HRM
ನಿಮ್ಮಲ್ಲಿ ಪ್ರತಿ ದಿನದ ಬಹುಪಾಲು ಸಮಯದಲ್ಲಿ ಸಂತೋಷ ಚಿಮ್ಮುತ್ತಿರಲು ಏನು ಮಾಡಬೇಕು? ಹೊಸ ಕಾರು ಖರೀದಿಸಬೇಕೇ? ಅಥವಾ ಹಳೆ ಮನೆ ಮಾರಿ ಹೊಸ ಮನೆ ಖರೀದಿಸಬೇಕೇ?
ಸಂತೋಷ ಚಿಮ್ಮಿಸಲು ಅಷ್ಟೆಲ್ಲ ದೊಡ್ಡದೊಡ್ಡ ಯೋಜನೆಗಳೆಲ್ಲ ಅಗತ್ಯವಿಲ್ಲ. ಪುಟ್ಟಪುಟ್ಟ ಕೆಲಸಗಳೇ ಸಾಕು. ಅಂತಹ ಕೆಲವು ಪುಟ್ಟಪುಟ್ಟ ಕೆಲಸಗಳನ್ನು ಪರಿಶೀಲಿಸೋಣ.
1)ಬೆಳಗ್ಗೆ ಏಳುವಾಗಲೇ ಸಂಭ್ರಮ ಪಡುವುದು ನಿಮ್ಮ ದಿನನಿತ್ಯದ ಅಭ್ಯಾಸವಾಗಲಿ: ಇನ್ನೂ ಒಂದು ದಿನದ ಬದುಕು ನಿಮಗೆ ಲಭಿಸಿದ ಕಾರಣಕ್ಕಾಗಿ. ಇದಕ್ಕಿಂತ ದೊಡ್ಡ ಅದೃಷ್ಟ ಇನ್ನೇನು ಇರಲು ಸಾಧ್ಯ?
2)ನಿಮ್ಮ ಸದ್ಯದ ಉದ್ದೇಶ ಏನು? ಇನ್ನೊಂದು ವಾರ ಹೇಗಾದರೂ ದೂಡುವುದೇ ಅಂದರೆ ಜೀವನ ಸಾಗಿಸುವುದೇ? ಆ ಉದ್ದೇಶವನ್ನೇ ಬದಲಾಯಿಸಿ. ಅಂದರೆ, ಇನ್ನೊಂದು ವಾರ ಸಂತೋಷದಿಂದ ಬದುಕುವುದು ಅಥವಾ ಇನ್ನೊಂದು ವಾರ ನಿಮ್ಮ ಸಂಪರ್ಕಕ್ಕೆ ಬಂದವರಲ್ಲಿ ಉತ್ಸಾಹ ತುಂಬುವುದು ಎಂಬುದಾಗಿ. ಇದರ ಪರಿಣಾಮವನ್ನು ಅನುಭವಿಸಿಯೇ ಅರಿಯಬೇಕು.
3)ನಿಮ್ಮ ಐದು ಕೌಶಲ್ಯಗಳನ್ನು ಒಂದು ಹಾಳೆಯಲ್ಲಿ ದೊಡ್ಡ ಅಕ್ಷರಗಳಲ್ಲಿ ಬರೆಯಿರಿ. ಉದಾ: ನಾನು ಚೆನ್ನಾಗಿ ಹಾಡಬಲ್ಲೆ; ನಾನು ಚೆನ್ನಾಗಿ ಮಾತನಾಡಬಲ್ಲೆ; ನಾನು ಚಂದವಾಗಿ ಬರೆಯಬಲ್ಲೆ ಇತ್ಯಾದಿ. ಇತರರಿಗೆ ಸಹಾಯ ಮಾಡಲಿಕ್ಕಾಗಿ ಇವನ್ನು ಮತ್ತೆಮತ್ತೆ ಬಳಸಿ. ಆಗ ಮತ್ತೆಮತ್ತೆ ನಿಮ್ಮಲ್ಲಿ ಸಂತೋಷ ತುಂಬಿ ತುಳುಕುವುದನ್ನು ಕಾಣುತ್ತೀರಿ.
4)ಇತರರಿಗೆ ಸಹಾಯ ಮಾಡಲು ಶುರು ಮಾಡಿ (ಹಣದ ಸಹಾಯದ ಹೊರತಾದ). ಯಾಕೆಂದರೆ, ಇತರರಿಗೆ ಮಾಡಿದ ಪ್ರತಿಯೊಂದು ಸಹಾಯವೂ ನಿಮ್ಮ ಆತ್ಮವಿಶ್ವಾಸ ಮತ್ತು ಸಂತೋಷವನ್ನು ಹೆಚ್ಚಿಸುತ್ತದೆ.
5)ಇತರರು ನಿಮಗೆ ಸಹಾಯ ಮಾಡಿದಾಗೆಲ್ಲ ಮುಕ್ತ ಮನಸ್ಸಿನಿಂದ ಅವರಿಗೆ ಕೃತಜ್ಞತೆ ಸಲ್ಲಿಸಿ. ಆಗ ಅವರ ಮುಖ ಅರಳುವುದನ್ನು ನೋಡುತ್ತಾ ನಿಮ್ಮಲ್ಲಿಯೂ ಸಂತೋಷ ಚಿಮ್ಮುವುದನ್ನು ಗಮನಿಸಿ.
6)ವಾರಕ್ಕೆ ಒಮ್ಮೆಯಾದರೂ ನಿಮ್ಮ ಆತ್ಮೀಯ ಸ್ನೇಹಿತರೊಂದಿಗೆ ಒಂದು ಗಂಟೆ ಸಮಯ ಕಳೆಯುವ ಅಭ್ಯಾಸ ಶುರು ಮಾಡಿ. ಅವರು ನಿಮ್ಮ ಪ್ರಾಥಮಿಕ ಶಾಲೆಯ, ಹೈಸ್ಕೂಲಿನ ಅಥವಾ ಕಾಲೇಜಿನ ಸಹಪಾಠಿಗಳು ಆಗಿದ್ದರೆ ಬಹಳ ಒಳ್ಳೆಯದು. ಯಾಕೆಂದರೆ, ನಿಮ್ಮ ಸಹಪಾಠಿಗಳೊಂದಿಗೆ ಮುಕ್ತವಾಗಿ ಹರಟುವಂತೆ ಬೇರೆ ಯಾರೊಂದಿಗೂ ನೀವು ಹರಟಲು ಸಾಧ್ಯವಿಲ್ಲ.
7)ಇತರರೊಂದಿಗೆ ನಿಮ್ಮನ್ನು ಹೋಲಿಸಿಕೊಂಡು, ಸಂಕಟಪಡುವುದನ್ನು ಈ ಕ್ಷಣದಿಂದಲೇ ನಿಲ್ಲಿಸಿ. ಯಾಕೆಂದರೆ, ಇತರರು ತಮ್ಮ ಬದುಕಿನಲ್ಲಿ ಈಗಿನ ಹಂತಕ್ಕೆ ಏರಲು ಏನೇನು ಪಾಡು ಪಟ್ಟಿದ್ದಾರೆ ಎಂಬುದು ಅವರಿಗಷ್ಟೇ ತಿಳಿದಿದೆ.
8)ಸಣ್ಣಪುಟ್ಟ ಸಂಗತಿಗಳಿಗಾಗಿ ತಲೆ ಕೆಡಿಸಿಕೊಳ್ಳುವ ಅಭ್ಯಾಸ ಬದಲಾಯಿಸಿಕೊಳ್ಳಿ. ನಿಮ್ಮ ಮನೆಯ ನಲ್ಲಿ ಕೆಟ್ಟು ಹೋಗಿದ್ದರೆ, ನಿರಾಶರಾಗಬೇಡಿ. ಯಾಕೆಂದರೆ, ನಿಮಗೆ ಸ್ವಂತ ಮನೆಯಿದೆ; ಇತರ ಹಲವರಿಗೆ ಸ್ವಂತ ಮನೆಯೇ ಇಲ್ಲ. ಆದಾಯ ತೆರಿಗೆ ಕಟ್ಟ ಬೇಕೆಂದು ನೆಮ್ಮದಿ ಕಳೆದುಕೊಳ್ಳ ಬೇಡಿ. ಯಾಕೆಂದರೆ, ನಿಮಗೆ ಅಷ್ಟು ಆದಾಯವಿದೆ. ಹೀಗೆ ಜೀವನದ ಸಂಗತಿಗಳ ಬಗ್ಗೆ ನೀವು ಯೋಚಿಸುವ ರೀತಿಯನ್ನೇ ಬದಲಾಯಿಸಿದಾಗ ನಿಮ್ಮ ನಿರಾಶೆ ಮಾಯವಾಗುತ್ತದೆ, ಅಲ್ಲವೇ?
9)ನಿಮ್ಮೊಳಗಿನ ಧ್ವನಿ ನಿಮ್ಮ ಬಗ್ಗೆ ಕಟು ಟೀಕೆ ಮಾಡುತ್ತಿದೆಯೇ? “ನಾನು ದಡ್ಡ”, “ನನಗೆ ಎಲ್ಲದರಲ್ಲಿಯೂ ಸೋಲೇ ಆಗುತ್ತದೆ” ಇತ್ಯಾದಿ. ಆ ಧ್ವನಿಯನ್ನು ತಕ್ಷಣ ನಿಲ್ಲಿಸಿ. ಅದರ ಬದಲಾಗಿ, ಬೆಳಗ್ಗೆ ಎದ್ದೊಡನೆ “ನಾನು ಬುದ್ಧಿವಂತ”, “ನಾನು ಎಲ್ಲದರಲ್ಲಿಯೂ ಗೆಲ್ಲುತ್ತೇನೆ” ಎಂದು ಹೇಳಿಕೊಳ್ಳಲು ಶುರು ಮಾಡಿ. ಇದನ್ನೇ ಒಂದು ಕಾಗದದ ಹಾಳೆಯಲ್ಲಿ ಬರೆದು, ನಿಮ್ಮ ಕೋಣೆಯಲ್ಲಿ ಎದ್ದು ಕಾಣುವಂತೆ ನೇತು ಹಾಕಿ. ಬೆಳಗ್ಗೆ ಅದನ್ನು ನೋಡುತ್ತಾ ಐದು ಸಲ ಓದಿ ಕೊಳ್ಳುವುದನ್ನು ಅಭ್ಯಾಸ ಮಾಡಿಕೊಳ್ಳಿ. ನಿಮ್ಮ ದಿನದಿನದ ಸಂತೋಷಕ್ಕೆ ಇದುವೇ ಅಡಿಪಾಯವಾಗುತ್ತದೆ.
10)ನಿಮ್ಮ ಮಾತು ಹೇಗಿದೆ ಎಂಬುದನ್ನು ಪರಿಶೀಲಿಸುವುದು ಅತ್ಯಗತ್ಯ. ಅದು ನಕಾರಾತ್ಮಕವಾಗಿದ್ದರೆ, ಅದನ್ನು ಸಕಾರಾತ್ಮಕವಾಗಿ ಮಾಡುವ ಕೌಶಲ್ಯವನ್ನು ಕಲಿಯಿರಿ. ಉದಾಹರಣೆ: ನಿಮ್ಮ ಮಗು ಮೆಟ್ಟಲು ಇಳಿಯುವಾಗ, “ನೀನು ಮೆಟ್ಟಲಿನಿಂದ ಬೀಳುತ್ತಿ. ನಾನು ಇಳಿಸುತ್ತೇನೆ” ಎನ್ನುವ ಬದಲಾಗಿ, “ಮಗೂ, ಮೆಟ್ಟಲಿನ ಪಕ್ಕದ ಕಬ್ಬಿಣದ ಸರಳು ಹಿಡಿದುಕೊಂಡು ಇಳಿ. ನಾನು ನಿನ್ನ ಪಕ್ಕದಲ್ಲೇ ಇರುತ್ತೇನೆ” ಎನ್ನುವುದು ಸಕಾರಾತ್ಮಕ. ಆಫೀಸಿನಲ್ಲಿ ನಿಮ್ಮ ಸಹಾಯಕನಿಗೆ “ಯಾವ ಕೆಲಸವನ್ನೂ ನೀನು ಸಮಯಕ್ಕೆ ಸರಿಯಾಗಿ ಮಾಡೋದಿಲ್ಲ. ಇದನ್ನಾದರೂ ಸಂಜೆಯೊಳಗೆ ಮಾಡಿ ಮುಗಿಸು” ಎನ್ನುವ ಬದಲಾಗಿ, “ನೋಡು, ಈ ಕೆಲಸ ಸಂಜೆಯೊಳಗೆ ಮುಗಿಸು. ನಿನಗೇನಾದರೂ ಸಹಾಯ ಬೇಕಾದರೆ ನನ್ನನ್ನು ಕೇಳು” ಎನ್ನುವುದು ಸಕಾರಾತ್ಮಕ.
ಗಮನಿಸಿ: ನಿಮ್ಮ ಬದುಕಿನಲ್ಲಿ ಏನು ಘಟಿಸುತ್ತದೆ ಎಂಬುದು ನಿಮ್ಮ ಸಂತೋಷದ ಶೇಕಡಾ 10ರಷ್ಟನ್ನು ನಿರ್ಧರಿಸುತ್ತದೆ. ಆ ಘಟನೆಗೆ ನೀವು ಹೇಗೆ ಪ್ರತಿಕ್ರಿಯಿಸುತ್ತೀರಿ ಎಂಬುದು ನಿಮ್ಮ ಸಂತೋಷದ ಶೇಕಡಾ 90ರಷ್ಟನ್ನು ನಿರ್ಧರಿಸುತ್ತದೆ! ಇದು ಅರ್ಥವಾಗಬೇಕಾದರೆ, ನೀವು ಬೆಳಗ್ಗೆ ಆಫೀಸಿಗೆ ಹೊರಡುವ ಗಡಿಬಿಡಿಯಲ್ಲಿ ಕಾಫಿಯ ಕಪ್ ಕೈತಪ್ಪಿ ಕಾಫಿಯೆಲ್ಲ ನಿಮ್ಮ ಉಡುಪಿನ ಮೇಲೆ ಬಿದ್ದ ಘಟನೆಯನ್ನು ಕಲ್ಪಿಸಿಕೊಳ್ಳಿ. ಆಗ ನೀವು ಎಗರಾಡಿದರೆ, ಅನಂತರ ಹಲವಾರು ಅನಾಹುತಗಳಾಗಿ, ನೀವು ಆಫೀಸ್ ತಲಪುವಾಗ ಒಂದು ಗಂಟೆ ತಡವಾಗುತ್ತದೆ ಎಂಬುದನ್ನು ಅರ್ಥ ಮಾಡಿಕೊಳ್ಳಿ. ಅದರ ಬದಲಾಗಿ, “ಓ, ಕಾಫಿ ಚೆಲ್ಲಿತು. ಬೇರೆ ಕಾಫಿ ಮಾಡಿ ಕೊಡು” ಎಂದು ಮಡದಿಗೆ ಹೇಳಿ, ಉಡುಪು ಬದಲಾಯಿಸಿಕೊಂಡು, ಕಾಫಿ ಕುಡಿದು ಆಫೀಸಿಗೆ ಹೊರಟರೆ ಸಮಯಕ್ಕೆ ಸರಿಯಾಗಿ ಆಫೀಸು ತಲಪಬಹುದು, ಅಲ್ಲವೇ?
ನೆನಪಿರಲಿ: ನಿಮ್ಮ ಸಂತೋಷ ನಿಮ್ಮ ಕೈಯಲ್ಲಿದೆ.
ಒಬ್ಬ ಮರ ಕಡಿಯುವವನು ಪ್ರತಿ ದಿನ ಕಾಡಿಗೆ ಹೋಗಿ, ಕಟ್ಟಿಗೆ ಕಡಿದು ತಂದು ಮಾರುಕಟ್ಟೆಯಲ್ಲಿ ಮಾರಿ, ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದ. ಆದರೆ ಕೆಲವು ದಿನಗಳು ಅವನು ಉಪವಾಸ ಇರಬೇಕಾಗುತ್ತಿತ್ತು. ಯಾಕೆಂದರೆ ವಿಪರೀತ ಮಳೆ ಅಥವಾ ಚಳಿಯಿಂದಾಗಿ ಅವನಿಗೆ ಕಾಡಿಗೆ ಹೋಗಲು ಸಾಧ್ಯವಾಗುತ್ತಿರಲಿಲ್ಲ.
ಆ ಕಾಡಿನಲ್ಲಿ ವಾಸ ಮಾಡುತ್ತಿದ್ದ ಸಂತನೊಬ್ಬ ಮರ ಕಡಿಯುವವನು ದಿನವಿಡೀ ಕಷ್ಟ ಪಡುವುದನ್ನು ಗಮನಿಸುತ್ತಿದ್ದ. ಒಂದು ದಿನ ಮರ ಕಡಿಯುವವನನ್ನು ಕರೆದು ಸಂತ ಕೇಳಿದ, “ನೀನ್ಯಾಕೆ ಕಾಡಿನೊಳಗೆ ಇನ್ನಷ್ಟು ಮುಂದಕ್ಕೆ ಹೋಗಬಾರದು?” ಈ ಮಾತಿಗೆ ಮರ ಕಡಿಯುವವ ಉತ್ತರಿಸಿದ, “ಕಾಡಿನೊಳಗೆ ಇನ್ನಷ್ಟು ಮುಂದಕ್ಕೆ ಹೋದರೆ ಹೆಚ್ಚು ಕಟ್ಟಿಗೆ ಸಿಗುವುದೇ? ಆದರೆ ಅವನ್ನು ಅಷ್ಟು ದೂರದಿಂದ ನಾನು ಹೊತ್ತು ತರಬೇಕಾಗುತ್ತದೆಯಲ್ಲ.” ಆಗ ಸಂತ “ಹಾಗೇನಿಲ್ಲ. ನೀನು ಇನ್ನಷ್ಟು ಮುಂದಕ್ಕೆ ಹೋದರೆ ನಿನಗೆ ತಾಮ್ರದ ನಿಧಿ ಸಿಗುವುದು. ಅದನ್ನು ನೀನು ಪಟ್ಟಣದಲ್ಲಿ ಮಾರಾಟ ಮಾಡಿದರೆ ನಿನಗೆ ಏಳು ದಿನಗಳಿಗೆ ಸಾಕಾಗುವಷ್ಟು ಹಣ ಸಿಗುತ್ತದೆ. ಇದರಿಂದಾಗಿ ನಿನಗೆ ಪ್ರತಿ ದಿನವೂ ಕಟ್ಟಿಗೆ ಕಡಿಯಲು ಕಾಡಿಗೆ ಬರಬೇಕಾದ ಕಷ್ಟ ತಪ್ಪುತ್ತದೆ” ಎಂದು ತಿಳಿಸಿದ. ಇದನ್ನು ಕೇಳಿದ ಮರ ಕಡಿಯುವವನು ತಾನ್ಯಾಕೆ ಇನ್ನಷ್ಟು ಮುಂದಕ್ಕೆ ಹೋಗಬಾರದು ಎಂದು ಯೋಚಿಸಿದ.
ಅವನು ಕಾಡಿನೊಳಗೆ ಇನ್ನಷ್ಟು ಮುಂದಕ್ಕೆ ಹೋದ. ತಾಮ್ರದ ನಿಧಿ ಕಾಣಿಸಿದಾಗ ಅವನಿಗೆ ಬಹಳ ಸಂತೋಷವಾಯಿತು. ಅವನು ಹಿಂತಿರುಗಿ ಬಂದು ಸಂತನಿಗೆ ನಮಿಸಿ, ಕೃತಜ್ಞತೆ ತಿಳಿಸಿದ. ಆಗ ಸಂತ ಸಲಹೆಯಿತ್ತ: “ಈಗಲೇ ಬಹಳ ಸಂತೋಷ ಪಡಬೇಡ. ಕಾಡಿನೊಳಗೆ ಇನ್ನಷ್ಟು ಮುಂದಕ್ಕೆ ಹೋಗು.”
ಮರ ಕಡಿಯುವವ ಪ್ರಶ್ನಿಸಿದ, “ಅದರಿಂದೇನು ಪ್ರಯೋಜನ? ಏಳು ದಿನಗಳಿಗೆ ಬೇಕಾದಷ್ಟು ಹಣ ಈಗಾಗಲೇ ನನ್ನ ಕೈಯಲ್ಲಿದೆ.” ಸಂತ ಉತ್ತರಿಸಿದ, “ಕಾಡಿನೊಳಗೆ ಇನ್ನಷ್ಟು ಮುಂದಕ್ಕೆ ಹೋಗಿ ನೋಡು.” ಕಾಡಿನೊಳಗೆ ಇನ್ನಷ್ಟು ಮುಂದಕ್ಕೆ ಹೋದರೆ, ತನಗೆ ಈಗ ಸಿಕ್ಕಿರುವ ತಾಮ್ರದ ನಿಧಿ ಕಳೆದುಹೋದಿತೆಂದು ಮರ ಕಡಿಯುವವ ಆತಂಕ ವ್ಯಕ್ತ ಪಡಿಸಿದ.
“ಕಾಡಿನೊಳಗೆ ಇನ್ನಷ್ಟು ಮುಂದಕ್ಕೆ ಹೋದರೆ ಬೆಳ್ಳಿಯ ನಿಧಿ ಸಿಗುತ್ತದೆ. ಅದನ್ನು ತಂದು ಮಾರಾಟ ಮಾಡಿದರೆ ಮೂರು ತಿಂಗಳಿಗೆ ಸಾಕಾಗುವಷ್ಟು ಹಣ ಗಳಿಸಬಹುದು” ಎಂದು ಸಂತ ಒತ್ತಾಯಿಸಿದ. ಮರ ಕಡಿಯುವವ ಯೋಚಿಸಿದ: ಸಂತ ಹೇಳಿದಂತೆ ಕಾಡಿನೊಳಗೆ ತಾಮ್ರದ ನಿಧಿ ಸಿಕ್ಕಿದೆ. ಹಾಗೆಯೇ ಬೆಳ್ಳಿಯ ನಿಧಿಯೂ ಸಿಗಬಹುದು.
ಮರ ಕಡಿಯುವವನು ಕಾಡಿನೊಳಗೆ ಇನ್ನಷ್ಟು ಮುಂದಕ್ಕೆ ಹೋದಾಗ ಅವನಿಗೆ ಬೆಳ್ಳಿಯ ನಿಧಿ ಸಿಕ್ಕಿತು. ಅವನಿಗೆ ಖುಷಿಯೋ ಖುಷಿ. ಆತ ಸಂತನಲ್ಲಿಗೆ ಮರಳಿ, “ನೀವು ಹೇಳಿದಂತೆ ನನಗೆ ಬೆಳ್ಳಿಯ ನಿಧಿ ಸಿಕ್ಕಿತು. ನಿಮ್ಮ ಉಪಕಾರ ಹೇಗೆ ತೀರಿಸಲಿ?” ಎಂದ. ಆಗ ಸಂತ ಶಾಂತನಾಗಿ ಹೇಳಿದ, “ಈಗಲೇ ಕುಣಿದಾಡಬೇಡ. ಕಾಡಿನೊಳಗೆ ಮತ್ತಷ್ಟು ಮುಂದಕ್ಕೆ ಹೋಗು.” ಮರ ಕಡಿಯುವವ ಈ ಸಲಹೆ ಒಪ್ಪದೆ, ಮತ್ತಷ್ಟು ಮುಂದಕ್ಕೆ ಹೋದರೆ, ಈಗ ಕೈಯಲ್ಲಿರುವ ಬೆಳ್ಳಿಯ ನಿಧಿ ಕೈತಪ್ಪಿ ಹೋದಿತೆಂದ. ಆಗ ಸಂತ ಮತ್ತಷ್ಟು ಮುಂದಕ್ಕೆ ಹೋದರೆ ಚಿನ್ನದ ಗಣಿ ಸಿಗುವುದೆಂದು ಆಗ್ರಹಿಸಿದ.
ನೋಡೇ ಬಿಡೋಣ ಎಂದು ಕಾಡಿನೊಳಗೆ ಮತ್ತಷ್ಟು ಮುಂದಕ್ಕೆ ಹೋದ ಮರ ಕಡಿಯುವವನಿಗೆ ಚಿನ್ನದ ನಿಧಿ ಸಿಕ್ಕಿತು. “ಇನ್ನು ವರುಷಕ್ಕೊಮ್ಮೆ ಕಾಡಿಗೆ ಬಂದರೆ ಸಾಕು” ಎಂದು ಆತ ಭಾವಿಸಿದ. ಇದನ್ನು ಸಂತನಿಗೆ ತಿಳಿಸಿದಾಗ, ಸಂತ ಒತ್ತಾಯಿಸಿದ, “ಒಂದು ವರುಷ ಕಳೆದಾಗ ನನಗೆ ಇನ್ನಷ್ಟು ವಯಸ್ಸಾಗುತ್ತದೆ. ನೀನು ಬಂದಾಗ ನಾನು ಬದುಕಿ ಇರುತ್ತೇನೋ ಇಲ್ಲವೋ? ಹಾಗಾಗಿ ನೀನು ಚಿನ್ನದ ಗಣಿಗೆ ತೃಪ್ತನಾಗದೆ ಕಾಡಿನೊಳಗೆ ಮತ್ತಷ್ಟು ಮುಂದಕ್ಕೆ ಹೋಗು.”
ಇದನ್ನು ಕೇಳಿದ ಮರ ಕಡಿಯುವವನಿಗೆ ಅಚ್ಚರಿ. ಅವನು ಪ್ರಶ್ನಿಸಿದ, “ಯಾಕೆ? ನೀವು ನನಗೆ ಒಂದು ನಿಧಿ ಪಡೆಯಲು ಹೇಳುತ್ತೀರಿ. ಅದು ಸಿಕ್ಕಿದಾಗ, ಅದನ್ನು ಬಿಟ್ಟು ಇನ್ನೂ ಮುಂದಕ್ಕೆ ಹೋಗಲು ಒತ್ತಾಯಿಸುತ್ತೀರಿ !”
ಈಗ ಸಂತ ಸಮಾಧಾನದಿಂದ ನುಡಿದ, “ನೀನು ಕಾಡಿನೊಳಗೆ ಮತ್ತಷ್ಟು ದೂರ ಹೋದರೆ ನಿನಗೆ ವಜ್ರದ ನಿಧಿ ಸಿಗುತ್ತದೆ.” ಮರ ಕಡಿಯುವವನಿಗೆ ಸಂತನ ಮಾತಿನಲ್ಲಿ ನಂಬಿಕೆ ಬಂದಿತ್ತು. ಆದ್ದರಿಂದ ಪುನಃ ಕಾಡಿನೊಳಗೆ ಬಹು ದೂರ ಹೋದ. ಅವನಿಗಲ್ಲಿ ವಜ್ರದ ನಿಧಿ ಸಿಕ್ಕಿತು! ವಜ್ರದ ಹರಳುಗಳನ್ನು ತಗೊಂಡು ಹಿಂತಿರುಗಿದ ಅವನು ಹೇಳಿದ, “ಇವು ನನ್ನ ಇಡೀ ಜೀವಮಾನಕ್ಕೆ ಸಾಕು.”
ಆಗ ಸಂತ ಮುಗುಳ್ನಗುತ್ತಾ ಹೇಳಿದ, “ಇದು ನಮ್ಮ ಕೊನೆಯ ಭೇಟಿ ಅನಿಸುತ್ತದೆ. ಹಾಗಾಗಿ ನಿನಗೆ ನನ್ನ ಕೊನೆಯ ಸಂದೇಶ ಏನೆಂದರೆ - ಈಗಾಗಲೇ ನಿನ್ನ ಜೀವಮಾನಕ್ಕೆ ಸಾಕಾಗುವಷ್ಟು ನಿಧಿ ಸಿಕ್ಕಿದೆ. ಇನ್ನು ನೀನು ನಿನ್ನ ಅಂತರಾಳಕ್ಕೆ ಹೋಗು. ಈ ಕಾಡು, ತಾಮ್ರದ ನಿಧಿ, ಬೆಳ್ಳಿಯ ನಿಧಿ, ಚಿನ್ನದ ನಿಧಿ, ವಜ್ರದ ನಿಧಿ - ಇವನ್ನೆಲ್ಲ ಬಿಟ್ಟು ಬಿಡು. ಈಗ ನಿನ್ನೊಳಗೇ ಇರುವ ಮಹಾನ್ ಸಂಪತ್ತನ್ನು ನಿನಗೆ ನಾನು ತೋರಿಸಿ ಕೊಡುತ್ತೇನೆ. ನಿನ್ನ ಬಾಹ್ಯ ಅಗತ್ಯಗಳೆಲ್ಲ ಪೂರೈಸಿವೆ. ಈಗ ನಾನು ಕುಳಿತಂತೆ ಕುಳಿತುಕೋ.”
ಆ ಮರ ಕಡಿಯುವವನು ಕೇಳಿದ, “ನನಗೆ ಆಶ್ಚರ್ಯವಾಗುತ್ತಿತ್ತು, ನೀವು ಹೀಗೇಕೆ ಕುಳಿತಿದ್ದೀರಿ ಎಂದು. ಈ ಬೆಳ್ಳಿ, ಚಿನ್ನ, ವಜ್ರಗಳು ಅಲ್ಲಿ ಕಾಡಿನೊಳಗೆ ಇರುವುದು ತಿಳಿದಿದ್ದರೂ ಮರದಡಿಯಲ್ಲಿ ಹೀಗೆ ಯಾಕೆ ಕುಳಿದಿದ್ದೀರಿ?”
ಸಂತ ಉತ್ತರಿಸಿದ, “ಇಲ್ಲಿ ಕೇಳು. ನಾನು ವಜ್ರದ ನಿಧಿ ಪಡೆದ ನಂತರ ನನ್ನ ಗುರು ನನಗೆ ಹೇಳಿದ, “ಇನ್ನು ನೀನು ಈ ಮರದಡಿಯಲ್ಲಿ ಕುಳಿತು ನಿನ್ನೊಳಗೆ ಹೋಗು.”
ಮರ ಕಡಿಯುವವ ತಕ್ಷಣವೇ ತನ್ನಲ್ಲಿದ್ದ ವಜ್ರದ ಹರಳುಗಳನ್ನು ದೂರಕ್ಕೆ ಎಸೆದ. “ಸ್ವಾಮಿ, ಪುನಃ ನಾವು ಒಬ್ಬರನ್ನೊಬ್ಬರು ಕಾಣಲಿಕ್ಕಿಲ್ಲ. ನಾನು ಮನೆಗೆ ಹೋಗುವುದಿಲ್ಲ. ನಿಮ್ಮ ಪಕ್ಕದಲ್ಲಿಯೇ ಕುಳಿತುಕೊಳ್ಳುತ್ತೇನೆ. ನನಗೆ ಕಾಡಿನೊಳಗೆ ದೂರಕ್ಕೆ ಹೋಗುವುದು ಹೇಗೆಂದು ತಿಳಿದಿದೆ. ಆದರೆ ಅಂತರಂಗದೊಳಗೆ ಹೋಗುವುದು ಹೇಗೆಂದು ತಿಳಿದಿಲ್ಲ. ಅದನ್ನು ನನಗೆ ತಿಳಿಸಿ.”
ಆಗ ಸಂತ ಮರ ಕಡಿಯುವವನ ಕಣ್ಣೊಳಗೆ ನೋಡುತ್ತಾ ನುಡಿದ, “ನೀನು ನಿನ್ನ ಅಂತರಂಗದೊಳಗೆ ಹೋದರೆ ಈ ತಾಮ್ರ, ಬೆಳ್ಳಿ, ಚಿನ್ನ, ವಜ್ರಗಳೆಲ್ಲ ಮೌಲ್ಯ ಕಳೆದುಕೊಳ್ಳುತ್ತವೆ.” ಅದಕ್ಕೆ ಮರ ಕಡಿಯುವವ ಹೇಳಿದ, “ಅದರ ಯೋಚನೆ ಬಿಟ್ಟು ಬಿಡಿ. ಇಲ್ಲಿಯ ವರೆಗೆ ನೀವು ನನಗೆ ಸರಿಯಾಗಿಯೇ ದಾರಿ ತೋರಿಸಿದ್ದೀರಿ. ಈಗ ಕೊನೆಯ ಹಂತದಲ್ಲಿಯೂ ನೀವು ನನಗೆ ಸೂಕ್ತವಾದದ್ದನ್ನೇ ಸೂಚಿಸುತ್ತೀರೆಂದು ನನಗೆ ನಂಬಿಕೆ ಇದೆ.”
ಗುರುವಿನ ಮೂಲ ಕರ್ತವ್ಯ ನಿಮ್ಮನ್ನು ಶರೀರದ ಅರಿವಿನಿಂದ ಮನಸ್ಸಿನ ಅರಿವಿಗೆ ತಿರುಗುವಂತೆ ಮನಃಪರಿವರ್ತನೆ ಮಾಡುವುದು. ಅನಂತರ ಮನಸ್ಸಿನ ಅರಿವಿನಿಂದ ಹೃದಯದ ತಿಳಿವಿಗೆ ದಾರಿ ತೋರುವುದು. ಕೊನೆಗೆ ಹೃದಯದ ತಿಳಿವಿನಿಂದ ಆತ್ಮಜ್ಞಾನದೆಡೆಗೆ ಮುನ್ನಡೆಯುವಂತೆ ಮಾಡುವುದು. ಅಂತಹ ಉದಾತ್ತ ಗುರುಗಳಿಗೆಲ್ಲ ನಮೀಸೋಣ.
ಪ್ರಕೃತಿಯನ್ನು ಸೂಕ್ಷ್ಮವಾಗಿ ಗಮನಿಸಿ. ಒಂದು ಹೂ ಅರಳಬೇಕಾದರೆ, ಒಂದು ಹಣ್ಣು ಮಾಗ ಬೇಕಾದರೆ, ಒಂದು ಮಗು ಹುಟ್ಟ ಬೇಕಾದರೆ, ಮೋಡಗಳಿಂದ ಮಳೆ ಸುರಿಯಬೇಕಾದರೆ, ಯಾರಿಗೋ ಜ್ಞಾನೋದಯ ಆಗಬೇಕಾದರೆ - ಇವೆಲ್ಲದಕ್ಕೂ ಕಾಲ ಕೂಡಿ ಬರಲೇ ಬೇಕು. ಯಾವಾಗ ಕಾಲ ಕೂಡಿ ಬರುತ್ತದೆ ಎಂಬುದನ್ನು ಯಾವ ಶಕ್ತಿಯೂ, ಯಾವ ಪ್ರಾರ್ಥನೆಯೂ ಬದಲಾಯಿಸಲಾಗದು.
ಎಲ್ಲದರಲ್ಲಿಯೂ ವೇಗ, ಇನ್ನಷ್ಟು ವೇಗ ಬಯಸುವ ಜಗತ್ತಿನಲ್ಲಿ ನಾವು ಬದುಕುತ್ತಿದ್ದೇವೆ. ಸಂಪತ್ತು, ಯಶಸ್ಸು, ಉತ್ತಮ ಸಂಬಂಧಗಳು, ಸಂತೋಷ, ಕೀರ್ತಿ - ಇವೆಲ್ಲವೂ ನಮಗೆ ಮುಂದಿನ ಕ್ಷಣದಲ್ಲಿಯೇ ಬೇಕು. ಆದರೆ ವಿಶ್ವಚೇತನ ಇಂತಹ ಅವಸರಕ್ಕೆ ಸ್ಪಂದಿಸುವುದಿಲ್ಲ. ಮಾಗದ ಹಣ್ಣನ್ನು ಕಿತ್ತರೆ ಅದು ಹಾಳಾಗುತ್ತದೆ. ಬೆಳೆಯದ ಚಿಟ್ಟೆಯನ್ನು ಕೋಶದಿಂದ ಹೊರಗೆ ಎಳೆದರೆ ಅದು ಹಾರಲಾಗದು, ಅಲ್ಲವೇ? ಹೀಗೆ ಪ್ರತಿಯೊಂದು ಸಂಗತಿಯಲ್ಲಿಯೂ ಪ್ರಕೃತಿ ಸಮರ್ಪಕ ಸಮಯಕ್ಕಾಗಿ ಕಾಯುತ್ತದೆ - ನಮ್ಮ ಬದುಕು ಕೂಡ.
1)ಸರಿಯಾದ ಸಮಯಕ್ಕಿಂತ ಮುಂಚೆ ದಕ್ಕುವ ಯಶಸ್ಸು ವಿಪತ್ತಿನ ಸೋಪಾನ
ನಿಮ್ಮ ಕನಸಿನ ಉದ್ಯೋಗ ಐದು ವರುಷ ಮುಂಚೆಯೇ ಯಾಕೆ ಸಿಗಲಿಲ್ಲ? ಅತ್ಯುತ್ತಮ ಸಂಬಂಧ ಎಂದೆಣಿಸಿದ್ದು ಯಾಕೆ ಮುರಿದು ಬಿತ್ತು? ದೊಡ್ಡ ಅವಕಾಶವೊಂದು ಯಾಕೆ ಕೈತಪ್ಪಿ ಹೋಯಿತು? ಎಂದು ಯಾವತ್ತಾದರೂ ಯೋಚಿಸಿದ್ದೀರಾ? ಆ ಕ್ಷಣದಲ್ಲಿ ಅದೊಂದು ಶಿಕ್ಷೆ ಎಂದು ಅನಿಸಿರಬಹುದು. ಆದರೆ, ವರುಷಗಳ ನಂತರ ಹಿಂತಿರುಗಿ ನೋಡಿದಾಗ, “ಆ ಯಶಸ್ಸಿಗೆ ಆಗ ನೀವು ತಯಾರಾಗಿರಲಿಲ್ಲ” ಎಂಬುದು ಅರ್ಥವಾಗಿರುತ್ತದೆ, ಅಲ್ಲವೇ?
ಒಂದು ಮಗುವಿಗೆ ಬೇಕಾದ್ದು ಆಯುಧವಲ್ಲ, ಆಟಿಕೆ. ಆಯುಧವನ್ನು ಮಗುವಿನ ಕೈಗಿತ್ತರೆ ದುರಂತಕ್ಕೆ ಕಾರಣವಾದೀತು. ಅದೇ ರೀತಿಯಲ್ಲಿ, ಸಂಪತ್ತು, ಅಧಿಕಾರ, ಕೀರ್ತಿ, ಪ್ರೀತಿ ಇವು ಸಿಗಬೇಕಾದ ಸಮಯಕ್ಕಿಂತ ಮುಂಚೆಯೇ ದಕ್ಕಿದರೆ (ಅಂದರೆ ವ್ಯಕ್ತಿಯು ಮಾನಸಿಕವಾಗಿ, ಭಾವನಾತ್ಮಕವಾಗಿ ಮತ್ತು ಅಧ್ಯಾತ್ಮಿಕವಾಗಿ ಅವನ್ನು ಸ್ವೀಕರಿಸಲು ಸನ್ನದ್ಧನಾಗಿರುವ ಮುಂಚೆ) ಇವು ವರವಾಗುವ ಬದಲು ಶಾಪವಾಗುತ್ತವೆ! ಚರಿತ್ರೆಯನ್ನು ಪರಿಶೀಲಿಸಿದರೆ, ಯೌವನದಲ್ಲಿಯೇ ಕೋಟ್ಯಾಧಿಪತಿಗಳಾದರೂ ಕೆಲವೇ ವರುಷಗಳಲ್ಲಿ ಆ ಸಂಪತ್ತನೆಲ್ಲ ಕಳೆದುಕೊಂಡು ಭಿಕಾರಿಗಳಾದ ಹಲವರ ಉದಾಹರಣೆಗಳು ಸಿಗುತ್ತವೆ. ಯಾಕೆಂದರೆ, ಅಗಾಧ ಸಂಪತ್ತನ್ನು ಉಳಿಸಿ ಬೆಳೆಸುವ ಕೌಶಲ್ಯಗಳನ್ನು ಅವರು ಕಲಿತಿರಲಿಲ್ಲ. ಇಂಥವರಿಗೆ ಹೋಲಿಸಿದಾಗ, ಹಂತಹಂತವಾಗಿ ಸಂಪತ್ತನ್ನು ಗಳಿಸಿದವರು ಅವನ್ನು ತಮ್ಮ ಮುಂದಿನ ತಲೆಮಾರುಗಳಿಗೆ ದಾಟಿಸಲು ಶಕ್ತರಾದ ಹಲವು ನಿದರ್ಶನಗಳಿವೆ.
2)ಬದುಕು ನಿಮ್ಮನ್ನು ಮೌನವಾಗಿ ನಿಮ್ಮ ಭವಿಷ್ಯಕ್ಕಾಗಿ ತಯಾರು ಮಾಡುತ್ತದೆ.
ನಿಮ್ಮ ಬದುಕಿನಲ್ಲಿ ಪ್ರಗತಿ ಆಗುತ್ತಿಲ್ಲ ಎನಿಸಿದಾಗ ನಿಜವಾಗಿ ಬದುಕು ನಿಮ್ಮನ್ನು ರೂಪಿಸುತ್ತಾ ಇರುತ್ತದೆ. ಕಷ್ಟದ ಸಮಯಗಳು, ಕಾಯುವ ಅವಧಿಗಳು, ಸೋಲುಗಳು - ಇವೆಲ್ಲ ನಿಮ್ಮನ್ನು ರೂಪಿಸುವ ಸಾಧನಗಳು. ಒಬ್ಬ ಕುಂಬಾರ ಮೌನವಾಗಿ ಮಡಕೆಗೆ ರೂಪ ಕೊಡುವಂತೆ, ನಿಮ್ಮ ವ್ಯಕ್ತಿತ್ವ, ತಾಳ್ಮೆ, ಪುಟಿದೇಳುವ ಗುಣಗಳನ್ನು ಬದುಕು ರೂಪಿಸುತ್ತದೆ.
ದೇಶವೇ ಗುರುತಿಸುವಂತಹ ನಾಯಕನಾಗಬೇಕು ಎಂಬುದು ನಿಮ್ಮ ಮಹದಾಸೆ ಆಗಿರಬಹುದು; ಅದಕ್ಕಾಗಿ ನೀವು ಮೊದಲು ಕಲಿಯ ಬೇಕಾದ್ದು ವಿನಯ. ಆತ್ಮಸಂಗಾತಿಯನ್ನು ಪಡೆಯಬೇಕೆಂಬುದು ನಿಮ್ಮ ಮಹದಾಸೆ ಆಗಿರಬಹುದು; ಅದಕ್ಕಾಗಿ ನೀವು ಮೊದಲು ಕಲಿಯಬೇಕಾದ್ದು ನಿಮ್ಮನ್ನೇ ಪ್ರೀತಿಸುವುದನ್ನು. ಯಶಸ್ಸು ಗಳಿಸಬೇಕು ಎಂಬುದು ನಿಮ್ಮ ಮಹದಾಸೆ ಆಗಿರಬಹುದು; ಅದಕ್ಕಾಗಿ ನೀವು ಮೊದಲು ಕಲಿಯಬೇಕಾದ್ದು ಶಿಸ್ತು ಮತ್ತು ಹೊಣೆಗಾರಿಕೆ. ಇವಿಲ್ಲದಿದ್ದರೆ ನಿಮ್ಮ ಯಶಸ್ಸು ಕ್ಷಣಿಕ. ಮರವೊಂದು ಫಲ ಕೊಡಲು ವರುಷಗಟ್ಟಲೆ ಬೆಳೆಯುತ್ತದೆ. ಹಾಗೆಯೇ, ನಿಮ್ಮ ಸಾಮರ್ಥ್ಯ ಅರಳಲು ವರುಷಗಳು ಬೇಕು. ಯಾಕೆಂದರೆ ಅದು ದೀರ್ಘಕಾಲಿಕವೂ ಪರಿಣಾಮಕಾರಿಯೂ ಆಗಿರತಕ್ಕದ್ದು.
3)ಪರಿಪೂರ್ಣವಾದ ಕಾಲದಲ್ಲಿ ವಿಶ್ವಚೈತನ್ಯವು ನಿಮ್ಮ ಮಹದಾಶೆಯನ್ನು ಕೈಗೂಡಿಸುತ್ತದೆ.
ನಮ್ಮ ಆಶೆಗಳ ಡೆಡ್-ಲೈನುಗಳು ವಿಶ್ವಚೈತನ್ಯಕ್ಕೆ ಅನ್ವಯಿಸುವುದಿಲ್ಲ. ಅದು ನಿಮ್ಮ ಆಶೆಗಳನ್ನಲ್ಲ, ಬದಲಾಗಿ ನಿಮ್ಮ ವಿಕಾಸವನ್ನು ಅವಲಂಬಿಸಿ ಸೂಕ್ತ ಸಮಯವನ್ನು ನಿರ್ಧರಿಸುತ್ತದೆ. ನಾನು ತಯಾರಾಗಿದ್ದೇನೆಂದು ನೀವು ಭಾವಿಸಬಹುದು; ಆದರೆ ವಿಶ್ವಚೈತನ್ಯಕ್ಕೆ ನಿಮಗಿಂತ ಚೆನ್ನಾಗಿ ಗೊತ್ತಿದೆ.
ನೀವು ನಿಮ್ಮ ಮೇರುಸ್ತರವನ್ನು ತಲಪಿದಾಗ ಸೂಕ್ತ ಅವಕಾಶವನ್ನು ಒದಗಿಸಿ ವಿಶ್ವಚೈತನ್ಯ ನಿಮ್ಮ ಪ್ರಗತಿ ಮತ್ತು ಸಂತೋಷದ ಸ್ಫೋಟಕ್ಕೆ ಕಾರಣವಾಗುತ್ತದೆ. ಆ ಸಮಯದಲ್ಲಿ, ನಿಮ್ಮ ಕೌಶಲ್ಯಗಳು, ನಿಮ್ಮ ಆತ್ಮಧ್ವನಿ, ನಿಮ್ಮ ತಾಕತ್ತು, ನಿಮ್ಮ ಉದ್ದೇಶ - ಎಲ್ಲವೂ ಸಂಧಿಸುತ್ತವೆ. ಅದುವೇ ಸರಿಯಾದ ಸಮಯ. ಕೆಲವರು ಹಣ, ಪ್ರೀತಿ, ಕೀರ್ತಿ, ಜ್ಞಾನೋದಯ ಎಲ್ಲವನ್ನು ಚಲಿಸುವ ರೈಲನ್ನು ಬೆಂಬತ್ತಿದಂತೆ ಬೆಂಬತ್ತುತ್ತಾರೆ. ಆದರೆ ನಿಮ್ಮ ವಿಧಿಯಲ್ಲಿ ನಿಮಗೆ ದಕ್ಕಬೇಕಾದದ್ದು ನಿಮಗೆ ಸಿಕ್ಕಿಯೇ ಸಿಗುತ್ತದೆ - ಸರಿಯಾದ ಸ್ಥಳದಲ್ಲಿ ಮತ್ತು ಸರಿಯಾದ ಸಮಯದಲ್ಲಿ.
4)ವಿಶ್ವಚೈತನ್ಯಕ್ಕೆ ಶರಣಾಗತಿಯೇ ಕಾಲ ಕೂಡಿ ಬರುವುದಕ್ಕೆ ಕೀಲಿಕೈ
ಈಗಲೇ ನನಗೆ ಸಂಪತ್ತು, ಕೀರ್ತಿ, ಯಶಸ್ಸು ಯಾಕೆ ಸಿಗುತ್ತಿಲ್ಲ ಎಂದು ಹಲುಬಿದರೆ ಯಾವ ಪ್ರಯೋಜನವೂ ಇಲ್ಲ. ಬದಲಾಗಿ, “ನನ್ನ ಬದುಕು ಯಾವ ಉನ್ನತ ಧ್ಯೇಯಕ್ಕಾಗಿ ನನ್ನನ್ನು ತಯಾರು ಮಾಡುತ್ತಿದೆ” ಎಂದು ಆತ್ಮಾವಲೋಕನ ಮಾಡಿಕೊಳ್ಳಬೇಕು.
ವಿಶ್ವಚೈತನ್ಯಕ್ಕೆ ಶರಣಾಗತಿ ಎಂದರೆ ನಿಷ್ಕ್ರಿಯನಾಗ ಬೇಕೆಂದು ಅರ್ಥವಲ್ಲ; ಅದು ಸಕ್ರಿಯ ನಂಬಿಕೆ. ಅಂದರೆ ನೀವು ಮಾಡಬೇಕಾದ್ದನ್ನು ಮಾಡುತ್ತಾ ಇರುವುದು - ಕಲಿಯುವುದು, ಬೆಳೆಯುವುದು, ಸನ್ನದ್ಧನಾಗುವುದು.
ಗಮನಿಸಿ: ಎಲ್ಲ ಧರ್ಮಗಳು ಈ ಮಹಾನ್ ತತ್ವವನ್ನು ಪಾಲಿಸುತ್ತವೆ: ಹಿಂದೂ ಧರ್ಮದ ಕರ್ಮ ಸಿದ್ಧಾಂತ, ಬೌದ್ಧ ಧರ್ಮದ ತಾಳ್ಮೆಯೇ ಪರಮ ಗುಣ ಇತ್ಯಾದಿ.
5)ನಿಜ ಜೀವನದಲ್ಲಿ ಕಾಲ ಹೇಗೆ ಕೂಡಿ ಬರುತ್ತದೆ ಎಂಬುದನ್ನು ಪರಿಶೀಲಿಸಿ.
ಅ)ವೃತ್ತಿ ಮತ್ತು ಯಶಸ್ಸು: ಒಬ್ಬ ಯುವ ಡಾಕ್ಟರ್ ತನ್ನನ್ನು ಸಮಾಜ ತಕ್ಷಣವೇ ಗುರುತಿಸಬೇಕು ಎಂದು ಆಶೆ ಪಡಬಹುದು. ಆದರೆ, ಹಲವು ವರುಷಗಳು ವೈದ್ಯನಾಗಿ ಸೇವೆ ಸಲ್ಲಿಸಿದ ನಂತರ, ಸವಾಲಿನ ಪ್ರಕರಣಗಳನ್ನು ಸಮರ್ಥವಾಗಿ ನಿರ್ವಹಿಸಿದ ನಂತರ ಮತ್ತು ತನ್ನ ತಪ್ಪುಗಳಿಂದ ಆತ ಕಲಿತ ನಂತರವೇ ಸಮಾಜ ಆತನನ್ನು ಸಮರ್ಥ ವೈದ್ಯನೆಂದು ಗುರುತಿಸುತ್ತದೆ. ವೃತ್ತಿಯಲ್ಲಿ ತೊಡಗಿದ ಕೂಡಲೇ ಅವನಿಗೆ ಕೀರ್ತಿ ಬಂದರೆ ಅದು ಸೊಕ್ಕು ತಲೆಗೇರಲು ಕಾರಣವಾಗಬಹುದು.
ಆ)ಬದುಕಿನ ತೀವ್ರ ಘಾಸಿಗಳು ಗುಣವಾಗುವುದು ನಿಧಾನ: ಭಾವನಾತ್ಮಕವಾದ ಅಥವಾ ದೈಹಿಕವಾದ ಘಾಸಿಗಳು ಗುಣವಾಗಲು ಸಮಯ ತಗಲುತ್ತದೆ. ಒಂದು ಗಾಯ ಗುಣವಾಗಲು ವಾರಗಳು ಅಥವಾ ತಿಂಗಳುಗಳು ತಗಲಬಹುದು. ಅತ್ಯಾಧುನಿಕ ಜೌಷಧಿ ನೀಡಿದರೂ ದೇಹ ಸ್ಪಂದಿಸಲು ಸಮಯ ಬೇಕಾಗುತ್ತದೆ. ಭಾವನಾತ್ಮಕ ಘಾಸಿಗಳು ವಾಸಿಯಾಗಲು ಕ್ಷಮಾಗುಣ, ಸ್ವೀಕಾರ ಭಾವ ಅತ್ಯಗತ್ಯ.
6)ಯಶಸ್ಸಿನ ವಿಳಂಬ ಹಲವು ಬಾರಿ ಗುರುತರ ಯಶಸ್ಸಿಗೆ ತಳಹದಿ
ನಿಮ್ಮ ಉದ್ಯೋಗ ಕಳೆದುಕೊಂಡು ಕಂಗಾಲಾದ ಕೆಲವು ತಿಂಗಳ ನಂತರ ಅದಕ್ಕಿಂತಲೂ ಉತ್ತಮ ಉದ್ಯೋಗ ನಿಮಗೆ ಸಿಕ್ಕಿತ್ತಾ? ನೀವು ಪ್ರೀತಿಸಿದ ವ್ಯಕ್ತಿ ನಿಮ್ಮ ಪ್ರೀತಿಯನ್ನು ತಿರಸ್ಕರಿಸಿದ ಹಲವು ತಿಂಗಳ ನಂತರ ನಿಮ್ಮನ್ನು ನಿಜವಾಗಿಯೂ ಅರ್ಥ ಮಾಡಿಕೊಂಡ ಆತ್ಮಸಂಗಾತಿ ಸಿಕ್ಕಿದ್ದು ಇದೆಯೇ? ಇವು ಕಾಕತಾಳೀಯ ಘಟನೆಗಳಲ್ಲ. ಆ ವಿಳಂಬವು ನಿಮ್ಮ ಬದುಕಿನ ಧ್ಯೇಯಕ್ಕೆ ಹೊಂದಿಕೊಳ್ಳುವ ಇನ್ನಷ್ಟು ಉತ್ತಮ ಸಂಗತಿಯ ಪಥಕ್ಕೆ ನಿಮ್ಮನ್ನು ಒಯ್ದಿತು.
7)ಯಶಸ್ಸು ಮುಖ್ಯ, ಯಶಸ್ಸಿನ ಪ್ರಕ್ರಿಯೆ ಅದಕ್ಕಿಂತಲೂ ಮುಖ್ಯ.
ನೀವು ಯಶಸ್ಸಿನ ಮೇಲೆ ಎಷ್ಟು ಗಮನ ಕೆಂದ್ರೀಕರಿಸಿರುತ್ತೀರಿ ಎಂದರೆ, ಯಶಸ್ಸಿನ ಪ್ರಕ್ರಿಯೆಯ ಕಡೆಗೆ ಗಮನ ನೀಡಿರುವುದೇ ಇಲ್ಲ. ನಿಜ ಹೇಳಬೇಕೆಂದರೆ, ಕಾದುಕಾದು ಮಾಗಿದಾಗ ನೀವು ಎಂತಹ ವ್ಯಕ್ತಿ ಆಗಿರುತ್ತೀರಿ ಎಂಬುದೇ ನಿಜವಾದ ಯಶಸ್ಸು. ಕಾಲ ಕೂಡಿ ಬಂದಾಗ ನಿಮ್ಮ ಮಹದಾಸೆಯ ಸಂಪತ್ತು, ಪ್ರೀತಿ, ಕೀರ್ತಿ, ಯಶಸ್ಸು ದುತ್ತೆಂದು ಲಭಿಸುತ್ತದೆ ಮಾತ್ರವಲ್ಲ ನೀವು ಅದ್ಭುತ ವ್ಯಕ್ತಿಯಾಗಿ ಪರಿವರ್ತನೆ ಆಗಿರುತ್ತೀರಿ. ಅದುವೇ ನಿಜವಾದ ಮ್ಯಾಜಿಕ್.
ವಿಶ್ವಚೈತನ್ಯದ ಆಶೀರ್ವಾದ ನಿಮಗೆ ಇದ್ದೇ ಇದೆ ಎಂಬ ನಂಬಿಕೆ ಇರಲಿ. ನಿಮ್ಮ ಬದುಕಿನ ಅಂತಿಮ ಯಶಸ್ಸು “ಬಹಳ ತಡ” ಅಥವಾ “ಇಲ್ಲವೇ ಇಲ್ಲ” ಎಂಬ ಸಂಗತಿಯೇ ಇಲ್ಲ. ಅದಕ್ಕಾಗಿ ಕಾಲ ಕೂಡಿ ಬರಬೇಕು, ಅಷ್ಟೇ.
ಆದ್ದರಿಂದ, ಅಗಾಧ ತಾಳ್ಮೆ ಬೆಳೆಸಿಕೊಳ್ಳಿ; ನಿಮ್ಮ ಪ್ರಗತಿಯ ಮೇಲೆ ಗಮನ ಕೇಂದ್ರೀಕರಿಸಿ; ಅಗತ್ಯವಾದ ಕೌಶಲ್ಯಗಳನ್ನು ಕಲಿಯಿರಿ; ಈ ಕ್ಷಣದಲ್ಲಿ ಬದುಕಲು ಶುರು ಮಾಡಿ; ನಿಮ್ಮನ್ನು ಬೇರೆ ಯಾರೊಂದಿಗೂ ಹೋಲಿಸಬೇಡಿ; ನಿಮ್ಮಲ್ಲಿ ಕೃತಜ್ಞತಾ ಭಾವ ತುಂಬಿರಲಿ. ಇಂತಹ ಸಾಧನೆಯ ಪಥದಲ್ಲಿ ಮುನ್ನಡೆಯುತ್ತಿದ್ದರೆ ನೀವು ಪಾಠಗಳನ್ನು ಕಲಿಯುತ್ತಿದ್ದೀರಿ ಎಂಬುದು ವಿಶ್ವಚೈತನ್ಯದ ಆಶೀರ್ವಾದಕ್ಕೆ ಕಾರಣವಾಗುತ್ತದೆ.
ಆಗ, ನಿಮ್ಮ ಬದುಕಿನ ಮಹದಾಸೆ ಕೈಗೂಡುವ ಕಾಲ ಕೂಡಿ ಬರುತ್ತದೆ. ಸರಿಯಾದ ಸಮಯದಲ್ಲಿ ನಿಮ್ಮ ವಿಧಿಯಂತೆ ನಿಮಗೆ ಸಿಗಬೇಕಾದ್ದು ಸಿಕ್ಕೇ ಸಿಗುತ್ತದೆ. ನಿಮ್ಮ ಸಾಧನೆಯ ಫಲವಾದ ಆ ಯಶಸ್ಸು ಪರಿಪೂರ್ಣವಾಗಿರುತ್ತದೆ.
ನಾವು ಬೇರೆಯವರನ್ನೇ ನೋಡುತ್ತೇವೆ. ನಮ್ಮನ್ನು ನೋಡಿದ್ದೇವೆಯೇ? ನಾವು ಕಣ್ಣು ಮುಚ್ಚಿ ಕುಳಿತುಕೊಂಡಾಗ ಏನೇನೋ ಕಾಣಿಸುತ್ತದೆ. ನನ್ನೊಳಗಿರುವ “ನಾನು” ಕಾಣಿಸುತ್ತದೆಯೇ?
ನನ್ನೊಳಗೆ ನಾನು ಪ್ರವೇಶ ಮಾಡಿ, ನನ್ನನ್ನು ಅರ್ಥ ಮಾಡಿಕೊಳ್ಳುವುದೇ ಅಂತರ್-ದರ್ಶನ. ಗಮನಿಸಿ: ನಮಗೆ ಪ್ರತಿಯೊಬ್ಬರಿಗೂ ಎರಡು ಬದುಕು ಇದೆ: ಹೊರಗಿನ ಬದುಕು ಮತ್ತು ಒಳಗಿನ ಬದುಕು. ಆ ಒಳಗಿನ ಬದುಕನ್ನು ನೋಡುವುದೇ ಆಂತರ್-ದರ್ಶನ.
ನಾನು ಕಣ್ಣು ಮುಚ್ಚಿಕೊಂಡಾಗ ಏನು ಕಾಣಿಸುತ್ತದೆ? ನಕಾರಾತ್ಮಕತೆ ನುಗ್ಗಿ ಬರುತ್ತದೆ. ಅಂದರೆ, ನೋವುಗಳ, ಸಂಕಟಗಳ, ದುಃಖಗಳ, ಸೋಲುಗಳ, ಹತಾಶೆಗಳ ಮೆರವಣಿಗೆ. ಇದರಿಂದ ಹೊರಬರಬೇಕಾದರೆ, ಮೊದಲಾಗಿ ಸುಮ್ಮನಿರಲು ಕಲಿಯಬೇಕು. ಪ್ರತಿಯೊಬ್ಬರೂ ನಾನು ಅದಾಗಬೇಕು, ಇದಾಗಬೇಕು ಎಂದು ಒದ್ದಾಡುತ್ತಲೇ ಇದ್ದಾರೆ! ಅದು ಏನು ಬೇಕಾದರೂ ಆಗಲಿ, ನಾನು ಕೇವಲ ನನ್ನೊಳಗೆ ನಿರ್ಲಿಪ್ತವಾಗಿ ನೋಡುತ್ತೇನೆ ಅಂತ ಇದ್ದು ಬಿಡಬೇಕು. ನಾನು ಹೀಗೆ ನೋಡುತ್ತಿಲ್ಲ ಎಂದರೆ, ನಾನು ಯಾವುದರಲ್ಲೋ ತೊಡಗಿಸಿಕೊಂಡಿದ್ದೇನೆ ಎಂದರ್ಥ. ಹಾಗೆ ತೊಡಗಿಸಿಕೊಂಡರೆ, ನನ್ನೊಳಗೆ ನೋಡಲು ಸಾಧ್ಯವಿಲ್ಲ.
ಆದ್ದರಿಂದ, ಈಗ ಶುರು ಮಾಡಿ - ಇನ್ನು ಮುಂದಿನ 24 ಗಂಟೆಗಳ ಅವಧಿ ನನ್ನೊಳಗಿನ ನನ್ನನ್ನು ನೋಡುತ್ತಾ ಇರುವ ವ್ರತವನ್ನು. ನಿಧಾನವಾಗಿ ನಿಮಗೆ ಅರಿವಾಗುತ್ತದೆ: ನೀವು ಶರೀರಕ್ಕೆ ಹೆಚ್ಚಿನ ಗಮನ ಕೊಡುತ್ತಾ, ಮನಸ್ಸನ್ನು ಸರಿ ಪಡಿಸಲು ಪ್ರಯತ್ನಿಸುತ್ತಿದ್ದೀರಿ ಎಂದು. ಅದರ ಬದಲಾಗಿ, ಮನಸ್ಸಿನ ಮೂಲಕ ಶರೀರವನ್ನು ಸರಿ ಪಡಿಸುವುದು ಉತ್ತಮ ವಿಧಾನ.
ನೀವು ಪ್ರತೀ ಕ್ಷಣ ಎಲ್ಲವನ್ನೂ ನಿಮ್ಮ ಮೂಗಿನ ನೇರಕ್ಕೆ ವ್ಯಾಖ್ಯಾನ ಮಾಡುತ್ತಾ ಇರುತ್ತೀರಿ. ಉದಾಹರಣೆಗೆ, ಒಬ್ಬ ವ್ಯಕ್ತಿ ಹೆಂಡತಿ ಸರಿ ಇಲ್ಲ, ಮನೆ ಸರಿ ಇಲ್ಲ, ಊಟ ಸರಿ ಇಲ್ಲ ಎಂದೆಲ್ಲಾ ಗೊಣಗುಟ್ಟುತ್ತಲೇ ಇರುತ್ತಾನೆ. ಯಾವತ್ತಾದರೂ ತಾನು ಸರಿ ಇದ್ದೇನೆಯೇ ಎಂದು ಆತ ಪ್ರಶ್ನಿಸಿಕೊಳ್ಳುತ್ತಾನೆಯೇ? ಇಲ್ಲ. ಯಾಕೆಂದರೆ, ಆತ ಯಾವತ್ತೂ ತನ್ನೊಳಗೆ ಹೋಗಿ ತನ್ನನ್ನು ನೋಡಿಕೊಳ್ಳುವುದಿಲ್ಲ.
ಇದರಿಂದ ಅರ್ಥ ಮಾಡಿಕೊಳ್ಳಬೇಕಾದ್ದು ಏನು? ನಿಮ್ಮ ಬದುಕು ನಿಮ್ಮ ವ್ಯಾಖ್ಯಾನಗಳಲ್ಲಿದೆ (ಇಂಟರ್-ಪ್ರಿಟೇಷನುಗಳಲ್ಲಿದೆ). ಅದು ಪ್ರತಿ ಹೆಜ್ಜೆಗೆ ನಿಮಗೆ ದುಃಖವನ್ನೇ ಕೊಡುತ್ತದೆ. (ಅಪರೂಪಕ್ಕೊಮ್ಮೆ ಅದು ಸುಖ ಕೊಡಲೂ ಬಹುದು.) “ನಾನು ನೆಮ್ಮದಿಯಿಂದ ಇಲ್ಲ” ಎಂಬುದೇ ನಿಮ್ಮ ವ್ಯಾಖ್ಯಾನವಾದರೆ, ನೆಮ್ಮದಿಗೆ ಅವಕಾಶ ಎಲ್ಲಿದೆ?
“ಎಲ್ಲವೂ ಚೆನ್ನಾಗಿದೆ. ಒಮ್ಮೆ ನಕ್ಕು ಬಿಡಿ” ಎಂದರೆ ನಿಮ್ಮಲ್ಲಿ ಎಷ್ಟು ಜನರಿಗೆ ಮುಕ್ತವಾಗಿ ನಗಲು ಸಾಧ್ಯವಾಗುತ್ತದೆ? ಭಗವಂತ ನಿಮಗೆ ಸುಖವನ್ನೇ ಕೊಟ್ಟಿದ್ದಾನೆ ಎಂದು ಅಂದುಕೊಂಡರೆ ನಿಮ್ಮೊಳಗೆ ನಿರಾಳತೆ ತುಂಬಿಕೊಳ್ಳುತ್ತದೆ. ಅದರ ಬದಲಾಗಿ, ಭಗವಂತ ಕೊಟ್ಟದ್ದು ಎಲ್ಲವನ್ನೂ ದುಃಖ ಎಂದುಕೊಂಡರೆ, ನಿಮ್ಮ ಸುಖವನ್ನು ನೀವೇ ಕಳೆದುಕೊಂಡಂತೆ ಅಲ್ಲವೇ?
ನಿಮ್ಮ ಮನಸ್ಸಿನಲ್ಲಿ ಏನೆಲ್ಲ ಅದುಮಿಟ್ಟಿದ್ದೀರಿ ಎಂದೊಮ್ಮೆ ಪರೀಕ್ಷೆ ಮಾಡಿಕೊಳ್ಳಿ. ಎಲ್ಲಿಯ ವರೆಗೆ ಅದನ್ನೆಲ್ಲ ಖಾಲಿ ಮಾಡಿಕೊಳ್ಳುವುದಿಲ್ಲವೋ ಅಲ್ಲಿಯ ವರೆಗೆ ಸುಖವಿಲ್ಲ ಎಂಬುದನ್ನು ಒಪ್ಪಿಕೊಳ್ಳಬೇಕಾಗುತ್ತದೆ. ಉದಾಹರಣೆಗೆ, ಮಂಗಳೂರಿನಲ್ಲೊಂದು ಸ್ವಂತ ಮನೆ ಮಾಡಬೇಕು ಎಂಬ ಯೋಚನೆ ನಿಮ್ಮಲ್ಲಿ ಮೂಡಿತು ಎಂದಿರಲಿ. ಅನಂತರ, ಕ್ಷಣಕ್ಷಣವೂ ಅದೇ ಯೋಚನೆ ಮನಸ್ಸಿನಲ್ಲಿ ನುಗ್ಗಿ ಬರುತ್ತದೆ. ಎಲ್ಲಿ ಸೈಟ್ ಖರೀದಿಸುವುದು? ಸ್ವಂತ ಮನೆಗಾಗಿ ಹಣ ಹೇಗೆ ಹೊಂದಿಸುವುದು? ತಲೆ ತುಂಬ ಇವೇ ಯೋಚನೆಗಳು. ಕ್ರಮೇಣ ಅದುವೇ ಮತ್ತೆಮತ್ತೆ ಕಾಡುವ ಚಿಂತೆಯಾಗಿ ಬೆಳೆಯುತ್ತದೆ.
ಇನ್ನೊಂದು ಉದಾಹರಣೆ. ನಿಮಗೆ ಮಸಾಲೆ ದೋಸೆ ಎಂದರೆ ಬಹಳ ಆಸೆ. “ಇವತ್ತು ಹೊಟ್ಟೆ ತುಂಬಾ ಮಸಾಲೆ ದೋಸೆ ತಿನ್ನಬೇಕು” ಎಂಬ ಆಸೆಯಿಂದ ಹೋಟೆಲಿಗೆ ಹೋಗುತ್ತೀರಿ. ಮೊದಲನೆಯ ಮಸಾಲೆ ದೋಸೆ ತಿನ್ನುವಾಗ ಸುಖ ಅನಿಸುತ್ತದೆ. ಎರಡನೆಯದನ್ನು ತಿನ್ನುವಾಗ ಸಾಕು ಅನಿಸುತ್ತದೆ. ಮೂರನೆಯದನ್ನು ತಿನ್ನುವಾಗ ವಾಕರಿಕೆ ಬರುತ್ತದೆ! ಹೀಗೆ, ನಮ್ಮ ಬದುಕಿನಲ್ಲಿ ದುಃಖವನ್ನು ನಾವೇ ಹುಟ್ಟಿಸಿ, ದುಃಖದಲ್ಲೇ ಇರಲು ಬಯಸುತ್ತೇವೆ. ಸುಖ ಇದ್ದರೂ ನಮಗೆ ಅದನ್ನು ಅನುಭವಿಸಲಿಕ್ಕೆ ಆಗುತ್ತಿಲ್ಲ!
ನಿಮ್ಮ ಮನಸ್ಸಿನಲ್ಲಿ ನಕಾರಾತ್ಮಕತೆ ತುಂಬಿಕೊಂಡಿದೆ. ಅದನ್ನು ಯಾವಾಗ ನೋಡಲು ಶುರು ಮಾಡುತ್ತೀರೋ ಆಗ ಅದು ಕರಗಿ ಹೋಗುತ್ತದೆ! ಯಾವುದೇ ಕೆಲಸ ಮಾಡುವಾಗ ಯಾವ ಉದ್ದೇಶದಿಂದ ಆ ಕೆಲಸ ಮಾಡುತ್ತಾ ಇದ್ದೀರಿ ಎಂಬುದನ್ನು ನಿಮ್ಮ ಮನಸ್ಸಿನ ಒಳ ಹೊಕ್ಕು ನೋಡಿಕೊಳ್ಳಿ. ಆಗ ಅದನ್ನು ನಿರಾಳವಾಗಿ, ಯಾವುದೇ ಒತ್ತಡವಿಲ್ಲದೆ ಮಾಡಲು ಸಾಧ್ಯವಾಗುತ್ತದೆ. ಗಮನಿಸಿ: ಯಾವುದೇ ಕೆಲಸದ ಮೂಲದಲ್ಲಿ ಏನೋ ಒಂದು ಚಡಪಡಿಕೆ ಇರುತ್ತದೆ. ಅದುವೇ ನಿಮಗೆ ಒಳ ಹೊಕ್ಕು ನೋಡಲು ಅಡ್ಡಿಯಾಗಿದೆ. ಅದನ್ನು ನಿವಾರಿಸಿಕೊಂಡು ನಿಮ್ಮೊಳಗೆ ನೋಡಲು ಶುರು ಮಾಡಬೇಕು.
ಇದುವೇ ಅಂತರ್-ದರ್ಶನ. ಇದು ಯಾಕೆ ಮುಖ್ಯವಾಗುತ್ತದೆ? ಪ್ರತಿಯೊಬ್ಬರೂ ಯಾವಾಗಲೂ “ಬಿಜಿ” ಆಗಿರುತ್ತಾರೆ. ಬೆಳಗ್ಗೆ ಎದ್ದಾಗಿನಿಂದ ರಾತ್ರಿ ಮಲಗುವ ತನಕ “ಬಿಜಿ”. ಕ್ಷಣವೂ ಬಿಡುವಿಲ್ಲದಷ್ಟು ಕೆಲಸಗಳು. ನಾವೆಲ್ಲರೂ ಕೆಲಸ ಮಾಡುವುದರಲ್ಲೇ ಮುಳುಗಿದ್ದೇವೆ - ಅದು ಮಾಡಬೇಕು, ಇದು ಮಾಡಬೇಕು ಎಂಬ ನಿರಂತರ ಹಪಾಹಪಿ. ಇದರಿಂದ ಪಾರಾಗಬೇಕಾದರೆ, ನಮ್ಮೊಳಗೆ ನೋಡಲು ಶುರು ಮಾಡಲೇ ಬೇಕಾಗಿದೆ.
“ನಮ್ಮೊಳಗೆ ನೋಡಲು” ಕಲಿಯುವುದೇ ಅಂತರ್-ದರ್ಶನದ ಮೊದಲ ಹೆಜ್ಜೆ. ಪ್ರತಿಯೊಂದು ಕೆಲಸ ಮಾಡುವಾಗಲೂ, ಅದರಿಂದ (ಮಾನಸಿಕವಾಗಿ) ದೂರ ನಿಂತು, ನೀವು ಏನು ಮಾಡುತ್ತಿದ್ದೀರಿ ಎಂದು ನೋಡಲು ಶುರು ಮಾಡಿ. ಇದರಿಂದಾಗಿ ನಿಮ್ಮ ಬದುಕೇ ಬದಲಾಗುತ್ತದೆ. ಯಾಕೆಂದರೆ, ನಿಮ್ಮ ನೋಟದಲ್ಲಿ ಇಡೀ ಬದುಕು ಅಡಗಿದೆ! ಉದಾಹರಣೆಗೆ, ನಿಮ್ಮ ಸಂಬಂಧಗಳು ಸರಿಯಾಗಿಲ್ಲ ಎಂದರೆ ನಿಮ್ಮ ನೋಟದಲ್ಲೇ ದೋಷ ಇದೆ. ಅದನ್ನು ಸರಿ ಮಾಡಿಕೊಂಡರೆ, ಸಂಬಂಧಗಳು ಸರಿಯಾಗುತ್ತವೆ.
ಆದ್ದರಿಂದ ಇಂದಿನಿಂದಲೇ ಶುರು ಮಾಡಿ ಅಂತರ್-ದರ್ಶನ. ಪ್ರತಿದಿನವೂ “ನಿಮ್ಮೊಳಗಿನ ನಿಮ್ಮನ್ನು” ನೋಡುತ್ತಾ ನೋಡುತ್ತಾ ನಿಮ್ಮ ಬದುಕು ಬದಲಾಗುವುದನ್ನು ಗಮನಿಸಿ.
ಇದು ನಮಗೆಲ್ಲರಿಗೂ ಗೊತ್ತಿರುವ ಸಂಗತಿಯೇ ಆಗಿದೆ. ಇದರಲ್ಲಿ ಹೊಸತೇನಿದೆ? ಎಂದು ಕೇಳುತ್ತೀರಾ? ಇತ್ತೀಚೆಗಿನ ಸಂಶೋಧನೆಗಳು ಇದನ್ನು ಮಗದೊಮ್ಮೆ ಖಚಿತಪಡಿಸಿವೆ.
ಕಳೆದ ಎರಡು ದಶಕಗಳಲ್ಲಿ “ಸಂತೋಷದ ಬದುಕು” ಕುರಿತ ಸಂಶೋಧನೆಗಳ ಸಂಖ್ಯೆಯಲ್ಲಿ ಆಗಿರುವ ಹೆಚ್ಚಳ ಗಣನೀಯ. ಇವುಗಳ ಫಲಿತಾಂಶಗಳು ಅಚ್ಚರಿಯ ಮತ್ತು ಕಣ್ಣು ತೆರೆಸುವ ಸಂಗತಿಗಳನ್ನು ಹೊರಗೆಡವಿವೆ.
ಯು.ಕೆ. (ಯುನೈಟೆಡ್ ಕಿಂಗ್‌ಡಮ್)ನಲ್ಲಿ ನಡೆಸಲಾದ ಸಂಶೋಧನೆಯಲ್ಲಿ ವಿದ್ಯುತ್-ಅಯಸ್ಕಾಂತೀಯ ಮೆದುಳು ಸ್ಕಾನ್‌ಗಳನ್ನು ಮತ್ತು ಹೃದಯ ಬಡಿತದ ಮೊನಿಟರುಗಳನ್ನು ಬಳಸಿದರು - ವಿವಿಧ ಚೋದನೆಗಳಿಂದ (ಸ್ಟಿಮುಲೈ) ಉಂಟಾಗುವ “ಖುಷಿ"ಯ ಮೌಲ್ಯಮಾಪನ ಮಾಡಲಿಕ್ಕಾಗಿ. ಅಂದರೆ, ಸಂಶೋಧನೆಯಲ್ಲಿ ಭಾಗವಹಿಸಿದವರು ವಿವಿಧ ಸಂಗತಿಗಳನ್ನು ಕಾಣುವಂತೆ, ಕೇಳುವಂತೆ ಅಥವಾ ಬೇರೆಬೇರೆ ಚಟುವಟಿಕೆಗಳನ್ನು ಮಾಡುವಂತೆ ನಿರ್ದೇಶಿಸಿದರು.
ಆ ಸಂಶೋಧನೆಯಲ್ಲಿ ಉಳಿದ ಎಲ್ಲವನ್ನೂ ಮೀರಿ, ಎದ್ದು ಕಾಣಿಸಿದ ಒಂದೇ ಒಂದು ಸಂಗತಿ: "ನಗುವುದು". ನಕ್ಕಾಗ ಭಾಗಿಗಳಿಗೆ ಒಂದೇ ಸಲ 2,000 ಚಾಕೋಲೇಟ್ ಬಾರ್-ಗಳನ್ನು ತಿಂದಷ್ಟು ಸಂತೋಷವಾಯಿತು. ಇದು ರೂಪಾಯಿ 80 ಲಕ್ಷ ಹಣ ಸ್ವೀಕರಿಸಿದ ಖುಷಿಗೆ ಸಮಾನವಾಗಿತ್ತು!
ನಿಮ್ಮ ನಗು, ನಿಮ್ಮಲ್ಲಿ ಅದ್ಭುತ ಬದಲಾವಣೆಗಳನ್ನು ಉಂಟುಮಾಡುತ್ತದೆ. ಉದಾಹರಣೆಗೆ, ನೀವು ಖುಷಿಯಾಗಿ ಇಲ್ಲದಿದ್ದರೂ ನಿಮ್ಮ ನಗು ನಿಮ್ಮಲ್ಲಿ ಹಿತವಾದ ಭಾವ ಉಂಟುಮಾಡುತ್ತದೆ. ಮ್ಯುನಿಚಿನ ಎಕ್-ನಿಷೆ ವಿಶ್ವವಿದ್ಯಾಲಯ 2009ರಲ್ಲಿ ನಡೆಸಿದ ಸಂಶೋಧನೆ ಖಚಿತ ಪಡಿಸಿದ ಒಂದು ಸಂಗತಿ: ನಿಮ್ಮ ಈಗಿನ ಮೂಡ್ ಏನೇ ಆಗಿರಲಿ; ನೀವು ನಕ್ಕಾಗ ನಿಮ್ಮ ಮೆದುಳಿನ “ಸಂತೋಷದ ನರಜಾಲ” ಸಕ್ರಿಯವಾಗುತ್ತದೆ. ಅಂದರೆ, ನೀವು ನಿರುತ್ಸಾಹದಲ್ಲಿದ್ದಾಗ, ನಗುವುದರಿಂದಾಗಿ ನಿಮ್ಮ ಮೆದುಳು “ಖುಷಿಯ ಹಾರ್ಮೋನು"ಗಳನ್ನು ಉತ್ಪಾದಿಸುತ್ತದೆ. ಅದಕ್ಕಾಗಿಯೇ “ನೀವು ಖುಷಿಯಾಗಿ ಇಲ್ಲದಿದ್ದರೂ, ಖುಷಿಯಾಗಿ ಇರುವಂತೆ ನಟಿಸಿದರೆ, ಕ್ರಮೇಣ ನಿಮ್ಮಲ್ಲಿ ಖುಷಿಯ ಭಾವ ತುಂಬುತ್ತದೆ” ಎಂಬ ಸೂತ್ರ ಚಾಲ್ತಿಯಲ್ಲಿದೆ.
ನಗು ನಿಮ್ಮ ಆಯುಷ್ಯವನ್ನೂ ಸೂಚಿಸುತ್ತದೆ ಎಂಬುದು ಇನ್ನೊಂದು ಸಂಶೋಧನೆಯ ಫಲಿತಾಂಶ. ಯುಎಸ್‌ಎ ದೇಶದ ಮಿಚಿಗನಿನ ಡೆಟ್ರಾಯ್ಟಿನ ವೇಯ್ನೆ ಸ್ಟೇಟ್ ವಿಶ್ವವಿದ್ಯಾಲಯದ ಸಂಶೋಧಕರು 1952ರಿಂದೀಚೆಗಿನ ಬೇಸ್‌ಬಾಲ್‌ನ ಪ್ರಧಾನ ಲೀಗ್ (ಸರಣಿ)ಗಳ ಆಟಗಾರರ ಫೋಟೋಗಳನ್ನು 2010ರಲ್ಲಿ ಪರಿಶೀಲಿಸಿದರು. ಅವರಿಗೆ ಕಂಡುಬಂದ ಸಂಗತಿ: ಬೇಸ್‌ಬಾಲ್ ಆಡುವಾಗ ನಗು ತೋರದಿದ್ದ ಆಟಗಾರರು ಸರಾಸರಿ 72.9 ವರುಷ ಬದುಕಿದರೆ, ಆಟದುದ್ದಕ್ಕೂ ನಗುತ್ತಿದ್ದ ಆಟಗಾರರು ಸರಾಸರಿ 79.9 ವರುಷ ಬದುಕಿದ್ದರು!
ಯುನಿವರ್ಸಿಟಿ ಆಫ್ ಕ್ಯಾಲಿಫೋರ್ನಿಯಾ, ಬರ್ಕಲಿ, 30 ವರುಷ ಹಳೆಯ ವಾರ್ಷಿಕ ಸಂಚಿಕೆಯಲ್ಲಿದ್ದ ವಿದ್ಯಾರ್ಥಿಗಳ ಬಗ್ಗೆ ಅಧ್ಯಯನವೊಂದನ್ನು ನಡೆಸಿತು. ಅದಕ್ಕಾಗಿ, ಸುಖಸಂತೋಷದ ಪ್ರಮಾಣಕ (ಸ್ಟಾಂಡರ್ಡ್) ಪರೀಕ್ಷೆಗಳಲ್ಲಿ ಅವರ ಅಂಕಗಳು; ಇತರರ ದೃಷ್ಟಿಯಲ್ಲಿ ಅವರು ಎಷ್ಟು ಸ್ಫೂರ್ತಿದಾಯಕ ವ್ಯಕ್ತಿಗಳು (ಪ್ರತಿಯೊಬ್ಬರ ಸ್ಥಾನ); ಅವರ ವೈವಾಹಿಕ ಬದುಕು ಎಷ್ಟು ಆನಂದದಾಯಕವಾಗಿದೆ ಎಂಬುದರ ಸೂಚ್ಯಂಕ - ಇವೆಲ್ಲದರ ಅಂಕಗಳನ್ನು ಹೋಲಿಸಿದಾಗ ಹೊರಬಿದ್ದ ಫಲಿತಾಂಶ: ಇವೆಲ್ಲದರಲ್ಲಿಯೂ ಬಾಯ್ತುಂಬ ನಗುವ ವಿದ್ಯಾರ್ಥಿಗಳು ಗಳಿಸಿದ “ಅಂಕಗಳು” ಗರಿಷ್ಠ!
ಅಂತಿಮವಾಗಿ, ಸಂಶೋಧನೆಗಳು ತಿಳಿಸುವ ಸಂಗತಿ: ನೀವು ನಕ್ಕಾಗ ಇತರರಿಗೆ ಚೆನ್ನಾಗಿ ಕಾಣಿಸುತ್ತೀರಿ. ಅದಕ್ಕಾಗಿಯೇ, ಫೋಟೋ ತೆಗೆಯುವಾಗ, ಫೋಟೋಗ್ರಾಫರರು “ಸ್ಮೈಲ್ ಪ್ಲೀಸ್” ಎನ್ನುತ್ತಿರುತ್ತಾರೆ. ನಿಮ್ಮ ನಗುವನ್ನು ಗಮನಿಸುವ ಇತರರಿಗೆ ನೀವು “ಇಷ್ಟದ ವ್ಯಕ್ತಿ"ಗಳಾಗಿ ಮತ್ತು ವಿನಯ ಸಂಪನ್ನರಾಗಿ ಕಾಣಿಸುತ್ತೀರಿ. ನಿಮ್ಮ ನಗುವಿನಿಂದ ಖುಷಿ ಪಡುವ ಇತರರು ನೀವು ಸಮರ್ಥ ವ್ಯಕ್ತಿಯೆಂದು ಭಾವಿಸುತ್ತಾರೆ. ಆದ್ದರಿಂದ, ನೀವು ತರಬೇತಿಗಳನ್ನು ನಡೆಸುವಾಗ, ಉಪನ್ಯಾಸ ನೀಡುವಾಗ ಮತ್ತು ಕಚೇರಿಯಲ್ಲಿ ವ್ಯವಹರಿಸುವಾಗ ನಗುವುದು ಬಹಳ ಮುಖ್ಯ.
ಇದೆಲ್ಲ ಸರಿ, ನಗುವಿನ ವಿಚಾರದಲ್ಲಿ ನೀವು ಯಾವ ಗುಂಪಿಗೆ ಸೇರಲು ಬಯಸುತ್ತೀರಿ?
-ನಮ್ಮಲ್ಲಿ ಶೇಕಡಾ 14 ಜನರು ದಿನದಲ್ಲಿ 5ಕ್ಕಿಂತ ಕಡಿಮೆ ಸಲ ನಗುತ್ತಾರೆ. ಈ ಗುಂಪಿಗೆ ಸೇರಲು ಯಾರೊಬ್ಬರೂ ಬಯಸುವುದಿಲ್ಲ.
-ಶೇಕಡಾ 30 ಜನರು ದಿನದಲ್ಲಿ 20ಕ್ಕಿಂತ ಹೆಚ್ಚು ಸಲ ನಗುತ್ತಾರೆ. ಈ ಗುಂಪಿಗೆ ಸೇರಲು ಬಹುಪಾಲು ಜನರು ಬಯಸುತ್ತಾರೆ.
-ಇನ್ನೊಂದು ಗುಂಪಿದೆ: ಈ ಗುಂಪಿನವರು ನಗುವುದರಲ್ಲಿ ಮುಂಚೂಣಿಯಲ್ಲಿರುತ್ತಾರೆ ಅಂದರೆ ದಿನದಲ್ಲಿ 400 ಸಲ ನಗುತ್ತಾರೆ. ಅವರೇ ಮಕ್ಕಳು.
ಪ್ರಾಕೃತಿಕ ವಿಕೋಪಗಳಿಂದಾಗಿ, ರೋಗ ದಾಳಿಗಳಿಂದಾಗಿ, ಸಮಾಜದಲ್ಲಿ ತುಂಬಿರುವ ನಕಾರಾತ್ಮಕತೆಯಿಂದಾಗಿ ಮತ್ತು ವೈಯುಕ್ತಿಕ ಬದುಕಿನ ಸವಾಲುಗಳಿಂದಾಗಿ ಮುಖದಲ್ಲಿ ಮುಗಳ್ನಗು ಅರಳಿಸುವುದು ಸುಲಭವಲ್ಲ. ಆದರೂ, ಮುಖದಲ್ಲಿ ನಗುವಿರಬೇಕು. ಯಾಕೆಂದರೆ ನಗುವಿನ ಲಾಭಗಳು ಹಲವು: ನಿಮ್ಮ ನಗು ನೀವು ಖುಷಿಯಿಂದ ಇರಲು ಕಾರಣ; ನೀವು ಚೆನ್ನಾಗಿ ಕಾಣಲು ಕಾರಣ ಮತ್ತು ನಿಮ್ಮ ವೈವಾಹಿಕ ಬದುಕು ಆನಂದದಾಯಕವಾಗಿರಲು ಕಾರಣ.
ಇವನ್ನೆಲ್ಲ ಮಾನ್ಯ ಡಿ.ವಿ. ಗುಂಡಪ್ಪನವರು “ಮಂಕುತಿಮ್ಮನ ಕಗ್ಗ”ದ ಮುಕ್ತಕವೊಂದರಲ್ಲಿ ಮನಮುಟ್ಟುವಂತೆ ಹೇಳಿದ್ದಾರೆ:
ನಗುವು ಸಹಜದ ಧರ್ಮ; ನಗಿಸುವುದು ಪರಧರ್ಮ
ನಗುವ ಕೇಳುತ ನಗುವುದತಿಶಯದ ಧರ್ಮ
ನಗುವ ನಗಿಸುವ ನಗಿಸಿ ನಗುತ ಬಾಳುವ ವರವ
ಮಿಗೆ ನೀನು ಬೇಡಿಕೊಳೊ - ಮಂಕುತಿಮ್ಮ
ಜಗತ್ತಿಗೆ ಭಾರತದ ಅಮೋಘ ಕೊಡುಗೆ ಗಣಿತದ “ಶೂನ್ಯ” ಎಂಬುದು ನಿರ್ವಿವಾದ. ಆದರೆ, ಇದರ ಬಗ್ಗೆ ವಾದ ಮಾಡುವವರೂ ಇದ್ದಾರೆ. ಆದ್ದರಿಂದ, ಇದಕ್ಕೆ ಪುರಾವೆ ಯಾವುದು? ಎಂಬುದರ ಬಗ್ಗೆ ತಿಳಿಯೋಣ.
ರೈತನೊಬ್ಬ 1881ರ ಬೇಸಗೆಯಲ್ಲಿ ಪ್ರಾಚೀನ ತಕ್ಷಿಲಾ ವಿಶ್ವವಿದ್ಯಾಲಯದ ಅವಶೇಷಗಳ ಹತ್ತಿರದ ಬಕ್ಷಾಲಿ (ಈಗ ಪಾಕಿಸ್ತಾನದ ಭಾಗ) ಎಂಬಲ್ಲಿ ಕಲ್ಲುಗಳಿಂದ ಸುತ್ತುವರಿದಿದ್ದ ಜಾಗದಲ್ಲಿ ಅಗೆಯುತ್ತಿದ್ದ. ಆಗ ಅವನಿಗೆ ಪುರಾತನ ಕಾಲದ ಹಸ್ತಪ್ರತಿಯೊಂದು ಮಣ್ಣಿನಡಿಯಲ್ಲಿ ಸಿಕ್ಕಿತು. ಅದರಲ್ಲಿ ಭೂರ್ಜ ಮರದ ತೊಗಟೆಯ ಸುಮಾರು 70 ಹಾಳೆಗಳಿದ್ದವು. ಆ ಹಾಳೆಗಳಲ್ಲಿ ಶಾಯಿಯ ಕೈಬರಹಗಳು ತುಂಬಿದ್ದವು. ಬಹುಪಾಲು ಹಾಳೆಗಳು ತೀರಾ ಹಳೆಯವು ಆದ ಕಾರಣ ಮುಟ್ಟಿದರೆ ಪುಡಿಪುಡಿಯಾಗುತ್ತಿದ್ದವು. ಆ ನಾಜೂಕಾದ ಹಸ್ತಪ್ರತಿಯನ್ನು ಪರಿಶೀಲನೆ ಮತ್ತು ಭಾಷಾಂತರಕ್ಕಾಗಿ ಅಧಿಕಾರಿಗಳಿಗೆ ಹಸ್ತಾಂತರಿಸಲಾಯಿತು. ಅದು ಜಗತ್ತನ್ನೇ ದಂಗುಬಡಿಸಿದ ಶೋಧಕ್ಕೆ ಕಾರಣವಾಯಿತು.
ಅದೊಂದು ಗಣಿತದ ಕೈಪಿಡಿಯಾಗಿತ್ತು. ಬಹುಶಃ ವರ್ತಕರ ಮತ್ತು ವ್ಯಾಪಾರಿಗಳ ಬಳಕೆಗೆ ಅಗತ್ಯವಾದ ಗಣಿತದ ನಿಯಮಗಳು, ಸಮಸ್ಯೆಗಳು ಮತ್ತು ನಿರ್ದೇಶನಗಳು ಅದರಲ್ಲಿ ತುಂಬಿದ್ದವು. ಬೌದ್ಧರ ಸಂಸ್ಕೃತ, ಪ್ರಾಕೃತಿ ಮತ್ತು ಪ್ರಾಚೀನ ಕಾಶ್ಮೀರಿ ಭಾಷೆಯಲ್ಲಿ ಅದನ್ನು ಬರೆಯಲಾಗಿತ್ತು. ಸಮಸ್ಯೆಗಳನ್ನು ಪದ್ಯದ ರೂಪದಲ್ಲಿ ಮತ್ತು ಪರಿಹಾರಗಳನ್ನು ಎಚ್ಚರಿಕೆಯಿಂದ ಆಯ್ದ ಶಬ್ದಗಳ ಗದ್ಯದಲ್ಲಿ, ವ್ಯಾಪಕ ವಿವರಣೆಗಳೊಂದಿಗೆ ದಾಖಲಿಸಲಾಗಿತ್ತು. ಅದರಲ್ಲಿದ್ದ ವಿಷಯಗಳು: ಭಿನ್ನರಾಶಿಗಳು, ಲಾಭ ಮತ್ತು ನಷ್ಟದ ಸಮಸ್ಯೆಗಳು, ಕ್ಷೇತ್ರಗಣಿತ, ರೇಖೀಯ ಸಮೀಕರಣಗಳು, ವರ್ಗಮೂಲಗಳು ಮತ್ತು ಗುಣೋತ್ತರ ಶ್ರೇಢಿ. ಈ ಹಸ್ತಪ್ರತಿ ಕ್ರಿ.ಶ. ಮೂರು ಅಥವಾ ನಾಲ್ಕನೇ ಶತಮಾನಕ್ಕೆ ಸೇರಿದ್ದು ಎಂದು ಅಂದಾಜಿಸಲಾಗಿದೆ. ಅಂದರೆ, ಇದು ಈ ವರೆಗೆ ಪತ್ತೆಯಾಗಿರುವ ಭಾರತೀಯ ಗಣಿತದ ಪಠ್ಯಗಳಲ್ಲಿ ಅತ್ಯಂತ ಪ್ರಾಚೀನವಾದದ್ದು!
ಅಷ್ಟೇ ಅಲ್ಲ. ಈ ಹಸ್ತಪ್ರತಿಯಲ್ಲೊಂದು ಅದ್ಭುತ ಸಂಗತಿಯಿತ್ತು: ಹಸ್ತಪ್ರತಿಯ ಉದ್ದಕ್ಕೂ, ದೊಡ್ಡದೊಡ್ಡ ಸಂಖ್ಯೆಗಳ ನಡುವೆ ಅಲ್ಲಲ್ಲಿ, ಭಿನ್ನರಾಶಿಗಳ ಅಡ್ಡಗೆರೆಗಳ ಮೇಲೆ ಮತ್ತು ಕೆಳಗೆ ಹಾಗೂ ದೀರ್ಘ ಗುಣಾಕಾರ ಮೊತ್ತಗಳಲ್ಲಿ “ದೊಡ್ಡ ಬಿಂದು”ಗಳು ಇದ್ದವು.
ಅವು “ಶೂನ್ಯ”ದ ಸಂಕೇತಗಳಾಗಿದ್ದವು. ಅವನ್ನು ಪರಿಶೀಲಿಸಿದಾಗ, ಈ ಹಸ್ತಪ್ರತಿಯನ್ನು ಮೂಲದಲ್ಲಿ ಬರೆದ “ವಶಿಷ್ಠರ ಮಗ ಹಾಸಿಕರ ಬಳಕೆಗಾಗಿ ಗಣಿತ ತಜ್ಞರ ರಾಜ ಚಾಜಕರ ಮಗ ಬರೆದದ್ದು” ಎಂದು ವಿವರಿಸಲಾದ ಬ್ರಾಹ್ಮಣನು ಗಣಿತದ ಲೆಕ್ಕಾಚಾರಗಳಿಗಾಗಿ ಬಹಳ ವಿಶ್ವಾಸದಿಂದ ಶೂನ್ಯವನ್ನು ಉಪಯೋಗಿಸಿರುವುದು ಕಂಡುಬರುತ್ತದೆ. ಈ ವರೆಗೆ ಪತ್ತೆಯಾಗಿರುವ ಅತಿ ಮುಖ್ಯ ಅಂಕೆ “ಶೂನ್ಯ”ದ ಸಂಕೇತಗಳಲ್ಲಿ ಇದುವೇ ಅತ್ಯಂತ ಪುರಾತನವಾದದ್ದು!
ಪ್ರಾಚೀನ ಕಾಲದಿಂದಲೂ ಭಾರತದಲ್ಲಿ ಗಣಿತ ಶಾಸ್ತ್ರ ಅಥವಾ ಗಣಿತ ವಿಜ್ಞಾನ ಭಾರೀ ಮುಂದುವರಿದ ವಿಷಯವಾಗಿತ್ತು. ತತ್ತ್ವ ಶಾಸ್ತ್ರದ ಪರಿಕಲ್ಪನೆಗಳು, ಉನ್ನತ ಖಗೋಳ ವಿಜ್ಞಾನ ಮತ್ತು ಜಾಣ್ಮೆಯ ಸಂಖ್ಯಾ ಕೌಶಲ್ಯಗಳ ಸಮ್ಮಿಲನದಿಂದ ಪ್ರಾಚೀನ ಭಾರತೀಯ ಗಣಿತ ತಜ್ಞರು ಗಣಿತದ ಮೂಲಭೂತ ಪರಿಕಲ್ಪನೆಗಳನ್ನು ರೂಪಿಸಲು ಸಮರ್ಥರಾಗಿದ್ದರು; ಅವನ್ನು ಇಂದಿಗೂ ಉಪಯೋಗಿಸಲಾಗುತ್ತಿದೆ ಎಂಬುದೇ ಭಾರತದ ಹೆಗ್ಗಳಿಕೆ.
ವೇದಗಳ ಕಾಲಮಾನದಲ್ಲಿ, ಸಂಖ್ಯೆಗಳು ಕೇವಲ ಲೆಕ್ಕಾಚಾರಕ್ಕೆ ಬಳಕೆಯಾಗುತ್ತಿರಲಿಲ್ಲ; ಗದ್ಯಗಳ ಸಂಪುಟಗಳಲ್ಲಿಯೂ ಅವನ್ನು ಉಪಯೋಗಿಸಲಾಗುತ್ತಿತ್ತು. ಪುರಾತನ ಜ್ಯಾಮಿತೀಯ ಕೈಪಿಡಿಗಳ ಮಾರ್ಗದರ್ಶಿ ಸೂತ್ರಗಳ ಅನುಸಾರ ಯಜ್ಞಪೀಠ ಮತ್ತು ಬಲಿಪೀಠಗಳನ್ನು ನಿರ್ಮಿಸಲಾಗುತ್ತಿತ್ತು. ಕ್ರಿ. ಶ. 5ನೇ ಶತಮಾನದ ಹೊತ್ತಿಗೆ, ನಮಗೆ ಈಗ ಪರಿಚಿತವಾಗಿರುವ ಸಂಖ್ಯೆಗಳ ಸಾಂಕೇತಿಕ ಪದ್ಧತಿ ಬಳಕೆಗೆ ಬಂದಿತ್ತು; ದಶಮಾಂಶ ಬಿಂದುವನ್ನು ಆಧರಿಸಿ, ಬೃಹತ್ ಸಂಖ್ಯೆಗಳ ಬಳಕೆ ಸಾಧ್ಯವಾಗಿಸಿದ ದಶಮಾಂಶ ಪದ್ಧತಿಯನ್ನು ಆಗಲೇ ಶೋಧಿಸಲಾಗಿತ್ತು. ಭಾರತೀಯ ಗಣಿತ ತಜ್ಞರು ಬೀಜಗಣಿತದ ಆರಂಭದ ರೂಪಗಳನ್ನು ಆದಾಗಲೇ ಆವಿಷ್ಕರಿಸಿದ್ದರು. ಸುಪ್ರಸಿದ್ಧ ಖಗೋಳ ಶಾಸ್ತ್ರಜ್ಞ ಆರ್ಯಭಟ ಅವರ ದಾಖಲಿಸಲಾದ ಸಾಧನೆಗಳಲ್ಲಿ ದಶಮಾಂಶದ ನಾಲ್ಕನೆಯ ಸ್ಥಾನದ ವರೆಗೆ ಕರಾರುವಕ್ಕಾದ “ಪೈ”ಯ ಬೆಲೆಯೂ ಒಂದಾಗಿದೆ ಎಂಬುದು ಗಮನಾರ್ಹ. ಜೈನರ ಸಂಪ್ರದಾಯಗಳಲ್ಲಿ ಕಾಸ್ಮೋಸಿನ ಬಗ್ಗೆ ತೀವ್ರ ಆಸಕ್ತಿ ಜ್ಯಾಮಿತಿ ಮತ್ತು ಬಹು ದೊಡ್ಡ ಸಂಖ್ಯೆಗಳ ಅಂಕಗಣಿತದ ಬಗೆಗಿನ ಚರ್ಚೆಗಳಿಗೆ ಮುನ್ನುಡಿಯಾಯಿತು.
ಶೂನ್ಯದ ಸಂಗತಿಯಂತೂ ದೊಡ್ಡ ವಿಸ್ಮಯ. ಇದರ ಸಂಶೋಧಕ ಯಾರೆಂಬುದು ಇಂದಿಗೂ ತಿಳಿದಿಲ್ಲ. ಕ್ರಿ.ಪೂ. 2ನೇ ಶತಮಾನದ ಸಂಸ್ಕೃತ ಪಠ್ಯದ ಕರ್ತೃ ಪಿಂಗಳ ಶೂನ್ಯ ಅಥವಾ ಖಾಲಿ ಎಂದು ತಾನು ಕರೆಯುವ ಸಂಕೇತವನ್ನು ಬಳಸಿದ್ದಾನೆ; ಇದು ಪ್ರಾಯಶಃ ಶೂನ್ಯ ಅಥವಾ ಖಾಲಿ ಎಂಬ ಪರಿಕಲ್ಪನೆಯ ಪ್ರಪ್ರಥಮ ಉಲ್ಲೇಖ. ಖಗೋಳ ಶಾಸ್ತ್ರಜ್ಞರು ಹಾಗೂ ಗಣಿತ ತಜ್ಞರಾದ ವರಾಹ ಮಿಹಿರ ಮತ್ತು ಬ್ರಹ್ಮಗುಪ್ತ ಬರೆದ (6ನೇ ಮತ್ತು 7ನೇ ಶತಮಾನದಲ್ಲಿ) ಪಠ್ಯಗಳು ಅವರು ಆಗಲೇ ಶೂನ್ಯವನ್ನು ಬಳಸುತ್ತಿದ್ದರು ಎಂಬುದನ್ನು ತೋರಿಸುತ್ತವೆ. ಇವುಗಳಲ್ಲಿ ಬಹುಪಾಲು ಪಠ್ಯಗಳು, ಆಗಿನ ಕಾಲಕ್ಕಿಂತ ಬಹಳ ಹಿಂದೆಯೇ ವಿದ್ವಾಂಸರು ಗಳಿಸಿದ್ದ ಜ್ಞಾನವನ್ನು ಆಧರಿಸಿವೆ; ಆಗಿನ ವಿದ್ವಾಂಸರು ಆ ಜ್ಞಾನವನ್ನು ತಮ್ಮ ನೆನಪಿನಲ್ಲಿ ರಕ್ಷಿಸಿದ್ದು, ಅನಂತರ ಮೌಖಿಕವಾಗಿ ತಲೆಮಾರಿನಿಂದ ತಲೆಮಾರಿಗೆ ದಾಟಿಸಿದರು. ತದನಂತರ, ಕೆಲವರು ಆ ಜ್ಞಾನವನ್ನೆಲ್ಲ ಲಿಖಿತ ರೂಪದಲ್ಲಿ ದಾಖಲಿಸಿದರು.
ಮಿಸಪೋಟೆಮಿಯಾ ಮತ್ತು ಮಾಯಾ ಇತ್ಯಾದಿ ನಾಗರಿಕತೆಗಳೂ “ಶೂನ್ಯ”ವನ್ನು ಒಂದು ಪರಿಕಲ್ಪನೆಯಾಗಿ ಸೂಚಿಸಲು ಒಂದು ಸಂಕೇತವನ್ನು ಬಳಸುವ ಐಡಿಯಾವನ್ನು ಅರ್ಥ ಮಾಡಿಕೊಂಡಿದ್ದರು. ಅದೇನಿದ್ದರೂ, ಸಣ್ಣ ವೃತ್ತವನ್ನು ಶೂನ್ಯದ ಸಂಕೇತವಾಗಿ ವ್ಯಾಪಕವಾಗಿ ಉಪಯೋಗಿಸಿದ್ದು ಭಾರತದಲ್ಲಿ. ಮಾತ್ರವಲ್ಲ, ಗಣಿತದ ಲೆಕ್ಕಾಚಾರಗಳಿಗೆ ಪ್ರಪ್ರಥಮವಾಗಿ ಶೂನ್ಯವನ್ನು ಬಳಸಿದ್ದು ಭಾರತದಲ್ಲಿ. ಒಂದೇ ಏಟಿಗೆ, ದೊಡ್ಡದೊಡ್ಡ ಸಂಖ್ಯೆಗಳ ಗಣನೆ ಮತ್ತು ಲೆಕ್ಕಾಚಾರಗಳನ್ನು ಸುಲಭವಾಗಿಸಿದ್ದು ಶೂನ್ಯ ಎಂಬ ಸಂಖ್ಯೆ. ಅನಂತರ, ಪರ್ಶಿಯನ್ ಮತ್ತು ಅರಬ್ ವಿದ್ವಾಂಸರು ಹಾಗೂ ವರ್ತಕರ ಮೂಲಕ ಶೂನ್ಯ ಇತ್ಯಾದಿ ಗಣಿತ ವಿಜ್ಞಾನದ ಐಡಿಯಾಗಳು ಭಾರತದಿಂದ ಪಶ್ಚಿಮ ಏಷ್ಯಾವನ್ನು ತಲಪಿದವು.
ಈಗ ಇಂಗ್ಲೆಂಡಿನ ಆಕ್ಸ್-ಫರ್ಡ್ ವಿಶ್ವವಿದ್ಯಾಲಯದ ಬೋಡ್ಲಿಯನ್ ಗ್ರಂಥಾಲಯದಲ್ಲಿ ಬಕ್ಷಾಲಿಯ ಹಸ್ತಪ್ರತಿಯನ್ನು ಸಂರಕ್ಷಿಸಿ ಇಡಲಾಗಿದೆ. ವಿಶೇಷವಾದ ಪಾರದರ್ಶಕ ಪೋಲಿಯೋದಲ್ಲಿ ಅದರ ನಾಜೂಕಾದ ಹಾಳೆಗಳನ್ನು ಇರಿಸಲಾಗಿದೆ; ಇದರಿಂದಾಗಿ, ಅವನ್ನು ಕೈಯಲ್ಲಿ ಮುಟ್ಟದೆ ಪರಿಶೀಲಿಸಬಹುದಾಗಿದೆ.
“ಶೂನ್ಯ” ಎಂಬ ಪರಿಕಲ್ಪನೆಯಿಲ್ಲದ ಜಗತ್ತನ್ನು ಈಗ ಕಲ್ಪಿಸಲೂ ಸಾಧ್ಯವಿಲ್ಲ. ಗಣಿತದ ಚರಿತ್ರೆಯಲ್ಲೇ ಅತ್ಯಂತ ಮಹತ್ವದ ಆವಿಷ್ಕಾರವಾದ “ಶೂನ್ಯ”ದ ಪರಿಕಲ್ಪನೆಯ ತವರೂರು ಭಾರತ ಎಂದು ಹೆಮ್ಮೆಯಿಂದ ಹೇಳೋಣ. ಇದಕ್ಕೆ ಭಾರತದ ಅತಿ ಪುರಾತನ ಪಠ್ಯವಾದ ಬಕ್ಷಾಲಿಯ ಹಸ್ತಪ್ರತಿ ನಿಸ್ಸಂಶಯವಾದ ಲಿಖಿತ ಪುರಾವೆ ಎಂದು ತಿಳಿದಿರೋಣ.
ಆಧಾರ: “ಎ ಚಿಲ್ಡ್ರನ್ಸ್ ಹಿಸ್ಟರಿ ಆಫ್ ಇಂಡಿಯಾ ಇನ್ 100 ಆಬ್ಜೆಕ್ಟ್ಸ್” ಪುಸ್ತಕ
ಹಿಂದೂ ಸಂಸ್ಕೃತಿ ಮತ್ತು ಧಾರ್ಮಿಕ ಸಾಹಿತ್ಯದಲ್ಲಿ 108 ಸಂಖ್ಯೆಗೆ ಬಹಳ ಮಹತ್ವವಿದೆ. ಅದು ಯಾಕೆಂದು ತಿಳಿಯೋಣ.
1)ಒಂದು ನಿಮಿಷದಲ್ಲಿ ನಾವು ಸುಮಾರು 15 ಬಾರಿ ಉಸಿರಾಡುತ್ತೇವೆ. ಅಂದರೆ ಒಂದು ಗಂಟೆಯಲ್ಲಿ 900 ಬಾರಿ, 12 ಗಂಟೆಗಳಲ್ಲಿ 10,800 ಬಾರಿ ಮತ್ತು ಒಂದು ದಿನದಲ್ಲಿ 10,800 x 2 ಬಾರಿ ಉಸಿರಾಡುತ್ತೇವೆ. ಒಂದು ದಿನದಲ್ಲಿ 24 ಗಂಟೆಗಳಿವೆ. ನಮ್ಮ ದಿನನಿತ್ಯದ ಕೆಲಸಕಾರ್ಯಗಳಿಗೆ ಅರ್ಧ ದಿನವನ್ನು ತೆಗೆದಿರಿಸಿದರೆ, ಉಳಿದ ಅರ್ಧ ದಿನವನ್ನು ನಮ್ಮ ಇಷ್ಟದೇವರ ಆರಾಧನೆಯಲ್ಲಿ ಕಳೆಯಬಹುದು. ಆದ್ದರಿಂದ, ನಮ್ಮ ಇಷ್ಟದೇವರ ಮಂತ್ರ ಪಠಣ ಹಾಗೂ ಜಪವನ್ನು ಗರಿಷ್ಠ 10,800 ಸಲ ಮಾಡಬಹುದು. ಜಪದ ಸಂಪೂರ್ಣ ಪ್ರತಿಫಲ ಪಡೆಯಬೇಕೆಂದರೆ ಅದನ್ನು 108 ಸಲ ಮಾಡಬೇಕು. ಅದಕ್ಕಾಗಿಯೇ ಜಪಮಾಲೆಯಲ್ಲಿ 108 ಮಣಿಗಳಿವೆ. ಒಂದು ಜಪ ಒಂದು ಮಾಲೆಗೆ ಸಮ ಎಂದು ವೇದಗಳಲ್ಲಿ ಹೇಳಲಾಗಿದೆ. ಹಾಗಾಗಿ 108 ಜಪಗಳ ಆವರ್ತನೆ ಎಂದರೆ ಸಂಪೂರ್ಣ ಪ್ರತಿಫಲದ ಸಾಧನೆ.
2)ಬ್ರಹ್ಮಾಂಡದಲ್ಲಿ 27 ನಕ್ಷತ್ರಪುಂಜಗಳಿವೆ. ಪ್ರತಿಯೊಂದಕ್ಕೂ 4 ದಿಕ್ಕುಗಳಿವೆ. ಒಟ್ಟಾಗಿ 27x4 = 108. ಹಾಗಾಗಿ 108 ಸಂಖ್ಯೆ ಸಂಪೂರ್ಣ ಬ್ರಹ್ಮಾಂಡವನ್ನು ಆವರಿಸುವ ಶಕ್ತಿಯನ್ನು ಸಂಕೇತಿಸುತ್ತದೆ.
3)ಭಾರತೀಯ ಧರ್ಮಗ್ರಂಥಗಳ ಪ್ರಕಾರ, ಸಂಖ್ಯೆ 9 ಬ್ರಹ್ಮದೇವರನ್ನು (ಸೃಷ್ಟಿಕರ್ತ) ಪ್ರತಿನಿಧಿಸುತ್ತದೆ. ಗಣಿತ ಶಾಸ್ತ್ರದ ಅನುಸಾರ 9ರ ವಿಶೇಷತೆ ಕುತೂಹಲಕರ: 9ನ್ನು ಯಾವುದೇ ಅಂಕೆಯಿಂದ ಗುಣಿಸಿದರೂ ಅಂತಿಮವಾಗಿ ಸಿಗುವ ಫಲ 9.
9 x 1 = 9
9 x 2 = 18 (8 + 1 = 9)
9 x 3 = 27 (7 + 2 = 9)
9 x 12 = 108 (1 + 0 + 8 = 9)
4)ಹಿಂದೂ ಧರ್ಮದಲ್ಲಿ ಸಂಖ್ಯೆ 9 ಬಹಳ ಮುಖ್ಯ. ಋಷಿ ವ್ಯಾಸರು ರಚಿಸಿರುವ ಪುರಾಣಗಳ ಸಂಖ್ಯೆ 9 ಮತ್ತು ಮಹಾಪುರಾಣಗಳ (ಉಪನಿಷತ್ತು) ಸಂಖ್ಯೆ 108. ಮಹಾಭಾರತ ಮತ್ತು ಭಗವದ್ಗೀತೆಯಲ್ಲಿ ತಲಾ 18 ಅಧ್ಯಾಯಗಳಿವೆ. ಭಾಗವತದಲ್ಲಿ 108000 ಶ್ಲೋಕಗಳಿವೆ. 108ರ ಅಂಕೆಗಳನ್ನು ಕೂಡಿಸಿದಾಗ ಸಿಗುವುದು 9 ಮತ್ತು ಇದು ಬ್ರಹ್ಮನನ್ನು ಪ್ರತಿನಿಧಿಸುತ್ತದೆ. ಆದ್ದರಿಂದಲೇ, ಹಲವು ಭಾರತೀಯ ಧರ್ಮಗ್ರಂಥಗಳಲ್ಲಿ 9ಕ್ಕೆ ಸಂವಾದಿಯಾದ ಅಂಶಗಳಿವೆ.
5)ಭಾರತೀಯ ವೇದಗಳ ಅನುಸಾರ ಸೂರ್ಯನೂ ದೇವರು ಮತ್ತು ಸೂರ್ಯನಿಗೆ 12 ರಾಶಿಚಕ್ರ ಚಿಹ್ನೆಗಳಿವೆ. ಯಜುರ್ವೇದದಲ್ಲಿ ಸೂರ್ಯನು ಬ್ರಹ್ಮನಿಗೆ ಸಂಬಂಧಿಸಿದವನು ಎಂದು ಹೇಳಲಾಗಿದೆ. ಗಮನಿಸಿ: 12 x 9 = 108. ಆದ್ದರಿಂದ, ದೇವರ ಪ್ರಾರ್ಥನೆಗಳಲ್ಲಿ ಸಂಖ್ಯೆ 108 ಬಹಳ ಪವಿತ್ರವೆಂದು ಪರಿಗಣಿಸಲಾಗಿದೆ.
6)ಹೃದಯಚಕ್ರ: ನಮ್ಮ ದೇಹದ ಚಕ್ರಗಳು ಶಕ್ತಿರೇಖೆಗಳು ಸಂಧಿಸುವ ಸ್ಥಾನಗಳು. ಒಟ್ಟು 108 ಶಕ್ತಿರೇಖೆಗಳು ಸಂಧಿಸಿ ಹೃದಯಚಕ್ರವನ್ನು ರೂಪಿಸುತ್ತವೆ ಎಂದು ಹೇಳಲಾಗಿದೆ. ಸುಷುಮ್ನ ಚಕ್ರವು ಅತ್ಯುನ್ನತ ಸ್ಥಾನದ ಸಹಸ್ರಾರ ಚಕ್ರಕ್ಕೆ ಪ್ರಜ್ಞೆಯನ್ನು ಒಯ್ಯುತ್ತದೆ ಮತ್ತು ಇದು ಜ್ಞಾನೋದಯದ ದಾರಿ ಎನ್ನಲಾಗಿದೆ.
7)ಸಂಸ್ಕೃತ ಭಾಷೆ ಮತ್ತು 108: ಸಂಸ್ಕೃತ ಭಾಷೆಯ ಅಕ್ಷರಗಳ ಸಂಖ್ಯೆ 54. ಪ್ರತಿಯೊಂದು ಅಕ್ಷರಕ್ಕೂ ಶಿವ ಎಂಬ ಪುಲ್ಲಿಂಗ ಮತ್ತು ಶಕ್ತಿ ಎಂಬ ಸ್ರೀ ಲಿಂಗವಿದೆ. ಹಾಗಾಗಿ, ಇಲ್ಲಿಯೂ 54 x 2 = 108.
8)ಶ್ರೀಯಂತ್ರ: ಇದರಲ್ಲಿ 3 ರೇಖೆಗಳು ಸಂಧಿಸುವ 54 ಮರ್ಮಗಳು ಅಥವಾ ಮರ್ಮಸ್ಥಾನಗಳಿವೆ. ಪ್ರತಿಯೊಂದು ಮರ್ಮಸ್ಥಾನದಲ್ಲಿಯೂ ಪುಲ್ಲಿಂಗ ಮತ್ತು ಸ್ರೀಲಿಂಗ ಅಂಶಗಳಿವೆ. ಈ ರೀತಿಯಲ್ಲಿ ಶ್ರೀಯಂತ್ರ ಮತ್ತು ಮಾನವ ಶರೀರವನ್ನು ವ್ಯಾಖ್ಯಾನಿಸುವ 108 ಬಿಂದುಗಳಿವೆ.
9)ಗಂಗಾ ನದಿ: ಹಿಂದೂಗಳಿಗೆ ಪರಮ ಪವಿತ್ರವಾದ ನದಿ ಗಂಗಾ. ಮನುಷ್ಯನ ಪ್ರಾಣ ಹೋಗುವ ಹೊತ್ತಿನಲ್ಲಿ ಬಾಯಿಗೆ ಗಂಗಾ ಜಲ ಬಿಟ್ಟರೆ ಮುಕ್ತಿ ಸಿಗುತ್ತದೆ ಎಂಬ ನಂಬಿಕೆ. ಈ ವಿಸ್ಮಯವನ್ನು ಗಮನಿಸಿ: ಗಂಗಾ ನದಿ 12 ಡಿಗ್ರಿ ರೇಖಾಂಶದಲ್ಲಿ (79ರಿಂದ 91) ಮತ್ತು 9 ಡಿಗ್ರಿ ಅಕ್ಷಾಂಶದಲ್ಲಿ (22ರಿಂದ 31) ವ್ಯಾಪಿಸಿದೆ. ಇಲ್ಲಿಯೂ 12 x 9 = 108 ಎಂಬುದು ನಂಬಲೇ ಬೇಕಾದ ಸತ್ಯ.
10)ಸೂರ್ಯ, ಭೂಮಿ ಮತ್ತು ಚಂದ್ರ: ಸೂರ್ಯನ ವ್ಯಾಸವು ಭೂಮಿಯ ವ್ಯಾಸದ 108 ಪಟ್ಟು ಜಾಸ್ತಿ! ಸೂರ್ಯನಿಂದ ಭೂಮಿಗಿರುವ ದೂರವು ಸೂರ್ಯನ ವ್ಯಾಸದ 108 ಪಟ್ಟು. ಹಾಗೆಯೇ ಭೂಮಿ ಮತ್ತು ಚಂದ್ರನ ಸರಾಸರಿ ಅಂತರವು ಚಂದ್ರನ ವ್ಯಾಸದ 108 ಪಟ್ಟು!
11)ತಂತ್ರಶಾಸ್ತ್ರದ ಅನುಸಾರ ನಮ್ಮ ಸರಾಸರಿ ಉಸಿರಾಟ ದಿನಕ್ಕೆ 21,600. ಇದರಲ್ಲಿ 10,800 ಸೂರ್ಯಶಕ್ತಿಯ ಉಸಿರಾಟ ಮತ್ತು 10,800 ಚಂದ್ರಶಕ್ತಿಯ ಉಸಿರಾಟ. 108ನ್ನು 100ರಿಂದ ಗುಣಿಸಿದರೆ 10,800. ಇದರ 2 ಪಟ್ಟು 21,600.
12)ಪ್ರಾಣಾಯಾಮದಲ್ಲಿ ಮತ್ತು ಧ್ಯಾನದಲ್ಲಿ ತಲಾ 108 ವಿಧಗಳಿವೆ. ಹಾಗೆಯೇ, ಭಾರತೀಯ ನೃತ್ಯದಲ್ಲಿ 108 ಪ್ರಕಾರಗಳಿವೆ.
ಸಾವಿರಾರು ವರುಷಗಳ ಮಹಾನ್ ಪಯಣದಲ್ಲಿ ಮುನ್ನಡೆಯುತ್ತಿರುವ ಹಿಂದೂ ಧರ್ಮ ದೇವರ ಸಾಕ್ಷಾತ್ಕಾರಕ್ಕೆ 108 ದಾರಿಗಳಿವೆ ಎಂದು ನಂಬುತ್ತದೆ. ಪ್ರತಿಯೊಂದು ಆತ್ಮವೂ ಮೋಕ್ಷದತ್ತ ತನ್ನ ಮಹಾನ್ ಯಾನದಲ್ಲಿ 108 ಹಂತಗಳನ್ನು ದಾಟುತ್ತಾ ಸರ್ವ ಶ್ರೇಷ್ಠ 108 ಸದ್ಗುಣಗಳನ್ನು ಹೊಂದಬೇಕು ಎನ್ನುತ್ತದೆ ಹಿಂದೂ ಧರ್ಮ.
ಹಲವಾರು ಕಾರಣಗಳಿಗಾಗಿ ಹಿಂದೂ ಧರ್ಮದಲ್ಲಿ 108 ಸಂಖ್ಯೆಗೆ ಅತ್ಯಂತ ಪವಿತ್ರ ಸ್ಥಾನವಿದೆ. ಯಾಕೆಂದರೆ, “1” ದೇವರನ್ನು ಅಥವಾ ಪರಮ ಸತ್ಯವನ್ನು; “0” ಶೂನ್ಯವನ್ನು ಅಥವಾ ಪರಿಪೂರ್ಣತೆಯನ್ನು; “8” ಅನಂತವನ್ನು ಅಥವಾ ಚಿರಂತನತೆಯನ್ನು ಪ್ರತಿನಿಧಿಸುತ್ತದೆ.
ಬದುಕಿನ ಆಧ್ಯಾತ್ಮಿಕ ಸಾಧನೆಗೆ ಪ್ರತಿ ದಿನ ತಮ್ಮ ಇಷ್ಟದೇವರನ್ನು 108 ಸಲ ಸ್ತುತಿಸುವುದು ಪರಿಣಾಮಕಾರಿ ಕ್ರಮ ಎಂಬುದು ಹಲವು ಶತಮಾನಗಳಿಂದ ಈ ಕ್ರಮವನ್ನು ಅನುಸರಿಸುತ್ತಿರುವ ಕೋಟಿಗಟ್ಟಲೆ ಹಿಂದೂಗಳ ಅನುಭವ. ಇದನ್ನು ಭಕ್ತಿಯಿಂದ, ಶ್ರದ್ಧೆಯಿಂದ ಹಾಗೂ ಅರ್ಪಣಾಭಾವದಿಂದ ಅನುಸರಿಸುವ ಮೂಲಕ ನಾವೂ ಆಧ್ಯಾತ್ಮಿಕ ಸಾಧನೆಯ ದಾರಿಯಲ್ಲಿ ಮುನ್ನಡೆಯೋಣ.
ಹಲವಾರು ಸೇವೆಗಳು ಈಗ ಆನ್-ಲೈನಿನಲ್ಲಿ ಲಭ್ಯ. ಅದೆಲ್ಲ ಬಹಳ ಸುಲಭ ಎಂದು ಭಾವಿಸುವ ಸಾವಿರಾರು ಜನರು ಅವನ್ನು ಬಳಸುತ್ತಿದ್ದಾರೆ. ಆದರೆ ಹಲವಾರು ಜನರು ಇದರಿಂದಾಗಿ ನಷ್ಟಕ್ಕೆ ಒಳಗಾಗಿದ್ದಾರೆ. ಇತ್ತೀಚೆಗೆ ಒಬ್ಬಾತ ರೂಪಾಯಿ ಒಂದು ಲಕ್ಷ ಬೆಲೆಯ ಮೊಬೈಲ್ ಫೋನಿಗೆ ಆನ್-ಲೈನಿನಲ್ಲಿ ಹಣ ಪಾವತಿಸಿದ್ದ. ಕೊರಿಯರ್ ಮೂಲಕ ಪ್ಯಾಕೆಟ್ ಬಂತು. ಅದನ್ನು ಒಡೆದು ನೋಡಿದಾಗ, ಒಳಗೆ ಇದ್ದದ್ದು ಆಯತಾಕಾರದ ಒಂದು ಕಲ್ಲಿನ ತುಂಡು! ಆತ ಎಚ್ಚರದಿಂದಿದ್ದು, ಕೊರಿಯರ್ ಸಿಬ್ಬಂದಿಯ ಎದುರಿನಲ್ಲೇ ಆ ಪ್ಯಾಕೆಟ್ ಒಡೆದಿದ್ದರೆ, ಈ ನಷ್ಟವನ್ನು ತಪ್ಪಿಸಲು ಸುಲಭವಾಗುತ್ತಿತ್ತು.
ಈಗ ವಾಟ್ಸಾಪ್ ಇತ್ಯಾದಿ ಇಂಟರ್-ನೆಟ್ ಸಂಪರ್ಕ ಜಾಲಗಳ ಮೂಲಕ ಬರುತ್ತಿರುವ ಕೆಲವು ಸಂದೇಶಗಳು ಹೀಗಿರುತ್ತವೆ:
೧)“ನಿಮ್ಮ ಬ್ಯಾಂಕ್ ಖಾತೆಯ ಕೆವೈಸಿ ನವೀಕರಿಸಿಲ್ಲ. ನಿಮ್ಮ ಖಾತೆ ಸ್ಥಗಿತವಾಗಲಿದೆ. ಕೆವೈಸಿ ನವೀಕರಿಸಲಿಕ್ಕಾಗಿ ಈ ಕೆಳಗಿನ ಲಿಂಕ್ ಒತ್ತಿ.”
೨)ನಿಮ್ಮ ವಿದ್ಯುತ್ ಬಿಲ್ ಬಾಕಿ ಪಾವತಿಸಿಲ್ಲ. ಇವತ್ತೇ ಪಾವತಿಸದಿದ್ದರೆ ನಿಮ್ಮ ವಿದ್ಯುತ್ ಸಂಪರ್ಕ ಕಡಿತ ಮಾಡಲಾಗುವುದು. ಬಾಕಿ ಪಾವತಿಸಲಿಕ್ಕಾಗಿ ಈ ಕೆಳಗಿನ ಲಿಂಕ್ ಒತ್ತಿ.”
೩)ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡಿದರೆ ಒಂದೇ ತಿಂಗಳಿನಲ್ಲಿ ಹೂಡಿಕೆಯ ನಾಲ್ಕು ಪಟ್ಟು ಲಾಭ ಗಳಿಸಬಹುದು. ಅದಕ್ಕಾಗಿ ಈ ಕೆಳಗಿನ ಲಿಂಕ್ ಒತ್ತಿ.”
೪)ನೀವು ಮನೆಯಿಂದಲೇ ಕೆಲಸ ಮಾಡಿ ತಿಂಗಳಿಗೆ ರೂಪಾಯಿ ಒಂದು ಲಕ್ಷಕ್ಕಿಂತ ಜಾಸ್ತಿ ಆದಾಯ ಗಳಿಸಬಹುದು. ಅದಕ್ಕಾಗಿ ಈ ಕೆಳಗಿನ ಲಿಂಕ್ ಒತ್ತಿ.
ಇಂತಹ ಮೆಸೇಜುಗಳ ಸತ್ಯಾಸತ್ಯತೆಯ ಬಗ್ಗೆ ಒಂದು ಕ್ಷಣವೂ ಯೋಚಿಸದೆ, ಆ ಲಿಂಕ್-ಗಳನ್ನು ಒತ್ತಿ ಲಕ್ಷಗಟ್ಟಲೇ ರೂಪಾಯಿ ಹಣ ಕಳೆದುಕೊಂಡವರ ಸಂಖ್ಯೆ ಹಲವು ಲಕ್ಷ! ಅವರು ತಮ್ಮ ಆಪ್ತರನ್ನು, ಸ್ನೇಹಿತರನ್ನು ಅಥವಾ ತಮ್ಮ ಬಳಗದ ಕೆಲವರನ್ನಾದರೂ ವಿಚಾರಿಸಿದ್ದರೆ ಹೀಗೆ ನಷ್ಟ ಆಗುತ್ತಿರಲಿಲ್ಲ.
ಕೆಲವು ವರುಷಗಳ ಮುಂಚೆಯೂ ಎಚ್ಚರ ವಹಿಸದ ಕಾರಣ ಹಲವಾರು ಜನರು ನಷ್ಟಕ್ಕೆ ಒಳಗಾಗುತ್ತಿದ್ದರು. ಉದಾಹರಣೆಗೆ, ಬಸ್ಸಿನಲ್ಲಿ ಅಥವಾ ರೈಲಿನಲ್ಲಿ ಪಕ್ಕದವರು ಬಿಸ್ಕಿಟ್ ಕೊಡುತ್ತಾರೆ. ಅದನ್ನು ತಿಂದ ನಂತರ ಎಚ್ಚರ ತಪ್ಪುತ್ತದೆ. ಎಚ್ಚರವಾದಾಗ ನಮ್ಮ ವಾಚ್, ಬಂಗಾರದ ಉಂಗುರ, ಚೈನ್, ಪರ್ಸ್, ಸೂಟ್ಕೇಸ್ ಮಾಯ. ಇನ್ನೊಂದು ಸನ್ನಿವೇಶ: ಮನೆಯ ಬಾಗಿಲು ಬಡಿದ ಸದ್ದು ಕೇಳಿ ಬಾಗಿಲು ತೆಗೆದಾಗ, ಅಪರಿಚಿತರು ನೀರು ಕೇಳುತ್ತಾರೆ ಅಥವಾ ಆಹ್ವಾನ ಪತ್ರಿಕೆ ಕೊಡುತ್ತಾರೆ. ಅವರನ್ನು ಮನೆಯ ಒಳಗೆ ಸೇರಿಸಿಕೊಂಡರೆ ನಿಮಗೆ ಮಂಕು ಬೂದಿ ಎರಚಿ, ಮನೆಯ ಸೊತ್ತನ್ನೆಲ್ಲ ದೋಚಿಕೊಂಡು ಹೋಗಿರುತ್ತಾರೆ.
ಅಪರಿಚಿತರು ಕೊಟ್ಟದ್ದನ್ನು ತಿನ್ನಬಾರದು ಮತ್ತು ಅಪರಿಚಿತರನ್ನು ಮನೆಯೊಳಗೆ ಬಿಡಬಾರದೆಂದು ನಮಗೆಲ್ಲ ಚೆನ್ನಾಗಿ ತಿಳಿದಿದೆ. ಆದರೂ ಏಕೆ ಹೀಗಾಗುತ್ತದೆ? ಏಕೆಂದರೆ ನಾವು ನಮ್ಮ ಪ್ರಜ್ನೆಯನ್ನು ಬಳಸಿಕೊಳ್ಳುತ್ತಿಲ್ಲ!
ಏನಿದು ಪ್ರಜ್ನೆ? ಪ್ರಜ್ನೆ ಎಂದರೆ ಅತ್ಯಂತ ಎಚ್ಚರದ ಸ್ಥಿತಿ. ಗೊತ್ತಿದ್ದೂ ಗೊತ್ತಿದ್ದೂ ತಪ್ಪು ಮಾಡದಿರುವುದು. ನಾವೆಲ್ಲರೂ ಬಹಳ ಎಚ್ಚರದಿಂದ ಇರುತ್ತೇವೆ ಎಂದೇ ಅಂದುಕೊಳ್ಳುತ್ತೇವೆ. ಉದಾಹರಣೆಗೆ, ಸೈಕಲ್, ಬೈಕ್ ಅಥವಾ ವಾಹನ ಚಲಾಯಿಸುವಾಗ, ವಿದ್ಯುತ್ ಉಪಕರಣ ಬಳಸುವಾಗ ನಾವು ಎಚ್ಚರಿಕೆಯಿಂದಲೇ ಇರುತ್ತೇವೆ. ಆದರೂ ಅಪಘಾತಗಳು ಆಗುತ್ತವೆ. ಏಕೆಂದರೆ ಎಚ್ಚರಿಕೆ ಬೇರೆ, ಎಚ್ಚರದ ಸ್ಥಿತಿ ಬೇರೆ.
ನಿಮ್ಮನ್ನು ನೀವೇ ಪರೀಕ್ಷಿಸಿಕೊಳ್ಳಿರಿ. ನೀವೀಗ ಓದುತ್ತಿರುವುದು ನಿಮಗೆ ಸಂಪೂರ್ಣ ಅರ್ಥ ಆಗುತ್ತಿದೆಯೇ? ಯಾರೊಡನೆಯೋ ಮಾತನಾಡುವಾಗ ಅವರ ಮಾತಿನ ಉದ್ದೇಶ ಮತ್ತು ಗೂಡಾರ್ಥ ನಿಮಗೆ ನೂರಕ್ಕೆ ನೂರರಷ್ಟು ಅರ್ಥ ಆಗುತ್ತದೆಯೇ? ಯಾವುದೇ ಕೆಲಸ ಮಾಡುವಾಗ ಅದರಲ್ಲಿ ನಾವು ಸಂಪೂರ್ಣ ತೊಡಗಿಕೊಳ್ಳುವುದು ಅಪರೂಪ. ನಮ್ಮ ಗಮನ ಆಗಾಗ ಬೇರೆತ್ತಲೋ ಜಿಗಿದಿರುತ್ತದೆ. ಇದು ನಮ್ಮ ಅಭ್ಯಾಸ. ಆದ್ದರಿಂದಲೇ ನಮಗೆ ಸಂಪೂರ್ಣ ಪ್ರಜ್ನೆಯಿಂದ ಕೆಲಸ ಮಾಡಲು ಸಾಧ್ಯವಾಗುವುದಿಲ್ಲ.
ಪ್ರಜ್ನೆಯಿಂದ ಅರಿವು
ಸಂಪೂರ್ಣ ಪ್ರಜ್ನಾವಂತರಾಗಿ ಇರಬೇಕಾದರೆ, ಒಂದು ಕೆಲಸ ಮಾಡುತ್ತಿರುವಾಗ ಇನ್ನೊಂದಕ್ಕೆ ಗಮನ ಕೊಡುವ ಪರಿಪಾಠ ನಿಲ್ಲಿಸಬೇಕು. ಏಕೆಂದರೆ ಒಂದು ಕ್ಷಣದಲ್ಲಿ ಒಂದು ಕೆಲಸಕ್ಕೆ ಮಾತ್ರ ಗಮನ ಕೊಡಲು ಸಾಧ್ಯ. ಊಟ ಮಾಡುತ್ತ ಟಿವಿ ನೋಡುತ್ತಿದ್ದರೆ ಊಟವನ್ನೂ ಸರಿಯಾಗಿ ಅನುಭವಿಸಲಾಗದು ಮತ್ತು ಟಿವಿಯಲ್ಲಿ ನೋಡಿದ್ದನ್ನೂ ಸರಿಯಾಗಿ ಅನುಭವಿಸಲಿಕ್ಕಾಗದು. ಪಂಚೇಂದ್ರಿಯಗಳಿಂದ ಬರುವ ಸಂದೇಶಗಳನ್ನು ಪರಾಮರ್ಶೆಗೆ ಒಳಪಡಿಸಲು ನಾವು ಕಲಿತಿರುವುದಿಲ್ಲ. ಸಂಪೂರ್ಣ ಜಾಗೃತ ಸ್ಥಿತಿಯಲ್ಲಿ ನಾವು ಇರಬೇಕಾದರೆ ಮುಖ್ಯವಾಗಿ ಕಣ್ಣುಬಿಟ್ಟು ನೋಡಲು ಮತ್ತು ಕಿವಿಗೊಟ್ಟು ಕೇಳಲು ಕಲಿಯಬೇಕಾಗಿದೆ. ಅರೆಬರೆ ನೋಡುವ ಮತ್ತು ಅರೆಬರೆ ಕೇಳುವ ನಮ್ಮ ಅಭ್ಯಾಸವನ್ನೇ ಬದಲಾಯಿಸಿಕೊಳ್ಳ ಬೇಕಾಗಿದೆ.
ಪ್ರಜ್ನಾಪೂರ್ವಕ ನಿರ್ಧಾರಗಳು
ಬೆಳಗ್ಗೆ ಎಷ್ಟು ಹೊತ್ತಿಗೆ ಏಳಬೇಕು? ರಾತ್ರಿ ಯಾವಾಗ ಮಲಗಬೇಕು? ಇತ್ಯಾದಿ ದಿನನಿತ್ಯದ ಕೆಲಸಗಳ ಬಗ್ಗೆ ನಿರ್ಧಾರ ತೆಗೆದುಕೊಳ್ಳುವುದು ಸುಲಭ. ಆದರೆ ನಮ್ಮ ಬದುಕಿನಲ್ಲಿ ದೂರಗಾಮಿ ಪರಿಣಾಮ ಬೀರುವ ವಿಷಯಗಳ ಬಗ್ಗೆ ನಿರ್ಧಾರ ಕೈಗೊಳ್ಳುವುದು ಕಷ್ಟ.
ಯಾವ ಕೋರ್ಸಿಗೆ ಸೇರಬೇಕು? ಯಾವ ಕೆಲಸಕ್ಕೆ ಸೇರಬೇಕು? ಯಾರ ಸ್ನೇಹ ಮಾಡಬೇಕು? ಯಾರನ್ನು ಮದುವೆ ಆಗಬೇಕು? ಯಾವುದರಲ್ಲಿ ಹಣ ಹೂಡಬೇಕು? ಉಳಿತಾಯದ ಹಣ ಎಲ್ಲಿ ತೊಡಗಿಸಬೇಕು? ಯಾವ ಊರಿನಲ್ಲಿ ಮನೆ ಕಟ್ಟಬೇಕು? ಇಂತಹ ನಿರ್ಧಾರಗಳನ್ನು ಪ್ರಜ್ನಾಪೂರ್ವಕವಾಗಿ ಕೈಗೊಳ್ಳಬೇಕು. ಅಂದರೆ, ಅನುಕೂಲ ಹಾಗೂ ಅನಾನುಕೂಲಗಳನ್ನು ತೂಗಿ ನೋಡಬೇಕು. ನಮ್ಮ ಇಂದಿನ ನಿರ್ಧಾರದಿಂದಾಗಿ ಮುಂದೊಂದು ದಿನ ನಾವೇ ಪಶ್ಚಾತಾಪ ಪಡುವಂತಾಗಬಾರದು.
"ಅರ್ಧ ಬೆಲೆಗೆ ನಿಮಗೆ ಬೇಕಾದ್ದನ್ನು ಖರೀದಿಸಿ. ಟಿವಿ, ಪ್ರಿಜ್, ಡಿವಿಡಿ ಪ್ಲೇಯರ್, ಕೆಮರಾ, ಬೈಕ್, ಕಾರು ಏನು ಬೇಕಾದರೂ ಖರೀದಿಸಿರಿ..." ಎಂಬ ಜಾಹೀರಾತು ಕಂಡರೆ, ಈಗಲೂ ಜನ ಆ ಅಂಗಡಿಗೆ ಮುಗಿಬೀಳುತ್ತಾರೆ. ಮುಂಗಡ ತೆತ್ತು ಆ ಸೊತ್ತು ತಮ್ಮ ಕೈಗೆ ಬರಲಿಕ್ಕಾಗಿ ವಾರಗಟ್ಟಲೆ ಕಾಯುತ್ತಾರೆ. ಉದಾಹರಣೆಗೆ ೬೨೫ ಪ್ಲಾಂಟೇಷನ್ ಕಂಪೆನಿಗಳು ನಮ್ಮ ದೇಶದಲ್ಲಿ ಲಕ್ಷಗಟ್ಟಲೆ ಜನರಿಗೆ ಕೋಟಿಗಟ್ಟಲೆ ರೂಪಾಯಿ ಹಣ ಟೊಪ್ಪಿ ಹಾಕಿದವು. "ಈಗ ಒಂದು ಲಕ್ಷ ರೂಪಾಯಿ ಠೇವಣಿ ಇಟ್ಟರೆ, ಇಪ್ಪತ್ತು ವರುಷಗಳ ಕೊನೆಗೆ ೨೦ ಲಕ್ಷ ರೂಪಾಯಿ ಹಿಂತಿರುಗಿಸುತ್ತೇವೆ" ಎಂದಾಗ ಜನ ನಂಬಿದರು. ಸಾಗುವಾನಿ ಗಿಡ ೨೦ ವರುಷಗಳಲ್ಲೇ ಬೆಳೆದು ದಿಮ್ಮಿಯಾಗುತ್ತದೆಯೇ? ಇಲ್ಲ. ಕನಿಷ್ಠ ೬೦ ವರುಷಗಳು ಬೇಕು! ಖಾಸಗಿ ಕಂಪೆನಿಗಳು ಕಾನೂನಿನ ಪ್ರಕಾರ (ಆಗ) ಕೃಷಿ ಜಮೀನು ಖರೀದಿಸಲು ಸಾಧ್ಯವೇ? ಈಗಾಗಲೇ ಆ ಜಮೀನು ಖರೀದಿಸಿವೆಯೇ? ಎಲ್ಲಿ? ಎಂಬ ಸರಳ ಪ್ರಶ್ನೆಗಳನ್ನೂ ಜನ ಕೇಳಲಿಲ್ಲ. ಆದರೆ ಠೇವಣಿ ಸಂಗ್ರಹವಾದ ಒಂದೆರಡು ವರುಷಗಳಲ್ಲೇ ಪ್ಲಾಂಟೇಷನ್ ಕಂಪೆನಿಗಳು ಕಾಣದಂತೆ ಮಾಯವಾದವು.
ಶೇಕಡಾ ೨೪ರಿಂದ ೩೬ರ ವಾರ್ಷಿಕ ಬಡ್ಡಿಯ ಆಮಿಷ ಒಡ್ಡಿ, ಪತ್ರಿಕೆಗಳಲ್ಲಿ ಜಾಹೀರಾತು ಪ್ರಕಟನೆ, ವರ್ಣರಂಜಿತ ಮಾಹಿತಿ ಪತ್ರಗಳು, ಬೀದಿಬೀದಿಗಳಲ್ಲಿ ಜಾಹೀರಾತು ಫಲಕಗಳು, ಝಗಮಗಿಸುವ ಕಚೇರಿಗಳು - ಇವುಗಳಿಂದ ಜನಸಾಮಾನ್ಯರನ್ನು ಮರುಳು ಮಾಡಿದ ಬ್ಲೇಡ್ ಕಂಪನಿಗಳು ಸಾವಿರಾರು ಕೋಟಿ ರೂಪಾಯಿಗಳನ್ನು ನುಂಗಿಹಾಕಿದವು.
ಇಂಥ ಮೋಡಿಗೆ ಒಳಗಾದವರ ಪ್ರಜ್ನೆ ಎಲ್ಲಿ ಹೋಗಿತ್ತು? ಅದು ಒಳದನಿಯ ರೂಪದಲ್ಲಿ ಎಚ್ಚರಿಸುತ್ತಿತ್ತು! ಆದರೆ ಅದನ್ನು ಕೇಳುವ ವ್ಯವಧಾನ, ಅರ್ಥ ಮಾಡಿಕೊಳ್ಳುವ ತಾಳ್ಮೆ ಮತ್ತು ನಿರ್ಧಾರವನ್ನು ಪುನರ್ ಪರಿಶೀಲಿಸುವ ಜಾಗೃತ ಮನಃಸ್ಥಿತಿ ಅವರಲ್ಲಿ ಇರಲಿಲ್ಲ. ಆಗ ಒಳದನಿಗೆ ಕಿವಿಗೊಡದ ತಪ್ಪಿಗೆ ಈಗ ದಂಡ ತೆರಬೇಕಾಗಿದೆ.
ಒಂದು ಕ್ಷಣ ನಿಮ್ಮ ಕೈ ಹೆಬ್ಬೆರಳಿನ ತುದಿಯಿಂದ ತೋರುಬೆರಳ ತುದಿಯನ್ನು ಒತ್ತಿ ಹಿಡಿದುಕೊಳ್ಳಿ. ಆ ಬೆರಳ ತುದಿಗಳಲ್ಲಿ "ನಿಮ್ಮದೇ ನಾಡಿಮಿಡಿತ" ನಿಮ್ಮ ಅನುಭವಕ್ಕೆ ಬರುತ್ತದೆಯೇ? ಸಂಪೂರ್ಣ ಪ್ರಜ್ನೆಯ ಸ್ಥಿತಿಯಲ್ಲಿದ್ದಾಗ ಅದು ನಿಮ್ಮ ಅನುಭವಕ್ಕೆ ಬಂದೇ ಬರುತ್ತದೆ.
ಇದೇ ಸಾಧನೆಯನ್ನು ಮುಂದುವರಿಸಿದರೆ, ನಿಮ್ಮ ದೇಹದ ಕೋಶಕೋಶದಲ್ಲಿ ಏನಾಗುತ್ತದೆ ಎಂಬುದು ನಿಮ್ಮ ಅರಿವಿಗೆ ಬರುತ್ತದೆ. ಹಸಿವು, ದಣಿವು, ನೋವು, ನಿಮ್ಮ ಮನಸ್ಸಿನ ಪದರಪದರದ ಆಗುಹೋಗುಗಳು ನಿಮಗೆ ಅರ್ಥವಾಗಲು ಶುರುವಾಗುತ್ತದೆ. ನಂತರದ ಹಂತದಲ್ಲಿ ನಿಮ್ಮ ಸುತ್ತಲಿನ ವ್ಯಕ್ತಿಗಳಲ್ಲಿ ಹಾಗೂ ವಸ್ತುಗಳಲ್ಲಿ ಏನಾಗುತ್ತಿದೆ ಎಂಬುದನ್ನು ಗ್ರಹಿಸಲು ನಿಮಗೆ ಸಾಧ್ಯವಾಗುತ್ತದೆ. ಇದುವೇ ಪ್ರಜ್ನೆಯ ಪರಕಾಷ್ಠೆಯ ಸ್ಥಿತಿ. ಆ ಸ್ಥಿತಿಯನ್ನು ತಲುಪಿ, ಅತ್ಯಂತ ಜಾಗೃತಾವಸ್ಥೆಯಲ್ಲಿ ನಿಮ್ಮ ಬದುಕಿನ ಕ್ಷಣಕ್ಷಣವನ್ನೂ ಬೆಳಗಿಸುವ ಪ್ರಜ್ನೆಯನ್ನು ನಿಮ್ಮದಾಗಿಸಿಕೊಳ್ಳಿ.
ಯುಗಾದಿಯ ಸಂದರ್ಭದಲ್ಲಿ ನೆನಪಾಗುವ ದ. ರಾ. ಬೇಂದ್ರೆಯವರ ಮಾಂತ್ರಿಕ ಹಾಡು:
“ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ
ಹೊಸ ವರುಷಕೆ ಹೊಸ ಹರುಷವ ಹೊಸತು ಹೊಸತು ತರುತಿದೆ”
ಯುಗಯುಗಗಳ ಮುಂಚೆ ಆಚರಿಸುತ್ತಿದ್ದ ಯುಗಾದಿಯೇ ಮತ್ತೆ ಬಂದಿದೆಯಾದರೂ ಅದರಲ್ಲಿ ಹೊಸತನ್ನು ಕಾಣುವ, ಕಂಡು ಸಂಭ್ರಮಿಸುವ ತುಡಿತ ಇದೆಯಲ್ಲ, ಅದುವೇ ನಮರೆಲ್ಲರಿಗೂ ಹೊಸ ಹರುಷದ ಭರವಸೆಯ ಬೆಳಕು. ಎಂತಹ ಸಂದೇಶ!
ಕರ್ನಾಟಕದ ಕರಾವಳಿಯಲ್ಲಿ ಎಪ್ರಿಲ್ ತಿಂಗಳಿನಲ್ಲಿ ಯುಗಾದಿ ಹಬ್ಬದ ಸಂಭ್ರಮ. ತುಳುವರಿಗೆ ಇದು “ಬಿಸು ಹಬ್ಬ" (ತುಳುವಿನಲ್ಲಿ ಬಿಸು ಪರ್ಬ).
ಭಾರತದಲ್ಲಿ ಬೇರೆಬೇರೆ ಪ್ರದೇಶಗಳಲ್ಲಿ ಯುಗಾದಿಯ ಆಚರಣೆ ಒಂದೇ ದಿನ ನಡೆಯುವುದಿಲ್ಲ. ವಿಂಧ್ಯಾ ಪರ್ವತದ ಉತ್ತರ ಭಾಗದಲ್ಲಿ “ಬಾರ್ಹಸ್ಪತ್ಯಮಾನ" ಪಂಚಾಂಗದ ಅನುಸಾರ ನಿಗದಿತ ದಿನದಂದು ಯುಗಾದಿಯ ಆಚರಣೆ. ವಿಂಧ್ಯಾ ಪರ್ವತದ ದಕ್ಷಿಣ ಭಾಗದಲ್ಲಿ ಸೌರಮಾನ ಮತ್ತು ಚಾಂದ್ರಮಾನ ಪಂಚಾಂಗದ ಪ್ರಕಾರ ಯುಗಾದಿಯ ದಿನ ನಿಗದಿ. ತಮಿಳುನಾಡಿನಲ್ಲಿ ಸೌರಮಾನ ಯುಗಾದಿ ಆಚರಣೆ. ಕರ್ನಾಟಕ ಮತ್ತು ಆಂಧ್ರಪ್ರದೇಶದಲ್ಲಿ ಚಾಂದ್ರಮಾನ ಯುಗಾದಿಯ ಆಚರಣೆ.
ಚೈತ್ರ ಮಾಸದ ಮೊದಲ ದಿನ (ಅಂದರೆ ಅಮವಾಸ್ಯೆಯ ನಂತರದ ದಿನ) ಶುಕ್ಲ ಚಂದ್ರನ ಆಗಮನ. 2024ರಲ್ಲಿ ಎಪ್ರಿಲ್ 8ರಂದು ಅಮವಾಸ್ಯೆ. ಹಾಗಾಗಿ ಬೆಳಗುವ ಚಂದ್ರ ಕಾಣಿಸುವುದು ಎಪ್ರಿಲ್ 9ರಂದು. ಆದ್ದರಿಂದ ಅದೇ ದಿನ ಚಾಂದ್ರಮಾನ ಯುಗಾದಿಯ ಆಚರಣೆ. (2024ರಲ್ಲಿ ಎಪ್ರಿಲ್ 8ರ ಪೂರ್ವಾಹ್ನ ಚೈತ್ರಮಾಸದ ಮೊದಲ ತಿಥಿ ಶುರುವಾಗಿ ಎಪ್ರಿಲ್ 9ರ ಮಧ್ಯಾಹ್ನ 12 ಗಂಟೆಗೆ ಮುಕ್ತಾಯ.)
ಸೌರಮಾನ ಪಂಚಾಂಗದಂತೆಯೂ ಹೊಸ ವರುಷದ ಮೊದಲ ದಿನ ಯುಗಾದಿ. ಅದರಂತೆ 2024ರಲ್ಲಿ ಎಪ್ರಿಲ್ 14 ಯುಗಾದಿ. ದೇವರಿಗೆ “ಕಣಿ” (ವಿಷು ಕಣಿ) ಸಮರ್ಪಣೆ ಯುಗಾದಿಯ ವಿಶೇಷ. ಕೃಷಿಕರಾದರೆ ತಮ್ಮ ಜಮೀನಿನಲ್ಲಿ ಬೆಳೆದ ಭತ್ತ, ಹೂ, ಹಣ್ಣು, ತರಕಾರಿಗಳನ್ನು ತಂದು ದೇವರಿಗೆ ಅರ್ಪಿಸಿ ಕೈಮುಗಿಯುತ್ತಾರೆ. ಈಗ ನಗರಗಳಲ್ಲಿ ವಿವಿಧ ಧಾನ್ಯ, ಹೂ, ಹಣ್ಣು, ತರಕಾರಿಗಳನ್ನು ಖರೀದಿಸಿ ತಂದು ದೇವರ ಮೂರ್ತಿಯೆದುರು ಇಟ್ಟು ನಮಿಸುತ್ತಾರೆ.
ಕರಾವಳಿಯಲ್ಲಿ ಯುಗಾದಿಯಂದು ಬೆಳಗ್ಗೆ ಎದ್ದೊಡನೆ ಯುಗಾದಿ "ಕಣಿ" ನೋಡಿ, ಕಣ್ತುಂಬಿಸಿಕೊಂಡು ಅದಕ್ಕೆ ನಮಿಸುವುದು ವಾಡಿಕೆ. ಅದಕ್ಕಾಗಿ ಮುಂಚಿನ ದಿನ ರಾತ್ರಿಯೇ "ಕಣಿ" ಜೋಡಿಸುತ್ತಾರೆ.
ಅಂದರೆ, ದೇವರ ಮೂರ್ತಿಯೆದುರು ಮರದ ಮಣೆ ಇಟ್ಟು, ಅದರ ಮೇಲೆ ಜೋಡಿ ಬಾಳೆಲೆ. ಬಾಳೆಲೆಯಲ್ಲಿ ಬಾಳೆಹಣ್ಣು, ಮಾವು, ಪೇರಳೆ, ಕಿತ್ತಳೆ, ಲಿಂಬೆ, ಮುಸುಂಬಿ, ನೆಲ್ಲಿ, ಪಪ್ಪಾಯಿ, ಕಲ್ಲಂಗಡಿ, ಪುನರ್ಪುಳಿ, ರಾಮಫಲ, ಸೀತಾಫಲ, ಅನಾನಸ್ ಇತ್ಯಾದಿ ಹಣ್ಣುಗಳು. ಜೊತೆಗೆ ಸೌತೆ, ಮುಳ್ಳುಸೌತೆ, ಬದನೆ, ಬೆಂಡೆ, ತೊಂಡೆ, ಅಲಸಂಡೆ, ಬೀನ್ಸ್, ರೆಕ್ಕೆ ಬೀನ್ಸ್, ಚೀನಿಕಾಯಿ, ಕುಂಬಳಕಾಯಿ, ಹೀರೆಕಾಯಿ, ಪಡುವಲಕಾಯಿ, ಹಾಗಲಕಾಯಿ ಇತ್ಯಾದಿ ತರಕಾರಿಗಳು. ಎಲ್ಲವನ್ನೂ ಚಂದವಾಗಿ ಜೋಡಿಸಿ ಹೂಗಳಿಂದ ಅಲಂಕಾರ. ಅಕ್ಕಿ, ಹಾಲು, ತೆಂಗಿನಕಾಯಿ, ಅಡಿಕೆ ಮತ್ತು ವೀಳ್ಯದೆಲೆಗಳ ಸಮರ್ಪಣೆ. ಹೀಗೆ ಜೋಡಿಸಿಟ್ಟ "ಕಣಿ" ಆಯಾ ಕುಟುಂಬದ ಸಮೃದ್ಧಿಯ ಹಾರೈಕೆಯ ಸಂಕೇತ. ಈ "ಕಣಿ"ಯನ್ನು ತುಳಸಿಕಟ್ಟೆ ಅಥವಾ ಭೂತಾರಾಧನೆ ನಡೆಯುವ ಮನೆಗಳಲ್ಲಿ ಭೂತದ ಕೋಣೆಯಲ್ಲಿ ಇರಿಸುವುದೂ ಸಂಪ್ರದಾಯ.
ಯುಗಾದಿಯ ದಿನ ಬೆಳಗ್ಗೆ ಬೇಗನೇ ಎದ್ದು, ಮನೆಯನ್ನು ಶುಚಿ ಮಾಡಿ, ಮಾವು-ಬೇವಿನ ಎಲೆಗಳಿಂದ ಮನೆಗೆ ತೋರಣ ಕಟ್ಟುವುದು ವಾಡಿಕೆ. ಅನಂತರ ಎಣ್ಣೆ-ಸ್ನಾನ ಮಾಡಿ, ಹೊಸ ಉಡುಪು ಧರಿಸುವ ಸಂಭ್ರಮ. ನಂತರ ಮನೆಯ ಹಿರಿಯರಿಗೆ ನಮಸ್ಕರಿಸಿ, ಆಶೀರ್ವಾದ ಪಡೆಯುವ ಸಂಪ್ರದಾಯ. ಯುಗಾದಿಯಂದು ಬೇವು-ಬೆಲ್ಲ ಸವಿಯಲೇ ಬೇಕು ಮತ್ತು ದೇವಸ್ಥಾನಗಳಿಗೆ ಭೇಟಿ ನೀಡಲೇ ಬೇಕು. ಯುಗಾದಿಯ ದಿನ ಮನೆಯ ಯಜಮಾನ ಹಣದ ಪೆಟ್ಟಿಗೆ ತೆರೆಯಬಾರದು; ಯಾರಿಗೂ ಹಣ ಅಥವಾ ಬೀಜ ಕೊಡಬಾರದು ಎಂಬ ನಿಷೇಧಗಳಿವೆ.
ಕೃಷಿಕರಿಗಂತೂ ಕೃಷಿಯ ಆರಂಭದ ದಿನ ಯುಗಾದಿ. ಎತ್ತುಗಳನ್ನು ಹಳ್ಳಿಯ ಹಲವಾರು ಕೃಷಿಕರು ಸಾಕುತ್ತಿದ್ದ ಕಾಲದಲ್ಲಿ, ಮುಂಜಾನೆ ಅವನ್ನು ಹೊಲಕ್ಕೆ ಕರೆದೊಯ್ಯುತ್ತಿದ್ದರು. ಅನಂತರ ಹೊಲದಲ್ಲಿ ಬೀಜ ಬಿತ್ತುವ ವಾಡಿಕೆ ಇತ್ತು. ಇದಕ್ಕೆ ತುಳುವಿನಲ್ಲಿ "ಕೈ ಬಿತ್ತ್ ಬಿತ್ತುನ” ಎನ್ನುತ್ತಾರೆ.
ಕರ್ನಾಟಕದ ಹಳ್ಳಿಗಳಲ್ಲಿ ಯುಗಾದಿಯ ದಿನ ಇಳಿಹೊತ್ತಿನಲ್ಲಿ ಹೊನ್ನಾರು ಕಟ್ಟುವ ಪದ್ಧತಿಯಿದೆ. ಉಳುಮೆಯ ಪ್ರಾರಂಭದ ದಿನವಾದ ಯುಗಾದಿ ಹೊನ್ನಿಗೆ ಸಮನಾದ ಶುಭದಿನ. ಹಾಗಾಗಿ ಅದು “ಹೊನ್ನಾರು". ಆರಂಭ (ಕೃಷಿ)ಕ್ಕೆ ನೇಗಿಲಿಗೆ ನೊಗ ಹೂಡಿದ ಎತ್ತು ಕಟ್ಟಬೇಕು. ಅವನ್ನೆಲ್ಲ ಅಲಂಕರಿಸಿ ಮಂಗಲವಾದ್ಯದೊಂದಿಗೆ ಆರು ಹೂಡುವುದು ಸಂಪ್ರದಾಯ. ಪೂರ್ವ ದಿಕ್ಕಿಗೆ ಅಭಿಮುಖವಾಗಿ ಶುರುವಾಗುವ ಹೊನ್ನಾರು, ಹಳ್ಳಿಯ ಎಲ್ಲ ಮನೆಗಳನ್ನು ಮೂರು ಸಲ ಸುತ್ತು ಹಾಕಿ ಮುಗಿಯುತ್ತದೆ.
(ಈಗ ಟ್ರಾಕ್ಟರ್, ಪವರ್-ಟಿಲ್ಲರುಗಳ ಭರಾಟೆಯಲ್ಲಿ ಇವೆಲ್ಲ ಯುಗಾದಿ ಆಚರಣೆಗಳು ಮರೆಯಾಗುತ್ತಿವೆ.)
ಹಬ್ಬ ಅಂದ ಮೇಲೆ ಹಬ್ಬದೂಟ ಇರಬೇಡವೇ? ಕರಾವಳಿಯಲ್ಲಿ ಯುಗಾದಿ ಹಬ್ಬದೂಟಕ್ಕೆ ಬಿಸಿಬಿಸಿ ಅನ್ನದ ಜೊತೆಗೆ ಸೌತೆ ಸಾಂಬಾರು, ಕಡಲೆ ಗಸಿ, ತೊಂಡೆ ಪಲ್ಯ, ಕಡಲೆ ಬೇಳೆ ಅಥವಾ ಹೆಸರುಬೇಳೆ ಪಾಯಸ, ಹಪ್ಪಳ , ಸಂಡಿಗೆ, ಉಪ್ಪಿನಕಾಯಿ ಇದ್ದರೆ ಅದುವೇ ಭರ್ಜರಿ ಊಟ. ಇಲ್ಲಿ ಯುಗಾದಿಯ ವಿಶೇಷ ತಿನಿಸು ಮೂಡೆ. ಹಲಸಿನ ಮೂರು ಎಲೆಗಳನ್ನು ಕಡ್ಡಿಯಿಂದ ಚುಚ್ಚಿ ಮಾಡಿದ ಲೋಟಕ್ಕೆ ಹಿಟ್ಟು ಹೊಯ್ದು, ಹಬೆಯಲ್ಲಿ ಬೇಯಿಸಿ ತಯಾರಿಸುವ ತಿನಿಸು. ಇದರ ಜೊತೆ ಮಾವಿನಕಾಯಿ ಚಟ್ನಿ ಇದ್ದರಂತೂ ಮೂರ್ನಾಲ್ಕು ಮೂಡೆ ತಿನ್ನದೆ ಏಳಲಾಗದು.
ಯುಗಾದಿಯ ದಿನ “ಬೇವು-ಬೆಲ್ಲ ಸವಿಯಬೇಕು” ಎಂಬ ರೂಢಿಯನ್ನು ಗಮನಿಸಿ. ಅದಕ್ಕಾಗಿ ಎಲ್ಲರೂ ಎಳ್ಳು-ಬೆಲ್ಲ ಹಂಚಿಕೊಳ್ಳುತ್ತಾರೆ. ಬೆಲ್ಲ ಸವಿ, ತಿನ್ನಲು ಸಿಹಿ. ಆದರೆ, ಬೇವು ಕಹಿ. ಇದನ್ನೂ “ಸವಿಯಬೇಕು" ಎಂದು ವಿಧಿಸುತ್ತದೆ ತಲೆತಲಾಂತರದಿಂದ ನಡೆದು ಬಂದ ರೂಢಿ. ಯಾಕೆ? ಯಾಕೆಂದರೆ, ಬದುಕಿನಲ್ಲಿ ಕೇವಲ ಬೆಲ್ಲವೇ ಇದ್ದರೆ ಬದುಕು ಪರಿಪೂರ್ಣವಾಗದು. ಬೆಲ್ಲದ ಜೊತೆಗೆ ಬೇವು ಇರಲೇ ಬೇಕು (ಬೇವು ಮೊದಲು, ನಂತರ ಬೆಲ್ಲ.) ಆಗಲೇ ಬದುಕಿನಲ್ಲಿ ಕಹಿ-ಸಿಹಿಗಳ ಬಗ್ಗೆ ಅಂದರೆ ನೋವು-ನಲಿವುಗಳ ಬಗ್ಗೆ ಸಮಭಾವ ಬೆಳೆಯಲು ಸಾಧ್ಯ. ಕಷ್ಟ ಅನುಭವಿಸಿದರೆ ಮಾತ್ರ ಸುಖದ ನಿಜವಾದ ಬೆಲೆ ಅರ್ಥವಾಗುತ್ತದೆ, ಅಲ್ಲವೆ?
ಅಂದ ಹಾಗೆ ಯಾವುದೇ ಮಂಗಳ ಕಾರ್ಯವನ್ನು ಮಾಡಲು ಯುಗಾದಿಯ ದಿನ ಅತ್ಯಂತ ಶುಭ ದಿನ. ಗೃಹಪ್ರವೇಶ, ಮನೆಗೆ ಅಡಿಪಾಯ ಹಾಕುವುದು, ವಾಹನ ಖರೀದಿ, ಕಿವಿ ಚುಚ್ಚುವುದು ಇತ್ಯಾದಿ ಶುಭಕಾರ್ಯಗಳಿಗೆ ಯುಗಾದಿ ಮಂಗಳಕರ ದಿನ.
ಮತ್ತೆ ನೆನಪಾಗುತ್ತದೆ ದ. ರಾ. ಬೇಂದ್ರೆಯವರ ಮಾಂತ್ರಿಕ ಹಾಡಿನ ಸಾಲುಗಳು:
"ಹೊಂಗೆ ಹೂವ ತೊಂಗಳಲಿ ಭೃಂಗದ ಸಂಗೀತ ಕೇಳಿ
ಮತ್ತೆ ಕೇಳಿ ಬರುತಿದೆ
ಬೇವಿನ ಕಹಿ ಬಾಳಿನಲಿ ಹೂವಿನ ನಸುಗಂಪು ಸೂಸಿ
ಜೀವ ಕಳೆಯ ತರುತಿದೆ"
ಈ ಹಾಡಿನ ಅಮರ ಸಂದೇಶದಂತೆ ಕಳೆದ ವರುಷದ ಎಲ್ಲ ನೋವುಗಳನ್ನು, ಸೋಲುಗಳನ್ನು ಮರೆತು, "ಹೊಸ ವರುಷದಲ್ಲಿ ಎಲ್ಲವೂ ಒಳಿತಾಗಲಿದೆ” ಎಂಬ ಭರವಸೆಯಿಂದ ಮುಂದೆ ಸಾಗೋಣ.
ಫೋಟೋ: ಯುಗಾದಿ ಕಣಿ
(ಎಪ್ರಿಲ್ 2024)
ವಾಲ್ಮೀಕಿ ಮಹರ್ಷಿ ಬರೆದ ಶ್ರೀ ರಾಮಾಯಣದ ಕತೆ ನಮಗೆಲ್ಲರಿಗೂ ತಿಳಿದಿದೆ. ಶ್ರೀ ರಾಮನ ರಾಮರಾಜ್ಯವಂತೂ ಜಗತ್ತಿಗೆ ಆದರ್ಶವೆಂದು ಹೆಸರಾಗಿದೆ. ಭರತ ಖಂಡದಲ್ಲಿ ಧರ್ಮಸಂಸ್ಥಾಪನೆ ಮಾಡಿದ ಮರ್ಯಾದಾ ಪುರುಷೋತ್ತಮ ಶ್ರೀ ರಾಮನ ಅನುಕರಣೀಯ ಗುಣಗಳೆಲ್ಲವೂ ಮನೆಮಾತಾಗಿವೆ. ಆ ಮಹಾಕಥನದಿಂದ ನಾವು ಕಲಿಯಬೇಕಾದ ಜೀವನ ಪಾಠಗಳು ಹಲವು. ಈಗಿನ ಬದುಕಿಗೆ ಪ್ರಸ್ತುತವಾದ ಒಂದು ಪಾಠವಂತೂ ಪ್ರತಿಯೊಬ್ಬರೂ ಅರ್ಥಮಾಡಿಕೊಳ್ಳಬೇಕಾದ್ದು.
ಅದೇನು? ಮಹಾರಾಜ ದಶರಥನು "ಶ್ರೀ ರಾಮನಿಗೆ ನಾಳೆ ಪಟ್ಟಾಭಿಷೇಕ" ಎಂದು ಘೋಷಿಸಿದ ದಿನ ಏನಾಯಿತೆಂದು ನೆನಪು ಮಾಡಿಕೊಳ್ಳೋಣ. ಭರತನ ತಾಯಿ ಕೈಕೇಯಿಯ ದಾಸಿ ಮಂಥರೆ ಧಾವಿಸಿ ಬಂದು, ಕೈಕೇಯಿಗೆ ಆ ಸುದ್ದಿ ತಿಳಿಸುತ್ತಾಳೆ. "ಹೌದೇನು! ನಾನು ಭರತನಿಗಿಂತಲೂ ಹೆಚ್ಚಾಗಿ ಶ್ರೀ ರಾಮನನ್ನು ಪ್ರೀತಿಸುತ್ತೇನೆ. ಅವನಿಗೆ ನಾಳೆ ಪಟ್ಟಾಭಿಷೇಕ ಆಗುವುದು ಸಂತೋಷದ ಸಂಗತಿ" ಎನ್ನುತ್ತಾಳೆ ಕೈಕೇಯಿ.
ಆದರೆ, ಅದಾಗಲೇ ದುಷ್ಟ ಯೋಚನೆಗಳಲ್ಲಿ ಮುಳುಗಿದ್ದ ಮಂಥರೆ, ಶುದ್ಧ ಮನಸ್ಸಿನ ಕೈಕೇಯಿಯ ತಲೆಯಲ್ಲಿ ಅವನ್ನು ತುಂಬಲು ಶುರು ಮಾಡುತ್ತಾಳೆ. "ಶ್ರೀ ರಾಮ ರಾಜನಾದರೆ, ಅವನ ತಾಯಿ ಕೌಸಲ್ಯೆಯ ದಾಸಿಯರು ನಿನ್ನನ್ನು ಹೀನಾಯವಾಗಿ ಕಾಣುತ್ತಾರೆ. ನಿನ್ನ ಮಗ ಭರತನಿಗಂತೂ ಭವಿಷ್ಯವೇ ಇರುವುದಿಲ್ಲ" ಎಂಬಂತಹ ಮಾತುಗಳಿಂದ ಮತ್ತೆಮತ್ತೆ ಚುಚ್ಚುತ್ತಾಳೆ. ಅವನ್ನು ಕೇಳಿಕೇಳಿ ಕ್ರಮೇಣ ಕೈಕೇಯಿಯ ತಲೆಯಲ್ಲೂ ವಿಷ ತುಂಬಿಕೊಳ್ಳುತ್ತದೆ. "ಹಾಗಾದರೆ ನಾನೀಗ ಏನು ಮಾಡಬೇಕು?" ಎಂದು ಕೇಳುತ್ತಾಳೆ ಕೈಕೇಯಿ.
ಇದೇ ಅವಕಾಶಕ್ಕಾಗಿ ಕಾದಿದ್ದ ಮಂಥರೆ ತಕ್ಷಣವೇ ವಿಷಭರಿತ ಸಲಹೆ ನೀಡುತ್ತಾಳೆ, "ಅಂದೊಮ್ಮೆ ದಶರಥ ಮಹಾರಾಜನಿಗೆ ಯುದ್ಧದಲ್ಲಿ ನೀನು ಸಹಾಯ ಮಾಡಿದ್ದೆ. ಆಗ ನಿನಗೆ ಎರಡು ವರ ನೀಡುವುದಾಗಿ ಮಹಾರಾಜ ಮಾತು ಕೊಟ್ಟಿದ್ದ. ಅವನ್ನು ನೀನು ಈಗ ಕೇಳು. ಮೊದಲನೆಯದು ಭರತನಿಗೆ ನಾಳೆ ಪಟ್ಟಾಭಿಷೇಕ ಮಾಡಬೇಕೆಂದು; ಎರಡನೆಯದು ಶ್ರೀ ರಾಮ ಹದಿನಾಲ್ಕು ವರುಷಗಳ ವನವಾಸಕ್ಕೆ ನಾಳೆಯೇ ಹೊರಡಬೇಕೆಂದು."
ಅದೇ ದಿನ ರಾತ್ರಿ, ದಶರಥ ಮಹಾರಾಜ ಕೈಕೇಯಿಯ ಬಳಿ ಬಂದಾಗ, ಆಕೆ ಇವೆರಡು ವರಗಳನ್ನು ಕೇಳುತ್ತಾಳೆ. ದಶರಥ ಮಹಾರಾಜ ಕುಸಿದು ಬೀಳುತ್ತಾನೆ. ಆತ ಕೈಕೇಯಿಯ ಬಳಿ ಪರಿಪರಿಯಾಗಿ ಬೇಡಿಕೊಳ್ಳುತ್ತಾನೆ, "ಭರತನಿಗೆ ಬೇಕಾದರೆ ಪಟ್ಟಾಭಿಷೇಕ ಮಾಡೋಣ. ಆದರೆ, ಶ್ರೀ ರಾಮ ವನವಾಸಕ್ಕೆ ಹೋಗಬೇಕೆಂಬ ಪ್ರಸ್ತಾಪ ಹಿಂತೆಗೆದುಕೊ. ಯಾಕೆಂದರೆ ನಾನು ಶ್ರೀ ರಾಮನನ್ನು ಬಿಟ್ಟು ಬದುಕಿರಲಾರೆ." ಆದರೆ ಕೈಕೇಯಿ ತನ್ನ ಹಠ ಸಾಧಿಸುತ್ತಾಳೆ.
ಮುಂದೇನಾಯಿತೆಂಬುದು ನಮಗೆಲ್ಲರಿಗೂ ಕಣ್ಣಿಗೆ ಕಟ್ಟಿದಂತಿದೆ. ತಂದೆಯ ಮಾತಿನ ಪಾಲನೆಗಾಗಿ ಶ್ರೀ ರಾಮ ವನವಾಸಕ್ಕೆ ಹೊರಡುತ್ತಾನೆ. ಪತ್ನಿ ಸೀತೆ ಅವನನ್ನು ಹಿಂಬಾಲಿಸುತ್ತಾಳೆ. ತಮ್ಮ ಲಕ್ಷ್ಮಣನೂ ಹೋಗುತ್ತಾನೆ. ರಾಜನಾಗಬೇಕಾಗಿದ್ದ ಪುತ್ರ ಶ್ರೀ ರಾಮ ಕಾಡಿನ ಪಾಲಾದ ದುಃಖ ಸಹಿಸಲಾಗದೆ ದಶರಥನ ಮರಣ. ರಾಜ್ಯದ ಸಿಂಹಾಸನವೇರಲು ಸುತಾರಾಂ ಒಪ್ಪದ ಭರತ, ಶ್ರೀ ರಾಮನ ಪಾದುಕೆಗಳನ್ನು ತಂದಿಟ್ಟು, ಶ್ರೀ ರಾಮನ ಹೆಸರಿನಲ್ಲೇ ರಾಜ್ಯವಾಳುತ್ತಾನೆ.
ಶ್ರೀ ರಾಮ ವನವಾಸಕ್ಕೆ ತೆರಳಿದ ಸಂದರ್ಭವನ್ನು ಪರಿಶೀಲಿಸೋಣ. ಸಂಭ್ರಮ ತುಂಬಿತುಳುಕಾಡುತ್ತಿದ್ದ ಅಯೋಧ್ಯೆ ದುಃಖದ ಕಡಲಿನಲ್ಲಿ ಮುಳುಗುತ್ತದೆ. ಅಯೋಧ್ಯೆಯ ಜನರೆಲ್ಲಾ ಸರಯೂ ನದಿಯ ವರೆಗೆ ಶ್ರೀ ರಾಮನನ್ನು ಹಿಂಬಾಲಿಸುತ್ತಾರೆ. ರಾತ್ರಿ ಕಳೆದು ಬೆಳಗಾಗುವಾಗ ಅಯೋಧ್ಯೆ ಎಂಬ ಸಮೃದ್ಧ ರಾಜ್ಯದ ರಾಜಧಾನಿಯಲ್ಲಿ ಎಲ್ಲವೂ ತಲೆಕೆಳಗಾಗಿತ್ತು. ಗಮನಿಸಿ: ಒಬ್ಬಳು ನೀಚ ಬುದ್ಧಿಯ ದುಷ್ಟ ವ್ಯಕ್ತಿಯ ಕುತಂತ್ರದಿಂದಾಗಿ ಮಹಾಸಾಮ್ರಾಜ್ಯ, ಮಹಾರಾಜ, ಮಹಾಮಂತ್ರಿ, ಮಹಾಸೇನಾನಿ ಸಹಿತ ಸಮಾಜ ಹಾಗೂ ಆಡಳಿತ ವ್ಯವಸ್ಥೆ ಅಸಹಾಯಕವಾಗಿ ತತ್ತರಿಸಿ ಹೋಯಿತು.
ಶ್ರೀ ರಾಮಾಯಣದ ಹತ್ತುಹಲವು ಜೀವನ ಪಾಠಗಳ ಜೊತೆಗೆ ಇಂತಹ ಪಾಠಗಳನ್ನು ನಮ್ಮ ಮಕ್ಕಳಿಗೆ ಕಲಿಸಬೇಕಾಗಿದೆ ಅಲ್ಲವೇ? ಅಂದರೆ, ದೊಡ್ಡ ಸಂಸ್ಥೆ, ಕಂಪೆನಿ, ಆಡಳಿತ ವ್ಯವಸ್ಥೆ ಅಥವಾ ದೇಶವನ್ನು ಬುಡಮೇಲು ಮಾಡಲು ವಿಷಪೂರಿತ ಯೋಚನೆ ತುಂಬಿದ ಯಾವುದೇ ಸ್ತರದ ಒಬ್ಬ ವ್ಯಕ್ತಿ ಸಾಕು. ಅಂತಹ ದುಷ್ಟ ಯೋಚನೆಗಳನ್ನು ಶುದ್ಧ ಮನಸ್ಸಿನವರಲ್ಲಿ ತುಂಬಿ, ದುಷ್ಟ ಯೋಜನೆಗಳನ್ನು ಕಾರ್ಯಗತಗೊಳಿಸಲು ತಯಾರು ಮಾಡುವ (ಅಂದರೆ ಬ್ರೈನ್ ವಾಷ್ ಮಾಡುವ) ಅಪಾಯಕಾರಿ ವ್ಯಕ್ತಿಗಳು ನಮ್ಮ ಸುತ್ತಮುತ್ತ ಇದ್ದಾರೆ, ಅಲ್ಲವೇ? ಆದ್ದರಿಂದ ಅಂಥವರ ಜೊತೆ ಅತ್ಯಂತ ಜಾಗರೂಕತೆಯಿಂದ ವ್ಯವಹರಿಸಬೇಕು.
ಸರಿ, ಶ್ರೀ ರಾಮಾಯಣದ ಕತೆಯನ್ನು ನಮ್ಮ ಮಕ್ಕಳಿಗೆ ಕಲಿಸಲು ನಾವೇನು ಮಾಡಿದ್ದೇವೆ? ಈ ಉದ್ದೇಶ ಸಾಧನೆಗೆ ಎರಡು ಸರಳ ದಾರಿಗಳಿವೆ: ಮೊದಲನೆಯದು, ನಮ್ಮ ಮಕ್ಕಳಿಗೆ ನಾಲ್ಕು ವರುಷ ವಯಸ್ಸಾಗುವ ಮುಂಚೆ ಅವರಿಗೆ "ಏಕಶ್ಲೋಕೀ ರಾಮಾಯಣಂ"ಕಂಠಪಾಠ ಮಾಡಿಸುವುದು:
ಆದೌ ರಾಮ ತಪೋವನಾಭಿಗಮನಂ ಹತ್ವಾ ಮೃಗಂ ಕಾಂಚನಂ
ವೈದೇಹೀ ಹರಣಂ ಜಟಾಯು ಮರಣಂ ಸುಗ್ರೀವ ಸಂಭಾಷಣಂ
ವಾಲೀ ನಿಗ್ರಹಣಂ ಸಮುದ್ರ ತರಣಂ ಲಂಕಾಪುರೀ ದಹನಂ
ಪಶ್ಚಾತ್ದ್ರಾವಣ ಕುಂಭಕರ್ಣ ಹನನಂ ಹ್ಯೇತದ್ಧಿ ರಾಮಾಯಣಂ
ಈ ಶ್ಲೋಕದ ಭಾವಾರ್ಥ: ರಾಮ ಕಾಡಿಗೆ ಹೋದದ್ದು - ಚಿನ್ನದ ಜಿಂಕೆಯನ್ನು ಬೇಟಿಯಾಡಿದ್ದು -
ಸೀತೆಯ ಅಪಹರಣವಾದದ್ದು - ಜಟಾಯು ಮರಣವನ್ನಪ್ಪಿದ್ದು - ಸುಗ್ರೀವನೊಂದಿಗೆ ಸಹಚರ್ಯ -
ವಾಲಿಯನ್ನು ಸಂಹರಿಸಿದ್ದು - ಸಾಗರವನ್ನು ದಾಟಿದ್ದು - ಲಂಕೆಯು ಸುಟ್ಟದ್ದು -
ರಾವಣ ಮತ್ತು ಕುಂಭಕರ್ಣರನ್ನು ವಧಿಸಿದ್ದು - ಇವೆಲ್ಲವೂ ಸೇರಿ ಆದುದೇ ರಾಮಾಯಣ
ಎರಡನೆಯ ದಾರಿ, "ಚಿಣ್ಣರ ಚಿತ್ರ ರಾಮಾಯಣ" ಪುಸ್ತಕದ ಒಂದೊಂದು ಪುಟದ ಚಿತ್ರವನ್ನು ಮಕ್ಕಳಿಗೆ ದಿನಕ್ಕೆ ಒಂದರಂತೆ ತೋರಿಸುತ್ತಾ, ಅದರಲ್ಲಿರುವ ಕತೆಯನ್ನು ಅವರಿಗೆ ಓದಿ ಹೇಳುವುದು (ಇದಕ್ಕೆ ಪ್ರತಿ ದಿನ ಹತ್ತು ನಿಮಿಷ ಸಾಕು). ಇದು 1917ರಲ್ಲಿ ಪ್ರಕಟವಾದ ಪುಸ್ತಕ. ಇದರ ಪ್ರತಿ ಪುಟದ ಎಡಭಾಗದಲ್ಲಿ ಆಕರ್ಷಕ ಚಿತ್ರ ಹಾಗು ಬಲಭಾಗದಲ್ಲಿ ಅದರ ಕತೆಯ ಸೊಗಸಾದ ವಿವರಣೆ ಇದೆ. ಈ ವಿವರಣೆ ಬರದವರು ಪ್ರೊ. ಜಿ. ವೆಂಕಟಸುಬ್ಬಯ್ಯ. 128 ಪುಟಗಳ ಈ ಪುಸ್ತಕದಲ್ಲಿರುವ ರಾಮಾಯಣದ 60 ಘಟನೆಗಳ ಚಿತ್ರಗಳೂ ವಿವರಣೆಗಳೂ ಬಹುಕಾಲ ನೆನಪಿನಲ್ಲಿ ಉಳಿಯುತ್ತವೆ. (ಪ್ರಕಾಶಕರು: ಪ್ರಿಸಂ ಬುಕ್ಸ್, ಬೆಂಗಳೂರು, ಬೆಲೆ ರೂ. 160) "ಅಮರ ಚಿತ್ರ ಕತೆ" ಸರಣಿಯ "ರಾಮಾಯಣ" ಪುಸ್ತಕವನ್ನೂ ಮಕ್ಕಳಿಗೆ ಓದಲು ಕೊಡಬಹುದು. ಹೆತ್ತವರು ಈ ಎರಡು ಸರಳ ದಾರಿಗಳ ಮೂಲಕ ಮಕ್ಕಳ ಮನದಲ್ಲಿ ರಾಮಾಯಣದ ಕತೆಯನ್ನು ಬಾಲ್ಯದಲ್ಲೇ ದಾಖಲಿಸಲು ಖಂಡಿತ ಸಾಧ್ಯ.
ಕ್ರಮೇಣ, ಮಕ್ಕಳಿಗೆ ರಾಮಾಯಣದ ವಿವರವಾದ ಕತೆ ತಿಳಿಸಲಿಕ್ಕಾಗಿ ಯಾವುದೇ "ರಾಮಾಯಣ" ಪುಸ್ತಕವನ್ನು ಬೇಸಗೆ ರಜೆಯಲ್ಲಿ ಓದಲು ಕೊಡಬಹುದು. ರಾಜಾಜಿಯವರು ಬರೆದಿರುವ ರಾಮಾಯಣದ ಕತೆ ಸರಳವಾಗಿದೆ. ಅದಲ್ಲದೆ, ಹಲವು ಪ್ರಕಾಶಕರು ರಾಮಾಯಣವನ್ನು ಪುಸ್ತಕವಾಗಿ ಪ್ರಕಟಿಸಿದ್ದಾರೆ. ಮಕ್ಕಳಿಗೆ ಹತ್ತು ವರುಷ ತುಂಬುವ ಮುನ್ನ, ಎರಡು ವರುಷಗಳ ಬೇಸಗೆ ರಜೆಯಲ್ಲಿ ರಾಮಾಯಣದ ಕತೆ ಓದಿ ಹೇಳಿದರೆ, ಅದರ ವಿವರಗಳು ಅವರ ನೆನಪಿನಲ್ಲಿ ಅಚ್ಚಳಿಯದೆ ಉಳಿಯುತ್ತವೆ.
ಹೀಗೆ, ಬಾಲ್ಯದಲ್ಲಿಯೇ ನಮ್ಮ ಮಕ್ಕಳಿಗೆ ರಾಮಾಯಣದ ಕತೆ ತಿಳಿಸಿದರೆ, ಅವರ ಬದುಕಿನುದ್ದಕ್ಕೂ ರಾಮಾಯಣದ ಜೀವನಪಾಠಗಳು ಅವರಿಗೆ ದಾರಿದೀಪವಾಗ ಬಲ್ಲವು.
ಫೋಟೋ: ಶ್ರೀರಾಮ ಮತ್ತು ಸೀತಾದೇವಿಯ ಪ್ರಾಚೀನ ಶಿಲ್ಪ … ಕೃಪೆ: ರೆಡ್ಡಿಟ್
(ಫೆಬ್ರವರಿ - ಮಾರ್ಚ್ 2024)









