HRM
ಸ್ವಾಮಿ ವಿವೇಕಾನಂದ ಕೆಲವೇ ದಿನಗಳಲ್ಲಿ ಹಿಂದು ಧರ್ಮದ ಪ್ರಚಾರಕ್ಕಾಗಿ ಮೊದಲ ಬಾರಿ ವಿದೇಶಕ್ಕೆ ಪ್ರಯಾಣಿಸಲಿದ್ದರು. ಹೊರಡುವ ಮುಂಚಿನ ದಿನ, ಅವರ ತಾಯಿ ಸ್ವಾಮಿ ವಿವೇಕಾನಂದರಿಗೆ ಹಣ್ಣು ಮತ್ತು ಚೂರಿ ಕೊಟ್ಟರು.
ಸ್ವಾಮಿ ವಿವೇಕಾನಂದರು ಹಣ್ಣು ತಿಂದಾದ ನಂತರ ಅವರ ತಾಯಿ, "ಆ ಚೂರಿ ಇತ್ತ ಕೊಡು” ಎಂದು ಕೇಳಿದರು. ಸ್ವಾಮಿ ವಿವೇಕಾನಂದರು ತಾಯಿಗೆ ಚೂರಿ ಕೊಟ್ಟರು. ಆಗ ಅವರ ತಾಯಿ ಶಾಂತ ಭಾವದಲ್ಲಿ ಹೇಳಿದರು, “ನೀನು ನನ್ನ ಪರೀಕ್ಷೆಯಲ್ಲಿ ಉತ್ತೀರ್ಣನಾಗಿದ್ದಿ. ನಿನ್ನ ವಿದೇಶ ಪ್ರವಾಸಕ್ಕೆ ಈಗ ನನ್ನ ಆಶೀರ್ವಾದ ಇದೆ.” ಸ್ವಾಮಿ ವಿವೇಕಾನಂದರಿಗೆ ಆಶ್ಚರ್ಯವಾಯಿತು. “ಅಮ್ಮಾ, ನೀವು ನನ್ನನ್ನು ಹೇಗೆ ಪರೀಕ್ಷೆ ಮಾಡಿದಿರಿ?" ಎಂದು ಕೇಳಿದರು.
ಅವರ ಅಮ್ಮ ಹೀಗೆ ಉತ್ತರಿಸಿದರು: "ನಾನು ಚೂರಿಯನ್ನು ವಾಪಾಸು ಕೇಳಿದಾಗ, ನೀನು ಅದರ ಹರಿತವಾದ ಅಲಗನ್ನು ನಿನ್ನ ಕೈಯಲ್ಲಿ ಹಿಡಿದುಕೊಂಡು, ಅದರ ಹಿಡಿಕೆಯನ್ನು ನನ್ನ ಕಡೆಗೆ ಚಾಚಿದೆ. ಚೂರಿಯ ಹರಿತವಾದ ಅಲಗು ನನ್ನ ಕೈಗೆ ತಗಲಿ ಗಾಯವಾಗದಂತೆ ನೀನು ಎಚ್ಚರ ವಹಿಸಿದೆ. ಇನ್ನೊಬ್ಬರ ಬಗ್ಗೆ ಕಾಳಜಿ ತೋರುವವನಿಗೆ ಜಗತ್ತಿಗೆ ಉಪದೇಶ ನೀಡುವ ಅಧಿಕಾರವಿರುತ್ತದೆ. ಇದುವೇ ನಿನ್ನ ಪರೀಕ್ಷೆಯಾಗಿತ್ತು." ಅಂತಹ ಸ್ವಾಮಿ ವಿವೇಕಾನಂದರು ಇನ್ನೊಬ್ಬರ ಬಗ್ಗೆ ಕಾಳಜಿ ತೋರಬೇಕೆಂದು ಸಾವಿರಾರು ಜನರಿಗೆ ಪ್ರೇರಣೆ ನೀಡಿದ್ದರಲ್ಲಿ ಅಚ್ಚರಿಯಿಲ್ಲ.
ಒಬ್ಬ ಸನ್ಯಾಸಿ ಇಬ್ಬರು ಶಿಷ್ಯರೊಂದಿಗೆ ಕಾಡಿನಲ್ಲಿ ನಡೆದು ಹೋಗುತ್ತಿದ್ದ. ಅವರೊಂದು ನೇರಳೆ ಮರದ ಬಳಿ ಬಂದರು. ಅದನ್ನು ಶಿಷ್ಯರಿಗೆ ತೋರಿಸುತ್ತಾ ಸನ್ಯಾಸಿ ಕೇಳಿದ, “ಈ ಮರದ ಬಗ್ಗೆ ನಿಮಗೆ ಏನು ಅನಿಸುತ್ತದೆ?”
ಒಬ್ಬ ಶಿಷ್ಯ ಉತ್ತರಿಸಿದ, “ಈ ನೇರಳೆ ಮರ ಯಾರಿಗೂ ಉಪಕಾರ ಮಾಡುವುದಿಲ್ಲ. ಜನರು ಕಲ್ಲು ಎಸೆದರೆ ಅಥವಾ ಉದ್ದದ ಕೋಲುಗಳಿಂದ ಹೊಡೆದರೆ ಮಾತ್ರ ಇದು ಹಣ್ಣುಗಳನ್ನು ಕೊಡುತ್ತದೆ.” ಆಗ ಇನ್ನೊಬ್ಬ ಶಿಷ್ಯ ಉತ್ತರಿಸಿದ, “ಇದು ಬಹಳ ಒಳ್ಳೆಯ ಮರ. ಜನರು ಕಲ್ಲುಗಳನ್ನು ಎಸೆದು, ಕೋಲುಗಳಿಂದ ಹೊಡೆದು ಹಿಂಸೆ ಮಾಡಿದರೂ ಇದು ಸಿಹಿಯಾದ ರಸಭರಿತ ಹಣ್ಣುಗಳನ್ನು ಕೊಡುತ್ತದೆ. ನಾವು ಜೀವನವನ್ನು ಹೇಗೆ ಎದುರಿಸಬೇಕು ಅನ್ನೋದನ್ನು ನಮಗೆ ಈ ಮರ ಕಲಿಸುತ್ತದೆ."
ಸನ್ಯಾಸಿ ಮುಗುಳ್ನಕ್ಕರು. ಮೊದಲನೇ ಶಿಷ್ಯ ಉಪಕಾರಿ ಮರದ ಬಗ್ಗೆ ನಕಾರಾತ್ಮಕವಾಗಿ ಮಾತನಾಡಿದರೂ ಎರಡನೇ ಶಿಷ್ಯ ಅದರಿಂದ ಪ್ರಭಾವಿತನಾಗಲಿಲ್ಲ ಎಂಬುದನ್ನು ಅವರು ಗಮನಿಸಿದರು. ಆ ಮರದ ಬಗ್ಗೆ ಎರಡನೇ ಶಿಷ್ಯನ ಸಕಾರಾತ್ಮಕ ಮಾತುಗಳನ್ನು ಅವರು ಮೆಚ್ಚಿಕೊಂಡರು ಎಂಬುದನ್ನು ಅವರ ಮುಗುಳ್ನಗುವೇ ಸೂಚಿಸಿತು. ಎರಡನೇ ಶಿಷ್ಯನ ಬೆನ್ನು ತಟ್ಟುತ್ತಾ, “ಬನ್ನಿ ಹೋಗೋಣ" ಎಂದು ಅವರು ಮುಂದಕ್ಕೆ ನಡೆದರು.
ರಾಜನೊಬ್ಬ ಬೇಟೆಯಾಡಲು ಕಾಡಿಗೆ ಹೋದ. ಕಾಡಿನಲ್ಲಿ ಜಿಂಕೆಯೊಂದನ್ನು ಕಂಡು ಅದನ್ನು ಬೆನ್ನಟ್ಟಿದ. ಜಿಂಕೆ ವೇಗವಾಗಿ ಓಡುತ್ತಿತ್ತು. ಅದರ ಹಿಂದೆಯೇ ಸಾಗಿದ ರಾಜ. ಪ್ರಾಣಿಗಳನ್ನು ಹಿಡಿಯಲಿಕ್ಕಾಗಿ ಬೇಟೆಗಾರರು ಮಾಡಿದ್ದ ಬಲಿಹೊಂಡವನ್ನು ಅವನು ಗಮನಿಸಲೇ ಇಲ್ಲ. ಮರದ ಕೊಂಬೆಗಳು ಮತ್ತು ಹುಲ್ಲಿನಿಂದ ಮುಚ್ಚಿದ್ದ ಆಳವಾದ ಹೊಂಡದೊಳಗೆ ಬಿದ್ದ ರಾಜ.
ಬೆದರಿ ಕಂಗಾಲಾದ ರಾಜ ಬೊಬ್ಬೆ ಹೊಡೆಯತೊಡಗಿದ, “ಸಹಾಯ ಮಾಡಿ, ಯಾರಾದರೂ ಸಹಾಯ ಮಾಡಿ." ರಾಜನ ಬೊಬ್ಬೆ ಕೇಳಿ, ಇಪ್ಪತ್ತು ಅಡಿ ಮುಂದಕ್ಕಿದ್ದ ಜಿಂಕೆ ತನ್ನ ಓಟ ನಿಲ್ಲಿಸಿ, ಹಿಂತಿರುಗಿ ನೋಡಿತು. ಅದು ಆ ಹೊಂಡದ ಹತ್ತಿರ ಬಂದು, ಒಳಕ್ಕೆ ಇಣುಕಿ ನೋಡಿತು. ಅದಕ್ಕೆ ರಾಜನ ಬಗ್ಗೆ ಕರುಣೆ ಮೂಡಿತು. ಅದು ಒಂದು ಬಿರುಸಾದ ಬಳ್ಳಿಯನ್ನು ಕತ್ತರಿಸಿ ತಂದಿತು. ಅದರ ಒಂದು ತುದಿಯನ್ನು ಬಾಯಿಯಲ್ಲಿ ಕಚ್ಚಿ ಹಿಡಿದು, ಇನ್ನೊಂದು ತುದಿಯನ್ನು ಹೊಂಡದೊಳಗೆ ತಳ್ಳಿತು. ಅದನ್ನು ಕಂಡ ರಾಜ, ಬಳ್ಳಿಯನ್ನು ಬಲವಾಗಿ ಹಿಡಿದು, ಹೊಂಡದಿಂದ ಮೇಲೇರತೊಡಗಿದ.
ಅಂತೂ ಬಹಳ ಹೆಣಗಾಡಿ ರಾಜ ಹೊಂಡದಿಂದ ಹೊರಕ್ಕೆ ಬಂದ. ತನ್ನ ಪ್ರಾಣ ಉಳಿಸಿದ ಜಿಂಕೆಯನ್ನು ಕಣ್ತುಂಬ ನೋಡಿದ. ತಾನು ಅದನ್ನು ಕೊಲ್ಲಲೇ ಬೇಕೆಂದು ಅದರ ಬೆನ್ನಟ್ಟಿದ್ದು ನೆನಪಾಗಿ ಅವನಿಗೆ ನಾಚಿಕೆಯಾಯಿತು. ಅನಂತರ ಅವನು ಯಾವತ್ತೂ ಬೇಟೆಯಾಡಲಿಲ್ಲ.
ಜೇಮ್ಸನ ತಂದೆಗೆ ನೂರೆಕ್ರೆ ಜಮೀನಿತ್ತು. ಅವರು “ಜೇಮ್ಸ್, ನೀನು ನಮ್ಮ ಜಮೀನಿನಲ್ಲಿ ಕೆಲಸ ಮಾಡಬೇಕು. ಒಂದು ದಿನ ಅದನ್ನೆಲ್ಲ ನೀನೇ ನೋಡಿಕೊಳ್ಳಬೇಕಾಗುತ್ತದೆ" ಎಂದು ಹೇಳುತ್ತಲೇ ಇದ್ದರು.
ಆದರೆ ಜೇಮ್ಸನಿಗೆ ಜಮೀನಿನಲ್ಲಿ ಕೆಲಸ ಮಾಡಲು ಸ್ವಲ್ಪವೂ ಆಸಕ್ತಿ ಇರಲಿಲ್ಲ. ಅವನ ತಂದೆ “ಜೇಮ್ಸ್, ನನ್ನ ಟ್ರಾಕ್ಟರಿನ ಚಕ್ರ ಹಾಳಾಗಿದೆ. ರಿಪೇರಿ ಮಾಡುತ್ತೀಯಾ?” ಎಂದಾಗೆಲ್ಲ ಬಹಳ ಉತ್ಸಾಹದಿಂದ ಅದನ್ನು ರಿಪೇರಿ ಮಾಡುತ್ತಿದ್ದ. ಅದೊಂದು ದಿನ ತಂದೆಯ ಬಳಿ ಜೇಮ್ಸ್ ಹೇಳಿದ, “ಅಪ್ಪಾ, ಕಾರು, ಟ್ರಾಕ್ಟರ್, ಸೈಕಲ್ ಹಾಳಾದಾಗ ಅವನ್ನು ರಿಪೇರಿ ಮಾಡೋದೆಂದರೆ ನನಗೆ ಬಹಳ ಇಷ್ಟ." ಇದನ್ನು ಕೇಳಿ ಅವನ ತಂದೆಗೆ ಬಹಳ ಅಸಮಾಧಾನವಾಯಿತು. ಅವರು ಹೇಳಿದರು, “ಜೇಮ್ಸ್, ಕೃಷಿ ನಮ್ಮ ಕುಟುಂಬದ ವೃತ್ತಿ. ನೀನು ಅದನ್ನು ಬಿಟ್ಟು ಮೆಕ್ಯಾನಿಕ್ ಆಗುತ್ತೀಯಾ? ಹೀಗಾದರೆ ನೀನು ಜೀವನದಲ್ಲಿ ಏನೂ ಸಾಧಿಸೋದಿಲ್ಲ.”
ಅನಂತರ ಆ ಬಗ್ಗೆ ಜೇಮ್ಸ್ ತಂದೆಯ ಬಳಿ ಮಾತನಾಡಲಿಲ್ಲ. ಶಾಲೆಯಲ್ಲಿ ಅವನು ವಿಜ್ನಾನದ ವಿಷಯಗಳನ್ನು ಬಹಳ ಆಸಕ್ತಿಯಿಂದ ಕಲಿತ. ಶಾಲೆಯ ಅವಧಿ ಮುಗಿದ ನಂತರ ಪ್ರತಿ ದಿನವೂ ಒಂದು ಗ್ಯಾರೇಜಿನಲ್ಲಿ ವಾಹನಗಳನ್ನು ರಿಪೇರಿ ಮಾಡೋದನ್ನು ಕಲಿಯುತ್ತಿದ್ದ. ವರುಷಗಳು ದಾಟಿದವು.
ಜೇಮ್ಸ್ ಪದವೀಧರನಾದ. ಒಂದು ಪ್ರಸಿದ್ಧ ವಿಮಾನ ಉತ್ಪಾದನಾ ಕಂಪೆನಿಯನ್ನು ಸೇರಿ, ಅತ್ಯುತ್ತಮ ವಿಮಾನ ವಿನ್ಯಾಸ ಇಂಜಿನಿಯರ್ ಎಂದು ಹೆಸರು ಗಳಿಸಿದ. ಆಗ ಅವನ ತಂದೆ ಮಗನನ್ನು ಅಪ್ಪಿಕೊಂಡು ಅಭಿಮಾನದಿಂದ ಹೇಳಿದರು, “ಜೇಮ್ಸ್, ನಮ್ಮ ಮಹದಾಶೆಯನ್ನು ಸಾಧಿಸಲಿಕ್ಕಾಗಿ ನಾವು ಶ್ರಮಿಸಿದರೆ ಒಂದಲ್ಲ ಒಂದು ದಿನ ಯಶಸ್ವಿ ಆಗುತ್ತೇವೆ ಎಂದು ನೀನು ತೋರಿಸಿ ಕೊಟ್ಟಿದ್ದಿ.”
ನಮಿತಾಳಿಗೆ ಮನೆಯ ಹತ್ತಿರದ ಹೂವಿನ ಅಂಗಡಿಯಲ್ಲಿರುವ ಹೂಗಳನ್ನು ನೋಡುವುದೆಂದರೆ ಪಂಚಪ್ರಾಣ. ಅದೊಂದು ದಿನ ಅವಳು ಸಂಕಲ್ಪ ಮಾಡಿದಳು: "ನಾನು ಹೂಗಳನ್ನು ಬೆಳೆಸುತ್ತೇನೆ.”
ಅವಳು ಅಮ್ಮನೊಂದಿಗೆ ಪೇಟೆಗೆ ಹೋಗಿ ಹೂವಿನ ಬೀಜ ತಂದಳು. "ಹೂವಿನ ಕೃಷಿ” ಎಂಬ ಪುಸ್ತಕ ತಂದು ಓದಿದಳು. ವಾರಾಂತ್ಯದಲ್ಲಿ ಅವಳು ಮಣ್ಣಿನಲ್ಲಿ ಪುಟ್ಟ ಹೊಂಡಗಳನ್ನು ಮಾಡಿ ಹೂವಿನ ಬೀಜಗಳನ್ನು ಬಿತ್ತಿದಳು. ಬೀಜಗಳಿಗೆ ದಿನ ಬಿಟ್ಟು ದಿನ ನೀರೆರೆದಳು. ವಾರಕ್ಕೊಮ್ಮೆ ಗೊಬ್ಬರವನ್ನೂ ಹಾಕಿದಳು. ಎರಡು ವಾರಗಳಾದರೂ ಬೀಜಗಳಿಂದ ಸಸಿಗಳು ಹುಟ್ಟಲಿಲ್ಲ.
“ಸಸಿಗಳೇ ಹುಟ್ಟಿಲ್ಲ. ಇನ್ನು ಹೂಗಳು ಅರಳುವುದು ಹೇಗೆ?” ಎಂದು ಅವಳು ಪ್ರತಿ ದಿನವೂ ಚಿಂತೆ ಮಾಡುತ್ತಿದ್ದಳು. “ಅಮ್ಮ, ಹೂಗಳು ಯಾಕೆ ಅರಳುತ್ತಿಲ್ಲ” ಎಂದು ಅಮ್ಮನ ಬಳಿ ದಿನದಿನವೂ ನಮಿತಾಳ ಪ್ರಶ್ನೆ. “ಪ್ರತಿ ದಿನವೂ ತಪ್ಪದೆ ಬೀಜಗಳಿಗೆ ನೀರು ಹಾಕುತ್ತಿರು. ಗೊಬ್ಬರವನ್ನೂ ಹಾಕುತ್ತಿರು. ಒಂದು ದಿನ ನಿನಗೆ ಹೂಗಳು ಸಿಕ್ಕಿಯೇ ಸಿಗುತ್ತವೆ” ಎಂದು ಅಮ್ಮ ಉತ್ತರಿಸುತ್ತಿದ್ದಳು.
ಕ್ರಮೇಣ ಬೀಜಗಳಿಂದ ಪುಟ್ಟ ಸಸಿಗಳು ಮೊಳೆತು ಬೆಳೆದವು. ದಿನದಿಂದ ದಿನಕ್ಕೆ ಹೂವಿನ ಸಸಿಗಳು ದೊಡ್ಡದಾದವು. ಒಂದು ತಿಂಗಳಾಗುವಾಗ ಸಸಿಗಳಲ್ಲಿ ಮೊಗ್ಗುಗಳು ಮೂಡಿದವು. ಅವತ್ತು ನಮಿತಾಳ ಹುಟ್ಟುಹಬ್ಬ. ಆ ದಿನ ಬೆಳಗ್ಗೆ ಎದ್ದು ಹೂವಿನ ಸಸಿಗಳ ಹತ್ತಿರ ಹೋದ ನಮಿತಾಳಿಗೆ ಖುಷಿಯೋ ಖುಷಿ. ಯಾಕೆಂದರೆ ಅವಳಿಗೆ ಅಮೋಘವಾದ ಹುಟ್ಟುಹಬ್ಬದ ಉಡುಗೊರೆ ಲಭಿಸಿತ್ತು: ಅವಳೇ ಬೆಳೆಸಿದ ಹೂಗಳು!
ಅವತ್ತು ಹನ್ನೊಂದು ವರುಷ ವಯಸ್ಸಿನ ಕೈಲಾಶನ ಹುಟ್ಟುಹಬ್ಬ. “ಅಪ್ಪಾ, ನಾನು ಮತ್ತು ನಂದೀಶ ಜೊತೆಯಾಗಿ ಹೋಗಿ ಒಂದು ಫಿಲ್ಮ್ ನೋಡಿ, ಹೋಟೆಲಿನಲ್ಲಿ ತಿಂದು ಮನೆಗೆ ಬರುತ್ತೇವೆ” ಎಂದು ತಂದೆಗೆ ತಿಳಿಸಿ ಮನೆಯಿಂದ ಹೊರಟ ಕೈಲಾಶ್.
ತನ್ನ ಹುಟ್ಟುಹಬ್ಬವನ್ನು ವಿಶೇಷ ರೀತಿಯಲ್ಲಿ ಆಚರಿಸಬೇಕು ಎಂಬುದು ಕೈಲಾಶನ ಆಶೆ. ಕೇಕ್ ಕತ್ತರಿಸುವುದು, ಉರಿಯುವ ಮೊಂಬತ್ತಿಗಳನ್ನು ಊದಿ ಆರಿಸುವುದು - ಇವೆಲ್ಲ ಅವನಿಗೆ ಇಷ್ಟವಿಲ್ಲ. ಹಾಗಾಗಿ ಫಿಲ್ಮ್ ನೋಡಿದ ನಂತರ ಹತ್ತಿರದ ಹೋಟೆಲಿಗೆ ಗೆಳೆಯ ನಂದೀಶನ ಜೊತೆ ಹೋದ ಕೈಲಾಶ್. ಹಾದಿಯಲ್ಲಿ ಫ್ಲೈಓವರಿನ ಬುಡದಲ್ಲಿ ಏಳು ವರುಷದ ಬಾಲಕನೊಬ್ಬನನ್ನು ಅವನು ನೋಡಿದ. ಆ ಬಾಲಕನ ಬಟ್ಟೆ ಕೊಳಕಾಗಿತ್ತು; ಮುಖ ಬಾಡಿತ್ತು. ಅವನು ಚಳಿಯಿಂದ ನಡುಗುತ್ತಿದ್ದ.
ಕೈಲಾಶನಿಗೆ ಅದೇನು ಅನಿಸಿತೋ! ಆ ಬಾಲಕನ ಬಳಿ ಏನಾಯಿತೆಂದು ಕೇಳಿದ. ತಾನು ಮನೆಯ ದಾರಿ ತಪ್ಪಿ ಕಂಗಾಲಾಗಿದ್ದೇನೆ ಎಂದು ತಿಳಿಸಿದ ಬಾಲಕ. ಕೈಲಾಶನಿಗೆ ಅವನ ಬಗ್ಗೆ ಕರುಣೆ ಮೂಡಿತು. “ನಂದೀಶ, ಇವನೂ ನಮ್ಮ ಜೊತೆ ಹೋಟೆಲಿಗೆ ಬರಲಿ” ಎನ್ನುತ್ತಾ ಕೈಲಾಶ ಆ ಬಾಲಕನನ್ನೂ ಹೋಟೆಲಿಗೆ ಕರೆದೊಯ್ದ. ಅವರೆಲ್ಲರೂ ಹೊಟ್ಟೆ ತುಂಬಾ ತಿಂದರು.
ಅನಂತರ, ಆ ಬಾಲಕನ ಮನೆ ಹುಡುಕಿ, ಅವನನ್ನು ಮನೆಗೆ ತಲಪಿಸಿದರು ಕೈಲಾಶ್ ಮತ್ತು ನಂದೀಶ. ಆ ಬಾಲಕನದು ತೀರಾ ಬಡ ಕುಟುಂಬ. ಅವನ ತಾಯಿ ಮಗನನ್ನು ಕಂಡು ಆನಂದಬಾಷ್ಪ ಸುರಿಸಿದಳು. ಕೈಲಾಶ್ ಮತ್ತು ನಂದೀಶನಿಗೆ ಮನದಾಳದಿಂದ ಕೃತಜ್ನತೆ ಅರ್ಪಿಸಿದಳು. ಬೀಳ್ಗೊಡುವಾಗ ಕೈಲಾಶ್ ತನ್ನ ಹೊಸ ಜಾಕೆಟನ್ನು ತೆಗೆದು ಆ ಬಾಲಕನಿಗಿತ್ತ.
"ಇವತ್ತಿನ ಹುಟ್ಟುಹಬ್ಬ ಎಂದಿಗೂ ಮರೆಯಲಾಗದ್ದು” ಎಂದು ನಂದೀಶನ ಬಳಿ ಹೇಳುತ್ತಾ ಅಲ್ಲಿಂದ ಹೊರಟ ಕೈಲಾಶ್.
ದಯಾನಂದ ಶಾಲೆಯಿಂದ ಹಿಂತಿರುಗುವಾದ ಬಹಳ ಬೇಸರದಲ್ಲಿದ್ದ. ಅವನ ಮುಖ ನೋಡಿದ ಅಮ್ಮ ಕೇಳಿದರು, "ಏನಾಯಿತು ದಯಾನಂದ್?” “ಇವತ್ತು ರಮಾಕಾಂತ ಶಾಲೆಯಲ್ಲಿ ತಿನ್ನಲಿಕ್ಕಾಗಿ ಮೈಸೂರು ಪಾಕ್ ತಂದಿದ್ದ. ಅದನ್ನು ಅಂಗಡಿಯಿಂದ ತರಬೇಕಾದರೆ ಬಹಳ ದುಡ್ಡು ಬೇಕಂತೆ. ನೀನಂತೂ ನನಗೆ ಅದನ್ನು ತೆಗೆಸಿಕೊಡೋದಿಲ್ಲ. ಆದರೆ, ಅದನ್ನು ತಿನ್ನಬೇಕಂತ ನನಗೆ ಬಹಳ ಆಸೆ ಆಗ್ತಿದೆ” ಎಂದು ಹೇಳುವಷ್ಟರಲ್ಲಿ ದಯಾನಂದನ ಕಣ್ಣಿನಲ್ಲಿ ನೀರು ಬಂತು.
“ಅಯ್ಯೋ, ಇಷ್ಟಕ್ಕೆ ಯಾರಾದ್ರೂ ಅಳ್ತಾರಾ?” ಎಂದು ಹೇಳಿದರು ಅವನ ಅಮ್ಮ. "ಹಾಗಂದ್ರೆ? ನನಗೆ ಅದು ಬೇಕೇ ಬೇಕು” ಎಂದು ಸಿಟ್ಟಿನಿಂದ ಹೇಳಿದ ದಯಾನಂದ. "ಅದಕ್ಕೇನಂತೆ? ಮೈಸೂರು ಪಾಕ್ ಮಾಡಿದ್ರಾಯಿತು" ಎಂದು ಉತ್ತರಿಸಿದರು ಅವನ ಅಮ್ಮ. ದಯಾನಂದ ಮತ್ತು ಅವನ ತಂಗಿ ಶಿಲ್ಪಾ ಕುಣಿದಾಡಿದರು.
ಅವರಿಬ್ಬರೂ ಅಮ್ಮನಿಗೆ ಸಹಾಯ ಮಾಡಿದರು. ಸಂಜೆಯಾಗುವಾಗ ಅವರ ಮನೆಯಲ್ಲಿ ಮೈಸೂರು ಪಾಕ್ ತಯಾರಾಯಿತು. ಅದು ರಮಾನಂದ ತಂದಿದ್ದ ಮೈಸೂರು ಪಾಕ್‌ನಂತೆಯೇ ಇರೋದನ್ನು ನೋಡಿ ದಯಾನಂದನಿಗೆ ಖುಷಿಯೋ ಖುಷಿ. ಸಂತೋಷ ತಡೆಯಲಾಗದೆ ಅವನು ಅಮ್ಮನಿಗೆ ಹೇಳಿದ: “ಅಮ್ಮ, ನೀನೆಷ್ಟು ಒಳ್ಳೆಯವಳು. ನಾವು ಏನನ್ನು ಬೇಕಾದರೂ ಮಾಡಲು ಸಾಧ್ಯ ಎಂದು ಇನ್ನೊಮ್ಮೆ ತೋರಿಸಿಕೊಟ್ಟಿದ್ದಿ.”
ಚಾರಿಣಿ ದೊಡ್ಡ ಮಳಿಗೆಗೆ ಅಮ್ಮನೊಂದಿಗೆ ಹೋಗಿದ್ದಳು. "ಚಾರಿಣಿ, ನೀನು ಸಿಕ್ಕಿದ್ದನ್ನೆಲ್ಲ ತಗೊಳ್ಳಬೇಡ. ಎರಡೇ ಎರಡು ವಸ್ತುಗಳನ್ನು ಮಾತ್ರ ತಗೋ" ಎಂದು ಎಚ್ಚರಿಸಿದರು ಅಮ್ಮ. ಚಾರಿಣಿಗೆ ಅಲ್ಲಿದ್ದ ಹೊಸ ಗೊಂಬೆಗಳನ್ನು ಮತ್ತು ಟೆಡ್ಡಿ ಬೇರ್ ಅನ್ನು ಖರೀದಿಸುವ ಆಶೆ. ಆಗಲೇ ಅಲ್ಲಿ ಚಾಕ್ಲೆಟ್‌ಗಳನ್ನೂ ಚಾರಿಣಿ ಕಂಡಳು. “ಚಾಕ್ಲೆಟ್ ತಗೊಳ್ಳಲು ಅಮ್ಮ ಬಿಡೋಡೇ ಇಲ್ಲ. ಆದರೇನಂತೆ? ನಾನು ಒಂದೆರಡು ಚಾಕ್ಲೆಟ್ ನನ್ನ ಜೋಬಿನಲ್ಲಿ ಇಟ್ಟು ಕೊಳ್ತೇನೆ. ಯಾರಿಗೂ ಗೊತ್ತಾಗೋದಿಲ್ಲ” ಎಂದು ಯೋಚಿಸಿದಳು ಚಾರಿಣಿ.
ಆಗ ಅವಳಿಗೆ ಹಿಂದಿನ ದಿನ ರಾತ್ರಿ ಪ್ರಾಮಾಣಿಕತೆ ಬಗ್ಗೆ ಅಪ್ಪ ಹೇಳಿದ್ದ ಕತೆ ನೆನಪಾಯಿತು. ಕತೆ ಕೇಳಿದ ನಂತರ ಚಾರಿಣಿ ಅಪ್ಪನಿಗೊಂದು ಪ್ರಶ್ನೆ ಕೇಳಿದ್ದಳು, “ಅಪ್ಪಾ, ಯಾರಾದರೂ ತಪ್ಪು ಕೆಲಸ ಮಾಡಿದಾಗ, ಅದನ್ನು ಯಾರೂ ನೋಡದಿದ್ದರೆ ಅವನಿಗೆ ಶಿಕ್ಷೆ ಆಗುತ್ತದೆಯಾ?” ಅದಕ್ಕೆ ಅಪ್ಪ ಉತ್ತರಿಸಿದ್ದರು, "ಚಾರಿಣಿ, ದೇವರು ಎಲ್ಲವನ್ನೂ ನೋಡುತ್ತಾ ಇರುತ್ತಾನೆ. ಅವನ ಕಣ್ಣು ತಪ್ಪಿಸಲು ಯಾರಿಗೂ ಸಾಧ್ಯವಿಲ್ಲ. ತಪ್ಪು ಕೆಲಸ ಮಾಡಿದಾಗ ದೇವರಿಗೂ ಗೊತ್ತಾಗುತ್ತದೆ ಮತ್ತು ಅದನ್ನು ಮಾಡಿದವನಿಗೂ ಗೊತ್ತಿರುತ್ತದೆ. ತನ್ನ ತಪ್ಪನ್ನು ಅವನು ಕ್ಷಣಕ್ಷಣವೂ ಅನುಭವಿಸಬೇಕಾಗುತ್ತದೆ.”
ತಕ್ಷಣವೇ ತಾನು ಚಾಕ್ಲೆಟ್ ಕಳ್ಳತನ ಮಾಡೋದಿಲ್ಲ ಎಂದು ಚಾರಿಣಿ ನಿರ್ಧರಿಸಿದಳು. ಹೊಸ ಗೊಂಬೆ ಮತ್ತು ಟೆಡ್ದಿ ಬೇರ್ ಅನ್ನು ತಗೊಂಡು ಅವಳು ಅಮ್ಮನ ಹತ್ತಿರ ಧಾವಿಸಿದಳು.
ಕುಮಾರ ಉತ್ಸಾಹದಿಂದ ಅಪ್ಪನೊಂದಿಗೆ ಮೀನು ಹಿಡಿಯಲು ಹೊರಟ. ಯಾಕೆಂದರೆ ಅವನು ಐವತ್ತು ಮೀನು ಹಿಡಿಯುತ್ತೇನೆಂದು ತನ್ನ ಹೈಸ್ಕೂಲ್ ಸಹಪಾಠಿಗಳೊಂದಿಗೆ ಪಂಥ ಕಟ್ಟಿದ್ದ. “ಅದೆಲ್ಲ ಸರಿ, ಆದರೆ ಅಷ್ಟು ಮೀನುಗಳನ್ನು ಏನು ಮಾಡುತ್ತಿ?” ಎಂದು ಅವನ ತಂದೆ ಪ್ರಶ್ನಿಸಿದರು.
ಕುಮಾರ “ನನಗೆ ಗೊತ್ತಿಲ್ಲ” ಎಂದು ಉತ್ತರಿಸಿದ. “ಇದು ನೀನು ಯೋಚಿಸಲೇ ಬೇಕಾದ ಸಂಗತಿ” ಎಂದರು ಅವನ ತಂದೆ. ಕುಮಾರ ಐವತ್ತಿಕ್ಕಿಂತ ಜಾಸ್ತಿ ಮೀನುಗಳನ್ನು ಹಿಡಿದ. ಆಗ ನಡು ಮಧ್ಯಾಹ್ನ ದಾಟಿತ್ತು. ಕುಮಾರನಿಗೆ ಸುಸ್ತಾಗಿತ್ತು.
ಸ್ವಲ್ಪ ಹೊತ್ತಿನಲ್ಲೇ ತಂದೆಯೊಂದಿಗೆ ಮನೆಗೆ ಹೊರಟ ಕುಮಾರ. ಬೆಳಗ್ಗೆಯಿಂದ ಹಿಡಿದಿದ್ದ ಮೀನುಗಳನ್ನು ಒಂದು ದೊಡ್ಡ ಬುಟ್ಟಿಯಲ್ಲಿ ಹಾಕಿದ್ದ. ಒಂದೇಟಿಗೆ ಆ ಬುಟ್ಟಿಯನ್ನೆತ್ತಿ ಹಿಡಿದಿದ್ದ ಎಲ್ಲ ಮೀನುಗಳನ್ನೂ ಕೆರೆಗೆ ಎಸೆದು ಬಿಟ್ಟ! ಅವನ ತಂದೆ ಅಚ್ಚರಿಯಿಂದ ನೋಡುತ್ತಿದ್ದಂತೆ ಕುಮಾರ ಹೇಳಿದ, “ಅಪ್ಪಾ, ನನಗೆ ಬೆಳಗ್ಗೆಯಿಂದ ಅಮ್ಮನ ನೆನಪಾಗುತ್ತಲೇ ಇದೆ. ಈ ಮೀನುಗಳೂ ಹಾಗೇ ಅಲ್ವಾ? ಅದಕ್ಕೆ ಅವನ್ನು ಪುನಃ ಕೆರೆಗೆ ಹಾಕಿದೆ." ಅನಂತರ ಕುಮಾರ ಯಾವತ್ತು ಅಂತಹ ಪಂಥ ಕಟ್ಟಲಿಲ್ಲ.
ರಾತ್ರಿ ಮಲಗುವ ಮುನ್ನ ಪ್ರದೀಪನ ತಂದೆ ತನ್ನೊಂದಿಗೆ ತಾನು ಮಾತನಾಡುತ್ತಿದ್ದರು. ಬಾಲಕ ಪ್ರದೀಪ ತಂದೆಯ ಬಳಿ ಕೇಳಿದ, “ಅಪ್ಪಾ, ಅದೇನು ನಿಮ್ಮೊಂದಿಗೆ ನೀವೇ ಮಾತನಾಡುತ್ತಿದ್ದೀರಿ?" ತಂದೆ ಉತ್ತರಿಸಿದರು, "ನಾನು ನನ್ನ ಹೃದಯಕ್ಕೊಂದು ಸಂದೇಶ ಕಳಿಸುತ್ತಿದ್ದೆ.”
“ಹೌದಾ! ಅದೇನು ಸಂದೇಶ? ನನಗೂ ಹೇಳಪ್ಪಾ" ಎಂದು ಒತ್ತಾಯಿಸಿದ ಪ್ರದೀಪ. ತಂದೆ ಹೀಗೆಂದರು, "ಪ್ರದೀಪ, ನನ್ನ ಆಫೀಸಿನಲ್ಲಿ ಸಹೋದ್ಯೋಗಿ ನನಗೆ ಇವತ್ತು ಅವಮಾನ ಮಾಡಿದ. ನಾಳೆ ಅವನೊಂದಿಗೆ ನಾನು ಹೇಗೆ ವರ್ತಿಸಬೇಕು ಅನ್ನೋದು ನನಗೆ ಗೊತ್ತಾಗ್ತಾ ಇಲ್ಲ. ಅದಕ್ಕಾಗಿ ನನಗೆ ಸರಿಯಾದ ದಾರಿ ತೋರಿಸಬೇಕೆಂದು ನನ್ನ ಹೃದಯವನ್ನು ಬೇಡಿಕೊಳ್ತಾ ಇದ್ದೇನೆ. ಅನಂತರ ನಿದ್ದೆ ಮಾಡ್ತೇನೆ. ಬೆಳಗ್ಗೆ ಎದ್ದಾಗ ನಾನು ಏನು ಮಾಡಬೇಕೆಂದು ನನಗೆ ನನ್ನ ಹೃದಯ ಹೇಳುತ್ತದೆ.”
“ಹೀಗೆ ಆದಾಗ ನೀನು ಏನು ಮಾಡಬೇಕೆಂದು ನಿನ್ನ ಹೃದಯಕ್ಕೆ ಅದು ಹೇಗೆ ಗೊತ್ತಾಗುತ್ತದೆ?” ಎಂದು ಕುತೂಹಲದಿಂದ ಪ್ರಶ್ನಿಸಿದ ಪ್ರದೀಪ. ಅವನ ತಂದೆ ನಿಧಾನವಾಗಿ ಉತ್ತರಿಸಿದರು: “ನೋಡು ಪ್ರದೀಪ. ಹೃದಯಕ್ಕೆ ಎಲ್ಲವೂ ಗೊತ್ತಿರುತ್ತದೆ. ಯಾವುದೇ ಕಷ್ಟದ ಪರಿಸ್ಥಿತಿಯಲ್ಲಿ, ಏನು ಮಾಡಬೇಕೆಂದು ನಮಗೆ ತೋಚದಿದ್ದಾಗ, ರಾತ್ರಿ ಮಲಗುವ ಮುನ್ನ ನಮ್ಮ ಹೃದಯಕ್ಕೆ ಸಕಾರಾತ್ಮಕ ಸಂದೇಶವೊಂದನ್ನು ಕಳಿಸಿದರೆ ಸಾಕು. ಮರುದಿನ ಬೆಳಗ್ಗೆ ಎದ್ದಾಗ, ನಿನ್ನ ಪ್ರಶ್ನೆಗೆ ಅದು ಉತ್ತರ ಕೊಟ್ಟೇ ಕೊಡುತ್ತದೆ. ನೀನು ನಂಬಿಕೆಯಿಂದ ಹೀಗೆ ಮಾಡಿದರೆ ಸಾಕು.” ತಂದೆಯ ಮಾತನ್ನು ಗಮನವಿಟ್ಟು ಕೇಳಿದ ಪ್ರದೀಪ, ತನ್ನ ಜೀವಮಾನವಿಡೀ ಅದನ್ನು ಶ್ರದ್ಧೆಯಿಂದ ಪಾಲಿಸಿದ.










