಧ್ಯಮ ವರ್ಗದ ಕುಟುಂಬದವರಾದ ಶೈಲೇಶ್ ಮತ್ತು ಅವರ ಸೋದರರಿಗೆ ಬಾಲ್ಯದಿಂದಲೂ ಒಳ್ಳೆಯ ಉದ್ಯೋಗ ಗಳಿಸಿ ಜೀವನ ಸಾಗಿಸಬೇಕೆಂದು ಹೆತ್ತವರು ಕಲಿಸಿದ್ದರು. “ಹಾಗಾಗಿ, ಒಳ್ಳೆಯ ಉದ್ಯೋಗ ತೊರೆದು, ಸ್ವ-ಉದ್ಯೋಗ ಶುರು ಮಾಡುವುದು ಬದುಕಿನ ದೊಡ್ಡ ಸವಾಲಾಗಿತ್ತು” ಎನ್ನುತ್ತಾರೆ ಶೈಲೇಶ್. 

ಪುಣೆ ವಿಶ್ವವಿದ್ಯಾಲಯದಲ್ಲಿ ಪದವಿ ಶಿಕ್ಷಣ ಮುಗಿಸಿದ ಶೈಲೇಶ್ ಇಸಿಎಸ್ ಕಂಪೆನಿಯಲ್ಲಿ ಉದ್ಯೋಗಕ್ಕೆ ಸೇರಿದರು. “ಆಗ ನಾನು ಕೆಂಬೋಡಿಯಾ, ಮಲೇಷ್ಯಾ, ಉಗಾಂಡಾ ಇನ್ನಿತರ ದೇಶಗಳಿಗೆ ಹೋಗಬೇಕಾಯಿತು. ಅದರಿಂದಾಗಿ ನಾನು ಬಹಳಷ್ಟು ಆತ್ಮವಿಶ್ವಾಸ ಗಳಿಸಿದೆ. ಅನಂತರ ಬಾರ್-ಕ್ಲೇಶ್ ಕಂಪೆನಿ ಸೇರಿ, ಐವತ್ತು ಜನರ ತಂಡಕ್ಕೆ ಮುಖ್ಯಸ್ಥನಾದೆ. ಅಲ್ಲಿ ನನಗೆ ಭಡ್ತಿ ಸಿಗುವುದರಲ್ಲಿತ್ತು. ಆದರೆ ನನಗ್ಯಾಕೋ ಎಲ್ಲವೂ ಸರಿಯಿಲ್ಲ ಅನಿಸತೊಡಗಿತು” ಎಂದು ತಿಳಿಸುತ್ತಾರೆ ಶೈಲೇಶ್. 

ಪುಣೆಯ ಸೋದರರಾದ ಸತ್ಯಜಿತ್ ಮತ್ತು ಅಜಿಂಕ್ಯಾ ಹಾಂಗೆ ಕೈತುಂಬ ಸಂಬಳದ ತಮ್ಮ ಬ್ಯಾಂಕ್ ಉದ್ಯೋಗ ತೊರೆದು ಸಾವಯವ ಕೃಷಿ ಮಾಡತೊಡಗಿದಾಗ ಅವರ ಕೃಷಿಉತ್ಪನ್ನಗಳ ವಹಿವಾಟು ವರುಷಕ್ಕೆ ಕೇವಲ ಎರಡು ಲಕ್ಷ ರೂಪಾಯಿ. ಅದೀಗ ದಿನಕ್ಕೆ ಸರಾಸರಿ ಒಂದು ಲಕ್ಷ ರೂಪಾಯಿ ದಾಟಿದೆ. ಇದು ಹೇಗೆ ಸಾಧ್ಯವಾಯಿತು?
 ಸೋದರರಾದ ಸತ್ಯಜಿತ್ ಮತ್ತು ಅಜಿಂಕ್ಯಾ ಹಾಂಗೆ ನಗರ ಮತ್ತು ಗ್ರಾಮೀಣ ಪರಿಸರದಲ್ಲಿ ಬೆಳೆದವರು. ಬಾಲವಾಡಿಯಿಂದ ಸ್ನಾತಕೋತ್ತರ ಪದವಿ ತನಕ ಅವರಿಬ್ಬರೂ ಕಲಿತದ್ದು ಮಹಾನಗರ ಪುಣೆಯಲ್ಲಿ. ಪುಣೆ ವಿಶ್ವವಿದ್ಯಾಲಯದಿಂದ ಎಂಬಿಎ ಗಳಿಸಿದ ನಂತರ ಸಿಟಿಬ್ಯಾಂಕ್, ಎಚ್‍ಡಿಎಫ್‍ಸಿ, ಎಚ್‍ಎಸ್‍ಬಿಸಿ ಬ್ಯಾಂಕ್ ಇಂತಹ ಬೃಹತ್ ಹಣಕಾಸಿನ ಸಂಸ್ಥೆಗಳಲ್ಲಿ ಇಬ್ಬರದೂ ಹತ್ತು ವರುಷ ಉದ್ಯೋಗ. ಕೈತುಂಬ ಸಂಬಳ, ಐಷಾರಾಮಿ ಜೀವನ ಅವರದಾಗಿತ್ತು. ಆದರೆ ಅವರಿಗೆ ನೆಮ್ಮದಿ ಇರಲಿಲ್ಲ. ಕೊನೆಗೊಮ್ಮೆ ಉದ್ಯೋಗ ತೊರೆದು ಅವರು ಶುರುವಿಟ್ಟರು ಎರಡು ಎಕ್ರೆ ಜಮೀನಿನಲ್ಲಿ ಸಾವಯವ ಕೃಷಿ.
ಅವರ ಜಮೀನು ಪಶ್ಚಿಮ ಮಹಾರಾಷ್ಟ್ರದ ಭೋದಾನಿ ಗ್ರಾಮದಲ್ಲಿದೆ. ಅಲ್ಲಿ ರಾಸಾಯನಿಕಗಳನ್ನು ಸುರಿದು ಬೆಳೆಸುವ ಪ್ರಧಾನ ಬೆಳೆ ಕಬ್ಬು. ಆದರೆ ಸೋದರರ ನಿರ್ಧಾರ ಬಹುಬೆಳೆಗಳ ಸಾವಯವ ಕೃಷಿ. ಆರಂಭದಲ್ಲಿ ದೇಸಿ ತಳಿಯ ದಾಳಿಂಬೆ, ತೊಗರಿ ಹಾಗೂ ಪಪ್ಪಾಯಿ ಬೆಳೆದರು. ಇಪ್ಪತ್ತು ಗಿರ್ ದನಗಳನ್ನು ಸಾಕತೊಡಗಿದರು.
ಮೊದಲ ನಾಲ್ಕು ವರುಷ ಕೃಷಿ ಮಾಡಿ ಅವರಿಗಾದದ್ದು ನಷ್ಟ. “ಅದು ನಮಗೆ ಬಹಳ ಕಷ್ಟದ ಕಾಲ. ನಾವು ಉದ್ಯೋಗ ತೊರೆದಿದ್ದೆವು. ಸಾಂಪ್ರದಾಯಿಕ ಕೃಷಿಯನ್ನೂ ತೊರೆದಿದ್ದೆವು. ಒಂದು ಟನ್ ಪಪ್ಪಾಯಿ ಕೊಯ್ಲು ಮಾಡಿದಾಗ ನಮಗೆ ದೊಡ್ಡ ಆಘಾತ ಕಾದಿತ್ತು. ಬೆಲ್ಲದಷ್ಟು ಸಿಹಿಯಾದ ಆ ಪಪ್ಪಾಯಿಯನ್ನು ಸ್ಥಳೀಯ ಮಾರುಕಟ್ಟೆಗೆ ಒಯ್ದಾಗ ಅಲ್ಲಿನ ಮಾರಾಟಗಾರರು ಹೇಳಿದ ಖರೀದಿ ದರ ಕಿಲೋಕ್ಕೆ ಕೇವಲ ನಾಲ್ಕು ರೂಪಾಯಿ” ಎನ್ನುತ್ತಾ ತಮಗಾದ ಕಹಿ ಅನುಭವ ತಿಳಿಸುತ್ತಾರೆ ಅಜಿಂಕ್ಯಾ.

Pages