Agriculture and Rural Development

ಚಿಟಿಲ್....ಚಿಟಿಲ್....ಠಳಾರ್....ಕಣ್ಣು ಕೋರೈಸುವ ಮಿಂಚು. ದಢಲ್....ದಢಲ್....ದಢಾರ್....ಕಿವಿಗಡಚಿಕ್ಕುವ ಗುಡುಗು. ಭರ್....ಭರ್....ಭಸಾಲ್....ಆಕಾಶವೇ ಕಳಚಿಬಿದ್ದಂತೆ ಸುರಿಯುವ ಮಳೆ.

ಈ ವಿಸ್ಮಯವನ್ನು ಎವೆಯಿಕ್ಕದೆ ನೋಡುತ್ತಿದ್ದ ಪುಟ್ಟ ಮಗು ಮಳೆಯತ್ತ ಬೆರಳು ತೋರಿ ಕೇಳುತ್ತದೆ, "ಅಜ್ಜಾ, ಅದೇನು?" ಅಜ್ಜನ ಉತ್ತರ, "ಮಗೂ, ಅದು ಮಳೆ. ಆಕಾಶದಿಂದ ಬರ್ತಾ ಇದೆ." ಮಗು ಪುನಃ ಕೇಳ್ತದೆ, "ಅದು ಹೇಗೆ ಬರ್ತದೆ, ಅಜ್ಜಾ?" ಅಜ್ಜ ಯೋಚಿಸುತ್ತಾರೆ. ’ನೈಋತ್ಯ ಮಾರುತ ಮಳೆ ತರುತ್ತದೆ’ ಅನ್ನಲೇ? ಛೇ, ಹಾಗಲ್ಲ, ಮಗುವಿನ ಭಾಷೆಯಲ್ಲೇ ಹೇಳಬೇಕು ಅಂದುಕೊಳ್ತಾರೆ.

ಮಗುವಿನ ಕೈಗೊಂದು ಸ್ಟೀಲ್ ಲೋಟ ಕೊಟ್ಟು, ’ಹೇಳ್ತೇನೆ, ಇದನ್ನ ಫ್ರಿಜ್‍ನಲ್ಲಿಡು’ ಅಂತಾರೆ. ಅನಂತರ ಅಜ್ಜ - ಮೊಮ್ಮಗ ಮಳೆ ನೋಡ್ತಾ ಕೂರ್ತಾರೆ. ಐದು ನಿಮಿಷಗಳ ಬಳಿಕ ’ಆ ಲೋಟ ತಾ’ ಎಂದು ತರಿಸ್ತಾರೆ. ’ಅದನ್ನ ಮೇಜಿನ ಮೇಲಿಟ್ಟು ನೋಡ್ತಾ ಇರು’ ಅಂತಾರೆ. ಇನ್ನೂ ಐದು ನಿಮಿಷಗಳು ಸರಿಯುತ್ತವೆ. "ಏನಾಯ್ತು ಮಗೂ" ಅಜ್ಜ ಕೇಳ್ತಾರೆ. ಮಗು ಲೋಟ ತೋರಿಸ್ತಾ ಕುಪ್ಪಳಿಸುತ್ತಾ ಹೇಳ್ತದೆ, "ಅಜ್ಜಾ, ಲೋಟದಲ್ಲಿ ನೀರು ಬಂದಿದೆ." ಅಜ್ಜ ಮುಗುಳು ನಗುತ್ತಾ "ಮಳೆ ಹೀಗೇ ಬರ್ತದೆ" ಅಂತಾರೆ. ಮಗುವೂ ಮುಗುಳು ನಗುತ್ತದೆ. ಅದಕ್ಕೆ ಅರ್ಥವಾಗಿತ್ತು.

ಧಾರಾಕಾರವಾಗಿ ಸುರಿಯುವ ಮಳೆ. ರಭಸದಿಂದ ಹರಿದು ಹೋಗುವ ಮಳೆನೀರು. ನಾವೆಲ್ಲ ಇದನ್ನು ನೋಡಿದವರು, ನೋಡುತ್ತ ನೋಡುತ್ತ ಖುಷಿ ಪಟ್ಟವರು. ಆಗೆಂದಾದರೂ ’ಈ ಮಳೆನೀರನ್ನು ಕೊಯ್ಲು ಮಾಡಲು ಸುಲಭದ ದಾರಿ ಯಾವುದು’ ಎಂಬ ಪ್ರಶ್ನೆ ಕಾಡಿದೆಯೇ?

ಈಗ ಬೇಸಗೆ ಮುಗಿಯುತ್ತಿದೆ. ಜೊತೆಗೆ ಮಾವಿನ ಹಂಗಾಮು ಮುಗಿಯುತ್ತಿದೆ. ಇನ್ನಷ್ಟು ಕಾಲ ಮಾವು ತಿನ್ನಲು ಸಿಗಬೇಕಾದರೆ ಏನು ಮಾಡಬೇಕು? ಮಾವಿನ ರಸಪಾಕ ಮಾಡಿಟ್ಟರೆ ಒಂದು ತಿಂಗಳು ಉಳಿದೀತು. ಮಾವಿನ ರಸ ಬಿಸಿಲಿನಲ್ಲಿ ಒಣಗಿಸಿ ಮಾಂಬಳ ಮಾಡಿಟ್ಟರೆ ಒಂದು ವರುಷ ಉಳಿದೀತು. ಮಾವಿನ ಉಪ್ಪಿನಕಾಯಿ ಮಾಡಿಟ್ಟರೆ ಎರಡು ವರುಷ ಉಳಿದೀತು.

ಹಾಗೆಯೇ, ಮಳೆನೀರು ಉಳಿಸಲು ನೂರಾರು ದಾರಿಗಳಿವೆ. ಈ ದಾರಿಗಳ ಗುರಿ - ಮಳೆ ನೀರಿಂಗಿಸುವುದು. ಇಲ್ಲಿದೆ ಅದರ ಸರಳ ಸೂತ್ರ: ಓಡುವ ನೀರನ್ನು ನಡೆಯುವಂತೆ ಮಾಡಿ; ನಡೆಯುವ ನೀರನ್ನು ತೆವಳುವಂತೆ ಮಾಡಿ; ತೆವಳುವ ನೀರನ್ನು ನಿಲ್ಲಿಸಿ; ನಿಂತ ನೀರನ್ನು ಇಂಗಿಸಿ.

ಈ ಸರಳ ಸೂತ್ರ ಬಳಸಿ ಯಶಸ್ವಿಯಾದವರ ಅನುಭವ ತಿಳಿಯೋಣ. ದಕ್ಷಿಣಕನ್ನಡದ ವಿಟ್ಲ ಗುಡ್ಡಗಳ ಊರು. ಅಲ್ಲಿನ ಪೇಟೆಯ ಎತ್ತರದ ಜಾಗದಲ್ಲಿದೆ ಇಗರ್ಜಿ. ಅದರ ಧರ್ಮಗುರು ಫಾ. ಬೆನೆಡಿಕ್ಟ್ ರೇಗೋ ಮಳೆನೀರಿಂಗಿಸಲಿಕ್ಕಾಗಿ ಅನುಸರಿಸಿದ್ದು ಇದೇ ಸೂತ್ರ. ಚರ್ಚಿನ ಕಟ್ಟಡದ ಸುತ್ತಲೂ "u" ಆಕಾರದ ಕಣಿ ತೋಡಿಸಿದರು. ಈ ಕಣಿಯೊಳಗೆ ಅಲ್ಲಲ್ಲಿ ದೊಡ್ಡ ತೊಟ್ಟಿಲಿನಂತಹ ಗುಂಡಿಗಳು. ಚರ್ಚಿನ ಚಾವಣಿ ಮತ್ತು ಅಂಗಳದಲ್ಲಿ ಬಿದ್ದ ಮಳೆನೀರೆಲ್ಲ ಈ ಕಣಿಗೆ ಹರಿದು ಬಂದು ನಿಧಾನವಾಗಿ ಇಂಗುತ್ತದೆ - ಲಕ್ಷಲಕ್ಷ ಲೀಟರ್. (ದಕ್ಷಿಣಕನ್ನಡದಲ್ಲಿ ಸರಾಸರಿ ಮಳೆ ೪,೦೦೦ ಮಿಮೀ. ಅಂದರೆ ಅಲ್ಲಿ ಪ್ರತಿ ಸೆಂಟ್ಸ್ (೪೦ ಚ.ಮೀ.) ಜಾಗದಲ್ಲಿ ವರುಷಕ್ಕೆ ಬೀಳುವ ಮಳೆ ೧.೬ ಲಕ್ಷ ಲೀಟರ್)

ಮಳೆ ಬಾರದೆ ಬರಗಾಲದಿಂದ ಕಂಗೆಟ್ಟಾಗ, ಮಳೆದೇವರನ್ನು ಒಲಿಸಿಕೊಳ್ಳಲಿಕ್ಕಾಗಿ ಕಪ್ಪೆ ಮದುವೆ ಅಥವಾ ಕತ್ತೆ ಮದುವೆ ಮಾಡಿದ ವರದಿಗಳನ್ನು ಪತ್ರಿಕೆಗಳಲ್ಲಿ ಓದಿದ್ದೀರಾ? ಮಳೆಗಾಗಿ ಮನುಷ್ಯರೇ ಎತ್ತುಗಳಂತೆ ಹೊಲ ಉಳುಮೆ ಮಾಡಿದ ವರದಿಗಳನ್ನು ಗಮನಿಸಿದ್ದೀರಾ?

ಇದರ ಬದಲಾಗಿ ಬೇರೇನಾದರೂ ಮಾಡಲು ಸಾಧ್ಯವಿಲ್ಲವೇ? ಖಂಡಿತ ಸಾಧ್ಯವಿದೆ. ಉದಾಹರಣೆಗೆ ಜನರಲ್ಲಿ ಜಲಜಾಗೃತಿ ಪಸರಿಸಬಹುದು. ಅದು ಹೇಗೆ? ಇಲ್ಲಿವೆ ಎರಡು ನಿದರ್ಶನಗಳು.

ಅಕ್ತೋಬರ್ ೨೦೦೩ರ ಒಂದು ದಿನ, ಮಂಗಳೂರಿನಿಂದ ೨೧ ಕಿಮೀ ದೂರದ ಬಿ.ಸಿ.ರೋಡ್ ಹತ್ತಿರದ ಜೋಡುಮಾರ್ಗದಲ್ಲಿ ಗೃಹಪ್ರವೇಶ ಸಮಾರಂಭ. ಪೂರ್ವಾಹ್ನ ಆಮಂತ್ರಿತರು, ಬಂಧುಗಳು ನೆರೆದಿದ್ದರು. ಅಲ್ಲಲ್ಲಿ ಕುಳಿತು ಮಾತಾಡುತ್ತಿದ್ದರು. ಅಷ್ತರಲ್ಲಿ ಅಲ್ಲಿ "ನೆಲ ಜಲ ಉಳಿಸುವ ನೂರಾರು ದಾರಿಗಳ" ವರ್ಣಪಾರದರ್ಶಿಕೆಗಳ ಪ್ರದರ್ಶನ ಆರಂಭವಾಯಿತು. ನಡೆಸಿಕೊಟ್ಟವರು "ನೆಲಜಲ ಉಳಿಸಿ" ಆಂದೋಲನದ ನೇತಾರ ’ಶ್ರೀ’ಪಡ್ರೆ.

ಗೃಹಪ್ರವೇಶ ಸಮಾರಂಭದಲ್ಲಿ "ನೆಲಜಲ ಉಳಿಸಿ" ಮಾಹಿತಿ ಕಾರ್ಯಕ್ರಮ ಈ ತನಕ ಕಂಡುಕೇಳಿರದ ಸಂಗತಿ ಅಲ್ಲವೇ? ಆದರೆ ಇದು ಇಂದಿನ ಅಗತ್ಯ ಎಂಬುದನ್ನು ಕಾರ್ಯಕ್ರಮದ ಬಳಿಕ ಅಲ್ಲಿ ಜರಗಿದ ಪ್ರಶ್ನೋತ್ತರವೇ ಸಾಬೀತು ಪಡಿಸಿತು. ಅಲ್ಲಿ  ಸೇರಿದ್ದ ೯೦೦ ಜನರಲ್ಲಿ ಪ್ರಶ್ನೆಗಳನ್ನು ಕೇಳಿ ಕೇಳಿ ವಿಷಯ ತಿಳಿದುಕೊಂಡವರು ಅನೇಕರು. ಅವರೆಲ್ಲರೂ ತಮ್ಮ ತಮ್ಮ ಜಮೀನಿನಲ್ಲಿ, ಮನೆಗಳಲ್ಲಿ ಜಲ ಮರುಪೂರಣ ಮಾಡಲು ಪಣ ತೊಟ್ಟರು.

ವಿನೂತನ ಜಲಜಾಗೃತಿ ಕಾರ್ಯಕ್ರಮ ಏರ್ಪಡಿಸಿದವರು ಮನೆಯೊಡೆಯರಾದ ದಂಪತಿ ಡಾ.ಸುಂದರೇಶ್ ಮತ್ತು ಡಾ. ಜಾನಕಿ. ಇಂತಹ ಐಡಿಯಾ ಹೇಗೆ ಹೊಳೆಯಿತೆಂಬ ಪ್ರಶ್ನೆಗೆ ಸುಂದರೇಶ್ ಅವರ ಉತ್ತರ: "ಇಂತಹ ಸಮಾರಂಭಗಳಲ್ಲಿ ನೂರಾರು ಜನರು ಒಂದೆಡೆ ಸೇರುತ್ತಾರೆ. ಆದರೆ ಊಟದ ತನಕ ಹಾಳುಹರಟೆಯಲ್ಲೇ ಅವರ ಹೊತ್ತು ಕಳೆಯುತ್ತದೆ. ಅದರ ಬದಲಾಗಿ ಉಪಯುಕ್ತ ವಿಷಯವೊಂದನ್ನು ಅತಿಥಿಗಳಿಗೆ ತಿಳಿಸುವ ವ್ಯವಸ್ಥೆ ಮಾಡೋಣ ಅನ್ನಿಸಿತು. ತಟಕ್ಕನೆ ನನಗೆ ನೆನಪಾದದ್ದು ನಾನು ನೋಡಿದ್ದ ಶ್ರೀಪಡ್ರೆಯವರ ನೀರಿನ ಷೋ."

ಉಮೇಶ ಪೂಜಾರಿ ಈಗ ನಮ್ಮೊಂದಿಗಿಲ್ಲ. ೧೯ ಎಪ್ರಿಲ್ ೨೦೦೯ರಂದು ಆತ್ಮಹತ್ಯೆ ಮಾಡಿಕೊಂಡರು.

ಈ ಘಟನೆ ಬಗ್ಗೆ ೨೦ ಎಪ್ರಿಲ್ ೨೦೦೯ರ ವಾರ್ತಾಪತ್ರಿಕೆಯಲ್ಲಿ ವರದಿ ಹೀಗಿತ್ತು: "ಸಾಲದ ಬಾಧೆಯಿಂದ ಬೇಸತ್ತ ಅಲಂಕಾರು ಗ್ರಾಮದ ಕೈಯಪ್ಪೆಯ ರೈತ ಉಮ್ಮಪ್ಪ ಯಾನೆ ಉಮೇಶ ಪೂಜಾರಿ (೫೦) ಭಾನುವಾರ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡರು. ಉಮ್ಮಪ್ಪ ಅವರು ಕೆಲವು ದಿನಗಳ ಹಿಂದೆ ತನ್ನ ತೋಟದಲ್ಲಿ ಬೋರ್‍ವೆಲ್ ತೋಡಿಸಿದ್ದರು. ಸುಮಾರು ೭೦ ಸಾವಿರ ರೂಪಾಯಿ ಸಾಲ ಮಾಡಿ ತೋಡಿಸಿದ ಬೋರ್‍ವೆಲ್ ನಲ್ಲಿ ನೀರು ಸಿಗದೇ ಇದ್ದ ಕಾರಣ ಅವರು ಚಿಂತಿತರಾಗಿ ಆತ್ಮಹತ್ಯೆ ಮಾಡಿಕೊಂಡರು ಎಂದು ಕಡಬ ಪೊಲೀಸ್ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ. ಮೃತರಿಗೆ ಪತ್ನಿ, ಪುತ್ರಿ, ಇಬ್ಬರು ಪುತ್ರರು ಇದ್ದಾರೆ."

ಇದನ್ನೋದಿದಾಗ ನನಗೆ ನೆನಪಾದದ್ದು ಉತ್ತರಕನ್ನಡ ಜಿಲ್ಲೆಯ ಶಿರಸಿ ಹತ್ತಿರದ ಕಾಡಕೋಳಿ ಮನೆಯ ದೇವರು ಭಟ್ ಸೋದರರು. ಅಲ್ಲಿಗೆ ಹೋಗಿದ್ದಾಗ ಅವರು ಹೇಳಿದ್ದ ಮಾತು, "ಎರಡು ವರುಷ ಮುಂಚೆ ನಾವು ನಮ್ಮ ಅಡಿಕೆ ತೋಟ ಮಾರಿ ಊರು ಬಿಟ್ಟು ಹೋಗೋದಂತ ಮಾಡಿದ್ವು. ಈಗ ಧೈರ್ಯ ಬಂದಿದೆ. ಒಂದು ವರುಷ ಮಳೆ ಬಾರದಿದ್ರೂ ತೊಂದರೆ ಇಲ್ಲ. ನಮ್ಮ ಅಡಿಕೆ ತೋಟ ಉಳಿಸಿಕೊಳ್ತೇವೆ."

ತಮ್ಮ ಅಡಿಕೆ ತೋಟದ ಮೇಲ್ಭಾಗದ ಗುಡ್ಡದಲ್ಲಿ ನೀರಿಂಗಿಸುವ ಸಮತಲ ಅಗಳು ತೋರಿಸುತ್ತಾ ಅವರು ಕೇಳಿದ ಪ್ರಶ್ನೆ, "ಇದರ ಉದ್ದ ಎಷ್ಟು ಹೇಳಿ?" ಎಲ್ಲರ ಕಣ್ಣಂದಾಜಿನ ಲೆಕ್ಕ ತಪ್ಪಿತ್ತು. ಕೆಲವರು ಹೆಜ್ಜೆಗಳಿಂದ ಅಳೆಯುತ್ತಿದ್ದಂತೆ ಶ್ರೀಪತಿ ದೇವರು ಭಟ್ ಉತ್ತರ ಹೇಳಿಬಿಟ್ಟರು, "ಇಪ್ಪತ್ತು ಅಡಿ." ತಕ್ಷಣ ಹೊರಬಿತ್ತು ಎರಡನೆಯ ಪ್ರಶ್ನೆ, "ಇದರ ಅಗಲ ನಾಲ್ಕಡಿ, ಆಳ ೩ ಅಡಿ. ಇದರಲ್ಲಿ ಎಷ್ಟು ನೀರು ಹಿಡೀತದೆ?" ಉತ್ತರಿಸಲು ನಾವು ತಡಕಾಡುತ್ತಿರುವಾಗ "ಹೆಚ್ಚುಕಮ್ಮಿ ೫ ಸಾವಿರ ಲೀಟರ್ ನೀರು ಹಿಡೀತದೆ. ಇಂತಹ ನಲುವತ್ತು ಅಗಳು ಮಾಡಿಸಿದ್ದೇವೆ. ಅಲ್ಲಿಗೆ ಎಷ್ಟು ಮಳೆ ನೀರು ಈ ಗುಡ್ಡದಲ್ಲಿ ಕೊಯ್ಲಾಗುತ್ತದೆ, ನೀವೇ ಲೆಕ್ಕ ಹಾಕಿ" ಎಂದು ಸವಾಲೆಸೆದರು ಶ್ರೀಪತಿ ಭಟ್.

ಅದೊಂದು ಕಾಲವಿತ್ತು. ಜಗತ್ತಿನಲ್ಲಿ ಬೇರೆಲ್ಲಿಯೂ ಸುರಿಯದಷ್ಟು ಮಳೆ ಮೇಘಾಲಯದ ಚಿರಾಪುಂಜಿಯಲ್ಲಿ ಸುರಿಯುತ್ತಿತ್ತು. ಅದಕ್ಕೇ ಚಿರಾಪುಂಜಿಯ ಹೆಸರು ಗಿನ್ನೆಸ್ ರೆಕಾರ್ಡ್ ಪುಸ್ತಕದಲ್ಲಿ ದಾಖಲಾಗಿದೆ: ಒಂದು ಕ್ಯಾಲೆಂಡರ್ ವರುಷದಲ್ಲಿ ಜಗತ್ತಿನಲ್ಲಿ ಅತ್ಯಂತ ಜಾಸ್ತಿ ಮಳೆ ಬಿದ್ದ ಸ್ಥಳ - ಚಿರಾಪುಂಜಿ. ಆಗಸ್ಟ್ ೧೮೮೦ರಿಂದ ಜುಲೈ ೧೮೮೧ರ ವರೆಗೆ ಬಿದ್ದ ಮಳೆ ೨೨,೯೮೭ ಮಿಮೀ. ಗಿನ್ನೆಸ್ ಪುಸ್ತಕದಲ್ಲಿ ಇನ್ನೊಂದು ದಾಖಲೆಯೂ ಚಿರಾಪುಂಜಿಯ ಹೆಸರಿನಲ್ಲಿದೆ: ಒಂದೇ ದಿನದಲ್ಲಿ ಅತ್ಯಧಿಕ ಮಳೆ ಬಿದ್ದ ಸ್ಥಳ ಅದು. ೧೯೭೪ರ ಅದೊಂದು ದಿನ ಪ್ರಳಯವಾದಂತೆ ಮಳೆ ಹೊಯ್ದಿತ್ತು - ೨,೪೫೫ ಮಿಮೀ.

"ಹೌದು, ಅದೊಂದು ಕಾಲವಿತ್ತು. ಮಳೆ ಶುರುವಾಯಿತೆಂದರೆ ಆಕಾಶವೇ ಕಳಚಿ ಬಿದ್ದಂತೆ ಮಳೆ ಹೊಯ್ಯುತ್ತಿತ್ತು. ಮೂರು ದಿನ ಸುರಿದರೂ ಮಳೆ ನಿಲ್ಲದಿದ್ದರೆ, ಅದು ಒಂಭತ್ತು ದಿನಗಳ ವರೆಗೆ ಎಡೆಬಿಡದೆ ಸುರಿಯುವ ಮಳೆ ಎಂದು ನಮಗೆ ಗೊತ್ತಾಗುತ್ತಿತ್ತು. ಆಗ ಮುಂದಿನ ಬೆಳೆಗಾಗಿ ಹೊಲಗಳಲ್ಲಿ ನೆಡುವ ಕೆಲಸ ಶುರು ಮಾಡುತ್ತಿದ್ದೆವು" ಎಂದು ನೆನಪು ಮಾಡಿಕೊಳ್ಳುತ್ತಾರೆ, ೭೫ ವರುಷಗಳ ಮುದುಕ.

ಚಿರಾಪುಂಜಿಯಿಂದ ಕೆಲವು ಕಿಮೀ ದೂರದ ಹಳ್ಳಿ ಟಿರ್‍ನಾದಲ್ಲಿ ತನ್ನ ಬಾಲ್ಯದ ದಿನಗಳಲ್ಲಿ ಹಾಗೆ ಮಳೆ ಹೊಯ್ಯುತ್ತಿದ್ದ ನೆನಪುಗಳು ಅವನಲ್ಲಿ ಮಾಸಿಲ್ಲ. ಆಗ ಮಳೆಗಾಲದಲ್ಲಿ ಕಿತ್ತಳೆ, ಗೆಣಸು, ವೀಳ್ಯದೆಲೆ ಬಳ್ಳಿ, ಕಾಫಿ ಗಿಡಗಳು, ಕೇನೆ ಗೆಡ್ಡೆಗಳು ಇವನ್ನೆಲ್ಲ ನೆಡುತ್ತಿದ್ದರಂತೆ. "ಆಗ ನಮಗೆ ಈಗಿನಂತೆ ಆಹಾರದ ಚಿಂತೆ ಇರಲಿಲ್ಲ. ಈಗ ಎಲ್ಲವೂ ತಲೆಕೆಳಗಾಗಿದೆ," ಎನ್ನುತ್ತಾನೆ ಆ ಹಿರಿಯ ಆಕಾಶ ದಿಟ್ಟಿಸುತ್ತಾ.

ಹೌದು, ಈಗ ಎಲ್ಲವೂ ತಲೆಕೆಳಗಾಗಿದೆ. ಗೌಹಾತಿಯ ಪ್ರಾದೇಶಿಕ ಹವಾಮಾನ ಕೇಂದ್ರದ ದಾಖಲೆಗಳ ಪ್ರಕಾರ, ಕಳೆದ ದಶಕದಲ್ಲಿ ಚಿರಾಪುಂಜಿಯ ವಾರ್ಷಿಕ ಸರಾಸರಿ ಮಳೆ ಪ್ರಮಾಣ ೧೧,೦೭೦ ಮಿಮೀ. ೨೦೦೬ರಲ್ಲಿ ಬಿದ್ದ ಮಳೆ ಕೇವಲ ೮,೭೩೦ ಮಿಮೀ. ಅಂದರೆ ಸರಾಸರಿ ಮಳೆಗಿಂತಲೂ ಶೇಕಡಾ ೩೫ ಕಡಿಮೆ.

"ಕರ್ನಾಟಕದ ನಾಲ್ಕು ಜಿಲ್ಲೆಗಳಲ್ಲಿ ತೀವ್ರ ನೀರಿನ ಕೊರತೆ - ಬೆಳಗಾಂ, ಬಿಜಾಪುರ, ರಾಯಚೂರು, ಕೋಲಾರ ಜಿಲ್ಲೆಗಳಲ್ಲಿ. ನೀರಿನ ಅಭಾವ ಎದುರಿಸಲಿಕ್ಕಾಗಿ ಹೊಸ ಕೊಳವೆಬಾವಿಗಳನ್ನು ಕೊರೆಸಲು ಮತ್ತು ಟ್ಯಾಂಕರುಗಳಲ್ಲಿ ಕುಡಿಯುವ ನೀರು ಸರಬರಾಜು ಮಾಡಲು ರಾಜ್ಯ ಸರಕಾರ ರೂಪಾಯಿ ೨೧೧ ಕೋಟಿ ಬಿಡುಗಡೆ ಮಾಡಿದೆ" - ಇದು ೨೭ ಮಾರ್ಚ್ ೨೦೦೯ರಂದು ಕರ್ನಾಟಕದ ಹಲವು ವಾರ್ತಾಪತ್ರಿಕೆಗಳಲ್ಲಿ ಮುಖಪುಟ ಸುದ್ದಿ.

"ರಾಜ್ಯದ ೪೫ ಹಳ್ಳಿಗಳಿಗೆ ಟ್ಯಾಂಕರುಗಳಲ್ಲಿ ಕುಡಿಯುವ ನೀರು ಒದಗಿಸಲು ಸರಕಾರ ಕ್ರಮ ಕೈಗೊಂಡಿದೆ" ಎಂಬ ಸುದ್ದಿ ಓದುತ್ತಿದ್ದಂತೆ ೫ ವರುಷಗಳ ಮುಂಚಿನ ಒಂದಿನ ನೆನಪಾಯಿತು.ಅಂದು ೨೭ ಫೆಬ್ರವರಿ ೨೦೦೪. ಬಿಸಿಲು ಚುರುಕಾಗಿತ್ತು. ಬೆಳಗ್ಗೆ ೯ರ ಹೊತ್ತಿಗೆ ಕಡೂರು ಹತ್ತಿರದ ಬಿಳೇಕಲ್ಲು ಹಳ್ಳಿಗೆ ಹೋಗಿದ್ದಾಗ, ಹಳ್ಳಿಯ ಕೆಲವರು ಎತ್ತಿನ ಗಾಡಿಗಳಲ್ಲಿ ಬಟ್ಟೆ ಹೇರಿಕೊಂಡು ಹೊರಟಿದ್ದರು, "ಇದೇನು ಗುಳೇ ಹೊರಟಿದ್ದಾರಾ?" ಎಂದು ಕೇಳಿದೆ, ಶಾಲಾ ಮಾಸ್ಟರ್ ಪಾಂಡುರಂಗಪ್ಪನವರನ್ನು. "ಇಲ್ಲ ಸಾರ್, ಬಟ್ಟೆ ಒಗೀಲಿಕ್ಕೆ ಅಯ್ಯನ ಕೆರೆಗೆ ಹೊರಟಿದ್ದಾರೆ" ಎಂದರು.

"ಅಲ್ಲಿಂದ ಕಾಲುವೇಲಿ ನಿಮ್ ಹಳ್ಳಿಗೆ ನೀರು ಬರಾಕಿಲ್ವಾ?" ಎಂಬ ನನ್ನ ಪ್ರಶ್ನೆಗೆ ಅವರ ಉತ್ತರ, "ಅಯ್ಯೋ, ಆ ಕಾಲ ಹೋಯ್ತು. ಕಾಲುವೇಲಿ ನೀರ್ ಬಿಡೋದು ಬಂದ್ ಮಾಡ್ಯಾರೆ. ಈಗ ಅಯ್ಯನ ಕೆರೆ ನೀರು ಏನಿದ್ರೂ ಜನರಿಗೆ ಬಟ್ಟೆ ಒಗೀಲಿಕ್ಕೆ ಮತ್ತು ಜಾನುವಾರುಗಳಿಗೆ ಕುಡೀಲಿಕ್ಕೆ ಮಾತ್ರ. ನಾನು ಹುಟ್ಟಿದ್ಮೇಲೆ ಹಿಂಗಾಗಿದ್ದು ಇದೇ ಮೊದಲು".

ಸಿಮೆಂಟಿನ ಮನೆಯಂಗಳದಲ್ಲಿ ಧೂಳು. ಆ ಧೂಳೆಲ್ಲ ಮನೆಯೊಳಗೆ ಬಂದು ಮನೆ ಗಲೀಜಾಗುತ್ತದೆ. ಅದಕ್ಕಾಗಿ ಏಳೆಂಟು ಬಕೆಟ್ ನೀರು ಸುರಿದು, ಗುಡಿಸಿ, ಅಂಗಳವನ್ನೇ ಶುಚಿ ಮಾಡುವವರು ಹಲವರು.

ಲಕ್ಷಗಟ್ಟಲೆ ರೂಪಾಯಿ ಕಾರು. ಅದು ಝಗಮಗಿಸುತ್ತಲೇ ಇರಬೇಕು. ಅದಕ್ಕಾಗಿ ವಾರಕ್ಕೊಮ್ಮೆ ಕಾರಿಗೆ "ಸ್ನಾನ" ಮಾಡಿಸಬೇಕು, ಏಳೆಂಟು ಬಕೆಟ್ ನೀರಿನಲ್ಲಿ.

ಮನೆಯ ಮುಂದೆ, ಹಿಂದೆ ಅಥವಾ ಪಕ್ಕದಲ್ಲಿ ಚಂದದ ಕೈತೋಟ. ಬಣ್ಣಬಣ್ಣದ ಹೂಗಿಡಗಳು, ಎಲೆಗಿಡಗಳು. ಅವು ನಳನಳಿಸಬೇಕಾದರೆ ನೀರು ಎರೆಯಬೇಕಲ್ಲವೇ? ಅದಕ್ಕಾಗಿ ಶುದ್ಧೀಕರಿಸಿದ ಕುಡಿಯುವ ನೀರಿನ ಬಳಕೆ - ದಿನದಿನವೂ ಹತ್ತಿಪ್ಪತ್ತು ಬಕೆಟ್ ನೀರು.

ಸ್ನಾನ ಮಾಡುವಾಗ, ನೀರು ಎರೆದುಕೊಳ್ಳುವುದೇ ಖುಷಿ. ಸ್ನಾನಕ್ಕಾಗಿ ೨ - ೩ ಬಕೆಟ್ ನೀರು. ಹಲ್ಲುಜ್ಜುವಾಗ ಮತ್ತು ಗಡ್ಡ ತೆಗೆಯುವಾಗ ನಳ್ಳಿಯಿಂದ ನೀರು ಸುರಿಯುತ್ತಲೇ ಇರಬೇಕು. ಯಾಕೆಂದರೆ ಅದು ಕೆಲವರ ಅಭ್ಯಾಸ - ಹಲವಾರು ವರುಷಗಳಿಂದ ಬೆಳೆಸಿಕೊಂಡು ಬಂದ ಅಭ್ಯಾಸ.

ಇಂತಹ ಸಂಗತಿಗಳು ನಮ್ಮ ಮನೆಗಳಲ್ಲೇ ನಡೆಯುತ್ತಿರಬಹುದು. ಈ ರೀತಿಯಲ್ಲಿ ನೀರು ಹಾಳು ಮಾಡುವುದನ್ನು ತಪ್ಪಿಸಲು ಸಾಧ್ಯವಿಲ್ಲವೇ? ಖಂಡಿತವಾಗಿ ಸಾಧ್ಯವಿದೆ. ಅದಕ್ಕಾಗಿ ನಮ್ಮ ಅಭ್ಯಾಸಗಳನ್ನು ಬದಲಾಯಿಸಬೇಕು, ಅಷ್ಟೇ.

ಉದಾಹರಣೆಗೆ, ಬಟ್ಟೆ ಒಗೆದ ನೀರಿನಿಂದ ಅಂಗಳ ಶುಚಿಮಾಡಬಹುದು. ಒಂದು ತುಂಡು ಬಟ್ಟೆಯನ್ನು ಒದ್ದೆ ಮಾಡಿಕೊಂಡು, ಅದರಿಂದ ಕಾರಿನ ಧೂಳು ತೆಗೆಯಲು ಒಂದು ಬಕೆಟ್ ನೀರು ಸಾಕು. ಕೈತೋಟಕ್ಕೂ ಬಟ್ಟೆ ಒಗೆದ ನೀರನ್ನೇ ಹಾಕಬಹುದು. ಸ್ನಾನ ಮಾಡಲು ಒಂದು ಬಕೆಟ್ ನೀರು ಧಾರಾಳ ಸಾಕು. ಹಲ್ಲುಜ್ಜುವುದು ಮತ್ತು ಗಡ್ಡ ತೆಗೆಯುವುದು, ೨ - ೩ ಮಗ್ ನೀರಿನಲ್ಲಿ ಈ ಕೆಲಸಗಳು ಸಾಧ್ಯ.

ಹೀಗೆ ಅಭ್ಯಾಸಗಳನ್ನು ಬದಲಾಯಿಸಲು ನಾವು ಮನಸ್ಸು ಮಾಡಬೇಕು, ಅಷ್ಟೇ. "ಅದೇ ಕಷ್ಟದ ಕೆಲಸ. ಈ ಅಭ್ಯಾಸಗಳು ಬೇರು ಬಿಟ್ಟಿವೆ, ಹೇಗೆ ಬದಲಾಯಿಸುವುದು" ಅಂತೀರಾ?

"ನೇತ್ರಾವತಿ ನದಿ ತಿರುವು ಯೋಜನೆ"ಯು ಅನುಷ್ಠಾನ ಯೋಗ್ಯವಾಗಿಲ್ಲ. ಪ್ರಕೃತಿಗೆ ವಿರುದ್ಧವಾಗಿ ಯೋಜನೆ ಕೈಗೊಂಡರೆ ಆಗುವ ಅನುಕೂಲಕ್ಕಿಂತ ಅನಾನುಕೂಲವೇ ಹೆಚ್ಚು ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಹೇಳಿದ್ದಾರೆ. ಹಾಸನದಲ್ಲಿ ೨೨ ಮಾರ್ಚ್ ೨೦೦೯ರಂದು ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಾ ಅವರು ಪ್ರಶ್ನಿಸಿದರು: ನೇತ್ರಾವತಿ ನದಿಯಲ್ಲಿ ಮಳೆಗಾಲದಲ್ಲಿ ಹೊರತುಪಡಿಸಿ ಉಳಿದ ಅವಧಿಯಲ್ಲಿ ನೀರಿನ ಪ್ರಮಾಣ ಕಡಿಮೆ. ಏಪ್ರಿಲ್ ಮತ್ತು ಮೇಯಲ್ಲಿ ನೀರಿನ ಹರಿವು ಇರುವುದಿಲ್ಲ. ವಾಸ್ತವ ಹೀಗಿರುವಾಗ ನದಿ ತಿರುವು ಯೋಜನೆ ಎಷ್ಟರ ಮಟ್ಟಿಗೆ ಸರಿ?

     ಈ ಯೋಜನೆಗಾಗಿ ೨೦೦೪ರಲ್ಲಿ ಉಪಗ್ರಹ ಸರ್ವೆ ನಡೆಸಲಾಗಿತ್ತು.(ರೂ.೧೫ ಕೋಟಿ ವೆಚ್ಚದಲ್ಲಿ) ಯೋಜನೆಯ ಲಾಭಗಳ ಬಗ್ಗೆ "ನದಿ ನೀರು ತಿರುಗಿಸುವ ಸಮಿತಿ"ಯ ಚೇರ್‍ಮನ್ ಆಗ ನೀಡಿದ್ದ ರಂಗುರಂಗಿನ ಚಿತ್ರಣ ಹೀಗಿದೆ: ನೇತ್ರಾವತಿಯನ್ನು ಪಶ್ಚಿಮದಿಂದ ಪೂರ್ವಕ್ಕೆ ತಿರುಗಿಸಿದರೆ ಕರ್ನಾಟಕದ ಬಳಕೆಗಾಗಿ ಸರಾಸರಿ ವರುಷಕ್ಕೆ ೪೬೪ ಟಿಎಂಸಿ ನೀರನ್ನು ಪಡೆಯಬಹುದು. ಇದರಿಂದ ೫೦ ಲಕ್ಷ ಎಕರೆಗಳನ್ನು ನೀರಾವರಿ ಜಮೀನಾಗಿ ಪರಿವರ್ತಿಸಬಹುದು. ರೂ.೧೨,೦೦೦ ಕೋಟಿ ವೆಚ್ಚದ ಯೋಜನೆಯಲ್ಲಿ ಹೂಹಾರದ ವಿನ್ಯಾಸದ ೭೦೦ ಕಿಮೀ ಉದ್ದದ ಕಾಲುವೆಗಳನ್ನು ನಿರ್ಮಿಸಿ ರಾಜ್ಯದ ೧೦ ಜಿಲ್ಲೆಗಳಿಗೆ ನೀರುಣಿಸಬಹುದು.

     ಇದಕ್ಕಾಗಿ ಕೋಟಿಗಟ್ಟಲೆ ರೂಪಾಯಿ ಕಬಳಿಸುವ ಈ ಯೋಜನೆಯ ಬದಲಾಗಿ ಬೇರೆ ದಾರಿಗಳಿಲ್ಲವೇ? ನೀರ ನೆಮ್ಮದಿಗೆ ನೂರಾರು ದಾರಿಗಳಿವೆ. ಅವನ್ನು ಒಪ್ಪುವ, ಕೃತಿಗಿಳಿಸುವ ಮನಸ್ಸು ಬೇಕು, ಅಷ್ಟೇ.

 ಒಂದು ಬೋರ್‍ವೆಲ್ ನಿಂದ ನೀರೆತ್ತುವುದು ಎಂದರೆ ೬ ಇಂಚಿನ ಕೇಸಿಂಗ್ ಪೈಪಿನಿಂದ ನೀರೆತ್ತುವುದು. ಆದರೆ ಒಂದು ಗ್ರಾಮದಲ್ಲಿ ಹಲವಾರು ಬೋರ್‍ವೆಲ್‍ಗಳಿಂದ ನೀರೆತ್ತುವಾಗ ಏನಾಗುತ್ತದೆ? ಈ ಪ್ರಶ್ನೆ ಹಾಕಿದವರು ಡಾ. ಕೆ. ಎಂ. ಕೃಷ್ಣ ಭಟ್. ಅವರು ದಕ್ಷಿಣ ಕನ್ನಡದ ಪುತ್ತೂರು ಹತ್ತಿರದ ಇಡ್ಕಿದು ಗ್ರಾಮದ ಅಮೃತ ಸಿಂಚನ ರೈತರ ಸೇವಾ ಒಕ್ಕೂಟದ ಅಧ್ಯಕ್ಷರು.

     "ವರ್ಷದಲ್ಲಿ ಆರು ತಿಂಗಳ ಕಾಲ, ಕರೆಂಟು ಇರುವಾಗೆಲ್ಲ, ಸುಮಾರು ೬೦ ಅಡಿ ವ್ಯಾಸದ ಪೈಪ್ ಲೈನ್ ಬಳಸಿ ಎತ್ತಬಹುದಾದಷ್ಟು ನೀರನ್ನು ನಮ್ಮ ಗ್ರಾಮದಲ್ಲಿ ಬೋರ್‍ವೆಲ್‍ಗಳಿಂದ ಮೇಲೆತ್ತುತ್ತೇವೆ. ಯೋಚಿಸಿ ನೋಡಿ. ಇಷ್ಟು ನೀರನ್ನು ಭೂಮಿಗೆ ಪುನಃ ತುಂಬಿ ಕೊಡಲು ಸಾಧ್ಯವೇ?" ಎಂದವರು ಕೇಳುವಾಗ ನಮ್ಮ ತಲೆಗೆ ಮಿಂಚು ಹೊಡೆದಂತಾಗುತ್ತದೆ.

     ೧೯೬೦ರ ದಶಕದ ವರೆಗೆ ನಮ್ಮ ದೇಶದಲ್ಲಿ ಬೋರ್‍ವೆಲ್‍ಗಳ ಹಾವಳಿ ಇರಲಿಲ್ಲ. ಅನಂತರ ಜನಸಂಖ್ಯಾ ಹೆಚ್ಚಳ, ವಾಣಿಜ್ಯ ಬೆಳೆಗಳ ಕೃಷಿ, ನಗರಗಳ ಬೆಳವಣಿಗೆಗಳಿಂದಾಗಿ ನೀರಿನ ಬೇಡಿಕೆ ಹೆಚ್ಚಿತು. ನೀರಿನ ಸಮಸ್ಯೆಗೆ ಬೋರ್‍ವೆಲ್ ಪರಿಹಾರ ಎಂದು ಜನ ಭಾವಿಸಿದರು.

     ಆರಂಭದಲ್ಲಿ ೧೦೦ - ೧೫೦ ಅಡಿಗಳ ಆಳದಲ್ಲಿ ಕೊಳವೆಬಾವಿಗಳಲ್ಲಿ ನೀರು ಸಿಗುತ್ತಿತ್ತು. ವರುಷಗಳು ಸರಿದಂತೆ ಹೆಚ್ಚೆಚ್ಚು ಆಳಕ್ಕೆ ಬೋರ್ ಕೊರೆಯಬೇಕಾಯಿತು. ೩೦೦ ಅಡಿಗಳಲ್ಲ, ೫೦೦ ಅಡಿ ಆಳಕ್ಕೆ ಬೋರ್ ಕೊರೆದರೂ ನೀರು ಸಿಗಲಿಲ್ಲ. ಇನ್ನೂ ಆಳಕ್ಕೆ ಬೋರ್ ಕೊರೆದದ್ದೇ ಕೊರೆದದ್ದು. ಕೊನೆಕೊನೆಗೆ ಕರ್ನಾಟಕದ ಚಿತ್ರದುರ್ಗ ಹಾಗೂ ತಮಿಳುನಾಡಿನ ಕೊಯಂಬತ್ತೂರು ಇಂತಹ ಪ್ರದೇಶಗಳಲ್ಲಿ ೧,೦೦೦ ಅಡಿಗಳಿಗಿಂತ ಹೆಚ್ಚು ಆಳಕ್ಕೆ ಬೋರ್ ಕೊರೆದರೂ ನೀರು ಸಿಗದಿದ್ದಾಗ ಜನರಿಗೆ ತಾವು ಮಾಡಿದ ತಪ್ಪಿನ ಅರಿವಾಗತೊಡಗಿತು.

ಮಾರ್ಚ್  ೯, ೨೦೦೯ರಂದು ವಿವಿದ ಕಾಮಗಾರಿಗಳ ಪರಿಶೀಲನೆಗಾಗಿ ದಕ್ಷಿಣಕನ್ನಡದ ಉಸ್ತುವಾರಿ ಸಚಿವರಿಂದ ತಮ್ಮ ಕ್ಷೇತ್ರ ಸುರತ್ಕಲ್‍ನ ಭಾಗವಾದ ಕೃಷ್ಣಾಪುರಕ್ಕೆ ಭೇಟಿ. ಆಗ ಅವರೆದುರು ಅಲ್ಲಿನ ಆರನೇ ಬ್ಲಾಕಿನ ನಿವಾಸಿಗಳ ಪ್ರತಿಭಟನೆ. "ತಮ್ಮ ಬ್ಲಾಕಿನ ನಳ್ಳಿಗಳಲ್ಲಿ ನೀರು ಬರುತ್ತಿಲ್ಲ, ಮಾರ್ಚ್ ಏಳರ ಶನಿವಾರ ಕೇವಲ ಒಂದು ಗಂಟೆ ನೀರು ಬಂದಿತ್ತು" ಎಂಬುದು ಅಲ್ಲಿನ ನಿವಾಸಿಗಳ ಆಕ್ರೋಶ.

     ಈ ಸಮಸ್ಯೆ ಪರಿಹರಿಸಲು ನೀರಿನ ಟ್ಯಾಂಕರುಗಳಲ್ಲಿ ನೀರು ಸರಬರಾಜು ಮಾಡಬೇಕಾಗಿಲ್ಲ. ಮಳೆ ನೀರಿಂಗಿಸಿದರೆ ಸಾಕು.

     ಯಾಕೆಂದರೆ, ಕರಾವಳಿ ಜಿಲ್ಲೆಯಾದ ದಕ್ಷಿಣ ಕನ್ನಡದಲ್ಲಿ ಜೂನ್‍ನಿಂದ ಸಪ್ಟಂಬರ ತನಕ ನಾಲ್ಕು ತಿಂಗಳ ಮಳೆಗಾಲ. ಆಗ ಇಲ್ಲಿ ಬೀಳುವ ಮಳೆ ಬರೋಬ್ಬರಿ ೪೪೦೦ ಮಿಲಿಮೀಟರ್(ವಾರ್ಷಿಕ ಸರಾಸರಿ). ಇದು, ಕರ್ನಾಟಕದ ವಾರ್ಷಿಕ ಸರಾಸರಿ ಮಳೆಯ ನಾಲ್ಕು ಪಟ್ಟು! ಇಷ್ಟು ಮಳೆ ಬೀಳುವ ದಕ್ಷಿಣ ಕನ್ನಡದಲ್ಲಿ ಕೂಡ ಮಾರ್ಚ್ ತಿಂಗಳ ಆರಂಭದಲ್ಲಿಯೇ ನೀರಿನ ಸಮಸ್ಯೆ ಎದುರಾದರೆ, ನಾವು ಲೆಕ್ಕಾಚಾರ ಮಾಡಿಲ್ಲ ಎನ್ನಬೇಕು.

     ನಮ್ಮ ಮನೆ ಚಾವಣಿ ಮತ್ತು ಮನೆಯಂಗಳದಲ್ಲಿ ಎಷ್ಟು ಮಳೆನೀರು ಬೀಳುತ್ತದೆಂದು ಸುಲಭವಾಗಿ ಲೆಕ್ಕ ಹಾಕಬಹುದು. ಒಂದು ಚದರ ಮೀಟರ್ ಜಾಗದ ಮೇಲೆ ಒಂದು ಮಿಲಿಮೀಟರ್ ಮಳೆ ಸುರಿದರೆ, ಸಿಗುವ ನೀರು ಒಂದು ಲೀಟರ್. ಅಂದರೆ, ನಮ್ಮ ಊರಿನ ವಾರ್ಷಿಕ ಸರಾಸರಿ ಮಳೆ ಎಷ್ಟು ಮಿಮೀ ಇದೆಯೂ, ಅಷ್ಟು ಲೀಟರ್ ನೀರು ನಮ್ಮ ಪ್ರತಿ ಚ.ಮೀ. ಜಾಗದ ಮೇಲೆ ಸುರಿಯುತ್ತದೆ. ಈ ಸೂತ್ರ ಬಳಸಿದರೆ, ೧೫೦ ಚ.ಮೀ. ಚಾವಣಿಯ ಮೇಲೆ ಒಂದು ವರುಷದಲ್ಲಿ ಸುರಿಯುವ ಮಳೆ ೧೫೦ * ೪೦೦೦ ಅಂದರೆ ೬ ಲಕ್ಷ ಲೀಟರು. (ನಿಮ್ಮ ಮನೆ ಸೈಟಿನ ಮೇಲೆ  ಒಂದು ವರುಷದಲ್ಲಿ ಸುರಿಯುವ ಮಳೆ ನೀರು ಎಷ್ಟು? ನೀವೇ ಲೆಕ್ಕ ಮಾಡಿ. ನಿಮಗೊಂದು ಸೂಚನೆ: ಒಂದು ಸೆಂಟ್ಸ್ ಅಂದರೆ ೪೦ ಚ.ಮೀ.)

Pages