ಬದುಕು ಬದಲಿಸುವ ಅಂತರ್-ದರ್ಶನ

ನಾವು ಬೇರೆಯವರನ್ನೇ ನೋಡುತ್ತೇವೆ. ನಮ್ಮನ್ನು ನೋಡಿದ್ದೇವೆಯೇ? ನಾವು ಕಣ್ಣು ಮುಚ್ಚಿ ಕುಳಿತುಕೊಂಡಾಗ ಏನೇನೋ ಕಾಣಿಸುತ್ತದೆ. ನನ್ನೊಳಗಿರುವನಾನುಕಾಣಿಸುತ್ತದೆಯೇ

 

ನನ್ನೊಳಗೆ ನಾನು ಪ್ರವೇಶ ಮಾಡಿ, ನನ್ನನ್ನು ಅರ್ಥ ಮಾಡಿಕೊಳ್ಳುವುದೇ ಅಂತರ್-ದರ್ಶನ. ಗಮನಿಸಿ: ನಮಗೆ ಪ್ರತಿಯೊಬ್ಬರಿಗೂ ಎರಡು ಬದುಕು ಇದೆ: ಹೊರಗಿನ ಬದುಕು ಮತ್ತು ಒಳಗಿನ ಬದುಕು. ಒಳಗಿನ ಬದುಕನ್ನು ನೋಡುವುದೇ ಆಂತರ್-ದರ್ಶನ.

 

ನಾನು ಕಣ್ಣು ಮುಚ್ಚಿಕೊಂಡಾಗ ಏನು ಕಾಣಿಸುತ್ತದೆ? ನಕಾರಾತ್ಮಕತೆ ನುಗ್ಗಿ ಬರುತ್ತದೆ. ಅಂದರೆ, ನೋವುಗಳ, ಸಂಕಟಗಳ, ದುಃಖಗಳ, ಸೋಲುಗಳ, ಹತಾಶೆಗಳ ಮೆರವಣಿಗೆ. ಇದರಿಂದ ಹೊರಬರಬೇಕಾದರೆ, ಮೊದಲಾಗಿ ಸುಮ್ಮನಿರಲು ಕಲಿಯಬೇಕು. ಪ್ರತಿಯೊಬ್ಬರೂ ನಾನು ಅದಾಗಬೇಕು, ಇದಾಗಬೇಕು ಎಂದು ಒದ್ದಾಡುತ್ತಲೇ ಇದ್ದಾರೆ! ಅದು ಏನು ಬೇಕಾದರೂ ಆಗಲಿ, ನಾನು ಕೇವಲ ನನ್ನೊಳಗೆ ನಿರ್ಲಿಪ್ತವಾಗಿ ನೋಡುತ್ತೇನೆ ಅಂತ ಇದ್ದು ಬಿಡಬೇಕು. ನಾನು ಹೀಗೆ ನೋಡುತ್ತಿಲ್ಲ ಎಂದರೆ, ನಾನು ಯಾವುದರಲ್ಲೋ ತೊಡಗಿಸಿಕೊಂಡಿದ್ದೇನೆ ಎಂದರ್ಥ. ಹಾಗೆ ತೊಡಗಿಸಿಕೊಂಡರೆ, ನನ್ನೊಳಗೆ ನೋಡಲು ಸಾಧ್ಯವಿಲ್ಲ

 

ಆದ್ದರಿಂದ, ಈಗ ಶುರು ಮಾಡಿ - ಇನ್ನು ಮುಂದಿನ 24 ಗಂಟೆಗಳ ಅವಧಿ ನನ್ನೊಳಗಿನ ನನ್ನನ್ನು ನೋಡುತ್ತಾ ಇರುವ ವ್ರತವನ್ನು. ನಿಧಾನವಾಗಿ ನಿಮಗೆ ಅರಿವಾಗುತ್ತದೆ: ನೀವು ಶರೀರಕ್ಕೆ ಹೆಚ್ಚಿನ ಗಮನ ಕೊಡುತ್ತಾ, ಮನಸ್ಸನ್ನು ಸರಿ ಪಡಿಸಲು ಪ್ರಯತ್ನಿಸುತ್ತಿದ್ದೀರಿ ಎಂದು. ಅದರ ಬದಲಾಗಿ, ಮನಸ್ಸಿನ ಮೂಲಕ ಶರೀರವನ್ನು ಸರಿ ಪಡಿಸುವುದು ಉತ್ತಮ ವಿಧಾನ

 

ನೀವು ಪ್ರತೀ ಕ್ಷಣ ಎಲ್ಲವನ್ನೂ ನಿಮ್ಮ ಮೂಗಿನ ನೇರಕ್ಕೆ ವ್ಯಾಖ್ಯಾನ ಮಾಡುತ್ತಾ ಇರುತ್ತೀರಿ. ಉದಾಹರಣೆಗೆ, ಒಬ್ಬ ವ್ಯಕ್ತಿ ಹೆಂಡತಿ ಸರಿ ಇಲ್ಲ, ಮನೆ ಸರಿ ಇಲ್ಲ, ಊಟ ಸರಿ ಇಲ್ಲ ಎಂದೆಲ್ಲಾ ಗೊಣಗುಟ್ಟುತ್ತಲೇ ಇರುತ್ತಾನೆ. ಯಾವತ್ತಾದರೂ ತಾನು ಸರಿ ಇದ್ದೇನೆಯೇ ಎಂದು ಆತ ಪ್ರಶ್ನಿಸಿಕೊಳ್ಳುತ್ತಾನೆಯೇ? ಇಲ್ಲ. ಯಾಕೆಂದರೆ, ಆತ ಯಾವತ್ತೂ ತನ್ನೊಳಗೆ ಹೋಗಿ ತನ್ನನ್ನು ನೋಡಿಕೊಳ್ಳುವುದಿಲ್ಲ

 

ಇದರಿಂದ ಅರ್ಥ ಮಾಡಿಕೊಳ್ಳಬೇಕಾದ್ದು ಏನು? ನಿಮ್ಮ ಬದುಕು ನಿಮ್ಮ ವ್ಯಾಖ್ಯಾನಗಳಲ್ಲಿದೆ (ಇಂಟರ್-ಪ್ರಿಟೇಷನುಗಳಲ್ಲಿದೆ).  ಅದು ಪ್ರತಿ ಹೆಜ್ಜೆಗೆ ನಿಮಗೆ ದುಃಖವನ್ನೇ ಕೊಡುತ್ತದೆ. (ಅಪರೂಪಕ್ಕೊಮ್ಮೆ ಅದು ಸುಖ ಕೊಡಲೂ ಬಹುದು.) “ನಾನು ನೆಮ್ಮದಿಯಿಂದ ಇಲ್ಲಎಂಬುದೇ ನಿಮ್ಮ ವ್ಯಾಖ್ಯಾನವಾದರೆ, ನೆಮ್ಮದಿಗೆ ಅವಕಾಶ ಎಲ್ಲಿದೆ

 

ಎಲ್ಲವೂ ಚೆನ್ನಾಗಿದೆ. ಒಮ್ಮೆ ನಕ್ಕು ಬಿಡಿಎಂದರೆ ನಿಮ್ಮಲ್ಲಿ ಎಷ್ಟು ಜನರಿಗೆ ಮುಕ್ತವಾಗಿ ನಗಲು ಸಾಧ್ಯವಾಗುತ್ತದೆ? ಭಗವಂತ ನಿಮಗೆ ಸುಖವನ್ನೇ ಕೊಟ್ಟಿದ್ದಾನೆ ಎಂದು ಅಂದುಕೊಂಡರೆ ನಿಮ್ಮೊಳಗೆ ನಿರಾಳತೆ ತುಂಬಿಕೊಳ್ಳುತ್ತದೆ. ಅದರ ಬದಲಾಗಿ, ಭಗವಂತ ಕೊಟ್ಟದ್ದು ಎಲ್ಲವನ್ನೂ ದುಃಖ ಎಂದುಕೊಂಡರೆ, ನಿಮ್ಮ ಸುಖವನ್ನು ನೀವೇ ಕಳೆದುಕೊಂಡಂತೆ ಅಲ್ಲವೇ

 

ನಿಮ್ಮ ಮನಸ್ಸಿನಲ್ಲಿ ಏನೆಲ್ಲ ಅದುಮಿಟ್ಟಿದ್ದೀರಿ ಎಂದೊಮ್ಮೆ ಪರೀಕ್ಷೆ ಮಾಡಿಕೊಳ್ಳಿ. ಎಲ್ಲಿಯ ವರೆಗೆ ಅದನ್ನೆಲ್ಲ ಖಾಲಿ ಮಾಡಿಕೊಳ್ಳುವುದಿಲ್ಲವೋ ಅಲ್ಲಿಯ ವರೆಗೆ ಸುಖವಿಲ್ಲ ಎಂಬುದನ್ನು ಒಪ್ಪಿಕೊಳ್ಳಬೇಕಾಗುತ್ತದೆ. ಉದಾಹರಣೆಗೆ, ಮಂಗಳೂರಿನಲ್ಲೊಂದು ಸ್ವಂತ ಮನೆ ಮಾಡಬೇಕು ಎಂಬ ಯೋಚನೆ ನಿಮ್ಮಲ್ಲಿ ಮೂಡಿತು ಎಂದಿರಲಿ. ಅನಂತರ, ಕ್ಷಣಕ್ಷಣವೂ ಅದೇ ಯೋಚನೆ ಮನಸ್ಸಿನಲ್ಲಿ ನುಗ್ಗಿ ಬರುತ್ತದೆ. ಎಲ್ಲಿ ಸೈಟ್ ಖರೀದಿಸುವುದು? ಸ್ವಂತ ಮನೆಗಾಗಿ ಹಣ ಹೇಗೆ ಹೊಂದಿಸುವುದು? ತಲೆ ತುಂಬ ಇವೇ ಯೋಚನೆಗಳು. ಕ್ರಮೇಣ ಅದುವೇ ಮತ್ತೆಮತ್ತೆ ಕಾಡುವ ಚಿಂತೆಯಾಗಿ ಬೆಳೆಯುತ್ತದೆ

 

ಇನ್ನೊಂದು ಉದಾಹರಣೆ. ನಿಮಗೆ ಮಸಾಲೆ ದೋಸೆ ಎಂದರೆ ಬಹಳ ಆಸೆ. “ಇವತ್ತು ಹೊಟ್ಟೆ ತುಂಬಾ ಮಸಾಲೆ ದೋಸೆ ತಿನ್ನಬೇಕುಎಂಬ ಆಸೆಯಿಂದ ಹೋಟೆಲಿಗೆ ಹೋಗುತ್ತೀರಿ. ಮೊದಲನೆಯ ಮಸಾಲೆ ದೋಸೆ ತಿನ್ನುವಾಗ ಸುಖ ಅನಿಸುತ್ತದೆ. ಎರಡನೆಯದನ್ನು ತಿನ್ನುವಾಗ ಸಾಕು ಅನಿಸುತ್ತದೆ. ಮೂರನೆಯದನ್ನು ತಿನ್ನುವಾಗ ವಾಕರಿಕೆ ಬರುತ್ತದೆ! ಹೀಗೆ, ನಮ್ಮ ಬದುಕಿನಲ್ಲಿ ದುಃಖವನ್ನು ನಾವೇ ಹುಟ್ಟಿಸಿ, ದುಃಖದಲ್ಲೇ ಇರಲು ಬಯಸುತ್ತೇವೆ. ಸುಖ ಇದ್ದರೂ ನಮಗೆ ಅದನ್ನು ಅನುಭವಿಸಲಿಕ್ಕೆ ಆಗುತ್ತಿಲ್ಲ

 

ನಿಮ್ಮ ಮನಸ್ಸಿನಲ್ಲಿ ನಕಾರಾತ್ಮಕತೆ ತುಂಬಿಕೊಂಡಿದೆ. ಅದನ್ನು ಯಾವಾಗ ನೋಡಲು ಶುರು ಮಾಡುತ್ತೀರೋ ಆಗ ಅದು ಕರಗಿ ಹೋಗುತ್ತದೆ! ಯಾವುದೇ ಕೆಲಸ ಮಾಡುವಾಗ ಯಾವ ಉದ್ದೇಶದಿಂದ ಕೆಲಸ ಮಾಡುತ್ತಾ ಇದ್ದೀರಿ ಎಂಬುದನ್ನು ನಿಮ್ಮ ಮನಸ್ಸಿನ ಒಳ ಹೊಕ್ಕು ನೋಡಿಕೊಳ್ಳಿ. ಆಗ ಅದನ್ನು ನಿರಾಳವಾಗಿ, ಯಾವುದೇ ಒತ್ತಡವಿಲ್ಲದೆ ಮಾಡಲು ಸಾಧ್ಯವಾಗುತ್ತದೆ. ಗಮನಿಸಿ: ಯಾವುದೇ ಕೆಲಸದ ಮೂಲದಲ್ಲಿ ಏನೋ ಒಂದು ಚಡಪಡಿಕೆ ಇರುತ್ತದೆ. ಅದುವೇ ನಿಮಗೆ ಒಳ ಹೊಕ್ಕು ನೋಡಲು ಅಡ್ಡಿಯಾಗಿದೆ. ಅದನ್ನು ನಿವಾರಿಸಿಕೊಂಡು ನಿಮ್ಮೊಳಗೆ ನೋಡಲು ಶುರು ಮಾಡಬೇಕು.

 

ಇದುವೇ ಅಂತರ್-ದರ್ಶನ. ಇದು ಯಾಕೆ ಮುಖ್ಯವಾಗುತ್ತದೆ? ಪ್ರತಿಯೊಬ್ಬರೂ ಯಾವಾಗಲೂಬಿಜಿಆಗಿರುತ್ತಾರೆ. ಬೆಳಗ್ಗೆ ಎದ್ದಾಗಿನಿಂದ ರಾತ್ರಿ ಮಲಗುವ ತನಕಬಿಜಿ”. ಕ್ಷಣವೂ ಬಿಡುವಿಲ್ಲದಷ್ಟು ಕೆಲಸಗಳು. ನಾವೆಲ್ಲರೂ ಕೆಲಸ ಮಾಡುವುದರಲ್ಲೇ ಮುಳುಗಿದ್ದೇವೆ - ಅದು ಮಾಡಬೇಕು, ಇದು ಮಾಡಬೇಕು ಎಂಬ ನಿರಂತರ ಹಪಾಹಪಿ. ಇದರಿಂದ ಪಾರಾಗಬೇಕಾದರೆ, ನಮ್ಮೊಳಗೆ ನೋಡಲು ಶುರು ಮಾಡಲೇ ಬೇಕಾಗಿದೆ

 

ನಮ್ಮೊಳಗೆ ನೋಡಲುಕಲಿಯುವುದೇ ಅಂತರ್-ದರ್ಶನದ ಮೊದಲ ಹೆಜ್ಜೆ. ಪ್ರತಿಯೊಂದು ಕೆಲಸ ಮಾಡುವಾಗಲೂ, ಅದರಿಂದ (ಮಾನಸಿಕವಾಗಿ) ದೂರ ನಿಂತು, ನೀವು ಏನು ಮಾಡುತ್ತಿದ್ದೀರಿ ಎಂದು ನೋಡಲು ಶುರು ಮಾಡಿ. ಇದರಿಂದಾಗಿ ನಿಮ್ಮ ಬದುಕೇ ಬದಲಾಗುತ್ತದೆ. ಯಾಕೆಂದರೆ, ನಿಮ್ಮ ನೋಟದಲ್ಲಿ ಇಡೀ ಬದುಕು ಅಡಗಿದೆ! ಉದಾಹರಣೆಗೆ, ನಿಮ್ಮ ಸಂಬಂಧಗಳು ಸರಿಯಾಗಿಲ್ಲ ಎಂದರೆ ನಿಮ್ಮ ನೋಟದಲ್ಲೇ ದೋಷ ಇದೆ. ಅದನ್ನು ಸರಿ ಮಾಡಿಕೊಂಡರೆ, ಸಂಬಂಧಗಳು ಸರಿಯಾಗುತ್ತವೆ

 

ಆದ್ದರಿಂದ ಇಂದಿನಿಂದಲೇ ಶುರು ಮಾಡಿ ಅಂತರ್-ದರ್ಶನ. ಪ್ರತಿದಿನವೂನಿಮ್ಮೊಳಗಿನ ನಿಮ್ಮನ್ನುನೋಡುತ್ತಾ ನೋಡುತ್ತಾ ನಿಮ್ಮ ಬದುಕು ಬದಲಾಗುವುದನ್ನು ಗಮನಿಸಿ.