Consumers' Forum & RTI

ಜಡ್ಡುಗಟ್ಟಿದ್ದ ಆಡಳಿತ ವ್ಯವಸ್ಥೆಯಲ್ಲಿ ದಕ್ಷತೆ, ಚುರುಕುತನ ಮತ್ತು ಹೊಸತನ ತರಲು ಕೇಂದ್ರ ಸರಕಾರ ಮುಂದಾಗಿದೆ. ಭಾರತೀಯರನ್ನು ಗುಲಾಮಿಗಳನ್ನಾಗಿಯೇ ಇರಿಸಿ ದಮನಿಸಲಿಕ್ಕಾಗಿ ಮತ್ತು ಈ ದೇಶದ ಸಂಪತ್ತನ್ನೆಲ್ಲ ದೋಚಲಿಕ್ಕಾಗಿ ಬ್ರಿಟಿಷರು ರೂಪಿಸಿದ್ದ ಆಡಳಿತ ವ್ಯವಸ್ಥೆಯಲ್ಲಿ “ನೇರ ನೇಮಕಾತಿ” ಎಂಬ ಬದಲಾವಣೆಗೆ ರಂಗ ಸಜ್ಜಾಗಿದೆ.

ಅದುವೇ “ಐ.ಎ.ಎಸ್.ಗೆ ಪರ್ಯಾಯ ವ್ಯವಸ್ಥೆ” ಎಂಬ ಚಾರಿತ್ರಿಕ ಬದಲಾವಣೆ. ಇದರಿಂದಾಗಿ ಕೇಂದ್ರ ಸರಕಾರದ ಉನ್ನತ ಹುದ್ದೆ ಪಡೆಯಲು ಐ.ಎ.ಎಸ್. ಅಧಿಕಾರಿಗಳಿಗೆ ಮಾತ್ರ ಸಾಧ್ಯ ಎಂಬ ಪರಿಸ್ಥಿತಿ ಬದಲಾಗಲಿದೆ. ದೇಶದ ಆಡಳಿತ ನಡೆಸುವುದರಲ್ಲಿ ಮಹತ್ವದ ಪಾತ್ರ ವಹಿಸುವ ಉನ್ನತಾಧಿಕಾರಿಗಳ ನೇಮಕ ಪ್ರಕ್ರಿಯೆಯನ್ನು ಸ್ವಾತಂತ್ರ್ಯ ಗಳಿಸಿದ ೭೦ ವರುಷಗಳ ನಂತರವಾದರೂ ಕೇಂದ್ರ ಸರಕಾರ ಬದಲಾಯಿಸಿರುವುದು ಸ್ವಾಗತಾರ್ಹ. ಇನ್ನು ಮುಂದೆ ಐ.ಎ.ಎಸ್. ಅಧಿಕಾರಿಗಳಿಗೆ ಪರ್ಯಾಯವಾಗಿ ಖಾಸಗಿ ರಂಗದ ತಜ್ನರನ್ನು ಜಂಟಿ ಕಾರ್ಯದರ್ಶಿ ಹುದ್ದೆಗಳಿಗೆ ನೇರವಾಗಿ ನೇಮಕ ಮಾಡಿಕೊಳ್ಳುವ ಪ್ರಕ್ರಿಯೆಯನ್ನು ೧೦ ಜೂನ್ ೨೦೧೮ರಂದು ಕೇಂದ್ರ ಸರಕಾರ ಘೋಷಿಸಿದೆ.

ಮೊದಲ ಹಂತದಲ್ಲಿ ೧೦ ಇಲಾಖೆಗಳ ಜಂಟಿ ಕಾರ್ಯದರ್ಶಿ ಹುದ್ದೆಗಳಿಗೆ ವೃತ್ತಿಪರರಿಂದ ಆನ್-ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಆ ಇಲಾಖೆಗಳು: ಕಂದಾಯ, ಹಣಕಾಸು ಸೇವೆ, ಆರ್ಥಿಕ ವ್ಯವಹಾರ, ಕೃಷಿ, ಸಹಕಾರ, ರೈತಕಲ್ಯಾಣ, ರಸ್ತೆ ಸಾರಿಗೆ ಮತ್ತು ಹೆದ್ದಾರಿ, ಬಂದರು, ಪರಿಸರ, ಅರಣ್ಯ ಮತ್ತು ಹವಾಮಾನ ವೈಪರೀತ್ಯ, ಹೊಸ ಮತ್ತು ನವೀಕರಿಸಬಲ್ಲ ಇಂಧನ, ನಾಗರಿಕ ವಿಮಾನಯಾನ, ವಾಣಿಜ್ಯ.

ಕೇಂದ್ರ ನಾಗರಿಕ ಸೇವಾ ಆಯೋಗದ (ಯುಪಿಎಸ್ಸಿ) ಪರೀಕ್ಷೆಯಲ್ಲಿ ಉನ್ನತ ಶ್ರೇಣಿ ಪಡೆದು, ಐ.ಎ.ಎಸ್. ಅಧಿಕಾರಿ ವರ್ಗಕ್ಕೆ ಆಯ್ಕೆಯಾಗಿ, ಒಂದು ದಶಕಕ್ಕಿಂತ ಅಧಿಕ ಸೇವಾ ಅನುಭವ ಗಳಿಸಿದ ಐ.ಎ.ಎಸ್. ಅಧಿಕಾರಿಗಳನ್ನು ಮಾತ್ರ ಜಂಟಿ-ಕಾರ್ಯದರ್ಶಿ ಹುದ್ದೆಗೆ ನೇಮಿಸುವುದು ಈಗಿನ ಪರಿಪಾಠ. ಆದರೆ ಇನ್ನು ಮುಂದೆ ಖಾಸಗಿ ರಂಗದ ತಜ್ನರಿಗೂ, ಅನುಭವಿಗಳಿಗೂ ಜಂಟಿ-ಕಾರ್ಯದರ್ಶಿ ಹುದ್ದೆಗೇರುವ ಅವಕಾಶ.

ಡೆಲ್ಲಿ ಮಾರುಕಟ್ಟೆಯಲ್ಲಿ ಮಾರುವ ಹಣ್ಣುತರಕಾರಿಗಳಲ್ಲಿ ಅಪಾಯಕಾರಿ ಮಟ್ಟದ ರಾಸಾಯನಿಕ ಪೀಡೆನಾಶಕ (ಪೆಸ್ಟಿಸೈಡ್)ಗಳ ಅಂಶಗಳಿವೆ ಎಂಬುದು ಪತ್ತೆಯಾದದ್ದು ೨೦೧೦ರಲ್ಲಿ. ಅದಾಗಿ ಎರಡು ವರುಷಗಳ ನಂತರ, ಈಗ ಕೇಂದ್ರ ಸರಕಾರವು ಪರಿಣತರ ಸಮಿತಿಯೊಂದನ್ನು ರಚಿಸಿದೆ - ಆಹಾರವಸ್ತುಗಳಲ್ಲಿ ಪೀಡೆನಾಶಕಗಳ ವಿಷಾಂಶ ನಿವಾರಣೆಗೆ ನೀತಿ ನಿರೂಪಣೆಗಾಗಿ.

ಡೆಲ್ಲಿ ಹೈಕೋರ್ಟಿನ ಆದೇಶದ ಅನುಸಾರ ಕೃಷಿ ಮಂತ್ರಾಲಯವು ೭ ಸದಸ್ಯರ ಸಮಿತಿಯೊಂದನ್ನು ಮಾರ್ಚ್ ೨೦೧೨ರಂದು ರಚಿಸಿದೆ. ಕೇಂದ್ರ ಪೀಡೆನಾಶಕ ಪ್ರಯೋಗಾಲಯದ ವೈದ್ಯಕೀಯ ವಿಷಶಾಸ್ತ್ರ ವಿಭಾಗದ ಸರಿತಾ ಭಲ್ಲಾ ಈ ಸಮಿತಿಯ ಮುಖ್ಯಸ್ಥರು. ಆಹಾರವಸ್ತುಗಳಲ್ಲಿ ನಿಗದಿತ ಅವಧಿಗೊಮ್ಮೆ ಪೀಡೆನಾಶಕಗಳ ವಿಷಾಂಶಗಳನ್ನು ಪತ್ತೆಮಾಡುವ ಬಗ್ಗೆ ನೀತಿ (ಪಾಲಿಸಿ) ನಿರೂಪಣೆ ಮಾಡಬೇಕೆಂದು ಸಮಿತಿಗೆ ಸೂಚಿಸಲಾಗಿದೆ. ಈ ನೀತಿಯು ಇಡೀ ದೇಶದಲ್ಲಿ ಜ್ಯಾರಿಯಾಗುತ್ತದೆ ಎಂದು ನಿರೀಕ್ಷೆ.

೨೦೧೦ರಲ್ಲಿ "ಕನ್ಸ್ಯೂಮರ್ ವಾಯ್ಸ್" ಎಂಬ ಡೆಲ್ಲಿಯ ಸರಕಾರೇತರ ಸಂಸ್ಥೆಯು ಪ್ರಕಟಿಸಿದ ವರದಿಯ ಆಧಾರದಿಂದ ಡೆಲ್ಲಿ ಹೈಕೋರ್ಟ್ ಈ ಪ್ರಕರಣವನ್ನು ತಾನಾಗಿಯೇ ಕೈಗೆತ್ತಿಕೊಂಡಿತ್ತು. ಆ ವರದಿಯ ಪ್ರಕಾರ, ಡೆಲ್ಲಿಯ ಮಾರುಕಟ್ಟೆಗಳಿಂದ ಖರೀದಿಸಿದ ೩೫ ಬಗೆಯ ಹಣ್ಣುತರಕಾರಿಗಳಲ್ಲಿ ನಿಷೇಧಿತ ಪೀಡೆನಾಶಕಗಳ ಅಂಶವು ಪ್ರಾಣಾಪಾಯದ ಮಟ್ಟದಲ್ಲಿತ್ತು. ಉದಾಹರಣೆಗೆ, ಹಣ್ಣುತರಕಾರಿಗಳಿಗೆ ರೈತರು ಸಿಂಪಡಿಸುವ ಪೀಡೆನಾಶಕಗಳ ಪ್ರಮಾಣವು, ಯುರೋಪಿನಲ್ಲಿ ಇದಕ್ಕಾಗಿ ನಿಗದಿಪಡಿಸಿದ ಪ್ರಮಾಣಗಳಿಗಿಂತ ೭೫೦ ಪಟ್ಟು ಅಧಿಕ! ಆ ಅಧ್ಯಯನದಲ್ಲಿ ಪತ್ತೆಯಾದ ಒಂದು ನಿಷೇಧಿತ ಪೀಡೆನಾಶಕ ಹೆಪ್ಟಾಕ್ಲೋರ್; ಇದು ಯಕೃತ್ತಿಗೆ ಹಾನಿಮಾಡಬಲ್ಲದು.

ಕನ್ಸೂಮರ್ ವಾಯ್ಸ್ ಸಂಸ್ಥೆಯ ಶಿಶಿರ್ ಘೋಷ್ ಹೀಗೆನ್ನುತ್ತಾರೆ, "ಪೀಡೆನಾಶಕಗಳನ್ನು ರೈತರು ಅಸಡ್ಡೆಯಿಂದ ಬಳಸುವುದನ್ನು ತಡೆಯಲು ಸರಕಾರಕ್ಕೆ ಇಷ್ಟವಿಲ್ಲ. ಇಲ್ಲವಾದರೆ, ಇದಕ್ಕಾಗಿ ನೀತಿ ನಿರೂಪಣೆ ಮಾಡಲಿಕ್ಕಾಗಿ ಸಮಿತಿ ರಚಿಸಲು ಎರಡು ವರುಷ ವಿಳಂಬ ಮಾಡಬೇಕಿತ್ತೇ?"

ಪುಣೆಯಲ್ಲಿ ಕೆಲವು ದಿನಸಿ ಅಂಗಡಿಗಳ ಮಾಲೀಕರು ಕಲಬೆರಕೆಯ ಆಹಾರವಸ್ತುಗಳನ್ನು ಮಾರಾಟ ಮಾಡುತ್ತಿದ್ದರು. ಪಡಿತರ ಚೀಟಿದಾರರು ಈ ಕಾನೂನುಬಾಹಿರ ವ್ಯವಹಾರವನ್ನು ಪ್ರತಿಭಟಿಸಿದರು. ಆದರೆ ಮಾಲೀಕರು ತಮ್ಮ ತಪ್ಪು ತಿದ್ದಿಕೊಳ್ಳಲಿಲ್ಲ.
ಅನಂತರ ಒಂದು ದಿನ ಆ ಅಂಗಡಿಗಳ ಎದುರು ರೆಡ್ ಬ್ರಿಗೇಡ್ (ಕೆಂಪು ಸೈನ್ಯ) ಸದಸ್ಯರು ಜಮಾಯಿಸಿದರು. ಕೆಂಪು ಸೀರೆಗಳನ್ನುಟ್ಟ ಸುಮಾರು ನೂರು ಮಹಿಳೆಯರನ್ನು ಕಂಡು ಅಂಗಡಿ ಮಾಲೀಕರು ಅಧೀರರಾದರು. ಅವರ ಪ್ರತಿಭಟನೆ ಕಂಡು ಬೆಚ್ಚಿಬಿದ್ದರು. ಕೊನೆಗೆ ಆ ಮಾಲೀಕರು ಮಾತುಕತೆಗೆ ತಯಾರಾದರು. ಇನ್ನು ಮುಂದೆ ಕಲಬೆರಕೆ ಮಾಡಬಾರದೆಂದು ರೆಡ್ ಬ್ರಿಗೇಡ್ ಮುಂದಾಳುಗಳು ತಾಕೀತು ಮಾಡಿದರು. ಒಂದು ವೇಳೆ ಕಲಬೆರಕೆ ಮಾಡಿದರೆ, ಪುನಃ ರೆಡ್ ಬ್ರಿಗೇಡಿನ ಪ್ರತಿಭಟನೆ ಎದುರಿಸ ಬೇಕಾಗುತ್ತದೆಂದು ಎಚ್ಚರಿಸಿದರು.
ಪುಣೆಯ ರೆಡ್ ಬ್ರಿಗೇಡಿನ ಮುಖ್ಯಸ್ಥೆ ಅಪರ್ಣಾ ದರಾಡೆಗೆ ಈ ಅನುಭವ ಹೊಸತಲ್ಲ. ಔರಂಗಾಬಾದ್ ಜಿಲ್ಲೆಯ ಹಳ್ಳಿಯೊಂದರಲ್ಲಿ ಬಾಲ್ಯ ಕಳೆದ ಅಪರ್ಣಾ ಎಂ.ಎ. (ಚರಿತ್ರೆ) ಸ್ನಾತಕೋತ್ತರ ಪದವೀಧರೆ. ೩೫ ವರುಷ ವಯಸ್ಸಿನ ಅಪರ್ಣಾ ಎರಡು ಮಕ್ಕಳ ತಾಯಿ. ಇವರ ಪತಿ ಕಮ್ಯುನಿಸ್ಟ್ ಧೋರಣೆಗಳ ಬೆಂಬಲಿಗರು. ಇದರಿಂದ ಪ್ರಭಾವಿತರಾದ ಅಪರ್ಣಾರಿಗೂ ಸಮಾಜಕ್ಕಾಗಿ ತಾನೂ ಏನಾದರೂ ಮಾಡಬೇಕೆನಿಸಿತು. ಮಹಿಳೆಯರ ಮೇಲೆ ಎಲ್ಲ ರೀತಿಯ ದೌರ್ಜನ್ಯಗಳು ನಡೆಯುತ್ತಿದ್ದು, ಅವರನ್ನು ಬೆಂಬಲಿಸಲು ಯಾರೂ ಇಲ್ಲವೆಂಬುದನ್ನು ಅಪರ್ಣಾ ಗಮನಿಸಿದರು. “ಏಕಾಂಗಿ ಮಹಿಳೆ ತಾನೇ ಮುಂದಾಗಿ ಅನ್ಯಾಯಗಳನ್ನು ಪ್ರತಿಭಟಿಸುವುದು ಕಷ್ಟ. ಆದ್ದರಿಂದ ನಾವು ಸಂಘಟಿತರಾಗಿ ಹೋರಾಡಲು ನಿರ್ಧರಿಸಿದೆವು” ಎನ್ನುತ್ತಾರೆ ಅಪರ್ಣಾ.

ಭಾರತದಲ್ಲಿ ನಕಲು ಮಾಡುವುದು ಲಾಭಾದಾಯಕ. ಶಿಕ್ಷಣರಂಗದ ಪರಿಣತರು, ವೈಜ್ನಾನಿಕ ಸಂಸ್ಥೆಗಳ ತಜ್ನರು, ಪ್ರಕಾಶನ ಸಂಸ್ಥೆಯವರು, ಕಾನೂನು ತಜ್ನರು – ಇವರ್ಯಾರೂ ನಕಲು ಮಾಡುವುದರಲ್ಲಿ ಹಿಂದೆ ಬಿದ್ದಿಲ್ಲ. ಆದರೆ, ಇತ್ತೀಚೆಗೆ ಕೆಲವು ವಿಶ್ವವಿದ್ಯಾಲಯಗಳ ಉಪಕುಲಪತಿಗಳೂ ನಕಲು ಮಾಡಿ ಸಿಕ್ಕಿಬಿದ್ದಿದ್ದಾರೆ ಎಂಬುದೇ ಸುದ್ದಿ.
ಪಾಂಡಿಚೇರಿ ವಿಶ್ವವಿದ್ಯಾಲಯದ ಉಪಕುಲಪತಿಯಾಗಿದ್ದ ಚಂದ್ರಾ ಕೃಷ್ಣಮೂರ್ತಿಯವರು ಹಗರಣ ಗಮನಿಸಿ. ಇವರ ಪುಸ್ತಕವೊಂದರ ಬಹುಪಾಲು ನಕಲು ಹೊಡೆದದ್ದು ಎಂಬುದು ಆಪಾದನೆ. ಇದರಿಂದಾಗಿ ಕೇಂದ್ರ ಮಾನವ ಸಂಪನ್ಮೂಲ ಮಂತ್ರಾಲಯದೊಂದಿಗೆ ಬಿಕ್ಕಟ್ಟು. ಅಂತಿಮವಾಗಿ ಮೇ ೨೦೧೬ರಲ್ಲಿ ಇವರಿಂದ ಹುದ್ದೆಗೆ ರಾಜೀನಾಮೆ. ಈ ಹಗರಣ ಅಲ್ಲಿಗೇ ಮುಗಿಯಲಿಲ್ಲ. ಕೇಂದ್ರ ಮಂತ್ರಾಲಯವು ಈ ಹಗರಣದ ಬೆಮ್ಬತ್ತಿ, ರಾಷ್ಟ್ರಪತಿಗಳ ಒಪ್ಪಿಗೆ ಪಡೆದು, ಆಕೆಯನ್ನು  ಹುದ್ದೆಯಿಂದ ವಜಾ ಮಾಡಿತು. ಇದು ಅಚ್ಚರಿ. ಯಾಕೆಂದರೆ ಇಂತಹದೇ ಬೇರೆ ಹಗರಣಗಳಲ್ಲಿ ಮಂತ್ರಾಲಯವು ಈ ರೀತಿಯ ಉತ್ಸಾಹ ತೋರಿಲ್ಲ.
ಇಂತಹ ಇನ್ನೊಂದು ಹಗರಣ ಹೈದರಾಬಾದ್ ವಿಶ್ವವಿದ್ಯಾಲಯದ ಉಪಕುಲಪತಿ ಅಪ್ಪಾರಾವ್ ಪೊಡೈಲ್ ಅವರಿಗೆ ಸಂಬಂಧಿಸಿದ್ದು. (ರೋಹಿತ್ ವೇಮುಲನ ಆತ್ಮಹತ್ಯೆ ಬಳಿಕ ವಿದ್ಯಾರ್ಥಿ ಪ್ರತಿಭಟನೆ ನಿಯಂತ್ರಿಸಲು ಪೊಲೀಸರನ್ನು ಇವರು ಕರೆಸಿದ್ದು ದೊಡ್ಡ ಸುದ್ದಿಯಾಯಿತು.) ಆದರೆ ಮತ್ತೆಮತ್ತೆ ಇವರು ನಕಲು ಮಾಡಿದ್ದಾರೆಂಬ ಆಪಾದನೆ ಸುದ್ದಿಯಾಗಿಲ್ಲ. ಇತರ ಪ್ರಾಧ್ಯಾಪಕರೊಂದಿಗೆ ಇವರು ಪ್ರಕಟಿಸಿದ ಮೂರು ಸಂಶೋಧನಾ ಪ್ರಬಂಧಗಳಲ್ಲಿ ಬೇರೆಯವರ ಪ್ರಬಂಧಗಳಿಂದ ಪ್ಯಾರಾಪ್ಯಾರಾಗಳನ್ನೇ ನಕಲು ಮಾಡಿದ್ದರು ಎಂಬುದು ಆಪಾದನೆ. “ವೈರ್” ಎಂಬ ಪತ್ರಿಕೆಯ ಪ್ರತಿನಿಧಿ ಈ ಬಗ್ಗೆ ಅಪ್ಪಾರಾಯರನ್ನು ಮಾತನಾಡಿಸಿದಾಗ, ತಾನು ಆ ಪ್ರಬಂಧಗಳನ್ನು ಹಿಂತೆಗೆಯುವುದಾಗಿ ಹೇಳಿದರು. ಅದೇ ಉಸಿರಿನಲ್ಲಿ, ಈ ವಿಚಾರದಲ್ಲಿ ಏನು ಮಾಡಬೇಕೆಂದು ಆ ಪ್ರತಿನಿಧಿಯ ಸಲಹೆ ಕೇಳಿದರು! “ಇಂತಹ ಪ್ರಕರಣಗಳಲ್ಲಿ ಇತರ ಲೇಖಕರು ಏನು ಮಾಡಿದ್ದಾರೆಂದು ದಯವಿಟ್ಟು ಸಲಹೆ ನೀಡಿ. ನಾವೂ ಅದನ್ನೇ ಅನುಸರಿಸುತ್ತೇವೆ….” ಎಂಬುದು ಅಪ್ಪಾರಾಯರ ವಿನಂತಿ.

ವರ್ಷಾನುಗಟ್ಟಲೆ ಪತ್ರಿಕೆಗಳಲ್ಲಿ, ರೇಡಿಯೋದಲ್ಲಿ, ಟಿವಿಯಲ್ಲಿ ರಾಜಾರೋಷವಾಗಿ ಪ್ರಕಟವಾಗುತ್ತಿದ್ದ ಕೆಲವು ಔಷಧಿಗಳ ಜಾಹೀರಾತುಗಳನ್ನು ನೆನಪು ಮಾಡಿಕೊಳ್ಳಿ: (i) ವಿಕ್ಸ್-ಆಕ್ಷನ್ ೫೦೦-ಎಕ್ಸ್ ಟ್ರಾ, ಕ್ರೋಸಿನ್ –ಕೋಲ್ಡ್ ಆಂಡ್ ಫ್ಲೂ - ಇವು ಶೀತ ಮತ್ತು ಫ್ಲೂ (ಜ್ವರ) ಗುಣ ಪಡಿಸಲು ಪರಿಣಾಮಕಾರಿ (ii) ಸಾರಿಡಾನ್ – ತಲೆನೋವಿಗೆ ಪರಿಹಾರ (iii) ಗ್ಲೈಕೊಡಿನ್, ಕೊರೆಕ್ಸ್, ಅಲೆಕ್ಸ್, ಬೆನಡ್ರಿಲ್, ಫೆನ್ಸೆಡೈಲ್ – ಈ ಕಾಫ್ ಸಿರಪುಗಳು ಕೆಮ್ಮಿಗೆ ರಾಮಬಾಣ.
ಇನ್ನು ಈ ಜಾಹೀರಾತುಗಳೆಲ್ಲ ಬಂದ್! ಯಾಕೆಂದರೆ, ಕೇಂದ್ರ ಸರಕಾರದ ಆರೋಗ್ಯ ಮಂತ್ರಾಲಯ ಇವನ್ನೆಲ್ಲ ನಿಷೇಧಿಸಿದೆ. ಇಂತಹ ೩೪೪ ಫಿಕ್ಸೆಡ್ ಡೋಸ್ ಕಾಂಬಿನೇಷನ್ (ಎಫ್ ಡಿ ಸಿ) ಔಷಧಿಗಳ ಮೇಲೆ ನಿಷೇಧ ಹೇರಲಾಗಿದೆ
ಎಫ್ ಡಿ ಸಿ ಎಂದರೆ ಎರಡು ಅಥವಾ ಜಾಸ್ತಿ ಔಷಧಿಗಳು ನಿಶ್ಚಿತ ಅನುಪಾತದಲ್ಲಿರುವ ಸಂಯುಕ್ತ ಔಷಧಿ. ಉದಾಹರಣೆಗೆ ಪಿರಾಮಲ್ ಹೆಲ್ತ್ ಕೇರ್ ಕಂಪೆನಿಯ “ಸಾರಿಡಾನ್” ಎಂಬುದು ಪಾರಸಿಟಮೋಲ್, ಕೆಫೇನ್ ಮತ್ತು ಪ್ರೊಪಿಫಿನಜೋನ್ – ಈ ಮೂರು ಸೇರಿರುವ ಸಂಯುಕ್ತ ಔಷಧಿ. ಇಂತಹ ಎಫ್ ಡಿ ಸಿಗಳನ್ನು ತಮ್ಮ ಅನಾರೋಗ್ಯ ಗುಣಪಡಿಸಿಕೊಳ್ಳಲಿಕ್ಕಾಗಿ ಸೇವಿಸುತ್ತಿದ್ದವರು ಲಕ್ಷಗಟ್ಟಲೆ ಜನರು. ಅವರೆಲ್ಲರೂ ಈಗ ಬೆಚ್ಚಿ ಬಿದ್ದಿದ್ದಾರೆ.
ಹಾಗೆಯೇ ಕಾಫ್ ಸಿರಪುಗಳನ್ನು ನುಂಗುತ್ತಿದ್ದವರು ಸಾವಿರಾರು ಜನರು. ಅವರೆಲ್ಲರಿಗೂ ಕಾಫ್ ಸಿರಪ್ ಕುಡಿದ ನಂತರ ಅಮಲು ಅನಿಸುತ್ತಿತ್ತು. ಆದರೂ, ಗಂಟಲಿಗೆ ಸೋಂಕು ತಗಲಿದಾಗೆಲ್ಲ ಕಾಫ್ ಸಿರಪ್ ಸೇವಿಸುತ್ತಿದ್ದರು. ಈಗ ಇಂತವರು ಕೇಳುವ ಪ್ರಶ್ನೆ, “ಈ ಔಷಧಿಗಳು ಸುರಕ್ಷಿತವಲ್ಲ ಎಂದಾದರೆ ಅವನ್ನು ಮಾರಾಟ ಮಾಡಲು ಸರಕಾರ ಪರವಾನಗಿ ಕೊಟ್ಟದ್ದು ಯಾಕೆ?”
ಕೇಂದ್ರ ಸರಕಾರದ ಆರೋಗ್ಯ ಮಂತ್ರಾಲಯವು ಔಷಧಿಗಳಿಗೆ ಪರವಾನಗಿ ಕೊಡುವ ಪ್ರಕ್ರಿಯೆ, ಹಲವು ಹಂತಗಳ ಕ್ಲಿನಿಕಲ್ ಟ್ರಯಲು (ಪರೀಕ್ಷೆ)ಗಳಿರುವ ಕಠಿಣ ಪ್ರಕ್ರಿಯೆ. ಆದರೆ, ಕೆಲವು ಔಷಧಿ ಉತ್ಪಾದಕರು, ರಾಜ್ಯ ಸರಕಾರದ ಔಷಧಿ ನಿಯಂತ್ರಣ ಅಧಿಕಾರಿಗಳಿಂದ ಪರವಾನಗಿ ಪಡೆಯುವ ಮೂಲಕ, ಆ ಕಠಿಣ ಪ್ರಕ್ರಿಯೆಗಳಿಂದ ನುಣುಚಿಕೊಳ್ಳುತ್ತಿದ್ದಾರೆ.

ಹೆಸರುವಾಸಿ ಐಟಿ ಕಂಪೆನಿಗಾಗಿ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಕಂಪೆನಿ “ಹೆಡ್ ಹಂಟರ್ಸ್”ನ ಮುಖ್ಯಸ್ಥರಾದ ಕ್ರಿಸ್ ಲಕ್ಷ್ಮೀಕಾಂತರು ಪ್ರಸಂಗವೊಂದನ್ನು ತಿಳಿಸಿದ್ದಾರೆ. ಅಭ್ಯರ್ಥಿಯೊಬ್ಬನು ತನ್ನ “ವ್ಯಕ್ತಿ ಮಾಹಿತಿ”ಯಲ್ಲಿ ಪ್ರಸಿದ್ಧ ಇನ್ಫೋಸಿಸ್ ಕಂಪೆನಿಯಲ್ಲಿ ಕೆಲಸ ಮಾಡಿದ ಅನುಭವ ಇದೆಯೆಂದೂ, ತಾನು ಆ ಕಂಪೆನಿಯ ಯುಎಸ್ಎ ದೇಶದ ಕೆಲಸಕಾರ್ಯಗಳ ಮೇಲ್ವಿಚಾರಕನಾಗಿ ಇದ್ದುದಾಗಿಯೂ ಬರೆದುಕೊಂಡಿದ್ದ. ಈ ಬಗ್ಗೆ ಅವರು ತನಿಖೆ ಮಾಡಿದಾಗ ಸತ್ಯಸಂಗತಿ ಹೊರಬಿತ್ತು. ಆ ಅಭ್ಯರ್ಥಿ ಇನ್ಫೋಸಿಸ್ ಕಂಪೆನಿಯಲ್ಲಿ ಕೆಲಸ ಮಾಡಿರಲೇ ಇಲ್ಲ!
ಇದೇನೂ ಹೊಸತಲ್ಲ. ಬಹುಪಾಲು ಅಭ್ಯರ್ಥಿಗಳು ತಮ್ಮ “ವ್ಯಕ್ತಿ ಮಾಹಿತಿ”ಯಲ್ಲಿ ಶೇಕಡಾ ೧೫ರಷ್ಟು ಸುಳ್ಳು ಸಂಗತಿಗಳನ್ನು ಬರೆಯುತ್ತಾರೆ. ಅಂತಹ ಸುಳ್ಳು ಮಾಹಿತಿಯುಳ್ಳ ಉದ್ಯೋಗ ಅರ್ಜಿ ಪ್ರಕರಣಗಳ ಸಂಖ್ಯೆ ಭಾರತದಲ್ಲಿ ಹೆಚ್ಚುತ್ತಿದೆ. ಉದ್ಯೋಗಾಕಾಂಕ್ಷಿಗಳ ಹಿನ್ನೆಲೆ ಪರಿಶೀಲನಾ ಕಂಪೆನಿ “ಫಸ್ಟ್ ಅಡ್ವಾಂಟೇಜ್” ನಡೆಸಿದ ಅಧ್ಯಯನದ ಪ್ರಕಾರ, ಅಂತಹ ಅರ್ಜಿಗಳ ಪ್ರಮಾಣ ೨೦೧೪ರಲ್ಲಿ ಶೇ.೧೦.೪ರಿಂದ ೨೦೧೫ರಲ್ಲಿ ಶೇ.೧೧.೬ಕ್ಕೆ ಏರಿದೆ. ಸಾಮಾನ್ಯವಾಗಿ ಉದ್ಯೋಗಾಕಾಂಕ್ಷಿಗಳು ತಮ್ಮ ಅರ್ಜಿಯಲ್ಲಿ ಬರೆಯುವ ಸುಳ್ಳು ಮಾಹಿತಿ: ಅಂತಿಮ ವೇತನವನ್ನು ಇದ್ದದ್ದಕ್ಕಿಂತ ಹೆಚ್ಚಾಗಿ ನಮೂದಿಸುವುದು; ಮುಂಚಿನ ಉದ್ಯೋಗದಾತ ಕಂಪೆನಿಯಲ್ಲಿ ಕೆಲಸ ಮಾಡಿದ ಅವಧಿಯನ್ನು ಇದ್ದದ್ದಕ್ಕಿಂತ ಅಧಿಕವೆಂದು ಬರೆಯುವುದು.

ಹತ್ತು ವರುಷಗಳಿಂದೀಚೆಗೆ ಸಿಸೇರಿಯನ್ ಹೆರಿಗೆಗಳ ಸಂಖ್ಯೆ ಹೆಚ್ಚುತ್ತಿದೆಯೆಂದು ಹಲವರು ಮಾತಾಡುತ್ತಾರೆ. ಅಜ್ಜಿಯರಂತೂ ತಮ್ಮ ಕಾಲದಲ್ಲಿ ತಾಯಂದಿರು ಹತ್ತಾರು ಹೆತ್ತರೂ ಎಲ್ಲವೂ ಸಹಜ ಹೆರಿಗೆ; ಈಗಿನಂತೆ ಸಿಸೇರಿಯನ್ ಹೆರಿಗೆ ಆಗ ಇರಲಿಲ್ಲವೆಂದು ಹೇಳುತ್ತಲೇ ಇರುತ್ತಾರೆ.
ಅಜ್ಜಿಯರ ಮಾತನ್ನು ಅದೇನೋ ಭ್ರಮೆ ಎಂದು ತಳ್ಳಿ ಹಾಕುವಂತಿಲ್ಲ. ಯಾಕೆಂದರೆ ಢೆಲ್ಲಿಯಲ್ಲಿ ಸಿಸೇರಿಯನ್ ಹೆರಿಗೆಗಳ ಪ್ರಮಾಣ ಸರಕಾರಿ ಆಸ್ಪತ್ರೆಗಳಲ್ಲಿ ಶೇಕಡಾ ೨೩ಕ್ಕಿಂತ ಜಾಸ್ತಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಶೇಕಡಾ ೫೪. ಇದು ಸೀತಾರಾಮ್ ಭಾರ್ತಿಯಾ ವಿಜ್ನಾನ ಮತ್ತು ಸಂಶೋಧನಾ ಸಂಸ್ಥೆಯ ಅಧ್ಯಯನ ವರದಿ ಬಹಿರಂಗ ಪಡಿಸಿರುವ ಸತ್ಯಾಂಶ. ಲಂಡನ್ ಸ್ಕೂಲ್ ಆಫ್ ಇಕೊನೊಮಿಕ್ಸಿನ ಸಾಮಾಜಿಕ ಧೋರಣೆ ವಿಭಾಗದ ಟಿಜಿಯಾನಾ ಲಿಯೋನ್ ನಡೆಸಿದ ಅಧ್ಯಯನವೂ ಇದೇ ಆತಂಕಕಾರಿ ವಿಷಯವನ್ನು ಬೆರಳೆತ್ತಿ ತೋರಿಸಿದೆ. ಜಾಗತಿಕ ಆರೋಗ್ಯ ಸಂಸ್ಥೆ (ಡಬ್ಲ್ಯು.ಎಚ್.ಓ.) ಸಿಸೇರಿಯನ್ ಹೆರಿಗೆಗಳ ಪ್ರಮಾಣ ಶೇ.೧೦ರಿಂದ ೧೫ ಇರಬಹುದೆಂದು ಸೂಚಿಸಿದೆ; ಆದರೆ ಭಾರತದ ಕೆಲವು ಪ್ರದೇಶಗಳಲ್ಲಿ ಇದು ಶೇ.೩೦ಕ್ಕಿಂತ ಅಧಿಕವಾಗಿದೆ. ಚೆನ್ನೈಯ ರಾಷ್ಟ್ರೀಯ ಎಪಿಡಿಮಿಯೊಲಜಿ ಸಂಸ್ಥೆಯು, ಇದು ಕೇರಳದಲ್ಲಿ ಶೇ.೪೧ ಮತ್ತು ತಮಿಳ್ನಾಡಿನಲ್ಲಿ ಶೇ.೫೮ ಎಂದು ತಿಳಿಸಿದೆ. ಭಾರತದಲ್ಲಿ ಸಿಸೇರಿಯನ್ ಹೆರಿಗೆಗಳ ಸಂಖ್ಯೆ ಹೆಚ್ಚುತ್ತಿರುವುದಂತೂ ಖಂಡಿತ.
ಗರ್ಭಿಣಿಯರ ಮತ್ತು ನವಜಾತ ಶಿಶುಗಳ ಸಾವಿನ ಪ್ರಮಾಣ ತಗ್ಗಿಸಲು ಸಿಸೇರಿಯನ್ ಹೆರಿಗೆ ಅಗತ್ಯ. ಈ ಬಗ್ಗೆ ಜರ್ನಲ್ ಆಫ್ ಅಮೆರಿಕನ್ ಮೆಡಿಕಲ್ ಎಸೋಸಿಯೇಷನ್ ಎಂಬ ವೈದ್ಯಕೀಯ ನಿಯತಕಾಲಿಕದಲ್ಲಿ ಪ್ರಕಟವಾದ ವರದಿಯೊಂದು ಹೀಗೆನ್ನುತ್ತದೆ: ಒಂದು ಸಮುದಾಯದಲ್ಲಿ ಸಿಸೇರಿಯನ್ ಹೆರಿಗೆಯ ಪ್ರಮಾಣ ಶೇ.೧೯ ತನಕ ಏರಿಕೆಯಾಗಬಹುದು. ಅದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಸಿಸೇರಿಯನ್ ಹೆರಿಗೆ ಮಾಡಲಾಗುತ್ತಿದ್ದರೆ, ಅದು ಗರ್ಭಿಣಿಯರ ಅಥವಾ ನವಜಾತ ಶಿಶುಗಳ ಸಾವಿನ ಪ್ರಮಾಣ ಕಡಿಮೆ ಮಾಡಲಿಕ್ಕಾಗಿ ಅಲ್ಲ.

ವಸ್ತು ಮತ್ತು ಸೇವಾ ತೆರಿಗೆ ಮಸೂದೆ (ಜಿಎಸ್ಟಿ – ಗೂಡ್ಸ್ ಆಂಡ್ ಸರ್ವಿಸಸ್ ಟಾಕ್ಸ್) ಬಗ್ಗೆ ಸಂಸತ್ತಿನಲ್ಲಿ ಭಾರೀ ಗದ್ದಲ ನಡೆಯಿತು. ಇದು ಅಂಗೀಕರಿಸಲ್ಪಟ್ಟರೆ ನಮ್ಮ ದೇಶಕ್ಕೇನು ಲಾಭ?
ಇದು ಮದ್ಯ, ತಂಬಾಕು ಉತ್ಪನ್ನ ಮತ್ತು ಸಿಹಿಪೇಯಗಳ ಮೇಲೆ ಶೇಕಡಾ ೪೦ ತೆರಿಗೆ ವಿಧಿಸಲಿದೆ. ಜನರು ಇವುಗಳ ಸೇವನೆಯ ಚಟಕ್ಕೆ ದಾಸರಾಗುವುದನ್ನು ತಡೆಯುವುದೇ ಇದರ ಉದ್ದೇಶ. ಜೊತೆಗೆ, ತಂಬಾಕು ಉತ್ಪನ್ನಗಳ ಮೇಲೆ ಹೆಚ್ಚುವರಿ ಎಕ್ಸೈಸ್ ತೆರಿಗೆ ವಿಧಿಸಲು ಕೇಂದ್ರ ಸರಕಾರಕ್ಕೆ ಈ ಮಸೂದೆ ಅಧಿಕಾರ ನೀಡುತ್ತದೆ.
ಈ ಮಸೂದೆ ೧೨೨ನೇ ಸಂವಿಧಾನ ತಿದ್ದುಪಡೆ ಮಸೂದೆ. ಇದನ್ನು ರೂಪಿಸಿದ್ದು, ಜೂನ್ ೨೦೧೫ರಲ್ಲಿ ನೇಮಿಸಲ್ಪಟ್ಟ ಸಮಿತಿ. ಪ್ರಧಾನ ಆರ್ಥಿಕ ಸಲಹೆಗಾರ ಅರವಿಂದ ಸುಬ್ರಹ್ಮಣ್ಯನ್ ಮುಖ್ಯಸ್ಥರಾಗಿದ್ದ ಈ ಸಮಿತಿ ವರದಿ ನೀಡಿದ್ದು ಡಿಸೆಂಬರ್ ೨೦೧೫ರಲ್ಲಿ.
ಇಂತಹ ’ಚಟತಡೆ ತೆರಿಗೆ”ಯನ್ನು ವಿವಿಧ ದೇಶಗಳಲ್ಲಿ ವಿಧಿಸಲಾಗುತ್ತಿದೆ ಎಂದು ಸಮಿತಿಯು ತನ್ನ ವರದಿಯಲ್ಲಿ ತಿಳಿಸಿದೆ. ಯಾವುದೇ ವಸ್ತುವಿನ ಬಳಕೆ ಕಡಿಮೆ ಮಾಡಲು, ಅದಕ್ಕೆ ತೆರಿಗೆ ವಿಧಿಸುವುದು ಪರಿಣಾಮಕಾರಿ ಕ್ರಮ. ಉದಾಹರಣೆಗೆ, ಯುಕೆ (ಬ್ರಿಟನ್) ದೇಶವು ೨೦೧೫ರಲ್ಲಿ ಸಿಗರೇಟಿನ ಚಿಲ್ಲರೆ ಮಾರಾಟ ದರದ ಮೇಲೆ ಶೇ.೧೬.೫ ತೆರಿಗೆ ವಿಧಿಸಿದೆ; ಇದರ ಜೊತೆಗೆ ೨೦ ಸಿಗರೇಟುಗಳ ಪ್ಯಾಕಿನ ಮೇಲೆ ೫.೩೭ ಡಾಲರ್ (ಸುಮಾರು ರೂ.೩೨೨) ತೆರಿಗೆ ಹೇರಿದೆ. ಇದಲ್ಲದೆ, ಶೇ.೨೦ ವ್ಯಾಟನ್ನೂ ವಿಧಿಸಿದೆ. ಇದರಿಂದಾಗಿ, ೨೦೧೪-೧೫ನೇ ವರುಷದಲ್ಲಿ, ಇವುಗಳ ಬಳಕೆ (೨೦೧೩-೧೪ನೇ ವರುಷಕ್ಕೆ ಹೋಲಿಸಿದಾಗ) ಶೇ.೮ ಕಡಿಮೆಯಾಗಿದೆ.

ತಾವು ಸುಂದರವಾಗಿ ಕಾಣಬೇಕೆಂಬುದು ಬಹುಪಾಲು ಜನರ ಬಯಕೆ. ಕೆಲವರಿಗಂತೂ ತಳಕುಬಳುಕಿನ ಶರೀರ ತಮ್ಮದಾಗಬೇಕೆಂಬ ಮಹದಾಸೆ. ತಮ್ಮ ಜೈತೂಕ ಇಳಿಸಲು ಮ್ಯಾಜಿಕ್ ಮಾತ್ರೆ ಬೇಕೆಂಬ ಹೆಬ್ಬಯಕೆ ಇನ್ನು ಕೆಲವರದು.
ಇಂಥವರ ಆಸೆ ತೀರಿಸುವ ಸೋಗಿನಲ್ಲಿ ಮಾರುಕಟ್ಟೆಗೆ ಲಗ್ಗೆಯಿಟ್ಟಿದ್ದಾರೆ ಕೆಲವು ವಂಚಕ ಉತ್ಪಾದಕರು. ಟಿವಿ ಮಾಧ್ಯಮದ “ಮನೆಯಲ್ಲೇ ಖರೀದಿ ಮಾಡುವ” ಜಾಲದಲ್ಲಿ ಮತ್ತು ಇಂಟರ್ನೆಟ್ನ ಜಾಹೀರಾತುಗಳಲ್ಲಿ ಈ ಉತ್ಪಾದಕರು ನಡೆಸಿದ್ದಾರೆ ತಮ್ಮ ದಂಧೆ.
ಮೈತೂಕ ಇಳಿಸುವ ಮಾತ್ರೆಗಳನ್ನು ಪಥ್ಯದ ಮಾತ್ರೆಗಳು ಅಥಾ ಬೊಜ್ಜು ನಿರೋಧಿ ಔಷಧಿಗಳೆಂದೂ ಕರೆಯಲಾಗುತ್ತದೆ. ಇವು ಏನು? ಇವು ಹಸಿವನ್ನು ನಿಗ್ರಹಿಸುವ ಅಥವಾ ಶರೀರದಲ್ಲಿ ಕ್ಯಾಲೋರಿಗಳ ಹೀರುವಿಕೆ ಬದಲಾಯಿಸುವ ಮೂಲಕ ಬೊಜ್ಜು ಕರಗಿಸುವ ಪ್ರಾಕೃತಿಕ ಅಥವಾ ರಾಸಾಯನಿಕ ವಸ್ತುಗಳು. ಆದರೆ ಈ ಮಾತ್ರೆಗಳ ಬಗ್ಗೆ ನಮಗೆ ತಿಳಿದಿರುವುದು ಅತ್ಯಲ್ಪ. ಬೊಜ್ಜು ಕರಗಿಸಲಿಕ್ಕಾಗಿ ವೈದ್ಯರು ಇವನ್ನು ಶಿಫಾರಸ್ ಮಾಡಬಹುದು; ಆದರೆ ಇವು ಮೈತೂಕ ಇಳಿಸುತ್ತವೆ ಎಂಬುದಕ್ಕೆ ಯಾವುದೇ ಪುರಾವೆಯಿಲ್ಲ. ಈ ಮಾತ್ರೆಗಳನ್ನು ಸೇವಿಸುವವರು ಅಡ್ಡಪರಿಣಾಮಗಳಿಂದ ಸಂಕಟ ಪಡುವುದು ಸಾಮಾನ್ಯ.
ವಿಜ್ನಾನಿಗಳೂ ಇಂತಹ ಮ್ಯಾಜಿಕ್ ಮಾತ್ರೆಗಳ ಹುಡುಕಾಟದಲ್ಲಿದ್ದಾರೆ. ಕಳೆದೊಂದು ದಶಕದಲ್ಲಿ “ವ್ಯಾಯಾಮ ಮಾತ್ರೆ”ಗಳೆಂಬ ಹೆಸರಿನಲ್ಲಿ ಇಂತಹ ಹಲವಾರು ಮ್ಯಾಜಿಕ್ ಮಾತ್ರೆಗಳು ಮಾರುಕಟ್ಟೆಗ ಬಂದಿವೆ. ವ್ಯಾಯಾಮದ ಒಳ್ಳೆಯ ಪರಿಣಾಮಗಳನ್ನು ಈ ಮಾತ್ರೆಗಳು ನಕಲಿ ಮಾಡುತ್ತವೆ ಎನ್ನಲಾಗಿದೆ. ಕೆಲವು ಮಾಧ್ಯಮ ವರದಿಗಳಂತೂ ಇವು ಬೇಗನೇ ವ್ಯಾಯಮಕ್ಕೇ ಬದಲಿ ಆಗಲಿವೆ ಎಂದು ಸುದ್ದಿ ಮಾಡಿವೆ. ಅಂದರೆ, ವ್ಯಾಯಾಮ ಬೇಕಾಗಿಲ್ಲ, ಈ ಮಾತ್ರೆ ನುಂಗಿದರೆ ಸಾಕು ಎಂಬಂತೆ! ಇಂತಹ ಕೆಲವು ಮಾತ್ರೆಗಳ ಹೆಸರು: ಎಐಸಿಎಆರ್, ಜಿಡಬ್ಲ್ಯು ೫೦೧೫೧೬, ಜಿಎಸ್ಕೆ ೪೭೧೬, ಎಸ್ಆರ್ ೯೦೦೯, ಐರಿಸಿನ್ ಮತ್ತು ರೆಸ್ವೆರಾಟೊಲ್.

ನಮ್ಮ ದೇಶದಲ್ಲಿರುವುದು ಜಗತ್ತಿನ ಒಟ್ಟು ವಾಹನಗಳ ಶೇಕಡಾ ಒಂದು ಮಾತ್ರ. ಆದರೆ, ನಮ್ಮದೇಶದಲ್ಲಿ ಆಗುತ್ತಿರುವ ರಸ್ತೆ ಅಪಘಾತಗಳ ಸಂಖ್ಯೆ ಜಗತ್ತಿನ ಒಟ್ಟು ಅಪಘಾತಗಳ ಶೇಕಡಾ ೧೦!

ಭಾರತೀಯ ಅಟೋಮೊಬೈಲ್ ಉತ್ಪಾದಕರ ಸೊಸೈಟಿಯ ಮಾಹಿತಿಯ ಅನುಸಾರ, ವಾಹನ ಉತ್ಪಾದಕರು ಕಳೆದ ಐದು ವರುಷಗಳಲ್ಲಿ ಪ್ರತಿ ವರುಷ ಭಾರತದಲ್ಲಿ ಮಾರಾಟ ಮಾಡಿದ ವಾಹನಗಳ ಸಂಖ್ಯೆ ೧.೫ ಕೋಟಿ. ಈ “ಅಭಿವೃದ್ಧಿ”ಯ ದಾರುಣ ಮುಖವನ್ನು ತಿಳಿಸುವ ಅಂಕೆಸಂಖ್ಯೆಗಳು ಹೀಗಿವೆ:
- ಕಳೆದ ೧೦ ವರುಷಗಳಲ್ಲಿ ರಸ್ತೆ ಅಪಘಾತಗಳಿಂದಾಗಿ ಸತ್ತವರ ಸಂಖ್ಯೆ ೧೦ ಲಕ್ಷ.
-ರಸ್ತೆ ಅಪಘಾತಗಳಿಂದಾಗಿ ಭಾರತದಲ್ಲಿ ಸಾಯುವವರ ಸಂಖ್ಯೆ ಪ್ರತಿ ಗಂಟೆಗೆ ೧೫.
-ಪ್ರತಿದಿನವೂ ೧೪ ವರುಷಕ್ಕಿಂತ ಕಡಿಮೆ ವಯಸ್ಸಿನ ೨೦ ಮಕ್ಕಳ ಮರಣ.
-ಕಳೆದ ದಶಕದಲ್ಲಿ ರಸ್ತೆ ಅಪಘಾತಗಳಿಂದಾಗಿ ೧.೨ ಲಕ್ಷ ಪಾದಚಾರಿಗಳ ಮತ್ತು ಮೂರು ಲಕ್ಷ ದ್ವಿಚಕ್ರ ವಾಹನಚಾಲಕರ ಸಾವು
-ರಸ್ತೆ ಅಪಘಾತಗಳಿಂದಾಗುವ ಸಾವುಗಳಿಗೆ ಕಾರಣ: ದ್ವಿಚಕ್ರವಾಹನಗಳು (ಶೇ.೨೪.೯), ಲಾರಿಗಳು (ಶೇ.೧೭.೫) ಮತ್ತು ಕಾರುಗಳು (ಶೇ.೧೦.೮)
-ಕಮ್ಯುನಿಟಿ ಎಗೆಯಿನಿಸ್ಟ್ ಡ್ರಂಕನ್ ಡ್ರೈವಿಂಗ್ (ಪಾನಮತ್ತ ವಾಹನಚಾಲನೆ ವಿರುದ್ಧ ಸಮುದಾಯ) ಎಂಬ ಲಾಭರಹಿತ ಸಂಸ್ಥೆಯ ಪ್ರಕಾರ, ೨೦೧೧ರಲ್ಲಿ ಜರಗಿದ ಶೇ.೭೦ ವಾಹನ ಅಪಘಾತಗಳಿಗೆ ಕಾರಣ ಪಾನಮತ್ತ ವಾಹನಚಾಲನೆ.
-ದೊಡ್ಡ ರಸ್ತೆ ಅಪಘಾತಗಳಿಗೆ ಕಾರಣಗಳು: ಅತಿ ವೇಗದ ವಾಹನ ಚಾಲನೆ, ನಿಯಮ ಮೀರಿದ ಪಾರ್ಕಿಂಗ್, ತಪ್ಪು-ದಿಕ್ಕಿನಲ್ಲಿ ವಾಹನ ಚಾಲನೆ, ಪಾದಚಾರಿಗಳು ಅಜಾಗರೂಕತೆಯಿಂದ ರಸ್ತೆ ದಾಟುವುದು ಮತ್ತು ಪಾನಮತ್ತ ಚಾಲಕರಿಂದ ವಾಹನ ಚಾಲನೆ.

ಪ್ರಮುಖ ಲ್ಯುಬ್ರಿಕೆಂಟ್ ಉತ್ಪಾಕದ ಕಂಪೆನಿ ಕಾಸ್ಟ್ರಾಲ್ ಇಂಡಿಯಾ ಲಿಮಿಟೆಡ್ನ ವ್ಯವಸ್ಥಾಪಕ ನಿರ್ದೇಶಕರಾದ ರವಿ ಕಿರ್ಪಲಾನಿ ಹೀಗೆನ್ನುತ್ತಾರೆ, “ಶೇಕಡಾ ೭೦ಕ್ಕಿಂತ ಹೆಚ್ಚಿನ ರಸ್ತೆ ಅಪಘಾತಗಳಿಗೆ ಕಾರಣ ವಾಹನಚಾಲಕರು ಮಾಡುವ ತಪ್ಪುಗಳು. ನಾವು ವಾಹನ ಚಾಲಕರ ವಾಹನಚಾಲನೆ ಕೌಶಲ್ಯಗಳ ಮೌಲ್ಯಮಾಪನ ಮಾಡುತ್ತೇವೆ. ಈ ತನಕ ಆ ತರಬೇತಿಗಳಲ್ಲಿ ಭಾಗವಹಿಸಿದ ವಾಹನ ಚಾಲಕರ ಸಂಖ್ಯೆ ಸುಮಾರು ೨೦,೦೦೦.”

Pages