Consumers' Forum & RTI
ನಮ್ಮ ದೇಶದಲ್ಲಿ ಕ್ಯಾನ್ಸರಿಗೆ ಬಲಿಯಾಗುವವರ ಸಂಖ್ಯೆ ವರುಷದಿಂದ ವರುಷಕ್ಕೆ ಹೆಚ್ಚುತ್ತಲೇ ಇದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣದ ರಾಜ್ಯ ಸಚಿವ ಡಾ. ಭಾರತಿ ಪ್ರವೀಣ್ ಪವಾರ್ ಲೋಕಸಭೆಯಲ್ಲಿ ನೀಡಿದ ಲಿಖಿತ ಉತ್ತರ ಇದಕ್ಕೆ ಆಧಾರ: ಅದರ ಅನುಸಾರ ಕ್ಯಾನ್ಸರಿನಿಂದಾದ ಸಾವುಗಳ ಸಂಖ್ಯೆ: 2018ರಲ್ಲಿ 7.33 ಲಕ್ಷ, 2019ರಲ್ಲಿ 7.51 ಲಕ್ಷ ಮತ್ತು 2020ರಲ್ಲಿ 7.70 ಲಕ್ಷ.
ಜಾಗತಿಕ ಆರೋಗ್ಯ ಸಂಸ್ಥೆಯ (ಡಬ್ಲ್ಯೂ.ಎಚ್.ಓ.) ಅಂತರಾಷ್ಟ್ರೀಯ ಕ್ಯಾನ್ಸರ್ ಸಂಶೋಧನಾ ಏಜೆನ್ಸಿ ಅನುಸಾರ 2022ರಲ್ಲಿ ಭಾರತದಲ್ಲಿ ದಾಖಲಾದ ಹೊಸ ಕ್ಯಾನ್ಸರ್ ರೋಗಿಗಳ ಸಂಖ್ಯೆ 14.1 ಲಕ್ಷ ಮತ್ತು ಸಾವುಗಳ ಸಂಖ್ಯೆ 9.1 ಲಕ್ಷ. ಅದೇ ಏಜೆನ್ಸಿಯ ವರದಿಗಳು ಈ ಸಂಗತಿಗಳನ್ನೂ ಬಹಿರಂಗ ಪಡಿಸಿವೆ: ಭಾರತದಲ್ಲಿ ಹೊಸ ರೋಗಿ ಮಹಿಳೆಯರಲ್ಲಿ ಅತ್ಯಧಿಕ ಪ್ರಕರಣಗಳು: ಸ್ತನ ಕ್ಯಾನ್ಸರ್ (ಶೇ.27) ಮತ್ತು ಗರ್ಭಕೋಶದ ಕ್ಯಾನ್ಸರ್ (ಶೇ. 18). ಹಾಗೆಯೇ, ಹೊಸ ರೋಗಿ ಪುರುಷರಲ್ಲಿ ಅತ್ಯಧಿಕ ಪ್ರಕರಣಗಳು: ತುಟಿಯ ಕ್ಯಾನ್ಸರ್ (ಶೇ. 15.6) ಮತ್ತು ಬಾಯಿ ಹಾಗೂ ಶ್ವಾಸಕೋಶದ ಕ್ಯಾನ್ಸರ್ (ಶೇ. 8.5).
ಪುರುಷರಲ್ಲಿ ಉಲ್ಲೇಖಿತ ಕ್ಯಾನ್ಸರುಗಳಿಗೆ ಕಾರಣ ತಂಬಾಕು ಬಳಕೆ (ಸಿಗರೇಟು, ಬೀಡಿ, ಸಿಗಾರ್, ನಶ್ಯ ಚಟ) ಮತ್ತು ಗುಟ್ಕಾ ಸೇವನೆ ಚಟ ಎಂಬುದು ಸ್ಪಷ್ಟ. ಅಂಕೆಸಂಖ್ಯೆಗಳು ಈ ಭಯಂಕರ ಚಟಗಳಿಂದ ಆಗುತ್ತಿರುವ ಅನಾಹುತಗಳನ್ನು ದಾಖಲಿಸುತ್ತಿದ್ದಂತೆ ಬಳಕೆದಾರರ ಸಂಘಟನೆಗಳೂ ಆರೋಗ್ಯ ಸಂಸ್ಥೆಗಳೂ ಸರಕಾರದ ಮೇಲೆ ಇವುಗಳ ನಿಷೇಧಕ್ಕಾಗಿ ಒತ್ತಡ ಹೇರಿದವು. ಅದರಿಂದಾಗಿ ಭಾರತ ಸರಕಾರವು ಸಿಗರೇಟು ಮತ್ತು ಇತರ ತಂಬಾಕು ಉತ್ಪನ್ನಗಳ ಪ್ಯಾಕೆಟುಗಳಲ್ಲಿ “ಇವುಗಳ ಸೇವನೆ ಆರೋಗ್ಯಕ್ಕೆ ಹಾನಿಕರ” ಎಂಬ ಚಿತ್ರಸಹಿತ ಜಾಹೀರಾತು ಪ್ರಕಟಿಸುವುದನ್ನು ಕಡ್ಡಾಯಗೊಳಿಸಿತು. ಹಾಗೆಯೇ, ಭಾರತ ಸರಕಾರವು ಗುಟ್ಕಾ ಮತ್ತು ಇತರ ಜಗಿಯುವ ತಂಬಾಕು ಉತ್ಪನ್ನಗಳ ಮಾರಾಟವನ್ನು 2012ರಿಂದ ದೇಶದ ಉದ್ದಗಲದಲ್ಲಿ ನಿಷೇಧಿಸಿತು. ಭಾರತದ ಆಹಾರ ಸುರಕ್ಷತಾ ಮತ್ತು ಮಾನಕ ಪ್ರಾಧಿಕಾರವು 01-8-2011ರಿಂದ ಯಾವುದೇ ಆಹಾರ ಉತ್ಪನ್ನದಲ್ಲಿ ತಂಬಾಕು ಮತ್ತು ನಿಕೊಟಿನಿನ ಬಳಕೆಯನ್ನು ಪ್ರತಿಬಂಧಿಸಿದೆ.
ವಾಸ್ತವ ಮತ್ತು ಭ್ರಮೆ
ವಾಸ್ತವ ಮತ್ತು ಭ್ರಮೆಯನ್ನು ಬೇರ್ಪಡಿಸಲು ಮಕ್ಕಳಿಗೆ ಕಷ್ಟವಾಗುವುದು ಸಹಜ. ಟಿವಿ ಅಥವಾ ಮೊಬೈಲಿನ ಆಟನೋಟಗಳಿಂದಾಗಿ ಅವರಿಗೆ ಇನ್ನಷ್ಟು ಗೊಂದಲವಾಗುತ್ತದೆ. ಉದಾಹರಣೆಗೆ ಅವುಗಳ ಪರದೆಯಲ್ಲಿ ಕಾಣುವ ಹಿಂಸೆ ಮಕ್ಕಳಿಗೆ ಜಗತ್ತಿನ ವಾಸ್ತವದ ಬಗ್ಗೆ ತಿಳಿಸುವ ಬದಲಾಗಿ ಭ್ರಮಾಲೋಕವನ್ನು ತೋರಿಸುತ್ತದೆ.
ಅದೇ ರೀತಿಯಲ್ಲಿ ಕಾರ್ಟೂನ್ ಫಿಲ್ಮುಗಳೂ ಮಕ್ಕಳಲ್ಲಿ ಗೊಂದಲ ಹೆಚ್ಚಿಸುತ್ತವೆ. ಒಂದು ಅಧ್ಯಯನದಲ್ಲಿ, ಹಲವು ಮಕ್ಕಳನ್ನು “ಕಲಿಯುವುದರಲ್ಲಿ ನಿರುತ್ಸಾಹಿಗಳು” ಎಂದು ಅವರ ಶಿಕ್ಷಕರು ಗುರುತಿಸಿದರು. ಆ ಮಕ್ಕಳ ಹಿನ್ನೆಲೆ ಪರಿಶೀಲಿಸಿದಾಗ, ಅವರು ಟಿವಿಯಲ್ಲಿ ಅತಿಯಾಗಿ ಕಾರ್ಟೂನ್ ಫಿಲ್ಮುಗಳನ್ನು ನೋಡುವ ಮಕ್ಕಳೆಂದು ತಿಳಿದು ಬಂತು! ಕಾದಂಬರಿ ಓದುವಾಗ, ಪಾತ್ರ, ಸನ್ನಿವೇಶ ಹಾಗೂ ಘಟನೆಗಳನ್ನು ಕಲ್ಪಿಸಿಕೊಳ್ಳುವಾಗ ಅಗತ್ಯವಾದ ಸೃಜನಾತ್ಮಕ ಪ್ರಕ್ರಿಯೆಗೆ ಟಿವಿ ಅಥವಾ ಮೊಬೈಲ್ ವೀಕ್ಷಣೆಯಲ್ಲಿ ಅವಕಾಶವೇ ಇಲ್ಲ.
ಟಿವಿ ಅಥವಾ ಮೊಬೈಲನ್ನು ಕಡಿಮೆ ಬಳಸುವ ಮಕ್ಕಳು ವಿವಿಧ ಚಟುವಟಿಕೆಗಳಲ್ಲಿ ಅಧಿಕ ಆಸಕ್ತಿ ತೋರುತ್ತಾರೆ ಮತ್ತು ಭಾಗವಹಿಸುತ್ತಾರೆ. ಈ ಚಟುವಟಿಕೆಗಳಿಂದಾಗಿ ಅವರು ಇತರ ಮಕ್ಕಳೊಂದಿಗೆ ಮತ್ತು ಕುಟುಂಬದ ಸದಸ್ಯರೊಂದಿಗೆ ಒಡನಾಟ ಕಲಿಯುತ್ತಾರೆ.
ಜಾಸ್ತಿ ಹೊತ್ತು ಟಿವಿ ಅಥವಾ ಮೊಬೈಲ್ ವೀಕ್ಷಿಸಿದರೆ ಮತ್ತು ಟಿವಿ ಪರದೆಗೆ 10 ಅಡಿಗಳಿಗಿಂತ ಹತ್ತಿರ ಕುಳಿತರೆ ಮಕ್ಕಳ ಕಣ್ಣುಗಳಿಗೆ ತ್ರಾಸವಾಗುತ್ತದೆ. ಇದರಿಂದಾಗಿ ಶಾಲಾ ಪಾಠದ ಬಗ್ಗೆ ಏಕಾಗ್ರತೆಗೂ ತೊಡಕಾಗುತ್ತದೆ.
ಟಿವಿ ಅಥವಾ ಮೊಬೈಲ್ ನೋಡುವುದರಿಂದ ನಿದ್ದೆಗೂ ತೊಂದರೆಯಾಗುತ್ತದೆ. ಅದರಿಂದಾಗಿ ಮಗುವಿಗೆ ಶಾಲಾ ಪಾಠಗಳಿಗೆ ಗಮನ ಕೊಡಲು ಸಾಧ್ಯವಾಗುವುದಿಲ್ಲ. ಹೋಂವರ್ಕ್ ಮಾಡಲು ಕಷ್ಟವಾಗುತ್ತದೆ. ಇದರಿಂದಾಗಿ ಶಾಲಾ ಕಲಿಕೆಯಲ್ಲಿ ಮಗುವಿನ ಪ್ರಗತಿ ಕುಂಠಿತವಾಗುತ್ತದೆ.
ಬೊಜ್ಜು ಮತ್ತು ಚಲನರಾಹಿತ್ಯ
“ಸೋಮೂ, ಟಿವಿ ನೋಡಿದ್ದು ಸಾಕು. ಇನ್ನು ಹೋಂವರ್ಕ್ ಶುರು ಮಾಡು. ಇಲ್ಲದಿದ್ದರೆ …" ಎಂದು ಅಮ್ಮ ಮೂರನೆಯ ಸಲ ಅಡುಗೆ ಕೋಣೆಯಿಂದ ಬೊಬ್ಬೆ ಹಾಕುತ್ತಾಳೆ.
ಆದರೆ ಟಿವಿ ಕಾರ್ಯಕ್ರಮಗಳ ಗದ್ದಲದಲ್ಲಿ ಮುಳುಗಿರುವ ಸೋಮುವಿಗೆ ಅಮ್ಮನ ಏರುದನಿಯ ಎಚ್ಚರಿಕೆ ಕೇಳಿಸುವುದೇ ಇಲ್ಲ. ಅಲ್ಲೇ ಡ್ರಾಯಿಂಗ್ ರೂಂನಲ್ಲಿ ಕುಳಿತು ಟಿವಿ ನೋಡುತ್ತಿರುವ ತಂದೆಯ ಸಿಟ್ಟಿನ ನೋಟವೂ ಅವನಿಗೆ ಕಾಣಿಸುವುದಿಲ್ಲ.
ಸೋಮು 10 ವರುಷ ವಯಸ್ಸಿನ ಬಾಲಕ. ಟಿವಿ ಪರದೆಯಲ್ಲಿ ಸಿನಿಮಾ ಹೀರೋಗಳನ್ನು ನೋಡುವುದೆಂದರೆ ಅವನಿಗೆ ಪಂಚಪ್ರಾಣ. ಟಿವಿಯ ಮಾರಾಮಾರಿ ಹೊಡೆದಾಟದ ದೃಶ್ಯಗಳು ಅವನಿಗೆ ಅಚ್ಚುಮೆಚ್ಚು. ಕಾರ್ಟೂನ್ ಸರಣಿಗಳನ್ನಂತೂ ಅವರು ಕುಳಿತು ಚಪ್ಪರಿಸುತ್ತಾನೆ. ಟಿವಿ ಪರದೆಯಲ್ಲಿ ಏನು ಚಲಿಸಿದರೂ ಅವನಿಗೆ ಆನಂದ. ಅದು ವೇಗವಾಗಿ ಚಲಿಸಿದಷ್ಟೂ ಮಜ. ಟಿವಿಯ ಎದುರೇ ಕುಳಿತಿರುವ ಸೋಮುವಿಗೆ ಗೆಳೆಯರೊಂದಿಗೆ ಆಟವಾಡಲು ಸಮಯವೇ ಇಲ್ಲ. ಹೋಂವರ್ಕ್ ಮಾಡುವಾಗ ಮನಸ್ಸಿಲ್ಲದ ಮನಸ್ಸಿನಿಂದ ಪುಸ್ತಕ ಹಿಡಿಯುತ್ತಾನೆ. ಅದಾದ ನಂತರ ಅವನಿಗೆ ಪುಸ್ತಕಗಳನ್ನು ಕಂಡರಾಗದು. ಮಿದುಳಿಗೆ ಕೆಲಸ ಕೊಡುವ ಯಾವುದೇ ಚಟುವಟಿಕೆ ಅವನಿಗೆ ಬಹಳ ತ್ರಾಸದಾಯಕ. (ಇವೆಲ್ಲ ಹೇಳಿಕೆಗಳು ಮೊಬೈಲಿನಲ್ಲಿ ಮುಳುಗಿರುವ ಬಾಲಕ-ಬಾಲಕಿಯರಿಗೂ ಅನ್ವಯಿಸುತ್ತವೆ.)
ಇಂತಹ ಬಾಲಕ ಸೋಮು ದೊಡ್ಡವನಾದಾಗ ಹೇಗಾದಾನು? ಯೋಚನೆ ಮಾಡುವ ಶಕ್ತಿಯೇ ಇಲ್ಲದ ದಡ್ಡನಾದಾನೇ? ಅವನ ಮಿದುಳಿನ ಬೆಳವಣಿಗೆ ಹಾಗೂ ಕಲಿಕೆಯ ಕೌಶಲ್ಯಗಳಿಗೆ ಟಿವಿ/ ಮೊಬೈಲ್ ವೀಕ್ಷಣೆ ಹಾನಿ ಮಾಡೀತೇ?
ಮಾತಿನ ಕಲಿಕೆ
ಟಿವಿ ವೀಕ್ಷಣೆ ಬಗ್ಗೆ ಹತ್ತು ವರುಷಗಳ ಅವಧಿ ನಡೆಸಿದ ಒಂದು ಅಧ್ಯಯನದ ವರದಿಯ ಅನುಸಾರ ಟಿವಿ ವೀಕ್ಷಣೆಯಿಂದಾಗಿ ಮಕ್ಕಳು ಮಾಟು ಕಲಿಯುವುದು ಬಹಳ ತಡವಾಗುತ್ತದೆ - ಮುಖ್ಯವಾಗಿ 1ರಿಂದ 5 ವರುಷಗಳ ಪ್ರಾಯದ ಮಕ್ಕಳಲ್ಲಿ. ಏಕಪದಗಳನ್ನು ಉಚ್ಚರಿಸುವ ಮೂಲಕ ಮಕ್ಕಳು ಮಾತನಾಡಲು ಶುರು ಮಾಡುತ್ತಾರೆ. ಕ್ರಮೇಣ ಸಣ್ಣ ವಾಕ್ಯಗಳನ್ನು, ಅನಂತರ ವಾಕ್ಯ ಸಮುಚ್ಚಯಗಳನ್ನು ಬಳಸಿ ಮಾತನಾಡುತ್ತಾರೆ.
ಯೌವನದ ಮೈಕಾಂತಿ ಹಾಗೂ ಶಾರೀರಿಕ ಸೊಬಗು ಉಳಿಸಿಕೊಳ್ಳಲು ಹೆಣ್ಣು-ಗಂಡೆಂಬ ಭೇದವಿಲ್ಲದೆ ಬಹುಪಾಲು ಜನರು ಹಾತೊರೆಯುತ್ತಾರೆ. ಯಾವುದೋ ಕ್ರೀಂ ಹಚ್ಚಿಕೊಂಡರೆ ಮುದಿತನ ತಮ್ಮ ಹತ್ತಿರ ಸುಳಿಯದೆಂದು ಭ್ರಮಿಸುತ್ತಾರೆ. ಆದರೆ ದುಬಾರಿ ಬೆಲೆಯ ಸೌಂದರ್ಯ ಪ್ರಸಾಧನಗಳು ವಯಸ್ಸಿನ ಚಿಹ್ನೆಗಳನ್ನು ಹೋಗಲಾಡಿಸಲು ಸಾಧ್ಯವೇ?
“ಸಾಧ್ಯವೇ ಇಲ್ಲ” ಎಂದು ಎಚ್ಚರಿಸುತ್ತದೆ ಅಮೇರಿಕದ ವಿಜ್ನಾನ ಕ್ರಿಯಾ ಸಂಘಟನೆ. ಮುದಿತನ ನಿರೋಧಿ ಸೌಂದರ್ಯ ಪ್ರಸಾಧನಗಳು ಚಿರಯೌವನದ ಚಿಲುಮೆಗಳಲ್ಲ. ಅವು ದೇಹದ ಸುಕ್ಕುಗಳಲ್ಲಿ ತುಂಬಿಕೊಂಡು ಅಥವಾ ಚರ್ಮವನ್ನು ಉಬ್ಬಿಸಿ, ಆ ಸುಕ್ಕುಗಳು ಎದ್ದು ಕಾಣದಂತೆ ಮಾಡಬಲ್ಲವು. ಆದರೆ ಸುಕ್ಕುಗಳನ್ನು ಹೋಗಲಾಡಿಸಲಾರವು.
ಚರ್ಮ ಮತ್ತು ವಯಸ್ಸು
ನಮ್ಮ ಜೀವಮಾನದುದ್ದಕ್ಕೂ ಚರ್ಮ ಪರಿವರ್ತನೆಯಾಗುತ್ತದೆ. ಹೆಚ್ಚು ಕಡಿಮೆಯಾಗುವ ಹಾರ್ಮೋನುಗಳೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುತ್ತ ಮತ್ತು ಪರಿಸರದ ಬದಲಾವಣೆಗಳಿಗೆ ಸ್ಪಂದಿಸುತ್ತಾ ಚರ್ಮ ಪರಿವರ್ತನೆಯಾಗುತ್ತಲೇ ಇರುತ್ತದೆ. ಮಾತ್ರವಲ್ಲ, ನಮ್ಮ ಚರ್ಮ ನಿರಂತರವಾಗಿ ಹೊಸಹುಟ್ಟು ಪಡೆಯುತ್ತಲೇ ಇರುತ್ತದೆ. ಹೊಸ ಜೀವಕೋಶಗಳು ಚರ್ಮದ ಕೆಳಪದರಗಳಲ್ಲಿ ಹುಟ್ಟಿ, ಕ್ರಮೇಣ ಚರ್ಮದ ಮೇಲ್ಭಾಗಕ್ಕೆ ಸ್ಥಾನಪಲ್ಲಟವಾಗಿ, ಅಲ್ಲಿ ಸಾಯುತ್ತವೆ. ಇವು ತೆಳುವಾದ ಪದರವಾಗಿ ಕೊನೆಗೆ ಚರ್ಮದಿಂದ ಉದುರಿ ಹೋಗುತ್ತವೆ.
ಚರ್ಮ ತಜ್ನರು ಎರಡು ವಿಧದ ಮುಪ್ಪಾಗುವ ಪ್ರಕ್ರಿಯೆ ಗುರುತಿಸುತ್ತಾರೆ. ಸಹಜ ಮುಪ್ಪಾಗುವಿಕೆ ಮೊದಲನೆಯದು. ಈ ರೀತಿ ವಯಸ್ಸಾಗಿ ಮುಪ್ಪಾದ ಬಳಿಕ ಮತ್ತೆ ಯೌವನಕ್ಕೆ ಮರಳಲು ಸಾಧ್ಯವೇ ಇಲ್ಲ. ಎರಡನೇ ವಿಧದ ಪ್ರಕ್ರಿಯೆಯನ್ನು ಬಿಸಿಲಿನಿಂದ ಮುಪ್ಪಾಗುವಿಕೆ ಎನ್ನುತ್ತಾರೆ. ಇದಕ್ಕೆ ಮುಖ್ಯ ಕಾರಣ ಸೂರ್ಯನ ಅತಿ-ನೇರಳೆ ಕಿರಣಗಳಿಂದ ಚರ್ಮಕ್ಕಾಗುವ ಹಾನಿ.
ಆಟಿಕೆಗಳು ಬೇಕೆಂದು ಮಕ್ಕಳು ಹಟ ಮಾಡಿದಾಗ ತೆಗೆಸಿಕೊಡದಿರುವ ಹೆತ್ತವರುಂಟೇ? ಆದರೆ, ಮಕ್ಕಳಿಗೆ ಆಟಿಕೆ ತೆಗೆಸಿಕೊಟ್ಟೊಡನೆ ಹೆತ್ತವರ ಜವಾಬ್ದಾರಿ ಮುಗಿಯುವುದಿಲ್ಲ. ಆಟಿಕೆಗಳಿಂದ ಮಕ್ಕಳಿಗೆ ಅಪಾಯ ಆಗದಂತೆಯೂ ಹೆತ್ತವರು ಕಣ್ಣಿಟ್ಟು ಕಾಯಬೇಕಾಗುತ್ತದೆ.
ಏಕೆಂದರೆ ಆಟಿಕೆಗಳ ಬೃಹತ್ ವಹಿವಾಟಿನಲ್ಲಿ ಉತ್ಪಾದಕರ ಬೇಜವಾಬ್ದಾರಿಯ ಹಲವು ನಿದರ್ಶನಗಳಿವೆ. ಭಾರತದಲ್ಲಿ ಕೆಲವು ಕಂಪೆನಿಗಳ ಆಟಿಕೆಗಳ ವಾರ್ಷಿಕ ಮಾರಾಟ ತಲಾ ರೂಪಾಯಿ 3 - 4 ಕೋಟಿ ದಾಟಿದೆ! ಅದಲ್ಲದೆ ಲಿಯೋ, ಲಿಗೋ, ಬಾರ್ಬಿ ಇಂತಹ ಜಗತ್ಪ್ರಸಿದ್ಧ ಮಕ್ಕಳ ಆಟಿಕೆ ಕಂಪೆನಿಗಳೂ ಭಾರತದಲ್ಲಿ ಕೋಟಿಗಟ್ಟಲೆ ರೂಪಾಯಿ ವಾರ್ಷಿಕ ವಹಿವಾಟು ನಡೆಸುತ್ತಿವೆ. ಇಂತಹ ದಂಧೆಯಲ್ಲಿ ಉತ್ಪಾದಕರ ಲಾಭದಾಸೆಗೆ ಮಕ್ಕಳು ಬಲಿಯಾಗದಂತೆ ಹೆತ್ತವರೇ ಮುನ್ನೆಚ್ಚರಿಕೆ ವಹಿಸಬೇಕಾಗಿದೆ.
ಅಧ್ಯಯನದ ಫಲಿತಾಂಶ
ಭಾರತದಲ್ಲಿ ಮಕ್ಕಳ ಪ್ರಾಣಕ್ಕೇ ಕುತ್ತಾಗಬಲ್ಲ ಆಟಿಕೆಗಳ ಆಕಾರ, ಗಾತ್ರ, ಅವುಗಳ ತಯಾರಿಗೆ ಬಳಸಲಾಗುವ ದೋಷಪೂರ್ಣ ಅಥವಾ ವಿಷಯುಕ್ತ ವಸ್ತು/ ಪೈಂಟ್ ಇತ್ಯಾದಿಗಳ ಬಗ್ಗೆ ಒಂದು ಅಧ್ಯಯನ ನಡೆಸಲಾಯಿತು. ಆಟಿಕೆಗಳ ಮಾರಾಟಗಾರರು, ಹೆತ್ತವರು ಹಾಗೂ ಮಕ್ಕಳಿಂದ ಮಾಹಿತಿ ಸಂಗ್ರಹಿಸಿ ವಿಶ್ಲೇಷಿಸಲಾಯಿತು. ಅಂತಿಮವಾಗಿ ಆಟಿಕೆಗಳ ಸುರಕ್ಷಿತತೆ ಮತ್ತು ಗುಣಮಟ್ಟದ ಮಾನದಂಡ ನಿರ್ಧರಿಸಿ, ಅದನ್ನು ಕಾಯ್ದುಕೊಳ್ಳಲು ಮತ್ತು ಆಟಿಕೆಗಳಿಂದಾಗುವ ದುರ್ಘಟನೆಗಳ ಬಗ್ಗೆ ನಿರಂತರವಾಗಿ ಮಾಹಿತಿ ಸಂಗ್ರಹಿಸಲು ರಾಷ್ಟ್ರ ಮಟ್ಟದ ಅಧಿಕಾರ ಸಂಸ್ಥೆಯೊಂದನ್ನು ಸ್ಥಾಪಿಸಬೇಕೆಂದು ಅಧ್ಯಯನ ತಂಡವು ಶಿಫಾರಸ್ ಮಾಡಿದೆ.
ಈ ಅಧ್ಯಯನದಲ್ಲಿ ಗುರುತಿಸಲಾದ ಕೆಲವು ಅಪಾಯಕಾರಿ ಆಟಿಕೆಗಳ ವಿವರ ಹೀಗಿದೆ:
1) ಮರದ ರೈಲು, ವಿಮಾನ: ಇವುಗಳ ಮೊಳೆಗಳಿಂದ ಎಳೆಮಕ್ಕಳಿಗೆ ಗಾಯವಾದ್ದರಿಂದ ಟಿಟಿನಸ್ ರೋಗಕ್ಕೆ ಚಿಕಿತ್ಸೆ ನೀಡಬೇಕಾಯಿತು.
2) ಪ್ಲಾಸ್ಟಿಕ್ ಚುಚ್ಚುಪಿನ್ ಮತ್ತು ತೂತು ಫಲಕ: ಇದು ತೂತು ಫಲಕದಲ್ಲಿ ವಿಭಿನ್ನ ಚುಚ್ಚುಪಿನ್‌ಗಳನ್ನು ಚುಚ್ಚಿ, ವಿವಿಧ ಆಕೃತಿಗಳನ್ನು ರಚಿಸುವ ಆಟಿಕೆ. ಆ ಚುಚ್ಚುಪಿನ್‌ಗಳನ್ನು ಕಿತ್ತು ತೆಗೆಯುವಾಗ ಮಕ್ಕಳ ಚರ್ಮ, ಬೆರಳುಗಳು ಮತ್ತು ಉಗುರುಗಳಿಗೆ ಘಾಸಿಯಾಗುತ್ತದೆ.
ಬೋಳು ತಲೆಯ ವ್ಯಕ್ತಿಗಳು ತಮ್ಮ ನುಣುಪಾದ ತಲೆಯನ್ನು ಕೈಯಿಂದ ಸವರಿಕೊಳ್ಳುವಾಗ, ಅದೆಷ್ಟು ಹಿತವಾದ ಅನುಭವ ಎಂದು ನಮಗನಿಸಬಹುದು. ಆದರೆ ಅವರ ಸಮಸ್ಯೆ ಅವರಿಗೇ ಗೊತ್ತು.
ಆ ಸಮಸ್ಯೆ ಇಂದು ನಿನ್ನೆಯದಲ್ಲ. ಪ್ರಾಚೀನ ಕಾಲದಲ್ಲಿ ತಲೆ ಬೋಳಾಗದೆ ಇರಲಿಕ್ಕಾಗಿ ವಿಧವಿಧದ ತೈಲಗಳನ್ನು ಅಥವಾ ಪ್ರಾಣಿಗಳ ಕೊಬ್ಬನ್ನು ಗಂಡಸರು ತಲೆಗೆ ಉಜ್ಜಿಕೊಳ್ಳುತ್ತಿದ್ದರು. ಈಗಂತೂ ನೂರಾರು ಪ್ರಸಾಧನಗಳು ಲಭ್ಯವಿವೆ. ಕ್ರೀಂಗಳು, ಹಾರ್ಮೋನುಗಳು, ವಿಟಮಿನ್‌ಗಳು ಇತ್ಯಾದಿ. ಬೋಳುತಲೆಯ ಸಮಸ್ಯೆಗೆ ಪರಿಹಾರವಾಗಿ ವಿಗ್ ಮತ್ತು ತಲೆಗೂದಲು ನಾಟಿ ಶಸ್ತ್ರಕ್ರಿಯಾ ವಿಧಾನಗಳೂ ಬಳಕೆಯಲ್ಲಿವೆ.
ಕಾರಣವೇನು?
ತಲೆಗೂದಲಿನಲ್ಲಿರುವುದು ಕೆರಾಟಿನ್ ಎಂಬ ಪ್ರೊಟೀನ್. ನಮ್ಮ ಉಗುರು ಮತ್ತು ಚರ್ಮದ ಹೊರಪದರದಲ್ಲಿ ಇರುವುದೂ ಇದೇ ಪ್ರೊಟೀನ್. ಚರ್ಮದ ಕೋಶಗಳಂತೆ ತಲೆಗೂದಲು ಕೂಡ ಬೆಳೆಯುತ್ತದೆ ಮತ್ತು ಕ್ರಮೇಣ ಉದುರಿ ಹೋಗುತ್ತದೆ. ಪ್ರತಿದಿನ 50ರಿಂದ 100 ತಲೆಗೂದಲು ಉದುರುವುದು ಸಾಮಾನ್ಯ ಸಂಗತಿ.
15ರಿಂದ 30 ವರುಷಗಳ ವಯಸ್ಸಿನ ವರೆಗೆ: ತಲೆಗೂದಲು ಸೊಂಪಾಗಿ ಬೆಳೆಯುತ್ತದೆ.
40ರಿಂದ 50 ವರುಷಗಳ ವಯಸ್ಸಿನ ವರೆಗೆ: ತಲೆಗೂದಲಿನ ಬೆಳವಣಿಗೆ ನಿಧಾನವಾಗುತ್ತದೆ.
ಅನಂತರ ಗಂಡಸರು ಮತ್ತು ಹೆಂಗಸರಲ್ಲಿ ಸುಮಾರು 50 ವರುಷಗಳ ವಯಸ್ಸಿನಲ್ಲಿ ತಲೆಗೂದಲು ಉದುರಲು ಶುರುವಾಗಿ, 70ನೆಯ ವಯಸ್ಸಿನಲ್ಲಿ ಉದುರುವಿಕೆ ಹೆಚ್ಚಾಗುತ್ತದೆ. ಈ ರೀತಿ ತಲೆಗೂದಲು ಉದುರುವುದು ನಮ್ಮನಮ್ಮ ಜೀನ್‌ಗಳು ಮತ್ತು ಹಾರ್ಮೋನುಗಳಿಂದ ನಿರ್ಧರಿತವಾಗುತ್ತದೆ.
ಇದು ವಂಶಪಾರಂಪರ್ಯ
ಭಾಗಶಃ ಅಥವಾ ಎಲ್ಲ ತಲೆಗೂದಲು ಉದುರಿದಾಗ “ತಲೆ ಬೋಳಾಯಿತು” ಅನ್ನುತ್ತೇವೆ. ಹೆತ್ತವರ ತಲೆಬೋಳಾಗಿದ್ದರೆ ಅವರ ಶೇಕಡಾ 50 ಮಕ್ಕಳೂ ಈ ಗುಣವನ್ನು ವಂಶಪಾರಂಪರ್ಯವಾಗಿ ಪಡೆಯುತ್ತಾರೆ.
ಗಂಡಸರ ತಲೆ ಬೋಳಾಗುವಿಕೆ ಮುಂತಲೆಯಿಂದ ಶುರುವಾಗುತ್ತದೆ. ಹಣೆಯ ಮೇಲ್ಭಾಗದ ಕೂದಲುಗಳು ಹೆಚ್ಚೆಚ್ಚು ಉದುರುತ್ತ, ಕೊನೆಗೆ ನೆತ್ತಿ ಬೋಳಾಗುತ್ತದೆ (ಚಿತ್ರ ನೋಡಿ). ಹೆಂಗಸರಿಗೆ ವಯಸ್ಸಾದಾಗ ತಲೆಯ ಎಲ್ಲ ಭಾಗಗಳಿಂದಲೂ ತಲೆಗೂದಲು ಉದುರುತ್ತದೆ.
ಮಳೆಗಾಲ ಶುರುವಾಗುತ್ತಿದ್ದಂತೆ ಡೆಂಗ್ಯೂ ಮತ್ತು ಮಲೇರಿಯಾ ರೋಗ ಬಾಧೆಗೆ ಒಳಗಾಗುವವರ ಸಂಖ್ಯೆಯ ಹೆಚ್ಚಳ ವರದಿಯಾಗುತ್ತದೆ. ಹಾಗಂತ “ಸೊಳ್ಳೆ ಪರದೆ ದೊಡ್ಡ ರಗಳೆ ಅಂತ ಮೂಲೆಗೆಸೆದಿದ್ದೀರಾ? ಸೊಳ್ಳೆ ಓಡಿಸುವ ರಾಸಾಯನಿಕಗಳಿರುವ ಕಾಯ್ಲ್ ಅಥವಾ ಮ್ಯಾಟ್‌ಗಳನ್ನು ಬೆಡ್‌ರೂಂನಲ್ಲಿ ಉರಿಸಿಟ್ಟರೆ ಚೆನ್ನಾಗಿ ನಿದ್ದೆ ಮಾಡಬಹುದು ಎಂದು ಪ್ರಚಾರ ಮಾಡುವ ಜಾಹೀರಾತುಗಳನ್ನು ಬಹಳಷ್ಟು ಜನರು ನಂಬಿದ್ದಾರೆ. ಹಾಗಾಗಿ ಸೊಳ್ಳೆ ಪರದೆ ಮೂಲೆಗೆಸೆದು, ಸೊಳ್ಳೆ ಕಾಯ್ಲ್ ಅಥವಾ ಮ್ಯಾಟ್ ಉರಿಸಿಟ್ಟು ಮಲಗುತ್ತಿದ್ದಾರೆ. ಆದರೆ ಅವು ಸುರಕ್ಷಿತವೇ? ಅಲ್ಲವೇ ಅಲ್ಲ.
ಅಧ್ಯಯನಗಳ ಫಲಿತಾಂಶ
ಸೊಳ್ಳೆ ವಿಕರ್ಷಕಗಳಲ್ಲಿ ಇರುವ ರಾಸಾಯನಿಕಗಳು ನಮ್ಮ ಕೇಂದ್ರ ನರಮಂಡಲಕ್ಕೆ ಹಾನಿ ಮಾಡುತ್ತವೆ ಎಂದು ಲಕ್ನೋದ ಕಿಂಗ್ ಜಾರ್ಜ್ ಮೆಡಿಕಲ್ ಕಾಲೇಜಿನ ವೈದ್ಯಕೀಯ ತಜ್ಞರಾದ ಡಾ. ದೇವಿಕಾ ನಾಗ್ ಅವರು ಕಾರ್ಖಾನೆ ಕೆಲಸಗಾರರ ಬಗ್ಗೆ ನಡೆಸಿದ ಅಧ್ಯಯನದಿಂದ ತಿಳಿದು ಬಂದಿದೆ. ಸೊಳ್ಳೆ ವಿಕರ್ಷಕಗಳು ಮನುಷ್ಯರಲ್ಲಿ ತೀವ್ರ ದೈಹಿಕ ಸಂಕಟ ಉಂಟು ಮಾಡುತ್ತವೆ ಎಂಬ ಸತ್ಯಾಂಶ ಚೀನಾದಿಂದಲೂ ವರದಿಯಾಗಿದೆ.
ಸೊಳ್ಳೆ ವಿಕರ್ಷಕಗಳ ಧೂಮವನ್ನು ದೀರ್ಘಾವಧಿ ಉಸಿರಾಡುವ ಎಳೆಗೂಸುಗಳಂತೂ ಅಪಾರ ದೈಹಿಕ ಸಂಕಟ ಅನುಭವಿಸುತ್ತವೆ. ಆದರೆ, ಆ ಎಳೆಗೂಸುಗಳ ಹೆತ್ತವರಿಗೆ ಸೊಳ್ಳೆ ವಿಕರ್ಷಕಗಳೇ ಅದಕ್ಕೆ ಕಾರಣವೆಂದು ತಿಳಿಯುವುದಿಲ್ಲ!
ಬಟ್ಟೆಗಳನ್ನು ಕೀಟಗಳಿಂದ ರಕ್ಷಿಸಲು ಅವುಗಳ ಎಡೆಯಲ್ಲಿ ನಾವು ಇರಿಸುವ ನ್ಯಾಫ್ತಲೀನ್ ಗುಳಿಗೆಗಳೂ ಐದು ವರುಷಗಳಿಗಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ವಿಷಕಾರಿ ಆಗಬಲ್ಲವು ಎಂದೂ ಡಾ. ದೇವಿಕಾ ಎಚ್ಚರಿಸಿದ್ದಾರೆ. ಆ ಗುಳಿಗೆಗಳ ವಾಸನೆ ಅಡರಿದ್ದ ಶಾಲುಗಳಲ್ಲಿ ಎಳೆ ಮಕ್ಕಳನ್ನು ಸುತ್ತಿ ಮಲಗಿಸಿದಾಗ, ಮಕ್ಕಳು ಅರೆ ಮೂರ್ಛಾವಸ್ಥೆಗೆ ಒಳಗಾದರು ಎಂದು ಅವರು ತಿಳಿಸಿದ್ದಾರೆ.
ವೈದ್ಯರಿಂದ ಸ್ಪಷ್ಟ ಎಚ್ಚರಿಕೆ
70 ವರುಷದ ವೃದ್ಧೆಗೆ ಪೆನ್-ಷನ್ ಪಾವತಿಸುವ ಸಂದರ್ಭದಲ್ಲಿ “ಮಾನವೀಯವಾಗಿ ವರ್ತಿಸಿ” ಎಂದು ಬ್ಯಾಂಕಿಗೆ ಕೇಂದ್ರ ವಿತ್ತ ಸಚಿವೆ ಸೂಚಿಸಬೇಕಾಗಿ ಬಂದ ಪ್ರಕರಣ ಇದು.
ಒಡಿಸ್ಸಾ ರಾಜ್ಯದ ನಬರಂಗಪುರ ಜಿಲ್ಲೆಯ ಝರಿಗಾವೊನ್ ತಾಲೂಕಿನ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಬ್ರಾಂಚಿನ "ಬ್ಯಾಂಕ್ ಮಿತ್ರ" 70 ವರುಷದ ವೃದ್ಧೆ ಸೂರ್ಯ ಹರಿಜನ ಎಂಬಾಕೆಗೆ ಮಾಸಿಕ ಪೆನ್-ಷನ್ ಪಾವತಿಸಲಿಲ್ಲ. ಪೆನ್-ಷನ್ ಪಡೆಯಲೇ ಬೇಕೆಂದು ನಿರ್ಧರಿಸಿದ ವೃದ್ಧೆ, ತನ್ನ ಮನೆಯಿಂದ ಕೆಲವು ಕಿಮೀ ದೂರದ ಬ್ಯಾಂಕಿನ ಬ್ರಾಂಚಿಗೆ ಒಂದು ಪ್ಲಾಸ್ಟಿಕ್ ಕುರ್ಚಿಯನ್ನು ಊರುಗೋಲಿನಂತೆ ಬಳಸಿ, ಉರಿಬಿಸಿಲಿನಲ್ಲಿ ನಡೆದೇ ಬಂದಳು.
ಅಷ್ಟರಲ್ಲಿ ಇದನ್ನು ಯಾರೋ ವಿಡಿಯೋ ಮಾಡಿ, ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟರು. ಆ ವಿಡಿಯೋ ವೈರಲ್ ಆಯಿತು! ಅದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರ ಗಮನಕ್ಕೂ ಬಂತು. ಅವರು ತಕ್ಷಣವೇ ಟ್ವಿಟ್ಟರಿನಲ್ಲಿ ಸಂದೇಶವೊಂದನ್ನು ದಾಖಲಿಸಿದರು. ಅದರ ಮುಖ್ಯಾಂಶ: "ಮೆನೇಜರ್ ರೆಸ್ಪೊಂಡ್ ಮಾಡಿದ್ದಾರೆ ಆದರೂ ಅವರು ಮಾನವೀಯವಾಗಿ ವರ್ತಿಸಬೇಕೆಂದು ಆಶಿಸುತ್ತೇನೆ. ಬ್ಯಾಂಕ್ ಮಿತ್ರ ಯಾರೂ ಇಲ್ಲವೇ?" ಅನಂತರ, ದೇಶದ ಹಲವು ಪತ್ರಿಕೆಗಳಲ್ಲಿ ಹಾಗೂ ಟಿವಿ ಚಾನೆಲುಗಳಲ್ಲಿ ಇದು ದೊಡ್ಡ ಸುದ್ದಿಯಾಯಿತು.
ಕೇಂದ್ರ ವಿತ್ತ ಸಚಿವೆಯ ಸಂದೇಶಕ್ಕೆ ಪ್ರತಿಕ್ರಿಯೆಯಾಗಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯ ವಿವರವಾದ ಪತ್ರಿಕಾ ಹೇಳಿಕೆಯನ್ನು ಬಿಡುಗಡೆ ಮಾಡಿತು. ಅದರ ಮುಖ್ಯಾಂಶಗಳು: ಇತ್ತೀಚೆಗೆ ದುರದೃಷ್ಟದ ಘಟನೆಯೊಂದು ನಡೆದಿದೆ. ಒಡಿಸ್ಸಾದ ನಬರಂಗಪುರ ಜಿಲ್ಲೆಯ ಝರಿಗಾವೊನ್ ತಾಲೂಕಿನ ಕಾಮನ್ ಸರ್ವಿಸ್ ಪ್ರೊವೈಡರ್ (ಬ್ಯಾಂಕ್ ಮಿತ್ರ) ಮೂಲಕ ಪೆನ್-ಷನ್ ಹಣ ಪಡೆಯಲು ಹಿರಿಯ ನಾಗರಿಕಳೊಬ್ಬಳಿಗೆ ಸಾಧ್ಯವಾಗಲಿಲ್ಲ. ಯಾಕೆಂದರೆ ಅವಳ ಮಸಕಾಗುತ್ತಿರುವ ಹೆಬ್ಬೆಟ್ಟಿನ ರೇಖೆಗಳನ್ನು ಬ್ಯಾಂಕ್ ಮಿತ್ರನ ಬಯೋಮೆಟ್ರಿಕ್ ರೀಡರ್ ಗುರುತಿಸಲಿಲ್ಲ.
ಭರ್ಗುರಾಮ್ ಮಹಾಧಿಕ್ ಮುಂಬೈಯ ಧನ್ವಂತರಿ ಇಂಜಿನಿಯರ್ಸ್ ಪ್ರೈವೇಟ್ ಲಿಮಿಟೆಡ್ ಘಟಕದಲ್ಲಿ ಫಿಟ್ಟರ್ ಆಗಿ ರೂ.೬,೦೦೦ ತಿಂಗಳ ಸಂಬಳಕ್ಕೆ ದುಡಿಯುತ್ತಿದ್ದರು.
೨೭ ಮಾರ್ಚ್ ೨೦೧೨ರಂದು ಕೆಲಸ ಮಾಡುತ್ತಿದ್ದಂತೆ ಅವರಿಗೆ ಎದೆನೋವು ಕಾಣಿಸಿತು. ಅವರ ಸಹೋದ್ಯೋಗಿಗಳು ಅವರನ್ನು ಫ್ಯಾಕ್ಟರಿಯೊಳಗಿನ ವಿಶ್ರಾಂತಿ ಕೋಣೆಗೆ ಕರೆದೊಯ್ದು ವಿರಮಿಸಲು ಹೇಳಿದರು. ಆದರೆ ಅವರ ಎದೆನೋವು ಹೆಚ್ಚಾಯಿತು. ಹಾಗಾಗಿ ಅವರನ್ನು ವಾಶಿಯಲ್ಲಿರುವ ಮುಂಬೈ ಮುನಿಸಿಪಲ್ ಕಾರ್ಪೊರೇಷನ್ ಆಸ್ಪತ್ರೆಗೆ ಒಯ್ದರು.
ಆದರೆ ಮಹಾಧಿಕರು ಬದುಕಿ ಉಳಿಯಲಿಲ್ಲ. ಅದೇ ದಿನ ಆಸ್ಪತ್ರೆಯು ನೀಡಿದ ಸರ್ಟಿಫಿಕೇಟಿನ ಅನುಸಾರ “ಆಸ್ಪತ್ರೆಗೆ ಅವರನ್ನು ತರುವಾಗಲೇ ಪ್ರಾಣ ಹೋಗಿತ್ತು”. ಅನಂತರ ಆಸ್ಪತ್ರೆಯ ವೈದ್ಯಕೀಯ ಅಧಿಕಾರಿ ನೀಡಿದ ಸರ್ಟಿಫಿಕೇಟಿನಲ್ಲಿ ಬರೆಯಲಾದ ಅವರ ಸಾವಿನ ಕಾರಣ, “ಹೃದಯಾಘಾತ”. ಆಗ ಮಹಾಧಿಕರಿಗೆ ೫೦ ವರುಷ ವಯಸ್ಸು.
ಭರ್ಗುರಾಮ್ ಮಹಾಧಿಕ್ ಉದ್ಯೋಗಿಗಳ ರಾಜ್ಯ ವಿಮಾ ಸಂಸ್ಥೆಯ (ಇಎಸ್ಐಸಿ) ವಿಮಾ ಯೋಜನೆಯಲ್ಲಿ ಹೆಸರು ನೋಂದಾಯಿಸಿದ್ದರು. ಆದ್ದರಿಂದ ಧನ್ವಂತರಿ ಇಂಜಿನಿಯರ್ಸ್ ಘಟಕವು ಮಹಾಧಿಕರ ವಾರೀಸುದಾರರ ಹಕ್ಕುಸಾಧನೆ ಅರ್ಜಿಯನ್ನು ಇಎಸ್ಐ ಕಾಯಿದೆ ಪ್ರಕಾರ ೧೧ ಎಪ್ರಿಲ್ ೨೦೧೨ರಂದು ಇಎಸ್ಐ ಸಂಸ್ಥೆಗೆ ಸಲ್ಲಿಸಿತ್ತು. ಆದರೆ ೧೪ ಮೇ ೨೦೧೨ರಂದು ಅದು ಆ ಅರ್ಜಿಯನ್ನು ಈ ಮುಖ್ಯ ಕಾರಣಕ್ಕಾಗಿ ನಿರಾಕರಿಸಿತು, “ಮೃತರಾದ ಮಹಾಧಿಕರನ್ನು ಇಎಸ್ಐಸ್ ಕಾಯಿದೆ ಪ್ರಕಾರ ಉದ್ಯೋಗಿ ಎಂದು ಪರಿಗಣಿಸಲಾಗದು.”
ಹಕ್ಕುಸಾಧನೆಯ ನಿರಾಕರಣ ಪತ್ರದಲ್ಲಿ ತಿಳಿಸಲಾದ ಇನ್ನೊಂದು ಕಾರಣ: ವಿಮಾ ಪಾಲಿಸಿದಾರನು ಸಹಜ ಕಾರಣಗಳಿಂದಾಗಿ ಮೃತನಾಗಿದ್ದಾನೆ; ಕೆಲಸದ ಒತ್ತಡ ಮತ್ತು ದಣಿವಿನಿಂದಾಗಿ ಅವನ ಸಾವು ಸಂಭವಿಸಿಲ್ಲ.
ರೋಗ ಪರೀಕ್ಷಾ ಕೇಂದ್ರಗಳು ಅಥವಾ ಆಸ್ಪತ್ರೆಗಳು ತಪ್ಪು ವರದಿ ನೀಡಿದರೆ ........ ದೀಪ್ತಿ ಷಾ ಅವರು ಅನುಭವಿಸಿದ ವೇದನೆ ಇದಕ್ಕೊಂದು ಉದಾಹರಣೆ.
ತೀವ್ರ ಹೊಟ್ಟೆನೋವಿನಿಂದ ಸಂಕಟ ಪಡುತ್ತಿದ್ದರು ದೀಪ್ತಿ ಷಾ. ಅವರ ಹೊಟ್ಟೆಯ ಸೊನೊಗ್ರಾಮ್ ತೆಗೆಯಲಾಯಿತು. ಅದರಲ್ಲಿ ಒವೇರಿಯನ್ ಸಿಸ್ಟ್ ಕಾಣಿಸಿತು. ಅದನ್ನು ಪರಿಶೀಲಿಸಿದ ಗೈನಕಾಲಜಿಸ್ಟ್ ಸಿಎ - ೧೨೫ ಎಂಬ ರಕ್ತದ ಪರೀಕ್ಷೆ ಮಾಡಿಸಲು ಸಲಹೆಯಿತ್ತರು. ಶ್ರೀಮತಿ ಷಾ ರೋಗ ಪರೀಕ್ಷಾ ಕೇಂದ್ರ (ಪ್ಯಾಥೊಲೋಜಿಕಲ್ ಲ್ಯಾಬ್)ಕ್ಕೆ ತನ್ನ ರಕ್ತದ ಸ್ಯಾಂಪಲ್ ನೀಡಿ, ರೂಪಾಯಿ ೭೦೦ ಶುಲ್ಕವನ್ನೂ ಪಾವತಿಸಿದರು.
ಈ ರಕ್ತಪರೀಕ್ಷೆಯ ವರದಿ, ದೀಪ್ತಿ ಷಾ ಅವರಿಗೆ ಕ್ಯಾನ್ಸರ್ ತಗಲಿರುವ ಸಾಧ್ಯತೆಯನ್ನು ಸೂಚಿಸಿತು. ಆದರೆ, ಗೈನಕಾಲಜಿಸ್ಟ್ಗ್ ಅವರಿಗೆ ವರದಿಯ ಬಗ್ಗೆ ಅನುಮಾನ ಮೂಡಿತು. ಇನ್ನೊಂದು ಲ್ಯಾಬೊರೇಟರಿಯಲ್ಲಿ ಅದೇ ಪರೀಕ್ಷೆ ಪುನಃ ಮಾಡಿಸಲು ಸಲಹೆಯಿತ್ತರು. ಮರುದಿನವೇ, ದೀಪ್ತಿ ಷಾ ಪುನಃ ತನ್ನ ರಕ್ತ ಪರೀಕ್ಷೆ ಮಾಡಿಸಿದರು. ಇದರಿಂದಲೂ ಅವರಿಗೆ ಕ್ಯಾನ್ಸರ್ ತಗಲಿದೆಯೆಂಬುದು ಖಚಿತವಾಗಲಿಲ್ಲ. ಹಾಗಾಗಿ, ಮೂರನೆಯ ಸಲ ಅದೇ ರಕ್ತಪರೀಕ್ಷೆ ಮಾಡಿಸಿದರು. ಎರಡನೇ ಹಾಗೂ ಮೂರನೇ ರಕ್ತಪರೀಕ್ಷೆ ಪ್ರಕಾರ ಅವರ ಸಿಎ - ೧೨೫ ಮಟ್ಟ "ನಾರ್ಮಲ್" ಆಗಿತ್ತು.
ದೀಪ್ತಿ ಷಾ ಅವರಿಗೆ ಆತಂಕ ಆಗದಿದ್ದೀತೇ? ಅವರು ತಪ್ಪು ವರದಿ ನೀಡಿದ ರೋಗ ಪರೀಕ್ಷಾ ಕೇಂದ್ರಕ್ಕೆ ಪತ್ರ ಬರೆದರು: ರಕ್ತಪರೀಕ್ಷಾ ಶುಲ್ಕ ರೂ.೭೦೦ ಮರುಪಾವತಿಸಬೇಕೆಂದೂ, "ತೀವ್ರ ಮಾನಸಿಕ ಒತ್ತಡ ಹಾಗೂ ಸಂಕಟ" ನೀಡಿದ್ದಕ್ಕಾಗಿ ರೂ.೨೦,೦೦೦ ಪರಿಹಾರ ಪಾವತಿಸಬೇಕೆಂದೂ ವಿನಂತಿಸಿದರು. ಅನಂತರ ದೀಪ್ತಿ ಷಾ ಅಹ್ಮದಾಬಾದಿನ ಹೆಸರುವಾಸಿ ಬಳಕೆದಾರರ ಸಂಘಟನೆ "ಬಳಕೆದಾರರ ಶಿಕ್ಷಣ ಮತ್ತು ಸಂಶೋಧನಾ ಸೊಸೈಟಿ"ಗೆ ದೂರು ಕೊಟ್ಟರು. ಸೊಸೈಟಿಯಿಂದಲೂ ಆ ರೋಗ ಪರೀಕ್ಷಾ ಕೇಂದ್ರಕ್ಕೆ ಪತ್ರ ಬರೆದು ಷಾ ಅವರಿಗೆ ನ್ಯಾಯ ಒದಗಿಸಬೇಕೆಂದು ಆಗ್ರಹಿಸಿದರು. ಆದರೆ ರೋಗ ಪರೀಕ್ಷಾ ಕೇಂದ್ರವು ತನ್ನದೇನೂ ತಪ್ಪಿಲ್ಲವೆಂದು ವಾದಿಸಿತು. ಆದ್ದರಿಂದ ದೀಪ್ತಿ ಷಾ ಬಳಕೆದಾರರ ಕೋರ್ಟಿಗೆ ದೂರು ನೀಡಬೇಕಾಯಿತು.












