ನಿಮ್ಮ ಬದುಕಿನಲ್ಲಿ ಸಂತೋಷ ಚಿಮ್ಮಲು ಪುಟ್ಟಪುಟ್ಟ ಹೆಜ್ಜೆಗಳು

ನಿಮ್ಮಲ್ಲಿ ಪ್ರತಿ ದಿನದ ಬಹುಪಾಲು ಸಮಯದಲ್ಲಿ ಸಂತೋಷ ಚಿಮ್ಮುತ್ತಿರಲು ಏನು ಮಾಡಬೇಕು? ಹೊಸ ಕಾರು ಖರೀದಿಸಬೇಕೇ? ಅಥವಾ ಹಳೆ ಮನೆ ಮಾರಿ ಹೊಸ ಮನೆ ಖರೀದಿಸಬೇಕೇ

ಸಂತೋಷ ಚಿಮ್ಮಿಸಲು ಅಷ್ಟೆಲ್ಲ ದೊಡ್ಡದೊಡ್ಡ ಯೋಜನೆಗಳೆಲ್ಲ ಅಗತ್ಯವಿಲ್ಲ. ಪುಟ್ಟಪುಟ್ಟ ಕೆಲಸಗಳೇ ಸಾಕು. ಅಂತಹ ಕೆಲವು ಪುಟ್ಟಪುಟ್ಟ ಕೆಲಸಗಳನ್ನು ಪರಿಶೀಲಿಸೋಣ

 

1)ಬೆಳಗ್ಗೆ ಏಳುವಾಗಲೇ ಸಂಭ್ರಮ ಪಡುವುದು ನಿಮ್ಮ ದಿನನಿತ್ಯದ ಅಭ್ಯಾಸವಾಗಲಿ: ಇನ್ನೂ ಒಂದು ದಿನದ ಬದುಕು ನಿಮಗೆ ಲಭಿಸಿದ ಕಾರಣಕ್ಕಾಗಿ. ಇದಕ್ಕಿಂತ ದೊಡ್ಡ ಅದೃಷ್ಟ ಇನ್ನೇನು ಇರಲು ಸಾಧ್ಯ?

 

2)ನಿಮ್ಮ ಸದ್ಯದ ಉದ್ದೇಶ ಏನು? ಇನ್ನೊಂದು ವಾರ ಹೇಗಾದರೂ ದೂಡುವುದೇ ಅಂದರೆ ಜೀವನ ಸಾಗಿಸುವುದೇ? ಉದ್ದೇಶವನ್ನೇ ಬದಲಾಯಿಸಿ. ಅಂದರೆ, ಇನ್ನೊಂದು ವಾರ ಸಂತೋಷದಿಂದ ಬದುಕುವುದು ಅಥವಾ ಇನ್ನೊಂದು ವಾರ ನಿಮ್ಮ ಸಂಪರ್ಕಕ್ಕೆ ಬಂದವರಲ್ಲಿ ಉತ್ಸಾಹ ತುಂಬುವುದು ಎಂಬುದಾಗಿ. ಇದರ ಪರಿಣಾಮವನ್ನು ಅನುಭವಿಸಿಯೇ ಅರಿಯಬೇಕು

 

3)ನಿಮ್ಮ ಐದು ಕೌಶಲ್ಯಗಳನ್ನು ಒಂದು ಹಾಳೆಯಲ್ಲಿ ದೊಡ್ಡ ಅಕ್ಷರಗಳಲ್ಲಿ ಬರೆಯಿರಿ. ಉದಾ: ನಾನು ಚೆನ್ನಾಗಿ ಹಾಡಬಲ್ಲೆ; ನಾನು ಚೆನ್ನಾಗಿ ಮಾತನಾಡಬಲ್ಲೆ; ನಾನು ಚಂದವಾಗಿ ಬರೆಯಬಲ್ಲೆ ಇತ್ಯಾದಿ. ಇತರರಿಗೆ ಸಹಾಯ ಮಾಡಲಿಕ್ಕಾಗಿ ಇವನ್ನು ಮತ್ತೆಮತ್ತೆ ಬಳಸಿ. ಆಗ ಮತ್ತೆಮತ್ತೆ ನಿಮ್ಮಲ್ಲಿ ಸಂತೋಷ ತುಂಬಿ ತುಳುಕುವುದನ್ನು ಕಾಣುತ್ತೀರಿ

 

4)ಇತರರಿಗೆ ಸಹಾಯ ಮಾಡಲು ಶುರು ಮಾಡಿ (ಹಣದ ಸಹಾಯದ ಹೊರತಾದ). ಯಾಕೆಂದರೆ, ಇತರರಿಗೆ ಮಾಡಿದ ಪ್ರತಿಯೊಂದು ಸಹಾಯವೂ ನಿಮ್ಮ ಆತ್ಮವಿಶ್ವಾಸ ಮತ್ತು ಸಂತೋಷವನ್ನು ಹೆಚ್ಚಿಸುತ್ತದೆ

 

5)ಇತರರು ನಿಮಗೆ ಸಹಾಯ ಮಾಡಿದಾಗೆಲ್ಲ ಮುಕ್ತ ಮನಸ್ಸಿನಿಂದ ಅವರಿಗೆ ಕೃತಜ್ಞತೆ ಸಲ್ಲಿಸಿ. ಆಗ ಅವರ ಮುಖ ಅರಳುವುದನ್ನು ನೋಡುತ್ತಾ ನಿಮ್ಮಲ್ಲಿಯೂ ಸಂತೋಷ ಚಿಮ್ಮುವುದನ್ನು ಗಮನಿಸಿ

 

6)ವಾರಕ್ಕೆ ಒಮ್ಮೆಯಾದರೂ ನಿಮ್ಮ ಆತ್ಮೀಯ ಸ್ನೇಹಿತರೊಂದಿಗೆ ಒಂದು ಗಂಟೆ ಸಮಯ ಕಳೆಯುವ ಅಭ್ಯಾಸ ಶುರು ಮಾಡಿ. ಅವರು ನಿಮ್ಮ ಪ್ರಾಥಮಿಕ ಶಾಲೆಯ, ಹೈಸ್ಕೂಲಿನ ಅಥವಾ ಕಾಲೇಜಿನ ಸಹಪಾಠಿಗಳು ಆಗಿದ್ದರೆ ಬಹಳ ಒಳ್ಳೆಯದು. ಯಾಕೆಂದರೆ, ನಿಮ್ಮ ಸಹಪಾಠಿಗಳೊಂದಿಗೆ ಮುಕ್ತವಾಗಿ ಹರಟುವಂತೆ ಬೇರೆ ಯಾರೊಂದಿಗೂ ನೀವು ಹರಟಲು ಸಾಧ್ಯವಿಲ್ಲ

 

7)ಇತರರೊಂದಿಗೆ ನಿಮ್ಮನ್ನು ಹೋಲಿಸಿಕೊಂಡು, ಸಂಕಟಪಡುವುದನ್ನು ಕ್ಷಣದಿಂದಲೇ ನಿಲ್ಲಿಸಿ. ಯಾಕೆಂದರೆ, ಇತರರು ತಮ್ಮ ಬದುಕಿನಲ್ಲಿ ಈಗಿನ ಹಂತಕ್ಕೆ ಏರಲು ಏನೇನು ಪಾಡು ಪಟ್ಟಿದ್ದಾರೆ ಎಂಬುದು ಅವರಿಗಷ್ಟೇ ತಿಳಿದಿದೆ

 

8)ಸಣ್ಣಪುಟ್ಟ ಸಂಗತಿಗಳಿಗಾಗಿ ತಲೆ ಕೆಡಿಸಿಕೊಳ್ಳುವ ಅಭ್ಯಾಸ ಬದಲಾಯಿಸಿಕೊಳ್ಳಿ. ನಿಮ್ಮ ಮನೆಯ ನಲ್ಲಿ ಕೆಟ್ಟು ಹೋಗಿದ್ದರೆ, ನಿರಾಶರಾಗಬೇಡಿ. ಯಾಕೆಂದರೆ, ನಿಮಗೆ ಸ್ವಂತ ಮನೆಯಿದೆ; ಇತರ ಹಲವರಿಗೆ ಸ್ವಂತ ಮನೆಯೇ ಇಲ್ಲ. ಆದಾಯ ತೆರಿಗೆ ಕಟ್ಟ ಬೇಕೆಂದು ನೆಮ್ಮದಿ ಕಳೆದುಕೊಳ್ಳ ಬೇಡಿ. ಯಾಕೆಂದರೆ, ನಿಮಗೆ ಅಷ್ಟು ಆದಾಯವಿದೆ. ಹೀಗೆ ಜೀವನದ ಸಂಗತಿಗಳ ಬಗ್ಗೆ ನೀವು ಯೋಚಿಸುವ ರೀತಿಯನ್ನೇ ಬದಲಾಯಿಸಿದಾಗ ನಿಮ್ಮ ನಿರಾಶೆ ಮಾಯವಾಗುತ್ತದೆ, ಅಲ್ಲವೇ

 

9)ನಿಮ್ಮೊಳಗಿನ ಧ್ವನಿ ನಿಮ್ಮ ಬಗ್ಗೆ ಕಟು ಟೀಕೆ ಮಾಡುತ್ತಿದೆಯೇ? “ನಾನು ದಡ್ಡ”, “ನನಗೆ ಎಲ್ಲದರಲ್ಲಿಯೂ ಸೋಲೇ ಆಗುತ್ತದೆಇತ್ಯಾದಿ. ಧ್ವನಿಯನ್ನು ತಕ್ಷಣ ನಿಲ್ಲಿಸಿ. ಅದರ ಬದಲಾಗಿ, ಬೆಳಗ್ಗೆ ಎದ್ದೊಡನೆನಾನು ಬುದ್ಧಿವಂತ”, “ನಾನು ಎಲ್ಲದರಲ್ಲಿಯೂ ಗೆಲ್ಲುತ್ತೇನೆಎಂದು ಹೇಳಿಕೊಳ್ಳಲು ಶುರು ಮಾಡಿ. ಇದನ್ನೇ ಒಂದು ಕಾಗದದ ಹಾಳೆಯಲ್ಲಿ ಬರೆದು, ನಿಮ್ಮ ಕೋಣೆಯಲ್ಲಿ ಎದ್ದು ಕಾಣುವಂತೆ ನೇತು ಹಾಕಿ. ಬೆಳಗ್ಗೆ ಅದನ್ನು ನೋಡುತ್ತಾ ಐದು ಸಲ ಓದಿ ಕೊಳ್ಳುವುದನ್ನು ಅಭ್ಯಾಸ ಮಾಡಿಕೊಳ್ಳಿ. ನಿಮ್ಮ ದಿನದಿನದ ಸಂತೋಷಕ್ಕೆ ಇದುವೇ ಅಡಿಪಾಯವಾಗುತ್ತದೆ

 

10)ನಿಮ್ಮ ಮಾತು ಹೇಗಿದೆ ಎಂಬುದನ್ನು ಪರಿಶೀಲಿಸುವುದು ಅತ್ಯಗತ್ಯ. ಅದು ನಕಾರಾತ್ಮಕವಾಗಿದ್ದರೆ, ಅದನ್ನು ಸಕಾರಾತ್ಮಕವಾಗಿ ಮಾಡುವ ಕೌಶಲ್ಯವನ್ನು ಕಲಿಯಿರಿ. ಉದಾಹರಣೆ: ನಿಮ್ಮ ಮಗು ಮೆಟ್ಟಲು ಇಳಿಯುವಾಗ, “ನೀನು ಮೆಟ್ಟಲಿನಿಂದ ಬೀಳುತ್ತಿ. ನಾನು ಇಳಿಸುತ್ತೇನೆಎನ್ನುವ ಬದಲಾಗಿ, “ಮಗೂ, ಮೆಟ್ಟಲಿನ ಪಕ್ಕದ ಕಬ್ಬಿಣದ ಸರಳು ಹಿಡಿದುಕೊಂಡು ಇಳಿ. ನಾನು ನಿನ್ನ ಪಕ್ಕದಲ್ಲೇ ಇರುತ್ತೇನೆಎನ್ನುವುದು ಸಕಾರಾತ್ಮಕ. ಆಫೀಸಿನಲ್ಲಿ ನಿಮ್ಮ ಸಹಾಯಕನಿಗೆಯಾವ ಕೆಲಸವನ್ನೂ ನೀನು ಸಮಯಕ್ಕೆ ಸರಿಯಾಗಿ ಮಾಡೋದಿಲ್ಲ. ಇದನ್ನಾದರೂ ಸಂಜೆಯೊಳಗೆ ಮಾಡಿ ಮುಗಿಸುಎನ್ನುವ ಬದಲಾಗಿ, “ನೋಡು, ಕೆಲಸ ಸಂಜೆಯೊಳಗೆ ಮುಗಿಸು. ನಿನಗೇನಾದರೂ ಸಹಾಯ ಬೇಕಾದರೆ ನನ್ನನ್ನು ಕೇಳುಎನ್ನುವುದು ಸಕಾರಾತ್ಮಕ

 

ಗಮನಿಸಿ: ನಿಮ್ಮ ಬದುಕಿನಲ್ಲಿ ಏನು ಘಟಿಸುತ್ತದೆ ಎಂಬುದು ನಿಮ್ಮ ಸಂತೋಷದ ಶೇಕಡಾ 10ರಷ್ಟನ್ನು ನಿರ್ಧರಿಸುತ್ತದೆ. ಘಟನೆಗೆ ನೀವು ಹೇಗೆ ಪ್ರತಿಕ್ರಿಯಿಸುತ್ತೀರಿ ಎಂಬುದು ನಿಮ್ಮ ಸಂತೋಷದ ಶೇಕಡಾ 90ರಷ್ಟನ್ನು ನಿರ್ಧರಿಸುತ್ತದೆ! ಇದು ಅರ್ಥವಾಗಬೇಕಾದರೆ, ನೀವು ಬೆಳಗ್ಗೆ ಆಫೀಸಿಗೆ ಹೊರಡುವ ಗಡಿಬಿಡಿಯಲ್ಲಿ ಕಾಫಿಯ ಕಪ್ ಕೈತಪ್ಪಿ ಕಾಫಿಯೆಲ್ಲ ನಿಮ್ಮ ಉಡುಪಿನ ಮೇಲೆ ಬಿದ್ದ ಘಟನೆಯನ್ನು ಕಲ್ಪಿಸಿಕೊಳ್ಳಿ. ಆಗ ನೀವು ಎಗರಾಡಿದರೆ, ಅನಂತರ ಹಲವಾರು ಅನಾಹುತಗಳಾಗಿ, ನೀವು ಆಫೀಸ್ ತಲಪುವಾಗ ಒಂದು ಗಂಟೆ ತಡವಾಗುತ್ತದೆ ಎಂಬುದನ್ನು ಅರ್ಥ ಮಾಡಿಕೊಳ್ಳಿ. ಅದರ ಬದಲಾಗಿ, “, ಕಾಫಿ ಚೆಲ್ಲಿತು. ಬೇರೆ ಕಾಫಿ ಮಾಡಿ ಕೊಡುಎಂದು ಮಡದಿಗೆ ಹೇಳಿ, ಉಡುಪು ಬದಲಾಯಿಸಿಕೊಂಡು, ಕಾಫಿ ಕುಡಿದು ಆಫೀಸಿಗೆ ಹೊರಟರೆ ಸಮಯಕ್ಕೆ ಸರಿಯಾಗಿ ಆಫೀಸು ತಲಪಬಹುದು, ಅಲ್ಲವೇ

 

ನೆನಪಿರಲಿ: ನಿಮ್ಮ ಸಂತೋಷ ನಿಮ್ಮ ಕೈಯಲ್ಲಿದೆ