Agriculture and Rural Development
“ನನ್ನ ಬಾಲ್ಯದಲ್ಲಿ ನಮ್ಮ ಕುಟುಂಬ ೧೨೦ ಎಮ್ಮೆಗಳನ್ನು ಸಾಕುತ್ತಿತ್ತು. ಈಗ ಉಳಿದಿರೋದು ಕೇವಲ ಹತ್ತು ಎಮ್ಮೆಗಳು. ಅವಕ್ಕೆ ಹಸುರು ಹುಲ್ಲು ತರೋದೇ ನಮಗೆ ಪ್ರತಿ ದಿನದ ಸವಾಲಾಗಿದೆ” ಎನ್ನುತ್ತಾಳೆ ೬೫ ವರುಷ ವಯಸ್ಸಿನ ನೀಲಾ ವಾಡಿ.
ತಮಿಳುನಾಡಿನ ಮೇಲ್-ನೀಲಗಿರಿಯ ತರ್‍ನಾರ್ದ್‍ಮುಂಡ್ ಗ್ರಾಮದಲ್ಲಿದೆ ಆಕೆಯ ಗುಡಿಸಲು. ಹಸುರು ಹುಲ್ಲು ಮತ್ತು ಅಲ್ಲಲ್ಲಿ ಗಿಡಮರಗಳಿಂದ ಆವೃತವಾದ ಗುಡ್ಡವೊಂದರ ಇಳಿಜಾರಿನಲ್ಲಿದೆ ಆ ಮನೆ. ಮೇಲ್-ನೀಲಗಿರಿಯುದ್ದಕ್ಕೂ ಶೋಲಾ ಕಾಡು ಪ್ರದೇಶದಲ್ಲಿ ಕಾಣಬರುವುದು ಅದೇ – ಹುಲ್ಲು ಮತ್ತು ಅಲ್ಲಲ್ಲಿ ಗಿಡಮರಗಳು. ಪಶ್ಚಿಮಘಟ್ಟದ ಅತ್ಯಂತ ಎತ್ತರದ (ಸಮುದ್ರಮಟ್ಟದಿಂದ ೧,೭೦೦ರಿಂದ ೨,೬೦೦ ಮೀಟರ್ ಎತ್ತರದ) ಶಿಖರಗಳು ನೀಲಗಿರಿ ಬೆಟ್ಟಸಾಲಿನಲ್ಲಿವೆ. ಅಲ್ಲಿ ಕಡಿಮೆ ಮಂಜು ಕವಿಯುವ ಪ್ರದೇಶಗಳಲ್ಲಿ ಮಾತ್ರ ಶೋಲಾ ಕಾಡುಗಳನ್ನು ಕಾಣಬಹುದು.
ನೀಲಾ ವಾಡಿಯ ಮನೆಯೆದುರು ನಿಂತಾಗ ಕಾಣಿಸುತ್ತವೆ: ದಟ್ಟ ಹಸುರಿನ ನಡುವೆ ಅಲ್ಲಲ್ಲಿ ಕ್ಯಾರೆಟ್ ಮತ್ತು ಎಲೆಕೋಸು ಬೆಳೆಯುವ ಆಯತಾಕಾರದ ತರಕಾರಿ ಹೊಲಗಳು. ನೀಲಾ ವಾಡಿ ಕುಟುಂಬದ್ದೇ ಒಂದು ತರಕಾರಿ ಹೊಲವಿದೆ. ಆದರೆ ಅದರಲ್ಲಿ ತರಕಾರಿ ಬೆಳೆಸುತ್ತಿರುವುದು ಅವಳಲ್ಲ! “ತರಕಾರಿ ಕೃಷಿಯ ಖರ್ಚು ಭರಿಸಲು ನಮ್ಮಿಂದಾಗದು. ಹಾಗಾಗಿ ನನ್ನ ಮನೆಯಾತ ತನ್ನದೇ ಹೊಲವನ್ನು ಲೀಸಿಗೆ ಕೊಟ್ಟು ಅಲ್ಲಿ ಕೆಲಸಗಾರನಾಗಿ ದುಡಿಯುತ್ತಿದ್ದಾನೆ” ಎನ್ನುತ್ತಾಳೆ ನೀಲಾ ವಾಡಿ.
ತೋಡಾ ಸಮುದಾಯದವಳು ನೀಲಾ ವಾಡಿ. ಈ ಬುಡಕಟ್ಟು ಸಮುದಾಯದವರು ವಾಸವಿರುವುದು ನೀಲಗಿರಿಯ ಈ ನಾಲ್ಕು ತಾಲೂಕುಗಳಲ್ಲಿ ಮಾತ್ರ: ಊಟಿ, ಕೋಟಗಿರಿ, ಗುಡಲೂರು ಮತ್ತು ಕೂನೂರು. ಅವಳ ಕುಟುಂಬದ ಜಮೀನಿನ ವಿಸ್ತೀರ್ಣ ಐದು ಹೆಕ್ಟೇರ್. ಪ್ರತಿಯೊಂದು ಹೆಕ್ಟೇರಿನಲ್ಲಿ ಕೃಷಿ ಮಾಡಲು ರೂ.೪ ಲಕ್ಷ ಭಂಡವಾಳ ಅವಶ್ಯ. ಅವರ ಸಮುದಾಯದಲ್ಲಿ ಯಾರಿಂದಲೂ ಅಷ್ಟು ವೆಚ್ಚ ಮಾಡಲಾಗದು. ಆದ್ದರಿಂದ ಆಕೆಯ ಕುಟುಂಬ ಊಟಿಯ ಶ್ರೀಮಂತ ರೈತರಿಗೆ ಜಮೀನನ್ನು ಲೀಸಿಗೆ (ಗುತ್ತಿಗೆ) ಕೊಟ್ಟಿದೆ. ಹಾಗೆ ಲೀಸಿಗೆ ವಹಿಸಿಕೊಂಡವರು ಇವರ ಕುಟುಂಬಕ್ಕೆ ರೂ.೧.೪ ಲಕ್ಷ ಲೀಸ್-ಬಾಡಿಗೆ ಪಾವತಿಸುತ್ತಾರೆ. ಇವರು ತಮ್ಮದೇ ಜಮೀನಿನಲ್ಲಿ ಕೆಲಸಗಾರರಾಗಿ ದುಡಿಯುತ್ತಾರೆ!
ಈ ಮೆಣಸನ್ನು ಒಮ್ಮೆ ಕಚ್ಚಿದರೆ ಸಾಕು; ಅದರ ಖಾರದಿಂದ ಬಾಯಿ-ಹೊಟ್ಟೆಯಲ್ಲಿ ಉರಿ ಶುರುವಾಗಿ, ಅದನ್ನು ತಿಂದ ವ್ಯಕ್ತಿ ಥಕಥಕ ಕುಣಿಯಬೇಕಾದೀತು. ಹಾಗಾಗಿ ಅದರ ಹೆಸರು ರಾಜಾ ಮೆಣಸು.
ಅಸ್ಸಾಮ್ ಮತ್ತು ಸುತ್ತಲಿನ ರಾಜ್ಯಗಳಲ್ಲಿ ಬೆಳೆಯಲಾಗುವ ಈ ಮೆಣಸನ್ನು ಅಲ್ಲಿನವರು ಗುರುತಿಸುವುದು ಭೂತ್ ಜೊಲೊಕಿಯಾ ಎಂಬ ಹೆಸರಿನಿಂದ. “ಗಿನ್ನೆಸ್ ಜಾಗತಿಕ ದಾಖಲೆಗಳು” ಇದನ್ನು ಜಗತ್ತಿನ ಅತ್ಯಂತ ಖಾರದ ಮೆಣಸು ಎಂದು ಗುರುತಿಸಿದ್ದು ೨೦೦೭ರಲ್ಲಿ. ಅನಂತರ ೨೦೧೧ರ ತನಕ ರಾಜಾ ಮೆಣಸು ಆ ಸ್ಥಾನದಲ್ಲಿ ವಿಶ್ವವಿಖ್ಯಾತವಾಗಿತ್ತು. ಅನಂತರ ಬೇರೆ ಮೆಣಸಿಗೆ ಖಾರದ ಅಗ್ರಸ್ಥಾನ ದಕ್ಕಿತು. ಈಗ ೨೦೧೯ರಲ್ಲಿ, ಜಗತ್ತಿನ ಅತ್ಯಂತ ಖಾರದ ಮೆಣಸಿನ ಹೆಸರು ಕೆರೊಲಿನಾ ರೀಪರ್.
ರಾಜಾ ಮೆಣಸಿನ ಬಣ್ಣ ಕೆಂಪಾಗಿ ಬದಲಾಗುವಾಗಲೇ ಇದನ್ನು ಕೊಯ್ಯಬೇಕು. (ಇದರಲ್ಲಿ ಕೇಸರಿ, ಹಳದಿ, ನೇರಳೆ ಬಣ್ಣದವೂ ಇವೆ.) ಒಂದು ಹಂಗಾಮಿನಲ್ಲಿ ಮೂರು ತಿಂಗಳ ಅವಧಿ ಇದರ ಗಿಡಗಳಲ್ಲಿ ಮೆಣಸು ಬೆಳೆಯುತ್ತದೆ. ಒಂದು ಗಿಡದಿಂದ ಪ್ರತಿ ಹಂಗಾಮಿನಲ್ಲಿ ಸರಾಸರಿ ಮೂರು ಕಿಗ್ರಾ ಫಸಲು ಲಭ್ಯ. “ಒಂದು ಭಿಗಾ (ಸುಮಾರು ೦.೩ ಎಕ್ರೆ) ಜಮೀನಿನಲ್ಲಿ ೧,೫೦೦ – ೧,೬೦೦ ಮೆಣಸಿನ ಗಿಡಗಳನ್ನು ನೆಡಬಹುದು. ಅವುಗಳಿಂದ ಪ್ರತಿ ಹಂಗಾಮಿನಲ್ಲಿ ೧೫,೦೦೦ದಿಂದ ೨೦,೦೦೦ ರೂಪಾಯಿ ಲಾಭ” ಎನ್ನುತ್ತಾರೆ ಅಸ್ಸಾಮಿನ ಸಿಬ್‍ಸಾಗರ ಜಿಲ್ಲೆಯ ರೈತ ಬಿಪುಲ್ ಗೊಗೊಯ್.
ರಾಜಧಾನಿ ಗೌಹಾತಿಯ ಮಚ್‍ಖೋವಾದ ರಖಂ ಮಾರುಕಟ್ಟೆಯಲ್ಲಿ ತಾಜಾ ರಾಜಾ ಮೆಣಸು ಲಭ್ಯ. ಖಾರ ಮತ್ತು ಬಣ್ಣ ನೋಡಿ ಗ್ರಾಹಕರಿಂದ ಇದರ ಗುಣಮಟ್ಟ ನಿರ್ಧಾರ. ರಖಂ ವರ್ತಕ ಹಿರೇನ್ ಬರುವಾ ಅವರ ದಿನನಿತ್ಯದ ಸರಾಸರಿ ವ್ಯಾಪಾರ ೫೦ ಕಿಗ್ರಾ – ೧೦೦ ಕಿಗ್ರಾ. ರಾಜಾ ಮೆಣಸಿನ ಬೆಲೆ ಹಂಗಾಮಿನಲ್ಲಿ (ಮಾರ್ಚ್ – ಜುಲಾಯಿ) ಕಿಲೋಕ್ಕೆ ರೂ.೧೫೦ರಿಂದ ರೂ.೩೦೦. ಇಲ್ಲಿಂದ ಖರೀದಿಸಿದ ರಾಜಾ ಮೆಣಸನ್ನು ಸೂರ್ಯನ ಬಿಸಿಲಿನಲ್ಲಿ ಅಥವಾ ಡ್ರೈಯರುಗಳಲ್ಲಿ ಒಣಗಿಸಿ ಪುನಃ ಮಾರಲಾಗುತ್ತದೆ.
೨೦೧೯ರ ಸಪ್ಟಂಬರಿನಲ್ಲಿ ಬದರಿನಾಥಕ್ಕೆ ಹೋಗಿದ್ದಾಗ, ಅಲ್ಲಿ ಬಾದಾಮಿ ಹಾಲನ್ನು ನಮಗೆ ಕುಡಿಯಲು ಕೊಟ್ಟದ್ದು ಮಣ್ಣಿನ ಲೋಟದಲ್ಲಿ. ಆಗ ನೆನಪಾಯಿತು ಕೊಲ್ಕತಾದ ಮಣ್ಣಿನ ಟೀ ಕಪ್. ಅಲ್ಲಿ ಈಗಲೂ ಟೀ ಷಾಪ್‍ಗಳಲ್ಲಿ ಮಣ್ಣಿನ ಕಪ್‍ಗಳಲ್ಲಿ ಟೀ ಲಭ್ಯ.
ಅದೊಂದು ಕಾಲವಿತ್ತು, ಉತ್ತರ ಭಾರತದಲ್ಲೆಲ್ಲ ಮಣ್ಣಿನ ಕಪ್‍ನಲ್ಲೇ ಟೀ ಕುಡಿಯುತ್ತಿದ್ದ ಕಾಲ. ಆದರೆ ಕಾಲ ಸರಿದಂತೆ ಆ ಅಭ್ಯಾಸ ನಿಂತೇ ಹೋಯಿತು. ಮಣ್ಣಿನ ಕಪ್‍ಗಳ ಸ್ಥಾನವನ್ನು ಬಳಸಿ-ಎಸೆಯುವ ಪ್ಲಾಸ್ಟಿಕ್ ಮತ್ತು ಕಾಗದದ ಕಪ್‍ಗಳು ಆಕ್ರಮಿಸಿಕೊಂಡವು.
ಹದಿನೈದು ವರುಷಗಳ ಮುಂಚೆ, ಆಗಿನ ಕೇಂದ್ರ ರೈಲ್ವೇ ಸಚಿವ ಲಾಲು ಪ್ರಸಾದ ಯಾದವ್, ರೈಲು ನಿಲ್ದಾಣಗಳಲ್ಲಿ ಮಣ್ಣಿನ ಕಪ್‍ಗಳಲ್ಲಿ ಟೀ ಒದಗಿಸುವ ವ್ಯವಸ್ಥೆ ಮಾಡಿದರು – ಗ್ರಾಮೀಣ ಕುಂಬಾರಿಕೆಗೆ ಪ್ರೋತ್ಸಾಹ ನೀಡಲಿಕ್ಕಾಗಿ. ಆದರೆ ಈ ಪ್ರಯೋಗ ಒಂದೇ ವರುಷದಲ್ಲಿ ನಿಂತು ಹೋಯಿತು. ಯಾಕೆಂದರೆ ರೈಲು ಪ್ರಯಾಣಿಕರೂ, ಟೀ ಮಾರಾಟಗಾರರೂ ಅಗ್ಗದ ಪ್ಲಾಸ್ಟಿಕ್ ಮತ್ತು ಪೇಪರ್ ಕಪ್‍ಗಳನ್ನು ಪುನಃ ಬಳಸತೊಡಗಿದರು. ೨೦೧೯ರ ಆರಂಭದಲ್ಲಿ, ಕೇಂದ್ರ ರೈಲ್ವೇ ಸಚಿವ ಪಿಯುಷ್ ಗೋಯಲ್, ವಾರಣಾಸಿ ಮತ್ತು ರಾಯ್‍ಬರೇಲಿ ರೈಲುನಿಲ್ದಾಣಗಳ ಕೆಟರರ್ಸ್ (ಆಹಾರ ಸರಬರಾಜುಗಾರರು) ಮಣ್ಣಿನ ಕಪ್‍ಗಳಲ್ಲಿಯೇ ಪಾನೀಯ ಮಾರಾಟ ಮಾಡಬೇಕೆಂದು ಆದೇಶ ನೀಡಿದರು. ಈ ಪ್ರಯೋಗ ಎಷ್ಟು ಕಾಲ ಸಾಗುತ್ತದೆಂದು ಕಾದು ನೋಡೋಣ.
ಅದೇನಿದ್ದರೂ, ಮಹಾನಗರ ಕೊಲ್ಕತಾದಲ್ಲಿ ಜನರು ಪುಟ್ಟ ಮಣ್ಣಿನ ಕಪ್‍ಗಳಲ್ಲೇ ಇಂದಿಗೂ ಟೀ ಕುಡಿಯುತ್ತಿದ್ದಾರೆ. “ಮಣ್ಣಿನ ಕಪ್‍ನಲ್ಲಿರುವ ಟೀ ಸ್ವಾದವೇ ಬೇರೆ. ಕಪ್‍ನ ಮಣ್ಣಿನ ವಾಸನೆ ಹೀರಿಕೊಳ್ಳುವ ಈ ಟೀಯ ಸ್ವಾದವನ್ನು ಪ್ಲಾಸ್ಟಿಕ್ ಕಪ್‍ನಲ್ಲಿರುವ ಟೀ ಒದಗಿಸಲಾರದು” ಎನ್ನುತ್ತಾರೆ ನಿಯಮಿತವಾಗಿ ಟೀ ಕುಡಿಯುವ ಅಲ್ಲಿನ ಜನರು.
ಈ ಟೀ ಕಪ್‍ಗಳನ್ನು ತಯಾರಿಸುವುದು ಹೂಗ್ಲಿ ನದಿ ದಡದ ಮಣ್ಣಿನಿಂದ. ಅಧಿಕ ಉಷ್ಣತೆಯಲ್ಲಿ ಸುಟ್ಟು ತಯಾರಿಸುವ ಅವನ್ನು ಪಾಲಿಷ್ ಮಾಡುವುದಿಲ್ಲ; ಹಾಗಾಗಿ ಅವುಗಳ ಮೇಲ್ಮೈ ಒರಟುಒರಟು. ಅವನ್ನು ತಯಾರಿಸುವುದೇ ಒಮ್ಮೆ ಬಳಸಿ ಎಸೆಯೋದಕ್ಕೆ. ನದಿ ಮಣ್ಣಿನ ವಾಸನೆ ಹೀರುತ್ತ ಅವುಗಳಲ್ಲಿ ಟೀ ಕುಡಿಯುವುದೇ ಮರೆಯಲಾಗದ ಅನುಭವ.
ಸಾವಿರಸಾವಿರ ಎಕ್ರೆ ಜಮೀನಿಗೆ ನೀರಾವರಿ ಒದಗಿಸಲಿಕ್ಕಾಗಿ ಕೋಟಿಗಟ್ಟಲೆ ರೂಪಾಯಿ ವೆಚ್ಚ ಮಾಡಿ ನಿರ್ಮಿಸಿದ ಅಣೆಕಟ್ಟುಗಳೇ ಈಗ ನೆರೆ ಹಾವಳಿಗೆ ಕಾರಣವಾಗುತ್ತಿವೆ ಎಂದರೆ ನಂಬುತ್ತೀರಾ?
ಕರ್ನಾಟಕದ ಬರಪೀಡಿತ ಜಿಲ್ಲೆ ಬೆಳಗಾವಿಯಲ್ಲಿ ಇಂತಹ ನೆರೆಯಿಂದಾಗಿ ೨೦೧೯ರಲ್ಲಿ ೭೧ ಜನರು ಪ್ರಾಣ ಕಳೆದುಕೊಂಡರು. ಆಗಸ್ಟ್ ೧ರಿಂದ ೭ರ ನಡುವೆ ಒಣ ಜಿಲ್ಲೆ ಬೆಳಗಾವಿಯಲ್ಲಿ ಸರಾಸರಿಗಿಂತ ಶೇ.೬೫೨ರಷ್ಟು ಜಾಸ್ತಿ ಮಳೆ ಸುರಿಯಿತು. (ಇದೇ ಅವಧಿಯಲ್ಲಿ ಕರ್ನಾಟಕದಲ್ಲಿಯೂ ಸರಾಸರಿಗಿಂತ ಶೇ.೧೨೮ ಜಾಸ್ತಿ ಮಳೆಯಾಯಿತು.) ೫ ಆಗಸ್ಟ್ ೨೦೧೯ರ ಹೊತ್ತಿಗೆ ಜಿಲ್ಲೆಯ ಎಲ್ಲ ಅಣೆಕಟ್ಟುಗಳಲ್ಲಿಯೂ ನೀರು ತುಳುಕುವಷ್ಟು ತುಂಬಿತ್ತು. ಆದರೂ ಹಿಡ್ಕಲ್ ಅಣೆಕಟ್ಟಿನ ಮೇಲ್ವಿಚಾರಕರು ಸೆಕೆಂಡಿಗೆ ಕೇವಲ ೬೮.೮ ಘನ ಮೀ. ನೀರನ್ನು ಘಟಪ್ರಭಾ ನದಿಗೆ ಬಿಡುತ್ತಿದ್ದರು. ಆಗಸ್ಟ್ ೬ರ ಮಹಾಮಳೆಯಿಂದಾಗಿ ನೀರು ಅಣೆಕಟ್ಟಿನ ಅಂಚು ಮೀರುವಂತಾಯಿತು. ಆಗ ನಿದ್ದೆಯಿಂದ ಎಚ್ಚೆತ್ತ ಮೇಲ್ವಿಚಾರಕರು ಒಮ್ಮೆಲೇ ಸೆಕೆಂಡಿಗೆ ೮೩೩ ಘನ ಮೀ. ನೀರನ್ನು ಹೊರಬಿಡಲು ಶುರು ಮಾಡಿದರು. ಆಗಸ್ಟ್ ೯ರಂದು ಈ ಪರಿಮಾಣವನ್ನು ಸೆಕೆಂಡಿಗೆ ಬರೋಬ್ಬರಿ ೨,೮೫೮ ಘನ ಮೀಟರಿಗೆ ಹೆಚ್ಚಿಸಿದರು. ಅಂದರೆ, ಅಣೆಕಟ್ಟಿಗೆ ನೀರಿನ ಒಳಹರಿವಿಗಿಂತ ಹೊರಬಿಡುವ ನೀರಿನ ಪರಿಮಾಣ ಜಾಸ್ತಿಯಾಗಿತ್ತು!
ಬೆಳಗಾವಿ ಜಿಲ್ಲೆಯ ಮಲಪ್ರಭಾ ಅಣೆಕಟ್ಟಿನಲ್ಲಿಯೂ ಇದೇ ಕತೆ! ಆಗಸ್ಟ್ ೭ರ ವರೆಗೆ ಅಲ್ಲಿನ ಮೇಲ್ವಿಚಾರಕರು ಸೆಕೆಂಡಿಗೆ ೪೪೬ ಘನ ಮೀ. ನೀರು ಹೊರಬಿಡುತ್ತಿದ್ದರೆ, ಮರುದಿನ ಆಗಸ್ಟ್ ೮ರಂದು ಅದನ್ನು ಒಮ್ಮೆಲೇ ಸೆಕೆಂಡಿಗೆ ೨,೨೯೫ ಘನ ಮೀ. (ಐದು ಪಟ್ಟು) ಹೆಚ್ಚಿಸಿದರು. ೨೦೧೮ರಲ್ಲಿ ಕೇರಳದಲ್ಲಿ ನುಗ್ಗಿ ಬಂದ ಮಹಾನೆರೆಗೂ ಇದೇ ಕಾರಣ ಎಂಬುದನ್ನು ನಾವು ಮರೆಯುವಂತಿಲ್ಲ.
“ಹಣ್ಣು-ತರಕಾರಿ-ಧಾನ್ಯ ಇತ್ಯಾದಿ ಖರೀದಿಸುವ ಗ್ರಾಹಕರು ಈ ಪ್ರಶ್ನೆಗಳನ್ನು ಕೇಳಬೇಕು: ಇದು ಎಲ್ಲಿಂದ ಬರುತ್ತಿದೆ? ಈಗ ಇದನ್ನು ಬೆಳೆಯುವ ಹಂಗಾಮು ಹೌದೇ? ನನ್ನ ಅಜ್ಜಿ ಇದನ್ನು ಆಹಾರ ಎಂದು ಒಪ್ಪುತ್ತಿದ್ದರೇ? ಈ ಮೊಸರಿನಲ್ಲಿ ಹಾಲು ಮತ್ತು ಬ್ಯಾಕ್ಟೀರಿಯಾ ಹೊರತಾಗಿ ಬೇರೆ ವಸ್ತುಗಳಿದ್ದರೆ ಅವು ಯಾವುವು? ಮತ್ತು ಅವು ಯಾಕೆ ಮೊಸರಿನಲ್ಲಿವೆ? ಇಂತಹ ಪ್ರಶ್ನೆಗಳನ್ನು ಕೇಳುತ್ತಾ ಹೋದರೆ ಮಾತ್ರ ನಾವು ಭೂಮಿಯೊಂದಿಗೆ ಸಾಮರಸ್ಯದಿಂದ ಬದುಕಲು ಸಾಧ್ಯ.
ನಾವು ನಮ್ಮ ಕೈಗಳಿಂದಲೇ ಕೃಷಿ ಮಾಡಬೇಕಾಗಿದೆ. ಮಣ್ಣು ಹೇಗಿದೆ? ಗಿಡಗಳನ್ನು ಬೆಳೆಸೋದು ಹೇಗೆ? ಇದನ್ನೆಲ್ಲ ನಾವು ಅನುಭವಿಸಬೇಕಾಗಿದೆ. ಜೊತೆಗೆ ಕೃಷಿಕರು ತಮ್ಮ ಜಮೀನು, ತಮ್ಮ ಬೀಜಗಳನ್ನು ತಮ್ಮ ಕೈಗೆ ತೆಗೆದುಕೊಳ್ಳಬೇಕಾಗಿದೆ. ಅದುವೇ ನಿಜವಾದ ಸ್ವಾತಂತ್ರ್ಯ” – ಈ ಮಾತುಗಳನ್ನು ಹೇಳಿದವರು ಬೃಂದಾವನ ಫಾರ್ಮಿನ ಗಾಯತ್ರಿ ಭಾಟಿಯಾ.
ಮುಂಬೈಯ ಈಶಾನ್ಯ ದಿಕ್ಕಿನಲ್ಲಿರುವ ಅವರ ಕುಟುಂಬದ ೧೦ ಎಕ್ರೆ ಫಾರ್ಮಿಗೆ ಅಲ್ಲಿಂದ ಒಂದು ಗಂಟೆ ಪ್ರಯಾಣ. ಅದೀಗ ಸಂಪೂರ್ಣ ಸಾವಯವ ತೋಟ. ಈ ಪರಿವರ್ತನೆ ಒಂದು ರೋಚಕ ಕತೆ. ಇದೆಲ್ಲ ಶುರುವಾದದ್ದು ೧೦ ವರುಷಗಳ ಮುಂಚೆ ಗಾಯತ್ರಿ ಭಾಟಿಯಾ ಯುಎಸ್‍ಎ ದೇಶದ ಬೋಸ್ಟನ್ ಮಹಾನಗರದ ಪರಿಸರ ರಕ್ಷಣಾ ಏಜೆನ್ಸಿಯಲ್ಲಿ ತನ್ನ “ಪರಿಸರ ವಿಶ್ಲೇಷಕಿ” ಹುದ್ದೆ ತೊರೆದು ತನ್ನ ಹಳ್ಳಿಗೆ ಮರಳಿದಾಗ.
ಆಗ ಈ ಜಮೀನು ಪ್ರಧಾನವಾಗಿ ಮಾವಿನ ತೋಟ. ಅಲ್ಲಿದ್ದವು ಏಳು ತಳಿಗಳ ೫೦೦ ಮಾವಿನ ಮರಗಳು. ಜೊತೆಗೆ ಕೆಲವು ತೆಂಗು ಮತ್ತು ಗೇರು ಮರಗಳು, ಕರಿಮೆಣಸು ಬಳ್ಳಿಗಳು.
ಈಗ ಅಲ್ಲಿ ಮಾವಿನ ಜೊತೆಗೆ ಹತ್ತುಹಲವು ಹಣ್ಣಿನ ಮರಗಳಿವೆ: ಪಪ್ಪಾಯಿ, ಚಿಕ್ಕು, ಹಲಸು, ಅನಾನಸ್, ಬಾಳೆ, ಹಿಪ್ಪುನೇರಳೆ, ಟೊಮೆಟೊ, ಕಾಡುಹಣ್ಣುಗಳು ಇತ್ಯಾದಿ. ಅರಿಶಿನ, ಶುಂಠಿ, ಕರಿಮೆಣಸು ಮೊದಲಾದ ಸಾಂಬಾರ ಗಿಡಗಳೂ, ಲೆಟ್ಯೂಸ್, ಬೇಬಿ ಸ್ಪಿನಾಚ್, ತುಳಸಿ, ಸೊರ್ರೆಲ್, ನುಗ್ಗೆ, ಹರಿವೆ ಸೊಪ್ಪಿನ ಸಸಿಗಳು, ಪುಟ್ಟಟೊಮೆಟೊ, ಬದನೆ, ಚೀನಿಕಾಯಿ, ಗೆಣಸು ಇತ್ಯಾದಿ ತರಕಾರಿ ಗಿಡಬಳ್ಳಿಗಳೂ ಅಲ್ಲಿವೆ.
ಇಪ್ಪತ್ತು ವರುಷಗಳ ಹಿಂದಿನ ಮಾತು. ಧೃತಿಮಾನ್ ಬೋರಾ ತನ್ನ ವಿದ್ಯಾವಂತ ಹೆತ್ತವರಿಗೆ ಹೇಳಿದ ಮಾತು: ಹನ್ನೆರಡನೆಯ ತರಗತಿಯ ನಂತರ ನಾನು ವಿದ್ಯಾಭ್ಯಾಸ ಮುಂದುವರಿಸುವುದಿಲ್ಲ.
ವಿದ್ಯಾಲಯದಲ್ಲಿ ಕಲಿಯುವ ಬದಲಾಗಿ, ಧೃತಿಮಾನ್ ಬಿದಿರಿನ ಪೀಠೋಪಕರಣಗಳು ಮತ್ತು ಅಡುಗೆ ಹಾಗೂ ಕೃಷಿ ಸಲಕರಣೆಗಳನ್ನು ತಯಾರಿಸಲು ಶುರು ಮಾಡಿದರು. ಹೀಗೆ ಆರಂಭವಾಯಿತು ಡಿಬಿ ಇಂಡಸ್ಟ್ರೀಸ್ ಎಂಬ ಬಿದಿರಿನ ಸಾಧನಗಳ ಪುಟ್ಟ ತಯಾರಿಕಾ ಘಟಕ.
ಅಸ್ಸಾಂನ ಗೌಹಾತಿ ನಗರದ ಈಶಾನ್ಯದಲ್ಲಿ, ೨೪೦ ಕಿಮೀ ದೂರದಲ್ಲಿ, ಬಿಶ್ವನಾಥ್ ಚರಿಯಾಲಿ ಪಟ್ಟಣದ ನಬಪುರ್ ಪ್ರದೇಶದಲ್ಲಿ ಅವರ ಮನೆಯಲ್ಲಿಯೇ ಇದೆ ಈ ಘಟಕ. ಮನೆಯ ಹಿಂಭಾಗದಲ್ಲಿ ಜತಿ ಮತ್ತು ಬಿಜುಲಿ ಎಂಬ ಎರಡು ಜಾತಿಯ ಬಿದಿರು ಮೆಳೆಗಳಿದ್ದವು. “ಅವು ನಾಜೂಕಿನ ವಸ್ತುಗಳ ತಯಾರಿಗೆ ಸೂಕ್ತವಾದರೂ ಬಾಳ್ವಿಕೆಯ ವಸ್ತುಗಳ ತಯಾರಿಗೆ ಸೂಕ್ತವಲ್ಲ” ಎನ್ನುತ್ತಾರೆ ಧೃತಿಮಾನ್.
ಬಹಳ ಹುಡುಕಾಟದ ನಂತರ, ಬಾಳ್ವಿಕೆಯ ವಸ್ತುಗಳ ತಯಾರಿಗೆ ಸೂಕ್ತವಾದ ದೃಢವಾದ ಬಿದಿರು ತಳಿಯನ್ನು ಗುರುತಿಸಿದರು ಧೃತಿಮಾನ್. ಅದುವೇ ಭಲೂಕ ಎಂಬ ಬಿದಿರು (ಸಸ್ಯಶಾಸ್ತ್ರೀಯ ಹೆಸರು ಬಂಬುಸಾ ಬಲ್‍ಕೂವ).
ಅದರಿಂದ ಹಲವಾರು ಬಿದಿರಿನ ಉತ್ಪನ್ನಗಳನ್ನು ಡಿಬಿ ಇಂಡಸ್ಟ್ರೀಸ್ ತಯಾರಿಸಿ ಮಾರತೊಡಗಿತು: ಚಾಪೆಗಳು, ಪೀಠೋಪಕರಣಗಳು, ವಿಭಾಜಕಗಳು, ಫಲಕಗಳು, ಹೂದಾನಿಗಳು, ಅಡುಗೆ ಸಾಧನಗಳು ಇತ್ಯಾದಿ. ಆದರೆ ಅದ್ಯಾವುದೂ ಮಾರುಕಟ್ಟೆಯಲ್ಲಿ ಸುದ್ದಿಯಾಗಲೇ ಇಲ್ಲ.
ಕೊನೆಗೂ, ೧೭ ವರುಷಗಳ ಪರಿಶ್ರಮ ಫಲ ನೀಡಿತು; ಜಾಗತಿಕ ಮಟ್ಟದಲ್ಲಿ ಗಮನ ಸೆಳೆಯುವ ಬಿದಿರಿನ ಉತ್ಪನ್ನವೊಂದನ್ನು ರೂಪಿಸಲು ಧೃತಿಮಾನ್ ಯಶಸ್ವಿಯಾದರು. ಅದುವೇ “ಬಿದಿರಿನ ನೀರಿನ ಬಾಟಲಿ.” ಈ ಆವಿಷ್ಕಾರ ಒಂದೇ ವರುಷದಲ್ಲಿ ಭಾರತದ ಮತ್ತು ವಿದೇಶಗಳ ಗ್ರಾಹಕರ ಗಮನ ಸೆಳೆದಿದೆ: ನಿಸರ್ಗ ಮೂಲದ ಸಾವಯವ ಬಾಟಲಿ ಎಂಬ ಕಾರಣಕ್ಕಾಗಿ.
ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಅಜ್ಜಿಹಳ್ಳಿಯ ರೈತ ರಾಜು ಸ್ವಾಮಿ ತನ್ನ ನಾಲ್ಕು ಹೆಕ್ಟೇರ್ ಅಡಿಕೆ ತೋಟದಲ್ಲಿ ೧೨ ಕೊಳವೆಬಾವಿ ಕೊರೆಸಿದ್ದಾರೆ. ಒಂದರಲ್ಲೂ ನೀರು ಸಿಕ್ಕಿಲ್ಲ!
ಈಗ, ೨೦೧೯ರ ಬೇಸಗೆಯಲ್ಲಿ, ತನ್ನ ಅಡಿಕೆ ಸಸಿಗಳನ್ನು ಉಳಿಸಲಿಕ್ಕಾಗಿ ಟ್ಯಾಂಕರಿನಲ್ಲಿ ನೀರು ತಂದು ಹಾಕುತ್ತಿದ್ದಾರೆ, ೧೭ ಕಿಮೀ ದೂರದ ಭದ್ರಾ ಕಾಲುವೆಯಿಂದ. ೨೪,೦೦೦ ಲೀಟರ್ ನೀರು ತರುವ ಟ್ಯಾಂಕರಿನ ಒಂದು ಟ್ರಿಪ್ಪಿಗೆ ಅವರು ಪಾವತಿಸುವ ಹಣ ರೂ.೨,೦೦೦. ಪ್ರತಿಯೊಂದು ಹೆಕ್ಟೇರ್ ಅಡಿಕೆ ತೋಟಕ್ಕೆ ವಾರಕ್ಕೆ ಹಾಕಬೇಕಾದ ನೀರು ಕನಿಷ್ಠ ಒಂದು ಲಕ್ಷ ಲೀಟರ್ ಎಂಬುದವರ ಲೆಕ್ಕಾಚಾರ. ೨೦೧೯ರ ಜನವರಿ ಮೂರನೇ ವಾರದಿಂದ ಮೇ ಮಧ್ಯದ ತನಕ ಟ್ಯಾಂಕರಿನಲ್ಲಿ ತೋಟಕ್ಕೆ ನೀರು ತರಿಸಲಿಕ್ಕಾಗಿ ಅವರು ಮಾಡಿರುವ ವೆಚ್ಚ ಬರೋಬ್ಬರಿ ೫.೫ ಲಕ್ಷ ರೂಪಾಯಿ!
ಹಲವು ರೈತರು ತಮ್ಮ ಅಡಿಕೆ ತೋಟ ಉಳಿಸಲಿಕ್ಕಾಗಿ ಹೀಗೆ ಟ್ಯಾಂಕರಿನಲ್ಲಿ ನೀರು ತರಿಸಿ, ಅಡಿಕೆ ಸಸಿಗಳಿಗೆ ಸುರಿಯುತ್ತಿದ್ದಾರೆ. ಹಾಗಾಗಿ, ಚನ್ನಗಿರಿ ತಾಲೂಕಿನ ಹಂಚಿನ ಸಿದ್ಧಾಪುರ, ನಲ್ಲೂರು ಮತ್ತು ಸಂತೆಬೆನ್ನೂರು ಗ್ರಾಮಗಳಲ್ಲಿ ಭದ್ರಾ ಕಾಲುವೆಯಿಂದ ೪೦ರಿಂದ ೫೦ ಟ್ಯಾಂಕರುಗಳು ನೀರು ಎತ್ತುತ್ತಿರುವುದನ್ನು ಯಾವಾಗಲೂ ಕಾಣಬಹುದು (ಇದು ಅಧಿಕಾರಿಗಳ ಸಮ್ಮತಿಯಿಲ್ಲದ ಚಟುವಟಿಕೆ ಎಂಬುದು ಬೇರೆಯೇ ಸಂಗತಿ). ಇದರಿಂದಾಗಿ ಆ ಪ್ರದೇಶಗಳಲ್ಲಿ ಆಗಾಗ ವಾಹನ ದಟ್ಟಣೆಯ ಸಮಸ್ಯೆ. ೪೦ರಿಂದ ೫೦ ಕಿಮೀ ದೂರದಿಂದ ಟ್ಯಾಂಕರಿನಲ್ಲಿ ನೀರು ತರಿಸುತ್ತಿರುವ ರೈತರೂ ಇದ್ದಾರೆ.
“ಮುಂದಿನ ವರುಷ ಅಡಿಕೆ ಮಾರಾಟ ಮಾಡಿದರೆ ಸಿಗುವ ಆದಾಯ, ಈ ವರುಷ ಟ್ಯಾಂಕರಿನಲ್ಲಿ ನೀರು ತರಿಸೋದಕ್ಕೆ ಮಾಡಿದ ವೆಚ್ಚಕ್ಕಿಂತ ಕಡಿಮೆ ಆಗಲಿದೆ. ಆದರೆ ಈಗ ನನಗೆ ಅಡಿಕೆ ಗಿಡಗಳನ್ನು ಉಳಿಸೋದೇ ಚಿಂತೆ. ಮುಂದಿನ ಮಳೆಗಾಲದಲ್ಲಾದರೂ ಒಳ್ಳೇ ಮಳೆಯಾದೀತೆಂದು ನಿರೀಕ್ಷೆ” ಎನ್ನುತ್ತಾರೆ ರಾಜು ಸ್ವಾಮಿ.
ದಾವಣಗೆರೆ ಜಿಲ್ಲೆಯಲ್ಲಿ ಅಂದೊಮ್ಮೆ ಲಾಭದಾಯಕ ಎನಿಸಿದ್ದ ಅಡಿಕೆ ಕೃಷಿ ಈಗ ಅಲ್ಲಿನ ರೈತರಿಗೆ ನಷ್ಟದ ಬಾಬತ್ತಾಗಿದೆ. ಇದಕ್ಕೆ ಮುಖ್ಯ ಕಾರಣ ಹಲವು ವರುಷಗಳ ಸತತ ಬರಗಾಲ ಮತ್ತು ಮುಂಗಾರಿನ ಮುಂಚಿನ ಮಳೆ ಕೈಕೊಟ್ಟಿರುವುದು.
ಬೇಸಗೆ ಮತ್ತು ಚಳಿಗಾಲಗಳಲ್ಲಿ ಮಹಾರಾಷ್ಟ್ರದ ಮೇಲ್‍ಘಾಟ್ ಹತ್ತಿರ ವಾಸ ಮಾಡುವ ಕೊರ್ಕು ಬುಡಕಟ್ಟಿನ ಜನರು ಬಲೆಯಿಂದ ಆವರಿಸಿದ ಹತ್ತಿ ಬಟ್ಟೆಯ ಉಡುಪು ಧರಿಸಿ ಕಾಡಿಗೆ ಹೊರಡುತ್ತಾರೆ.
ಅವರ ಉದ್ದೇಶ ಮರಗಳಿಂದ ಜೇನು ಸಂಗ್ರಹಿಸುವುದು. ಅದು ಸವಾಲಿನ ಕೆಲಸ. ಯಾಕೆಂದರೆ, ಜೇನ್ನೊಣಗಳನ್ನು ಕೊಲ್ಲದೆ, ಜೇನುಹುಟ್ಟುಗಳನ್ನು ನಾಶ ಮಾಡದೆ ಜೇನು ಸಂಗ್ರಹಿಸಬೇಕು. ಅದಕ್ಕಾಗಿ ಅವರು, ಜೇನ್ನೊಣಗಳ ಗೂಡಿನ ಹೃದಯದಂತಿರುವ ಜೇನು ತುಂಬಿದ ಹುಟ್ಟುಗಳಿಗೆ ಮಾತ್ರ ಕೈಹಾಕುತ್ತಾರೆ. “ಜೇನು ಗೂಡುಗಳ ಆ ಭಾಗದಲ್ಲಿ ಮಾತ್ರ ಜೇನು ಸಂಗ್ರಹಿಸಿಟ್ಟಿರುತ್ತವೆ. ಅಲ್ಲಿಂದ ಜೇನು ತೆಗೆಯಲಿಕ್ಕಾಗಿ ಇಡೀ ಜೇನುಗೂಡನ್ನೇ ನಾಶ ಮಾಡುವುದು ಅಗತ್ಯವಿಲ್ಲ” ಎನ್ನುತ್ತಾರೆ ಗಜಾನನ ಕಾಳೆ. ಅವರು ಕೊರ್ಕು ಬುಡಕಟ್ಟಿನ ಜನರೊಂದಿಗೆ ಕೆಲಸ ಮಾಡುತ್ತಾರೆ. ಈ ವಿಧಾನ ಅನುಸರಿಸಿದರೆ ಒಂದೇ ಜೇನುಗೂಡನ್ನು ಮೂರು ಬಾರಿ ಜೇನು ಸಂಗ್ರಹಕ್ಕಾಗಿ ಜೇನ್ನೊಣಗಳು ಬಳಸಲು ಸಹಾಯವಾಗುತ್ತದೆ.
ಈ ರೀತಿಯಲ್ಲಿ, ಕೆಲವು ಸಲ ಕಾಡಿನ ಉತ್ಪನ್ನಗಳನ್ನು ಸುಸ್ಥಿರ ವಿಧಾನದಲ್ಲಿ ಕೊಯ್ಲು ಮಾಡಲು ಸಾಧ್ಯ. ಆದರೆ ಕೆಲವು ಸಲ ಹಾಗೆ ಮಾಡಲಾಗುವುದಿಲ್ಲ. ಉದಾಹರಣೆಗೆ, ಔಷಧಿಗಾಗಿ ಯಾವುದೇ ಸಸ್ಯದ ಕಾಂಡದ ತೊಗಟೆ ಅಥವಾ ಬೇರು ಕಿತ್ತಾಗ ಆ ಸಸ್ಯ ನಾಶವಾಗುತ್ತದೆ.
ಹಲವಾರು ಔಷಧೀಯ ಹಾಗೂ ಸುಗಂಧ ಸಸ್ಯಭಾಗಗಳನ್ನು ಮತ್ತು ಅಪರೂಪದ ಕಾಡಿನ ಉತ್ಪನ್ನಗಳನ್ನು ಔಷಧಿ ಕಂಪೆನಿಗಳು ಬಳಸುತ್ತಿವೆ. ಆದರೆ ಆ ಕಂಪೆನಿಗಳು ಸುಸ್ಥಿರ ವಿಧಾನದಲ್ಲಿ ಕೊಯ್ಲು ಮಾಡುತ್ತಿಲ್ಲ ಮತ್ತು ಸ್ಥಳೀಯ ಸಮುದಾಯಗಳ ಜನರಿಗೆ ತಮ್ಮ ಲಾಭದಲ್ಲಿ ಪಾಲು ನೀಡುತ್ತಿಲ್ಲ. ಸ್ಥಳೀಯ ಸಮುದಾಯಗಳ ಜನರೇ ಇಂಥ ಜೈವಿಕ ಸಂಪನ್ಮೂಲಗಳಗಳ ನಿಜವಾದ ರಕ್ಷಕರು ಎಂಬುದು ಗಮನಾರ್ಹ.
ಈ ನಿಟ್ಟಿನಲ್ಲಿ ಉತ್ತರಖಂಡದ ಹೈಕೋರ್ಟ್ ಚಾರಿತ್ರಿಕ ತೀರ್ಪು ನೀಡಿ, ಜೈವಿಕ ಸಂಪನ್ಮೂಲಗಳ ಮೇಲೆ ಸ್ಥಳೀಯ ಜನಸಮುದಾಯಗಳ ಹಕ್ಕು ಸ್ಥಾಪನೆ ಮಾಡಿದೆ. ಈ ಸಂಪನ್ಮೂಲಗಳ ಮಾರಾಟದಿಂದ ಸಿಗುವ ಆದಾಯವನ್ನು ಸ್ಥಳೀಯ ಜನಸಮುದಾಯಗಳ ಜೊತೆ ಹಂಚಿಕೊಳ್ಳಬೇಕೆಂಬ ಆದೇಶದ ವಿರುದ್ಧ ಯೋಗ ಗುರು ಬಾಬಾ ರಾಮದೇವರ ದಿವ್ಯ ಫಾರ್ಮಸಿ ದಾಖಲಿಸಿದ್ದ ದಾವೆಯನ್ನು ಹೈಕೋರ್ಟ್ ರದ್ದು ಮಾಡಿದೆ.
ಆಟ, ಊಟ, ಪಾಠ, ಅಡುಗೆ, ನಡಿಗೆ, ನಡವಳಿಕೆ – ಇವೆಲ್ಲವನ್ನು ನಮಗೆ ಕಲಿಸುವವರು ಹೆತ್ತವರು, ಹಿರಿಯರು ಮತ್ತು ಗುರುಗಳು. ಆದರೆ ಒಂದು ಹಕ್ಕಿಗೆ ಗೂಡು ಕಟ್ಟಲು ಯಾರು ಕಲಿಸುತ್ತಾರೆ? ಒಂದು ಜೇನ್ನೊಣಕ್ಕೆ ಎರಿಗಳಲ್ಲಿ ಷಟ್ಪದಿ ಕೋಶ ಕಟ್ಟಲು ಯಾರು ಕಲಿಸುತ್ತಾರೆ? ಒಂದು ಜೇಡಕ್ಕೆ ಅದ್ಭುತ ಬಲೆ ನೇಯಲು ಯಾರು ಕಲಿಸುತ್ತಾರೆ?
ಅವೆಲ್ಲ ಪ್ರಕೃತಿಯ ವಿಸ್ಮಯ. ಮಾನವನ ಹಲವು ಆವಿಷ್ಕಾರಗಳಿಗೆ ಪ್ರಕೃತಿಯೇ ಸ್ಫೂರ್ತಿ ಎಂದರೆ ನಂಬುವಿರಾ?
ಚಿನ್ನದ ಅನುಪಾತ: ಈ ಹೆಸರಿನ ಸಂಖ್ಯಾಸರಣಿ ಪ್ರಕೃತಿಯ ವಿಸ್ಮಯಗಳಲ್ಲೊಂದು. ಅದು ಹೀಗಿದೆ: ೦,೧, ೧, ೨, ೩, ೫, ೮, ೧೩…. ಅಂದರೆ ಸರಣಿಯ ಪ್ರತಿಯೊಂದು ಸಂಖ್ಯೆಯೂ ಹಿಂದಿನ ಎರಡು ಸಂಖ್ಯೆಗಳ ಮೊತ್ತ. ಪ್ರಕೃತಿಯಲ್ಲಿ ಈ ಅನುಪಾತದಲ್ಲಿರುವ ಹಲವು ರಚನೆಗಳಿವೆ. ಹಲವು ಸಸ್ಯಗಳ ಎಲೆಗಳು ಇದೇ ಅನುಪಾತದಲ್ಲಿವೆ. ಇದರಿಂದಾಗಿ ಪ್ರತಿಯೊಂದು ಎಲೆಗೂ ಸಾಕಷ್ಟು ಸೂರ್ಯ ಪ್ರಕಾಶ ಸಿಗುತ್ತದೆ. ಕೆಲವು ಸಮುದ್ರ ಚಿಪ್ಪುಗಳ ರಚನೆ ಇದೇ ಅನುಪಾತದಲ್ಲಿದೆ. ಅವನ್ನು ಅನುಸರಿಸಿ, ವೃತ್ತಾಕಾರವಾಗಿ ಸುತ್ತಿಸುತ್ತಿ ಮೇಲೇರುವ ಮೆಟ್ಟಲುಗಳನ್ನು ಕೆಲವು ಕಟ್ಟಡಗಳಲ್ಲಿ ನಿರ್ಮಿಸಲಾಗಿದೆ.
ವೆಲ್ ಕ್ರೋ ಅಂಟುಬಂಧ: ಬ್ಯಾಗುಗಳಲ್ಲಿ, ಚಪ್ಪಲಿ ಮತ್ತು ಬೂಟ್ಸುಗಳಲ್ಲಿ ಒತ್ತಿದೊಡನೆ ಬಿಗಿಯಾಗಿ ಅಂಟಿಕೊಳ್ಳುವ ಅಂಟುಬಂಧ (ವೆಲ್ ಕ್ರೋ)ಗಳನ್ನು ನೀವೆಲ್ಲರೂ ಕಂಡಿದ್ದೀರಿ. ಇದರ ಸಂಶೋಧಕ ಸ್ವಿಝರ್-ಲ್ಯಾಂಡಿನ ಇಲೆಕ್ಟ್ರಿಕಲ್ ಇಂಜಿನಿಯರ್ ಜೋರ್ಜ್ ಡಿ ಮೆಸ್-ಟ್ರಾಲ್. ಅವನ ಕೋಟು ಮತ್ತು ನಾಯಿಗೆ ಅಂಟಿಕೊಂಡಿದ್ದ ಬರ್-ಡೊಕ್ ಗಿಡದ ಕಾಯಿಗಳೇ ಈ ಆವಿಷ್ಕಾರಕ್ಕೆ ಸ್ಫೂರ್ತಿ. ಆ ಕಾಯಿಗಳನ್ನು ಆತ ಮನೆಗೊಯ್ದು ಸೂಕ್ಷ್ಮದರ್ಶಕದಲ್ಲಿ ಪರೀಕ್ಷಿಸಿದ. ಆಗ ಕಾಣಿಸಿದಂತಹ ಒಂದಕ್ಕೊಂದು ಬೆಸೆಯುವ ಕೊಕ್ಕೆ ಮತ್ತು ಕೊಂಡಿಗಳನ್ನು ರೂಪಿಸಿ ಅಂಟುಬಂಧ ಆವಿಷ್ಕರಿಸಿದ.
ಯಾವುದೇ ಬೆಳೆ ಬೆಳೆಸುವುದಿದ್ದರೂ ಸೆಗಣಿಯಿಂದ ತಯಾರಿಸಿದ ಗೊಬ್ಬರ ಅಥವಾ ಕಂಪೋಸ್ಟ್ ಅಗತ್ಯ. ಸಾವಯವ ಕೃಷಿಗಂತೂ ಸೆಗಣಿ ಗೊಬ್ಬರ ಬೇಕೇ ಬೇಕು.
ಆದರೆ, ಸೆಗಣಿ ಪ್ರಪಂಚ ಕೇವಲ ಗೊಬ್ಬರಕ್ಕೆ ಸೀಮಿತವಲ್ಲ. ಅದರ ಬಳಕೆಗಳು ಹಲವು. ಉದಾಹರಣೆಗೆ ಸೆಗಣಿಯಿಂದ ಕಾಗದ ತಯಾರಿ ಒಂದು ಉದ್ಯಮ. ಯಾವುದೇ ಸಸ್ಯದ ನಾರಿನಿಂದ ಕಾಗದ ತಯಾರಿಸಬಹುದು. ಹಾಗೆಯೇ ಸೆಗಣಿಯಿಂದಲೂ ಕಾಗದ ತಯಾರಿ ಸಾಧ್ಯ. ಆದರೆ ದೊಡ್ಡ ಪ್ರಮಾಣದಲ್ಲಿ ಸೆಗಣಿ ಸಂಗ್ರಹಿಸುವುದು ಕಷ್ಟಸಾಧ್ಯವಾದ ಕಾರಣ ಇದು ದೊಡ್ಡ ಉದ್ಯಮವಾಗಿ ಬೆಳೆದಿಲ್ಲ.
ಆನೆ ಲದ್ದಿಯ ಕಾಗದಕ್ಕೆ ಬಹಳ ಬೇಡಿಕೆ ಇದೆ. ಆನೆ ಜಗಿದು ನುಂಗುವ ಸಸ್ಯಜನ್ಯ ಆಹಾರ ಅದರ ದೊಡ್ಡ ಜೀರ್ಣಾಂಗವ್ಯೂಹ ಹಾದು ಲದ್ದಿಯಾಗಿ ಹೊರಬರುತ್ತದೆ. ಈ ಪ್ರಕ್ರಿಯೆಯಲ್ಲಿ, ಪೋಷಕಾಂಶಗಳನ್ನು ಸಣ್ಣ ಪ್ರಮಾಣದಲ್ಲಿ ಹೀರಿಕೊಳ್ಳುವುದರ ಹೊರತಾಗಿ, ಒಳಹೋದ ಆಹಾರ ಲದ್ದಿಯಾಗಿ ಹೊರಬರುವಾದ ಹೆಚ್ಚಿನ ಬದಲಾವಣೆ ಆಗಿರುವುದಿಲ್ಲ. ಆನೆಲದ್ದಿ ಕಾಗದದ ವಾಣಿಜ್ಯ ಯಶಸ್ಸು ದೊಡ್ಡ ಸುದ್ದಿಯಾಯಿತು. ಅದರಿಂದ ಪ್ರೇರಣೆ ಪಡೆದ ಹಲವರು ಈಗ ಕುದುರೆ, (ಅಮೆರಿಕದ) ಕಡವೆ, ಕತ್ತೆ, ದೊಡ್ಡ ಪಾಂಡಾಗಳ ಲದ್ದಿ ಮತ್ತು ಕಾಗೆಯ ಹಿಕ್ಕೆಯಿಂದಲೂ ಕಾಗದ ತಯಾರಿಸಿ ಮಾರಿ ಯಶಸ್ವಿಯಾಗಿದ್ದಾರೆ.
ಬ್ಲ್ಯಾಕ್ ಐವರಿ ಕಾಫಿ, ಸಿವೆಟ್ ಬೆಕ್ಕಿನ ಕಾಫಿ, ಕಂಬಳಿಹುಳದ ಚಹಾ
ಆನೆಯ ಜೀರ್ಣಾಂಗವ್ಯೂಹದ ಇತ್ತೀಚೆಗಿನ ಬಳಕೆ ಏನು ಗೊತ್ತೇ? ಕಾಫಿ ಬೀಜಗಳನ್ನು ಭಾಗಶಃ ಜೀರ್ಣ ಮಾಡಲು ಅದನ್ನು ಬಳಸುವುದು! ಆ ಕಾಫಿ ಬೀಜಗಳನ್ನು ಆನೆಯ ಸೆಗಣಿಯಿಂದ ಬೇರ್ಪಡಿಸಿ ಬಳಸಲಾಗುತ್ತದೆ. ಯಾಕಂತೀರಾ? “ಬ್ಲ್ಯಾಕ್ ಐವರಿ” ಎಂಬ ವಾಣಿಜ್ಯ ಹೆಸರಿನ ಕಾಫಿ ತಯಾರಿಸಲಿಕ್ಕಾಗಿ! ಅಥವಾ ಆನೆಲದ್ದಿ ಕಾಫಿ ಬಿಯರ್ ತಯಾರಿಸಲಿಕ್ಕಾಗಿ. ಇವೆರಡೂ ವಿಚಿತ್ರ ಬಳಕೆಗಳು ಎಂದು ಕೆಲವರು ಹುಬ್ಬೇರಿಸಬಹುದು; ಹಲವರು ಇದೇನು ಅಸಹ್ಯ ಬಳಕೆ ಎಂದು ಮುಖ ತಿರುಗಿಸಬಹುದು. ಆದರೆ ಇವೆರಡೂ ಲಾಭ ಗಳಿಸುವ ಯಶಸ್ವಿ ಉದ್ಯಮಗಳಾಗಿ ಬೆಳೆದಿವೆ. ಜೊತೆಗೆ, ೨೧ನೇ ಶತಮಾನದ ಪ್ರಧಾನ ವನ್ಯಜೀವಿ ರಕ್ಷಣಾ ಹೋರಾಟಗಳಲ್ಲಿ ಒಂದಾದ “ಆನೆ ಸಂರಕ್ಷಣೆ” ಬಗ್ಗೆ ಅಂತರರಾಷ್ಟ್ರೀಯ ಜಾಗೃತಿ ಮೂಡಿಸಲು ಸಹಕರಿಸಿವೆ.










