ಸಂತೋಷವಾಗಿರಿ, ಅದಕ್ಕಾಗಿ ಮುಖದಲ್ಲಿ ನಗುವಿರಲಿ

ಇದು ನಮಗೆಲ್ಲರಿಗೂ ಗೊತ್ತಿರುವ ಸಂಗತಿಯೇ ಆಗಿದೆ. ಇದರಲ್ಲಿ ಹೊಸತೇನಿದೆ? ಎಂದು ಕೇಳುತ್ತೀರಾ? ಇತ್ತೀಚೆಗಿನ ಸಂಶೋಧನೆಗಳು ಇದನ್ನು ಮಗದೊಮ್ಮೆ ಖಚಿತಪಡಿಸಿವೆ.

ಕಳೆದ ಎರಡು ದಶಕಗಳಲ್ಲಿಸಂತೋಷದ ಬದುಕುಕುರಿತ ಸಂಶೋಧನೆಗಳ ಸಂಖ್ಯೆಯಲ್ಲಿ ಆಗಿರುವ ಹೆಚ್ಚಳ ಗಣನೀಯ. ಇವುಗಳ ಫಲಿತಾಂಶಗಳು ಅಚ್ಚರಿಯ ಮತ್ತು ಕಣ್ಣು ತೆರೆಸುವ ಸಂಗತಿಗಳನ್ನು ಹೊರಗೆಡವಿವೆ.

 

ಯು.ಕೆ. (ಯುನೈಟೆಡ್ ಕಿಂಗ್‌ಡಮ್)ನಲ್ಲಿ ನಡೆಸಲಾದ ಸಂಶೋಧನೆಯಲ್ಲಿ ವಿದ್ಯುತ್-ಅಯಸ್ಕಾಂತೀಯ ಮೆದುಳು ಸ್ಕಾನ್‌ಗಳನ್ನು ಮತ್ತು ಹೃದಯ ಬಡಿತದ ಮೊನಿಟರುಗಳನ್ನು ಬಳಸಿದರು - ವಿವಿಧ ಚೋದನೆಗಳಿಂದ (ಸ್ಟಿಮುಲೈ) ಉಂಟಾಗುವಖುಷಿ" ಮೌಲ್ಯಮಾಪನ ಮಾಡಲಿಕ್ಕಾಗಿ. ಅಂದರೆ, ಸಂಶೋಧನೆಯಲ್ಲಿ ಭಾಗವಹಿಸಿದವರು ವಿವಿಧ ಸಂಗತಿಗಳನ್ನು ಕಾಣುವಂತೆ, ಕೇಳುವಂತೆ ಅಥವಾ ಬೇರೆಬೇರೆ ಚಟುವಟಿಕೆಗಳನ್ನು ಮಾಡುವಂತೆ ನಿರ್ದೇಶಿಸಿದರು

 

ಸಂಶೋಧನೆಯಲ್ಲಿ ಉಳಿದ ಎಲ್ಲವನ್ನೂ ಮೀರಿ, ಎದ್ದು ಕಾಣಿಸಿದ ಒಂದೇ ಒಂದು ಸಂಗತಿ: "ನಗುವುದು". ನಕ್ಕಾಗ ಭಾಗಿಗಳಿಗೆ ಒಂದೇ ಸಲ 2,000 ಚಾಕೋಲೇಟ್ ಬಾರ್-ಗಳನ್ನು ತಿಂದಷ್ಟು ಸಂತೋಷವಾಯಿತು. ಇದು ರೂಪಾಯಿ 80 ಲಕ್ಷ ಹಣ ಸ್ವೀಕರಿಸಿದ ಖುಷಿಗೆ ಸಮಾನವಾಗಿತ್ತು

 

ನಿಮ್ಮ ನಗು, ನಿಮ್ಮಲ್ಲಿ ಅದ್ಭುತ ಬದಲಾವಣೆಗಳನ್ನು ಉಂಟುಮಾಡುತ್ತದೆ. ಉದಾಹರಣೆಗೆ, ನೀವು ಖುಷಿಯಾಗಿ ಇಲ್ಲದಿದ್ದರೂ ನಿಮ್ಮ ನಗು ನಿಮ್ಮಲ್ಲಿ ಹಿತವಾದ ಭಾವ ಉಂಟುಮಾಡುತ್ತದೆ. ಮ್ಯುನಿಚಿನ ಎಕ್-ನಿಷೆ ವಿಶ್ವವಿದ್ಯಾಲಯ 2009ರಲ್ಲಿ ನಡೆಸಿದ ಸಂಶೋಧನೆ ಖಚಿತ ಪಡಿಸಿದ ಒಂದು ಸಂಗತಿ: ನಿಮ್ಮ ಈಗಿನ ಮೂಡ್ ಏನೇ ಆಗಿರಲಿ; ನೀವು ನಕ್ಕಾಗ ನಿಮ್ಮ ಮೆದುಳಿನಸಂತೋಷದ ನರಜಾಲಸಕ್ರಿಯವಾಗುತ್ತದೆ. ಅಂದರೆ, ನೀವು ನಿರುತ್ಸಾಹದಲ್ಲಿದ್ದಾಗ, ನಗುವುದರಿಂದಾಗಿ ನಿಮ್ಮ ಮೆದುಳುಖುಷಿಯ ಹಾರ್ಮೋನು"ಗಳನ್ನು ಉತ್ಪಾದಿಸುತ್ತದೆ. ಅದಕ್ಕಾಗಿಯೇನೀವು ಖುಷಿಯಾಗಿ ಇಲ್ಲದಿದ್ದರೂ, ಖುಷಿಯಾಗಿ ಇರುವಂತೆ ನಟಿಸಿದರೆ, ಕ್ರಮೇಣ ನಿಮ್ಮಲ್ಲಿ ಖುಷಿಯ ಭಾವ ತುಂಬುತ್ತದೆಎಂಬ ಸೂತ್ರ ಚಾಲ್ತಿಯಲ್ಲಿದೆ

 

ನಗು ನಿಮ್ಮ ಆಯುಷ್ಯವನ್ನೂ ಸೂಚಿಸುತ್ತದೆ ಎಂಬುದು ಇನ್ನೊಂದು ಸಂಶೋಧನೆಯ ಫಲಿತಾಂಶ. ಯುಎಸ್‌ಎ ದೇಶದ ಮಿಚಿಗನಿನ ಡೆಟ್ರಾಯ್ಟಿನ ವೇಯ್ನೆ ಸ್ಟೇಟ್ ವಿಶ್ವವಿದ್ಯಾಲಯದ ಸಂಶೋಧಕರು 1952ರಿಂದೀಚೆಗಿನ ಬೇಸ್‌ಬಾಲ್‌ನ ಪ್ರಧಾನ ಲೀಗ್ (ಸರಣಿ)ಗಳ ಆಟಗಾರರ ಫೋಟೋಗಳನ್ನು 2010ರಲ್ಲಿ ಪರಿಶೀಲಿಸಿದರು. ಅವರಿಗೆ ಕಂಡುಬಂದ ಸಂಗತಿ: ಬೇಸ್‌ಬಾಲ್ ಆಡುವಾಗ ನಗು ತೋರದಿದ್ದ ಆಟಗಾರರು ಸರಾಸರಿ 72.9 ವರುಷ ಬದುಕಿದರೆ, ಆಟದುದ್ದಕ್ಕೂ ನಗುತ್ತಿದ್ದ ಆಟಗಾರರು ಸರಾಸರಿ 79.9 ವರುಷ ಬದುಕಿದ್ದರು

 

ಯುನಿವರ್ಸಿಟಿ ಆಫ್ ಕ್ಯಾಲಿಫೋರ್ನಿಯಾ, ಬರ್ಕಲಿ, 30 ವರುಷ ಹಳೆಯ ವಾರ್ಷಿಕ ಸಂಚಿಕೆಯಲ್ಲಿದ್ದ ವಿದ್ಯಾರ್ಥಿಗಳ ಬಗ್ಗೆ ಅಧ್ಯಯನವೊಂದನ್ನು ನಡೆಸಿತು. ಅದಕ್ಕಾಗಿ, ಸುಖಸಂತೋಷದ ಪ್ರಮಾಣಕ (ಸ್ಟಾಂಡರ್ಡ್) ಪರೀಕ್ಷೆಗಳಲ್ಲಿ ಅವರ ಅಂಕಗಳು; ಇತರರ ದೃಷ್ಟಿಯಲ್ಲಿ ಅವರು ಎಷ್ಟು ಸ್ಫೂರ್ತಿದಾಯಕ ವ್ಯಕ್ತಿಗಳು (ಪ್ರತಿಯೊಬ್ಬರ ಸ್ಥಾನ); ಅವರ ವೈವಾಹಿಕ ಬದುಕು ಎಷ್ಟು ಆನಂದದಾಯಕವಾಗಿದೆ ಎಂಬುದರ ಸೂಚ್ಯಂಕ - ಇವೆಲ್ಲದರ ಅಂಕಗಳನ್ನು ಹೋಲಿಸಿದಾಗ ಹೊರಬಿದ್ದ ಫಲಿತಾಂಶ: ಇವೆಲ್ಲದರಲ್ಲಿಯೂ ಬಾಯ್ತುಂಬ ನಗುವ ವಿದ್ಯಾರ್ಥಿಗಳು ಗಳಿಸಿದಅಂಕಗಳುಗರಿಷ್ಠ

 

ಅಂತಿಮವಾಗಿ, ಸಂಶೋಧನೆಗಳು ತಿಳಿಸುವ ಸಂಗತಿ: ನೀವು ನಕ್ಕಾಗ ಇತರರಿಗೆ ಚೆನ್ನಾಗಿ ಕಾಣಿಸುತ್ತೀರಿ. ಅದಕ್ಕಾಗಿಯೇ, ಫೋಟೋ ತೆಗೆಯುವಾಗ, ಫೋಟೋಗ್ರಾಫರರುಸ್ಮೈಲ್ ಪ್ಲೀಸ್ಎನ್ನುತ್ತಿರುತ್ತಾರೆ. ನಿಮ್ಮ ನಗುವನ್ನು ಗಮನಿಸುವ ಇತರರಿಗೆ ನೀವುಇಷ್ಟದ ವ್ಯಕ್ತಿ"ಗಳಾಗಿ ಮತ್ತು ವಿನಯ ಸಂಪನ್ನರಾಗಿ ಕಾಣಿಸುತ್ತೀರಿ. ನಿಮ್ಮ ನಗುವಿನಿಂದ ಖುಷಿ ಪಡುವ ಇತರರು ನೀವು ಸಮರ್ಥ ವ್ಯಕ್ತಿಯೆಂದು ಭಾವಿಸುತ್ತಾರೆ. ಆದ್ದರಿಂದ, ನೀವು ತರಬೇತಿಗಳನ್ನು ನಡೆಸುವಾಗ, ಉಪನ್ಯಾಸ ನೀಡುವಾಗ ಮತ್ತು ಕಚೇರಿಯಲ್ಲಿ ವ್ಯವಹರಿಸುವಾಗ ನಗುವುದು ಬಹಳ ಮುಖ್ಯ

 

ಇದೆಲ್ಲ ಸರಿ, ನಗುವಿನ ವಿಚಾರದಲ್ಲಿ ನೀವು ಯಾವ ಗುಂಪಿಗೆ ಸೇರಲು ಬಯಸುತ್ತೀರಿ

-ನಮ್ಮಲ್ಲಿ ಶೇಕಡಾ 14 ಜನರು ದಿನದಲ್ಲಿ 5ಕ್ಕಿಂತ ಕಡಿಮೆ ಸಲ ನಗುತ್ತಾರೆ. ಗುಂಪಿಗೆ ಸೇರಲು ಯಾರೊಬ್ಬರೂ ಬಯಸುವುದಿಲ್ಲ

-ಶೇಕಡಾ 30 ಜನರು ದಿನದಲ್ಲಿ 20ಕ್ಕಿಂತ ಹೆಚ್ಚು ಸಲ ನಗುತ್ತಾರೆ. ಗುಂಪಿಗೆ ಸೇರಲು ಬಹುಪಾಲು ಜನರು ಬಯಸುತ್ತಾರೆ

-ಇನ್ನೊಂದು ಗುಂಪಿದೆ: ಗುಂಪಿನವರು ನಗುವುದರಲ್ಲಿ ಮುಂಚೂಣಿಯಲ್ಲಿರುತ್ತಾರೆ ಅಂದರೆ ದಿನದಲ್ಲಿ 400 ಸಲ ನಗುತ್ತಾರೆ. ಅವರೇ ಮಕ್ಕಳು

 

ಪ್ರಾಕೃತಿಕ ವಿಕೋಪಗಳಿಂದಾಗಿ, ರೋಗ ದಾಳಿಗಳಿಂದಾಗಿ, ಸಮಾಜದಲ್ಲಿ ತುಂಬಿರುವ ನಕಾರಾತ್ಮಕತೆಯಿಂದಾಗಿ ಮತ್ತು ವೈಯುಕ್ತಿಕ ಬದುಕಿನ ಸವಾಲುಗಳಿಂದಾಗಿ ಮುಖದಲ್ಲಿ ಮುಗಳ್ನಗು ಅರಳಿಸುವುದು ಸುಲಭವಲ್ಲ. ಆದರೂ, ಮುಖದಲ್ಲಿ ನಗುವಿರಬೇಕು. ಯಾಕೆಂದರೆ ನಗುವಿನ ಲಾಭಗಳು ಹಲವು: ನಿಮ್ಮ ನಗು ನೀವು ಖುಷಿಯಿಂದ ಇರಲು ಕಾರಣ; ನೀವು ಚೆನ್ನಾಗಿ ಕಾಣಲು ಕಾರಣ ಮತ್ತು ನಿಮ್ಮ ವೈವಾಹಿಕ ಬದುಕು ಆನಂದದಾಯಕವಾಗಿರಲು ಕಾರಣ

 

ಇವನ್ನೆಲ್ಲ ಮಾನ್ಯ ಡಿ.ವಿ. ಗುಂಡಪ್ಪನವರುಮಂಕುತಿಮ್ಮನ ಕಗ್ಗ ಮುಕ್ತಕವೊಂದರಲ್ಲಿ ಮನಮುಟ್ಟುವಂತೆ ಹೇಳಿದ್ದಾರೆ:

ನಗುವು ಸಹಜದ ಧರ್ಮ; ನಗಿಸುವುದು ಪರಧರ್ಮ

ನಗುವ ಕೇಳುತ ನಗುವುದತಿಶಯದ ಧರ್ಮ

ನಗುವ ನಗಿಸುವ ನಗಿಸಿ ನಗುತ ಬಾಳುವ ವರವ

ಮಿಗೆ ನೀನು ಬೇಡಿಕೊಳೊ - ಮಂಕುತಿಮ್ಮ