Agriculture and Rural Development

ಭಾರತದ ಕೋಟಿಗಟ್ಟಲೆ ರೈತರ ಬೀಜ ಮತ್ತು ದೇಸಿ ತಳಿ ಹಕ್ಕುಗಳ ಮೇಲೆ ದಾಳಿ ನಡೆಯುತ್ತಲೇ ಇದೆ. ಈ ಹಿನ್ನೆಲೆಯಲ್ಲಿ, ಆ ಹಕ್ಕುಗಳ ಪರವಾಗಿ ಹಾಗೂ ಪೆಪ್ಸಿ ಕಂಪೆನಿಯ ವಿರುದ್ಧ “ಸಸ್ಯ ತಳಿಗಳ ಸಂರಕ್ಷಣೆ ಮತ್ತು ರೈತರ ಹಕ್ಕುಗಳ ಕಾಯಿದೆ ಪ್ರಾಧಿಕಾರ” ನೀಡಿದ ಚಾರಿತ್ರಿಕ ತೀರ್ಪಿನ ಬಗ್ಗೆ ಈ ಲೇಖನ. 
ಪ್ರಕರಣದ ಹಿನ್ನೆಲೆ: ಗುಜರಾತಿನ ಹಲವು ರೈತರು, ಹಲವಾರು ವರುಷಗಳಿಂದ ಆಲೂಗಡ್ಡೆ ಬೆಳೆಯುತ್ತಿದ್ದಾರೆ. ಆದರೆ 2019ರಲ್ಲಿ ಮಾತ್ರ ಅವರಲ್ಲಿ ಕೆಲವರಿಗೆ ಸಿಡಿಲು ಬಡಿದಂತಾಯಿತು. ಯಾಕೆಂದರೆ, ಅಮೇರಿಕಾದ ದೈತ್ಯ ಕಂಪೆನಿ ಪೆಪ್ಸಿಕೋ 11 ರೈತರ ಮೇಲೆ ಎಂಟು ಮೊಕದ್ದಮೆ ಹೂಡಿತು – ತಮ್ಮ ಕಂಪೆನಿಯ ಬೈದ್ಧಿಕ ಸೊತ್ತಾದ ಆಲೂಗಡ್ದೆ ತಳಿಯನ್ನು “ಕಾನೂನುಬಾಹಿರವಾಗಿ” ಬೆಳೆಯುತ್ತಿದ್ದಾರೆ ಎಂಬ ಕಾರಣಕ್ಕಾಗಿ! ಪ್ರತಿಯೊಬ್ಬ ರೈತನೂ ರೂಪಾಯಿ 1.05 ಕೋಟಿ ಪರಿಹಾರ ಪಾವತಿಸಬೇಕೆಂಬುದು ಪೆಪ್ಸಿಕೋ ಕಂಪೆನಿಯ ಆಗ್ರಹ!
ಈ ಪ್ರಕರಣವನ್ನು ಇಡೀ ಜಗತ್ತೇ ನಿಬ್ಬೆರಗಾಗಿ ಗಮನಿಸಿತು. ಇದು ಪುಟಾಣಿ ಇರುವೆಯನ್ನು ದೈತ್ಯ ಆನೆ ಯುದ್ಧಕ್ಕೆ ಆಹ್ವಾನಿಸಿದಂತಿದೆ. 64 ಬಿಲಿಯನ್ ಡಾಲರು ವಾರ್ಷಿಕ ಆದಾಯ ಗಳಿಸುತ್ತಿರುವ ಪೆಪ್ಸಿಕೋ ಕಂಪೆನಿಗೆ, ಗುಜರಾತಿನ ಹಳ್ಳಿ ಮೂಲೆಯ ತುಂಡು ಜಮೀನಿನಲ್ಲಿ ಆಲೂಗಡ್ಡೆ ಬೆಳೆಯುವ ರೈತ ಯಾವ ರೀತಿಯಲ್ಲೂ ಸರಿಸಾಟಿಯಲ್ಲ.
ಆ ರೈತರು ಬೆಳೆಸುತ್ತಿದ್ದ ಎಫ್‍ಎಲ್ 2027 ಎಂಬ ಆಲೂಗಡ್ಡೆ ತಳಿ ತನ್ನ ಒಡೆತನದ್ದು; ಭಾರತದ ಕಾಯಿದೆಯ ಅನುಸಾರ 2016ರಲ್ಲಿ ತಾನು ನೋಂದಾಯಿಸಿದ ಎರಡು ಆಲೂಗಡ್ಡೆ ತಳಿಗಳಲ್ಲಿ ಅದೊಂದು ಎಂಬುದು ಕೋರ್ಟಿನಲ್ಲಿ ಪೆಪ್ಸಿಕೋ ಕಂಪೆನಿಯ ವಾದ. ಆ ಕಾಯಿದೆಯ ಅನುಸಾರ ಯಾವುದೇ ತಳಿಯನ್ನು ನೋಂದಾಯಿಸಿದರೆ, ಅದರ ಉತ್ಪಾದನೆ, ಮಾರಾಟ, ವಿತರಣೆ, ಆಮದು ಮತ್ತು ರಫ್ತು – ಇವೆಲ್ಲದರ ಸಂಪೂರ್ಣ ಹಕ್ಕು ಆಯಾ ತಳಿಯ ತಳಿವರ್ಧಕನಿಗೆ ಸಿಗುತ್ತದೆ.

ಪಂಜಾಬಿನ ಲಂಡಾ ಗ್ರಾಮದ ಗೋಬಿಂದರ್ ಸಿಂಗ್ ರಾಂಧವ ಯುವಕರಾಗಿದ್ದಾಗ ತಮ್ಮ ಹಳ್ಳಿಯ ಮುಖ್ಯಸ್ಥರಾದ ಸರ್ದಾರ್ ಬಲದೇವ್ ಸಿಂಗ್ ಮತ್ತು ಸರ್ದಾರ್ ಜಗಜಿತ್ ಸಿಂಗ್ ಕಪೂರ್ ಜೇನ್ನೊಣ ಸಾಕುವುದನ್ನು ಗಮನಿಸುತ್ತಿದ್ದರು. ಅದನ್ನು ನೋಡುತ್ತಾ ನೋಡುತ್ತಾ ಅವರಲ್ಲೊಂದು ಕನಸು ಹುಟ್ಟಿತು - ತಾನೂ ಜೇನ್ನೊಣ ಸಾಕಬೇಕೆಂಬ ಕನಸು. ಕೊನೆಗೆ 2003ರಲ್ಲಿ “ಬಿಗ್ ಬಿ ಹನಿ" ಹೆಸರಿನಲ್ಲಿ ಜೇನ್ನೊಣ ಸಾಕಣೆ ಶುರು ಮಾಡಿ, ತನ್ನ ಕನಸನ್ನು ನನಸಾಗಿಸಿದರು. (ಫೋಟೋ1 ಮತ್ತು 2 )

ಇದಕ್ಕಾಗಿ ಅವರು ಮಾಡಿಕೊಂಡ ಪೂರ್ವಸಿದ್ಧತೆ: ಪಂಜಾಬ್ ಕೃಷಿ ವಿಶ್ವವಿದ್ಯಾಲಯದಲ್ಲಿ ಒಂದು-ವಾರ ಅವಧಿಯ ತರಬೇತಿ ಶಿಬಿರಕ್ಕೆ ಹಾಜರಾದದ್ದು ಮತ್ತು 120 ಜೇನುಪೆಟ್ಟಿಗೆಗಳ ಖರೀದಿಗಾಗಿ ರೂ.2.8 ಲಕ್ಷ ಸಾಲ ಪಡೆದದ್ದು. 

ಇಬ್ಬರು ಗೆಳೆಯರ ಜೊತೆಗೆ ಅವರು ಈ ಸಾಹಸಕ್ಕೆ ಕೈಹಾಕಿದ್ದರು. ಆದರೆ ಮರು ವರುಷವೇ ಅವರು ದೊಡ್ಡ ಆಘಾತ ಎದುರಿಸ ಬೇಕಾಯಿತು. ನುಸಿ (ಮೈಟ್) ಸೋಂಕಿನಿಂದಾಗಿ ಆ ವರುಷ ಪಂಜಾಬಿನಲ್ಲಿ ಅನಾಹುತವಾಯಿತು; ಲಕ್ಷಗಟ್ಟಲೆ ಜೇನ್ನೊಣಗಳು ಸತ್ತು ಹೋದವು ಮತ್ತು ಬಹುಪಾಲು ಜೇನ್ನೊಣ ಕುಟುಂಬಗಳು ನಾಶವಾದವು ಎಂದು ನೆನಪು ಮಾಡಿಕೊಳ್ಳುತ್ತಾರೆ ಗೋಬಿಂದರ್ ಸಿಂಗ್. ಆಗ ಅವರ ಇಬ್ಬರು ಗೆಳೆಯರೂ ದೂರವಾದರು. “ಒಬ್ಬ ಗೆಳೆಯ ಆಸ್ಟ್ರೇಲಿಯಾಕ್ಕೆ ಹೋದ; ಇನ್ನೊಬ್ಬ ಬೇರೆ ವ್ಯವಹಾರ ಶುರು ಮಾಡಿದ. ಜೇನ್ನೊಣ ಸಾಕಣೆಯನ್ನು ನಾನೊಬ್ಬನೇ ಮುಂದುವರಿಸಬೇಕಾಯಿತು” ಎನ್ನುತ್ತಾರೆ ಅವರು. 

“ಎರಡು ಸಾವಿರ ರೂಪಾಯಿ ಕೊಟ್ಟು ಇದರ ಒಂದು ಗಿಡ ತಂದಿದ್ದೆ” ಎಂದು ಗಿಡವೊಂದನ್ನು ತೋರಿಸುತ್ತಾ ನಮ್ಮ “ಸಾವಯವ ಕೃಷಿಕ ಗ್ರಾಹಕ ಬಳಗ”ದ ಕೃಷಿಕರೊಬ್ಬರು ಹೇಳಿದ್ದರು! ಅದು ಚಾಯಾ ಮಾನ್ಸಾ ಗಿಡ.  

ಅನಂತರ ಅದರ ಬಗ್ಗೆ ಸಂಗ್ರಹಿಸಿದ ಮಾಹಿತಿ: ಅದು ಜಗತ್ತಿಗೆ ದಕ್ಷಿಣ ಅಮೇರಿಕಾದ ಪುರಾತನ “ಮಾಯಾ” ನಾಗರಿಕತೆಯ ಜನರ ಕೊಡುಗೆ ಎಂಬ ಸಂಗತಿ. ಮೆಕ್ಸಿಕೋ ಮತ್ತು ಮಧ್ಯ ಅಮೇರಿಕಾದ ದೇಶಗಳಲ್ಲಿ ಸೊಪ್ಪು ತರಕಾರಿಯಾಗಿ ಇದರ ಬಳಕೆ. ಇದರ ಗೆಲ್ಲುಗಳನ್ನು ಕತ್ತರಿಸಿದಾಗ ಬಿಳಿ ಬಣ್ಣದ ದ್ರಾವಣ ಒಸರುತ್ತದೆ.  

2020ರ ಮಳೆಗಾಲದಲ್ಲಿ ಅದರ ನಾಲ್ಕು ತುಂಡುಗಳನ್ನು ತಲಾ ರೂ.20 ಬೆಲೆಗೆ ಖರೀದಿಸಿ ತಂದು, ಮಂಗಳೂರಿನ ನಮ್ಮ ಕೈತೋಟದಲ್ಲಿ ನೆಟ್ಟೆ. ಅವುಗಳಿಂದಲೇ ಇನ್ನೂ ನಾಲ್ಕು ತುಂಡುಗಳನ್ನು ಅಡ್ಡೂರಿನ ತೋಟದಲ್ಲಿಯೂ ನೆಟ್ಟೆ. ಅವೆಲ್ಲವೂ ಸೊಂಪಾಗಿ ಬೆಳೆದಿವೆ. ಪ್ರತಿಯೊಂದು ಗಿಡದಲ್ಲಿಯೂ 20 - 30 ಗೆಲ್ಲುಗಳಿವೆ. 

ಒಂದಡಿ (ಮೂವತ್ತು ಸೆಮೀ.) ಉದ್ದದ ತುಂಡುಗಳು ನೆಡುವುದಕ್ಕೆ ಸೂಕ್ತ. ಅವನ್ನು ಬಹಳ ಸುಲಭವಾಗಿ ಬೆಳೆಸಬಹುದು. ವರುಷಕ್ಕೆ ಎರಡು ಸಲ ಗಿಡವೊಂದಕ್ಕೆ ಒಂದು ಮುಷ್ಟಿ ಸಾವಯವ ಗೊಬ್ಬರ ಹಾಕಿ, ವಾರಕ್ಕೆರಡು ಸಲ ನೀರೆರೆದರೆ ಸಾಕು; ನಳನಳಿಸುತ್ತ ಬೆಳೆಯುತ್ತದೆ. ಆರಡಿ ಎತ್ತರಕ್ಕೆ ಬೆಳೆಯುವ ಗಿಡ ಇದು. ಕತ್ತರಿಸಿದಷ್ಟೂ ಹೊಸ ಗೆಲ್ಲುಗಳು ಮತ್ತು ತೆಗೆದಷ್ಟೂ ಎಲೆಗಳು ಚಿಗುರುವುದು ಇದರ ವಿಶೇಷತೆ. ಇದಕ್ಕೆ ಯಾವುದೇ ಕೀಟ ಅಥವಾ ರೋಗ ಬಾಧೆ ಇಲ್ಲವೆನ್ನಬಹುದು. 

ಕೈತೋಟದಲ್ಲಿ ಒಂದು ಗಿಡವಿದ್ದರೆ ವಾರಕ್ಕೊಮ್ಮೆ ಎಲೆಗಳು ಅಡುಗೆಗೆ ಲಭ್ಯ. ಒಮ್ಮೆಗೆ ಶೇಕಡಾ 50ರಷ್ಟು ಎಲೆ ಕೊಯ್ಯಬಹುದು. 

ಒಬ್ಬರಿಗೆ ಐದು ಎಲೆಗಳಂತೆ ಅಡುಗೆಗೆ ಬಳಸುವುದು ಸೂಕ್ತ. ಪಲ್ಯ, ಸಾಂಬಾರ್, ಸೂಪ್ ಮಾಡುವಾಗ ಇದರ ಹಸುರು ಎಲೆಗಳನ್ನು ಇತರ ತರಕಾರಿಗಳೊಂದಿಗೆ ಸೇರಿಸಿ ಬೇಯಿಸಿದರೆ ಚೆನ್ನಾಗಿರುತ್ತದೆ. ಸಲಾಡ್‌ಗಳಿಗೂ ಇದರ ಬೇಯಿಸಿದ ಎಲೆ ಹಾಕಬಹುದು; ಯಾಕೆಂದರೆ ಇದರ ಎಲೆಗಳಿಗೆ ಪ್ರತ್ಯೇಕ ರುಚಿ ಇಲ್ಲ. ಅಡುಗೆಗೆ ಎಳೆಯ ಎಲೆಗಳು ಸೂಕ್ತ. ಎಲೆಗಳನ್ನು ಇಪ್ಪತ್ತು ನಿಮಿಷಗಳಾದರೂ ಬೇಯಿಸಲೇ ಬೇಕು. 

ಕೋಲಾರದಲ್ಲಿ ೯,೦೦೦ ಎಕ್ರೆ ಪ್ರದೇಶದಲ್ಲಿ ರೈತರು ಪ್ರತಿ ವರುಷ ಟೊಮೆಟೊ ಬೆಳೆಯುತ್ತಾರೆ. ಇಷ್ಟು ವಿಸ್ತಾರ ಪ್ರದೇಶದ ಇಳುವರಿ ಸುಮಾರು ೪,೦೦೦ ಟನ್. 

ಕೊವಿಡ್ ವೈರಸಿನ ಧಾಳಿ ನಿಯಂತ್ರಣಕ್ಕಾಗಿ ೨೦೨೦ ಮತ್ತು ೨೦೨೧ರಲ್ಲಿ ಲಾಕ್-ಡೌನ್ ಹೇರಿದಾಗ, ಸಾಗಾಟದ ನಿರ್ಬಂಧಗಳಿಂದಾಗಿ ಟೊಮೆಟೊ ಬೆಳೆಗಾರರು ಕಂಗಾಲಾದರು. ಇಂತಹ ಆತಂಕದ ಸನ್ನಿವೇಶದಲ್ಲಿ "ಗ್ರಾಮ ವಿಕಾಸ” ಸಂಸ್ಥೆ ಅವರಿಗೆ ಸಹಾಯ ಮಾಡಲು ಮುಂದಾಯಿತು. ಟೊಮೆಟೊದ ಮೌಲ್ಯವರ್ಧನೆಗೆ ೪೯ ರೈತ ಕುಟುಂಬಗಳನ್ನು ಪ್ರೋತ್ಸಾಹಿಸಿತು. ಜೊತೆಯಲ್ಲೇ ೪೯ ಮಹಿಳೆಯರಿಗೆ ಟೊಮೆಟೊ ಮೌಲ್ಯವರ್ಧನೆಯಲ್ಲಿ ತರಬೇತಿ ನೀಡಿತು. 

ಮಾರ್ಚ್ - ಎಪ್ರಿಲ್ ಟೊಮೆಟೊ ಕೊಯ್ಲಿನ ಕಾಲ. ಈ ಅವಧಿಯಲ್ಲಿ ಕೋಲಾರದ ಮಾರುಕಟ್ಟೆಗಳಿಗೆ ಪ್ರತಿ ದಿನ ರೈತರು ತರುವ ಟೊಮೆಟೊದ ಪರಿಮಾಣ ಸುಮಾರು ೨,೬೦೦ ಕ್ವಿಂಟಾಲ್. ಪ್ರತಿಯೊಂದು ಕ್ವಿಂಟಾಲಿನ ಮಾರಾಟ ಬೆಲೆ ಸುಮಾರು ರೂ.೧,೧೩೦. ಮಾರ್ಚ್ ೨೪, ೨೦೨೦ರಂದು ಲಾಕ್-ಡೌನ್ ಜ್ಯಾರಿಯಾದಾಗ ಇದು ರೂ.೧೩೦ಕ್ಕೆ ಕುಸಿಯಿತು! ಇದರಿಂದಾಗಿ ಹಠಾತ್ತಾಗಿ ಬೆಳೆಗಾರರ ಪರಿಸ್ಥಿತಿ ಶೋಚನೀಯ. ಆಗ ಬೆಳೆಗಾರರ ನೆರವಿಗೆ ಬಂದ ಸಂಸ್ಥೆ "ಗ್ರಾಮ ವಿಕಾಸ.”

"ನಮ್ಮ ಕಾರ್ಯಕ್ಷೇತ್ರ ಕೋಲಾರದ ಮುಳಬಾಗಿಲು ತಾಲೂಕು. ಅಲ್ಲಿರುವ ಹಳ್ಳಿಗಳ ಸಂಖ್ಯೆ ೩೪೦. ಪ್ರತಿಯೊಂದು ಹಳ್ಳಿಯಲ್ಲಿರುವ ಟೊಮೆಟೊ ಬೆಳೆಗಾರರ ಸರಾಸರಿ ಸಂಖ್ಯೆ ಐದು. ಅವರು ಬೆಳೆಸೋದು ಟನ್ನುಗಟ್ಟಲೆ ಟೊಮೆಟೊ. ಲಾಕ್-ಡೌನಿನ ಸಮಯದಲ್ಲಿ, ಸಾಗಾಟ ನಿರ್ಬಂಧಗಳಿಂದಾಗಿ, ರೈತರಿಗೆ ಮುಂಚಿನಂತೆ ಕೇರಳ, ತಮಿಳ್ನಾಡು ಅಥವಾ ಆಂಧ್ರಪ್ರದೇಶಗಳಿಗೆ ಟೊಮೆಟೊ ಸಾಗಿಸಲು ಸಾಧ್ಯವಾಗಲಿಲ್ಲ. ಅವರವರ ಹಳ್ಳಿಯಲ್ಲೇ ಅವರು ಎಷ್ಟು ಟೊಮೆಟೊ ಮಾರಲು ಸಾಧ್ಯ?” ಎಂದು ಪರಿಸ್ಥಿತಿಯನ್ನು ವಿವರಿಸುತ್ತಾರೆ, ಎಂ.ವಿ.ಎನ್. ರಾವ್, ಕಾರ್ಯನಿರ್ವಾಹಕ ನಿರ್ದೇಶಕ, ಗ್ರಾಮ ವಿಕಾಸ.

ಭಾರತದಲ್ಲಿ ಕಂದು ಬಣ್ಣದ ಹತ್ತಿ ತಳಿಗಳನ್ನು ವಾಣಿಜ್ಯ ಬೆಳೆಯಾಗಿ ಬೆಳೆಸಲು ಬಿಡುಗಡೆ ಮಾಡಿದ ಹೆಗ್ಗಳಿಕೆ ಕರ್ನಾಟಕದ ಧಾರವಾಡದ ಕೃಷಿ ವಿಶ್ವವಿದ್ಯಾಲಯದ್ದು. 2020ರಲ್ಲೇ ಈ ಎರಡು ತಳಿಗಳನ್ನು ಬಿಡುಗಡೆ ಮಾಡಲಾಯಿತು: ಗಾಢ ಕಂದು ಬಣ್ಣದ ಹತ್ತಿ ತಳಿ ಡಿಡಿಸಿಸಿ-1(ಧಾರವಾಡ ದೇಸಿ ಕಲರ್ಡ್ ಕಾಟನ್-1) ಮತ್ತು ಮಧ್ಯಮ-ಕಂದು ಬಣ್ಣದ ಹತ್ತಿ ತಳಿ ಡಿಎಮ್‌ಬಿ-225 (ಧಾರವಾಡ ಮೀಡಿಯಮ್ ಕಾಟನ್-225).

ಆದರೆ, ಎರಡು ವರುಷಗಳ ನಂತರವೂ ಕರ್ನಾಟಕದಲ್ಲಿ ಈ ಪರಿಸರಸ್ನೇಹಿ ಬಣ್ಣದ ಹತ್ತಿ ತಳಿಗಳನ್ನು ಕೇವಲ ಒಂದು ನೂರು ಎಕರೆಯಷ್ಟು ಪ್ರದೇಶದಲ್ಲಿ ಬೆಳೆಯಲಾಗುತ್ತಿದೆ. ಇದಕ್ಕೆ ಮುಖ್ಯ ಕಾರಣ, ಈ ಹತ್ತಿ ತಳಿಗಳ ಬೀಜಗಳಿಗಾಗಿ ರೈತರು ಕೃಷಿ ವಿಶ್ವವಿದ್ಯಾಲಯಕ್ಕೆ ಪಾವತಿಸಬೇಕಾದ ದುಬಾರಿ ಶುಲ್ಕ: ಗಾಢ ಕಂದು ಬಣ್ಣದ ಹತ್ತಿ ತಳಿಗೆ ರೂ.3 ಲಕ್ಷ ಮತ್ತು ಮಧ್ಯಮ-ಕಂದು ಬಣ್ಣದ ಹತ್ತಿ ತಳಿಗೆ ರೂ.5 ಲಕ್ಷ. ಸದ್ಯ, ಬೆಂಗಳೂರಿನ ಎರಡು ಕಂಪೆನಿಗಳು ಕೃಷಿ ವಿಶ್ವವಿದ್ಯಾಲಯದಿಂದ ಈ ಹತ್ತಿ ತಳಿಗಳ ಬೀಜಗಳನ್ನು ಖರೀದಿಸಿ, ಅವನ್ನು ರೈತರಿಗೆ ಒದಗಿಸಿವೆ - "ಒಪ್ಪಂದ ಕೃಷಿ” ಅನ್ವಯ ಹತ್ತಿ ಕೃಷಿಗಾಗಿ. 

ಭಾರತದಲ್ಲಿ ಬಣ್ಣದ ಹತ್ತಿ ತಳಿಗಳ ಅಭಿವೃದ್ಧಿಯ ಪೈಲೆಟ್ ಪ್ರಾಜೆಕ್ಟನ್ನು ಇಸವಿ 2000ದಲ್ಲೇ ಶುರು ಮಾಡಲಾಗಿತ್ತು. ಇಪ್ಪತ್ತು ವರುಷಗಳ ನಂತರ ಎರಡು ಹತ್ತಿ ತಳಿಗಳ ಕ್ಷೇತ್ರ ಪ್ರಯೋಗಗಳು ಅಂತಿಮ ಹಂತಕ್ಕೆ ಬಂದವು. ಅವು: 16301-ಡಿಬಿ ಮತ್ತು ಡಿಡಿಸಿಸಿ-1(ಧಾರವಾಡ ದೇಸಿ ಕಲರ್ಡ್ ಕಾಟನ್). ಇವನ್ನು ಭಾರತೀಯ ಕೃಷಿ ಸಂಶೋಧನಾ ಮಂಡಲಿಯ ಪರಿಣತರ ಸಮಿತಿ  2021ರಲ್ಲಿ ಮೌಲ್ಯಮಾಪನ ಮಾಡಿತು - ಅವನ್ನು ವಾಣಿಜ್ಯ ಬೆಳೆಯಾಗಿ ಬೆಳೆಸಲು ಬಿಡುಗಡೆ ಮಾಡವುದಕ್ಕೆ ಪೂರ್ವಭಾವಿಯಾಗಿ. ಇವೆಲ್ಲ ಭಾ.ಕೃ.ಸ. ಮಂಡಲಿಯ ಅಖಿಲ ಭಾರತ ಸಂಯೋಜಿತ ಹತ್ತಿ ಸಂಶೋಧನಾ ಯೋಜನೆಯ ಅನುಸಾರ ನಡೆದ ಪ್ರಕ್ರಿಯೆಗಳು (ಇದರ ಕಚೇರಿ ತಮಿಳ್ನಾಡಿನ ಕೊಯಂಬತ್ತೂರಿನಲ್ಲಿದೆ.) 

ಕಂದು ಬಣ್ಣದ ಹತ್ತಿ ತಳಿಗಳ ಸಂಶೋಧನೆಯ ಹಿನ್ನೆಲೆ

ಉತ್ತರಪ್ರದೇಶದ ಸಿದ್ಧಾರ್ಥನಗರ ಜಿಲ್ಲೆಯ ಕುನಿಯಾವೋನ್ ತಾಲೂಕಿನ ತಂಪಾದ ಮತ್ತು ತೇವಭರಿತ ಗಾಳಿ ಬಾಳೆ ಬೆಳೆಗೆ ಹೇಳಿ ಮಾಡಿಸಿದಂತಿದೆ. ಅಲ್ಲಿ ನೇಪಾಳದ ಗಡಿಯ ಪಕ್ಕದಲ್ಲಿ ಹಿಮಾಲಯದ ತಪ್ಪಲಿನಲ್ಲಿರುವ ಸುದರ್ಶನ್ ಮೌರ್ಯ ಅವರ ಐದು ಹೆಕ್ಟೇರ್ ಬಾಳೆ ತೋಟದಲ್ಲಿ ಬಾಳೆಗೊನೆಗಳು ಕೊಯ್ಲಿಗೆ ಸಿದ್ಧವಾಗಿವೆ. ಆದರೆ, ಮುಂದೇನಾಗುತ್ತದೋ ಎಂಬ ಭಯ ಅವರನ್ನು ಕಾಡುತ್ತಿದೆ. 

ಪ್ರತಿ ದಿನವೂ ತೋಟಕ್ಕೆ ಹೋಗುವ ಸುದರ್ಶನ್ ಮೌರ್ಯ, ಪ್ರತಿಯೊಂದು ಬಾಳೆಗಿಡ ಮತ್ತು ಅದರ ಎಲೆಗಳನ್ನು ಎಚ್ಚರದಿಂದ ಪರಿಶೀಲಿಸುತ್ತಾರೆ. ತೋಟದ ಅಂಚಿನಲ್ಲಿ, ಸಾಲುಸಾಲು ಬಾಳೆಗಿಡಗಳು ಒಣಗಿವೆ; ಅವುಗಳ ಎಲೆಗಳು ಬಣ್ಣಗೆಟ್ಟಿವೆ ಮತ್ತು ಅವುಗಳಲ್ಲಿ ಬಾಳೆಗೊನೆಗಳೇ ಇಲ್ಲ! ಅವರು ಭಾರವಾದ ಧ್ವನಿಯಲ್ಲಿ ಹೇಳುತ್ತಾರೆ, “ಕನಿಷ್ಠ ಇಂತಹ ೫,೦೦೦ ಬಾಳೆಗಿಡಗಳಿವೆ. ಕೋವಿಡ್-೧೯ ವೈರಸ್ ಧಾಳಿಯ ಇಂದಿನ ಕಠಿಣ ಪರಿಸ್ಥಿತಿಯಿಂದಾಗಿ ನಮಗೆ ನಷ್ಟವಾಗುತ್ತದೆಂದು ಗೊತ್ತಿತ್ತು. ಆದರೆ  ಸೊರಗುರೋಗದಿಂದ ಇಂತಹ ಅನಾಹುತ ನಾವು ನಿರೀಕ್ಷಿಸಿರಲಿಲ್ಲ. ಬಾಳೆಗಿಡಗಳ ಎಲೆಗಳು ಹಳದಿ ಬಣ್ಣಕ್ಕೆ ತಿರುಗಲು ಶುರುವಿಟ್ಟದ್ದು ಮೇ ತಿಂಗಳಿನಲ್ಲಿ. ನಂತರ ಜುಲಾಯಿ ತಿಂಗಳಿನಲ್ಲಿ ಬಾಳೆಗಿಡಗಳು ಸಾಯಲಿಕ್ಕೇ ಶುರುವಾದವು. ಎಲ್ಲ ಪೀಡೆನಾಶಕಗಳನ್ನೂ ರಾಸಾಯನಿಕಗಳನ್ನೂ ತಂದು ಬಾಳೆಗಿಡಗಳಿಗೆ ಸುರಿದಿದ್ದೇನೆ. ಕಳೆದ ಒಂದೂವರೆ ವರುಷದಲ್ಲಿ ಈ ತೋಟದ ನಿರ್ವಹಣೆಗಾಗಿ ೧೨ ಲಕ್ಷ ರೂಪಾಯಿ ಖರ್ಚು ಮಾಡಿದ್ದೇನೆ. ಈಗ ಇಲ್ಲಿನ ಬಾಳೆಗೊನೆ ಮಾರಿದರೆ, ನಾನು ಬಾಳೆ ತೋಟಕ್ಕೆ ಖರ್ಚು ಮಾಡಿದ ಹಣವೂ ನನಗೆ ಸಿಗಲಿಕ್ಕಿಲ್ಲ.” 

ಈ ಪರಿಸ್ಥಿತಿಗೆ ಕಾರಣ ಪನಾಮಾ ಸೊರಗುರೋಗ ಎಂಬ ಮಹಾಮಾರಿ. ಬೆಲ್ವ ಎಂಬ ಆ ಹಳ್ಳಿಯ ಇತರ ೨೦ ಬಾಳೆ ಬೆಳೆಗಾರರೂ ಪನಾಮಾ ಸೊರಗುರೋಗದ ಹೊಡೆತದಿಂದ ಕಂಗಾಲಾಗಿದ್ದಾರೆ. “ಕಳೆದ ನಾಲ್ಕೈದು ವರುಷಗಳಿಂದ ಈ ರೋಗದ ಸೋಂಕು ಬಾಧೆ ಇತ್ತು. ಆದರೆ, ಈ ವರುಷ ವಿಪರೀತ ಮಳೆಯಿಂದಾಗಿ ಅದು ವೇಗವಾಗಿ ಹರಡಿತು” ಎನ್ನುತ್ತಾರೆ ಒಂದು ಹೆಕ್ಟೇರಿನಲ್ಲಿ ಬಾಳೆ ಬೆಳೆದಿರುವ ಛೋಟು ಚೌಧರಿ.

ಅಂತರಗಂಗೆ ಜಲಕಳೆಯ ವಿರುದ್ಧ ದೇಶದಲ್ಲೆಡೆ ನಡೆಯುತ್ತಿದೆ ಯುದ್ಧ. ಯಾಕೆಂದರೆ, ಬಿಳಿ ಹಾಗೂ ಕೆನ್ನೀಲಿ ಬಣ್ಣದ ಆಕರ್ಷಕ ಹೂಗಳಿಂದ ಯಾರನ್ನೂ ಮರುಳು ಮಾಡಬಲ್ಲ ಈ ಜಲಕಳೆ ಕೆರೆಗಳನ್ನೇ ಕೊಲ್ಲುತ್ತದೆ!

೧೮ನೇ ಶತಮಾನದ ಕೊನೆಯಲ್ಲಿ ಅಂತರಗಂಗೆಯನ್ನು ಬ್ರಿಟಿಷರು ಭಾರತಕ್ಕೆ ತಂದರು ಎನ್ನಲಾಗಿದೆ. ಆಗಿನಿಂದಲೇ ನೀರಿನಾಶ್ರಯಗಳನ್ನು ಆಕ್ರಮಿಸಿದ ಈ ಜಲಕಳೆ ಈಗ ದೇಶದಲ್ಲೆಡೆ ವ್ಯಾಪಿಸಿದೆ. ಉತ್ತರ ಭಾರತದ ಅತಿ ದೊಡ್ಡ ಹರಿಕೆ ಸರೋವರದಲ್ಲಿ ಇದರ ಹರಡುವಿಕೆಯನ್ನು ತಡೆಯಲಿಕ್ಕಾಗಿ, ೧೯೯೯ರಲ್ಲಿ ಪಂಜಾಬ್ ಸರಕಾರ ಸೈನ್ಯದ ನೆರವು ಪಡೆಯಬೇಕಾಯಿತು. ಹೈದರಾಬಾದ್ ವ್ಯಾಪ್ತಿಯ ೫೩ ಸರೋವರಗಳಿಂದ ಅಂತರಗಂಗೆಯನ್ನು ಕಿತ್ತೊರೆಯಲಿಕ್ಕಾಗಿ, ಅಲ್ಲಿನ ಆಡಳಿತವು ೨೦೧೭ರಲ್ಲಿ ರೂ.೧೭ ಕೋಟಿ ವೆಚ್ಚದಲ್ಲಿ ದೊಡ್ಡ ಕಾರ್ಯಾಚರಣೆ ನಡೆಸಿತು. ಆದರೆ, ಈ ಸಸ್ಯ ಇವಕ್ಕೆಲ್ಲ ಕ್ಯಾರೇ ಅನ್ನೋದಿಲ್ಲ. ಯಾಕೆಂದರೆ ಮಣ್ಣಿನಲ್ಲಿ ಇದರ ಬೀಜಗಳು ೩೦ ವರುಷಗಳ ವರೆಗೆ ಸುಪ್ತವಾಗಿ ಉಳಿಯಬಲ್ಲವು.

ಅಂತರಗಂಗೆ (ವಾಟರ್ ಹಯಾಸಿಂಥ್)ಯನ್ನು ಅತ್ಯಂತ ವೇಗವಾಗಿ ಬೆಳೆಯುವ ಸಸ್ಯವೆಂದು ಗುರುತಿಸಲಾಗಿದೆ. (ಸಸ್ಯಶಾಸ್ತ್ರೀಯ ಹೆಸರು: ಐಕಾರ್ನಿಯ ಕ್ರಸಿಪ್ಸ್) ಇದು ಕೆರೆ, ಕೊಳ, ಸರೋವರ ಮತ್ತು ನದಿಗಳ ನೀರಿನಲ್ಲಿ ಕೇವಲ ೮-೧೦ ದಿನಗಳಲ್ಲಿ ಎರಡು ಪಟ್ಟು ಬೆಳೆಯುತ್ತದೆ. ಇಷ್ಟು ವೇಗವಾಗಿ ಬೆಳೆದು, ನೀರಿನ ಮೇಲ್ಮೈಯನ್ನು ಕೆಲವೇ ದಿನಗಳಲ್ಲಿ ಸಂಪೂರ್ಣ ಆವರಿಸುತ್ತದೆ. ಈ ಧಾಳಿಯಿಂದಾಗಿ ಕೆರೆ, ಸರೋವರಗಳ ಜಲಸಸ್ಯಗಳು ಸತ್ತು ಕೊಳೆಯುತ್ತವೆ. ಆಗ, ಅಲ್ಲಿನ ನೀರಿನಲ್ಲಿ ಆಮ್ಲಜನಕದ ಪ್ರಮಾಣ ಕಡಿಮೆಯಾಗಿ, ಅಲ್ಲಿರುವ ಮೀನುಗಳು ಮತ್ತು ಇತರ ಜಲಚರಗಳು ಬಲಿಯಾಗುತ್ತವೆ.

ಕೆರೆ, ಸರೋವರಗಳನ್ನು ಆಕ್ರಮಿಸಿ, ಭತ್ತದ ಹೊಲಗಳಲ್ಲಿ ಹರಡಿ, ನೀರು ಸರಬರಾಜು ಪೈಪುಗಳಲ್ಲಿಯೂ ನುಗ್ಗಿ ಬೆಳೆಯುತ್ತದೆ ಅಂತರಗಂಗೆ. ಇದರ ಅವಾಂತರಗಳನ್ನೆಲ್ಲ ನಿಭಾಯಿಸಲು ನಮಗಿರುವ ಒಂದು ದಾರಿ: ವಿಷ ರಾಸಾಯನಿಕಗಳ ಸಿಂಪಡಣೆ. ಇದರ ಬದಲಾಗಿ, ಅಳವಡಿಸಬಹುದಾದ ಪರಿಣಾಮಕಾರಿ ದಾರಿ: ಆದಾಯ ಹುಟ್ಟುವ ರೀತಿಯಲ್ಲಿ ಇದನ್ನು ಬಳಸುವುದು.

ಒಂದಾನೊಂದು ಕಾಲದಲ್ಲಿ ಒಡಿಸ್ಸಾದ ನಯಾಘರ್ ಜಿಲ್ಲೆಯ ಒಡಗಾವೊನ್‌ನ ಆ ಪ್ರದೇಶ ದಟ್ಟ ಕಾಡು ಆಗಿತ್ತು. ಕ್ರಮೇಣ ಅಲ್ಲಿನ ಮೇಲ್ಮಣ್ಣು ಕೊಚ್ಚಿ ಹೋಗಿ, ಅಲ್ಲಿ ಆಳವಾದ ತೋಡುಗಳು ಉಂಟಾದವು. ಪ್ರಕೃತಿ ಅಲ್ಲಿ ಪುನಃ ಹಸುರು ಚಿಮ್ಮಿಸಲು ಪ್ರಯತ್ನಿಸಿದಾಗೆಲ್ಲ, ಆಡುಗಳು ಮತ್ತು ಕುರಿಗಳು ಹಸುರು ಚಿಗುರುಗಳನ್ನೆಲ್ಲ ಕಿತ್ತು ತಿನ್ನುತ್ತಿದ್ದವು.

ಆ ಜಮೀನಿನ ಮಾಲೀಕರಾಗಿದ್ದ ಹಳ್ಳಿಗರು ಅಲ್ಲಿ ಬೆಳೆಗಳನ್ನು ಬೆಳೆಸುವ ಕನಸುಗಳನ್ನೇ ಕಳೆದುಕೊಂಡರು. ಆದರೆ, ಸಬರಮತೀ ಮತ್ತು ಆಕೆಯ ತಂದೆ ರಾಧಾಮೋಹನ್ ಅವರಿಗೆ ಇಂತಹ ಜಾಗವೇ ಬೇಕಾಗಿತ್ತು. ಯಾಕೆಂದರೆ, ಬರಡು ಭೂಮಿ ಎಂದು ತಿರಸ್ಕರಿಸಲ್ಪಟ್ಟ ಜಮೀನನ್ನು ಪುನರುಜ್ಜೀವನಗೊಳಿಸುವ ಸವಾಲನ್ನು ಅವರು ಸ್ವೀಕರಿಸಿದ್ದರು. ಅವರು “ಸಂಭವ್" ಎಂಬ ಸರಕಾರೇತರ ಸಂಸ್ಥೆಯ ಸ್ಥಾಪಕರು. ಲಿಂಗ ಸಮಾನತೆ ಮತ್ತು ಪರಿಸರ - ಇವು ಆ ಸಂಸ್ಥೆಯ ಕಾರ್ಯಕ್ಷೇತ್ರಗಳು.

ದಾನದ ಹಣದಿಂದ ಅವರು ಅಲ್ಲಿ ೭೦ ಎಕ್ರೆ ಜಮೀನು ಖರೀದಿಸಿ, ತಮ್ಮ ಕಾಯಕ ಶುರು ಮಾಡಿದರು. ಮೊದಲಾಗಿ, ಅವರು ಆ ಜಮೀನಿನ ಸುತ್ತಲೂ ಬಿದಿರಿನ ಜೈವಿಕ ಬೇಲಿ ನಿರ್ಮಿಸಿದರು. ಕಂಪೌಂಡ್ ಗೋಡೆ ನಿರ್ಮಿಸಲು ಬಹಳ ಹಣ ಖರ್ಚು ಮಾಡಬೇಕು. ಅದಕ್ಕೆ ಹೋಲಿಸಿದಾಗ ಬಿದಿರಿನ ಬೇಲಿ ಕೆಲವು ವರುಷಗಳ ನಂತರ ಆದಾಯದ ಮೂಲವಾಗುತ್ತದೆ.

ಎರಡೇ ವರುಷಗಳಲ್ಲಿ ಅಲ್ಲೆಲ್ಲ ಹುಲ್ಲು ಹುಟ್ಟಿತು. ಅನಂತರ ಭತ್ತ, ಹಣ್ಣು ಮತ್ತು ತರಕಾರಿ ಬೆಳೆಸುವ ತಮ್ಮ ಯೋಜನೆಯನ್ನು ಅವರು ಕೈಗೆತ್ತಿಕೊಂಡರು. ಈಗ, ಮೂವತ್ತು ವರುಷಗಳ ನಂತರ, ಸಬರಮತಿ ಮತ್ತು ರಾಧಾಮೋಹನ್, ಅಂದೊಮ್ಮೆ ಬರಡಾಗಿದ್ದ ಜಮೀನಿನಲ್ಲಿ ಬೆಳೆದು ನಿಂತಿರುವ “ಆಹಾರ ಕಾಡ"ನ್ನು ನೋಡುತ್ತಾ ಮಂದಹಾಸ ಬೀರುತ್ತಾರೆ. ಈ ಸಾಧನೆಗಾಗಿಯೇ ಅವರಿಗೆ ೨೦೨೦ರ "ಪದ್ಮಶ್ರೀ" ಪುರಸ್ಕಾರ ನೀಡಿ ಗೌರವಿಸಲಾಗಿದೆ.

ಅಲ್ಲೀಗ ೫೦೦ ವಿವಿಧ ತಳಿ ಭತ್ತ, ೧೦೦ ವಿಭಿನ್ನ ತರಕಾರಿಗಳು ಮತ್ತು ೪೦ ಬೇರೆಬೇರೆ ಹಣ್ಣುಗಳು ಬೆಳೆಯುತ್ತಿವೆ. ಸಬರಮತಿ ಮತ್ತು ರಾಧಾಮೋಹನ್ ಈ ಬೆಳೆಗಳ ಫಸಲಿನ ವಿವರಗಳನ್ನು ದಾಖಲಿಸುತ್ತಿದ್ದಾರೆ ಮತ್ತು ಬೀಜಗಳನ್ನು ರಕ್ಷಿಸುತ್ತಿದ್ದಾರೆ.

ವಾಣಿಜ್ಯ ಅರಣ್ಯಗಳ ವಿಸ್ತೀರ್ಣ ಹೆಚ್ಚಿಸಬೇಕೆಂದು ಕೇಂದ್ರ ಸರಕಾರ ಇತ್ತೀಚೆಗೆ ಕಾರ್ಯೋನ್ಮುಖವಾಗಿದೆ. ಈ ನಡೆ ೨೦೦೬ರ ಅರಣ್ಯ ಹಕ್ಕುಗಳ ಕಾಯಿದೆಯ ಆಶಯಕ್ಕೆ ವಿರುದ್ಧವಾಗಿದೆ!
ವಾಣಿಜ್ಯ ಅರಣ್ಯಗಳ ಪ್ರಸ್ತಾವನೆ ಮಾಡಲಾಗಿರುವುದು ೨೦೧೮ರ ಕರಡು ಅರಣ್ಯ ನೀತಿಯಲ್ಲಿ – ಮೋಪಿನ ಉತ್ಪಾದನೆ ಹೆಚ್ಚಿಸಲಿಕ್ಕಾಗಿ. ಭಾರತೀಯ ಅರಣ್ಯ ಕಾಯಿದೆಯ ಉದ್ದೇಶಿತ ತಿದ್ದುಪಡಿಯ ಕರಡಿನಲ್ಲಿ ಇದನ್ನು ಪುನರುಚ್ಚರಿಸಲಾಗಿದೆ.
ಅರಣ್ಯಗಳ ನಿರ್ವಹಣೆಗೆ ಸಂಬಂಧಿಸಿದಂತೆ ನಮ್ಮ ದೇಶದ ಮುಖ್ಯ ಕಾಯಿದೆ ೧೯೨೭ರ ಭಾರತೀಯ ಅರಣ್ಯ ಕಾಯಿದೆ. ಇದರ ಅನುಸಾರ ಅರಣ್ಯ ಜಮೀನನ್ನು ಮೂರು ವಿಧಗಳಾಗಿ ವಿಂಗಡಿಸಲಾಗಿದೆ: ಕಾದಿರಿಸಿದ ಅರಣ್ಯ, ರಕ್ಷಿತಾರಣ್ಯ ಮತ್ತು ಗ್ರಾಮ ಅರಣ್ಯ. ಈ ತಿದ್ದುಪಡಿ ಕರಡಿನ ಪ್ರಸ್ತಾಪ ಏನೆಂದರೆ, ವಾಣಿಜ್ಯ ಅರಣ್ಯ ಪ್ರದೇಶಗಳನ್ನು ಈ ವಿಂಗಡಣೆ ಪಟ್ಟಿಗೆ (ಕ್ಯಾಟಗರಿ ಲಿಸ್ಟ್) ಒಳಪಡಿಸುವುದು. ಇದರ ಅನುಸಾರ, ಮೋಪು, ಪಲ್ಪ್, ಸೌದೆ, ಮೋಪಲ್ಲದ ಅರಣ್ಯ ಉತ್ಪನ್ನಗಳು (ಹಣ್ಣು, ಬೀಜ ಇತ್ಯಾದಿ), ಔಷಧೀಯ ಸಸ್ಯಗಳು ಅಥವಾ ದೇಶದ ಉತ್ಪಾದನೆ ಹೆಚ್ಚಿಸುವ ಯಾವುದೇ ಅರಣ್ಯ ಸ್ಪಿಷೀಸ್ – ಇವುಗಳ ಉತ್ಪಾದನೆಗೆ ಬಳಕೆಯಾಗುವ ಅರಣ್ಯ ಜಮೀನನ್ನು ನಿರ್ದಿಷ್ಟ ಅವಧಿಗೆ ನೋಟಿಫೈ ಮಾಡಲು ಸಾಧ್ಯ. ಕೇಂದ್ರ ಸರಕಾರ ಅಥವಾ ರಾಜ್ಯ ಸರಕಾರ ಹೀಗೆ ನೋಟಿಫೈ ಮಾಡಬಹುದು.
ಅರಣ್ಯ ವಾಸಿಗಳು ಮತ್ತು ಅರಣ್ಯ ಅಭಿವೃದ್ಧಿ ನಿಗಮಗಳ (ರಾಜ್ಯ ಅರಣ್ಯ ಇಲಾಖೆಗಳ ವಾಣಿಜ್ಯ ಅಂಗಸಂಸ್ಥೆ) ನಡುವಣ ಬಿಕ್ಕಟ್ಟು ಹೆಚ್ಚಾಗಲು ವಾಣಿಜ್ಯ ಅರಣ್ಯಗಳು ಕಾರಣವಾಗುತ್ತವೆ ಎಂಬುದು ಪರಿಣತರ ಅಭಿಪ್ರಾಯ. ಯಾಕೆಂದರೆ ಅರಣ್ಯ ಅಭಿವೃದ್ಧಿ ನಿಗಮ(ಅ.ಅ. ನಿಗಮ)ಗಳ ಸಿಬ್ಬಂದಿ ಅರಣ್ಯ ಹಕ್ಕು ಕಾಯಿದೆ (ಫಾರೆಸ್ಟ್ ರೈಟ್ಸ್ ಆಕ್ಟ್) ೨೦೦೬ರ ಅನ್ವಯ ನೋಟಿಫೈ ಆಗಿರುವ ಸಮುದಾಯ ಅರಣ್ಯಗಳಿಗೆ ಮತ್ತೆಮತ್ತೆ ಲಗ್ಗೆಯಿಟ್ಟಿದ್ದಾರೆ – ಅವುಗಳ ವಾಣಿಜ್ಯ ಆದಾಯ ಕಬಳಿಸಲಿಕ್ಕಾಗಿ. ನವದೆಹಲಿಯ ವಿಜ್ನಾನ ಮತ್ತು ಪರಿಸರ ಕೇಂದ್ರದ ಅನುಸಾರ, ೧೯ ರಾಜ್ಯಗಳ ಅ.ಅ. ನಿಗಮಗಳು ಒಟ್ಟಾಗಿ ಹತ್ತು ಲಕ್ಷ ಹೆಕ್ಟೇರಿಗಿಂತ ಅಧಿಕ ಅರಣ್ಯ ಪ್ರದೇಶವನ್ನು ನಿಯಂತ್ರಿಸುತ್ತಿವೆ.

ದೈತ್ಯ ಬಿಯೊಬಾಬ್ ಮರಗಳು ಎಲ್ಲಿದ್ದರೂ ನಮ್ಮ ಗಮನ ಸೆಳೆದೇ ಸೆಳೆಯುತ್ತವೆ. ಆಫ್ರಿಕಾದಲ್ಲಿ ಮತ್ತು ಅದರ ಪೂರ್ವದ ಮಡಗಾಸ್ಕರ್ ದ್ವೀಪದಲ್ಲಿ ಸಹಜವಾಗಿ ಬೆಳೆಯುವ ಇವಕ್ಕೆ ಕನ್ನಡದಲ್ಲಿ ದೊಡ್ಡಹುಣಿಸೆ ಮರ ಅಥವಾ ಆನೆಹುಣಿಸೆ ಮರ ಎಂಬ ಅನ್ವರ್ಥನಾಮವಿದೆ.
ಭೂಮಿಯ ಆಳಪದರಗಳ ಚಲನೆಯಿಂದಾಗಿ ಆಫ್ರಿಕಾದಿಂದ ಬೇರ್ಪಟ್ಟ ದ್ವೀಪ ಮಡಗಾಸ್ಕರ್. ವಿಸ್ತೀರ್ಣದಲ್ಲಿ ಇದಕ್ಕೆ ಜಗತ್ತಿನಲ್ಲಿ ನಾಲ್ಕನೆಯ ಸ್ಥಾನ. ಜಗತ್ತಿನಲ್ಲಿ ಬೇರೆಲ್ಲೂ ಕಾಣಸಿಗದ ಕೆಲವು ಪ್ರಾಣಿಗಳು ಇಲ್ಲಿವೆ.
ಅಪರೂಪದ ಸಸ್ಯಗಳೂ ಮಡಗಾಸ್ಕರಿನಲ್ಲಿವೆ. ಅವುಗಳಲ್ಲೊಂದು ಬಿಯೊಬಾಬ್. ಸಾವಿರ ವರುಷ ಮಿಕ್ಕಿದ ವಯಸ್ಸಿನ ಸಾವಿರಾರು ಬಿಯೊಬಾಬ್ ಮರಗಳು ಇಲ್ಲಿವೆ. ಹಲವು ದೈತ್ಯಾಕಾರದ ಮರಗಳೆದುರು ಮನುಷ್ಯ ನಿಂತರೆ ಮಹಡಿ-ಕಟ್ಟಡದ ಎದುರಿಟ್ಟ ಬೆಂಕಿಪೆಟ್ಟಿಗೆಯಂತೆ ಕಾಣಿಸುತ್ತಾನೆ.
ಬಿಯೊಬಾಬ್ ಮರಗಳ ಮೂಲಸ್ಥಾನ ಅರೇಬಿಯಾ. ಇವುಗಳ ಹೆಸರಿನ ಮೂಲವೂ ಬುಹಿಹಬ್ ಎಂಬ ಅರಾಬಿಕ್ ಪದ. ಇದರರ್ಥ ಹಲವು ಬೀಜಗಳ ಮರ. ಬಿಯೊಬಾಬ್ ಮರವನ್ನು ಫಕ್ಕನೆ ನೋಡಿದಾಗ ಮರವೊಂದನ್ನು ತಲೆಕೆಳಗಾಗಿ ನಿಲ್ಲಿಸಿದಂತೆ ಕಾಣಿಸುತ್ತದೆ!
ಬಿಯೊಬಾಬ್ ಮರಗಳು ಸಾವಿರಾರು ವರುಷ ಬದುಕಬಲ್ಲವು. ಅವು ಕಾಂಡದಲ್ಲಿ ಅಸ್ಪಷ್ಟ “ವಯಸ್ಸಿನ ವರ್ತುಲ” (ಗ್ರೋತ್ ರಿಂಗ್)ಗಳನ್ನು ಮೂಡಿಸುವ ಕಾರಣ ಅವುಗಳ ವಯಸ್ಸು ಪತ್ತೆ ಮಾಡುವುದು ಸುಲಭವಲ್ಲ. ಆದ್ದರಿಂದ ರೇಡಿಯೋ ಕಾರ್ಬನ್ ಅಧ್ಯಯನ ಮಾಡಿದಾಗ ತಿಳಿದುಬಂದಿರುವ ಸಂಗತಿ: ಅತ್ಯಂತ ಹಳೆಯ ಬಿಯೊಬಾಬ್ ಮರದ ಆಯುಷ್ಯ ೨,೫೦೦ ವರುಷಕ್ಕಿಂತಲೂ ಜಾಸ್ತಿ (ಈಗ ಆ ಮರ ಸತ್ತಿದೆ.). ಅತಿ ಒಣ ಹವಾಮಾನದಲ್ಲಿಯೂ ಮುಗಿಲೆತ್ತರಕ್ಕೆ ಬೆಳೆಯಬಲ್ಲ ಇವು ಅತ್ಯಂತ ಗಡುಸಾದ ಮರಗಳು.
ಇವುಗಳ ಕಾಂಡ ಭಾರೀ ಗಾತ್ರದ್ದು. ದೂರದಿಂದ ಇವನ್ನು ನೋಡಿದಾಗ ಆನೆಯೊಂದು ಹಿಂಗಾಲುಗಳನ್ನೂರಿ ಕುಳಿತಂತೆ ಕಾಣಿಸುತ್ತದೆ. ಹಲವು ಮರಗಳ ವ್ಯಾಸ ೨೦ರಿಂದ ೩೦ ಅಡಿ. ದಕ್ಷಿಣ ಆಫ್ರಿಕಾದ ಒಂದು ಬಿಯೊಬಾಬ್ ಮರದ ವ್ಯಾಸ ೧೫೪ ಅಡಿ (೪೬.೯ ಮೀ.) ಇದೆಷ್ಟು ದೊಡ್ಡದೆಂದರೆ, ಇದರ ಕಾಂಡವನ್ನು ಬಗೆದು ೫೦ ಜನರು ಕೂರಬಹುದಾದ ಬಾರ್ ನಿರ್ಮಿಸಲಾಗಿದೆ.

Pages