ಬೆಂಗಳೂರು ಹತ್ತಿರದ ದೊಡ್ಡಬಳ್ಳಾಪುರದಲ್ಲಿ ಶ್ರೀಕಾಂತ ಬೊಲ್ಲಪಲ್ಲಿ ಅವರ 52 ಎಕ್ರೆ ಹೂವಿನ ಕೃಷಿ ನೋಡುವುದೇ ಕಣ್ಣಿಗೆ ಹಬ್ಬ. ಅಲ್ಲಿ 12 ವಿವಿಧ ಹೂಗಳನ್ನು ಬೆಳೆಯುವ ಅವರು ರೂ.70 ಕೋಟಿ ವಾರ್ಷಿಕ ವಹಿವಾಟಿನಿಂದ ಗಳಿಸುವ ಲಾಭ ಸುಮಾರು ರೂ.5 ಕೋಟಿ ಎಂಬುದು ಪುಷ್ಪ ಕೃಷಿಯ ಸಾಧ್ಯತೆಗಳ ದಿಕ್ಸೂಚಿ.
ಅವರು ಸಾಗಿ ಬಂದ ಹಾದಿಯನ್ನು ಹಿಂತಿರುಗಿ ನೋಡಿದಾಗ ಅದೇನೂ ಹೂವಿನ ಹಾದಿ ಆಗಿರಲಿಲ್ಲ. ನಮ್ಮನ್ನು ಬೆರಗಾಗಿಸುವ ಈ ಸಾಧನೆಯ ಹಿನ್ನೆಲೆಯಲ್ಲಿದೆ ಅವರ ದಶಕಗಳ ಶ್ರಮ ಹಾಗೂ ದೃಢ ನಿರ್ಧಾರ. ತೆಲಂಗಾಣದ ನಿಜಾಮಾಬಾದ್ ಜಿಲ್ಲೆಯ ಬೋಧನ್ ಪಟ್ಟಣದ ಕೃಷಿ ಕುಟುಂಬದಲ್ಲಿ ಜನಿಸಿದ ಶ್ರೀಕಾಂತರ ಬಾಲ್ಯ ಬಡತನದಲ್ಲೇ ಕಳೆಯಿತು. ಅವರು 10ನೇ ತರಗತಿಯಲ್ಲಿ ಕಲಿಯುತ್ತಿದ್ದಾಗ, ಅವರ ಹೆತ್ತವರು ಮುಂದಿನ ವಿದ್ಯಾಭ್ಯಾಸಕ್ಕೆ ಹಣ ಹೊಂದಿಸಲು ತಮ್ಮಿಂದಾಗದು ಎಂದರು..
ಅವರ ಕುಟುಂಬದ ಜಮೀನಿನಲ್ಲಿ ಮಾಡುತ್ತಿದ್ದ ಬೇಸಾಯದಿಂದ ಹೆಚ್ಚೇನೂ ಲಾಭವಿರಲಿಲ್ಲ. ಹಾಗಾಗಿ ಅವರ ಕುಟುಂಬ ಸಾಲದ ಹೊರೆಯಲ್ಲಿ ಮುಳುಗಿತ್ತು. ಅಂತಹ ಪರಿಸ್ಥಿತಿಯಲ್ಲಿ, ದುಡಿದು ಹಣ ಗಳಿಸುವ ಆಶಯದಿಂದ ಅವರು ಬೆಂಗಳೂರು ಸೇರಿಕೊಂಡರು. ಹೂವಿನ ಬೇಸಾಯದಲ್ಲಿ ತೊಡಗಿದ್ದ ಸಂಬಂಧಿಕರೊಬ್ಬರ ನೆಲಮಂಗಲದ ಫಾರ್ಮಿನಲ್ಲಿ 1995ರಲ್ಲಿ ತಮ್ಮ 16ನೆಯ ವಯಸ್ಸಿನಲ್ಲೇ ಕೆಲಸ ಮಾಡತೊಡಗಿದರು. ಆರಂಭದಲ್ಲಿ ದಿನಕ್ಕೆ ಸುಮಾರು 18 ಗಂಟೆ ದುಡಿದು ಅವರು ಗಳಿಸುತ್ತಿದ್ದ ಸಂಬಳ ತಿಂಗಳಿಗೆ ಕೇವಲ ರೂ.1,000/-.
ತಮ್ಮ ಕುಟುಂಬದ ಸಾಂಪ್ರದಾಯಿಕ ಕೃಷಿಯಿಂದ ಹೆಚ್ಚಿನ ಲಾಭ ಗಳಿಸಲು ಸಾಧ್ಯವಿಲ್ಲ ಎಂದು ಅರಿತಿದ್ದ ಶ್ರೀಕಾಂತರ ಗಮನ ಸೆಳೆದದ್ದು ಆಗ ಚಾಲ್ತಿಗೆ ಬರುತ್ತಿದ್ದ ಪುಷ್ಪೋದ್ಯಮಕ್ಕೆ ಉತ್ತಮ ಭವಿಷ್ಯವಿದೆ ಎಂಬ ಮಾಹಿತಿ. ಎರಡು ವರುಷ ಅಲ್ಲಿ ದುಡಿದ ಶ್ರೀಕಾಂತ್, ಹೂಗಳ ಬೇಸಾಯ, ಕೊಯ್ಲು, ಮಾರಾಟ ಮತ್ತು ರಫ್ತು ಬಗ್ಗೆ ಸಮಗ್ರವಾಗಿ ಕಲಿತುಕೊಂಡರು.
ಅದಾಗಲೇ ಸ್ವಂತ ವ್ಯವಹಾರ ಶುರು ಮಾಡಬೇಕೆಂದು ನಿರ್ಧರಿಸಿದ್ದರು ಶ್ರೀಕಾಂತ್. ಆದರೆ, ಅವರ ಬಳಿ ಪುಷ್ಪ ಕೃಷಿಗೆ ಅಗತ್ಯವಾದಷ್ಟು ಭಂಡವಾಳ ಇರಲಿಲ್ಲ. ಹಾಗಾಗಿ, ಕೆಲವು ರೈತರಿಂದ ಹೂಗಳನ್ನು ಖರೀದಿಸಿ, ಅವನ್ನು ಪ್ಯಾಕ್ ಮಾಡಿ ಮಾರಾಟ ಮಾಡಲು ಶುರು ಮಾಡಿದರು.
1997ರಲ್ಲಿ ಬೆಂಗಳೂರಿನ ವಿಲ್ಸನ್ ಗಾರ್ಡನಿನಲ್ಲಿ ರೂ. 20,000/- ಭಂಡವಾಳ ಹಾಕಿ, “ಓಂ ಶ್ರೀ ಸಾಯಿ ಫ್ಲವರ್ಸ್” ಹೆಸರಿನ ಸಣ್ಣ (200 ಚದರಡಿ) ಹೂವಿನ ಮಳಿಗೆ ತೆರೆದರು ಶ್ರೀಕಾಂತ್. ತನ್ನ ವಹಿವಾಟು ಬೆಳೆದಂತೆ, ಮದುವೆಗಳಿಗೆ ಮತ್ತು ಸ್ಟಾರ್ ಹೋಟೆಲುಗಳಿಗೆ ಹೂಗಳನ್ನು ಸರಬರಾಜು ಮಾಡಲು ಶುರುವಿಟ್ಟರು. “ಸುಮಾರು ಹತ್ತು ವರುಷ ಆ ಮಳಿಗೆಯಲ್ಲೇ ಹೂವಿನ ವಹಿವಾಟು ಮಾಡುತ್ತಾ, ಸಾಕಷ್ಟು ಲಾಭ ಗಳಿಸುತ್ತಿದ್ದೆ. ಬೇರೆ ಬೇರೆ ಹಂಗಾಮುಗಳಲ್ಲಿ ಬೇಡಿಕೆಯಿರುವ ಹೂಗಳನ್ನು ಬೆಳೆದು ಮಾರಿದರೆ ಹೆಚ್ಚಿನ ಲಾಭ ಗಳಿಸಬಹುದೆಂದು ನನಗೆ ವಿಶ್ವಾಸವಿತ್ತು” ಎನ್ನುತ್ತಾರೆ ಶ್ರೀಕಾಂತ್.
ಪುಷ್ಪೋದ್ಯಮದಲ್ಲಿ ಹಲವಾರು ಜನರ ಪರಿಚಯವಿದ್ದ ಶ್ರೀಕಾಂತ್ ತಾನೇ ಹೂವು ಬೆಳೆದು ಮಾರಾಟ ಮಾಡಲು ನಿರ್ಧರಿಸಿದರು. ಆದರೆ ಅವರು ಹಲವು ಸವಾಲುಗಳನ್ನು ಎದುರಿಸಬೇಕಾಯಿತು. ಮೊದಲನೆಯದು ಹಣ ಹೂಡಿಕೆಯ ಸವಾಲು. ಸಾಂಪ್ರದಾಯಿಕ ಕೃಷಿಗೆ ಹೋಲಿಸಿದಾಗ, ಪುಷ್ಪ ಕೃಷಿಯಲ್ಲಿ ಪ್ರತಿ ಎಕ್ರೆಗೆ ಹೂಡಬೇಕಾದ ಭಂಡವಾಳ ಹಲವು ಪಟ್ಟು ಜಾಸ್ತಿ. ಅದರಿಂದಾಗಿ ರಿಸ್ಕ್ (ನಷ್ಟ ಸಂಭವ) ಕೂಡ ಜಾಸ್ತಿ.
“ಸರಕಾರ ಪುಷ್ಪೋದ್ಯಮಕ್ಕೆ ಬಹಳ ಪ್ರೋತ್ಸಾಹ ನೀಡುತ್ತದೆ. ಆದ್ದರಿಂದ ಸಾಲ ಮತ್ತು ಸಬ್ಸಿಡಿ ಪಡೆಯಲಿಕ್ಕಾಗಿ ನಾನು ಯೋಜನೆ ತಯಾರಿಸಿ, ರಾಷ್ಟ್ರೀಯ ತೋಟಗಾರಿಕಾ ಬೋರ್ಡನ್ನು ಸಂಪರ್ಕಿಸಿದೆ” ಎಂದು ತಿಳಿಸುತ್ತಾರೆ ಶ್ರೀಕಾಂತ್. ಹೀಗೆ ತನ್ನ ಉಳಿತಾಯ, ಸಾಲ ಮತ್ತು ಸಬ್ಸಿಡಿಗಳನ್ನು ಒಟ್ಟುಗೂಡಿಸಿ ದೊಡ್ಡಬಳ್ಳಾಪುರ ತಾಲೂಕಿನ ತೂಬಗೆರೆಯಲ್ಲಿ 10 ಎಕ್ರೆ ಜಮೀನು ಖರೀದಿಸಿದರು. ಅಲ್ಲಿ ಹೂವಿನ ಬೇಸಾಯ ಆರಂಭಿಸಿ, ಆ ಫಾರ್ಮಿಗೆ ಅವರಿಟ್ಟ ಹೆಸರು ಶ್ರೀಕಾಂತ್ ಫಾರ್ಮ್. ಕ್ರಮೇಣ 2009-10ರಲ್ಲಿ ಅಲ್ಲಿ ಇನ್ನೂ 30 ಎಕ್ರೆಗಳಿಗೆ ಹೂ ಕೃಷಿ ವ್ಯಾಪಿಸಿದರು. ತದನಂತರ, ತಮಿಳ್ನಾಡಿನ ನೀಲಗಿರಿ ಜೆಲ್ಲೆಯ ಕೂನೂರಿನಲ್ಲಿ 10 ಎಕ್ರೆ ಜಮೀನು ಖರೀದಿಸಿ, ಹೂ ಕೃಷಿಯನ್ನು 52 ಎಕ್ರೆಗಳಿಗೆ ವಿಸ್ತರಿಸಿದ್ದಾರೆ.
ರಾಷ್ಟ್ರೀಯ ತೋಟಗಾರಿಕಾ ಬೋರ್ಡಿನಿಂದ 2013ರಿಂದೀಚೆಗೆ ಆರು ಪುಷ್ಪ ಕೃಷಿ ಪ್ರಾಜೆಕ್ಟುಗಳಿಗೆ ಒಟ್ಟು ರೂ. 3 ಕೋಟಿ ಸಬ್ಸಿಡಿ ಪಡೆದಿದ್ದಾರೆ ಶ್ರೀಕಾಂತ್. ತೂಬಗೆರೆಯ ಫಾರ್ಮಿನಲ್ಲಿ ಗುಲಾಬಿ, ಜರ್ಬೆರಾ, ಕಾರ್ನೇಶನ್ಸ್, ಜಿಪ್ಸೋಫಿಲಾ ಇತ್ಯಾದಿ 12 ವಿಧದ ಹೂಗಳನ್ನು ಹಸುರುಮನೆಗಳು ಮತ್ತು ಪಾಲಿಹೌಸುಗಳಲ್ಲಿ ಬೆಳೆಯುತ್ತಿದ್ದಾರೆ. ಕೂನೂರಿನಲ್ಲಿ ಲಿಲಿಯಮ್ ಮತ್ತು ಕಾರ್ನೇಷನ್ಸ್ ಹೂಗಳ ಕೃಷಿ.
ಈಗ ಶ್ರೀಕಾಂತ್ ಭಾರತದ ಉದ್ದಗಲದಲ್ಲಿ ಸಗಟು ಮತ್ತು ಚಿಲ್ಲರೆ ವ್ಯಾಪಾರಿಗಳಿಗೆ ಹಾಗೂ ಮದುವೆಮಂಟಪಗಳ ಅಲಂಕಾರ ಮಾಡುವವರಿಗೆ ಹೂಗಳನ್ನು ಮಾರುತ್ತಿದ್ದಾರೆ. ಶ್ರೀಕಾಂತ್ ಬೆಳೆಸುತ್ತಿರುವ ಹೂಗಳು ಅವರ ವಹಿವಾಟಿನ ಶೇ.10ರಷ್ಟನ್ನು ಮಾತ್ರ ಪೂರೈಸುತ್ತಿವೆ. ಉಳಿದ ವಹಿವಾಟನ್ನು ಭರಿಸಿಕೊಳ್ಳಲಿಕ್ಕಾಗಿ ಊಟಿ, ಕೊಡೈಕನಾಲ್ ಮತ್ತು ಬೆಂಗಳೂರಿನ ಸುತ್ತಮುತ್ತಲಿನ ಹೂವಿನ ಬೆಳೆಗಾರರಿಂದ ಹೂಗಳ ಖರೀದಿ. ಮಾತ್ರವಲ್ಲ, ಥಾಯ್-ಲ್ಯಾಂಡ್, ಆಸ್ಟ್ರೇಲಿಯಾ, ನ್ಯೂಜಿಲ್ಯಾಂಡ್ ಮತ್ತು ಹಾಲೆಂಡ್-ಗಳಿಂದಲೂ ಹೂಗಳ ಆಮದು.
2002ರಲ್ಲಿ ಹೈದರಾಬಾದಿನ ರಾಗ ಶ್ರೀವಂತಿ ಜೊತೆ ಶ್ರೀಕಾಂತರ ವಿವಾಹ. ಕಚೇರಿ ನಿರ್ವಹಣೆಯಲ್ಲಿ ಶ್ರೀಕಾಂತರಿಗೆ ಪತ್ನಿ ಸಂಪೂರ್ಣ ಬೆಂಬಲ ನೀಡುತ್ತಿದ್ದಾರೆ. ಫಾರ್ಮಿನ ಮತ್ತು ವಿಲ್ಸನ್ ಗಾರ್ಡನಿನ ಕಚೇರಿಯ ಒಟ್ಟು ಉದ್ಯೋಗಿಗಳ ಸಂಖ್ಯೆ 300. ಫಾರ್ಮಿನಲ್ಲಿ 80 ಕೆಲಸಗಾರರಿಗೆ ವಸತಿ ಮತ್ತು ಆಹಾರ ಒದಗಿಸುತ್ತಿದ್ದಾರೆ ಶ್ರೀಕಾಂತ್.
ತನ್ನ ದಶಕಗಳ ಅನುಭವದ ಬಲದಿಂದ ಶ್ರೀಕಾಂತ್ (ಫೋಟೋ) ಹೇಳುವ ಮಾತು, “ನಮ್ಮ ಸಮಾಜದಲ್ಲಿ, ಮುಖ್ಯವಾಗಿ ಯುವಜನರಲ್ಲಿ ತಾವು ಕೃಷಿಕರಾಗಬಾರದು ಎಂಬ ಭಾವನೆಯಿದೆ. ಕೃಷಿಯಲ್ಲಿ ಲಾಭವಿಲ್ಲ ಎಂಬುದೇ ಇದಕ್ಕೆ ಮುಖ್ಯ ಕಾರಣ. ಆದರೆ, ಸೂಕ್ತವಾದ ವಿಧಾನಗಳನ್ನು ಅನುಸರಿಸಿದರೆ, ಪುಷ್ಪೋದ್ಯಮದಲ್ಲಿ ಬಹಳ ಲಾಭ ಗಳಿಸಲು ಸಾಧ್ಯವಿದೆ. ಆದರೆ ಬೇಗನೇ ಹಣ ಮತ್ತು ಸಬ್ಸಿಡಿ ಪಡೆಯಬೇಕು ಎಂಬ ಆಶೆ ಇರುವವರಿಗೆ ಇದರಲ್ಲಿ ನಿರಾಶೆಯಾದೀತು. ಯಾಕೆಂದರೆ ಹೂಗಳನ್ನು ಬೆಳೆಸಬೇಕಾದರೆ ಶ್ರಮ ಪಡಬೇಕು ಮತ್ತು ಬಹಳ ತಾಳ್ಮೆ ಬೇಕು. ಹೂಗಿಡಗಳಿಗೆ ನೀರು ಹಾಕುವುದು, ಕೀಟಗಳ ನಿಯಂತ್ರಣ ಇತ್ಯಾದಿಗಳಲ್ಲಿ ಬಹಳ ಎಚ್ಚರ ಅಗತ್ಯ. ನಿಮ್ಮಲ್ಲಿ ದೃಢನಿರ್ಧಾರವಿದ್ದರೆ ಯಶಸ್ಸು ಖಂಡಿತ.”

