HRM

ಕರುಣಾಮಯಿ ರಾಜನೊಬ್ಬನಿಗೆ ಏಕಾಂಗಿಯಾಗಿ ರಾಜ್ಯದಲ್ಲಿ ಸುತ್ತಾಡುವ ಹವ್ಯಾಸ. ಒಂದು ದಿನ ರಾಜನಿಗೆ ದಾರಿ ತಪ್ಪಿತು. ಅಂತೂ ಆತ ಹಳ್ಳಿಯೊಂದನ್ನು ತಲಪಿದ. ಅಲ್ಲಿ ರೈತನೊಬ್ಬ ತನ್ನ ಹೊಲದಲ್ಲಿ ಉಳುಮೆ ಮಾಡುತ್ತಿದ್ದ. ರಾಜ ಅವನ ಬಳಿ ಹೋಗಿ ವಿನಂತಿಸಿದ, “ನನಗೆ ಬಹಳ ಹಸಿವು ಮತ್ತು ಬಾಯಾರಿಕೆ ಆಗಿದೆ, ಸಹಾಯ ಮಾಡು." ರೈತ ಉಳುಮೆಯನ್ನು ನಿಲ್ಲಿಸಿ ಹೇಳಿದ, “ಮಹಾರಾಜಾ, ಇಲ್ಲಿ ಮರದ ನೆರಳಿನಲ್ಲಿ ವಿಶ್ರಾಂತಿ ಪಡೆಯಿರಿ. ನಾನು ಮನೆಗೆ ಹೋಗಿ ನಿಮಗಾಗಿ ಆಹಾರ ಮತ್ತು ನೀರು ತರುತ್ತೇನೆ.”

ರೈತ ಮನೆಗೆ ಹೋದಾಗ, ರಾಜ ಯೋಚಿಸಿದ: ನನ್ನಿಂದಾಗಿ ಅವನ ದುಡಿಮೆಗೆ ಅಡಚಣೆ ಆಯಿತು. ಅವನಿಗೆ ಸ್ವಲ್ಪ ಸಹಾಯ ಮಾಡತಕ್ಕದ್ದು. ಹೀಗೆ ಯೋಚಿಸಿದ ರಾಜ, ಹೊಲದ ಉಳುಮೆ ಮುಂದುವರಿಸಿದ. ಆತ ಹೊಲದ ಮೂಲೆಯಲ್ಲಿ ಉಳುತ್ತಿದ್ದಾಗ ನೇಗಿಲಿಗೆ ಏನೋ ತಗಲಿತು. ಅದೇನೆಂದು ನೋಡಿದಾಗ ಪಾತ್ರೆಯೊಂದು ಕಾಣಿಸಿತು. ಅದರ ಮುಚ್ಚಳ ತೆಗೆದಾಗ ಪಾತ್ರೆಯ ತುಂಬ ಚಿನ್ನದ ನಾಣ್ಯಗಳಿದ್ದವು!

ಅಷ್ಟರಲ್ಲಿ ರೈತ ಆಹಾರ ಮತ್ತು ನೀರು ತಗೊಂಡು ಹೊಲಕ್ಕೆ ಮರಳಿದ. ರಾಜ ಅಲ್ಲೇ ಆಹಾರ ತಿಂದು, ನೀರು ಕುಡಿದ. ಅನಂತರ, ರೈತನನ್ನು ಹೊಲದ ಮೂಲೆಗೆ ಕರೆದೊಯ್ದು ಚಿನ್ನದ ನಾಣ್ಯಗಳ ಪಾತ್ರೆಯನ್ನು ತೋರಿಸಿ, ನಡೆದದ್ದನ್ನು ತಿಳಿಸಿದ. ತಕ್ಷಣವೇ ರೈತ ಹೇಳಿದ, “ಮಹಾರಾಜಾ, ಅದೆಲ್ಲವೂ ನಿಮಗೆ ಸೇರಿದ್ದು.” ರೈತನ ದೊಡ್ಡ ಗುಣ ಕಂಡು ಮಹಾರಾಜನಿಗೆ ಮನಸ್ಸು ತುಂಬಿ ಬಂತು. ಕೊನೆಗೆ ಆ ಪಾತ್ರೆಯಲ್ಲಿದ್ದ ಚಿನ್ನದ ನಾಣ್ಯಗಳಲ್ಲಿ ಅರ್ಧ ಭಾಗವನ್ನು ರೈತನಿಗೆ ರಾಜ ಬಹುಮಾನವಾಗಿತ್ತ.

ಬುದ್ಧಿವಂತ ರಾಜನಿಗೆ ತನ್ನ ಯುವರಾಜನ ಬಗ್ಗೆ ಚಿಂತೆಯಾಗಿತ್ತು. ಯಾಕೆಂದರೆ ಯುವರಾಜ ಮುಂಗೋಪಿ ಮತ್ತು ಸಿಟ್ಟಿನ ಭರದಲ್ಲಿ ಇತರರಿಗೆ ನೋವು ನೀಡುತ್ತಿದ್ದ. ಕೊನೆಗೊಂದು ದಿನ ರಾಜ ತನ್ನ ನಂಬಿಕಸ್ಥ ಸಲಹೆಗಾರನ ಬಳಿ ಹೋಗಿ ತನ್ನ ಚಿಂತೆ ತಿಳಿಸಿದ. "ನಾಳೆ ಯುವರಾಜನನ್ನು ನನ್ನ ಬಳಿ ಕಳಿಸಿ ಕೊಡಿ” ಎಂದ ಸಲಹೆಗಾರ.

ಅಂತೆಯೇ ಮರುದಿನ ಯುವರಾಜ ಆ ಸಲಹೆಗಾರನ ಬಳಿ ಬಂದ. ಇಲ್ಲೇ ಸುತ್ತಾಡಿ  ಬರೋಣ ಎನ್ನುತ್ತಾ ಯುವರಾಜನನ್ನು ಸಲಹೆಗಾರ ಕರೆದೊಯ್ದ. ಆತ ಒಂದು ಮರದ ಬಳಿ ನಿಂತು. “ಈ ಮರದ ಎಲೆಯೊಂದನ್ನು ತಿಂದು ನೋಡು. ರುಚಿ ಹೇಗಿದೆ ಹೇಳು” ಎಂದು ಯುವರಾಜನಿಗೆ ಹೇಳಿದ. ಯುವರಾಜ ಆ ಮರದ ಎಲೆಯೊಂದನ್ನು ತಿಂದು ಮುಖ ಕಿವಿಚಿಕೊಂಡ. “ಇದು ಭಾರಿ ಕಹಿ. ಇದು ವಿಷದ ಮರ ಆಗಿರಲೂ ಬಹುದು. ಇದನ್ನು ತಕ್ಷಣವೇ ಬೇರು ಸಹಿತ ಕಿತ್ತು ಹಾಕಬೇಕು. ಇಲ್ಲವಾದರೆ ಇದು ಬೆಳೆದು ದೊಡ್ಡದಾಗಿ ಹಲವರಿಗೆ ತೊಂದರೆಯಾದೀತು” ಎಂದ ಯುವರಾಜ.

ಆಗ ಸಲಹೆಗಾರ ಯುವರಾಜನಿಗೆ ತಿಳಿಯ ಹೇಳಿದ, "ಹೌದು ಯುವರಾಜಾ, ನೀನು ಹೇಳಿದ್ದು ಸರಿ. ಹಾಗೆಯೇ ನಿನ್ನ ಕೋಪ ಮತ್ತು ಉದ್ಧಟತನ ಮುಂದುವರಿದರೆ, ನಿನ್ನಿಂದ ಹಲವರಿಗೆ ತೊಂದರೆಯಾದೀತು. ಆಗ ಜನರು ನಿನ್ನನ್ನು ರಾಜನಾಗಿ ಸ್ವೀಕರಿಸುವುದಿಲ್ಲ.” ಈಗ ಯುವರಾಜನಿಗೆ ಸಲಹೆಗಾರನ ನೀತಿ ಪಾಠ ಅರ್ಥವಾಯಿತು. ಆತ ಕೋಪ ಮಾಡಿಕೊಳ್ಳದಿರಲು ನಿರ್ಧರಿಸಿದ. ಮುಂದೆ ರಾಜನಾಗಿ, ಎಲ್ಲರ ಪ್ರೀತಿಪಾತ್ರನಾದ.

ಒಮ್ಮೆ ಕೆಲವು ಮಕ್ಕಳು ಮೈದಾನದಲ್ಲಿ ಫುಟ್‌ಬಾಲ್ ಆಟ ಆಡುತ್ತಿದ್ದರು. ಆಗ ಪಕ್ಕದ ರಸ್ತೆಯನ್ನು ಒಬ್ಬ ಕುರುಡ ದಾಟುತ್ತಿದ್ದ. ಆದರೆ ರಸ್ತೆಯನ್ನು ದಾಟಿದ ಕೂಡಲೇ ಅವನು ಕೆಸರಿನಲ್ಲಿ ಕಾಲಿಟ್ಟು ಜಾರಿ ಬಿದ್ದ. ಅಲ್ಲಿ ಆಟವಾದುತ್ತಿದ್ದ ಮಕ್ಕಳೆಲ್ಲರೂ ಜೋರಾಗಿ ನಕ್ಕರು. ಆದರೆ ಅವರಲ್ಲಿ ಒಬ್ಬಳಾದ ಸುಗುಣ ನಗಲಿಲ್ಲ. ಅವಳು ತಕ್ಷಣವೇ ಆ ಕುರುಡನ ಬಳಿ ಓಡಿ ಹೋಗಿ ಅವನು ನೆಲದಿಂದ ಎದ್ದೇಳಲು ಸಹಾಯ ಮಾಡಿದಳು. ಅಲ್ಲೇ ಇದ್ದ ಐಸ್‌ಕ್ರೀಮ್ ಅಂಗಡಿಯಾತನೂ ಓಡಿ ಬಂದು ಕುರುಡನಿಗೆ ಸಹಾಯ ಮಾಡಿದ. ಆ ಕುರುಡ ಅಲ್ಲಿಂದ ಹೊರಡುವ ಮುಂಚೆ ಅವರಿಬ್ಬರಿಗೂ ಕೃತಜ್ನತೆ ಸಲ್ಲಿಸಿ, ಹರಸಿದ.

ಐಸ್‌ಕ್ರೀಮ್ ಅಂಗಡಿಯಾತ ಸುಗುಣಳನ್ನು ಕರೆದು ಹೇಳಿದ, "ಬಾ, ನಿನಗೆ ಇಷ್ಟವಾದ ಐಸ್‌ಕ್ರೀಮ್ ತಿನ್ನು. ಯಾಕೆಂದರೆ ನೀನು ಇವತ್ತು ಒಂದು ಒಳ್ಳೆಯ ಕೆಲಸ ಮಾಡಿದ್ದಿ.” ಸುಗುಣ ಅಂಗಡಿಯೊಳಗೆ ಹೋಗಿ, ಖುಷಿಯಿಂದ ಐಸ್‌ಕ್ರೀಮ್ ತಿಂದಳು. ಅಷ್ಟರಲ್ಲಿ ಜೋರಾಗಿ ಮಳೆ ಸುರಿಯಿತು. ಆ ಮಕ್ಕಳೆಲ್ಲರೂ ಮಳೆಗೆ ನೆನೆದು ಒದ್ದೆಯಾದರು. ಮಳೆ ನಿಂತಾಗ ಐಸ್‌ಕ್ರೀಮ್ ಅಂಗಡಿಯಾತ ಅವರ ಬಳಿ ಕೇಳಿದ, “ನೀವೆಲ್ಲರೂ ಮಳೆಗೆ ನೆನೆದಿದ್ದೀರಿ. ಒದ್ದೆಯಾದಾಗ ನಿಮಗೆ ಏನನಿಸಿತು? ಸುಗುಣಳನ್ನು ನೋಡಿ ಕಲಿಯಿರಿ. ಇನ್ನೊಬ್ಬರು ಬಿದ್ದಾಗ ನಗುವುದು ಸುಲಭ. ಆದರೆ ಅವರು ಎದ್ದೇಳಲು ಸಹಾಯ ಮಾಡುವುದು ಕಷ್ಟ.”

ಆ ಕುಟುಂಬದಲ್ಲಿ ಮೂವರು ಮಕ್ಕಳು: ಇಬ್ಬರು ಸೋದರರು ಮತ್ತು ಒಬ್ಬಳು ಸೋದರಿ. ಅವರು ಯಾವಾಗಲೂ ಜಗಳ ಮಾಡುತ್ತಿದ್ದರು. ಇದರಿಂದಾಗಿ ರೋಸಿ ಹೋದ ತಂದೆ ಅವರಿಗೊಂದು ಪಾಠ ಕಲಿಸಲು ನಿರ್ಧರಿಸಿದ.

ಮರುದಿನ ಅವನು ಮೂವರು ಮಕ್ಕಳಿಗೂ ಕೆಲವು ಸುಳಿವುಗಳನ್ನು ಕೊಟ್ಟ. ಅವುಗಳ ಆಧಾರದಿಂದ ಅವರ ಜಮೀನಿನಲ್ಲಿರುವ ನಿಧಿಯೊಂದನ್ನು ಹುಡುಕಬೇಕೆಂದ. ಆದರೆ ಅವನೊಂದು ಷರತ್ತನ್ನು ವಿಧಿಸಿದ: ಅವರು ಒಬ್ಬೊಬ್ಬರಾಗಿ ನಿಧಿಯನ್ನು ಹುಡುಕಬೇಕು. ಇಡೀ ದಿನ ಒಬ್ಬೊಬ್ಬರಾಗಿ ಹುಡುಕಿದರೂ ಅವರಲ್ಲಿ ಯಾರಿಗೂ ನಿಧಿ ಸಿಗಲಿಲ್ಲ.

ಎರಡನೇ ದಿನ ಅವರ ತಂದೆ ಷರತ್ತನ್ನು ಬದಲಾಯಿಸಿದ. ಅವರು ಜೊತೆಯಾಗಿ ನಿಧಿಯನ್ನು ಹುಡುಕಬೇಕೆಂದ. ಅವರಲ್ಲೊಬ್ಬ   ಬಲಶಾಲಿಯಾಗಿದ್ದ. ಇನ್ನೊಬ್ಬ ಚುರುಕಿನ ಬಾಲಕನಾಗಿದ್ದ. ಅವರ ಸೋದರಿ ಜಾಣೆಯಾಗಿದ್ದಳು. ಆ ದಿನ ಅವರು ಮೂವರೂ ತಮ್ಮತಮ್ಮ ವಿಶೇಷ ಗುಣಗಳನ್ನು ಬಳಸಿಕೊಂಡು, ಪರಸ್ಪರರಿಗೆ ಸಹಕರಿಸುತ್ತಾ ನಿಧಿಯನ್ನು ಹುಡುಕಿದರು. ಸಂಜೆಯ ಹೊತ್ತಿಗೆ ಅವರಿಗೆ ನಿಧಿ ಸಿಕ್ಕಿತು! ಆಗ ಅವರ ತಂದೆ ಅವರು ಮೂವರಿಗೂ ತಿಳಿಯ ಹೇಳಿದ, "ನಿಮಗೆ ಬೇರೊಂದು ಅಮೂಲ್ಯ ನಿಧಿ ಸಿಕ್ಕಿದೆ. ಅದೇನೆಂದರೆ, ಪರಸ್ಪರರಿಗೆ ಸಹಾಯ ಮಾಡಿದಾಗ ನೀವು ಯಾವುದೇ ಕೆಲಸ ಸಾಧಿಸಬಲ್ಲಿರಿ ಎಂಬ ತಿಳಿವಳಿಕೆ.” ಈಗ ಮೂವರೂ ಮಕ್ಕಳಿಗೂ ಒಗ್ಗಟ್ಟಿನಲ್ಲಿ ಬಲವಿದೆ ಎಂದು ಚೆನ್ನಾಗಿ ಅರ್ಥವಾಯಿತು.

ಶಿಷ್ಯನೊಬ್ಬ ಗುರುಗಳ ಬಳಿ ಪ್ರಶ್ನೆ ಕೇಳಿದ, "ಗುರುಗಳೇ, ಒಳಗಿನ ಸೌಂದರ್ಯ ಮತ್ತು ಹೊರಗಿನ ಸೌಂದರ್ಯ - ಇವೆರಡರಲ್ಲಿ ಯಾವುದು ಮುಖ್ಯ?" ಇದಕ್ಕೆ ಉತ್ತರವಾಗಿ ಗುರುಗಳು ಅವನಿಗೊಂದು ಪ್ರಶ್ನೆ ಕೇಳಿದರು, "ನಿನಗೆ ಮನೆ ಖರೀದಿಸ ಬೇಕಾಗಿದೆ ಎಂದಿರಲಿ. ಆದರೆ ನಿನ್ನ ಬಳಿ ಹೆಚ್ಚು ಹಣವಿಲ್ಲ. ಒಂದು ಮನೆ ಹೊರಗಿನಿಂದ ವೈಭವದ ಅಲಂಕಾರ ಹೊಂದಿದೆ, ಆದರೆ ಒಳಗೆ ಸೌಕರ್ಯಗಳು ಚೆನ್ನಾಗಿಲ್ಲ. ಇನ್ನೊಂದು ಮನೆ ನೋಡಲು ಸಾಧಾರಣವಾಗಿದೆ, ಆದರೆ ಒಳಗೆ ಎಲ್ಲ ಸೌಕರ್ಯಗಳೂ ಚೆನ್ನಾಗಿವೆ. ಇವೆರಡರಲ್ಲಿ ನೀನು ಯಾವ ಮನೆಯನ್ನು ಆಯ್ಕೆ ಮಾಡುತ್ತಿ?”

ಶಿಷ್ಯ ಉತ್ತರಿಸಿದ, "ಗುರುಗಳೇ, ನಾನು ನೋಡಲು ಸಾಧಾರಣವಾದ, ಆದರೆ ಒಳಗೆ ಎಲ್ಲ ಸೌಕರ್ಯಗಳಿರುವ ಮನೆಯನ್ನು ಆಯ್ಕೆ ಮಾಡುತ್ತೇನೆ. ಗುರುಗಳು ಪುನಃ ಶಿಷ್ಯನನ್ನು ಪ್ರಶ್ನಿಸಿದರು: “ಒಬ್ಬ ಅಹಂಕಾರದ ವ್ಯಕ್ತಿ ಇವೆರಡರಲ್ಲಿ ಯಾವ ಮನೆಯನ್ನು ಆಯ್ಕೆ ಮಾಡುತ್ತಾನೆ?" ಶಿಷ್ಯ ಉತ್ತರಿಸಿದ, "ಅವನು ಖಂಡಿತವಾಗಿ ಹೊರಗಿನಿಂದ ವೈಭವದ ಅಲಂಕಾರವಿರುವ ಮನೆಯನ್ನು ಆಯ್ಕೆ ಮಾಡುತ್ತಾನೆ."

ಈಗ ಗುರುಗಳು ಹೇಳುತ್ತಾರೆ, "ಅಂದರೆ ನೀವಿಬ್ಬರೂ ಮನೆಯ ಹೊರಗಿನ ಅಲಂಕಾರ ಅಥವಾ ಒಳಗಿನ ಸೌಕರ್ಯವನ್ನು ಕಳೆದುಕೊಳ್ಳುತ್ತೀರಿ.” ಶಿಷ್ಯ ಒಂದು ಕ್ಷಣ ಯೋಚಿಸಿ, ಪುನಃ ಪ್ರಶ್ನಿಸಿದ, “ಹಾಗಾದರೆ ಹೊರಗಿನ ಸೌಂದರ್ಯ ಮತ್ತು ಒಳಗಿನ ಸೌಂದರ್ಯ ಎರಡೂ ಮುಖ್ಯ ಅನ್ನುತ್ತೀರಾ?” ಗುರುಗಳು ಕೊನೆಯದಾಗಿ ಹೇಳಿದರು, “ಅವು ಎರಡೂ ಒಂದಕ್ಕೊಂದು ಪೂರಕ. ಒಂದು ಮಾತ್ರ ಇದ್ದರೆ, ವ್ಯಕ್ತಿತ್ವ ಪರಿಪೂರ್ಣವಾಗುವುದಿಲ್ಲ.”

ಒಬ್ಬ ರಾಜನಿಗೆ ಸಂಗೀತವೆಂದರೆ ಪಂಚಪ್ರಾಣ. ಅವನು ಅತ್ಯುತ್ತಮ ಸಂಗೀತವಾದ್ಯಕ್ಕಾಗಿ ಜಗತ್ತಿನಲ್ಲೆಲ್ಲ ಹುಡುಕಾಡುತ್ತಿದ್ದ. ಒಮ್ಮೆ ಒಬ್ಬ ಮ್ಯಾಜಿಕ್ ಮಾಡುವಾತ ರಾಜನಿಗೊಂದು ಹಾರ್ಪ್ ಎಂಬ ಸಂಗೀತವಾದ್ಯ ಕೊಟ್ಟ. ರಾಜ ಅದನ್ನು ಸಂತೋಷದಿಂದ ಅರಮನೆಗೆ ತಂದ. ಆದರೆ ರಾಜ ಹಾರ್ಪನ್ನು ನುಡಿಸಲು ಪ್ರಯತ್ನಿಸಿದಾಗ ಅದರಿಂದ ಸ್ವರಗಳು ಹೊರಡಲೇ ಇಲ್ಲ. ರಾಜನಿಗೆ ಬೇಸರವಾಗಿ ಅದನ್ನು ಅರಮನೆಯ ಉದ್ಯಾನದ ಹೊರಕ್ಕೆ ಎಸೆದ.

ಅಲ್ಲಿ ಹಾದು ಹೋಗುತ್ತಿದ್ದ ಬಡ ಹುಡುಗಿಯೊಬ್ಬಳಿಗೆ ಆ ಹಾರ್ಪನ್ನು ಕಂಡು ಅಚ್ಚರಿಯಾಯಿತು. ಅವಳಿಗೆ ಅದನ್ನು ನುಡಿಸುವುದು ಹೇಗೆಂದು ತಿಳಿದಿರಲಿಲ್ಲ. ಆದರೂ ಅವಳು ಅದನ್ನು ಮನೆಗೆ ಒಯ್ದಳು. ಅದರಿಂದ ಸಂಗೀತ ನುಡಿಸಲು ಮತ್ತೆಮತ್ತೆ ಪ್ರಯತ್ನಿಸಿದಳು. ಕೊನೆಗೊಮ್ಮೆ ಆ ಹಾರ್ಪಿನಿಂದ ಸುಮಧುರ ಸಂಗೀತ ಹೊರಹೊಮ್ಮಿತು. ಅದೊಂದು ಮ್ಯಾಜಿಕ್ ಹಾರ್ಪ್! ಅದನ್ನು ನಂಬಿ, ಶ್ರದ್ಧೆಯಿಂದ ಪ್ರಯತ್ನಿಸಿದವರ ಕೈಯಲ್ಲಿ ಅದು ಸುಶ್ರಾವ್ಯ ಸಂಗೀತ ಹೊಮ್ಮಿಸುತ್ತದೆ. ಅವಳು ಪ್ರತಿ ದಿನ ಆ ಹಾರ್ಪಿನಿಂದ ಗಂಟೆಗಟ್ಟಲೆ ಅದ್ಭುತ ಸಂಗೀತ ನುಡಿಸಲು ಶುರು ಮಾಡಿದಳು. ಕೊನೆಗೆ ಈ ಸುದ್ದಿ ರಾಜನ ವರೆಗೆ ತಲಪಿತು. ಆತ ಆ ಹುಡುಗಿಯನ್ನು ಅರಮನೆಗೆ ಕರೆಸಿದ; ಅವಳು ಹಾರ್ಪಿನಿಂದ ಮನಮೋಹಕ ಸಂಗೀತ ನುಡಿಸುವುದನ್ನು ಕೇಳಿ ಖುಷಿ ಪಟ್ಟ. ಆ ಹುಡುಗಿಗೂ ಅವಳ ಕುಟುಂಬಕ್ಕೂ ಬಹುಮಾನಗಳನ್ನಿತ್ತು, ಅವಳನ್ನು ರಾಜಸಭೆಯ ಸಂಗೀತಗಾರಳನ್ನಾಗಿ ನೇಮಿಸಿದ.

ಗೋಪಾಲಯ್ಯ ಒಬ್ಬ ರಾಜಕಾರಣಿ. ಚುನಾವಣೆಗೆ ಸ್ಪರ್ಧಿಸಿದ್ದ ಆತ ತನ್ನ ಉಮೇದುವಾರಿಕೆಯ ಪ್ರಚಾರಕ್ಕಾಗಿ ಹಲವಾರು ಜನರನ್ನು ಭೇಟಿ ಮಾಡಬೇಕಾಗಿತ್ತು. ಒಂದು ಸಭೆಯಲ್ಲಿ ಒಬ್ಬ ವ್ಯಕ್ತಿ ಗೋಪಾಲಯ್ಯನನ್ನು ಸಾರ್ವಜನಿಕವಾಗಿ ನಿಂದಿಸುತ್ತಿದ್ದ. ಗೋಪಾಲಯ್ಯನ ಬೆಂಬಲಿಗನೊಬ್ಬ ಇದರಿಂದ ವಿಚಲಿತನಾಗಿ ಕೇಳಿದ, “ಇದನ್ನೆಲ್ಲ ನೀನು ಯಾಕೆ ಸಹಿಸಿಕೊಳ್ಳುತ್ತಿ?” ಗೋಪಾಲಯ್ಯ ಉತ್ತರಿಸಿದ, "ಹೋಗಲಿ ಬಿಡು.” ಆದರೆ ಬೆಂಬಲಿಗನಿಗೆ ಸಮಾಧಾನವಾಗಲಿಲ್ಲ. ಅವನು ಗೋಪಾಲಯ್ಯನಿಗೆ ಒತ್ತಾಯಿಸಿದ, “ನೀನು ಆ ವ್ಯಕ್ತಿಗೆ ಸಾರ್ವಜನಿಕರ ಎದುರಿನಲ್ಲೇ ಉತ್ತರ ಕೊಡಬೇಕು.” ಗೋಪಾಲಯ್ಯ ಮುಗುಳ್ನಕ್ಕು, ಸಂಜೆ ತನ್ನ ಕಚೇರಿಯಲ್ಲಿ ತನ್ನನ್ನು ಭೇಟಿಯಾಗಬೇಕೆಂದು ಬೆಂಬಲಿಗನನ್ನು ವಿನಂತಿಸಿದ.

ಆ ದಿನ ಸಂಜೆ ಬೆಂಬಲಿಗ ಕಚೇರಿಗೆ ಬಂದಾಗ, ಆತನಿಗೆ ಗೊಪಾಲಯ್ಯ ಹರಿದ ಷರ್ಟು ಒಂದನ್ನು ಕೊಟ್ಟು ಹೇಳೀದ, "ನೀನೀಗ ಇದನ್ನು ಹಾಕಿಕೋ. ಇದರ ಅಳತೆ ನಿನಗೆ ಸರಿಯಾಗಿದೆ.” ಆಗ ಬೆಂಬಲಿಗ ಉತ್ತರಿಸಿದ, “ಇದೇನು ಮಾತಾಡುತ್ತೀರಿ? ನಾನು ಒಳ್ಳೆಯ ಉಡುಪು ಧರಿಸಿದ್ದೇನೆ; ನನಗೆ ಈ ಹರಿದ ಷರ್ಟು ಬೇಡವೇ ಬೇಡ." ಗೋಪಾಲಯ್ಯ ಉತ್ತರಿಸಿದ, "ಸರಿ, ಸರಿ. ಹಾಗೆಯೇ ನನಗೂ ಆ ವ್ಯಕ್ತಿಯ ನಿಂದನೆಯ ಮಾತುಗಳು ಬೇಡ; ನಾನು ಅವನ್ನು ತಿರಸ್ಕರಿಸುತ್ತೇನೆ.”

ಶೂರ ಶರ್ಮನ ತಂದೆ ಕುದುರೆ ತರಬೇತಿದಾರ. ಇದರಿಂದಾಗಿ ಆತ ಒಂದು ಕುದುರೆಗಾವಲಿನಿಂದ ಇನ್ನೊಂದಕ್ಕೆ ಹೋಗುತ್ತಾ ಅಲ್ಲಿನ ಕುದುರೆಗಳಿಗೆ ತರಬೇತಿ ನೀಡುತ್ತಿದ್ದ. ಅದೊಂದು ದಿನ ಶೂರ ಶರ್ಮನ ಟೀಚರ್ ಎಲ್ಲ ವಿದ್ಯಾರ್ಥಿಗಳಿಗೂ ಕಾಗದದ ಹಾಳೆ ನೀಡಿ, ಅವರು ದೊಡ್ಡವರಾದಾಗ ಏನಾಗಲು ಬಯಸುತ್ತಾರೆಂದು ಬರೆದು ತರಲು ಹೇಳಿದರು. ಶೂರ ಶರ್ಮ ಹೀಗೆ ಬರೆದ: "ನಾನು ದೊಡ್ಡವನಾದಾಗ ಒಂದು ದೊಡ್ಡ ಕುದುರೆಗಾವಲಿನ ಮಾಲೀಕನಾಗಲು ಬಯಸುತ್ತೇನೆ.” ತನ್ನ ಕಾಗದದ ಹಾಳೆಯಲ್ಲಿ ಅವನು ಕುದುರೆಗಾವಲಿನ ಮತ್ತು ಒಂದು ಮನೆಯ ಚಿತ್ರವನ್ನೂ ಬರೆದಿದ್ದ.

ಎರಡು ದಿನಗಳ ನಂತರ ಎಲ್ಲ ವಿದ್ಯಾರ್ಥಿಗಳಿಗೂ ಅವರ ಕಾಗದದ ಹಾಳೆ ವಾಪಾಸು ನೀಡಿದರು ಟೀಚರ್. ಶೂರ ಶರ್ಮನ ಕಾಗದದಲ್ಲಿ, “ಎಫ್" ಗ್ರೇಡ್ ಎಂದು ಬರೆದಿದ್ದರು ಟೀಚರ್. ಆಕೆ ಶೂರ ಶರ್ಮನಿಗೆ ಹೇಳಿದರು, “ನಿನ್ನ ಕನಸು ಪ್ರಾಯೋಗಿಕವಲ್ಲ. ನೀನು ಆ ಗುರಿಗಳನ್ನು ಸಾಧಿಸುವ ಸಾಧ್ಯತೆ ಇಲ್ಲ. ನಿನ್ನ ಕಾಗದದ ಹಾಳೆಯಲ್ಲಿ ಹೊಸ ಗುರಿಗಳನ್ನು ಬರೆದು ತಾ."

ಶೂರ ಶರ್ಮ ಇದನ್ನು ತನ್ನ ತಂದೆಗೆ ತಿಳಿಸಿದ. ಆಗ ತಂದೆ ಅವನಿಗಿತ್ತ ಸಲಹೆ: “ಮಗನೇ, ಯಾವಾಗಲೂ ನಿನ್ನ ಹೃದಯ ಏನು ಹೇಳುತ್ತದೆಯೋ ಅದನ್ನೇ ಅನುಸರಿಸು; ಬೇರೆ ಯಾರೋ ನಿನ್ನ ಕನಸುಗಳನ್ನು ಕಿತ್ತೆಸೆಯಲು ಯಾವತ್ತೂ ಬಿಡಬೇಡ.” ಒಂದು ವಾರದ ನಂತರ, ಶೂರ ಶರ್ಮ ಅದೇ ಗುರಿಗಳನ್ನು ಕಾಗದದ ಹಾಳೆಯಲ್ಲಿ ಪುನಃ ಬರೆದು ಟೀಚರಿಗೆ ಕೊಟ್ಟ. ಅವನು ಟೀಚರಿಗೆ ಹೇಳಿದ, “ನೀವು ನನಗೆ ಪುನಃ ಎಫ್ ಗ್ರೇಡ್ ಕೊಡಬಹುದು; ಆದರೆ ನಾನು ನನ್ನ ಕನಸಿನ ಬೆನ್ನತ್ತುತ್ತೇನೆ.”

ಇದಾಗಿ ಇಪ್ಪತ್ತು ವರುಷಗಳು ದಾಟಿವೆ. ಈಗ ಶೂರ ಶರ್ಮ 4,000 ಚದರಡಿಯ ಮನೆ ಮತ್ತು 200 ಎಕರೆ ಕುದುರೆಗಾವಲಿನ ಮಾಲೀಕ.

ಶಾಮು, ಸೋಮು ಮತ್ತು ಗೋಪು ಗೆಳೆಯರು. ಇವರಲ್ಲಿ ಗೋಪು ವಕ್ರಬುದ್ಧಿಯವನು. ಇವನಿಗೆ ಶಾಮು ಮತ್ತು ಸೋಮು ಆಡುವ ಆಟಗಳ ಬಗ್ಗೆ ಆಸಕ್ತಿಯೇ ಇಲ್ಲ. "ಅವರೇನು ಆಟ ಆಡುತ್ತಾರೋ …. ಶಾಲಾ ಕಂಪೌಂಡಿನೊಳಗೆ ಓಡುವುದು, ಸೈಕಲ್ ಓಡಿಸುವುದು - ಇವೆಲ್ಲ ಆಟಗಳೇ ಅಲ್ಲ. ರಸ್ತೆಯಲ್ಲಿ ಓಡುವುದು, ಎತ್ತರದ ಸ್ಥಳದಿಂದ ಕೆಳಕ್ಕೆ ಹಾರುವುದು, ಇತರ ವಿದ್ಯಾರ್ಥಿಗಳ ನೋಟ್ ಪುಸ್ತಕಗಳಿಂದ ಪುಟಗಳನ್ನು ಹರಿಯುವುದು - ಇವೆಲ್ಲ ನನಗೆ ಖುಷಿ ಕೊಡುವ ಆಟಗಳು” ಎಂಬುದು ಗೋಪುವಿನ ಯೋಚನೆ.

ಅದೊಂದು ದಿನ, ಗೋಪು ಯೋಚಿಸಿದ: ನಾನು ನನ್ನ ಪಾಡಿಗೆ ಆಟವಾಡುತ್ತೇನೆ. ನನಗೆ ಅವರಿಬ್ಬರ ಸಹವಾಸವೇ ಬೇಡ. ಅವನು ಯಾರದೋ ಹಣ ಕದ್ದ; ಇತರ ವಿದ್ಯಾರ್ಥಿಗಳ ನೋಟ್ ಪುಸ್ತಕಗಳ ಪುಟಗಳನ್ನು ಹರಿದ; ಅಧ್ಯಾಪಕರ ಕುರ್ಚಿಗೆ ಗಮ್ ಅಂಟಿಸಿದ! ಇದೆಲ್ಲ ಉಪಟಳ ಮಾಡಿದವರು ಯಾರೆಂಬುದು ಯಾರಿಗೂ ತಿಳಿಯಲಿಲ್ಲ.

ಅನಂತರ ಗೋಪು ಶಾಲೆಯಿಂದ ದೂರದಲ್ಲಿದ್ದ ಸೇತುವೆಗೆ ಹೋಗಿ, ಸೇತುವೆಯಿಂದ ಕಿರುಚುತ್ತಾ ನದಿಗೆ ಹಾರಿದ! ಅವನಿಗೆ ಈಜು ಬರುತ್ತಿರಲಿಲ್ಲ. ಬಾಯೊಳಗೆ ನೀರು ತುಂಬಿ ಉಸಿರು ಕಟ್ಟಿದಾಗ ಅವನಿಗೆ ಜೀವಭಯ ಶುರುವಾಯಿತು. “ನನ್ನನ್ನು ಬಚಾವ್ ಮಾಡಿ, ಬಚಾವ್ ಮಾಡಿ" ಎಂದು ಬೊಬ್ಬೆ ಹೊಡೆಯತೊಡಗಿದ. ಅವನನ್ನು ಹಿಂಬಾಲಿಸಿ ಬಂದಿದ್ದ ಶಾಮು ಮತ್ತು ಸೋಮು, ಒಂದು ಹಗ್ಗ ತಂದು ಅದನ್ನು ಸೇತುವೆಯಿಂದ ಕೆಳಕ್ಕೆ ಇಳಿಸಿದರು. ಗೋಪು ಹೇಗೋ ಮಾಡಿ ಆ ಹಗ್ಗವನ್ನು ಹಿಡಿದುಕೊಂಡಾಗ ಅವರಿಬ್ಬರೂ ಸೇರಿ, ಅವನನ್ನು ಮೇಲಕ್ಕೆ ಎಳೆದು, ಅವನ ಜೀವ ಕಾಪಾಡಿದರು. "ನಿನಗೆ ಖುಷಿ ಬೇಕಾದರೆ ಅಪಾಯದ ಕೆಲಸ ಮಾಡಬೇಕೇ? ಅಥವಾ ಇತರರಿಗೆ ತೊಂದರೆ ಕೊಡಬೇಕೇ?" ಎಂದು ಗೆಳೆಯರು ಕೇಳಿದಾಗ ಗೋಪು ನಿರುತ್ತರನಾದ. ಅವನಿಗೆ ತನ್ನ ತಪ್ಪಿನ ಅರಿವಾಗಿತ್ತು. ತನ್ನ ಗೆಳೆಯರ ಬಳಿ ಕ್ಷಮೆ ಕೇಳಿದ. ತನ್ನ ಜೀವ ಉಳಿಸಿದ್ದಕ್ಕಾಗಿ ಕೃತಜ್ನತೆ ಅರ್ಪಿಸಿದ.

ಲಾಮೊ ಡೊನ್‌ಡ್ರುಬ್ ಟಿಬೆಟಿಯನ್ ತಂದೆತಾಯಿಯರ ಮಗ. ರೈತರಾದ ಅವರ ಹೆತ್ತವರು ಬಾರ್ಲಿ, ಗೋಧಿ ಮತ್ತು ಆಲೂಗಡ್ಡೆ ಬೆಳೆಯುತ್ತಿದ್ದರು. ಆಗಿನ ಟಿಬೆಟಿಯನ್ ಸರಕಾರವು ದಲಾಯಿ ಲಾಮಾನಾಗಿ ಜನ್ಮ ತಳೆದ ಹೊಸ ವ್ಯಕ್ತಿಯನ್ನು ಪತ್ತೆ ಮಾಡಲಿಕ್ಕಾಗಿ “ಶೋಧ ತಂಡ”ವನ್ನು ಕಳಿಸಿದಾಗ ಲಾಮೊಗೆ ಕೇವಲ ಎರಡು ವರುಷ ವಯಸ್ಸು.

ಹಲವು ಗುರುತುಗಳು ಶೋಧ ತಂಡವನ್ನು ಲಾಮೊನ ಮನೆಗೆ ಕರೆತಂದವು. ಲಾಮೊನ ಮನೆಯ ಚಾವಣಿಯ ಮೇಲೆ ಜ್ಯುನಿಪರ್ ಮರದ ಕೊಂಬೆಗಳನ್ನು ಕಂಡಾಗ ಭವಿಷ್ಯದ ದಲಾಯಿ ಲಾಮಾ ಇಲ್ಲೇ ವಾಸವಿದ್ದಾರೆಂಬುದು ಶೋಧ ತಂಡಕ್ಕೆ ಖಚಿತವಾಯಿತು. ಹದಿಮೂರನೆಯ ದಲಾಯಿ ಲಾಮಾರಿಗೆ ಸೇರಿದ ಮತ್ತು ಅವರದಲ್ಲದ ಹಲವು ಸೊತ್ತುಗಳನ್ನು ಶೋಧ ತಂಡವು ತಂದಿತ್ತು. ಹದಿಮೂರನೆಯ ದಲಾಯಿ ಲಾಮಾರಿಗೆ ಸೇರಿದ ಎಲ್ಲ ಸೊತ್ತುಗಳನ್ನೂ “ಇದು ನನ್ನದು" ಎನ್ನುತ್ತಾ ಲಾಮೊ ಸರಿಯಾಗಿ ಗುರುತಿಸಿದ.

ಅನಂತರ ಟಿಬೆಟಿನ ಪ್ರಾಚೀನ ಬೌದ್ಧ ಶಾಲೆಗೆ ಲಾಮೊನನ್ನು ಕರೆದೊಯ್ಯಲಾಯಿತು. ಅಲ್ಲಿ ಆತನಿಗೆ ಸೂಕ್ತ ಮಾರ್ಗದರ್ಶನ ನೀಡಿ, ಆತನನ್ನು ಟಿಬೆಟಿಯನ್ನರ ರಾಜಕೀಯ ಮತ್ತು ಅಧ್ಯಾತ್ಮಿಕ ನಾಯಕನಾದ ದಲಾಯಿ ಲಾಮಾನಾಗಿ ಬೆಳೆಸಲಾಯಿತು. ಅನಂತರ ಟಿಬೇಟಿನ ಮೇಲೆ ಚೀನಾ ದೇಶವು ದುರಾಕ್ರಮಣ ಮಾಡಿ, ಅದನ್ನು ಆಕ್ರಮಿಸಿಕೊಂಡದ್ದು, ಟಿಬೆಟಿಯನ್ನರ ಮೇಲೆ ಕ್ರೂರ ದಬ್ಬಾಳಿಕೆ ಮಾಡುತ್ತಿರುವುದು, ದಲಾಯಿ ಲಾಮಾ ಟಿಬೆಟಿನಿಂದ ಪಲಾಯನ ಮಾಡಿ, ತನ್ನ ಸಾವಿರಾರು ಅನುಯಾಯಿಗಳೊಂದಿಗೆ ಭಾರತದಲ್ಲಿ ಆಶ್ರಯ ಪಡೆದದ್ದು ಈಗ ಚರಿತ್ರೆ. ಈಗಲೂ ಟಿಬೆತನ್ನು ಚೀನಾದ ಆಕ್ರಮಣದಿಂದ ಪಾರು ಮಾಡಲು ದಲಾಯಿ ಲಾಮಾ ಅವರ ಹೋರಾಟ ಮುಂದುವರಿದಿದೆ. ಇಡೀ ಜಗತ್ತು ದಲಾಯಿ ಲಾಮಾ ಅವರನ್ನು ವಿಶ್ವಗುರು ಎಂದು ಗೌರವಿಸುತ್ತದೆ.

Pages