Agriculture and Rural Development

       
ಭಾರತ, ಕೆನಡಾ, ಫ್ರಾನ್ಸ್, ಯುಎಸ್ಎ ಹಾಗೂ ಜಗತ್ತಿನ ಎಲ್ಲ ಭಾಗಗಳಲ್ಲಿ ಗ್ಲೈಫೊಸೇಟ್ ಕಳೆನಾಶಕದ ಬಳಕೆ ಮಹಾಮಾರಿಯಂತೆ ವ್ಯಾಪಿಸುತ್ತಿದೆ. ಈ ಕಳೆನಾಶಕ ಉತ್ಪಾದಿಸುವ ಮೊನ್ಸಾಂಟೋ ಕಂಪೆನಿ ವಿರುದ್ಧ, ಯುಎಸ್ಎ ದೇಶದಲ್ಲಿ ೪,೦೦೦ಕ್ಕಿಂತ ಅಧಿಕ ದಾವೆಗಳು ತೀರ್ಪಿಗಾಗಿ ಕಾಯುತ್ತಿವೆ.

ಅವುಗಳಲ್ಲಿ ಮೊಟ್ಟಮೊದಲ ದಾವೆ ಈಗ ಸ್ಯಾನ್ಫ್ರಾನ್ಸಿಸ್ಕೋ ಕೋರ್ಟಿನಲ್ಲಿ ನಡೆಯುತ್ತಿದೆ. ಈ ದಾವೆ ಹಾಕಿದಾತ ೪೬ ವರುಷ ವಯಸ್ಸಿನ ಡಿವೇಯ್ನೆ ಜಾನ್ಸನ್. ಗ್ಲೈಫೊಸೇಟ್ ಕಳೆನಾಶಕ ಬಳಕೆಯ ಅಪಾಯಗಳ ಬಗ್ಗೆ ಮೊನ್ಸಾಂಟೋ ಕಂಪೆನಿ ನನಗೆ ತಿಳಿಸಲೇ ಇಲ್ಲ ಎನ್ನುತ್ತಾನೆ ಆತ. ಅದರಿಂದಾಗಿ ಮರಣಾಂತಿಕ ಕ್ಯಾನ್ಸರಿನಿಂದ ನರಳುತ್ತಿದ್ದಾನೆ.

ಗ್ಲೈಫೊಸೇಟಿನಿಂದಾಗಿ ಆರೋಗ್ಯದ ಮೇಲಾಗುವ ದುಷ್ಪರಿಣಾಮಗಳ ಬಗ್ಗೆ ಚೆನ್ನಾಗಿ ತಿಳಿದಿದ್ದರೂ ಕಳೆನಾಶಕ್ಕಾಗಿ ಅದರ ಬಳಕೆ ಕೈಬಿಡಲು ಎಲ್ಲ ರೈತರೂ ತಯಾರಿಲ್ಲ. “ಗ್ಲೈಫೊಸೇಟ್ ಇಲ್ಲದೆ ನಾನು ಬೇಸಾಯ ಮಾಡಲು ಸಾಧ್ಯವಿಲ್ಲ” ಎನ್ನುತ್ತಾರೆ ಮಹಾರಾಷ್ಟ್ರದ ಯವತಮಾಲ್ ಜಿಲ್ಲೆಯ ಜರಾಂಗ್ ಗ್ರಾಮದ ವಸುದೇವೊ ರಾಥೋಡ್ (೪೦ ವರುಷ). ಅಲ್ಲಿನ ಮುಖ್ಯಬೆಳೆಗಳು ಹತ್ತಿ ಮತ್ತು ಸೋಯಾಬೀನ್. ತನ್ನ ೧೩ ಹೆಕ್ಟೇರ್ ಹೊಲದಲ್ಲಿ ಹತ್ತಿ ಬೆಳೆಯುತ್ತಿದ್ದಾರೆ ರಾಥೋಡ್. ಕೆಲಸದಾಳುಗಳಿಂದ ಕಳೆ ತೆಗೆಸುವ ಬದಲಾಗಿ, ಈ ವಿಷರಾಸಾಯನಿಕ ಸಿಂಪಡಿಸುವುದೇ ಅನುಕೂಲ ಎನ್ನುತ್ತಾರೆ ಅವರು; ಯಾಕೆಂದರೆ ಕೆಲಸದಾಳುಗಳಿಂದ ಕಳೆ ತೆಗೆಸುವ ವೆಚ್ಚ ಮೂರು ಪಟ್ಟು ಜಾಸ್ತಿ.

ಇದೇ ವರುಷ ಜೂನ್ ೭ರಂದು, ಬೃಹತ್ ವಹಿವಾಟಿನ ಈ ಕಳೆನಾಶಕವನ್ನು ಮೊನ್ಸಾಂಟೋ ಕಂಪೆನಿಯಿಂದ ಜರ್ಮನಿಯ ಫಾರ್ಮಾ ಕಂಪೆನಿ ಬೇಯರ್ ಖರೀದಿಸಿದೆ. ಹೊಲ ಮತ್ತು ತೋಟಗಳಲ್ಲಿ ಬೆಳೆಯುವ ಕಳೆ ನಾಶ ಮಾಡಲು ರೈತರಿಂದ ಈ ಕಳೆನಾಶಕದ ಬಳಕೆ. ಅಷ್ಟೇ ಅಲ್ಲ, ರೈಲ್ವೇ ಹಳಿಗಳು, ಉದ್ಯಾನಗಳು ಮತ್ತು ಕೆರೆಸರೋವರಗಳಲ್ಲಿ ಬೆಳೆಯುವ ಅನವಶ್ಯಕ ಗಿಡಬಳ್ಳಿಗಳನ್ನು ನಾಶ ಮಾಡಲಿಕ್ಕೂ ಇದೇ ವಿಷರಾಸಾಯನಿಕದ ಬಳಕೆ. ಬೆಳೆದು ನಿಂತಿರುವ ಪೈರಿನ ಮೇಲೆಯೂ ಇದನ್ನು ಸಿಂಪಡಿಸುತ್ತಾರೆ – ಕೊಯ್ಲು ಸುಲಭವಾಗಲೆಂದು!
೧೯ ವರುಷಗಳಲ್ಲಿ ಗ್ಲೈಫೊಸೇಟ್ ಮಾರಾಟ ೧೫ ಪಟ್ಟು ಹೆಚ್ಚಳ

       
ಕೃಷಿ ಜೈವಿಕ ತಂತ್ರಜ್ನಾನದ ದೈತ್ಯ ಕಂಪೆನಿ ಮೊನ್ಸಾಂಟೋದ ಬಿಟಿ ಹತ್ತಿಯ ಪೇಟೆಂಟ್ ಕೊನೆಗೂ ಮಣ್ಣು ಮುಕ್ಕಿತು – ಮೊನ್ಸಾಂಟೋ ಮತ್ತು ಅದರಿಂದ ಲೈಸನ್ಸ್ ಪಡೆದ ನುಜಿವೀಡು ಸೀಡ್ಸ್ ಲಿಮಿಟೆಡ್ (ಎನ್.ಎಸ್.ಎಲ್.) ನಡುವಣ ವರುಷಗಟ್ಟಲೆ ವ್ಯಾಜ್ಯದ ತೀರ್ಪನ್ನು ಢೆಲ್ಲಿ ಹೈಕೋರ್ಟಿನ ಡಿವಿಜನ್ ಬೆಂಚ್ ೧೧.೪.೨೦೧೮ರಂದು ಘೋಷಿಸಿದಾಗ.

ಮೊನ್ಸಾಂಟೋ ಜೈವಿಕವಾಗಿ ಮಾರ್ಪಡಿಸಿದ ಹತ್ತಿ ಬೀಜಗಳಿಗೆ ಭಾರತದಲ್ಲಿ ಪೇಟೆಂಟ್ ನೀಡಲಾಗದು ಎಂದು ಆ ದಾವೆಯ ತೀರ್ಪಿನಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ. ಯಾಕೆಂದರೆ, ಸಸ್ಯಗಳಿಗೆ ಮತ್ತು ಜೈವಿಕ ವಸ್ತುಗಳಿಗೆ ಪೇಟೆಂಟ್ ನೀಡುವುದನ್ನು ಭಾರತದ ಪೇಟೆಂಟ್ ಕಾಯಿದೆಯ ಸೆಕ್ಷನ್ ೩(ಜೆ) ನಿಷೇಧಿಸುತ್ತದೆ. ಆದ್ದರಿಂದ, ಅಮೇರಿಕಾದ ಜೈವಿಕ ತಂತ್ರಜ್ನಾನದ ಬೋಲ್ಗಾರ್ಡ್-೨ ಬಿಟಿ ಹತ್ತಿ ಬೀಜ ತಂತ್ರಜ್ನಾನದ ಪೇಟೆಂಟನ್ನು ಭಾರತದಲ್ಲಿ ಜ್ಯಾರಿ ಮಾಡಲು ಸಾಧ್ಯವಿಲ್ಲ. (ಈ ತಂತ್ರಜ್ನಾನವನ್ನು ಕಾಯಿಕೊರಕ ಹುಳವನ್ನು ಪ್ರತಿಬಂಧಿಸಲು ಅಭಿವೃದ್ಧಿ ಪಡಿಸಲಾಗಿದೆ.)

ಇದರರ್ಥ, ಎನ್.ಎಸ್.ಎಲ್. ಮತ್ತು ಇತರ ಹಲವು ಲೈಸನ್ಸ್ ಪಡೆದ ಕಂಪೆನಿಗಳು ಈ ತಂತ್ರಜ್ನಾನವನ್ನು ಮುಕ್ತವಾಗಿ ಬಳಸಬಹುದು ಮತ್ತು ಮಾರಬಹುದು. ಮೊನ್ಸಾಂಟೋದ ಪೇಟೆಂಟ್ ನಂಬ್ರ ೨೧೪೪೩೬ನ್ನು (ಬ್ಯಾಸಿಲ್ಲಸ್ ತುರಿನ್ಜಿನ್ಸಿಸ್ ಡೆಲ್ಟಾ ಎಂಡೋಟಾಕ್ಸಿನುಗಳನ್ನು ಅಭಿವ್ಯಕ್ತಿಸಲಿಕ್ಕಾಗಿ ಸಸ್ಯಗಳನ್ನು ಪರಿವರ್ತಿಸುವ ವಿಧಾನಗಳು) ಜಸ್ಟಿಸ್ ರವೀಂದ್ರ ಭಟ್ ಮತ್ತು ಜಸ್ಟಿಸ್ ಯೋಗೇಶ್ ಖನ್ನ ಅವರ ಪೀಠ ರದ್ದು ಪಡಿಸಿತು. ಬೊಲ್ಗಾರ್ಡ್-೨ ಬೀಜಗಳಲ್ಲಿ ಮಣ್ಣಿನ ಬ್ಯಾಕ್ಟಿರಿಯಾ ಬ್ಯಾಸಿಲ್ಲಸ್ ತುರಿನ್ಜಿನ್ಸಿಸ್ನಿಂದ ತೆಗೆಯಲಾದ ಜೀನ್ಗಳಿವೆ (ಸಿಆರ್ವೈ೧ಎಸಿ ಮತ್ತು ಸಿಆರ್ವೈ೨ಎಬಿ). ಆದ್ದರಿಂದಲೇ ಇದಕ್ಕೆ “ಬಿಟಿ” ಎಂಬ ಹೆಸರು. ಆ ಜೀನ್ಗಳು ಹತ್ತಿ ಗಿಡಗಳನ್ನು ಈ ಮೂರು ಪೀಡೆಕೀಟಗಳಿಂದ ರಕ್ಷಿಸುತ್ತವೆ ಎನ್ನಲಾಗಿದೆ: ಅಮೆರಿಕನ್ ಕಾಯಿಕೊರಕ, ಗುಲಾಲಿ ಕಾಯಿಕೊರಕ ಮತ್ತು ಚುಕ್ಕಿ ಕಾಯಿಕೊರಕ. ಮೊದಲನೇ ತಲೆಮಾರಿನ ಈ ಹೈಬ್ರಿಡ್ ಹತ್ತಿಬೀಜಗಳಲ್ಲಿ (ಇವುಗಳಿಗೆ ಮೊನ್ಸಾಂಟೋ ಇಟ್ಟ ಹೆಸರು ಬೊಲ್ಗಾರ್ಡ್) ಸಿಆರ್ವೈ೧ಎಸಿ ಜೀನ್ ಮಾತ್ರ ಇತ್ತು.

       
ಬಿಸಿಲಿಗೆ ಕಾದು ಕೆಂಡವಾದ ಟಾರ್ ರಸ್ತೆಯಲ್ಲಿ ನಡೆದು ಗುಳ್ಳೆಯೆದ್ದ ಅಂಗಾಲುಗಳು, ಏಳು ದಿನಗಳ ನಡಿಗೆಯಿಂದ ಬಾತುಹೋದ ಕಾಲಿನ ಮಣಿಗಂಟುಗಳು, ದಾರ ಕಟ್ಟಿ ಜೋಡಿಸಿದ ಹರಿದ ಚಪ್ಪಲಿಗಳು, ಬಿಸಿಲಿನ ಧಗೆಗೆ ಒಣಗಿ ಸುಟ್ಟಂತಾದ ಮುಖಗಳು – ೧೨ ಮಾರ್ಚ್ ೨೦೧೮ರಂದು ಮುಂಬೈಯ ಆಜಾದ್ ಮೈದಾನಿನಲ್ಲಿ ಕಿಕ್ಕಿರಿದು ಜಮಾಯಿಸಿದ್ದ ೫೦,೦೦೦ ಮಣ್ಣಿನ ಮಕ್ಕಳ ಚಾರಿತ್ರಿಕ ಪ್ರತಿಭಟನೆಯ ಪುರಾವೆಗಳು ಇವು.

೬ ಮಾರ್ಚ್ ೨೦೧೮ರಂದು ಮಹಾರಾಷ್ಟ್ರದ ನಾಸಿಕದಿಂದ ಹೊರಟ ೨೫,೦೦೦ ರೈತರ, ಕೃಷಿ ಕೆಲಸಗಾರರ ಮತ್ತು ಬುಡಕಟ್ಟು ಜನರ ಜಾಥಾ, ಏಳನೆಯ ದಿನ ಮಹಾನಗರ ಮುಂಬೈ ತಲಪಿದಾಗ ೫೦,೦೦೦ ಜನಸಾಗರವಾಗಿತ್ತು. ಅವರೆಲ್ಲರೂ ತಮ್ಮ ನ್ಯಾಯಯುತ ಬೇಡಿಕೆಗಳನ್ನು ಸರಕಾರದಿಂದ ದಕ್ಕಿಸಿಕೊಳ್ಳಲೇ ಬೇಕೆಂಬ ಛಲದಿಂದ, ೧೮೦ ಕಿಮೀ ದೂರ ನಡೆದು ಬಂದಿದ್ದರು. ಮಾರ್ಚ್ ೧೨ರಂದು, ಆಜಾದ್ ಮೈದಾನಿನಲ್ಲಿ ಜಾಥಾದ ಮುಂದಾಳುಗಳು ಮಾತಾಡುತ್ತಿದ್ದಾಗ ಆ ಜನಸಾಗರ ಮೈಯೆಲ್ಲ ಕಿವಿಯಾಗಿ ಕೇಳಿತು. ಪ್ರತಿಯೊಂದು ಬೇಡಿಕೆಯನ್ನೂ ಸರಕಾರದ ಆಶ್ವಾಸನೆಯನ್ನೂ ಸರಿಯಾಗಿ ಕೇಳಿಸಿಕೊಳ್ಳುವುದು ಅಲ್ಲಿದ್ದ ಪ್ರತಿಯೊಬ್ಬರಿಗೂ ಮುಖ್ಯವಾಗಿತ್ತು. ಪತ್ರಿಕಾ ವರದಿಗಾರನೊಬ್ಬ ವೇದಿಕೆಯ ನೋಟಕ್ಕೆ ಅಡ್ಡವಾಗಿ ಎದ್ದು ನಿಂತಾಗ, ಪ್ರತಿಭಟನಾಕಾರನೊಬ್ಬ ಆತನ ಹೆಗಲು ತಟ್ಟಿ ಕೂರಲು ಹೇಳಿದ, “ಅಲ್ಲೇ ಕೂತುಕೋ, ಆರು ದಿನಗಳು ನಡೆದು ಬಂದಿದ್ದರೆ, ನಿನಗೂ (ನಮ್ಮ ಸಂಕಟ) ಅರ್ಥವಾಗುತ್ತಿತ್ತು”. ಆ ಸಾವಿರಾರು ಬಡಪಾಯಿಗಳು ನಡೆದು ಬಂದದ್ದೇ ಆಜಾದ್ ಮೈದಾನದಲ್ಲಿ ಝಂಡಾ ಊರಿ, ಮಹಾರಾಷ್ಟ್ರದ ಮುಖ್ಯಮಂತ್ರಿಗೆ ತಮ್ಮ ಅಹವಾಲು ಸಲ್ಲಿಸಲಿಕ್ಕಾಗಿ. ಅದಕ್ಕೆ ಯಾವುದೇ ಅಡ್ಡಿಯನ್ನು ಕ್ಷಣಕಾಲವೂ ಸಹಿಸಿಕೊಳ್ಳಲು ಅವರು ಸಿದ್ಧರಿರಲಿಲ್ಲ.

       
“ಬಿದಿರು ಮರವಲ್ಲ” ಎಂಬ ಸತ್ಯವನ್ನು ಕೊನೆಗೂ ಒಪ್ಪಿಕೊಂಡ ಭಾರತ ಸರಕಾರ, ಈ ನಿಟ್ಟಿನಲ್ಲಿ ಅರಣ್ಯ ಕಾಯಿದೆ, ೧೯೨೭ನ್ನು ತಿದ್ದುಪಡಿ ಮಾಡಿದೆ.
ಇದಕ್ಕಿಂತ ಮುಂಚೆ, ಆ ಕಾಯಿದೆ ಪ್ರಕಾರ ಬಿದಿರನ್ನು ಮರಗಳ ವರ್ಗಕ್ಕೆ ಸೇರಿಸಲಾಗಿತ್ತು. ಇದರಿಂದಾಗಿ, ಕಾಡಿನಲ್ಲಿರುವ ಅಥವಾ ಅಲ್ಲಿಂದ ಕಡಿದು ತಂದ ಬಿದಿರನ್ನು “ಮೋಪು” ಎಂದು ಪರಿಗಣಿಸಿ, ಜನಸಾಮಾನ್ಯರಿಗೆ ಅರಣ್ಯ ಇಲಾಖೆಯ ಸಿಬ್ಬಂದಿಯಿಂದ ಕಿರುಕುಳ. ಮಾತ್ರವಲ್ಲ, ಬುಟ್ಟಿ ಹೆಣೆದು ಜೀವನೋಪಾಯಕ್ಕಾಗಿ ಬಿದಿರನ್ನು ಬಳಸುತ್ತಿದ್ದ ಕಾಡಿನ ಜನಸಮುದಾಯಗಳ ಆದಾಯಕ್ಕೂ ಧಕ್ಕೆ. ಖಾಸಗಿ ನೆಲದಲ್ಲಿ ಬಿದಿರು ಬೆಳೆದವರೂ ಅರಣ್ಯ ಇಲಾಖೆಯ ಸತಾಯಿಸುವಿಕೆಯಿಂದಾಗಿ ಹೈರಾಣ. ಈ ಕಾರಣಗಳಿಂದಾಗಿ, ಕಾಡಿನ ಜನಸಮುದಾಯಗಳೂ ರೈತರೂ ಹಲವಾರು ದಶಕಗಳಿಂದ ಬಿದಿರಿನ ಅವೈಜ್ನಾನಿಕ ವರ್ಗೀಕರಣವನ್ನು ವಿರೋಧಿಸುತ್ತಿದ್ದರು.
ಪೊಯೆಸಿಯೇ ಎಂಬ ಹುಲ್ಲಿನ ಕುಟುಂಬಕ್ಕೆ ಸೇರಿದ ಬಿದಿರನ್ನು ಒಂದು ಮರದ ಜಾತಿಯೆಂದು ವರ್ಗೀಕರಿಸುವುದಕ್ಕೆ ಯಾವುದೇ ವೈಜ್ನಾನಿಕ ಕಾರಣವಿಲ್ಲ. ಇದೀಗ, ಅರಣ್ಯ ಕಾಯಿದೆ ೧೯೨೭ರ ಸೆಕ್ಷನ್ ೨(೭) ತಿದ್ದುಪಡಿ ಆದಾಗಿನಿಂದ, ಬಿದಿರು ಮರವಲ್ಲ ಮತ್ತು ಕಡಿದ ಬಿದಿರನ್ನು ಮೋಪು ಎಂದು ಪರಿಗಣಿಸುವಂತಿಲ್ಲ. ಹಾಗಾಗಿ ತಮ್ಮ ಖಾಸಗಿ ಜಮೀನಿನಲ್ಲಿ ಬಿದಿರು ಬೆಳೆದಿರುವ ಲಕ್ಷಗಟ್ಟಲೆ ರೈತರು ಅದನ್ನು ಕಡಿಯಲಿಕ್ಕೆ ಮತ್ತು ಸಾಗಾಟ ಮಾಡಲಿಕ್ಕೆ ಅರಣ್ಯ ಇಲಾಖೆಯ ಪರವಾನಗಿ ಪಡೆಯಬೇಕಾಗಿಲ್ಲ. ಈ ರೀತಿಯಲ್ಲಿ, ಬ್ರಿಟಿಷ ಆಳ್ವಿಕೆಯ ಮತ್ತೊಂದು ಪಳೆಯುಳಿಕೆ ಕಳಚಿ ಬಿದ್ದಿದೆ.

ಭಾರತದಲ್ಲಿ ಬೆಳೆಯುತ್ತಿರುವ ಬಿದಿರಿನ ಸ್ಪಿಷೀಸುಗಳ ಸಂಖ್ಯೆ ೧೨೫ಕ್ಕಿಂತ ಜಾಸ್ತಿ. ಈಗ ೧೧.೩೬ ದಶಲಕ್ಷ ಹೆಕ್ಟೇರ್ ಅರಣ್ಯ ಪ್ರದೇಶ ಮತ್ತು ಖಾಸಗಿ ಜಮೀನಿನಲ್ಲಿ ಬೆಳೆಯುತ್ತಿರುವ ಬಿದಿರಿನ ವಾರ್ಷಿಕ ಉತ್ಪಾದನೆ ೧೩.೫ ದಶಲಕ್ಷ ಟನ್. ಇದರ ಉತ್ಪಾದನೆ ಹೆಚ್ಚಿಸಲು ಈಗ ಅವಕಾಶಗಳು ವಿಪುಲ. ಈ ಬಿದಿರನ್ನು ಮೌಲ್ಯವರ್ಧಿತ ವಸ್ತುಗಳ ಉತ್ಪಾದನೆಗೆ ಬಳಸಿ, ಗ್ರಾಮೀಣ ಪ್ರದೇಶದಲ್ಲಿ ಉದ್ಯೋಗವಕಾಶ ಹೆಚ್ಚಿಸಲಿಕ್ಕೂ ಅವಕಾಶಗಳು ಹೇರಳ.

       
ದಾಸವಾಳ ಹೂವಿನ ಬಣ್ಣಗಳು ವಿಧವಿಧ; ಆಕಾರಗಳು ತರತರ; ತಳಿಗಳು ೨೦೦ಕ್ಕಿಂತ ಅಧಿಕ; ಬಳಕೆಗಳು ಹತ್ತಾರು.

ಆರಾಧನೆಗೆ ದಾಸವಾಳ: ದಾಸವಾಳದ ತಳಿಗಳನ್ನು ಸುಲಭವಾಗಿ ಕಸಿಕಟ್ಟಿ, ಹೊಸ ಸಂಕರ ತಳಿಗಳನ್ನು ಸೃಷ್ಟಿಸಬಹುದು. ಕೆಂಪು, ಹಳದಿ, ಮರೂನ್, ಬಿಳಿ, ಗುಲಾಲಿ ಮತ್ತು ಈ ಬಣ್ಣಗಳ ಸಂಯೋಜನೆಯಿಂದ ನಳನಳಿಸುವ ದಾಸವಾಳಗಳು ಲಭ್ಯ. ಗಾಢ ಕೆಂಪು ಬಣ್ಣದ ದಾಸವಾಳದ ಬಳಕೆ ದೇವತಾರಾಧನೆಗೆ ಜಾಸ್ತಿ. ದುರ್ಗೆ ಹಾಗೂ ಕಾಳಿಯ ಪೂಜೆಗೆ ಕೆಂಪು ದಾಸವಾಳ ಬೇಕೇಬೇಕು. ಕರ್ನಾಟಕದಲ್ಲಿ ತುಲಸಿಕಟ್ಟೆಯಲ್ಲಿ ತುಳಸಿ ಬೆಳೆಸಿ ಪೂಜೆ ಮಾಡುವ ಬಹುಪಾಲು ಕುಟುಂಬಗಳು ದಾಸವಾಳ ಗಿಡಗಳನ್ನೂ ಬೆಳೆಸಿರುವುದು ವಾಡಿಕೆ.

ಅಲಂಕಾರಕ್ಕಾಗಿ ದಾಸವಾಳ: ಅಲಂಕಾರ ಪರಿಣತರು ಸಮಾರಂಭಗಳಲ್ಲಿ ದಾಸವಾಳವನ್ನು ಹೊಸ ರೀತಿಯಲ್ಲಿ ಬಳಸಲು ಶುರು ಮಾಡಿದ್ದಾರೆ. ಉದಾಹರಣೆಗೆ, ಮದುವೆಗಳಲ್ಲಿ ಅಲಂಕಾರದ ಕೆಲಸ ವಹಿಸಿಕೊಳ್ಳುವ ಹರ್ಕಿರತ್ ಚೌಧರಿ ಭೋಜನದ ಮೇಜಿನ ಅಲಂಕಾರಕ್ಕಾಗಿ ವಿವಿಧ ಹೂಗಳ ಜೊತೆಗೆ ದಾಸವಾಳವನ್ನು ಬಳಸುವ ನಮೂನೆ ವಿನೂತನ. “ದಾಸವಾಳ ಹೂಗಳು ಬೆಳಗ್ಗೆ ಅರಳಿ ಸಂಜೆ ಬಾಡುತ್ತವೆ. ಇದರ ಮೊಗ್ಗುಗಳನ್ನು ಮುಂಜಾನೆ ಕೊಯ್ಯಬೇಕು. ಅವನ್ನು ಒಂದು ಪ್ಲಾಸ್ಟಿಕ್ ಕವರಿನಲ್ಲಿ ಹಾಕಿ, ಫ್ರಿಜ್ನಲ್ಲಿ ಇಡಬೇಕು. ರಾತ್ರಿ ಭೋಜನ ಬಡಿಸುವ ಮುನ್ನ, ಈ ಮೊಗ್ಗುಗಳನ್ನು ಹೂಗಳ ಜೋಡಣೆಯಲ್ಲಿ ಇಡಬೇಕು. ಅತಿಥಿಗಳು ಊಟ ಮಾಡುತ್ತಿರುವಾಗ, ಈ ಮೊಗ್ಗುಗಳು ಅರಳುವುದನ್ನು ಕಾಣಬಹುದು. ಅದೊಂದು ಆಹ್ಲಾದದಾಯಕ ಅನುಭವ” ಎಂದು ಹರ್ಕಿರತ್ ತಮ್ಮ ವಿನೂತನ ಬಳಕೆಯ ಗುಟ್ಟನ್ನು ಹಂಚಿಕೊಳ್ಳುತ್ತಾರೆ.
ನಮ್ಮ ದೇಶದಲ್ಲೇ ದಾಸವಾಳದ ಸುಮಾರು ೭೦ ತಳಿಗಳಿವೆ. ಅವುಗಳಲ್ಲಿ ಹಲವು ತಳಿಗಳ ಹೂಗಳು ತಿನ್ನಲು ಯೋಗ್ಯ. ಹೈಬಿಸ್ಕಸ್ ರೋಸಾ – ಸೈನೆನ್ಸಿಸ್ ತಳಿ ಜನಪ್ರಿಯ. ಇದರ ಮೂಲ ಚೀನಾ ದೇಶವಾದ್ದರಿಂದ ಇದನ್ನು ಚೈನಾ ರೋಸ್ ಎಂದೂ ಕರೆಯುತ್ತಾರೆ. ಹಿಂದಿ ಭಾಷೆಯಲ್ಲಿ ಇದರ ಹೆಸರು ಗುಧಾಲ್. ಇದು ಮಲೇಷ್ಯಾದ ರಾಷ್ಟ್ರೀಯ ಹೂ.

       
ಉತ್ತರಕನ್ನಡ ಜಿಲ್ಲೆಯ ಕರಾವಳಿಯ ಪಟ್ಟಣ ಕುಮಟಾದಿಂದ ಜೋಗ ಜಲಪಾತಕ್ಕೆ, ಪಶ್ಚಿಮಘಟ್ಟದ ಘಾಟಿಯಲ್ಲಿ ರಾಷ್ಟ್ರೀಯ ಹೆದ್ದಾರಿ ೨೦೬ ಸಾಗುತ್ತದೆ. ಹೆದ್ದಾರಿಯಲ್ಲಿ ಹೋಗುತ್ತಿರುವಾಗ, ಮಲೆಮನೆ ಘಾಟಿಯಲ್ಲಿ ಉತ್ತರಕನ್ನಡ ಜಿಲ್ಲೆಯ ಗಡಿಯ ಹತ್ತಿರ ಆ ಹೆದ್ದಾರಿ ಪಕ್ಕದಲ್ಲಿ ಒಂದೆಡೆ “ಕತ್ಲೆಕಾನ್” ಎಂಬ ಫಲಕವಿದೆ. ಅಲ್ಲಿ ಇಳಿದರೆ ಸುತ್ತಮುತ್ತ ಅಡಿಕೆ ತೋಟಗಳು. ಅವನ್ನು ದಾಟಿ ನಡೆದು, ಒಳಕ್ಕೆ ಸಾಗಿದರೆ, ಕಣಿವೆಯಲ್ಲಿ ಕಾಣಿಸುತ್ತದೆ ದಟ್ಟವಾದ ಪುರಾತನ ಅರಣ್ಯ – ಅದುವೇ ಕತ್ಲೆಕಾನ್. (ಉತ್ತರಕನ್ನಡದ ಆಡುಮಾತಿನಲ್ಲಿ ಕಾನ್ ಎಂದರೆ ಪವಿತ್ರವನ)

ಉತ್ತರಕನ್ನಡದ ಸಿದ್ಧಾಪುರ ತಾಲೂಕಿನಲ್ಲಿರುವ ಆ ದಟ್ಟ ಅರಣ್ಯದ ವಿಸ್ತೀರ್ಣ ೨೫ ಚದರ ಕಿಲೋಮೀಟರ್. ಹತ್ತಿರದಲ್ಲೇ ಹರಿಯುತ್ತಿದೆ ಶರಾವತಿ ನದಿ. ಅಲ್ಲಿನ ಸಸ್ಯವೈವಿಧ್ಯ ಕಳೆದ ಹತ್ತು ಲಕ್ಷ ವರುಷಗಳಲ್ಲಿ ಬದಲಾಗಿಯೇ ಇಲ್ಲ!

ಯಾಕೆಂದರೆ, ಈ ಅರಣ್ಯವನ್ನು ಶತಮಾನಗಳ ಕಾಲ ರಕ್ಷಿಸಿದ್ದಾರೆ ಮತ್ತು ಅರಣ್ಯದ ದೇವರನ್ನು ಆರಾಧಿಸಿದ್ದಾರ ಅಲ್ಲಿನ ಹಳ್ಳಿಗಳ ಜನರು. ಎಂ.ಡಿ. ಸುಭಾಷ್ ಚಂದ್ರನ್, ಪ್ರೊಫೆಸರ್, ಸೆಂಟರ್ ಫಾರ್ ಇಕಲಾಜಿಕಲ್ ಸೈನ್ಸಸ್, ಭಾರತೀಯ ವಿಜ್ನಾನ ಸಂಸ್ಥೆ, ಬೆಂಗಳೂರು – ಇವರು ಕಳೆದ ೩೦ ವರುಷಗಳಿಂದ ಕತ್ಲೆಕಾನ್ ಎಂಬ ಈ ನಿಗೂಢ ಅರಣ್ಯವನ್ನು ಅಧ್ಯಯನ ಮಾಡುತ್ತಿದ್ದಾರೆ. ಅವರ ಪ್ರಕಾರ, ಅಮೂಲ್ಯ ಸಸ್ಯಸಂಪತ್ತಿನ ಇಂತಹ ಅರಣ್ಯ ಉಳಿದಿರುವುದೇ ವಿಸ್ಮಯ.

       
“ಸೊಪ್ಪಿನ ಬೆಟ್ಟ” ಎಂದೊಡನೆ ಹಲವರ ಮನದಲ್ಲಿ ಬಾಲ್ಯದ ಹಲವು ನೆನಪುಗಳ ಮೆರವಣಿಗೆ. ಅಲ್ಲಿ ಓಡಾಡಿದ, ಆಟವಾಡಿದ, ಹಿರಿಯರಿಂದ ಸಸ್ಯಲೋಕದ ಮೊದಲ ಪಾಠಗಳನ್ನು ಕಲಿತ ನೆನಪುಗಳು ಹಸಿರುಹಸಿರು.

ಉತ್ತರಕನ್ನಡ ಜಿಲ್ಲೆಯ ಸೊಪ್ಪಿನ ಬೆಟ್ಟಗಳು ಇಂದಿಗೂ ವಿವಿಧ ಸಸ್ಯಗಳ ವಿಸ್ಮಯ ಖಜಾನೆಗಳು. ಈ ಸೊಪ್ಪಿನ ಬೆಟ್ಟಗಳು ಅನೇಕ ಕೃಷಿ ಚಟುವಟಿಕೆಗಳಿಗೆ ಆಧಾರ. ಅಲ್ಲಿ ಸಿಗುವ ಹಣ್ಣುಗಳಂತೂ ಹಲವಾರು. ಉತ್ತರಕನ್ನಡ, ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಗಳ ಅಡಿಕೆ ಮತ್ತು ಕೆಲವು ಭತ್ತದ ಬೆಳೆಗಾರರು ಸೊಪ್ಪಿನ ಬೆಟ್ಟಗಳ ಸೊಪ್ಪಿನಮೇಲೆ ವಂಶಪಾರಂಪರ್ಯ ಹಕ್ಕು ಹೊಂದಿದ್ದಾರೆ. ತಮ್ಮ ತೋಟ ಮತ್ತು ಹೊಲಗಳಿಗೆ ಹಸುರುಗೊಬ್ಬರ ಮತ್ತು ಕಂಪೋಸ್ಟ್ ತಯಾರಿಗಾಗಿ ಸೊಪ್ಪಿನ ಬೆಟ್ಟದಿಂದ ಹಸಿಸೊಪ್ಪು ಮತ್ತು ಒಣಎಲೆ ಹೊತ್ತು ತರುವುದು ವಾಡಿಕೆ.

ಸೊಪ್ಪಿನ ಬೆಟ್ಟಗಳ ಸಸ್ಯರಾಶಿ ಅಲ್ಲಿ ಕಳೆಗಳ ಬೆಳವಣಿಗೆ ಮತ್ತು ಮಣ್ಣು ಸವಕಳಿ ಆಗುವುದನ್ನು ತಡೆಯುತ್ತದೆ. ಅಲ್ಲಿಂದ ಸಂಗ್ರಹಿಸಿದ ಸೌದೆ ಅಲ್ಲಿನ ರೈತರ ಮನೆಗಳ ಒಲೆಗಳಲ್ಲಿ ಬೆಂಕಿ ಉರಿಸಲು ಬಳಕೆ. ಜೊತೆಗೆ, ಸೊಪ್ಪಿನ ಬೆಟ್ಟಗಳು ಔಷಧೀಯ ಸಸ್ಯಗಳ ಆಗರಗಳು. ಸುತ್ತಮುತ್ತಲಿನ ಹಳ್ಳಿಗಳ ಪ್ರತಿಯೊಂದು ಕುಟುಂಬದವರಿಗೂ ಯಾವ್ಯಾವ ಸಾಮಾನ್ಯ ಅನಾರೋಗ್ಯಕ್ಕೆ ಸೊಪ್ಪಿನ ಬೆಟ್ಟದಿಂದ ಯಾವ್ಯಾವ ಗಿಡಮೂಲಿಕೆ ತಂದು ಔಷಧಿ ತಯಾರಿಸಬೇಕೆಂದು ಚೆನ್ನಾಗಿ ತಿಳಿದಿದೆ.

ಮಳೆಗಾಲದಲ್ಲಿ ಸೊಪ್ಪಿನ ಬೆಟ್ಟಗಳಲ್ಲಿ ಸಮೃದ್ಧ ಹುಲ್ಲಿನ ಬೆಳೆ. ಆದ್ದರಿಂದಲೇ ರೈತರು ಅಲ್ಲಿ ತಮ್ಮ ಜಾನುವಾರು ಮೇಯಿಸುತ್ತಾರೆ. ಸ್ಥಳೀಯರು ಕರಡ ಎಂದು ಕರೆಯುವ ಹುಲ್ಲು ಅಲ್ಲಿ ಬೆಳೆಯುವ ಒಂದು ಹುಲ್ಲಿನ ಜಾತಿ. ಇದು ಅಡಿಕೆ ಮರಗಳಿಗೆ ಅತ್ಯುತ್ತಮ ಹೊದಿಕೆ ಹುಲ್ಲು. ಮಳೆಗಾಲ ಮುಗಿದ ನಂತರ ರೈತರು ಅಲ್ಲಿ ಜಾನುವಾರುಗಳನ್ನು ಮೇಯಿಸುವುದಿಲ್ಲ. ಯಾಕೆಂದರೆ, ಮಳೆ ಕಡಿಮೆಯಾದಂತೆ ಹುಲ್ಲಿನ ಬೆಳವಣಿಗೆ ಕಡಿಮೆಯಾಗುತ್ತದೆ. ಡಿಸೆಂಬರ್ ತಿಂಗಳಿನಿಂದ ಮೇ ತಿಂಗಳ ವರೆಗೆ ಸೊಪ್ಪಿನ ಬೆಟ್ಟದಿಂದ ಒಣಹುಲ್ಲು ಕೊಯ್ದು ತರುವ ರೈತರು ಅದನ್ನು ಜಾನುವಾರುಗಳಿಗೆ ಮೇವಾಗಿ ಹಾಕುತ್ತಾರೆ.

       
ರುದ್ರ ಗೌಡ ಅಡಿಕೆ ತೋಟಗಳು ಹಾಗೂ ಭತ್ತದ ಹೊಲಗಳ ನಡುವೆ ಮುನ್ನಡೆಯುತ್ತಿದ್ದರು. ಅವರ ಸೊಂಟಕ್ಕೆ ಕಟ್ಟಿದ್ದ ಮರದ ಕೊಕ್ಕೆಯಲ್ಲಿ ಹರಿತವಾದ ಕತ್ತಿ ನೇತಾಡುತ್ತಿತ್ತು. ಅವರೊಂದಿಗಿದ್ದ ತಂಡದ ಗುರಿ ಉತ್ತರಕನ್ನಡದ ಜಿಲ್ಲೆಯ ಹುಕ್ಲಿ ಹಳ್ಳಿಯ ಕಾಡಿನೊಳಗಿನ ಹುಲಿದೇವರ ತಾಣ ತಲಪುವುದು.

“ನಮ್ಮ ಹುಲಿದೇವರು ನಮ್ಮನ್ನು ಕಾಯುತ್ತಾರೆ. ಈ ದೇವರಿಗೆ ಎಷ್ಟು ವರ್ಷ ವಯಸ್ಸಾಯಿತೋ ಗೊತ್ತಿಲ್ಲ. ನಾವಂತೂ ಕಳೆದ ಒಂದು ನೂರು ವರುಷದಿಂದ ಹುಲಿ ದೇವರಿಗೆ ಪೂಜೆ ಮಾಡುತ್ತಲೇ ಇದ್ದೇವೆ” ಎನ್ನುತ್ತಾರೆ ರುದ್ರ ಗೌಡ.

ಕಾಡು ಹತ್ತಿರವಾಯಿತು. ಒಂದರ ಪಕ್ಕ ಇನ್ನೊಂದು ದಟ್ಟವಾಗಿ ಬೆಳೆದ ಮರಗಳು. ಅಲ್ಲಿ ಕಾಲಿಗೆ ಚಪ್ಪಲಿ ಹಾಕಿಕೊಂಡು ಓಡಾಡಬಾರದು. ಬರಿಗಾಲಿನಲ್ಲಿ ಕಾಡಿನೊಳಕ್ಕೆ ಹೋಗುತ್ತಿದ್ದಂತೆ ನಿಗೂಢ ಕಾಡುಲೋಕದ ಅನಾವರಣ. ನೆಲಕ್ಕೆ ಬಿದ್ದು ಒಣಗಿ ಕಪ್ಪಾದ ಎಲೆಗಳ ಮೆದುವಾದ ನೆಲಗಂಬಳಿ. ಒಂದಾದ ಮೇಲೊಂದರಂತೆ ಹಾಡುವ ಹಕ್ಕಿಗಳ ಗಾಢ ಕೂಗಿನ ಗಾನಲೋಕ. ಹಕ್ಕಿಗಳೊಂದಿಗೆ ಸ್ಪರ್ಧೆಗೆ ಬಿದ್ದಂತೆ ಚೀರಿಡುವ ಸಿಕಾಡಗಳ ಸದ್ದು. ತಮ್ಮ ಲಕ್ಷಗಟ್ಟಲೆ ಎಲೆಗಳ ಚಾವಣಿಯಿಂದ ಬಹುಪಾಲು ಸೂರ್ಯನ ಬೆಳಕಿಗೆ ತಡೆಯೊಡ್ಡುವ ೪೦ ಅಡಿ ಎತ್ತರದ ಮರಗಳು.

ಅಷ್ಟರಲ್ಲಿ ಎದುರಾಯಿತು ಇಳಿಜಾರು ನೆಲ. ಪಕ್ಕದಲ್ಲೇ ಬೃಹತ್ ಮರಗಳ ಬೇರುಗಳ ಮೇಲಿಂದ ಜಿಗಿದು ಓಡುತ್ತಿರುವ ನೀರಿನ ಝರಿ. ಅದರ ಪಕ್ಕದಲ್ಲೇ ಸುಮಾರು ಒಂದಡಿ ಎತ್ತರದ ಕಲ್ಲಿನ ಹುಲಿಯ ಮೂರ್ತಿ. ಸುತ್ತಲೂ ಗಿಡಗಂಟಿಗಳು. ಹುಲಿದೇವರ ಪದತಳದಲ್ಲಿ ಮಳೆನೀರಿನಲ್ಲಿ ನೆನೆದುನೆನೆದು ಕಪ್ಪಾದ ಎರಡು ತೆಂಗಿನಕಾಯಿಗಳು. ಪಕ್ಕದಲ್ಲಿ ಕಂಚಿನ ಹುಲಿದೇವರ ಮೂರ್ತಿ; ಅದಕ್ಕೆ ಉದ್ದಬಾಲ ಹಾಗೂ ಕಂಚಿನ ಪುಟ್ಟ ಆನೆಯ ತಲೆಯ ಮೇಲೆ ಎತ್ತಿ ಹಿಡಿದ ಪಂಜ.

“ಇದು ನಮ್ಮ ಹುಲಿದೇವರು” ಎನ್ನುತ್ತಾರೆ ತಗ್ಗಿದ ಸ್ವರದಲ್ಲಿ ರುದ್ರ ಗೌಡ. “ನಮಗೆ ಹುಲಿದೇವರಲ್ಲಿ ಅಗಾಧ ನಂಬಿಕೆ. ಹುಲಿದೇವರಿಗೆ ತೊಂದರೆ ಆಗಬಾರದೆಂದು ನಾವು ಇಲ್ಲಿ ಸುತ್ತಮುತ್ತಲಿನ ಕಾಡಿನಿಂದ ಏನನ್ನೂ ಒಯ್ಯುವುದಿಲ್ಲ. ಈ ನಿಯಮ ಮುರಿದರೆ ಹುಲಿದೇವರು ನಮ್ಮ ಹಳ್ಳಿಗೇ ಬರುತ್ತಾರೆ” ಎಂಬುದು ರುದ್ರಗೌಡರ ವಿವರಣೆ.


ಆಗಸ್ಟ್ ೧೯, ೨೦೧೭ರಂದು ಮಹಾರಾಷ್ಟ್ರದ ಪೂರ್ವ ದಿಕ್ಕಿನ ಯವತ್‌ಮಾಲ್ ಜಿಲ್ಲೆಯ ಬಿಟಿ-ಹತ್ತಿ ಹೊಲಗಳ ಕೆಲಸಗಾರರಿಗೆ ಬರಸಿಡಿಲಿನಂತೆ ಬಂದೆರಗಿತು ಆ ಸುದ್ದಿ -  ಅವರ ಜೊತೆ-ಕೆಲಸಗಾರನೊಬ್ಬನ ಮರಣದ ಸುದ್ದಿ.

ಕೇವಲ ೧೨ ದಿನಗಳ ಮುಂಚೆ, ಪ್ರೊಫೆನೊಫೋಸ್ ಮತ್ತು ಸೈಪರ್-ಮೆಥ್ರಿನ್ ಎಂಬ ಎರಡು ಕೀಟನಾಶಕಗಳ ಘೋರ ವಿಷಕಾರಿ ಮಿಶ್ರಣವಾದ “ಪ್ರೊಫೆಕ್ಸ್ ಸೂಪರ್” ಎಂಬ ಪೀಡೆನಾಶಕವನ್ನು ಬಿಟಿ-ಹತ್ತಿ ಹೊಲದಲ್ಲಿ ಆತ ಸಿಂಪಡಿಸಿದ್ದ. ಆತನ ಮರಣದ ನಂತರ, ಅದೇ ತಿಂಗಳಿನಲ್ಲಿ ಯವತ್‌ಮಾಲ್ ಜಿಲ್ಲೆಯಲ್ಲಿ ಇನ್ನೂ ೨೦ ರೈತರು ಮತ್ತು ಹತ್ತಿರದ ಬುಲ್ದಾನ, ನಾಗಪುರ, ಅಕೋಲ, ವಾರ್ಧಾ ಮತ್ತು ಚಂದ್ರಾಪುರ ಜಿಲ್ಲೆಗಳಲ್ಲಿ ಬೇರೆ ೧೬ ರೈತರು ಸಾವಿಗೀಡಾದರು. ಈ ಎಲ್ಲ ಸಾವುಗಳಿಗೆ ಕಾರಣ ಪೀಡೆನಾಶಕಗಳ ಮಾರಕ ವಿಷ.

ಆ ಜಿಲ್ಲೆಗಳಲ್ಲಿ ಈ ಜೀವನಾಶಕ ಪೀಡೆನಾಶಕವನ್ನು ಸಿಂಪಡಿಸಿ, ಅನಾರೋಗ್ಯದಿಂದ ಸಂಕಟ ಪಟ್ಟು, ಚಿಕಿತ್ಸೆಗಾಗಿ ಆಸ್ಪತ್ರೆಗಳಿಗೆ ಸೇರಿಸಲ್ಪಟ್ಟವರ ಸಂಖ್ಯೆ ೧,೮೦೦. ವಾಂತಿ, ಭೇದಿ, ಭಯಂಕರ ಹೊಟ್ಟೆನೋವು, ಉಸಿರಾಟದ ತೊಂದರೆ, ಮಂದದೃಷ್ಠಿ ಮತ್ತು ತಾತ್ಕಾಲಿಕ ಕುರುಡುತನ - ಇವೆಲ್ಲ ಅವರು ಅನುಭವಿಸಿದ ಸಂಕಟಗಳು. ಆ ಘೊರ ವಿಷರಾಸಾಯನಿಕ ತುಂಬಿದ ಗಾಳಿಯನ್ನು ಉಸಿರಾಡಿದ್ದೇ ಈ ಎಲ್ಲ ಸಂಕಟಗಳಿಗೆ ಕಾರಣ.

ಈ ಸಾವುಗಳ ವೃತ್ತಾಂತ ದೊಡ್ಡ ಸುದ್ದಿಯಾಗಲೇ ಇಲ್ಲ. ಅದೇನೂ ಹೊಸತಲ್ಲ. ಯಾಕೆಂದರೆ, ಪ್ರತಿ ವರುಷವೂ ಅಲ್ಲಿ ಪೀಡೆನಾಶಕಗಳನ್ನು ಸಿಂಪಡಿಸುವವರಲ್ಲಿ ಕೆಲವರು ಸಾಯುತ್ತಾರೆ. ಹಾಗಾಗಿ, ಅಲ್ಲಿನ ಆಸ್ಪತ್ರೆಗಳಿಗೆ ಆ ಹಂಗಾಮಿನಲ್ಲಿ ಇಂತಹ ರೋಗಿಗಳ ದಾಖಲಾತಿ ಮಾಮೂಲಿ ವಿಷಯ. ಆದರೆ, ಈ ವರುಷ ಹಲವು ಜಿಲ್ಲೆಗಳಲ್ಲಿ ಮರಣಗಳು ಸಂಭವಿಸಿದ ಕಾರಣ, “ಇಲ್ಲೇನೋ ಸಮಸ್ಯೆಯಿದೆ" ಎಂಬುದು ಸರಕಾರದ ಗಮನಕ್ಕೆ ಬಂತು - ಅದೂ ಸ್ಥಳೀಯ ಪತ್ರಿಕೆಗಳಲ್ಲಿ ರೈತರ ಮತ್ತು ಕೃಷಿಕೆಲಸಗಾರರ ಸರಣಿ ಸಾವುಗಳ ಸುದ್ದಿ ಪ್ರಕಟವಾದ ನಂತರ.

       
ಆನೆಗಳನ್ನು ಕೃಷಿಜಮೀನಿನಿಂದ ಓಡಿಸಲಿಕ್ಕಾಗಿ ಮೆಣಸಿನ ಹುಡಿಯ ಹೊಗೆ ಹಾಕುವುದರಿಂದ ತೊಡಗಿ ವಿದ್ಯುತ್ ಬೇಲಿ ನಿರ್ಮಾಣದ ವರೆಗೆ ವಿವಿಧ ವಿಧಾನಗಳು ಚಾಲ್ತಿಯಲ್ಲಿವೆ. ಹಾಗಿರುವಾಗ, ಅಸ್ಸಾಂನ ಒಂದು ಟೀ ಎಸ್ಟೇಟ್ ಜಗತ್ತಿನಲ್ಲೇ ಮೊತ್ತಮೊದಲಾಗಿ ತನ್ನ ಚಹಾ ಹುಡಿಗೆ “ಆನೆಸ್ನೇಹಿ ಚಹಾ” ಎಂಬ ಸರ್ಟಿಫಿಕೇಟ್ ಹಾಗೂ ಆ ಮೂಲಕ ಜಾಸ್ತಿ ಬೆಲೆ ಪಡೆದು ಸುದ್ದಿ ಮಾಡಿದೆ.
ಆ ಚಹಾ ತೋಟದ ಮಾಲೀಕ ತೆನ್ಜಿಂಗ್ ಬೊಡೊಸಾ. ಬ್ರಹ್ಮಪುತ್ರಾ ನದಿ ಕಣಿವೆ ಭೂತಾನಿನ ಬೆಟ್ಟಗಳನ್ನು ಸಂಧಿಸುವಲ್ಲಿ, ರಾಜಕೀಯವಾಗಿ ತಲ್ಲಣದಲ್ಲಿರುವ ಬೋಡೋಲ್ಯಾಂಡ್ ಪ್ರದೇಶದ ಅಂಚಿನಲ್ಲಿದೆ ಆ ಚಹಾ ತೋಟ. ಅದಕ್ಕೆ ಸರ್ಟಿಫಿಕೇಟ್ ನೀಡಿರುವುದು ಯುಎಸ್ಎ ದೇಶದ ಮೊಂಟಾನಾ ವಿಶ್ವವಿದ್ಯಾಲಯದ “ಬ್ರಾಡರ್ ಇಂಪಾಕ್ಟ್ಸ್ ಗ್ರೂಪ್”. ಈ ಯೋಜನೆಗೆ ವೈಲ್ಡ್ ಲೈಫ್ ಫ್ರೆಂಡ್ಲಿ ಎಂಟರ್ಪ್ರೈಸ್ ನೆಟ್ ವರ್ಕ್ಸ್ (ಡಬ್ಲ್ಯು.ಎಫ್.ಇ.ಎನ್.) ಸಹಭಾಗಿತ್ವ. ಇದು ನಿರ್ವಂಶವಾಗಬಹುದಾದ ವನ್ಯಜೀವಿಗಳ ಸಂರಕ್ಷಣೆಗಾಗಿ ಉತ್ಪನ್ನಗಳು ಮತ್ತು ಪ್ರವಾಸೋದ್ಯಮ ಅಭಿವೃದ್ಧಿ ಪಡಿಸಲು ಮೀಸಲಾದ ಜಾಗತಿಕ ಸಮುದಾಯ.

ಮೂವತ್ತೊಂದು ವರುಷ ವಯಸ್ಸಿನ ತೆನ್ಜಿಂಗ್ ಬೊಡೊಸಾ ಜಾಗತಿಕ ಮಟ್ಟಕ್ಕೆ ಏರಿಬಂದ ಹಾದಿ ಕುತೂಹಲಕಾರಿ. ಅಸ್ಸಾಂನ ಉದಾಲ್ಗುರಿ ಜಿಲ್ಲೆಯ ದಕ್ಷಿಣ ಕಹಿಬಾರಿ ಗ್ರಾಮದಲ್ಲಿ ಬೊಡೊಸಾ ಅವರ ವಾಸ. ಅಲ್ಲಿಗೆ ವಿದ್ಯುತ್ ಬಂದು ಕೇವಲ ಮೂರು ವರುಷಗಳಾಗಿವೆ, ಅಷ್ಟೇ! ಅಲ್ಲಿನ ನಿವಾಸಿಗಳು ಸಣ್ಣರೈತರು. ಬೊಡೊಸಾರ ಕುಟುಂಬ ಭತ್ತ ಬೆಳೆಸುತ್ತಿತ್ತು. ಅವರ ತಂದೆಯ ಮದುವೆಯಾದಾಗ ಬಳುವಳಿಯಾಗಿ ಬಂದಿದ್ದವು ಕೆಲವು ದನ ಮತ್ತು ಎಮ್ಮೆಗಳು. ಅವುಗಳ ಜೊತೆಗೆ ಕೋಳಿ ಮತ್ತು ಆಡುಗಳ ಸಾಕಣೆ. ಅವರ ಕೃಷಿ ಹೊಂಡಗಳಲ್ಲಿ ಸಾಕಷ್ಟು ಮೀನುಗಳು. “ಬಾಲ್ಯದಲ್ಲಿ ಅದೊಂದು ಅದ್ಭುತ ಬದುಕು. ದಿನನಿತ್ಯ ಬೇಕಾಗುವ ವಸ್ತುಗಳ ಖರೀದಿಗಾಗಿ ಮಾರುಕಟ್ಟೆಗೆ ಹೋಗುವ ಅಗತ್ಯವೇ ಇರಲಿಲ್ಲ” ಎಂದು ನೆನಪು ಮಾಡಿಕೊಳ್ಳುತ್ತಾರೆ ಬೊಡೊಸಾ.

Pages