Agriculture and Rural Development


ಸಸ್ಯಗಳಲ್ಲಿ ನಡೆಯುವ ಪ್ರಧಾನ ಕ್ರಿಯೆ ದ್ಯುತಿಸಂಶ್ಲೇಷಣೆ – ಸೂರ್ಯನ ಬೆಳಕು ಮತ್ತು ಇಂಗಾಲದ ಡೈಆಕ್ಸೈಡ್ ಬಳಸಿ ನಡೆಯುವ ಕ್ರಿಯೆ. ಇದರ ದಕ್ಷತೆಯನ್ನು ಹಲವು ಪಟ್ಟು ಹೆಚ್ಚಿಸಿದರೆ ಏನಾದೀತು? ಗೋಧಿ, ಭತ್ತ ಇತ್ಯಾದಿ ಬೆಳೆಗಳ ಇಳುವರಿ ಶೇಕಡಾ 36ರಿಂದ ಶೇಕಡಾ 60 ಜಾಸ್ತಿಯಾದೀತು.
ಇದೇನು ಕನಸೇ? ಅಲ್ಲಲ್ಲ, ಇದೀಗ ಎರಡು ಹಂತಗಳನ್ನು ದಾಟಿ ಕೊನೆಯ ಹಂತಕ್ಕೆ ಬಂದಿರುವ ಸಂಶೋಧನೆ. (ಇದರ ಫಲಿತಾಂಶಗಳು “ನೇಚರ್” ನಿಯತಕಾಲಿಕದಲ್ಲಿ ಪ್ರಕಟವಾಗಿವೆ.) ಇದು ಯಶಸ್ವಿಯಾದರೆ, ಕೃಷಿಯಲ್ಲಿ ರಾಸಾಯನಿಕ ಗೊಬ್ಬರ ಮತ್ತು ನೀರಿನ ಬಳಕೆಯೂ ಕಡಿಮೆಯಾಗಲಿದೆ.
ಈ ಸಂಶೋಧನೆಯ (ಎರಡನೇ ಹಂತದ) ಅಂಗವಾಗಿ, ೨೦೧೪ರಲ್ಲಿ ಸೈಯಾನೋ ಬ್ಯಾಕ್ಟೀರಿಯಾದಿಂದ ಜೀನುಗಳನ್ನು ವಿಜ್ನಾನಿಗಳು ತಂಬಾಕು ಸಸ್ಯಗಳಿಗೆ ವರ್ಗಾಯಿಸಿದ್ದಾರೆ – ಕೊರ್ನೆಲ್ ವಿಶ್ವವಿದ್ಯಾಲಯ ಮತ್ತು ಬ್ರಿಟನಿನ ರೊಥಂಸ್ಟೆಡ್ ಸಂಶೋಧನಾ ಸಂಸ್ಥೆಯ ವಿಜ್ನಾನಿಗಳು. ಸಸ್ಯಗಳು ಅಧಿಕ ದಕ್ಷತೆಯ ಕಿಣ್ವ (ಎನ್ಜೈಮ್) ಉತ್ಪಾದಿಸಲು ಈ ಜೀನುಗಳು ಉತ್ತೇಜಿಸುತ್ತವೆ. ವಾತಾವರಣದ ಇಂಗಾಲದ ಡೈಆಕ್ಸೈಡನ್ನು ಸಕ್ಕರೆ ಮತ್ತು ಇತರ ಶರ್ಕರಪಿಷ್ಟಗಳಾಗಿ ಸಸ್ಯಗಳು ಪರಿವರ್ತಿಸಲು ಈ ಕಿಣ್ವ ಕಾರಣ.
ಆ ಪರಿವರ್ತನೆಯನ್ನು ಕೆಲವು ಸಸ್ಯಗಳು ಹೆಚ್ಚು ದಕ್ಷತೆಯಿಂದ ಮಾಡುತ್ತವೆ ಎಂಬುದು ಹಲವು ದಶಕಗಳಿಂದ ವಿಜ್ನಾನಿಗಳಿಗೆ ಗೊತ್ತು. ಇಂತಹ ವೇಗವಾಗಿ ಬೆಳೆಯುವ ಸಸ್ಯಗಳಿಗೆ (ಕಾರ್ನ್ ಮತ್ತು ಹಲವು ಕಳೆಗಿಡಗಳು) ವಿಜ್ನಾನಿಗಳಿತ್ತ ಹೆಸರು ಸಿ-4 ಸಸ್ಯಗಳು. ಆದರೆ ಭೂಮಿಯ ಶೇಕಡಾ 75 ಸಸ್ಯಗಳು ಸಿ-3 ವರ್ಗದವು; ಇವು ನಿಧಾನವಾಗಿ ಮತ್ತು ಕಡಿಮೆ ದಕ್ಷತೆಯಿಂದ ದ್ಯುತಿಸಂಶ್ಲೇಷಣೆ ಮಾಡುತ್ತವೆ.
ಈ ನಿಟ್ಟಿನಲ್ಲಿ, ಹಲವಾರು ವರುಷಗಳಿಂದ ವಿಜ್ನಾನಿಗಳು ದೊಡ್ಡ ಪ್ರಯತ್ನದಲ್ಲಿ ಮುಳುಗಿದ್ದಾರೆ: ಗೋಧಿ, ಭತ್ತ, ಬಟಾಟೆ ಸಹಿತ ಕೆಲವು ಮುಖ್ಯ ಸಸ್ಯಗಳನ್ನು ಸಿ-3 ವರ್ಗದಿಂದ ಸಿ-4 ವರ್ಗಕ್ಕೆ ಪರಿವರ್ತಿಸುವ ಪ್ರಯತ್ನದಲ್ಲಿ. ಇತ್ತೀಚೆಗೆ ಅತಿ ನಿಖರವಾದ ಜೀನ್ ಬದಲಾವಣೆ ತಂತ್ರಜ್ನಾನ ಬಳಸಿ “ಸಿ-4 ಭತ್ತ ಯೋಜನೆ”ಯಲ್ಲಿ ಮುನ್ನಡೆಯಲು ಸಾಧ್ಯವಾಗಿದೆ.


ಸಕ್ಕರೆ ಕಾಹಿಲೆ ಬಾಧಿತರಿಗೊಂದು ಸಿಹಿ ಸುದ್ದಿ: ಹಸುರು (ಅಂದರೆ ಹುರಿಯದ) ಕಾಫಿ ಬೀಜಗಳಿಂದ ತೆಗೆಯಲಾದ ಸಾರವು ರಕ್ತದ ಸಕ್ಕರೆಯಂಶ ನಿಯಂತ್ರಿಸುವ ಮೂಲಕ ಸಕ್ಕರೆ ಕಾಯಿಲೆ ಹತೋಟಿ ಮಾಡುತ್ತದೆಯೆಂದು ಅಧ್ಯಯನದಿಂದ ತಿಳಿದು ಬಂದಿದೆ.
ಅಮೇರಿಕಾದ ಯುಎಸ್ಎ ದೇಶದ ಪೆನ್ಸಿಲವೇನಿಯಾದ ಸ್ಕ್ರಾನ್ಟನ್ ವಿಶ್ವವಿದ್ಯಾಲಯದ ಸಂಶೋಧಕ ಜೋ ವಿನ್ಸನ್ ನಡೆಸಿದ ಅಧ್ಯಯನದಿಂದ ತಿಳಿದ ವಿಷಯ ಹೀಗಿದೆ: ಹಸುರುಕಾಫಿ ಬೀಜಗಳಲ್ಲಿರುವ ಕ್ಲೊರೊಜೆನಿಕ್ ಆಮ್ಲವು ರಕ್ತದಲ್ಲಿ ಹೆಚ್ಚಾದ ಸಕ್ಕರೆಯಂಶ ಮತ್ತು ದೇಹತೂಕವನ್ನು ಕಡಿಮೆ ಮಾಡುತ್ತದೆ.
ಕ್ಲೊರೊಜೆನಿಕ್ ಆಮ್ಲಗಳು ಸೇಬು, ಚೆರ್ರಿ, ಪ್ಲಮ್ ಇತ್ಯಾದಿ ಹಣ್ಣುಗಳಲ್ಲಿ ಮತ್ತು ತರಕಾರಿಗಳಲ್ಲಿರುವ ಅಂಶ. ಕಾಫಿ ಬೀಜಗಳು ಕ್ಲೊರೊಜೆನಿಕ್ ಆಮ್ಲಗಳ ಪ್ರಧಾನ ಆಕರ. ಹಸುರುಕಾಫಿ ಬೀಜಗಳಲ್ಲಿ ಇದರ ಪರಿಮಾಣ ಜಾಸ್ತಿ. ಆದರೆ ಅಧಿಕ ಉಷ್ಣತೆಯಲ್ಲಿ ಕಾಫಿಬೀಜಗಳನ್ನು ಹುರಿಯುವಾಗ (ಕಾಫಿಹುಡಿ ಮಾಡಲಿಕ್ಕಾಗಿ) ಅದರಲ್ಲಿರುವ ಈ ಆಮ್ಲದಂಶ ಕಡಿಮೆಯಾಗುತ್ತದೆ.
ಆದ್ದರಿಂದ, ಸಕ್ಕರೆ ಕಾಯಿಲೆ ನಿಯಂತ್ರಿಸಲಿಕ್ಕಾಗಿ ಹಸುರು ಕಾಫಿಬೀಜಗಳ ಸಾರ ಸೇವಿಸುವುದು ಪರಿಣಾಮಕಾರಿ. ಹಲವರು ಜನರ ಮೇಲೆ ನಡೆಸಿದ ಇನ್ನೊಂದು ಅಧ್ಯಯನದ ಫಲಿತಾಂಶ ಹೀಗಿದೆ ಎನ್ನುತ್ತಾರೆ ವಿನ್ಸನ್, “ಪ್ರತಿದಿನ ಎರಡು ಕಪ್ ಕಾಫಿ ಕುಡಿಯುವವರಿಗೆ ಹೋಲಿಸಿದಾಗ, ಏಳು ಕಪ್ ಕಾಫಿ ಕುಡಿಯುವವರಿಗೆ ಸಕ್ಕರೆ ಕಾಯಿಲೆ ಬಾಧಿಸುವ ಅಪಾಯ ಶೇಕಡಾ ೫೦ರಷ್ಟು ಕಡಿಮೆ”.
ಕ್ಲೊರೊಜೆನಿಕ್ ಆಮ್ಲಗಳು ಸಕ್ಕರೆಕಾಯಿಲೆ ಬಾಧಿತರಲ್ಲಿ ಮತ್ತು ಆ ಕಾಯಿಲೆ ಇಲ್ಲದವರಲ್ಲಿ ಒಂದೇ ರೀತಿಯ ಪರಿಣಾಮ ಉಂಟು ಮಾಡುತ್ತವೆ. ಇದರ ಸಾರ ಸೇವಿಸಿದ ಅಧಿಕ ದೇಹತೂಕದ ವ್ಯಕ್ತಿಗಳ ದೇಹತೂಕ ೨೨ ವಾರಗಳಲ್ಲಿ ಶೇಕಡಾ ೧೦ ಕಡಿಮೆಯಾಯಿತು. ಈ ಅಧ್ಯಯನದಲ್ಲಿ ಭಾಗವಹಿಸಿದ ಸಹಜ (ನಾರ್ಮಲ್) ರಕ್ತದ ಸಕ್ಕರೆಯಂಶ ಹೊಂದಿದ ಮಹಿಳೆಯರು ಮತ್ತು ಪುರುಷರ ಸಂಖ್ಯೆ ೫೬.


ಜಗತ್ತಿನಲ್ಲೆಡೆ ಕೃಷಿ ಮತ್ತು ವಿಜ್ನಾನ ರಂಗದಲ್ಲಿ ಅಲ್ಲೋಲಕಲ್ಲೋಲವಾದದ್ದು ಜೂನ್ ೨೦೧೩ರಲ್ಲಿ. ಅದಕ್ಕೆ ಕಾರಣ: ಅಮೇರಿಕಾದ ಯುಎಸ್ ದೇಶದ ಒರೆಗಾಂವ್ ಪ್ರಾಂತ್ಯದ ಹೊಲವೊಂದರಲ್ಲಿ ಬೆಳೆಯುತ್ತಿದ್ದ ಗೋಧಿಯ ಜೈವಿಕ ಮಾರ್ಪಾಡಾದ (ಜೈಮಾ) ಸಸಿಗಳು ಪತ್ತೆಯಾದದ್ದು.
ಆ ಕಳೆನಾಶಕ - ಸಹನೀಯವಾದ (ಹರ್ಬಿಸೈಡ್ – ಟಾಲರೆಂಟ್) ಜೈಮಾ ಗೋಧಿ ತಳಿಯನ್ನು ಅಭಿವೃದ್ಧಿ ಪಡಿಸಿದ್ದು ಮೊನ್ಸಾಂಟೊ ಕಂಪೆನಿ. (ಅದು ಜಗತ್ತಿನ ಅತಿ ದೊಡ್ಡ ಕೃಷಿಜೈವಿಕ ತಂತ್ರಜ್ನಾನ ಕಂಪೆನಿ) ಆದರೆ, ಆ ತಳಿಗೆ ಯುಎಸ್ಡಿಎ (ಯುಎಸ್ ದೇಶದ ಕೃಷಿ ಇಲಾಖೆ)ಯ ಪರವಾನಗಿ ಇರಲಿಲ್ಲ. ಆ ತಳಿಯ ಕ್ಷೇತ್ರಪ್ರಯೋಗ ನಿಲ್ಲಿಸಿ ಒಂಭತ್ತು ವರುಷಗಳ ಬಳಿಕ ಅಲ್ಲಿಯ ರೈತನೊಬ್ಬನ ಹೊಲದಲ್ಲಿ ಅದು ಅಚಾನಕ್ ಕಂಡುಬಂದದ್ದು ಜಗತ್ತಿನ ಕೃಷಿ ಮತ್ತು ವಿಜ್ನಾನ ರಂಗವನ್ನು ತಲ್ಲಣಗೊಳಿಸಿದೆ.
ಜೈಮಾ ಗೋಧಿಯನ್ನು ಜಗತ್ತಿನಲ್ಲಿ ಎಲ್ಲಿಯೂ ವಾಣಿಜ್ಯ ಉದ್ದೇಶಕ್ಕಾಗಿ ಬಿಡುಗಡೆ ಮಾಡಿಲ್ಲ. ಆದ್ದರಿಂದಲೇ ಈ ಪ್ರಕರಣಕ್ಕೆ ತೀವ್ರ ಪ್ರತಿಕ್ರಿಯೆ ಕಂಡುಬಂದಿದೆ: ಜಪಾನ್ ಮತ್ತು ದಕ್ಷಿಣ ಕೊರಿಯಾ ದೇಶಗಳು ಗೋಧಿ ಆಮದನ್ನು ತಕ್ಷಣವೇ ತಡೆಹಿಡಿದವು. ಯುಎಸ್ ದೇಶದ ಮೃದು ಬಿಳಿ ಗೋಧಿಯನ್ನು ಪರೀಕ್ಷಿಸಿದ ನಂತರವೇ ಆಮದು ಮಾಡಿಕೊಳ್ಳ ಬೇಕೆಂದು ಯುರೋಪಿಯನ್ ಯೂನಿಯನ್ ತನ್ನ ಸದಸ್ಯ ದೇಶಗಳಿಗೆ ಸಲಹೆ ನೀಡಿತು.
ಯುಎಸ್ ದೇಶದ ಈ ಪ್ರಕರಣ ಜೈಮಾ ಬೆಳೆಗಳ ಸುರಕ್ಷಿತತೆ ಬಗ್ಗೆ ಇಡೀ ಜಗತ್ತಿನಲ್ಲಿ ಇನ್ನೊಮ್ಮೆ ವಾದವಿವಾದಕ್ಕೆ ಕಾರಣವಾಯಿತು. ಯಾಕೆಂದರೆ, ಬೇರೆಬೇರೆ ದೇಶಗಳಲ್ಲಿ ಪರವಾನಗಿಯಿಲ್ಲದ ಜೈಮಾ ಬೆಳೆಗಳು ಪತ್ತೆಯಾಗುತ್ತಲೇ ಇವೆ. ಭಾರತದಲ್ಲಿಯೂ ಇದೇ ಕತೆ. ಇಲ್ಲಿನ ಮೂರು ರಾಜ್ಯಗಳಲ್ಲಿ, ಮೊನ್ಸಾಂಟೊದ “ರೌಂಡಪ್ ರೆಡಿ” ಗುಣದ ಜೈಮಾ ಹತ್ತಿಬೀಜಗಳನ್ನು ಪರವಾನಗಿ ಇಲ್ಲದಿದ್ದರೂ ಮಾರಲಾಗುತ್ತಿದೆ! ಭಾರತದ ಜಿಇಎಸಿ (ಜೆನೆಟಿಕ್ ಎಂಜಿನಿಯರಿಂಗ್ ಎಪ್ರೈಸಲ್ ಕಮಿಟಿ) ಹಲ್ಲಿಲ್ಲದ ಹುಲಿಯಂತಾಗಿದೆ.


ಜಗತ್ತಿನ ಅತಿ ದೊಡ್ಡ ಮೂರು ಬಿಯರ್ ಉತ್ಪಾದಕ ಕಂಪೆನಿಗಳಲ್ಲಿ ಒಂದಾದ ಜಪಾನಿನ ಸಪ್ಪೊರೊ ಕಂಪೆನಿ ಲಾಭ ಬಾಚಿಕೊಳ್ಳುತ್ತಿದೆ. ಅದರಲ್ಲೇನು ವಿಶೇಷ ಅಂತೀರಾ?
ಹಾಗೆ ಲಾಭ ಮಾಡಿಕೊಳ್ಳಲು ಅದು ಬಳಸುತ್ತಿರುವುದು ಭಾರತದ ಬಾರ್ಲಿಯನ್ನು – ಉತ್ತರಪ್ರದೇಶದ ಪೂರ್ವ ಗಡಿಯಲ್ಲಿರುವ ಬಲ್ಲಿಯಾ ಜಿಲ್ಲೆಯ ಸಣ್ಣರೈತರು ಸುಮಾರು ಒಂದು ನೂರು ವರುಷಗಳಿಂದ ಬೆಳೆಸಿ, ಸುಧಾರಿಸಿ, ಕಾಪಾಡಿದ ಬಾರ್ಲಿಯನ್ನು. ಆದರೆ ಒಂದು ಶತಮಾನಕ್ಕಿಂತ ಅಧಿಕ ಅವಧಿಯಲ್ಲಿ ಆ ಬಾರ್ಲಿ ತಳಿಯನ್ನು ಜೋಪಾನವಾಗಿ ರಕ್ಷಿಸಿದ ಸಣ್ಣರೈತರಿಗೆ ಇದಕ್ಕಾಗಿ ಕಿಂಚಿತ್ ರಾಯಧನ ಪಾವತಿಯಾಗಿಲ್ಲ. ಅದು ಹಾಗಿರಲಿ, ಇದೀಗ ಆ ಬಾರ್ಲಿ ತಳಿಯು ಸಪ್ಪೊರೊ ಕಂಪೆನಿಯ ಬೌದ್ಧಿಕ ಸೊತ್ತಾಗಿದೆ!
ಮಾದಕ ಪೇಯ ಬಿಯರಿನ ಮಾಲ್ಟಿಂಗ್ ಗುಣಮಟ್ಟವನ್ನು ಹೆಚ್ಚಿಸಿ, ಅದರ “ಬಳಸಲು ಯೋಗ್ಯ ಅವಧಿ” (ಶೆಲ್ಫ್ ಲೈಫ್)ಯನ್ನು ಹೆಚ್ಚಿಸುವ ಜೀನಿಗೆ ಸಪ್ಪೊರೋ ಕಂಪೆನಿಯು ಪೇಟೆಂಟ್ ಪಡೆದುಕೊಂಡಿದೆ. ಜಾಗತಿಕ ದೈತ್ಯ ಧಾನ್ಯ ಕಂಪೆನಿ ಕಾರ್ಗಿಲ್ ಮತ್ತು ಕೆನಡಾದ ಸಾಸ್ಕತಚೆವಾನ್ ವಿಶ್ವವಿದ್ಯಾಲಯದ ಜೊತೆಯಲ್ಲಿ ಸಪ್ಪೊರೊ ಕಂಪೆನಿ ಕೆಲಸ ಮಾಡುತ್ತಿದೆಯೆಂದು ತಿಳಿದು ಬಂದಿದೆ – ಆ ಜೀನ್ ಒಳಗೊಂಡ ಖಾಸಗಿ ಮಾಲೀಕತ್ವದ ಬಾರ್ಲಿ ತಳಿಗಳನ್ನು ಅಭಿವೃದ್ಧಿ ಪಡಿಸಲಿಕ್ಕಾಗಿ.
ಪೊಲಾರ್ ಸ್ಟಾರ್ ಎಂಬ ಹೆಸರಿನ ಆ ತಳಿಯನ್ನು ಸಪ್ಪೊರೊ ಕಂಪೆನಿಯ ಬಿಯರ್ ಉತ್ಪಾದಕ ಘಟಕಗಳಿಗಾಗಿ ಕೆನಡಾದಲ್ಲಿ ಬೆಳೆಯಲಾಗುತ್ತಿದೆ. ಬೃಹತ್ ಕಂಪೆನಿಗಳು ಜೈವಿಕ ಸಂಪನ್ಮೂಲಗಳ ಅನ್ಯಾಯದ ಬಳಕೆ ಮಾಡುವುದದ ಬಗ್ಗೆ ಸಂಶೋಧನೆ ನಡೆಸುವ ಎಡ್ವರ್ಡ್ ಹ್ಯಾಮ್ಮೊಂಡ್ ಎಂಬ ಪರಿಣತರು ಈ ಪ್ರಕರಣದ ಬಗ್ಗೆ ತಿಳಿಸಿದ ಅಭಿಪ್ರಾಯ ಹೀಗಿದೆ: ಬಿಯರ್ ಉತ್ಪಾದಕರ ಅಚ್ಚುಮೆಚ್ಚಿನ ಈ ಜೀನ್ ಬೆಳಕಿಗೆ ಬಂದದ್ದು ಉತ್ತರಪ್ರದೇಶದ ಬಲ್ಲಿಯಾ ಜಿಲ್ಲೆಯ ರೈತರ ಮತ್ತು ಸರಕಾರಿ ಸಂಸ್ಥೆಗಳ ವಿಜ್ನಾನಿಗಳ ಪ್ರಯತ್ನದಿಂದಾಗಿ.

"ಈ ವರುಷ ನಮ್ಮ ದೇಶದ ೧೬೧ ಜಿಲ್ಲೆಗಳಲ್ಲಿ ಬರಗಾಲ ಸಂಭವ. ಬೀಜ ಬಿತ್ತನೆ ಆಗಬೇಕಿದ್ದ ಶೇಕಡಾ ೨೦ ಪ್ರದೇಶದಲ್ಲಿ ಬಿತ್ತನೆ ಆಗಿಲ್ಲ" ಎಂದು ಕೇಂದ್ರ ವಿತ್ತ ಸಚಿವರು ತಿಳಿಸಿದ್ದಾರೆ. ಕರ್ನಾಟಕ ಸರಕಾರವು ೨೦ ಜಿಲ್ಲೆಗಳ ೮೬ ತಾಲೂಕುಗಳನ್ನು ಬರಪೀಡಿತವೆಂದು ಘೋಷಿಸಿದೆ.(೧೨ ಆಗಸ್ಟ್ ೨೦೦೯ರ ಪತ್ರಿಕಾ ವರದಿ) ಹಾಗಂತ, ನೀರನ್ನು ತಯಾರಿಸಲು ಸಾಧ್ಯವಿದೆಯೇ? ಸಾಧ್ಯವಿಲ್ಲ. ಹಾಗಾದರೆ, ನಾವೇನು ಮಾಡಬಹುದು?

ನಮಗೆ ಈಗ ಬೇಕಾಗಿರುವುದು ಸುರಕ್ಷಿತ ಭವಿಷ್ಯಕ್ಕಾಗಿ ಒಂದು "ನೀರಿನ ಧೋರಣೆ". ಅದರ ಆರು ಮುಖ್ಯ ಅಂಶಗಳ ಬಗ್ಗೆ ಚಿಂತಿಸೋಣ.

ಒಂದನೆಯದಾಗಿ, ನಮ್ಮ ದೇಶದಲ್ಲೊಂದು ನೀರಿನ ಮಾಹಿತಿ ಮಿಷನ್ ಅಗತ್ಯ.  ದೇಶದ ಯಾವ ಭಾಗದಲ್ಲಿ ನೀರಿನ ಪರಿಸ್ಠಿತಿ ಹೇಗಿದೆ? ನಮಗೆ ಗೊತ್ತಿಲ್ಲ. ಈ ಮಿಷನ್ ಆ ಮಾಹಿತಿ ಒದಗಿಸಬೇಕು - ಉಪಗ್ರಹ ಮತ್ತು ಅಂತರ್ಜಲ ಸಂವೇದಿ ಉಪಕರಣಗಳ ಸಹಾಯದಿಂದ. ನೀರಿನ ಕೊರತೆ ಉಂಟಾಗಬಹುದಾದ ಸ್ಥಳಗಳ ಮನೆಮನೆಗೆ ಹಾಗೂ ಪ್ರತಿಯೊಬ್ಬ ರೈತನಿಗೆ ಈ ಮಿಷನ್ ಮಾಹಿತಿ ನೀಡಿ ಎಚ್ಚರಿಸಬೇಕು.

ಎರಡನೆಯದಾಗಿ, ನೀರಿನ ಬಳಕೆಗಾಗಿ ಯೋಜನೆ ಅಗತ್ಯ:  ಪ್ರತಿಯೊಂದು ಹಳ್ಳಿಗೆ, ನಗರಕ್ಕೆ ಮತ್ತು ಕಾರ್ಖಾನೆಗೆ. ಗ್ರಾಮ ಪಂಚಾಯತಿ ಕಚೇರಿ ಮತ್ತು ಶಾಲೆಯ ಗೋಡೆಗಳಲ್ಲಿ ಇರಬೇಕು -  ಅಲ್ಲಿಯ ಬಾವಿಗಳ ಭೂಪಟ ಮತ್ತು ಬಾವಿಗಳ ನೀರಿನ ಮಟ್ಟದ ಮಾಹಿತಿ.  ಆಯಾ ಹಳ್ಳಿಯ ನೆಲದಡಿಯ ನೀರಿನಾಸರೆಗಳಿಗೆ ಏನಾಗುತ್ತಿದೆ? ಇದು ಅಲ್ಲಿನ ಎಲ್ಲರಿಗೂ ತಿಳಿದಿರಬೇಕು - ಬಳಕೆ ವಿಧಾನದಲ್ಲಿ ಬದಲಾವಣೆ ರೂಪಿಸಲಿಕ್ಕಾಗಿ.

ಅದಲ್ಲದೆ, ಹಳ್ಳಿಹಳ್ಳಿಯ ಪ್ರತಿಯೊಬ್ಬರಿಗೂ ಗೊತ್ತಿರಬೇಕು - ಅಲ್ಲಿ ಬಿದ್ದ ಮಳೆನೀರು ಏನಾಗುತ್ತಿದೆ?  ಅಲ್ಲೆಲ್ಲ ನೆಲದಾಳದಿಂದ ನೀರು ಎತ್ತುತ್ತಲೇ ಇದ್ದೇವೆ. ಆದರೆ ನಮಗೆ ಗೊತ್ತಿಲ್ಲ: ನಮ್ಮ ಹಳ್ಳಿ ಅಥವಾ ಊರಿನಲ್ಲಿ ಎಷ್ಟು ತೆರೆದ ಬಾವಿ ಹಾಗೂ ಕೊಳವೆಬಾವೆಗಳಿವೆ? ಅವುಗಳ ನೀರಿನ ಮಟ್ಟ ಹಾಗೂ ನೀರಿನ ಗುಣಮಟ್ಟ ವರುಷದಿಂದ ವರುಷಕ್ಕೆ ಹೇಗೆ ಕುಸಿಯುತ್ತಿದೆ? ಈ ಮಾಹಿತಿ ಸಂಗ್ರಹಿಸಿ, ಸಮುದಾಯಕ್ಕೆ ತಿಳಿಸಿದರೆ ಹನಿಹನಿ ಮಳೆನೀರ ಕೊಯ್ಲಿಗೆ ಜನ ತಯಾರಾಗುತ್ತಾರೆ.

ಯಾರನ್ನೇ ಕೇಳಿ: ನಿಮ್ಮ ಬೆಳ್ಳಿಬಂಗಾರ, ಮನೆ, ಆಸ್ತಿಪಾಸ್ತಿ, ಬ್ಯಾಂಕ್‍ಬ್ಯಾಲೆನ್ಸ್ - ಇವೆಲ್ಲ ಯಾರಿಗಾಗಿ? "ನಮ್ಮ ಮಕ್ಕಳಿಗಾಗಿ" ಅಂತಾರೆ. ಮಕ್ಕಳಿಗಾಗಿ ಇವನ್ನೆಲ್ಲ ಜೋಪಾನವಾಗಿ ಕೂಡಿಡುವ ನಾವು, ಅವರಿಗೆ ನೀರು ಸಿಕ್ಕೀತೇ? ಎಂದು ಯಾವತ್ತಾದರೂ ಚಿಂತಿಸಿದ್ದೇವೆಯೇ?

ಇನ್ನಾದರೂ ಚಿಂತಿಸಬೇಕಾಗಿದೆ. ಯಾಕೆಂದರೆ ಆಗಸ್ಟ್ ೧೨, ೨೦೦೯ರ ಪತ್ರಿಕಾ ವರದಿ (ಡೆಕ್ಕನ್ ಹೆರಾಲ್ಡ್, ಪುಟ ೯) ನಮ್ಮ ಮಕ್ಕಳ ಕಾಲದಲ್ಲಿ ನೀರಿನ ಪರಿಸ್ಥಿತಿ ಹೇಗಿರುತ್ತದೆ? ಎಂಬ ಚಿತ್ರಣ ನೀಡಿದೆ.

ಅದು, ನಾಸಾ (ಎನ್‍ಎಎಸ್‍ಎ) ಉಪಗ್ರಹ ತೆಗೆದ ಪೋಟೋಗಳನ್ನು ಅಧ್ಯಯನ ಮಾಡಿ, ಯುಎಸ್‍ಎ ದೇಶದ ಪರಿಣತರು ಸಿದ್ಧಪಡಿಸಿದ ವರದಿ. ಮೂಲತಃ "ನೇಚರ್" ಪತ್ರಿಕೆಯಲ್ಲಿ ಪ್ರಕಟವಾಗಿರುವ ಆ ವರದಿಯ ಸತ್ಯಾಸತ್ಯತೆ ಬಗ್ಗೆ ಸಂದೇಹ ಪಡಬೇಕಾಗಿಲ್ಲ. ಅದರ ಪ್ರಕಾರ ಪಂಜಾಬ್, ಹರಿಯಾಣ, ರಾಜಸ್ಥಾನ ಮತ್ತು ಡೆಲ್ಲಿಯಲ್ಲಿ ೨೦೦೨ರಿಂದ ೨೦೦೮ರ ತನಕ, ಅಂತರ್ಜಲ ಮಟ್ಟ ಕುಸಿದಿದೆ; ವರುಷಕ್ಕೆ ೪ ಸೆಂಟಿಮೀಟರಿನಂತೆ ಒಟ್ಟು ೨೪ ಸೆಮೀ ಕುಸಿದಿದೆ.

ಇದರ ಅರ್ಥವೇನು?  ಆ ಪ್ರದೇಶಗಳು ವರುಷಕ್ಕೆ ೧೮ ಘನ ಕಿ.ಮೀ.ನಂತೆ, ೬ ವರುಷಗಳಲ್ಲಿ ೧೦೯ ಘನ ಕಿ.ಮೀ. ನೀರು ಕಳೆದುಕೊಂಡಿವೆ. ಇದು ಭಾರತದ ಅತಿ ದೊಡ್ಡ ಜಲಾಶಯ (ಮಧ್ಯಪ್ರದೇಶದ ಅಪ್ಪರ್ ವಾಯಿನ್‍ಗಂಗಾ ಜಲಾಶಯ)ದಲ್ಲಿರುವ ನೀರಿನ ಪರಿಮಾಣಕ್ಕಿಂತ ಜಾಸ್ತಿ!

ಅಂತರ್ಜಲ ಮಟ್ಟದ ಇಂತಹ ಆತಂಕಕಾರಿ ಕುಸಿತದ ಪರಿಣಾಮಗಳೇನು? ಅಲ್ಲಿನ ಸುಮಾರು ೧೧ ಕೋಟಿ ನಿವಾಸಿಗಳಿಗೆ ಕುಡಿಯುವ ನೀರಿನ ಕೊರತೆ ಉಂಟಾದೀತು. ಮಾತ್ರವಲ್ಲ, ಕೃಷಿಗೆ ನೀರು ಸಾಕಾಗದೆ ಆಹಾರದ ಕೊರತೆ ಎದುರಾದೀತು.

ಕರ್ನಾಟಕದ ಕರಾವಳಿಯ ಜಿಲ್ಲೆ ದಕ್ಷಿಣ ಕನ್ನಡ. ಇಲ್ಲಿರುವ ಪದವಿಪೂರ್ವ ಕಾಲೇಜುಗಳು ೧೫೦. ಈ ಕಾಲೇಜುಗಳು ಮಳೆಕೊಯ್ಲಿನ ಹಾಗೂ ಮಳೆನೀರಿಂಗಿಸುವ ರಚನೆಗಳನ್ನು ನಿರ್ಮಿಸಿದರೆ ಅದುವೇ ಜಲಜಾಗೃತಿ ಹಬ್ಬಿಸಬಲ್ಲ ಅಭಿಯಾನ.
ಯಾಕೆಂದರೆ ಅಲ್ಲಿ ಪಿ.ಯು.ಸಿ. ಕಲಿಯುವ ವಿದ್ಯಾರ್ಥಿಗಳ ಸಂಖ್ಯೆ ಸುಮಾರು ೩೦,೦೦೦. ತಮ್ಮ ಕಾಲೇಜಿನಲ್ಲಿ ಮಳೆಕೊಯ್ಲು ಹಾಗೂ ಮಳೆನೀರು ಇಂಗಿಸುವುದನ್ನು ಅವರು ಕಣ್ಣಾರೆ ಕಾಣುವಂತಾದರೆ, ಆ ಸಂದೇಶ ಕನಿಷ್ಠ ೩೦,೦೦೦ ಮನೆಗಳನ್ನು ತಲಪುತ್ತದೆ.

ಇದೆಲ್ಲ ಸಾಧ್ಯವೇ? ಖಂಡಿತ ಸಾಧ್ಯವಿದೆ. ಇದು ನನ್ನ ಅನುಭವ. ೨೦೦೪ರಲ್ಲಿ ಚಿಕ್ಕಮಗಳೂರಿನ ಕಾಬ್‍ಸೆಟ್ ಸಂಸ್ಥೆಯ ನಿರ್ದೇಶಕನಾಗಿ ನನ್ನ ನೇಮಕ. ಆ ವರುಷ ಸ್ವ-ಉದ್ಯೋಗ ತರಬೇತಿ ಸಂಸ್ಥೆಗೆ ಸ್ವಂತ ಕಟ್ಟಡ ಕಟ್ಟಿಸಬೇಕೆಂದು ಕಾರ್ಪೊರೇಷನ್ ಬ್ಯಾಂಕಿನ ನಿರ್ಧಾರ. ಕಟ್ಟಡ ನಿರ್ಮಿಸುವಾಗಲೇ ಮಳೆಕೊಯ್ಲು ಹಾಗೂ ಮಳೆನೀರಿಂಗಿಸುವ ವ್ಯವಸ್ಥೆ ಮಾಡಬೇಕೆಂದು ನನ್ನ ಆಗ್ರಹ. ಆ ಮೂಲಕ ಪ್ರತಿ ವರುಷ ಅಲ್ಲಿ ತರಬೇತಿಗೆ ಬರುವ ಒಂದು ಸಾವಿರ ಅಭ್ಯರ್ಥಿಗಳ ಮನೆಗಳಿಗೆ ಜಲಜಾಗೃತಿಯ ಸಂದೇಶ ರವಾನಿಸುವ ಯೋಜನೆ.

ಅದರಂತೆ ಸುಮಾರು ೨,೩೦೦ ಚದರಡಿ ಚಾವಣಿಯಿಂದ ಮಳೆನೀರು ಇಳಿಸಲು ಪೈಪ್‍ಗಳ ಜೋಡಣೆ. ಹಿಂಭಾಗದ ಚಾವಣಿಯಿಂದ ಇಳಿಯುವ ಮಳೆನೀರು ಎರಡು ಫಿಲ್ಟರುಗಳ ಮೂಲಕ ಶುದ್ಧೀಕರಣ. ಸಂಪಿನಲ್ಲಿ ಆ ನೀರಿನ ಸಂಗ್ರಹ. ಸಂಪ್‍ನಿಂದ ನೀರೆತ್ತಲು ಪಂಪ್. ಆ ಸಂಪ್ (ನೆಲದಡಿಯ ಟ್ಯಾಂಕ್) ತುಂಬಿದಾಗ ಹೆಚ್ಚಾದ ನೀರು ಕೊಳವೆಬಾವಿಗೆ ಹರಿದುಹೋಗಲು ಪೈಪ್ ಜೋಡಣೆ (ಫೋಟೋ ನೋಡಿ).

ಹಿಂಭಾಗದ ಇಳಿಪೈಪಿಗೆ ತಗಲಿಸಿದ್ದು ಎರಡು ವಿಶಿಷ್ಟ ವಿನ್ಯಾಸದ ಫಿಲ್ಟರುಗಳನ್ನು. ಅವುಗಳ ತಳದಲ್ಲಿ ತೂತು. ಹಾಗಾದರೆ ಚಾವಣಿಯಿಂದ ರಭಸದಲ್ಲಿ ಇಳಿಯುವ ಮಳೆನೀರು ಈ ಫಿಲ್ಟರುಗಳ ತೂತಿನಲ್ಲಿ ನೆಲಕ್ಕೆ ಸುರಿಯುತ್ತದೆ ಅಂದುಕೊಂಡಿರಾ? ಹಾಗೆ ಆಗೋದಿಲ್ಲ. ಫಿಲ್ಟರ್ ಪ್ರವೇಶಿಸುವ ಮಳೆನೀರು ಅದರೊಳಗೆ ಬುಗರಿಯಂತೆ ತಿರುಗುತ್ತದೆ. ಆಗ ಅದರಲ್ಲಿರುವ ಕಸವೆಲ್ಲ ಬೇರ್ಪಟ್ಟು ತೂತಿನಲ್ಲಿ ಕೆಳಕ್ಕೆ ಬೀಳುತ್ತದೆ; ಶುದ್ಧವಾದ ಮಳೆನೀರು ಮಾತ್ರ ಪೈಪಿನಲ್ಲಿ ಇಳಿದು ಕೊಳವೆಬಾವಿಗೆ ಹರಿಯುತ್ತದೆ.

ಫಸಲು ಬೇಕಿದ್ದರೆ ಹೊಲಗಳಲ್ಲಿ ಬೀಜ ಬಿತ್ತಬೇಕು. ಜಲಜಾಗೃತಿಯ ಫಸಲು ಬೇಕಿದ್ದರೆ ಜಲಸಾಕ್ಷರತೆಯ ಬೀಜ ಬಿತ್ತಬೇಕು. ಎಲ್ಲಿ? ಶಾಲೆಗಳಲ್ಲಿ. ಅದೆಲ್ಲ ಹೇಗೆ ಸಾಧ್ಯ ಅಂತೀರಾ? ಅದು ಸಾಧ್ಯವೆಂದು ತೋರಿಸಿಕೊಟ್ಟ ಮಂಗಳೂರಿನ ಎರಡು ಕಾಲೇಜುಗಳ ನಿದರ್ಶನಗಳಿಲ್ಲಿವೆ.

ಮಂಗಳೂರಿನ ಬಾವುಟಗುಡ್ಡೆಯ ನೆತ್ತಿಯಲ್ಲಿದೆ ಸೈಂಟ್ ಎಲೋಸಿಯಸ್ ಕಾಲೇಜು. ಅಲ್ಲಿನ ಪತ್ರಿಕೋದ್ಯಮ ವಿದ್ಯಾರ್ಥಿಗಳಿಗೆ ಮಳೆಕೊಯ್ಲಿನ ವಿಷಯ ತಿಳಿದಾಗ ಹೊಸಲೋಕವೊಂದರ ಪರಿಚಯ. ಪ್ರಿನ್ಸಿಪಾಲರೊಂದಿಗೆ ಮಳೆಕೊಯ್ಲಿನ ಯೋಜನೆಯ ಪ್ರಸ್ತಾಪ. ಪೆನ್ನು ಹಿಡಿಯುತ್ತಿದ್ದ ಕೈಗಳು ಹಾರೆಪಿಕ್ಕಾಸು ಹಿಡಿದವು. ಕಾಲೇಜಿನ ಹಾಸ್ಟೆಲಿನ ಹತ್ತಿರ ಮಳೆನೀರ ಇಂಗುಗುಂಡಿಗಳ ಮತ್ತು ತಡೆಗೋಡೆಗಳ ನಿರ್ಮಾಣ. ಚಾವಣಿ ನೀರನ್ನೂ ಇಂಗುಗುಂಡಿಗೆ ತಿರುಗಿಸಿದರು ವಿದ್ಯಾರ್ಥಿಗಳು. ಇದರಿಂದಾಗಿ ಅವರು ಕಣ್ಣಾರೆ ಕಂಡ ಪರಿಣಾಮ, "ಗುಂಡಿಯ ನೀರೆಲ್ಲ ನಾಲ್ಕೇ ಗಂಟೆಗಳಲ್ಲಿ ಇಂಗುತ್ತದೆ." ಆ ಕಾಲೇಜಿಗೆ ’ಮಂಗಳೂರಿನಲ್ಲಿ ಮಳೆಕೊಯ್ಲು ಮಾಡಿದ ಮೊದಲ ಕಾಲೇಜು’ ಎಂಬ ಹೆಗ್ಗಳಿಕೆ. ’ಕಾಲೇಜಿನ ಕ್ಯಾಂಪಸ್ಸಿನಲ್ಲಿ ಬೀಳುವ ಎಲ್ಲ ನೀರನ್ನೂ ನಾವು ಇಂಗಿಸುತ್ತೇವೆ; ಒಂದು ಹನಿಯನ್ನೂ ಚರಂಡಿಗೆ ಹರಿಯಲು ಬಿಡುವುದಿಲ್ಲ’ ಎಂಬುದು ಅವರ ನಿರ್ಧಾರ.

ಮಂಗಳೂರಿನಿಂದ ಹತ್ತು ಕಿಮೀ ದೂರದಲ್ಲಿದೆ ವಾಮಂಜೂರು. ಅಲ್ಲಿಂದ ೨ ಕಿಮೀ ದೂರದಲ್ಲಿದೆ ಪಿಲಿಕುಳ ನಿಸರ್ಗಧಾಮ. ಅಲ್ಲೀಗ ವಾರಾಂತ್ಯಗಳಲ್ಲಿ ಜನರ ಜಾತ್ರೆ. ಅಲ್ಲೇ ಹತ್ತಿರದಲ್ಲಿದೆ ಹಳ್ಳಿ ಕಿರಾಮ್. ಅಲ್ಲಿನ ೪೫ ಸಣ್ಣ ಹಿಡುವಳಿ ಕುಟುಂಬಗಳ ಅಡಿಕೆ ತೋಟಗಳು ಕೊಳ್ಳದಲ್ಲಿವೆ. ಕಿರಾಮಿನ ಗುಡ್ಡದ ಆ ಬದಿಯ ಬಯಲಿನಲ್ಲಿ ೫ ಸೆಂಟ್ಸ್ ಮನೆಗಳು. ಅವುಗಳಿಗೆ ನಳ್ಳಿ ನೀರು ಒದಗಿಸಲಿಕ್ಕಾಗಿ ಕೊಳವೆಬಾವಿಗಳನ್ನು ಕೊರೆದಾಗಿನಿಂದ ಕಿರಾಮಿಗೆ ನೀರಿನ ಸಮಸ್ಯೆ. ಅದಕ್ಕೆ ಅಲ್ಲಿನವರು ಕಂಡುಕೊಂಡ ಪರಿಹಾರ ಮಳೆನೀರ ಕೊಯ್ಲು.

"ನಮ್ ಕಡೆ ಹಿಂದಿನ್ ವರ್ಷ ಮಳೇನೇ ಆಗಿಲ್ಲ. ನಿಮ್ ಕಡೆ ಸ್ವಲ್ಪನಾದ್ರೂ ಮಳೆ ಆಗೈತಿ. ನಿಮ್ ತೋಟದಾಗೆ ಮಣ್ ಅಗೆದ್ರೆ ಎಷ್ಟಡಿ ಆಳ ನೀರಿನ್ ಪಸೆ ಇರ್ತದೆ?" ಎಂಬ ಪ್ರಶ್ನೆ ವಿಠಲಾಪುರದ ವೀರಪ್ಪ ಅವರದು.
ನನ್ನೊಂದಿಗಿದ್ದ ಚಿಕ್ಕಮಗಳೂರು ತಾಲೂಕಿನ ಕುನ್ನಾಳು ಗ್ರಾಮದ ಹದಿನೈದು ರೈತರು ತಮ್ಮೊಳಗೆ ಮಾತಾಡಿಕೊಂಡು ಉತ್ತರಿಸಿದರು, "ಮಣ್ಣಲ್ಲಿ ಐದಾರು ಇಂಚು ಆಳದ ವರೆಗೆ ನೀರಿನ್ ಪಸೆ ಇರ‍್ಬೋದು."
"ನಮ್ ತೋಟದಲ್ಲಿ ಹೆಂಗೈತೆ ನೋಡಿ" ಎಂದು ವೀರಪ್ಪ ಹಾರೆ ಎತ್ತಿಕೊಂಡು ಮಣ್ಣು ಅಗೆಯತೊಡಗಿದರು. ಎರಡು ಅಡಿ ಆಳಕ್ಕೆ ಅಗೆದು ತೋರಿಸಿದರು. ಅಷ್ಟು ಆಳದ  ವರೆಗೂ ಮಣ್ಣಿನಲ್ಲಿ ತೇವಾಂಶವಿತ್ತು. ಅದರಿಂದಾಗಿಯೇ ಅವರ ೧೫ ಎಕ್ರೆ ತೋಟದಲ್ಲಿ ಮರಗಿಡಗಳೆಲ್ಲ ಹಸುರಾಗಿದ್ದವು. ತೆಂಗು ಮತ್ತು ಅಡಿಕೆ ಮುಖ್ಯ ಬೆಳೆಗಳು. ಜಾಯಿಕಾಯಿ, ವೀಳ್ಯದೆಲೆ, ಅರಸಿನ, ಕರಿಮೆಣಸು, ವೆನಿಲ್ಲಾ, ಪಪ್ಪಾಯಿ ಉಪಬೆಳೆಗಳು.

ಅಕ್ಕಪಕ್ಕದ ತೋಟಗಳಲ್ಲಿ ಮರಗಿಡಗಳೆಲ್ಲ ಒಣಗಿ ಸೊರಗಿದ್ದವು. ಯಾಕೆಂದರೆ ಚಿಕ್ಕಮಗಳೂರಿನ ತರೀಕೆರೆ ತಾಲೂಕಿನಲ್ಲಿ ಹಿಂದಿನ ಎರಡು ವರುಷಗಳಲ್ಲಿ ಮಳೆ ಬಂದದ್ದೇ ಇಲ್ಲ ಅನ್ನಬೇಕು. ವೀರಪ್ಪರ ತೋಟಕ್ಕೆ ನಾವು ಭೇಟಿ ಕೊಟ್ಟ ವರುಷ ಅಕ್ಟೋಬರ್ ತನಕ ಅಲ್ಪಸ್ವಲ್ಪ ಮಳೆ. ಅನಂತರ ಒಂದು ಹನಿ ಮಳೆ ಬಿದ್ದಿರಲಿಲ್ಲ. ಅಂತಹ ಸನ್ನಿವೇಶದಲ್ಲಿ ಇವರ ತೋಟದ ಮರಗಿಡಗಳು ಬಾಡಿದ್ದರೂ ಹಸುರು ಉಳಿದಿತ್ತು.

"ನಿಮ್ ತೋಟದಾಗೆ ನೀರಿನ್ ಪಸೆ ಉಳಿಸಿಕೊಳ್ಳಾಕೆ ಏನ್ ಮಾಡಿದ್ರಿ?" ಎಂಬ ನಮ್ಮ ಪ್ರಶ್ನೆಗೆ ವೀರಪ್ಪರ ಉತ್ತರ, "ನಮ್ ತೋಟದಾಗೆ ಏನೂ ಬೇಸಾಯ ಮಾಡಿಲ್ಲ. ಅಂದ್ರೆ ಶೂನ್ಯ ಬೇಸಾಯ. ಹಾಗಂತ ಒಂದೇಟಿಗೆ ನಾನ್ ಇಡೀ ತೋಟ ಶೂನ್ಯ ಬೇಸಾಯಕ್ಕೆ ತರ‍್ಲಿಲ್ಲ. ಹತ್ತುಹತ್ತು ಗುಂಟೇನೇ ಬಿಡಿಸ್ತಾ ಬಂದೆ. ಇಡೀ ತೋಟಾನ ಶೂನ್ಯ ಬೇಸಾಯಕ್ಕೆ ತರೋದಕ್ಕೆ ನಂಗೆ ಇಪ್ಪತ್ತು ವರ್ಷ ಬೇಕಾತು."

ಮೇ ೨, ೨೦೦೯ರಂದು ಅಪರಾಹ್ನ ಬೈಕಿನಲ್ಲಿ ಮಂಚಿಗೆ ಹೋಗಿದ್ದೆ, ಆಪ್ತರಾದ ಶ್ರೀನಿವಾಸ ಆಚಾರ್ ಅವರ ಮನೆಗೆ. ಮಂಗಳೂರಿನಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ಬಿ.ಸಿ.ರೋಡ್ ದಾಟಿ, ಪುತ್ತೂರು ರಸ್ತೆಯಲ್ಲಿ ಮೇಲ್ಕಾರಿನಲ್ಲಿ ಬಲಕ್ಕೆ ತಿರುಗಿ ಸಾಗಿದ್ದೆ. ಬಿಸಿಲಿನಲ್ಲಿ ಒಂದು ತಾಸಿನ ಪಯಣ ಬೇಸಗೆಯ ಬಿಸಿ ಮುಟ್ಟಿಸಿತ್ತು.

ಅಂದು ಸಂಜೆಯಾಗುತ್ತಿದ್ದಂತೆ ಶ್ರೀನಿವಾಸ ಆಚಾರ್ ಕರೆದರು, "ಗುಡ್ಡದಲ್ಲಿ ದೊಡ್ಡ ಹೊಂಡ ಮಾಡಿಸಿದ್ದೇನೆ. ನೋಡಿ ಬರುವಾ". ಅವರ ಮನೆಯ ಹಿಂಭಾಗದಲ್ಲಿರುವ ಗುಡ್ಡ ಏರಿದೆವು. ಅಲ್ಲಿ ಆಯಕಟ್ಟಿನ ಜಾಗದಲ್ಲಿ ವಿಸ್ತಾರವಾದ ಹೊಂಡ. ಸುಮಾರು ೮೦ ಅಡಿ ಉದ್ದ, ೬೦ ಅಡಿ ಅಗಲ, ೩ ಅಡಿ ಆಳ. ಅದರ ಅಕ್ಕಪಕ್ಕದಿಂದ ಮಳೆನೀರು ಹರಿದು ಬರಲು ತೋಡುಗಳ ಜಾಲ. ಅಲ್ಲಿ ವರುಷಕ್ಕೆ ೪,೦೦೦ ಮಿಮೀ ಮಳೆ. ಮಳೆನೀರು ತುಂಬಿದರೆ ಆ ಹೊಂಡ ೪.೫ ಲಕ್ಷ ಲೀಟರಿನ ನೀರ ಖಜಾನೆ.

ಮೊನ್ನೆ ಶ್ರೀನಿವಾಸ ಆಚಾರ್ ಬಂದು ಹೇಳಿದ ಸಿಹಿಸುದ್ದಿ, "ಜುಲಾಯಿ ತಿಂಗಳ ಮಳೆಗೆ ಹೊಂಡ ತುಂಬಿ ನೀರು ಹೊರಕ್ಕೆ ಹರಿದಿದೆ ಮಾರಾಯರೇ". ಮುಂದಿನ ವರುಷ ಅದರ ಬದಿಯ ಕಚ್ಚಾ ಹಾದಿಗೆ ಮಣ್ಣು ಹಾಕಿ ಇನ್ನೂ ಎರಡಡಿ ಏರಿಸಬೇಕು. ಇನ್ನಷ್ಟು ನೀರು ಹೊಂಡದಲ್ಲಿ ತುಂಬಲಿ, ಎಂಬುದು ಅವರ ಯೋಜನೆ.

ಶ್ರೀನಿವಾಸ ಆಚಾರ್ ಅಖಿಲ ಭಾರತ ಅಡಿಕೆ ಬೆಳೆಗಾರರ ಸಂಘದ ಕಾರ್ಯದರ್ಶಿ. ’ನೀರಿಂಗಿಸುವ ವಿಷಯ ಬರೀ ಹೇಳಿದ್ರೆ ಸಾಲದು. ಮಾಡಿ ತೋರಿಸಬೇಕು’ ಎಂಬುದು ಅವರ ನಿಲುವು. ಆ ಗುಡ್ಡದ ಬುಡದಲ್ಲಿರುವ ಅವರ ಅಡಿಕೆ ತೋಟಕ್ಕೆ ನೀರಿನಾಸರೆ ಹಳೆಯ ಕೆರೆ. ಅದರಲ್ಲಿ ಬೇಸಗೆಯಲ್ಲಿ ಕೂಡ ಸಾಕಷ್ಟು ನೀರಿರುತ್ತದೆ. ಆದರೂ ಧುಮುಕಿ ಹೋಗುವ ಮಳೆನೀರನ್ನು ಹಿಡಿದಿಡುವ, ಇಂಗಿಸುವ ಕಾಯಕಕ್ಕೆ ಕೈಹಾಕಿದ್ದಾರೆ.  

ಮೇ ೧೨, ೨೦೦೯ರಂದು ಸುಳ್ಯದಲ್ಲಿ ಪ್ರಸಾದ್ ರಕ್ಷಿದಿ ಅವರ ಭೇಟಿ. ಆಗ, ತನ್ನ ಜಮೀನಿನ ನೀರಿನ ಕೊರತೆ ಎದುರಿಸಲಿಕ್ಕಾಗಿ ಮಳೆನೀರಿಂಗಿಸಿದ ಅನುಭವ ಹಂಚಿಕೊಂಡಿದ್ದರು. ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಹಳ್ಳಿ ರಕ್ಷಿದಿಯಲ್ಲಿ ಅವರ ಜಮೀನು. ಅದು ವಾರ್ಷಿಕ ೨,೫೦೦ರಿಂದ ೩,೦೦೦ ಮಿಮೀ ಮಳೆಯಾಗುವ ಮಲೆನಾಡು ಪ್ರದೇಶ.

Pages