Agriculture and Rural Development

ನಮ್ಮ ಮನೆಗಳಿಗೆ ನಳ್ಳಿ ನೀರು ಸರಬರಾಜು ಇಲ್ಲವೆಂದಾದರೆ ಗ್ರಾಮ ಪಂಚಾಯತಿ, ಮುನಿಸಿಪಾಲಿಟಿ ಅಥವಾ ಮಹಾನಗರಪಾಲಿಕೆ ಟ್ಯಾಂಕರಿನಲ್ಲಿ ನೀರು ಒದಗಿಸಬೇಕು ಎಂಬ ನಿರೀಕ್ಷೆ ನಮ್ಮದು.

ನೀರಿನ ಅಭಾವ ಇದ್ದಲ್ಲಿ ಇದು ಸರಿ. ಆದರೆ ಕರಾವಳಿ ಜಿಲ್ಲೆಗಳಲ್ಲಿ? ಇಲ್ಲಿ ಬೀಳುವ ವಾರ್ಷಿಕ ಸರಾಸರಿ ಮಳೆ ೪,೪೦೦ ಮಿಮೀ. ಅಂದರೆ ೫ ಸೆಂಟ್ಸಿನ ಮನೆಸೈಟಿನಲ್ಲಿ ವರುಷಕ್ಕೆ ಸುರಿಯುವ ಮಳೆ ೮ ಲಕ್ಷ ಲೀಟರ್. ಇದು ೨೦ ಜನರಿಗೆ ಒಂದು ವರುಷಕ್ಕೆ ಧಾರಾಳ ಸಾಕು. ಇಂಥಲ್ಲಿ ಟ್ಯಾಂಕರಿನಲ್ಲಿ ನೀರು ಸರಬರಾಜು ಮಾಡುವುದಕ್ಕೆ ಏನೆನ್ನಬೇಕು?

ಕೇವಲ ೫೪೦ ಮಿಮೀ ವಾರ್ಷಿಕ ಮಳೆ ಬೀಳುವ ಬಾಗಲಕೋಟೆಯಲ್ಲಿ ಮಳೆನೀರು ಕೊಯ್ಲು ಮಾಡಿ ಬಳಸುತ್ತಾರೆ. ಆದರೆ ದಕ್ಷಿಣಕನ್ನಡ ಜಿಲ್ಲೆಯ ಕೆಲವು ಹಳ್ಳಿಗಳಿಗೆ ಮಾರ್ಚ್ ತಿಂಗಳಿನಲ್ಲಿಯೇ ಟ್ಯಾಂಕರ್‍ಗಳಲ್ಲಿ ನೀರಿನ ಸರಬರಾಜು ಆರಂಭ! ಮಂಗಳೂರಿನ ಕೆಲವು ಪ್ರದೇಶಗಳಿಗೂ ಬೇಸಗೆಯಲ್ಲಿ ಟ್ಯಾಂಕರಿನಲ್ಲಿ ನೀರು ಸರಬರಾಜು. ಆದರೆ ಯಾರಿಗೂ ಏನೂ ಅನಿಸುವುದಿಲ್ಲ.

ಕರಾವಳಿಯ ಉಡುಪಿ ಜಿಲ್ಲೆಯಲ್ಲಿ ನೀರು ಒದಗಿಸಲಿಕ್ಕಾಗಿ ೨೦೦೮ - ೦೯ರಲ್ಲಿ ಜಿಲ್ಲಾ ಪಂಚಾಯತಿ ಮಾಡಿದ ವೆಚ್ಚ ರೂಪಾಯಿ ೧೩ ಕೋಟಿ. (ಹೊಸ ಬೋರ್‍ವೆಲ್ ಕೊರೆಸುವುದು, ಪೈಪ್‍ಲೈನ್ ಜೋಡಣೆ, ಹ್ಯಾಂಡ್‍ಪಂಪ್ ರಿಪೇರಿ ಇತ್ಯಾದಿ ಉದ್ದೇಶಗಳಿಗಾಗಿ) ಆದರೆ ಯಾರಿಗೂ ಏನೂ ಅನಿಸುವುದಿಲ್ಲ.

ಮಧ್ಯಪ್ರದೇಶದ ಸೆಹೊರೆ ಪಟ್ಟಣವಾಸಿ ಅನುಪ್ ಚೌಧರಿ. ಸೈಕಲಿನಲ್ಲಿ ಸುತ್ತಾಡಿ ಹಾಲು ಮಾರಿ ಜೀವನ ನಡೆಸುವವರು. ಅವರು ಎಲ್ಲರಂತಲ್ಲ. ಪ್ರತಿ ವರುಷ ಬೇಸಗೆಯಲ್ಲಿ ಅವರ ಪಟ್ಟಣದಲ್ಲಿ ಕುಡಿಯುವ ನೀರಿಗೆ ತತ್ವಾರ. ಆಗ ಟ್ಯಾಂಕರ್-ಲಾರಿಗಳಲ್ಲಿ ನೀರಿನ ಸರಬರಾಜು. ಇದರಿಂದ ಕೆಲವು ಕಾರ್ಪೊರೇಟರ್‍ಗಳಿಗೆ ಹಣ ಲಪಟಾಯಿಸಲು ಅವಕಾಶ. ಆದರೆ ಪ್ರತಿಯೊಂದು ಟ್ಯಾಂಕರ್ ನೀರು ಸರಬರಾಜು ಮಾಡಿದಾಗ, ಅದರಿಂದ ನೀರು ಪಡೆದ ಐವರು ಸ್ಥಳೀಯರು ರಶೀದಿಗೆ ಸಹಿ ಮಾಡಬೇಕು ಎಂಬುದು ನಿಯಮ. ಹಾಗಾಗಿ, ಅನುಪ್ ಚೌಧರಿ "ಮಾಹಿತಿ ಹಕ್ಕು ಕಾಯಿದೆ" ಪ್ರಕಾರ ರೂ.೧೦ ಶುಲ್ಕ ಪಾವತಿಸಿ, ಸಾರ್ವಜನಿಕ ಮಾಹಿತಿ ಅಧಿಕಾರಿಯಿಂದ ಮಾಹಿತಿ ಕೇಳಿದರು; ಆ ರಶೀದಿಗಳ ಯಥಾಪ್ರತಿಗಳನ್ನು ಕೇಳಿದರು.

"ಏನು ಮಾತನಾಡುತ್ತಿದ್ದೀರಿ ನೀವೆಲ್ಲ?" ಎಂಬ ಪ್ರಶ್ನೆ ಆ ಸಭೆಯಲ್ಲಿ ಇದ್ದವರನ್ನೆಲ್ಲ ಬೆಚ್ಚಿ ಬೀಳಿಸಿತು. ಯಾಕೆಂದರೆ ಪ್ರಶ್ನೆ ಕೇಳಿದವನು ಬಹುರಾಷ್ಟ್ರೀಯ ಕಪ್ಪುಕೋಲಾ ಕಂಪೆನಿಯನ್ನು ವಾರದ ಮುಂಚೆ ಸೇರಿದ್ದ ಯುವಕ. ವಯಸ್ಸಿನಲ್ಲಿ ಅಲ್ಲಿದ್ದ ಎಲ್ಲರಿಗಿಂತ ಕಿರಿಯ.

ಕಳೆದ ಒಂದು ತಾಸಿನಿಂದ ಆ ಸಭೆಯಲ್ಲಿ ಬಿರುಸಿನ ಚರ್ಚೆ. ಎದುರಾಳಿ ಕಂಪೆನಿಯ ಕೆಂಪುಕೋಲಾಕ್ಕಿಂತ ಕಪ್ಪುಕೋಲಾವನ್ನು ಜಾಸ್ತಿ ಮಾರಾಟ ಮಾಡುವುದು ಹೇಗೆ? ಎಂಬ ಬಗ್ಗೆ. ಹಲವು ಐಡಿಯಾಗಳ, ಸಲಹೆಗಳ ಪರಿಶೀಲನೆ. ಮಾರಾಟಗಾರರಿಗೆ ಹೆಚ್ಚು ಕಮಿಷನ್ ಪಾವತಿ ಮತ್ತು ಹೆಚ್ಚು ಕೋಲಾ ಕುಡಿಯುವವರಿಗೆ ಲಾಟರಿ ಎತ್ತಿ ಬಹುಮಾನ ಇತ್ಯಾದಿ ಪ್ರಸ್ತಾಪಗಳು. ಇದನ್ನೆಲ್ಲ ಕೇಳಿಕೇಳಿ ಬೇಸತ್ತ ಯುವಕ ಎದ್ದು ನಿಂತು, ಏರಿದ ಸ್ವರದಲ್ಲಿ ಆ ಪ್ರಶ್ನೆ ಕೇಳಿದ್ದ.

"ಮಾರಾಟದಲ್ಲಿ ನಮ್ಮ ಪ್ರತಿಸ್ಫರ್ಧಿ ಕೆಂಪುಕೋಲಾ ಎಂದು ಭಾವಿಸಿ ನೀವೆಲ್ಲ ಚರ್ಚೆ ಮಾಡುತ್ತಿದ್ದೀರಿ, ಹಾಗಂತ ಹೇಳಿದವರು ಯಾರು?" ಎನ್ನುತ್ತಾ ಯುವಕ ಅಲ್ಲಿದ್ದ ಹಳೆಯ ತಲೆಗಳತ್ತ ಒಮ್ಮೆ ಕಣ್ಣು ಹಾಯಿಸಿದ. ಅಲ್ಲಿ ಅಚ್ಚರಿಯ ಮೌನ ನೆಲೆಸಿತ್ತು. "ನಮ್ಮ ಕಪ್ಪುಕೋಲಾದ ಪ್ರತಿಸ್ಫರ್ಧಿ ಕೆಂಪುಕೋಲಾ ಅಲ್ಲ" ಎಂದು ದೃಢವಾದ ಸ್ವರದಲ್ಲಿ ಹೇಳಿದ ಯುವಕ ಒಮ್ಮೆ ತನ್ನ ಮಾತು ನಿಲ್ಲಿಸಿದ.

"ನಿನ್ನ ಪ್ರಕಾರ ನಮ್ಮ ಪ್ರತಿಸ್ಫರ್ಧಿ ಯಾರು?" ಎಂದು ತಲೆ ನರೆತ ಒಬ್ಬರು ತಡೆಯಲಾಗದೆ ಕೇಳಿಯೇ ಬಿಟ್ಟರು. ಆ ಯುವಕ ಒಮ್ಮೆ ಜೋರಾಗಿ ಉಸಿರೆಳೆದುಕೊಂಡು ಹೇಳಿದ, "ನಮ್ಮ ಪ್ರತಿಸ್ಫರ್ಧಿ ನೀರು." ಅಲ್ಲಿದ್ದ ಎಲ್ಲರೂ ಇನ್ನೊಮ್ಮೆ ಬೆಚ್ಚಿ ಬಿದ್ದರು.

ಆ ಯುವಕ ತನ್ನ ಮಾತು ಮುಂದುವರಿಸಿದ. "ಹೌದು, ನಮ್ಮ ಪ್ರತಿಸ್ಫರ್ಧಿ ನೀರು. ಜನರು ನೀರಿನ ಬದಲಾಗಿ ನಮ್ಮ ಕಪ್ಪುಕೋಲಾ ಕುಡಿಯುವಂತೆ ಮಾಡೋದು ಹೇಗೆ? ಎಂದು ನಾವು ಯೋಚನೆ ಮಾಡಬೇಕೇ ವಿನಃ ಕೆಂಪುಕೋಲಾದ ಮಾರಾಟದ ಬಗ್ಗೆ ತಲೆ ಕೆಡಿಸಿಕೊಳ್ಳಬೇಕಾಗಿಲ್ಲ."

ವ್ಯಾಪಾರಿ ಮನಸ್ಸು ಹೇಗೆ ಯೋಚನೆ ಮಾಡುತ್ತದೆ ಎಂಬುದಕ್ಕೆ ಇದೊಂದು ಉದಾಹರಣೆ. ಇದರ ಸತ್ಯಾಸತ್ಯತೆ ಏನೇ ಇರಲಿ. ಈ ರೀತಿಯ ಮಾರಾಟತಂತ್ರಗಳು ಬಳಕೆಗೆ ಬರುತ್ತಿವೆಯೇ? ಎಂಬುದರ ಬಗ್ಗೆ ನಾವು ಎಚ್ಚರದಿಂದಿರಬೇಕಾಗಿದೆ.

ಬೆಂಗಳೂರಿನವರು ಪುಣ್ಯವಂತರು! ಮಂಗಳೂರಿನವರೂ ಪುಣ್ಯವಂತರು! ಯಾಕೆಂದರೆ ಮನೆಯ ನಳ್ಳಿ ತಿರುಗಿಸಿದರೆ ನೀರು ಬರುತ್ತದೆ, ಅಲ್ಲವೇ? ಬೆಂಗಳೂರಿನ ಮನೆಮನೆಗಳಿಗೆ ನೀರು ತರಲಿಕ್ಕಾಗಿ ಕಾವೇರಿಯಿಂದ ಕುಡಿಯುವ ನೀರು ಸರಬರಾಜು ಮಹಾಯೋಜನೆಯ ವಿವಿಧ ಹಂತಗಳಿಗಾಗಿ ಸರಕಾರವು ರೂಪಾಯಿ ೧,೦೦೦ ಕೋಟಿಗಳಿಗಿಂತ ಜಾಸ್ತಿ ವೆಚ್ಚ ಮಾಡಿದೆ.

ಆದರೆ ನಮ್ಮ ದೇಶದ ಸಾವಿರಾರು ಹಳ್ಳಿಗಳ ಲಕ್ಷಗಟ್ಟಲೆ ಮನೆಗಳಿಗೆ ಇಂದಿಗೂ ಕುಡಿಯುವ ನೀರು ಒದಗಿಸುವ ವ್ಯವಸ್ಥೆಯಿಲ್ಲ. ಅಂತಹ ಹಳ್ಳಿಗಳಿಗೆ ಕುಡಿಯುವ ನೀರು ಪೂರೈಸಲಿಕ್ಕಾಗಿ ಕೆಲವು ಕೋಟಿ ರೂಪಾಯಿಗಳನ್ನು ಸರಕಾರ ಬಜೆಟಿನಲ್ಲಿ ಒದಗಿಸಿದರೆ ಅದುವೇ ವಿಶೇಷ. ಅಂತಹ ಒಂದು ಹಳ್ಳಿಯ ಮಹಿಳೆ ಕಮಲಾ ಹೆಂಟಾಲಾ. ಗುಡ್ಡದ ತೊರೆಯಿಂದ ಮನೆಗೆ ನೀರು ತರಲಿಕ್ಕಾಗಿ ಪ್ರತಿ ದಿನ ೨ ಕಿಲೋಮೀಟರ್ ದೂರ ಕಲ್ಲುಮುಳ್ಳಿನ ಹಾದಿ ನಡೆಯುವಾಗ ಅವಳಿಗೆ ಒಂದೇ ಯೋಚನೆ, ’ಇದಕ್ಕೇನು ಪರಿಹಾರ?’

ಕಮಲಾಳ ಹಳ್ಳಿ ಮಹುಪದರ್ ಒರಿಸ್ಸಾದ ಮೈಕನ್‍ಗಿರಿ ಜಿಲ್ಲೆಯಲ್ಲಿದೆ. ಯೋಜನಾ ಆಯೋಗದ ಪ್ರಕಾರ ಭಾರತದ ಹತ್ತು ಅತ್ಯಂತ ಬಡ ಜಿಲ್ಲೆಗಳಲ್ಲಿ ಅದೊಂದು. ಅವಳ ಹಳ್ಳಿ ತಲಪಬೇಕಾದರೆ ತಾರ್‍ಕೋಟೆ ಗ್ರಾಮ ಪಂಚಾಯತಿನಿಂದ ೧೨ ಕಿಮೀ ನಡೆದು ಹೋಗಬೇಕು.

ಒರಿಸ್ಸಾದ ಮುಚ್ಚುಕೊಂಡ ನೀರಾವರಿ ಯೋಜನೆಗಾಗಿ ಹಲವಾರು ಕುಟುಂಬಗಳನ್ನು ಅವರ ಪೂರ್ವಿಕರ ಜಮೀನಿನಿಂದ ಒಕ್ಕಲೆಬ್ಬಿಸಲಾಯಿತು. ಅವರೆಲ್ಲರ ಜಮೀನು ಜಲಾಶಯದ ನೀರಿನಲ್ಲಿ ಮುಳುಗಡೆಯಾಯಿತು. ಮೈಕನ್‍ಗಿರಿ ಜಿಲ್ಲೆಯೊಂದರಲ್ಲೇ ೮೦೦ ಕುಟುಂಬಗಳು ಹೀಗೆ ನಿರ್ವಸಿತವಾದವು.

ಕಮಲಾ ಮತ್ತು ಇತರ ಮಹಿಳೆಯರು ಕಾಡಿನ ಹಾದಿಯಲ್ಲಿ ನೀರು ತರಲಿಕ್ಕಾಗಿ ನಡೆದೇ ಹೋಗಬೇಕು. ಕಾಡು ಪ್ರಾಣಿಗಳಿಂದ ಅವರನ್ನು ಕಾಪಾಡಲಿಕ್ಕಾಗಿ ಬಿಲ್ಲುಬಾಣ ಹಿಡಿದ ಗಂಡಸರು ಅವರೊಂದಿಗೇ ನಡೆಯುತ್ತಿದ್ದರು.  ನೀರಿಗಾಗಿ ಅವರು ಕೆಲವು ತಿಂಗಳು ಹೀಗೇ ಪಡುಪಾಟಲು ಪಟ್ಟರು. ಅನಂತರ ಕಮಲಾ ಹಳ್ಳಿಯ ಮಹಿಳೆಯರ ಸಭೆ ಕರೆದಳು. "ಇದಕ್ಕೇನು ಪರಿಹಾರ?" ಎಂಬುದೇ ಚರ್ಚೆಯ ವಿಷಯ. ಅಂತಿಮವಾಗಿ ಅವರೆಲ್ಲ ನಿರ್ಧರಿಸಿದರು: ಬಿದಿರು ಗಳಗಳನ್ನು ಜೋಡಿಸಿ ತೊರೆಯಿಂದ ಹಳ್ಳಿಗೆ ನೀರು ಹಾಯಿಸಬೇಕೆಂದು.

"ಅದು ನನ್ನ ನೀರಿನ ಟ್ಯಾಂಕ್. ಅದರಿಂದ ಏನು ಬೇಕಾದರೂ ಮಾಡಿಕೊಳ್ತೇನೆ. ಅದನ್ನು ಕೇಳಲಿಕ್ಕೆ ನೀವ್ಯಾರು?"

"ನಾನು ಯಾರಂತ ಗೊತ್ತುಂಟಾ? ನನ್ನ ಟ್ಯಾಂಕ್ ಮೊದಲು ಭರ್ತಿ ಆಗಬೇಕು. ಇಲ್ಲಾಂದ್ರೆ ನಿಮ್ಮ ಟ್ಯಾಂಕಿಗೆ ಬೆಂಕಿ ಕೊಡ್ತೇನೆ."

ಇದನ್ನು ಹೇಳಿದವರು ಯಾರು? ದೇಶದ ರಾಜಧಾನಿ ನವದೆಹಲಿಯ ಪ್ರಧಾನ ಪ್ರದೇಶವಾದ ವಸಂತಕುಂಜದ ನಿವಾಸಿಗಳು.

ಅವರು ಈ ಮಾತುಗಳನ್ನು ಹೇಳಿದ್ದು ಯಾರಿಗೆ? "ನಿಮ್ಮ ಟ್ಯಾಂಕಿನಿಂದ ನೀರು ಉಕ್ಕಿ ಹರಿದು ಪೋಲಾಗುತ್ತಿದೆ. ನಿಮ್ಮ ನೀರಿನ ಪಂಪ್ ಬಂದ್ ಮಾಡಿ" ಎಂದು ವಿನಂತಿಸಿದ ಶಾಲಾಮಕ್ಕಳಿಗೆ.

ಇದೆಲ್ಲದರ ಹಿನ್ನೆಲೆ ಏನು? ವಸಂತಕುಂಜ ಪ್ರದೇಶದ ನಿವಾಸಿಗಳಿಗೆ ಹಲವು ವರುಷಗಳಿಂದ ನೀರಿನ ಪರದಾಟ ತಪ್ಪಿಲ್ಲ. ಆದರೂ ಹಲವಾರು ಮನೆಗಳವರಿಗೆ ನೀರೆಂದರೆ ಅಸಡ್ಡೆ. ಉದಾಹರಣೆಗೆ ಪಂಪ್ ಚಾಲೂ ಮಾಡಿದರೆ ಓವರ್‍ಹೆಡ್ ಟ್ಯಾಂಕ್ ತುಂಬಿದೊಡನೆ ನಿಲ್ಲಿಸುತ್ತಿರಲಿಲ್ಲ. ಕುಡಿಯುವ ನೀರು ಗಂಟೆಗಟ್ಟಲೆ ಉಕ್ಕಿ ಹರಿದು ಪೋಲಾಗುತ್ತಿತ್ತು. ಎಪ್ರಿಲ್ ೨೦೦೯ರಲ್ಲಿ ಅಲ್ಲಿನ ಕೆಲವು ಶಾಲಾಮಕ್ಕಳು ಈ ಸಮಸ್ಯೆ ಕೈಗೆತ್ತಿಕೊಂಡರು. ೯೦೦ ಮನೆಗಳಿರುವ ತಮ್ಮ ಕಾಲೊನಿಯಲ್ಲಿ ಜಲಜಾಗೃತಿ ಅಭಿಯಾನ ನಡೆಸಲು ನಿರ್ಧರಿಸಿದರು.  

ಮರುದಿನದಿಂದ ಪ್ರತಿ ದಿನ ಬೆಳಗ್ಗೆ ಕಾಲೊನಿಯಲ್ಲಿ ಈ ಶಾಲಾಮಕ್ಕಳ ಸಣ್ಣ ತಂಡಗಳ ದಂಡಯಾತ್ರೆ ಆರಂಭ. ಅದಕ್ಕಾಗಿ ದಿನದಿನವೂ ಆ ಕಾಲೊನಿಯ ಒಂದು ರಸ್ತೆಯ ಆಯ್ಕೆ. ಅಲ್ಲಿ ನಡೆದು ಹೋಗುವಾಗ, ಯಾವುದಾದರೂ ಮನೆಯ ಓವರ್‍ಹೆಡ್ ಟ್ಯಾಂಕಿನಿಂದ ನೀರು ಉಕ್ಕಿ ಹರಿಯುತ್ತಿದ್ದರೆ, ಆ ಮನೆಯ ಬಾಗಿಲು ತಟ್ಟುತ್ತಿದ್ದರು. ಮನೆಯವರೊಂದಿಗೆ "ನೀರಿನ ಕೊರತೆ ನಮ್ಮ ಕಾಲೊನಿಯ ಸಮಸ್ಯೆ. ನಿಮ್ಮ ಟ್ಯಾಂಕಿನಿಂದ ನೀರು ಪೋಲಾಗುತ್ತಿದೆ. ನಿಮ್ಮ ಪಂಪ್ ನಿಲ್ಲಿಸಿ" ಎಂದು ವಿನಂತಿಸುತ್ತಿದ್ದರು.

ತಮ್ಮ ಸಾಹಸದ ಬಗ್ಗೆ ಮದರ್ಸ್ ಇಂಟರ್‍ನ್ಯಾಷನಲ್ ಶಾಲೆಯ ೭ನೇ ತರಗತಿಯ ವಿದ್ಯಾರ್ಥಿ ಸಿದ್ಧಾರ್ಥ ವಾರ್‍ಷ್ನೇಯ ಹೇಳುತ್ತಾನೆ, "ಅವರಲ್ಲಿ ಕೆಲವರಿಗೆ ತಮ್ಮ ತಪ್ಪು ತಿಳಿಯುತ್ತಿತ್ತು. ಅವರು ತಕ್ಷಣವೇ ಪಂಪ್ ನಿಲ್ಲಿಸುತ್ತಿದ್ದರು. ಆದರೆ ಹಲವರು ನಮ್ಮನ್ನು ಗದರಿಸಿ, ರಪ್ಪನೆ ಬಾಗಿಲು ಮುಚ್ಚುತ್ತಿದ್ದರು."

ಮಂಗಳೂರು ಮಹಾನಗರಪಾಲಿಕೆಯ ೨೦೦೯-೧೦ರ ಬಜೆಟನ್ನು ೨೮ ಜೂನ್ ೨೦೦೯ರಂದು ಮಂಡಿಸಲಾಯಿತು. ಇದರಲ್ಲಿ ಮಂಗಳೂರಿನ ನೀರು ಬಳಕೆದಾರರಿಗೆ ವಿಧಿಸುವ ನೀರಿನ ಶುಲ್ಕದಿಂದ ಸಂಗ್ರಹವಾಗುವ ಆದಾಯ ರೂಪಾಯಿ ೨೮.೫ ಕೋಟಿ ಎಂದು ಅಂದಾಜಿಸಲಾಗಿದೆ. (ಈ ಸಾಲಿನ ಪಾಲಿಕೆಯ ಒಟ್ಟು ಆದಾಯ ರೂ.೧೭೫.೩೮ ಕೋಟಿ ಮತ್ತು ಒಟ್ಟು ವೆಚ್ಚ ರೂ. ೧೭೩.೯೦ ಕೋಟಿ)

ನೀರಿನ ಶುಲ್ಕದ ಬಗ್ಗೆ ಮಾಹಿತಿ ಸಂಗ್ರಹಿಸುತ್ತಾ ಹೋದಂತೆ ಅದರ ವಿವಿಧ ಮುಖಗಳು ತೆರೆದುಕೊಳ್ಳುತ್ತವೆ. ಮಂಗಳೂರು ಮಹಾನಗರಪಾಲಿಕೆ ಪ್ರದೇಶದಲ್ಲಿ ಸುಮಾರು ೫೪,೦೦೦ ನೀರಿನ ಮೀಟರ್‍ಗಳನ್ನು ಅಳವಡಿಸಲಾಗಿದೆ. ಈ ಎಲ್ಲ ನೀರಿನ ಬಳಕೆದಾರರಿಗೆ ಜೂನ್ ೨೦೦೮ರ ವರೆಗೆ ಅರ್ಧ ವಾರ್ಷಿಕ (ಆರು ತಿಂಗಳಿಗೊಮ್ಮೆ) ನೀರಿನ ಬಿಲ್ ನೀಡಲಾಗುತ್ತಿತ್ತು.

ಅಲ್ಲಿಂದೀಚೆಗೆ ಬಳಕೆದಾರರಿಗೆ ಪ್ರತಿ ತಿಂಗಳೂ ನೀರಿನ ಬಿಲ್ ನೀಡಲಾಗುತ್ತಿದೆ. (ಅವನ್ನು ಪಾವತಿಸಲು ಎರಡು ಸಾರ್ವಜನಿಕ ರಂಗದ ಬ್ಯಾಂಕಿನ ಬ್ರಾಂಚ್‍ಗಳಲ್ಲಿ ವ್ಯವಸ್ಥೆ ಮಾಡಲಾಗಿದೆ. ಆದರೆ ಎಲ್ಲ ಬ್ರಾಂಚ್‍ಗಳಲ್ಲಿ ಎಲ್ಲ ವ್ಯವಹಾರದ ದಿನಗಳಲ್ಲಿ ನೀರಿನ ಬಿಲ್ ಪಾವತಿ ಸ್ವೀಕರಿಸುತ್ತಿಲ್ಲ.) ಮುಂಚೆ ವರುಷಕ್ಕೆ ಎರಡು ಸಲ ಮಾತ್ರ ನೀರಿನ ಬಿಲ್ ಕಟ್ಟಬೇಕಾಗಿದ್ದ ನಾಗರಿಕರು ಈಗ ಬಿಲ್ ಪಾವತಿಸಲಿಕ್ಕಾಗಿ ಪ್ರತಿ ತಿಂಗಳೂ ಬ್ಯಾಂಕಿಗೆ ಹೋಗಬೇಕಾಗಿದೆ. ಇದರಿಂದಾಗಿ, ನೀರಿನ ಬಿಲ್ ಪಾವತಿಸಲು ಮಾಡಬೇಕಾದ (ಬಸ್, ರಿಕ್ಷಾ ಇತ್ಯಾದಿ) ವೆಚ್ಚದಲ್ಲಿ ಆರು ಪಟ್ಟು ಹೆಚ್ಚಳ. ಅದಲ್ಲದೆ, ವರುಷಕ್ಕೆ ೧೨ ಬಾರಿ ಉದ್ದ ಕ್ಯೂನಲ್ಲಿ ಕಾದು ನಿಲ್ಲುವ ಕಷ್ಟ.

ಹಾಗಾದರೆ ಈ ಹೊಸ ವ್ಯವಸ್ಥೆಯಿಂದ ಯಾರಿಗೆ ಲಾಭ? ಎಂಬ ಪ್ರಶ್ನೆಗೆ ಮಹಾನಗರಪಾಲಿಕೆಯ ಅಧಿಕಾರಿಗಳು ಉತ್ತರ ನೀಡುತ್ತಿಲ್ಲ. ಈ ನಡುವೆ, ನೀರಿನ ಬಿಲ್‍ಗಳನ್ನು (ಅಂಗೈಯಗಲದ ಸಾಧನದಿಂದ) ಮನೆಮನೆಗೆ ಹೋಗಿ ಕೊಡುವ ಕೆಲಸವನ್ನು ಹೊರಗುತ್ತಿಗೆ ನೀಡಲಾಗಿದೆ. ಒಂದು ನೀರಿನ ಮೀಟರ್ ರೀಡಿಂಗ್ ಮಾಡಿ ಬಿಲ್ ಕೊಟ್ಟದ್ದಕ್ಕೆ ಪಾಲಿಕೆ ಪಾವತಿಸುವ ಸೇವಾಶುಲ್ಕ ರೂಪಾಯಿ ೬.೭೦  ಎಂಬ ಮಾಹಿತಿ ಸಿಕ್ಕಿದೆ.

ಹೈದರಾಬಾದಿಗೆ ಹೋಗಿದ್ದಾಗ, ಮಹಾನಗರದ ಕೇಂದ್ರ ಭಾಗದಲ್ಲಿದ್ದ ಹೋಟೆಲಿನಲ್ಲಿ ತಂಗಿದ್ದೆ. ಅಲ್ಲಿಯ ಬಾತ್‍ರೂಂನ ಬೇಸಿನ್‍ನ ಮೇಲ್ಗಡೆ ಗೋಡೆಯಲ್ಲಿ ದೊಡ್ಡ ಕನ್ನಡಿ. ಅದರ ಪಕ್ಕದಲ್ಲಿ ಕಣ್ಣಿಗೆ ರಾಚುವಂತೆ ಒಂದು ಭಿತ್ತಿಪತ್ರ.

ಆ ಭಿತ್ತಿಪತ್ರದಲ್ಲಿದ್ದ ಮಾಹಿತಿ: "ನೀರು ಬೆಲೆ ಕಟ್ಟಲಾಗದ ಸಂಪತ್ತು. ಅದನ್ನು ಉಳಿಸೋಣ. ದಯವಿಟ್ಟು ಸಹಕರಿಸಿ. ಅದಕ್ಕಾಗಿ ನೀವೇನು ಮಾಡಬಹುದು?
೧)  ಹಲ್ಲುಜ್ಜುವಾಗ: ಮಗ್‍ನಲ್ಲಿ ನೀರು ತುಂಬಿಸಿಕೊಂಡು ಹಲ್ಲುಜ್ಜಿ. ಅರ್ಧ ಲೀಟರ್ ನೀರು ಸಾಕು. ಇದರ ಬದಲಾಗಿ ನಳ (ಟ್ಯಾಪ್) ತೆರೆದಿಟ್ಟರೆ, ೫ ನಿಮಿಷಗಳಲ್ಲಿ ೪೫ ಲೀಟರ್ ನೀರು ಹಾಳು.
೨)  ಮುಖ ಮತ್ತು ಕೈ ತೊಳೆಯುವಾಗ: ಬಕೆಟಿನಲ್ಲಿ ನೀರು ತುಂಬಿಸಿ, ಆ ನೀರನ್ನು ಮಗ್‍ನಿಂದ ಎತ್ತಿಕೊಂಡು ತೊಳೆಯಿರಿ. ಅರ್ಧ ಲೀಟರ್ ನೀರು ಸಾಕಾಗುತ್ತದೆ. ಇದರ ಬದಲಾಗಿ, ನಳ ತೆರೆದಿಟ್ಟರೆ, ಎರಡೇ ನಿಮಿಷಗಳಲ್ಲಿ ೧೮ ಲೀಟರ್ ನೀರು ಖಾಲಿ.
೩) ಗಡ್ಡ ತೆಗೆಯುವಾಗ:  ಮಗ್‍ನಲ್ಲಿ ನೀರು ತುಂಬಿಟ್ಟು ಬಳಸಿದರೆ, ಕಾಲು ಅಥವಾ ಅರ್ಧ ಲೀಟರ್ ನೀರು ಸಾಕು. ಇದರ ಬದಲಾಗಿ, ನಳ ತೆರೆದಿಟ್ಟರೆ, ೫ ನಿಮಿಷಗಳಲ್ಲಿ ೪೫ ಲೀ.ನೀರು ಹಾಳು.
೪) ಷವರ್‍ನಿಂದ ಸ್ನಾನ ಮಾಡುವಾಗ: ಮೈ ಒದ್ದೆ ಮಾಡಿಕೊಂಡು, ನಳದ ನೀರು ನಿಲ್ಲಿಸಿ, ಸೋಪು ಹಚ್ಚಿಕೊಂಡು, ಅನಂತರ ನಳದ ನೀರಿನಿಂದ ಮೈ ತೊಳೆದುಕೊಂಡರೆ ೨೦ ಲೀಟರ್ ನೀರು ಸಾಕು. ಇದರ ಬದಲಾಗಿ, ಷವರ್‍ನಿಂದ ಅಷ್ಟು ಹೊತ್ತೂ ನೀರು ಸುರಿಯುತ್ತಿದ್ದರೆ, ೧೦ ನಿಮಿಷಗಳಲ್ಲಿ ೧೦೦ ಲೀಟರ್ ನೀರು ಖಾಲಿ.
೫) ಟಬ್‍ನಲ್ಲಿ ಸ್ನಾನ: ಇದರ ಬದಲಾಗಿ ಷವರ್‍ನಿಂದ ಸ್ನಾನ ಮಾಡುವಿರಾ? ಯಾಕೆಂದರೆ, ಒಮ್ಮೆ ಟಬ್ ಭರ್ತಿ ಮಾಡಲು ೧೧೦ ಲೀಟರ್ ನೀರು ಬೇಕು. ಎರಡು ಸಲ ಭರ್ತಿ ಮಾಡಬೇಕಾದರೆ ೨೨೦ ಲೀಟರ್ ನೀರು ಅಗತ್ಯ.
೬) ನೀರು ಲೀಕ್ ಆಗುತ್ತಿದ್ದರೆ....... ತಕ್ಷಣ ನಮಗೆ ತಿಳಿಸಿ. ಅದನ್ನು ಹಾಗೇ ಬಿಟ್ಟರೆ ಎಂತಹ ನಷ್ಟ ಗೊತ್ತೇ? ಹನಿಹನಿ ನೀರು ನಿಧಾನವಾಗಿ ಬೀಳುತ್ತಿದ್ದರೆ, ಒಂದು ದಿನಕ್ಕೆ ೪೦೦ ಲೀಟರ್ ನೀರು ಹಾಳು, ಅದೇ ಹನಿಹನಿ ನೀರು ವೇಗವಾಗಿ ಬೀಳುತ್ತಿದ್ದರೆ, ದಿನಕ್ಕೆ ೩,೦೦೦ ಲೀಟರ್ ನೀರು ಹಾಳು."

ಚಿಕ್ಕಮಗಳೂರಿನಿಂದ ಕೆ.ಬಿದರೆಗೆ ಬಸ್ಸಿನಲ್ಲಿ ಎರಡೂವರೆ ಗಂಟೆಗಳ ಪ್ರಯಾಣ. ಕಡೂರಿನಲ್ಲಿ ಬಸ್ ಬದಲಾಯಿಸಿ ಅಂದು ಕೆ.ಬಿದರೆ ತಲಪಿದಾಗ ಬಿಸಿಲೇರುತ್ತಿತ್ತು. ಹಿರಿಯರಾದ ಟಿ.ಬಿ. ಕುಮಾರಪ್ಪ ನಮಗಾಗಿ ಕಾದಿದ್ದರು.

ಅಲ್ಲಿ ಕುಮಾರಪ್ಪನವರದು ೨೭ ಎಕ್ರೆಗಳ ತೆಂಗಿನ ತೋಟ. ೩೫ ವರುಷಗಳ ಮುನ್ನ ಅವರು ಅಲ್ಲಿ ತೋಟ ಮಾಡಿದಾಗ ಕೊರೆಸಿದ್ದು ಒಂದೇ ಕೊಳವೆಬಾವಿ. ಅದರಲ್ಲಿ ೧೦೦ ಅಡಿ ಆಳದಲ್ಲೇ ಸೊಂಪಾಗಿ ನೀರು ಸಿಕ್ಕಿತ್ತು. ಆದರೆ ೨೦೦೦ ವರುಷದಿಂದೀಚೆಗೆ ಅದರಲ್ಲಿ ನೀರು ಕಡಿಮೆ ಆಗ್ತಾ ಬಂದು, ೨೦೦೪ರಲ್ಲಿ ಕೇವಲ ೨ ಇಂಚು ನೀರು ಸಿಗತೊಡಗಿತು. ಹಾಗಾಗಿ ಆ ಅವಧಿಯಲ್ಲಿ ಇನ್ನೂ ಏಳು ಕೊಳವೆಬಾವಿ ಕೊರೆಸಿದರು. ಇವುಗಳಲ್ಲಿ ನೀರು ಸಿಗಬೇಕಾದರೆ ೨೦೦ ಅಡಿಗೂ ಅಧಿಕ ಆಳ ಕೊರೆಸಬೇಕಾಯಿತು. ಇಷ್ಟು ಆಳಕ್ಕೆ ಕೊರೆಸಿದರೂ ಆ ಏಳು ಕೊಳವೆಬಾವಿಗಳಲ್ಲಿ ಸಿಗುತ್ತಿರೋದು ಕೇವಲ ೧ರಿಂದ ೨ ಇಂಚು ನೀರು. ಇವನ್ನೆಲ್ಲ ಒಂದಕ್ಕೊಂದು ಜೋಡಿಸಿಕೊಂಡು ತೋಟಕ್ಕೆ ನೀರು ಹಾಯಿಸುವ ವ್ಯವಸ್ಠೆ ಮಾಡಿಕೊಂಡಿದ್ದಾರೆ. ಅದೇನಿದ್ದರೂ ಅಂತರ್ಜಲ ಮಟ್ಟ ಕುಸಿದಿರುವಾಗಲೂ ಕುಮಾರಪ್ಪನವರ ೧೭೦೦ ತೆಂಗಿನ ಮರಗಳು ಹಸುರುಹಸುರಾಗಿದ್ದು ವಾರ್ಷಿಕ ೩ ಲಕ್ಷ ತೆಂಗಿನಕಾಯಿಗಳ ಇಳುವರಿ ನೀಡುತ್ತಿವೆ. ಇದಕ್ಕೇನು ಕಾರಣ?

ಕಡೂರಿನಿಂದ ಕುಮಾರಪ್ಪನವರ ತೋಟಕ್ಕೆ ಹೋಗುವಾಗ ಹಾದಿಯುದ್ದಕ್ಕೂ ಅಕ್ಕಪಕ್ಕದ ತೆಂಗಿನ ತೋಟಗಳನ್ನು ಗಮನಿಸುತ್ತಿದ್ದೆ. ಬಹುಪಾಲು ತೋಟಗಳಲ್ಲಿ ತೆಂಗಿನಮರಗಳು ನೀರಿಲ್ಲದೆ ಒಣಗಿದ್ದವು. ನುಸಿಪೀಡೆಯ ಹೊಡೆತವಂತೂ ಎದ್ದು ಕಾಣುತ್ತಿತ್ತು. ಆ ತೋಟಗಳಿಗೆ ಹೋಲಿಸಿದಾಗ ಅವೇ ಸಮಸ್ಯೆಗಳಿದ್ದರೂ ಕುಮಾರಪ್ಪನವರ ತೋಟದ ತೆಂಗಿನಮರಗಳು ಚೆನ್ನಾಗಿದ್ದವು.

ಇದಕ್ಕೆ ಕಾರಣ ಏನು? ಎಂದು ನಾನು ಕೇಳಿದಾಗ ಹಿರಿಯರಾದ ಕುಮಾರಪ್ಪನವರು ನನ್ನನ್ನು ಮನೆಯ ಹಿಂಭಾಗಕ್ಕೆ ಕರೆದೊಯ್ದರು. ಅಲ್ಲಿ ತೆಂಗಿನ ಸಿಪ್ಪೆಯ ಹುಡಿ ತುಂಬಿದ್ದ ಒಂದು ಹೊಂಡ. ಅದರ ಉದ್ದ ೨೦ ಅಡಿ, ಅಗಲ ೧೦ ಅಡಿ. ಅದರ ಮೇಲ್ಭಾಗದ ಪದರವನ್ನೆತ್ತಿ ತೋರಿಸುತ್ತ ಕುಮಾರಪ್ಪ ಹೇಳಿದರು, "ಕಾರಣ ಇಲ್ಲಿದೆ ನೋಡಿ." ಅಲ್ಲಿ ಕಂಡದ್ದು ರಾಶಿರಾಶಿ ಎರೆಹುಳಗಳು.

ನೀರಿಗಾಗಿ ಪರದಾಟದ ಕತೆಗಳನ್ನು ಕೇಳಿದ್ದೇವೆ; ಹೋರಾಟದ ಕತೆಗಳನ್ನೂ ಕೇಳಿದ್ದೇವೆ. ನೀರಿಗಾಗಿ ಕೊಲೆ ಮಾಡಿದ ಕತೆ ಗೊತ್ತೇ?

ಈ ಕರಾಳ ಪ್ರಕರಣ ನಡೆದದ್ದು ಭೋಪಾಲದ ಷಹಜೇಹಾನ್‍ಬಾದ್ ಪ್ರದೇಶದಲ್ಲಿ, ೧೩ ಮೇ ೨೦೦೯ರಂದು. ಅಲ್ಲಿನ ಸಂಜಯನಗರ ಬಸ್ತಿಯಲ್ಲಿ ಕುಡಿಯುವ ನೀರಿಗಾಗಿ ಆರಂಭವಾದ ಜಗಳ ಅವಸಾನವಾದದ್ದು ಚೂರಿ ಇರಿತದಿಂದ ಒಂದೇ ಕುಟುಂಬದ ತಂದೆ-ತಾಯಿ-ಮಗನ ಕೊಲೆಯಲ್ಲಿ! ಕೊಲೆಯಾದವರು ಜೀವನ್ ಮಾಳವೀಯ (೪೩ ವರುಷ), ಅವರ ಪತ್ನಿ ಸವಿತಾ ಮತ್ತು ಮಗ ರಾಜು (೧೯ ವರುಷ). ಕೊಲೆ ಮಾಡಿದವರು ದೀನೂ ಮತ್ತು ಅವನ ಸಂಗಡಿಗರು.

ಸಂಜಯನಗರಕ್ಕೆ ಮುನಿಸಿಪಾಲಿಟಿ ನೀರಿನ ಸರಬರಾಜು ವ್ಯವಸ್ಠೆ ಇಲ್ಲ. ಹಾಗಾಗಿ, ಆ ಕಾಲೋನಿಯ ನಿವಾಸಿಗಳು ರಸ್ತೆಯ ಮಧ್ಯದಲ್ಲೇ ಹೊಂಡ ತೋಡಿ, ಅಲ್ಲಿ ಹಾದು ಹೋಗುವ ನೆಲದಾಳದ ನೀರಿನ ಪೈಪಿಗೆ ಹಾದಿ ಮಾಡಿದ್ದಾರೆ. ಆ ಪೈಪಿಗೆ ಒಂದು ತೂತು ಕೊರೆದು, ಅದರಿಂದ ಕಾನೂನುಬಾಹಿರವಾಗಿ ಅವರು ನೀರು ಸೆಳೆಯುತ್ತಾರೆ. ನೀರು ಬರುತ್ತಿದ್ದುದು ಎರಡು ದಿನಗಳಿಗೊಮ್ಮೆ, ಅದೂ ಕೇವಲ ೧೫ ನಿಮಿಷಗಳ ಅವಧಿಗೆ. ಅಲ್ಲಿನ ಸುಮಾರು ೨೦೦ ನಿವಾಸಿಗಳು ಅಲ್ಪಾವಧಿಯಲ್ಲಿ ಸಿಗುವ ನೀರಿಗಾಗಿ ಪರದಾಡುವ ದೃಶ್ಯ ಕಲ್ಪಿಸಿಕೊಳ್ಳಿರಿ.

ಮಾಳವೀಯ ಕುಟುಂಬದ ಮನೆ ಆ ಹೊಂಡದ ಎದುರಿನಲ್ಲೇ ಇದೆ. ಹಾಗಾಗಿ, ಯಾವಾಗಲೂ ನೀರು ಬಂದಾಗ ನೀರು ಸೆಳೆಯುತ್ತಿದ್ದವರಲ್ಲಿ ಸವಿತಾಳೇ ಮೊದಲಿಗಳು. ಇದರಿಂದಾಗಿ, ಅವಳಿಗೂ ಕೆಲವು ಮನೆಗಳಾಚೆಯ ದೀನೂನ ಪತ್ನಿ ರೇಖಾಳಿಗೂ ಯಾವತ್ತೂ ಜಗಳ.

ಮೇ ೧೩ರ ಮುಂಚಿನ ೩ ದಿನಗಳಲ್ಲಿ ಪೈಪಿನಲ್ಲಿ ನೀರು ಬಂದಿರಲಿಲ್ಲ. ಎಲ್ಲ ನಿವಾಸಿಗಳಲ್ಲೂ ನೀರಿನ ನಿರೀಕ್ಷೆ ,  ನೀರು ಬಾರದ್ದಕ್ಕಾಗಿ ಚಡಪಡಿಕೆ, ಅಸಹನೆ. "ನೀರು ಬಂತೇ?" ಎಂದು ಆಗಾಗ ಹೊಂಡವನ್ನು ಇಣುಕಿ ನೋಡುತ್ತಿದ್ದರು.

ಬಾವಿಗೆ ಮಳೆ ನೀರಿಂಗಿಸಿದರೆ ಪ್ರಯೋಜನ ಇದೆಯೇ? ಈ ಪ್ರಶ್ನೆ ಕೇಳುವವರು ಹಲವರು. ಇದಕ್ಕೆ ಉತ್ತರ ಸಿಗಬೇಕೆಂದಾದರೆ, ಬಾವಿಗೆ ಮಳೆ ನೀರಿಂಗಿಸುವವರ ಬಾವಿಯನ್ನು ಕಣ್ಣಾರೆ ಕಾಣಬೇಕು.

ಅದಕ್ಕಾಗಿಯೇ ಹೋಗಿದ್ದೆ, ೨೯ ಜೂನ್ ೨೦೦೯ರಂದು, ಮಂಗಳೂರಿನ ಖಾಸಗಿ ಪಶುವೈದ್ಯ ಡಾ. ಮನೋಹರ ಉಪಾಧ್ಯರ ಮನೆಗೆ. ಯಾಕೆಂದರೆ, ಅವರು ತನ್ನ ಮನೆಯ ಬಾವಿಗೆ ೨೦೦೧ರಿಂದ ನೇರವಾಗಿ ಮಳೆನೀರು ಇಂಗಿಸುತ್ತಿದ್ದಾರೆ. ಮಂಗಳೂರಿನ ಹೊರವಲಯದ "ಬೆಂದೂರ್ ವೆಲ್" ವೃತ್ತ ಐದು ರಸ್ತೆಗಳು ಕೂಡುವ ವಿಶಾಲ ವೃತ್ತ. ಅಲ್ಲಿಂದ ಬೆಂಗಳೂರಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಒಂದೂವರೆ ಕಿಮೀ ಸಾಗಿದಾಗ, ಮರೋಳಿಯಲ್ಲಿ ಎಡಬದಿಯಲ್ಲಿ ಎರಡು ಫಲಕಗಳು ಕಾಣಿಸಿದವು: (೧) ಸೂರ್ಯನಾರಾಯಣ ದೇವಸ್ಥಾನಕ್ಕೆ ದಾರಿ (೨) ಪಶುಚಿಕಿತ್ಸಾಲಯಕ್ಕೆ ದಾರಿ. ಆ ದಾರಿಯಲ್ಲಿ ೦.೭ ಕಿಮೀ ಸಾಗಿದಾಗ, ದೊಡ್ಡ ಆಲದಮರ ದಾಟಿದೊಡನೆ ಎದುರಿಗಿತ್ತು, ಡಾ. ಉಪಾಧ್ಯರ ಪಶುಚಿಕಿತ್ಸಾಲಯ.

ಅದು ೩೫ ಸೆಂಟ್ಸ್ ವಿಸ್ತಾರದ ಕಂಪೌಂಡ್. ಪಶುಚಿಕಿತ್ಸಾಲಯದ ಹಿಂಬದಿಯಲ್ಲಿ ಅವರ ಮನೆ. ಮನೆಯ ಚಾವಣಿಯ ವಿಸ್ತೀರ್ಣ ೧,೬೦೦ ಚದರಡಿ. ಮನೆ ಕಟ್ಟಿಸುವಾಗ ಬಾವಿ ತೋಡಿಸಿದ್ದರು. ೩೮ ಅಡಿ ಆಳದಲ್ಲಿ ಸಿಕ್ಕಿತ್ತು ಬಂಡೆ. ಅದನ್ನು ಒಡೆಸಿದರೆ ಸುತ್ತಲಿನ ಮನೆಗಳಿಗೆ ಅಪಾಯ ಸಂಭವ. ಹಾಗಾಗಿ ಒಡೆಸಲಿಲ್ಲ. ಆ ಬಾವಿಯಲ್ಲಿ ಬೇಸಗೆ ಕೊನೆಯಲ್ಲಿ ಕೇವಲ ಒಂದಡಿ ನೀರು.

ಬಾವಿ ತೋಡಿಸಿದ, ನಂತರದ ವರುಷದಲ್ಲಿ ಮಳೆ ಹೊಯ್ಯೋದು ಕಂಡಾಗ, ಮನೆಯ ಚಾವಣಿ ನೀರನ್ನೆಲ್ಲ ಬಾವಿಗೆ ಇಳಿಸಿದರೆ ಹೇಗೆ? ಎಂಬ ಯೋಚನೆ. ಸುಮಾರು ರೂಪಾಯಿ ೩,೦೦೦ ವೆಚ್ಚದಲ್ಲಿ ಪೈಪ್‍ಗಳ ಜಾಲ ಜೋಡಣೆ. ಎರಡನೆಯ ಮಹಡಿಯ ಚಾವಣಿಯ ಎರಡೂ ಬದಿಗಳಿಗೆ ದಂಬೆಯಂತೆ ಅರ್ಧ-ಕತ್ತರಿಸಿದ ಪಿವಿಸಿ ಪೈಪ್‍ಗಳ ಜೋಡಣೆ. ಅವೆರಡನ್ನೂ ಜೊತೆಗೂಡಿಸಿ, ಒಂದೇ ಪಿವಿಸಿ ಪೈಪಿನ ಮುಖಾಂತರ ನೆಲಮಟ್ಟಕ್ಕೆ ಇಳಿಸಿದರು. ಅಲ್ಲಿಂದ ನೆಲದಾಳದಲ್ಲಿ ಪೈಪ್ ಹಾಯಿಸಿ, ನೇರವಾಗಿ ಬಾವಿಯೊಳಕ್ಕೆ ಮಳೆನೀರು ಬೀಳುವಂತೆ ಪೈಪ್ ಇರಿಸಿದರು.

ಊರು ರಾಣಿಬೆನ್ನೂರು. ಅಲ್ಲಿಂದ ಸುಮಾರು ೧೦ ಕಿಮೀ ದೂರದ ಒಂದು ಹಳ್ಳಿ. ಅಲ್ಲಿನ ೨೦ ಕಡು ಬಡತನದ ಕುಟುಂಬಗಳಿಗೆ ಸರಕಾರ ತಲಾ ಒಂದೆಕ್ರೆ ಜಮೀನು ನೀಡಿತು. ಅವರೆಲ್ಲ ಪರಿಶಿಷ್ಟ ವರ್ಗದವರು.

ಕೇವಲ ಜಮೀನು ನೀಡಿದರೆ ಅವರ ಉದ್ಧಾರ ಆಗದು ತಾನೇ? ಅದಕ್ಕಾಗಿ ಸಮಗ್ರ ಗ್ರಾಮೀಣ ಅಭಿವೃದ್ಧಿ ಯೋಜನೆಯ ಪ್ರಕಾರ ಹಣ ಸಹಾಯದ ಯೋಜನೆ ರೂಪಿಸಲಾಯಿತು: ಬ್ಯಾಂಕಿನಿಂದ ಶೇಕಡಾ ೪ ವಾರ್ಷಿಕ ಬಡ್ಡಿ ದರದಲ್ಲಿ ಸಾಲ ಮತ್ತು ಗುಂಪಿಗೆ ಸಾಲ ನೀಡುವ ಕಾರಣ ಯೋಜನಾ ವೆಚ್ಚದ ಶೇಕಡಾ ೫೦ ಸಹಾಯಧನ. ಇದು ’ವ್ಯತ್ಯಾಸ ಬಡ್ಡಿ ದರ’ (ಡಿ.ಆರ್. ಐ.) ಸಾಲವಾದ್ದರಿಂದ ಸಾಲಕ್ಕೆ ಚಕ್ರಬಡ್ಡಿ ವಿಧಿಸುವಂತಿಲ್ಲ ಹಾಗೂ ಸೊತ್ತುಗಳ ವಿಮೆಯ ವೆಚ್ಚವನ್ನು ಬ್ಯಾಂಕ್ ಭರಿಸತಕ್ಕದ್ದು.

ಅಲ್ಲೊಂದು ಕೊಳವೆಬಾವಿ ಕೊರೆದು, ಅವರ ಜಮೀನಿಗೆ ನೀರು ಒದಗಿಸುವ ಯೋಜನೆ. ಈ ನೀರಿನಿಂದ ಅವರೆಲ್ಲರೂ ಅರ್ಧ ಎಕ್ರೆ ಜಮೀನಿನಲ್ಲಿ ತರಕಾರಿ ಬೆಳೆಯಬೇಕು. ಉಳಿದರ್ಧ ಜಮೀನಿನಲ್ಲಿ ಮಳೆಗಾಲದಲ್ಲಿ ಜೋಳ ಬೆಳೆಯಬೇಕು. ಯಾವ ರೀತಿಯಲ್ಲಿ ಲೆಕ್ಕಾಚಾರ ಮಾಡಿದರೂ ಈ ಯೋಜನೆ ಯಶಸ್ವಿ ಆಗಬೇಕಿತ್ತು.

ಆದರೆ ಆದದ್ದೇನು? ಕೊಳವೆಬಾವಿಯ ಸಬ್‍ಮರ್‍ಸಿಬಲ್ ಪಂಪಿಗೆ ವಿದ್ಯುತ್ ಸಂಪರ್ಕ ನೀಡಲು (ಆಗಿನ) ಕರ್ನಾಟಕ ವಿದ್ಯುತ್ ನಿಗಮ ತಡ ಮಾಡಿತು. ಅಷ್ಟರಲ್ಲಿ ಕೊಳವೆಬಾವಿಯೊಳಗೆ ಕಿಡಿಗೇಡಿಗಳು ಕಲ್ಲು ಹಾಕಿದರು. ಆ ಕೊಳವೆಬಾವಿ ರಿಪೇರಿ ಮಾಡಲು ಸಾಧ್ಯವಿಲ್ಲದಂತಾಯಿತು. ನೀರು ಹಾಯಿಸಲಿಕ್ಕಾಗಿ ಖರೀದಿಸಿ ತಂದು ಜಮೀನಿನಲ್ಲಿ ಇಡಲಾಗಿದ್ದ ಪೈಪ್‍ಗಳೂ ಕೆಲವೇ ದಿನಗಳಲ್ಲಿ ಕಳವಾದವು. ಅಂತೂ ಆ ಬಡವರಿಗೆ ಕೊಳವೆಬಾವಿ ನೀರು ದಕ್ಕಲಿಲ್ಲ. ಆ ಹಳ್ಳಿಗೆ ನಾನು ಹೋಗಿದ್ದಾಗ, ಆ ಬಡವರ ಮುಖಗಳಲ್ಲಿ ಹತಾಶೆ ಮಡುಗಟ್ಟಿತ್ತು.

ಅವರು ಪುನಃ ಆ ಹಳ್ಳಿಯ ಜಮೀನ್ದಾರರ ಹೊಲಗಳಲ್ಲಿ ಕೂಲಿಗಳಾಗಿ ದುಡಿಯತೊಡಗಿದರು. ಅವರು ಇದೆಲ್ಲ ಬೆಳವಣಿಗೆಗಳ ಮುನ್ನ ಹಾಗೆಯೇ ಬದುಕುತ್ತಿದ್ದರು. ಅವರೆಲ್ಲರೂ ತಮ್ಮ ಕಾಲ ಮೇಲೆ ತಾವು ನಿಂತರೆ, ಹೊಲಗಳಿಗೆ ಕೂಲಿಯಾಳುಗಳು ಸಿಗಲಿಕ್ಕಿಲ್ಲ ಎಂಬ ಕಾರಣಕ್ಕಾಗಿ ಆ ಕೊಳವೆಬಾವಿಯೊಳಗೆ ಕಲ್ಲುಗಳನ್ನು ಹಾಕಲಾಯಿತೇ?

Pages