“ತರಕಾರಿ ಬಿತ್ತನೆಗೆ ನಾನೊಂದು ಕ್ಯಾಲೆಂಡರ್ ಕೊಡ್ತೇನೆ. ಅದರ ಪ್ರಕಾರ ಆಯಾ ಬೀಜಗಳ ಬಿತ್ತನೆ ಮಾಡಿ, ಗಿಡ-ಬಳ್ಳಿಗಳು ಬೆಳೆದಂತೆ ಸಾಕಷ್ಟು ಗೊಬ್ಬರ ಕೊಡುತ್ತಾ ಬಂದರೆ ಫಸಲು ಸಮೃದ್ಧ. ಇದು ನನ್ನ ಮೂವತ್ತು ವರುಷಗಳ ಅನುಭವದ ಬಲದಿಂದ ನಾನು ಕೊಡುತ್ತಿರುವ ಸಲಹೆ. ನಾನಂತು ಈ ಕ್ಯಾಲೆಂಡರನ್ನೇ ಅನುಸರಿಸಿ ತರಕಾರಿ ಕೃಷಿ ಮಾಡ್ತಿದ್ದೇನೆ. ಈ ಅವಧಿಯಲ್ಲಿ ನನ್ನ ಮನೆ ಬಳಕೆಗೆ ಮಾರುಕಟ್ಟೆಯಿಂದ ತರಕಾರಿ ಖರೀದಿಸಿ ತಂದದ್ದೇ ಇಲ್ಲ. ಮನೆಯಲ್ಲಿ ಸಮಾರಂಭಗಳು ಆದಾಗಲೂ ಎಲ್ಲ ಅತಿಥಿಗಳ ಊಟಕ್ಕೆ ನಮ್ಮದೇ ತರಕಾರಿ” ಎಂದು ಪಿ. ಶಿವಪ್ರಸಾದ್ ವರ್ಮುಡಿ ಹೇಳುತ್ತಿದ್ದರೆ ನಮಗೆ ಅಚ್ಚರಿ. ಜೊತೆಗೆ ಇದನ್ನು ನಂಬುವುದು ಹೇಗೆ ಎಂಬ ಪ್ರಶ್ನೆ.
ಆದರೆ ಕಾಸರಗೋಡಿನ ಪೆರ್ಲದ ಹತ್ತಿರವಿರುವ ಅವರ ಜಮೀನಿಗೊಮ್ಮೆ ಭೇಟಿ ನೀಡಿ, ಅವರ ತರಕಾರಿ ಕೃಷಿ ಕಣ್ಣಾರೆ ಕಂಡರೆ ಅವರ ಮಾತನ್ನು ನಂಬಲೇ ಬೇಕಾಗುತ್ತದೆ. ಯಾಕೆಂದರೆ ಅಲ್ಲಿದೆ ಬೆಂಡೆ, ತೊ೦ಡೆ, ಅಲಸಂಡೆ, ಟೊಮೆಟೋ, ಹರಿವೆ, ಬಸಳೆ, ಸೌತೆ, ಮುಳ್ಳುಸೌತೆ, ಪಡುವಲ, ಸೋರೆ, ಕುಂಬಳ, ಚೀನಿಕಾಯಿ ಇತ್ಯಾದಿ ತರಕಾರಿಗಳ ಸಮೃದ್ಧ ಬೇಸಾಯ. ಶಿವಪ್ರಸಾದ್ ವರ್ಮುಡಿಯವರ ಈ ಸಾಧನೆಯ ಹಿನ್ನೆಲೆಯಲ್ಲಿದೆ ಅವರ ದಶಕಗಳ ಪ್ರಯತ್ನ, ಪ್ರಯೋಗ ಮತ್ತು ಕಲಿಯುವ ಛಲ.
ಇವೆಲ್ಲದರ ಫಲವಾಗಿ ಅವರು ಯಾವ್ಯಾವ ತರಕಾರಿ ಬಿತ್ತನೆ ಯಾವಾಗ ಮಾಡಬೇಕು ಎಂಬ ಕ್ಯಾಲೆಂಡರ್ ಸಿದ್ಧಪಡಿಸಿದ್ದಾರೆ. ಇದರ ಬಗ್ಗೆ ಅವರು ಹೇಳುವ ಮಾತು: “ನಮ್ಮ ಮನೆಯಲ್ಲಿ ಮದುವೆ, ಮುಂಜಿ, ನಾಮಕರಣ ಇತ್ಯಾದಿ ಎಲ್ಲ ಶುಭ ಸಮಾರಂಭಗಳಿಗೂ “ದಿನ” ನೋಡಿ, ಶುಭದಿನದಂದು ಶುಭಮುಹೂರ್ತದಲ್ಲಿ ಅದನ್ನು ನಡೆಸುತ್ತೇವೆ. ಹಾಗೆಯೇ ತರಕಾರಿ ಬೀಜ ಬಿತ್ತನೆಗೆ ಮತ್ತು ಸಸಿ ನಾಟಿಗೆ ಶುಭದಿನಗಳಿವೆ.” ಜೊತೆಗೆ, ಅವರು ಹಲವು ನಿರ್ದಿಷ್ಟ ವಿಧಾನಗಳನ್ನು ಅನುಸರಿಸುತ್ತಾರೆ.
ಎಲ್ಲದಕ್ಕಿಂತ ಮುಖ್ಯವಾಗಿ, ಶಿವಪ್ರಸಾದ್ ವರ್ಮುಡಿಯವರ ತರಕಾರಿ ಕೃಷಿಯಲ್ಲಿ ಗಮನಿಸಬೇಕಾದ ಎರಡು ಸಂಗತಿಗಳು:
ಅವರದು ಸಾವಯವ ತರಕಾರಿ ಕೃಷಿ; ತರಕಾರಿ ಬೆಳೆಸುವಾಗ ಅವರು ಯಾವುದೇ ರಾಸಾಯನಿಕ ಬಳಸುವುದಿಲ್ಲ. ಹಾಗೂ ಅವರದು ಗೋ-ಆಧಾರಿತ ತರಕಾರಿ ಕೃಷಿ.
ಮನೆ ಬಳಕೆಗಾಗಿ ಅಥವಾ ಮಾರಾಟದ ಉದ್ದೇಶಕ್ಕಾಗಿ ತರಕಾರಿ ಬೆಳೆಸುವವರಿಗೆ ಅವರ ಕಿವಿಮಾತು: “ದೇಸಿ ದನ ಸಾಕಿ. ಅದರ ಸೆಗಣಿ ಮತ್ತು ಗಂಜಲ ತರಕಾರಿ ಕೃಷಿಗೆ ಬಹಳ ಒಳ್ಳೆಯದು. ಮಾತ್ರವಲ್ಲ, ನಿಮ್ಮ ಹಾಗೂ ನಿಮ್ಮ ಮನೆಯವರ ಆರೋಗ್ಯ ಉತ್ತಮವಾಗಬೇಕಾದರೆ ದೇಸಿ ದನದ ಹಾಲು, ಮೊಸರು, ಮಜ್ಜಿಗೆ ಮತ್ತು ತುಪ್ಪ ಸೇವನೆ ಮಾಡಿ.” ಈ ಕಿವಿಮಾತಿನ ಹಿನ್ನೆಲೆಯ ಅವರ ಅನುಭವ ಕೇಳಿದಾಗ, ಅವರ ಮಾತಿಗೆ ಕಿವಿಗೊಡಬೇಕಾಗುತ್ತದೆ.
ತರಕಾರಿ ಬೀಜಗಳ ಆಯ್ಕೆ ಬಗ್ಗೆ ಅವರ ಸಲಹೆ: ಮಾರುಕಟ್ಟೆಯಲ್ಲಿ ಸಿಗುವ ಹೈಬ್ರಿಡ್ ತರಕಾರಿ ಬೀಜಗಳು ಬಿತ್ತನೆಗೆ ಸೂಕ್ತವಲ್ಲ. ಹಾಗೆಯೇ, ಹೈಬ್ರಿಡ್ ತರಕಾರಿ ಸಸಿಗಳ ಜೊತೆ ಸಂಕರವಾಗಿ ಸಿಗುವ ತರಕಾರಿ ಬೀಜಗಳೂ ಸೂಕ್ತವಲ್ಲ. ನಮ್ಮ ಮಣ್ಣಿಗೆ ಹಾಗೂ ಹವಾಮಾನಕ್ಕೆ ಹೊಂದುವ ದೇಸಿ ಬೀಜಗಳೇ ಸೂಕ್ತ. ಮುಂದಿನ ವರುಷಕ್ಕೆ ಅಥವಾ ಹಂಗಾಮಿಗೆ ನಮ್ಮದೇ ಬೀಜಗಳನ್ನು ಗಾಳಿಯಾಡದಂತೆ ರಕ್ಷಿಸಿಟ್ಟರೆ ಬಿತ್ತನೆಗೆ ಅದೇ ಸಾಕು.
“ಬೀಜ ಬಿತ್ತನೆಯನ್ನು ನಮ್ಮ ಅವಶ್ಯಕತೆ ಗಮನಿಸಿ ಸರಿಯಾಗಿ ಪ್ಲಾನ್ ಮಾಡಿಕೊಳ್ಳಬೇಕು” ಎನ್ನುತ್ತಾರೆ ಶಿವಪ್ರಸಾದ್ ವರ್ಮುಡಿ. ಉದಾಹರಣೆಗೆ, ಬೆಂಡೆಕಾಯಿ ಬೀಜ ವರುಷದಲ್ಲಿ ಒಮ್ಮೆ ಬಿತ್ತಿದರೆ, 2 - 3 ತಿಂಗಳು ಮಾತ್ರ ಬೆಂಡೆಕಾಯಿ
ಬಳಕೆಗೆ ಸಿಗುತ್ತದೆ. ಬದಲಾಗಿ, ವರುಷದಲ್ಲಿ ನಾಲ್ಕು ಸಲ ಬೆಂಡೆಕಾಯಿ ಬಿತ್ತಿ ಬೆಳೆಸಿದರೆ, ವರುಷವಿಡೀ ಅಡುಗೆಗೆ ಬೆಂಡೆಕಾಯಿ ಸಿಗುತ್ತದೆ ಎಂಬುದು ಅವರ ಅನುಭವ.
ಹರಿವೆ ಬೀಜ ಬಿತ್ತಿದಾಗ ಅವನ್ನು ಇರುವೆಗಳು ಹೊತ್ತೊಯ್ಯುವ ಸಮಸ್ಯೆಗೆ ಅವರು ಸೂಚಿಸುವ ಸುಲಭ ಪರಿಹಾರ: ಒಂದು ಚಮಚ ಹರಿವೆ ಬೀಜಕ್ಕೆ ಒಂದು ಚಮಚ ಬೊಂಬಾಯಿ-ರವೆ ಪ್ರಮಾಣದಲ್ಲಿ ಬೆರಸಿ ಬಿತ್ತನೆ ಮಾಡಬೇಕು. ಆಗ ಇರುವೆಗಳು ಬೊಂಬಾಯಿ-ರವೆ ಕಣಗಳನ್ನೇ ಹೊತ್ತು ಒಯ್ಯುತ್ತವೆ. ನಾವು ಹಾಕಿದ ಬೊಂಬಾಯಿ-ರವೆ ಕಣಗಳು ಮುಗಿಯುವ ಹೊತ್ತಿನಲ್ಲಿ (2 - 3 ದಿನಗಳಲ್ಲಿ) ಹರಿವೆ ಬೀಜಗಳು ಮೊಳಕೆ ಬಂದಿರುತ್ತವೆ. ಮೊಳಕೆ ಬಂದ ನಂತರ ಆ ಹರಿವೆ ಬೀಜಗಳನ್ನು ಇರುವೆಗಳು ಮುಟ್ಟುವುದಿಲ್ಲ. ಅಲಸಂಡೆ ಬೀಜಗಳು ಸ್ವಲ್ಪ ದೊಡ್ಡವು; ಇವನ್ನು ಇರುವೆಗಳಿಂದ ಕಾಪಾಡಬೇಕಾದರೆ, ಈ ಬೀಜಗಳ ಜೊತೆ ಕಡಿಯಕ್ಕಿ (ಅಕ್ಕಿಯ ಚೂರುಗಳು) ಮಿಶ್ರ ಮಾಡಿ ಬಿತ್ತನೆ ಮಾಡಿದರಾಯಿತು.
ತರಕಾರಿ ಬೆಳೆಗಳಿಗೆ ಗೊಬ್ಬರ: ಕಪಿಲಾಮೃತ
ಏರು-ಮಡಿಗಳಲ್ಲಿ ತರಕಾರಿ ಗಿಡ/ಬಳ್ಳಿಗಳನ್ನು ಬೆಳೆಸುವುದು ಅವರ ವಿಧಾನ. ಅವರು ಆರಂಭದಲ್ಲಿ ಸಸಿ ಮಡಿಗಳಿಗೆ ಹಾಕುವುದು ಸುಡುಮಣ್ಣು. ಪೌರಾಣಿಕ ಕಾಲದಿಂದಲೇ ಬಳಕೆಯಲ್ಲಿರುವ ಸುಡುಮಣ್ಣು ಸಸಿಗಳ ಬೆಳವಣಿಗೆಗೆ ಅಗತ್ಯ ಎನ್ನುತ್ತಾರೆ ಶಿವಪ್ರಸಾದ್ ವರ್ಮುಡಿ.
ತರಕಾರಿ ಗಿಡ/ಬಳ್ಳಿಗಳಿಗೆ ದಿನ ಬಿಟ್ಟು ದಿನ ಗೊಬ್ಬರ ಕೊಡುವುದು ಅವರ ಯಶಸ್ಸಿನ ಗುಟ್ಟು. ದನದ ಸೆಗಣಿಯನ್ನು ಪ್ಲಾಸ್ಟಿಕ್
ಡ್ರಮ್-ನಲ್ಲಿ ಹಾಕಿ 12 ದಿನ ಕೊಳೆಸುತ್ತಾರೆ. ಅದಕ್ಕೆ ನೀರು ಬೆರಸಿ ತಯಾರಿಸಿದ ದ್ರಾವಣವೇ ಗಿಡಗಳ ಬುಡಕ್ಕೆ ಹಾಕುವ ಗೊಬ್ಬರ. ಈ ಗುಟ್ಟಿನೊಳಗಿನ ಗುಟ್ಟು ಗಮನಿಸಿ: ಪ್ರತಿಯೊಂದು ದನಕ್ಕೆ 2 - 3 ಚಮಚ ಪ್ರಮಾಣದಲ್ಲಿ ಹುರುಳಿ ನೀರಿಗೆ ಹಾಕಿ 6 - 8 ಗಂಟೆ ನೆನಸಿ ಮೊಳಕೆ ಬರಿಸಿ, ಅದನ್ನು ಪ್ರತಿ ದಿನವೂ ತಮ್ಮ ದನಗಳಿಗೆ ತಿನ್ನಿಸುತ್ತಾರೆ. ಆ ದನಗಳ ಸಗಣಿಯ ದ್ರಾವಣವನ್ನು ಗೊಬ್ಬರವಾಗಿ ಹಾಕಿದರೆ ಸಿಗುವ ಇಳುವರಿ ಜೀವಾಮೃತ ಹಾಕಿದಾಗ ಸಿಗುವುದಕ್ಕಿಂತ ಹಲವು ಪಟ್ಟು ಜಾಸ್ತಿ ಎನ್ನುತ್ತಾರೆ ಶಿವಪ್ರಸಾದ್ ವರ್ಮುಡಿ. ಈ ಗೊಬ್ಬರಕ್ಕೆ ಅವರಿತ್ತ ಹೆಸರು “ಕಪಿಲಾಮೃತ”.
ತರಕಾರಿ ಬೆಳೆಗಳ ಕೀಟ ಹತೋಟಿ
ಕೊತ್ತಂಬರಿ ಹಾತೆ: ತರಕಾರಿ ಸಸಿಗಳಲ್ಲಿ ಆರಂಭದಲ್ಲಿ ಎಲೆಗಳು ಮೂಡಿದಾಗ ಅವನ್ನು ತೂತು ಮಾಡುತ್ತದೆ. ಆಗ ಪ್ರತಿ ದಿನ ಬೆಳಗ್ಗೆ ಅಲ್ಲಿ “ಸೊಳ್ಳೆ ಕೊಲ್ಲುವ ಬ್ಯಾಟ್” ಬೀಸಿ ಅವನ್ನು ಕೊಲ್ಲಬೇಕು. ಹತ್ತು ದಿನ ಹೀಗೆ ಮಾಡಿದರೆ ಹತೋಟಿ ಸಾಧ್ಯ.
ಕಂಬಳಿ ಹುಳ ಮತ್ತು ಕಾಂಡಕೊರಕ ಹತೋಟಿಗೆ ಈ ದ್ರಾವಣಗಳ ಸಿಂಪಡಣೆ ಪರಿಣಾಮಕಾರಿ:
ಕಂಬಳಿ ಹುಳ ಹತೋಟಿ ದ್ರಾವಣ: (1 ಲೀಟರ್ ಮಜ್ಜಿಗೆ + 1 ಚಮಚ ವಾಷಿಂಗ್ ಪೌಡರ್ + 2 ಲೀಟರ್ ನೀರು)
ಕಾಂಡಕೊರಕ ಹತೋಟಿ ದ್ರಾವಣ: (1 ಲೀಟರ್ ಮಜ್ಜಿಗೆ + 1 ಚಮಚ ವಾಷಿಂಗ್ ಪೌಡರ್ + 15 ಮಿಲಿ ಲೀಟರ್ ಬೇವಿನೆಣ್ಣೆ + 2 ಲೀಟರ್ ನೀರು)
ಹಣ್ಣಿನ ನೊಣ: ಇದರ ಹತೋಟಿಗೆ “ತುಳಸಿ ರಸದ ಟ್ರಾಪ್” ತರಕಾರಿ ಗಿಡಗಳ ನಡುವೆ ನೇತಾಡಿಸಬೇಕು. ಇದನ್ನು ನಾವೇ ತಯಾರಿಸಿಕೊಳ್ಳ ಬಹುದು. ಒಂದು ಲೀಟರ್ ಅಳತೆಯ ಪ್ಲಾಸ್ಟಿಕ್ ಬಾಟಲಿಗೆ ಮೇಲಿನ ಅರ್ಧ-ಭಾಗದಲ್ಲಿ 5 - 6 ತೂತು ಮಾಡಿ. ಒಂದು ಮುಷ್ಟಿ ತುಳಸಿ ಎಲೆಗಳನ್ನು ಜಜ್ಜಿ ತಯಾರಿಸಿದ ರಸವನ್ನು ಈ ಬಾಟಲಿಗೆ ಹಾಕಿ, ನೇತಾಡಿಸಿ. ತುಳಸಿಯ ಪರಿಮಳದಿಂದ ಆಕರ್ಷಿತವಾದ ಹಣ್ಣಿನ ನೊಣಗಳು ಈ ಬಾಟಲಿಯೊಳಗೆ ಬಂದು ದ್ರಾವಣದಲ್ಲಿ ಬೀಳುತ್ತವೆ. ದಿನಕ್ಕೊಮ್ಮೆ ಈ ಬಾಟಲಿಯ ದ್ರಾವಣ ಕುಲುಕಿಸಿ, ನೆಲಕ್ಕೆ ಹಾಕಿ, ಹಣ್ಣಿನ ಹುಳಗಳನ್ನು ಕಾಲಿನಿಂದ ಹೊಸಕಿ ಹಾಕಿ. ನಂತರ ಬಾಟಲಿಗೆ ಹೊಸ ದ್ರಾವಣ ಹಾಕಿ ನೇತಾಡಿಸಿ.
ಬಂಬುಚ್ಚಿ: ಹತ್ತಿರದ ಗಿಡ/ಮರದಲ್ಲಿರುವ ಕೆಂಪಿರುವೆಗಳನ್ನು ಬಂಬುಚ್ಚಿ ಹತೋಟಿಗೆ ಬಳಸಿ. ಅದಕ್ಕಾಗಿ ಆ ಗಿಡ/ಮರಕ್ಕೆ ಒಂದು ಹುರಿಹಗ್ಗ ಕಟ್ಟಿ ಅದರ ಇನ್ನೊಂದು ತುದಿಯನ್ನು ತರಕಾರಿ ಗಿಡಕ್ಕೆ ಕಟ್ಟಿ. ಈ ಹಗ್ಗದಿಂದ ಇಳಿದು ಬರುವ ಕೆಂಪಿರುವೆಗಳು ಬಂಬುಚ್ಚಿಗಳನ್ನು ನಾಶ ಮಾಡುತ್ತವೆ. ರಾತ್ರಿ 8 ಗಂಟೆ ಹೊತ್ತಿಗೆ ಸೊಳ್ಳೆ ಕೊಲ್ಲುವ ಬ್ಯಾಟ್ ಬೀಸಿ ಬಂಬುಚ್ಚಿ ನಿಯಂತ್ರಣ ಸಾಧ್ಯ; ಆದರೆ ಅದು ತ್ರಾಸದಾಯಕ ವಿಧಾನ.
“ಮಾರುಕಟ್ಟೆಯಲ್ಲಿ ಸಿಗುವ ಎಲ್ಲ ತರಕಾರಿಗಳಲ್ಲಿ ವಿಷ ತುಂಬಿದೆ. ರಾಸಾಯನಿಕ ಗೊಬ್ಬರ ಹಾಗೂ ಅತ್ಯಂತ ಅಪಾಯಕಾರಿ ಕೀಟನಾಶಕಗಳನ್ನು ಸುರಿದು ಬೆಳೆಸಿದ ಆ ತರಕಾರಿಗಳ ಸೇವನೆ ಅನಾರೋಗ್ಯದ ಮೂಲ. ಅವುಗಳಿಗೆ ರುಚಿ ಇಲ್ಲ; ಬಾಳ್ವಿಕೆಯೂ ಇಲ್ಲ. ಅವನ್ನು ಸೇವಿಸಿ ಅಪಾಯ ಆಹ್ವಾನಿಸುವ ಬದಲು ನಮಗೆ ಬೇಕಾದಷ್ಟು ತರಕಾರಿಗಳನ್ನು ನಾವೇ ಬೆಳೆದು ತಿನ್ನೋದು ಒಳ್ಳೆಯದು” ಎಂದು ಶಿವಪ್ರಸಾದ್ ವರ್ಮುಡಿ ಹೇಳುವಾಗ ನಾವು ಒಪ್ಪಲೇ ಬೇಕಾಗುತ್ತದೆ.
ಫೋಟೋ 1: ಶಿವಪ್ರಸಾದ ವರ್ಮುಡಿ
ಫೋಟೋ 2: ಅವರ ತರಕಾರಿ ತೋಟ


