HRM

ಸೋದರರಾದ ಓರ್-ವಿಲ್ಲೆ ಮತ್ತು ವಿಲ್ಬುರ್ ರೈಟ್ ತಮ್ಮ ಸೈಕಲುಗಳನ್ನು ಏರಿ ಹಳ್ಳಿಯ ಪರಿಸರದಲ್ಲಿ ಓಡಾಡುತ್ತಿದ್ದರು. ಆಗ ಆಕಾಶದಲ್ಲಿ ಹಾರುವ ಹಕ್ಕಿಗಳನ್ನು ಕಂಡು ಆನಂದಿಸುತ್ತಿದ್ದರು. “ನಮಗೂ ಆಕಾಶದಲ್ಲಿ ಆ ಹಕ್ಕಿಗಳಂತೆ ಹಾರಲು ಸಾಧ್ಯವಾದರೆ ಎಷ್ಟು ಖುಷಿ, ಅಲ್ಲವೇ?” ಎಂದು ಅವರು ಮಾತಾಡಿಕೊಳುತ್ತಿದ್ದರು.

ಅವರು ತಾಯಿಯಿಂದ ಹಲವಾರು ವಸ್ತುಗಳನ್ನು ರಿಪೇರಿ ಮಾಡಲು ಕಲಿತರು. ಅನಂತರ ಅವರು ಹಲವು ಮಕ್ಕಳ ಆಟಿಕೆಗಳನ್ನು ಮನೆಯಲ್ಲೇ ತಯಾರಿಸಿ ಹಣ ಗಳಿಸತೊಡಗಿದರು. ಮುಂದೆ, ಜಾಗತಿಕ ಆರ್ಥಿಕ ಹಿನ್ನಡೆ ಮತ್ತು ಅನಾರೋಗ್ಯಗಳಿಂದಾಗಿ ಅವರ ಕುಟುಂಬ ಸಂಕಷ್ಟ ಎದುರಿಸಿತು. ಅವರು ಎಲ್ಲ ಸವಾಲುಗಳನ್ನು ಎದುರಿಸಿ, ಒಂದು ಸೈಕಲ್ ಷಾಪ್ ಆರಂಭಿಸಿದರು.

ತದನಂತರ ಅವರು ಆಕಾಶದಲ್ಲಿ ಹಾರುವ ಯಂತ್ರವೊಂದನ್ನು ನಿರ್ಮಿಸಲಿಕ್ಕಾಗಿ ತಮ್ಮ ಪ್ರಯೋಗಗಳನ್ನು ಶುರು ಮಾಡದರು. ಅದೇ ರೀತಿಯ ಪ್ರಯೋಗಗಳನ್ನು ನಡೆಸುತ್ತಿದ್ದ ಇತರ ಅನ್ವೇಷಕರನ್ನು ಸಂಪರ್ಕಿಸಿದರು. ತಮ್ಮ ಷಾಪಿನಲ್ಲಿ "ಗಾಳಿ ಸುರಂಗ”ವನ್ನು ನಿರ್ಮಿಸಿ, ವಿವಿಧ ವಿನ್ಯಾಸದ ರೆಕ್ಕೆಗಳನ್ನು ಪರೀಕ್ಷಿಸಿದರು. ಅನೇಕ ಪ್ರಯೋಗಗಳು, ಹಲವು ವರುಷಗಳ ಪರಿಶ್ರಮ ಮತ್ತು ನೂರಾರು ನಿಷ್ಪಲ ಪ್ರಯತ್ನಗಳ ನಂತರ, ರೈಟ್ ಸೋದರರಿಗೆ ಆಕಾಶದಲ್ಲಿ ಹಾರುವ ವಿಮಾನವೊಂದನ್ನು ರೂಪಿಸಲು ಸಾಧ್ಯವಾಯಿತು. ತಮ್ಮ ಸೈಕಲ್ ಷಾಪ್‌ನಲ್ಲೇ ನಿರ್ಮಿಸಿದ ಅದಕ್ಕೆ “ರೈಟ್ ಫ್ಲೈಯರ್" ಎಂದು ಹೆಸರಿಟ್ಟರು. ಕ್ರಮೇಣ ಅವರ ಯಶೋಗಾಥೆ ಜಾಗತಿಕ ಮಟ್ಟದಲ್ಲಿ ಸುದ್ದಿಯಾಯಿತು.

ಆ ಊರಿನ ಹೊರವಲಯದಲ್ಲಿ ವಾಸ ಮಾಡುವ ವ್ಯಕ್ತಿ ಬಹಳ ಬುದ್ಧಿವಂತ; ಯಾವುದೇ ಪ್ರಶ್ನೆ ಕೇಳಿದರೂ ಆತ ಉತ್ತರ ಕೊಡುತ್ತಾನೆ ಎಂದು ಜನರು ಮಾತಾಡಿಕೊಳ್ಳುತ್ತಿದ್ದರು. ಹತ್ತಿರದ ಹಳ್ಳಿಯ ಇಬ್ಬರು ಯುವಕರು ಆ ಬುದ್ಧಿವಂತನನ್ನು ಮೂರ್ಖನನ್ನಾಗಿ ಮಾಡಬೇಕೆಂದು ನಿರ್ಧರಿಸಿದರು. ಅವರು ಒಂದು ಸಣ್ಣ ಹಕ್ಕಿಯನ್ನು ಹಿಡಿದುಕೊಂಡು ಆ ಬುದ್ಧಿವಂತನ ಮನೆಗೆ ಹೋದರು.

ಬುದ್ಧಿವಂತ ಇಬ್ಬರು ಯುವಕರನ್ನು ಎದುರುಗೊಂಡ. ಒಬ್ಬ ಯುವಕ ಆ ಹಕ್ಕಿಯನ್ನು ತನ್ನ ಅಂಗೈಗಳ ಒಳಗೆ ಮುಚ್ಚಿಟ್ಟುಕೊಂಡು ಬುದ್ಧಿವಂತನ ಬಳಿ ಪ್ರಶ್ನೆ ಕೇಳಿದ, "ನನ್ನ ಕೈಯಲ್ಲಿರುವ ಹಕ್ಕಿ ಸತ್ತಿದೆಯಾ ಅಥವಾ ಜೀವಂತ ಇದೆಯಾ?"

ಬುದ್ಧಿವಂತನಿಗೆ ಇವರ ಹುನ್ನಾರ ಅರ್ಥವಾಯಿತು. ಅವನು ಹೀಗೆಂದು ಉತ್ತರಿಸಿದ: “ನಾನೀಗ ಹಕ್ಕಿ ಜೀವಂತ ಇದೆಯೆಂದು ಉತ್ತರಿಸಿದರೆ, ನೀನು ಅಂಗೈಗಳಿಂದ ಆ ಹಕ್ಕಿಯನ್ನು ಅಮುಕಿ ಕೊಲ್ಲುತ್ತಿ; ಬದಲಾಗಿ ಆ ಹಕ್ಕಿ ಸತ್ತಿದೆ ಎಂದು ನಾನು ಉತ್ತರಿಸಿದರೆ, ನೀನು ಅಂಗೈಗಳನ್ನು ತೆರೆದು, ಅದು ಹಾರಿ ಹೋಗಲು ಬಿಡುತ್ತಿ. ಆ ಹಕ್ಕಿಯ ಸಾವು ಅಥವಾ ಬದುಕು ನಿನ್ನ ಕೈಯಲ್ಲಿದೆ." ತನ್ನ ಮಾತನ್ನು ಮುಂದುವರಿಸಿ ಆ ಯುವಕರಿಗೆ ಬುದ್ಧಿವಂತ ಹೇಳಿದ, "ಹಾಗೆಯೇ ಯಶಸ್ಸು ಮತ್ತು ಸೋಲು ನಿಮ್ಮ ಕೈಯಲ್ಲೇ ಇದೆ. ಅಂದರೆ ಎಲ್ಲವೂ ನಿಮ್ಮ ಕೈಯಲ್ಲಿದೆ. ಹಾಗಾಗಿ ನಿಮ್ಮ ಕೈಗಳನ್ನು ಒಳ್ಳೆಯ ಕೆಲಸಗಳಿಗೆ ಉಪಯೋಗಿಸಿ." ಬುದ್ಧಿವಂತನ ಮಾತುಗಳನ್ನು ಕೇಳಿದ ಯುವಕರು ಮಾತಾಡದೆ ಅಲ್ಲಿಂದ ತಮ್ಮ ಮನೆಗೆ ನಡೆದರು.

ದನಗಾಹಿಯೊಬ್ಬ ಮರದಡಿಯಲ್ಲಿ ಕುಳಿತು ವಿರಮಿಸುತ್ತಿದ್ದ. ಅಲ್ಲೇ ನಡೆದು ಹೋಗುತ್ತಿದ್ದ ವೃದ್ಧನೊಬ್ಬ ಆತನನ್ನು ನೋಡಿ, ಕೇಳಿದ, “ನೀನಿಲ್ಲಿ ಕುಳಿತುಕೊಂಡು ಏನು ಮಾಡುತ್ತಿದ್ದಿ?” ದನಗಾಹಿ ಉತ್ತರಿಸಿದ, “ಏನೂ ಇಲ್ಲ, ನಾನು ವಿರಮಿಸುತ್ತಿದ್ದೇನೆ.” “ಏನೂ ಮಾಡುತ್ತಿಲ್ಲ ಅಂದರೆ ನೀನು ನಿನ್ನ ಸಮಯವನ್ನು ವ್ಯರ್ಥ ಮಾಡುತ್ತಿದ್ದಿ” ಎಂದ ವೃದ್ಧ. ಆತ ತನ್ನ ಮಾತು ಮುಂದುವರಿಸಿ, “ಇದರ ಬದಲಾಗಿ ನೀನು ಅಮೂಲ್ಯ ಸಮಯವನ್ನು ನಿನಗೆ ಇಷ್ಟವಾದ ಕೆಲಸ ಮಾಡಲು ಅಥವಾ ದೊಡ್ಡ ಗುರಿ ಸಾಧನೆಗೆ ಉಪಯೋಗಿಸಬೇಕು” ಎಂದ.

"ಹಾಗೆ ಮಾಡಿದರೆ ಮುಂದೆ ಏನಾಗುತ್ತದೆ?" ಎಂದು ದನಗಾಹಿ ವೃದ್ಧನನ್ನು ಪ್ರಶ್ನಿಸಿದ. ವೃದ್ಧ ಉತ್ತರಿಸಿದ, “ನೀನು ಹಣ ಸಂಪಾದಿಸಬಹುದು, ದೊಡ್ಡ ಬಂಗಲೆ ಕಟ್ಟಬಹುದು ಮತ್ತು ನೀನು ಆಶೆ ಪಡುವ ಯಾವುದೇ ವಸ್ತುವನ್ನು ಖರೀದಿಸಬಹುದು.” “ಅನಂತರ ಏನಾಗುತ್ತದೆ?" ಎಂದು ದನಗಾಹಿ ಪುನಃ ಕೇಳಿದ. ವೃದ್ಧ ಹೀಗೆಂದು ಉತ್ತರಿಸಿದ: “ಅನಂತರ ನೀನು ಸಂತೋಷದಿಂದ ಬದುಕಬಹುದು ಮತ್ತು ವಿರಮಿಸಬಹುದು.”

ದನಗಾಹಿ ಮುಗುಳ್ನಕ್ಕು ವೃದ್ಧನಿಗೆ ಹೇಳಿದ, “ಅಜ್ಜಾ, ನಾನು ಈಗಲೇ ಸಂತೋಷದಿಂದ ಇದ್ದೇನೆ ಮತ್ತು ವಿರಮಿಸುತ್ತಿದ್ದೇನೆ. ಹಾಗಿರುವಾಗ, ಅದನ್ನೆಲ್ಲಾ ಯಾಕೆ ಮಾಡಬೇಕು?” ಈ ಪ್ರಶ್ನೆಗೆ ಉತ್ತರ ಕೊಡಲು ವೃದ್ಧನಿಗೆ ಸಾಧ್ಯವಾಗಲಿಲ್ಲ. ಹಾಗಾಗಿ ದನಗಾಹಿ ತನ್ನ ಮಾತನ್ನು ಮುಂದುವರಿಸಿದ, “ಅಜ್ಜಾ, ಬೇರೆಬೇರೆ ವ್ಯಕ್ತಿಗಳಿಗೆ ಬೇರೆಬೇರೆ ಸಂಗತಿಗಳು ಸಂತೋಷ ಕೊಡುತ್ತವೆ. ಕೆಲವರಿಗೆ ಹಣ, ಆಭರಣ, ಬಂಗಲೆ ಸಂತೊಷ ಕೊಟ್ಟರೆ, ಇನ್ನು ಕೆಲವರಿಗೆ ಪ್ರಚಾರ, ಕೀರ್ತಿ, ಯಶಸ್ಸು ಸಂತೋಷ ಕೊಡುತ್ತವೆ. ಇನ್ನೂ ಕೆಲವರು ನನ್ನ ಹಾಗೆ ತಮ್ಮ ಕಾಯಕವನ್ನೇ ಪ್ರೀತಿಸುತ್ತಾರೆ ಅಥವಾ ತಾವು ಪ್ರೀತಿಸುವ ಕಾಯಕವನ್ನೇ ಮಾಡುತ್ತಾರೆ."

ಜಗದ್ವಿಖ್ಯಾತ “ಹ್ಯಾರಿ ಪೊಟ್ಟರ್ ಸರಣಿ” ಕಾದಂಬರಿಗಳ ಲೇಖಕಿ ಜೆ. ಕೆ. ರೌಲಿಂಗ್. ಈ ಪ್ರತಿಭಾವಂತ ಕಾದಂಬರಿಗಾರ್ತಿ ಇಂಗ್ಲೆಡಿನ ಚಿಪ್ಪಿಂಗ್ ಸೊಡ್‌ಬರಿ ಎಂಬಲ್ಲಿ ಬಡ ತಂದೆತಾಯಿಯರ ಮಗಳಾಗಿ ಹುಟ್ಟಿದಳು. ಶಾಲಾ ವಿದ್ಯಾಭ್ಯಾಸದ ನಂತರ, ಜೊಅನ್ನೇ ಕಾಥ್ಲೀನ್ ರೌಲಿಂಗ್ ಇಂಗ್ಲಿಷ್ ಕಲಿಸಲಿಕ್ಕಾಗಿ ಪೋರ್ಚ್‌ಗಲಿಗೆ ಹೋದಳು. ಅಲ್ಲಿ ಅವಳು ಪತ್ರಕರ್ತನೊಬ್ಬನನ್ನು ಮದುವೆಯಾದಳು. ಅವರಿಗೊಬ್ಬಳು ಮಗಳು ಹುಟ್ಟಿದಳು. ಆದರೆ, ಅವರ ಮದುವೆ ಮುರಿದು ಬಿತ್ತು.

ಅನಂತರ, ಜೆ. ಕೆ. ರೌಲಿಂಗ ಇಂಗ್ಲೆಂಡಿಗೆ ಹಿಂತಿರುಗಿ, ತನ್ನ ಸೋದರಿಯೊಂದಿಗೆ ವಾಸ ಮಾಡ ತೊಡಗಿದಳು. ತನ್ನ ಮಗಳನ್ನು ಸಾಕಲಿಕ್ಕಾಗಿ ಬಹಳ ಕಷ್ಟ ಪಟ್ಟಳು. ಕ್ರಮೇಣ ಅವಳು ಮಾನಸಿಕ ಖಿನ್ನತೆಯಿಂದ ಬಳಲಿದಳು. ಆಗಲೇ ಅವಳು ತನ್ನ ಮೊದಲ ಕಾದಂಬರಿಯನ್ನು ಬರೆಯ ತೊಡಗಿದ್ದು.

“ಹ್ಯಾರಿ ಪೊಟ್ಟರ್ ಆಂಡ್ ದ ಫಿಲೋಸೊಫರ್ಸ್ ಸ್ಟೋನ್” ಜೆ. ಕೆ. ರೌಲಿಂಗಳ ಮೊದಲ ಕಾದಂಬರಿ. ಅದನ್ನು ಹಲವು ಪ್ರಕಾಶಕರು ತಿರಸ್ಕರಿಸಿದರು. ಕೊನೆಗೂ ಅದನ್ನು ಪ್ರಕಾಶಕರೊಬ್ಬರು ಖರೀದಿಸಿ ಪ್ರಕಟಿಸಿದರು. ಆ ಸರಣಿಯ ಮುಂದಿನ ಕಾದಂಬರಿಗಳ ಮಾರಾಟ ಒಂದು ಜಾಗತಿಕ ದಾಖಲೆ - ಅತ್ಯಧಿಕ ಸಂಖ್ಯೆಯ ಪ್ರತಿಗಳ ಮಾರಾಟಕ್ಕಾಗಿ. ಬದುಕಿನಲ್ಲಿ ಯಶಸ್ಸಿನ ಬೆಂಬತ್ತುತ್ತಲೇ ಇರಬೇಕು, ಯಾವುದೇ ಹಂತದಲ್ಲಿ ಕೈಚೆಲ್ಲಬಾರದು ಎಂಬುದನ್ನು ಸಾಧಿಸಿ ತೋರಿಸಿದಾಕೆ ಜೆ. ಕೆ. ರೌಲಿಂಗ್. ಇವತ್ತು ಜಗತ್ತಿನ ಲಕ್ಷಗಟ್ಟಲೆ ಮಕ್ಕಳು ಮತ್ತು ಹಿರಿಯರು ಕತೆಕಾದಂಬರಿಗಳನ್ನು ಓದಲು ಆಕೆಯೇ ಪ್ರೇರಣೆ. ಕೇವಲ ಐದು ವರುಷಗಳಲ್ಲಿ, ಸರಕಾರದ ಹಣ ಸಹಾಯದಿಂದ ದಿನ ದೂಡುತ್ತಿದ್ದ ಮಹಿಳೆಯಾಗಿದ್ದಾಕೆ ಜಗತ್ತಿನ ಅತಿ ಶ್ರೀಮಂತ ಮಹಿಳೆಯರಲ್ಲಿ ಒಬ್ಬಳಾಗಿ ಬದಲಾದದ್ದು ಒಂದು ರೋಚಕ ಪ್ರಸಂಗ. ಇಂತಹ ಸಾಧನೆಗೈದ ಜೆ. ಕೆ. ರೌಲಿಂಗ್ ಪರಿಶ್ರಮದ ದುಡಿಮೆ ಮತ್ತು ದೃಢ ನಿರ್ಧಾರ ಸಾಧನೆಯ ಸೋಪಾನಗಳು ಎಂಬುದಕ್ಕೊಂದು ಜ್ವಲಂತ ನಿದರ್ಶನ.

ನೀವು ಸಿಡ್ನಿ ಪೊಯಿಟರ್ ಹೆಸರನ್ನು ಖಂಡಿತವಾಗಿ ಕೇಳಿರುತ್ತೀರಿ. ಬಹಾಮಾಸ್‌ನಿಂದ ಅವನ ಹೆತ್ತವರು ಅಮೇರಿಕಾದ ಫ್ಲೋರಿಡಾದ ಮಿಯಾಮಿಗೆ ರಜೆಯಲ್ಲಿ ಬಂದಿದ್ದಾಗ ಅಲ್ಲಿ ಆತನ ಜನನ. ಬಹಾಮಾಸ್‌ಗೆ ಹೆತ್ತವರ ಜೊತೆ ಹಿಂತಿರುಗಿದ ಸಿಡ್ನಿ ಪೊಯಿಟರ್, ಅಲ್ಲಿ ತನ್ನ ತಂದೆಯ ಟೊಮೆಟೊ ಹೊಲದಲ್ಲಿ ಕೆಲಸ ಮಾಡುತ್ತಾ ಬೆಳೆದ. ಕೊನೆಗೆ ಆ ಕೃಷಿಯಿಂದ ನಷ್ಟವಾಯಿತು. ಆಗ ಅವನ ತಂದೆ, ದುಡಿದು ಬದುಕಲಿಕ್ಕಾಗಿ ಸಿಡ್ನಿ ಪೊಯಿಟರನನ್ನು ಯು.ಎಸ್.ಎ. ದೇಶಕ್ಕೆ ಕಳಿಸಿದ.

ಹೀಗೆ ಅಮೇರಿಕಕ್ಕೆ ಬಂದಿಳಿದ ಯುವಕ ಸಿಡ್ನಿ ಪೊಯಿಟರ್ ಮಹಾನಗರ ನ್ಯೂಯಾರ್ಕಿನಲ್ಲಿ ಸಣ್ಣಪುಟ್ಟ ಕೆಲಸಗಳನ್ನು ಮಾಡತೊಡಗಿದ. ಒಮ್ಮೆ, “ನಟರು ಬೇಕಾಗಿದ್ದಾರೆ" ಎಂಬ ಜಾಹೀರಾತನ್ನು ಅವನು ವಾರ್ತಾಪತ್ರಿಕೆಯಲ್ಲಿ ನೋಡಿದ. ಹೆಚ್ಚು ಶಿಕ್ಷಣ ಪಡೆಯದಿದ್ದ ಸಿಡ್ನಿ ಪೊಯಿಟರ್ ಚಲನಚಿತ್ರ ಸಂಭಾಷಣೆಗಳ ಬರಹ (ಸ್ಕ್ರಿಪ್ಟ್) ಓದಲು ತಡಬಡಾಯಿಸಿದ. ಈತನನ್ನು ಅಲ್ಲಿಂದ ಹೊರಕ್ಕೆ ತಳ್ಳಿದ ಆ ಚಲನಚಿತ್ರದ ನಿರ್ಮಾಪಕ ಈತನಿಗೆ ಹೇಳಿದ್ದು ಹೀಗೆ: “ಹೋಗು, ಇಲ್ಲಿಂದ ಹೋಗು. ಎಲ್ಲಾದರೂ  ಪಾತ್ರೆ ತೊಳೆಯುವಂತಹ ಕೆಲಸವಿದ್ದರೆ ಹುಡುಕು.”

ಆ ಕ್ಷಣದಲ್ಲಿ ಸಿಡ್ನಿ ಪೊಯಿಟರ್ ಮನಸ್ಸಿನಲ್ಲಿ ಮೂಡಿದ ಯೋಚನೆ: "ನಾನು ಪಾತ್ರೆ ತೊಳೆಯುವ ಕೆಲಸದವನಂತೆ ಕಾಣಿಸುತ್ತೇನೆಯೇ?” ಆದರೆ, ಆ ಕ್ಷಣದಿಂದ ಅವನ ಜೀವನವೇ ಬದಲಾಯಿತು. ಅವನು ಚೆನ್ನಾಗಿ ಕಾಣಲಿಕ್ಕಾಗಿ ಒಳ್ಳೆಯ ಉಡುಪು ಧರಿಸ ತೊಡಗಿದ ಮತ್ತು ನಟನೆಯೇ ತನ್ನ ಜೀವನದ ಗುರಿಯೆಂದು ನಿರ್ಧರಿಸಿ ಅದನ್ನು ಸಾಧಿಸಲಿಕ್ಕಾಗಿ ಪರಿಶ್ರಮ ಪಡತೊಡಗಿದ. ಕೊನೆಗೂ ಅವನು ಜಗತ್ತಿನ ಶ್ರೇಷ್ಠ ಚಲನಚಿತ್ರ ನಟರಲ್ಲಿ ಒಬ್ಬನೆಂದು ಪ್ರಖ್ಯಾತನಾದ. ಕರಿಯ ಜನಾಂಗದವರಲ್ಲಿ ಮೊತ್ತಮೊದಲ ಅಕಾಡೆಮಿ ಪುರಸ್ಕಾರ (1963ರಲ್ಲಿ) ಪಡೆದ ನಟನೆಂದು ಅವನು ಹೆಸರಾದ.

ನಾಗರಾಜ ಪುಸ್ತಕವೊಂದನ್ನು ಓದುತ್ತಿದ್ದ. ಅವನ ಪುಟ್ಟ ಮಗಳು ಧ್ರುವಿ ಅವನ ಬಳಿ ಆಗಾಗ ಏನಾದರೊಂದನ್ನು ಮಾತನಾಡುತ್ತಾ ಅವನ ಏಕಾಗ್ರತೆಗೆ ಅಡ್ಡಿ ಮಾಡುತ್ತಿದ್ದಳು. ಅವಳಿಗೆ ಬಹಳ ಸಮಯ ತಗಲುವ ಯಾವ ಚಟುವಟಿಕೆ ಕೊಡಬಹುದೆಂದು ಯೋಚಿಸಿದ ನಾಗರಾಜ. ಕೊನೆಗೆ, ಜಗತ್ತಿನ ಭೂಪಟವೊಂದನ್ನು ಪುಸ್ತಕದಿಂದ ಹರಿದು ತೆಗೆದ; ಅದನ್ನು ಚೂರುಚೂರು ಮಾಡಿ, ಅವಳಿಗೆ ಕೊಡುತ್ತಾ ಹೇಳಿದ, “ಹೋಗು, ನಿನ್ನ ಕೋಣೆಗೆ ಹೋಗು. ಈ ಕಾಗದದ ಚೂರುಗಳನ್ನೆಲ್ಲ ಜೋಡಿಸಿ ಜಗತ್ತಿನ ಭೂಪಟ ಮಾಡು.”

ಪುಟ್ಟ ಮಗಳಿಗೆ ಜಗತ್ತಿನ ಭೂಪಟ ಜೋಡಿಸಲು ಸಂಜೆಯ ವರೆಗೆ ಸಮಯ ಬೇಕಾದೀತೆಂದು ನಾಗರಾಜ ಯೋಚಿಸಿದ್ದ. ಆದರೆ, ಅವನ ಮಗಳು ಮೂರೇ ನಿಮಿಷಗಳಲ್ಲಿ ಜಗತ್ತಿನ ಭೂಪಟವನ್ನು ಜೋಡಿಸಿ, ಅಪ್ಪನನ್ನ ಕರೆದು ತೋರಿಸಿದಳು! ನಾಗರಾಜನಿಗೆ ಅಚ್ಚರಿಯೋ ಅಚ್ಚರಿ. “ಅದು ಹೇಗೆ ಅಷ್ಟು ಬೇಗನೇ ಜಗತ್ತಿನ ಭೂಪಟ ಜೋಡಿಸಿದೆ?” ಎಂದಾತ ಕೇಳಿದ. ಧ್ರುವಿ ಹೇಳಿದಳು, “ಅಪ್ಪಾ, ಆ ಪುಟದ ಹಿಂಬದಿಯಲ್ಲಿ ಒಬ್ಬ ಮನುಷ್ಯನ ಮುಖದ ಚಿತ್ರವಿತ್ತು. ನಾನು ಮನುಷ್ಯನ ಮುಖದ ಚೂರುಗಳನ್ನು ಜೋಡಿಸಿದಾಗ, ಈ ಬದಿಯಲ್ಲಿ ಜಗತ್ತಿನ ಭೂಪಟ ಸರಿಯಾಗಿ ಮೂಡಿ ಬಂತು." ಹೀಗೆನ್ನುತ್ತಾ ಅವಳು ಪಕ್ಕದ ಮನೆಯ ಮಕ್ಕಳೊಂದಿಗೆ ಆಟವಾಡಲು ಹೊರಗೆ ಓಡಿದಳು.

ಇದನ್ನೆಲ್ಲಾ ಗಮನಿಸುತ್ತಿದ್ದ ನಾಗರಾಜನ ತಾಯಿ ಹೇಳಿದರು, “ನೋಡು, ನಮ್ಮ ಎಲ್ಲ ಸಮಸ್ಯೆಗಳಿಗೂ ಇನ್ನೊಂದು ಮುಖ ಇರುತ್ತದೆ. ನೀನು ಆ ಮುಖವನ್ನು ಗಮನಿಸಿದರೆ, ಹಲವು ಸಂದರ್ಭಗಳಲ್ಲಿ ಸಮಸ್ಯೆ ಸುಲಭವಾಗಿ ಪರಿಹಾರವಾಗ್ತದೆ.”

ಅಲೆಕ್ಸಾಂಡರ್‌ ಗ್ರಹಾಮ್ ಬೆಲ್‌ಗೆ ಬಾಲ್ಯದಿಂದಲೂ ಶಬ್ದದ ಬಗ್ಗೆ ಕುತೂಹಲ. ಅವನ ಅಮ್ಮ ಬಹುಪಾಲು ಕಿವುಡಿ. ಅವನ ಅಪ್ಪ ಕಿವುಡರಿಗೆ ಮಾತು ಕಲಿಯಲು ಸಹಾಯ ಮಾಡುತ್ತಿದ್ದ. ಅಲೆಕ್ಸಾಂಡರ್ ತನ್ನ ಅಮ್ಮನ ಖುಷಿಗಾಗಿ ಪಿಯಾನೋ ನುಡಿಸುತ್ತಿದ್ದ ಮತ್ತು ಅವಳ ಕೈಯಲ್ಲಿ ಸಂಕೇತಗಳನ್ನು ತಟ್ಟಿ, ಅವಳು ಇತರರ ಮಾತುಗಳನ್ನು ಅರ್ಥ ಮಾಡಿಕೊಳ್ಳಲು ಸಹಕರಿಸುತ್ತಿದ್ದ.

ವಿದ್ಯಾಭ್ಯಾಸ ಮುಗಿಸಿದ ನಂತರ ಅಲೆಕ್ಸಾಂಡರ್ ಪ್ರೊಫೆಸರ್ ಆದ. ಸಂಜೆಯ ಸಮಯದಲ್ಲಿ ಅವನು ಮನುಷ್ಯನ ಧ್ವನಿಯನ್ನು ಇಲೆಕ್ಟ್ರಾನಿಕ್ ವಿಧಾನದಿಂದ ದೂರಕ್ಕೆ ಕಳಿಸುವ ಯೋಜನೆಯೊಂದರಲ್ಲಿ ಕೆಲಸ ಮಾಡುತ್ತಿದ್ದ. ಹೀಗೆ ಹಲವಾರು ವರುಷ ಸಂಶೋಧನೆ ಮಾಡಿದ ನಂತರ ಆ ಯೋಜನೆಯನ್ನು ಮುಂದುವರಿಸಲಿಕ್ಕಾಗಿ ದಿನವಿಡೀ ಕೆಲಸ ಮಾಡಲು ಅವನಿಗೆ ಧನ ಸಹಾಯ ಲಭ್ಯವಾಯಿತು. ಅಷ್ಟರಲ್ಲಿ, ಉಸಿರಾಟದ ಸಮಸ್ಯೆಯಿಂದಾಗಿ ಅವನ ಶಿಶುವೊಂದು ಅಸು ನೀಗಿತು. ಅಂತಹ ಸಮಸ್ಯೆ ಇರುವ ಮಕ್ಕಳಿಗೆ ಸಹಾಯ ಮಾಡಬೇಕೆಂಬ ದೃಢ ನಿರ್ಧಾರದಿಂದ ಸಂಶೋಧನೆ ನಡೆಸಿದ ಅಲೆಕ್ಸಾಂಡರ್ ಕಬ್ಬಿಣದ ಶ್ವಾಸಕೋಶ ರೂಪಿಸಿ ಸಾವಿರಾರು ಮಕ್ಕಳ ಜೀವ ಉಳಿಸಿದ. ವಾಟ್ಸನ್ ಎಂಬ ವ್ಯಕ್ತಿಯ ಸಹಾಯದಿಂದ ಮನುಷ್ಯನ ಧ್ವನಿಯನ್ನು ರವಾನಿಸಬಲ್ಲ ಉಪಕರಣವೊಂದನ್ನು ಅಲೆಕ್ಸಾಂಡರ್ ಕೊನೆಗೂ ನಿರ್ಮಿಸಿದ. ಹೀಗೆ ಟೆಲಿಫೋನ್ ರೂಪಿಸುವ ಆತನ ಕನಸು ನನಸಾಯಿತು. ತನ್ನ ಕನಸುಗಳನ್ನು ನನಸಾಗಿಸಲು ನಿರಂತರವಾಗಿ ಶ್ರಮಿಸಿದ ಅಲೆಕ್ಸಾಂಡರನಿಗೆ ಕೊನೆಗೂ ಯಶಸ್ಸು ಸಿಕ್ಕಿತು.

ರೈತನೊಬ್ಬ ಹುಲ್ಲಿನ ಮೆದೆಯಲ್ಲಿ ತನ್ನ ವಾಚನ್ನು ಕಳೆದುಕೊಂಡ. ಅದು ಅವನ ಅಜ್ಜ ಕೊಟ್ಟಿದ್ದ ಕೊಡುಗೆ. ಆದ್ದರಿಂದ ಅವನ ಅಚ್ಚುಮೆಚ್ಚಿನ ವಾಚ್ ಅದಾಗಿತ್ತು. ಅವನು ಎರಡು ಗಂಟೆ ಹುಲ್ಲಿನ ಮೆದೆಯಲ್ಲಿ ಹುಡುಕಿದರೂ ಅವನಿಗೆ ವಾಚ್ ಸಿಗಲಿಲ್ಲ. ಆತ ಕೈಚೆಲ್ಲಿ, ಅಲ್ಲೇ ಆಟವಾಡುತ್ತಿದ್ದ ಮಕ್ಕಳಿಗೆ ತನ್ನ ವಾಚ್ ಹುಡುಕಿಕೊಡಬೇಕೆಂದು ಹೇಳಿದ. ತನ್ನ ವಾಚನ್ನು ಹುಡುಕಿ ಕೊಟ್ಟವರಿಗೆ ಬಹುಮಾನ ಕೊಡುತ್ತೇನೆಂದೂ ಘೋಷಿಸಿದ. ಆ ಮಕ್ಕಳೆಲ್ಲರೂ ಹುಲ್ಲಿನ ಮೆದೆಯ ಮೂಲೆಮೂಲೆಯಲ್ಲಿ ಹುಡುಕಿದರೂ ಅವರಿಗೆ ವಾಚ್ ಸಿಗಲಿಲ್ಲ.

ಆ ರೈತ ನಿರಾಶನಾದ. ಆಗ ಪುಟ್ಟ ಹುಡುಗಿಯೊಬ್ಬಳು “ನನಗೆ ದಯವಿಟ್ಟು ಇನ್ನೊಮ್ಮೆ ಹುಡುಕಲು ಬಿಡಿ” ಎಂದು ರೈತನನ್ನು ವಿನಂತಿಸಿದಳು. ಅವಳ ವಿನಂತಿಗೆ ಒಪ್ಪಿದ ರೈತ ಅವಳನ್ನು ಪುನಃ ಹುಲ್ಲಿನ ಮೆದೆಯ ಬಳಿಗೆ ಕಳಿಸಿದ. ಸ್ವಲ್ಪ ಹೊತ್ತಿನ ನಂತರ ಪುಟ್ಟ ಹುಡುಗಿ ರೈತನ ಬಳಿಗೆ ಬಂದಳು; ಅವಳ ಕೈಯಲ್ಲಿ ಅವನ ವಾಚ್ ಇತ್ತು! ರೈತನಿಗೆ ಸಂತೋಷ ಹಾಗೂ ಅಚ್ಚರಿ. ಅವನು ಕೇಳಿದ, “ಬೇರೆ ಯಾರಿಗೂ ಸಿಗದ ವಾಚ್ ನಿನಗೆ ಹೇಗೆ ಸಿಕ್ಕಿತು?” ಪುಟ್ಟ ಹುಡುಗಿ ಉತ್ತರಿಸಿದಳು, "ನಾನು ಅಲ್ಲಿ ನೆಲದಲ್ಲಿ ಕುಳಿತು ಗಮನವಿಟ್ಟು ಕೇಳಿದೆ. ಅಲ್ಲಿನ ಮೌನದಲ್ಲಿ ನನಗೆ ವಾಚಿನ ಟಿಕ್‌ಟಿಕ್ ಶಬ್ಚ ಕೇಳಿಸಿತು. ತಕ್ಷಣವೇ ಆ ಶಬ್ದ ಬರುತ್ತಿದ್ದಲ್ಲಿಗೆ ಹೋಗಿ ಹುಡುಕಿದೆ.”

ಹಲವಾರು ವರುಷಗಳ ಹಿಂದೆ ಥೋಮಸ್ ಮತ್ತು ನ್ಯಾನ್ಸಿ ಲಿಂಕನ್ ಒಂದೇ ಕೋಣೆಯ ಮನೆಯಲ್ಲಿ ವಾಸ ಮಾಡುತ್ತಿದ್ದರು. ಅವರ ಮಗನೇ ಅಬ್ರಹಾಂ ಲಿಂಕನ್. ಅವನು ಬೆಳೆದಂತೆ ಅನೇಕ ಸೋಲುಗಳನ್ನು ಎದುರಿಸಬೇಕಾಯಿತು. ಅವನ 21ನೆಯ ವರುಷದಲ್ಲಿ ಒಂದು ವ್ಯವಹಾರದಲ್ಲಿ ಅವನು ಭಾರೀ ನಷ್ಟ ಅನುಭವಿಸಿದ. ತನ್ನ 22ನೆಯ ವಯಸ್ಸಿನಲ್ಲಿ ಶಾಸನ ಸಭೆಯ ಚುನಾವಣೆಯಲ್ಲಿ ಅವನಿಗೆ ಸೋಲುಂಟಾಯಿತು. ತನ್ನ 24ನೆಯ ವಯಸ್ಸಿನಲ್ಲಿ ಅವನು ಪುನಃ ವ್ಯವಹಾರದಲ್ಲಿ ನಷ್ಟದಲ್ಲಿ ಮುಳುಗಿದ. 26ನೆಯ ವಯಸ್ಸಿನಲ್ಲಿ ಅವನು ಪ್ರೀತಿಸಿದ್ದ ಯುವತಿ ತೀರಿಕೊಂಡಳು.

ಮುಂದಿನ ವರುಷ ಅಬ್ರಹಾಂ ಲಿಂಕನ್ ನರಮಂಡಲದ ಕುಸಿತಕ್ಕೆ ಒಳಗಾಗಿ ಹೈರಾಣಾದ. ಅನಂತರ, ಅವನ 37ನೆಯ ವಯಸ್ಸಿನಲ್ಲಿ ಯು.ಎಸ್.ಎ. ದೇಶದ ಕಾಂಗ್ರೆಸಿನ ಚುನಾವಣೆಗೆ ಸ್ಪರ್ಧಿಸಿ ಸೋತು ಹೋದ. ಅದಾಗಿ ಹತ್ತು ವರುಷಗಳಲ್ಲಿ (47ನೆಯ ವಯಸ್ಸಿನಲ್ಲಿ) ಯು.ಎಸ್.ಎ. ದೇಶದ ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದರೂ ಅವನು ಗೆಲ್ಲಲಿಲ್ಲ. ಪುನಃ ಅವನ 49ನೆಯ ವಯಸ್ಸಿನಲ್ಲಿಯೂ ಹಾಗೆಯೇ ಆಯಿತು. ಇಷ್ಟೆಲ್ಲ ಸೋಲುಗಳು ಒಂದಾದ ಮೇಲೊಂದರಂತೆ ಅಪ್ಪಳಿಸಿದರೂ ಅಬ್ರಹಾಂ ಲಿಂಕನ್ ಎದೆಗುಂದಲಿಲ್ಲ. ಅಂತಿಮವಾಗಿ, 52ನೆಯ ವಯಸ್ಸಿನಲ್ಲಿ ಅಬ್ರಹಾಂ ಲಿಂಕನ್ ಅಮೇರಿಕಾದ 16ನೇ ಅಧ್ಯಕ್ಷನಾಗಿ ಚುನಾಯಿತನಾದ. ತದನಂತರ ಸಿವಿಲ್ ಯುದ್ಧದಲ್ಲಿ ಅಮೇರಿಕಾವನ್ನು ಮುನ್ನಡೆಸಿ, ಜೀತ ಪದ್ಧತಿಯನ್ನು ನಿಷೇಧಿಸಿದ. ಜಗತ್ತಿನಲ್ಲಿ ಧನಾತ್ಮಕ ಬದಲಾವಣೆ ತರುತ್ತೇನೆಂಬ ನಂಬಿಕೆಯನ್ನೇ ನೆಚ್ಚಿಕೊಂಡು ಬಾಳಿದ ಅಬ್ರಹಾಂ ಲಿಂಕನ್ ಚರಿತ್ರೆಯಲ್ಲಿ ಅಚ್ಚಳಿಯದ ಸಾಧನೆ ಮಾಡಿದ ಕೆಲವೇ ವ್ಯಕ್ತಿಗಳಲ್ಲಿ ಒಬ್ಬನೆಂಬುದು ದೊಡ್ಡ ಸಾಧನೆ.

ವಾಲ್ಟ್ ಡಿಸ್ನಿಯ ಬಾಲ್ಯದ ಹವ್ಯಾಸ ಕಾರ್ಟೂನುಗಳನ್ನು ಚಿತ್ರಿಸುವುದು. ಅಂತೂ ತನ್ನ 19ನೆಯ ವಯಸ್ಸಿನಲ್ಲಿಯೇ ಆತ ತನ್ನದೇ ಕಂಪೆನಿ ಶುರು ಮಾಡಿದ. ತಾನು ಬಾಲ್ಯದಲ್ಲಿ ನೋಡಿದ ಪ್ರಾಣಿಗಳ ಕಾರ್ಟೂನುಗಳನ್ನೇ ಅವನು ಚಿತ್ರಿಸುತ್ತಿದ್ದ. ಆದರೆ ಅವನು ಹಲವು ಸವಾಲುಗಳನ್ನು ಎದುರಿಸಬೇಕಾಯಿತು. ತನ್ನ ಮನೆಯ ಬಾಡಿಗೆ ಕೊಡಲಿಕ್ಕೂ ಅವನಲ್ಲಿ ಹಣವಿರಲಿಲ್ಲ. ಆದ್ದರಿಂದ ಅವನು ತನ್ನ ಗೆಳೆಯರೊಂದಿಗೆ ವಾಸ ಮಾಡುತ್ತಿದ್ದ. ಹಲವು ದಿನ ಅವನಲ್ಲಿ ಏನಾದರೂ ತಿನ್ನಲಿಕ್ಕೂ ಹಣ ಇರುತ್ತಿರಲಿಲ್ಲ.

ತಾನು ಚಿತ್ರಿಸಿದ ಕಾರ್ಟೂನುಗಳನ್ನು ಜನರು ಮೆಚ್ಚುತ್ತಾರೆ; ಅದರಿಂದಾಗಿ ತಾನು ಹಣ ಗಳಿಸಬಹುದು ಎಂಬುದು ಅವನ ಕನಸು. ಒಂದೇ ಒಂದು ಕಾರ್ಟೂನನ್ನೂ ಮಾರಾಟ ಮಾಡಲು ಸಾಧ್ಯವಾಗದಿದ್ದರೂ ಅವನು ಕಾರ್ಟೂನುಗಳನ್ನು ಚಿತ್ರಿಸುತ್ತಲೇ ಇದ್ದ. ಒಮ್ಮೆ ವಾರ್ತಾಪತ್ರಿಕೆಯ ಸಂಪಾದಕನೊಬ್ಬ ಅವನನ್ನು ಉದ್ಯೋಗದಿಂದ ವಜಾ ಮಾಡಿ ಹೇಳಿದ, "ನಿನಗೆ ಕಲ್ಪನಾ ಶಕ್ತಿಯೂ ಇಲ್ಲ, ಒಳ್ಳೆಯ ಐಡಿಯಾಗಳೂ ಇಲ್ಲ.” ಆದರೆ ವಾಲ್ಟ್ ಡಿಸ್ನಿ ಹತಾಶನಾಗಲಿಲ್ಲ. ಅನಂತರ ಅವನು ಹಲವು ವ್ಯವಹಾರಗಳನ್ನು ಶುರು ಮಾಡಿದ; ಆದರೆ ಯಾವುದೂ ದೀರ್ಘ ಕಾಲ ಮುಂದುವರಿಯಲಿಲ್ಲ.

ಮತ್ತೆಮತ್ತೆ ಸೋಲು ಎದುರಾದರೂ ವಾಲ್ಟ್ ಡಿಸ್ನಿ ತನ್ನ ಪ್ರಯತ್ನ ಮುಂದುವರಿಸಿದ. ಅಂತಿಮವಾಗಿ ಯಶಸ್ಸು ಅವನಿಗೆ ಒಲಿಯಿತು. ಅದೊಂದು ದಿನ ಒಂದು ಚರ್ಚಿನ ಮಿನಿಸ್ಟರ್ ಕೆಲವು ಕಾರ್ಟೂನುಗಳನ್ನು ಚಿತ್ರಿಸಲಿಕ್ಕಾಗಿ ವಾಲ್ಟ್ ಡಿಸ್ನಿಯನ್ನು ಕರೆಸಿದ. ಅಲ್ಲಿ ವಾಲ್ಟ್ ಡಿಸ್ನಿ ಒಂದು ಸಣ್ಣ ಇಲಿಯನ್ನು ಕಂಡ. ತಕ್ಷಣವೇ ಅವನ ಮನಸ್ಸಿನಲ್ಲೊಂದು ಅದ್ಭುತ ಐಡಿಯಾ ಹೊಳೆಯಿತು. ಅದುವೇ “ಮಿಕಿ ಮೌಸ್”ಗೆ ನಾಂದಿಯಾಯಿತು. ಈಗ, ವಾಲ್ಟ್ ಡಿಸ್ನಿಯ ಕಂಪೆನಿ ಪ್ರತಿ ವರುಷ ಕೋಟಿಗಟ್ಟಲೆ ರೂಪಾಯಿ ಹಣ ಗಳಿಸುತ್ತಿದೆ - ಚಲನಚಿತ್ರಗಳಿಂದ, ಲಕ್ಷಗಟ್ಟಲೆ ಜನರು ಮನರಂಜನೆಗಾಗಿ ಭೇಟಿ ನೀಡುವ ಥೀಮ್ ಪಾರ್ಕುಗಳಿಂದ ಮತ್ತು ಡಿಸ್ನಿಲೋಕದ ವಸ್ತುಗಳ ಮಾರಾಟದಿಂದ. ಬದುಕಿನಲ್ಲಿ ಯಶಸ್ಸು ನಿಮ್ಮದಾಗಬೇಕಾದರೆ, ನೀವು ನಿಮ್ಮ ಕನಸುಗಳ ಬೆಂಬತ್ತಬೇಕು.

Pages