ಚಿರಯೌವನ ಸೌಂದರ್ಯ ಪ್ರಸಾಧನಗಳಿಂದ ಸಾಧ್ಯವೇ?

ಯೌವನದ ಮೈಕಾಂತಿ ಹಾಗೂ ಶಾರೀರಿಕ ಸೊಬಗು ಉಳಿಸಿಕೊಳ್ಳಲು ಹೆಣ್ಣು-ಗಂಡೆಂಬ ಭೇದವಿಲ್ಲದೆ ಬಹುಪಾಲು ಜನರು ಹಾತೊರೆಯುತ್ತಾರೆ. ಯಾವುದೋ ಕ್ರೀಂ ಹಚ್ಚಿಕೊಂಡರೆ ಮುದಿತನ ತಮ್ಮ ಹತ್ತಿರ ಸುಳಿಯದೆಂದು ಭ್ರಮಿಸುತ್ತಾರೆ. ಆದರೆ ದುಬಾರಿ  ಬೆಲೆಯ ಸೌಂದರ್ಯ ಪ್ರಸಾಧನಗಳು ವಯಸ್ಸಿನ ಚಿಹ್ನೆಗಳನ್ನು ಹೋಗಲಾಡಿಸಲು ಸಾಧ್ಯವೇ?

“ಸಾಧ್ಯವೇ ಇಲ್ಲ” ಎಂದು ಎಚ್ಚರಿಸುತ್ತದೆ ಅಮೇರಿಕದ ವಿಜ್ನಾನ ಕ್ರಿಯಾ ಸಂಘಟನೆ. ಮುದಿತನ ನಿರೋಧಿ ಸೌಂದರ್ಯ ಪ್ರಸಾಧನಗಳು ಚಿರಯೌವನದ ಚಿಲುಮೆಗಳಲ್ಲ. ಅವು ದೇಹದ ಸುಕ್ಕುಗಳಲ್ಲಿ ತುಂಬಿಕೊಂಡು ಅಥವಾ ಚರ್ಮವನ್ನು ಉಬ್ಬಿಸಿ, ಆ ಸುಕ್ಕುಗಳು ಎದ್ದು ಕಾಣದಂತೆ ಮಾಡಬಲ್ಲವು. ಆದರೆ ಸುಕ್ಕುಗಳನ್ನು ಹೋಗಲಾಡಿಸಲಾರವು. 

ಚರ್ಮ ಮತ್ತು ವಯಸ್ಸು
ನಮ್ಮ ಜೀವಮಾನದುದ್ದಕ್ಕೂ ಚರ್ಮ ಪರಿವರ್ತನೆಯಾಗುತ್ತದೆ. ಹೆಚ್ಚು ಕಡಿಮೆಯಾಗುವ ಹಾರ್ಮೋನುಗಳೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುತ್ತ ಮತ್ತು ಪರಿಸರದ ಬದಲಾವಣೆಗಳಿಗೆ ಸ್ಪಂದಿಸುತ್ತಾ ಚರ್ಮ ಪರಿವರ್ತನೆಯಾಗುತ್ತಲೇ ಇರುತ್ತದೆ. ಮಾತ್ರವಲ್ಲ, ನಮ್ಮ ಚರ್ಮ ನಿರಂತರವಾಗಿ ಹೊಸಹುಟ್ಟು ಪಡೆಯುತ್ತಲೇ ಇರುತ್ತದೆ. ಹೊಸ ಜೀವಕೋಶಗಳು ಚರ್ಮದ ಕೆಳಪದರಗಳಲ್ಲಿ ಹುಟ್ಟಿ, ಕ್ರಮೇಣ ಚರ್ಮದ ಮೇಲ್ಭಾಗಕ್ಕೆ ಸ್ಥಾನಪಲ್ಲಟವಾಗಿ, ಅಲ್ಲಿ ಸಾಯುತ್ತವೆ. ಇವು ತೆಳುವಾದ ಪದರವಾಗಿ ಕೊನೆಗೆ ಚರ್ಮದಿಂದ ಉದುರಿ ಹೋಗುತ್ತವೆ. 

ಚರ್ಮ ತಜ್ನರು ಎರಡು ವಿಧದ ಮುಪ್ಪಾಗುವ ಪ್ರಕ್ರಿಯೆ ಗುರುತಿಸುತ್ತಾರೆ. ಸಹಜ ಮುಪ್ಪಾಗುವಿಕೆ ಮೊದಲನೆಯದು. ಈ ರೀತಿ ವಯಸ್ಸಾಗಿ ಮುಪ್ಪಾದ ಬಳಿಕ ಮತ್ತೆ ಯೌವನಕ್ಕೆ ಮರಳಲು ಸಾಧ್ಯವೇ ಇಲ್ಲ. ಎರಡನೇ ವಿಧದ ಪ್ರಕ್ರಿಯೆಯನ್ನು ಬಿಸಿಲಿನಿಂದ ಮುಪ್ಪಾಗುವಿಕೆ ಎನ್ನುತ್ತಾರೆ. ಇದಕ್ಕೆ ಮುಖ್ಯ ಕಾರಣ ಸೂರ್ಯನ ಅತಿ-ನೇರಳೆ ಕಿರಣಗಳಿಂದ ಚರ್ಮಕ್ಕಾಗುವ ಹಾನಿ.

ಚರ್ಮ ಸುಕ್ಕಾಗುವುದು ಸಹಜವಾಗಿ ಮುಪ್ಪಾಗುವುದರ ಸಾಮಾನ್ಯ ಲಕ್ಷಣ. ಆದರೆ ಸುರ್ಯ ಕಿರಣಗಳ ಸುಡುವಿಕೆಯಿಂದಾಗಿಯು ಚರ್ಮವು ಮನುಷ್ಯ ಮುಪ್ಪಾಗುವ ಮುನ್ನವೇ ಸುಕ್ಕುಗಟ್ಟುತ್ತದೆ. ಬಿಸಿಲುಗಲೆಗಳು, ಭಿನ್ನ ಬಣ್ಣ ಛಾಯೆಗಳ ಚರ್ಮ, ಒಣಗಿದ ಒರಟಾದ ಮತ್ತು ಹೊಳಪಿಲ್ಲದ ಚರ್ಮ - ಈ ಚಿಹ್ನೆಗಳು ಬಿಸಿಲಿನಿಂದ ಮುಪ್ಪಾಗುವುದನ್ನು ಸೂಚಿಸುತ್ತವೆ.

ಚರ್ಮ ಸುಕ್ಕಾಗಲು ಕಾರಣಗಳೇನು?
ಪ್ರಾಯ ಸರಿದಂತೆ ಚರ್ಮಕ್ಕೂ ವಯಸ್ಸಾಗುತ್ತದೆ ಮತ್ತು ಅದು ಸ್ಥಿತಿ ಸ್ಥಾಪಕತ್ವ ಗುಣ ಕಳೆದುಕೊಳ್ಳುತ್ತದೆ. ಚರ್ಮವನ್ನು ಎಳೆದಾಗ ಅದು ಹರಿದು ಹೋಗದಂತೆ ತಡೆಯುವ ಅಂಗಾಂಶ ಕೊಲ್ಲಾಜೆನ್. ಚರ್ಮವನ್ನು ಎಳೆದು ಬಿಟ್ಟಾಗ ಅದನ್ನು ಯಥಾಸ್ಥಿತಿಗೆ ಮರಳಿಸುವ ಅಂಗಾಂಶ ಇಲಾಸ್ಟಿನ್. ಕಾಲ ಸರಿದಂತೆ ಚರ್ಮದಲ್ಲಿರುವ ಕೊಲ್ಲಾಜೆನ್ ಮತ್ತು ಇಲಾಸ್ಟಿನ್ 
ದುರ್ಬಲವಾಗುತ್ತವೆ. ಚರ್ಮ ಕೊಬ್ಬಿನಂಶ ಕಳೆದುಕೊಂಡು ತೆಳುವಾಗುತ್ತದೆ. ಇದರಿಂದಾಗಿ ಚರ್ಮ ನಯವಾಗಿ ಕಾಣಿಸುವುದಿಲ್ಲ. ಚರ್ಮದಲ್ಲಿ ಈ ಎಲ್ಲ ಬದಲಾವಣೆಗಳು ಆಗುತ್ತಿರುವಾಗ, ಗುರುತ್ವಾಕರ್ಷಣ ಬಲವು ಚರ್ಮವನ್ನು ಕೆಳಕ್ಕೆ ಎಳೆಯುತ್ತಲೇ ಇರುತ್ತದೆ. ಇದರಿಂದಾಗಿ ಚರ್ಮವು ಜೋತು ಬಿದ್ದಂತೆ ಕಾಣಿಸುತ್ತದೆ.

ನಿಮ್ಮ ಚರ್ಮ ಎಷ್ಟು ಸುಕ್ಕಾಗಿದೆ ಎಂಬುದು ನಿಮ್ಮ ಹೆತ್ತವರ ಚರ್ಮ ಎಷ್ಟು ಸುಕ್ಕಾಗಿತ್ತು ಎಂಬುದನ್ನು ಅವಲಂಬಿಸಿದೆ. ಯಾಕೆಂದರೆ ಇದು ವಂಶಪಾರಂಪರ್ಯ ಲಕ್ಷಣ.

ಚಿರಯೌವನದ ಭ್ರಮಾಸಾಧನಗಳು
“ಇದು ಚರ್ಮ ಸುಕ್ಕಾಗುವುದನ್ನು ತಡೆಯುತ್ತದೆ” ಎಂಬಂತಹ ಪ್ರಚಾರದೊಂದಿಗೆ ಹಲವಾರು ಕ್ರೀಂ ಮತ್ತು ಲೋಷನ್‌ಗಳು ಮಾರುಕಟ್ಟೆಯಲ್ಲಿ ನಿಮ್ಮನ್ನು ಆಕರ್ಷಿಸುತ್ತವೆ. ಅವುಗಳ ಪೊಟ್ಟಣಗಳಲ್ಲಿ ಆಲ್ಫಾ-ಹೈಡ್ರಾಕ್ಸಿ ಆಸಿಡ್‌ಗಳು, ಸೆರಾಮೈಡ್‌ಗಳು, ವಿಟಮಿನ್‌ಗಳು, ಕೊಲ್ಲಾಜೆನ್, ಇಲಾಸ್ಟಿನ್ - ಇವನ್ನೆಲ್ಲ ಒಳಗೊಂಡಿದೆ ಎಂಬ ಘೋಷಣೆ. ನಿಮ್ಮ ಗಮನ ಸೆಳೆಯಲಿಕ್ಕಾಗಿಯೇ ನಿಮಗೆ ಅರ್ಥವಾಗದ ಈ ಹೆಸರುಗಳನ್ನು ಆ ಪೊಟ್ಟಣಗಳಲ್ಲಿ ಮುದ್ರಿಸಲಾಗಿರುತ್ತದೆ. ಸೂಪರ್ ಮಾರ್ಕೆಟ್, ಶೃಂಗಾರ ಸಾಧನಗಳ ಮಳಿಗೆ, ಔಷಧಿ ಅಂಗಡಿ ಮತ್ತು ಇತರ ಮಳಿಗೆಗಳಲ್ಲಿ ಇವುಗಳ ಕಣ್ಸೆಳೆಯುವ ಪ್ರದರ್ಶನ. 

ಬಣ್ಣಬಣ್ಣದ ಪೊಟ್ಟಣ ಹಾಗೂ ಕನ್‌ಟೈನರುಗಳಲ್ಲಿ ರಾರಾಜಿಸುವ ಇವುಗಳಲ್ಲಿ ಹಲವು ವಿಧ: ಡೇ ಕ್ರೀಂಗಳು, ನೈಟ್ ಕ್ರೀಂಗಳು, ಜೆಲ್‌ಗಳು ಇತ್ಯಾದಿ. ಇವುಗಳ ಬೆಲೆಯೂ ದುಬಾರಿ. ಬೆಲೆ ಜಾಸ್ತಿಯಾದಷ್ಟೂ ಅದು ಹೆಚ್ಚು ಪರಿಣಾಮಕಾರಿ ಅಂದುಕೊಳ್ಳುವ ನಾವು ಇವನ್ನು ಖರೀದಿಸಲು ಮುಂದಾಗುತ್ತೇವೆ.

ಸತ್ಯ ಏನು? 
ಸೌಂದರ್ಯ ಪ್ರಸಾಧನಗಳು ದೇಹದ ಬಾಹ್ಯ ಬಳಕೆಗಾಗಿರುವ ಪ್ರಸಾಧನಗಳು. ಚರ್ಮಕ್ಕೆ ಸವರಬೇಕಾದ ಅವುಗಳಿಂದ ಯಾವುದೇ ಚಿಕಿತ್ಸಕ ಪರಿಣಾಮವಿಲ್ಲ. “ಯಾವುದೇ ಸೌಂದರ್ಯ ಪ್ರಸಾಧನವು ಚರ್ಮದಲ್ಲಿ ತೂರಿಕೊಳ್ಳುತ್ತದೆ ಎಂದಾದರೆ ಅದು ಸೌಂದರ್ಯ ಪ್ರಸಾಧನವಲ್ಲ; ಬದಲಾಗಿ ಅದು ಔಷಧಿ ಎನಿಸುತ್ತದೆ. ಹಾಗಾದಾಗ, ಅದು ವಿವಿಧ ಸರಕಾರಿ ನಿಯಮ ಹಾಗೂ ನಿಬಂಧನೆಗಳಿಗೆ ಒಳಪಡುತ್ತದೆ” ಎಂದು ತಜ್ನರ ಖಚಿತ ಅಭಿಪ್ರಾಯ. ಸೌಂದರ್ಯ ಪ್ರಸಾಧನಗಳು ನಮ್ಮ ಶರೀರದಲ್ಲಿ ಯಾವತ್ತೂ ಮೂಲಭೂತ ಬದಲಾವಣೆ ಮಾಡಲು ಸಾಧ್ಯವಿಲ್ಲ. ಅವು ಚರ್ಮವನ್ನು ಮೃದುಗೊಳಿಸಬಲ್ಲವು, ಅಷ್ಟೇ. 

ಈ ಸತ್ಯ ಬಹಳ ಜನರಿಗೆ ಮನದಟ್ಟಾಗಿಲ್ಲ. ಆದ್ದರಿಂದ ಜಾಹೀರಾತುಗಳನ್ನು ನಂಬುತ್ತಾರೆ. ಹಾಗಾಗಿಯೇ, “ಈ ಪೊಟ್ಟಣದೊಳಗೆ ಸೌಂದರ್ಯದ ಗುಟ್ಟು ಇದೆ” ಎಂಬಂರ್ಥದ ಜಾಹೀರಾತುಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿವೆ; ಚಿರಯೌವನದ ಕನಸು ಕಾಣುವ ಅಮಾಯಕರನ್ನು ದಾರಿ ತಪ್ಪಿಸುತ್ತಿವೆ. 

ಸೌಂದರ್ಯ ಪ್ರಸಾಧನಗಳಿಂದ ಹಾನಿ
ಸೌಂದರ್ಯ ಪ್ರಸಾಧನಗಳಲ್ಲಿ ಏನಿದೆ? “ಮುಖ್ಯವಾಗಿ ನೀರು ಇದೆ” ಎಂದು ಬ್ರಿಟನಿನ ಬಳಕೆದಾರರ ಎಸೋಸಿಯೇಷನಿನ “ವಿಚ್?" ಪತ್ರಿಕೆ ತಿಳಿಸಿದೆ. ಅದರ ಜೊತೆಗೆ, ಕ್ರೀಂ ಚೆನ್ನಾಗಿ ಕಾಣುವಂತೆ ಮಾಡಲು ಬಣ್ಣಗಳನ್ನೂ, ಪರಿಮಳ ಬರುವಂತೆ ಮಾಡಲು ಸುಗಂಧ ದ್ರವ್ಯಗಳನ್ನೂ ಬೆರೆಸುತ್ತಾರೆ. ಅವುಗಳು “ಚಿರಯೌವನದ ರಾಮಬಾಣ”ವೆಂಬ ಪ್ರಚಾರ ತಂತ್ರಕ್ಕಾಗಿ ಮೂರು ರಾಸಾಯನಿಕ ಅಂಶಗಳನ್ನು ಬಳಸುತ್ತಾರೆ. 

ಆಲ್ಫಾ-ಹೈಡ್ರಾಕ್ಸಿ ಆಸಿಡ್‌ಗಳು: “ಹಣ್ಣಿನ ಆಮ್ಲಗಳು” ಎಂದು ಕರೆಯಲಾಗುವ ಇವು ಕಬ್ಬು, ಹಾಲು, ದ್ರಾಕ್ಷಿ ಮತ್ತು ನಿಂಬೆಹಣ್ಣುಗಳಲ್ಲಿವೆ. ಇವುಗಳಿಂದಾಗಿ ಚರ್ಮ ಹೊಳೆಯುವಂತೆ ಕಾಣಬಹುದು. ಆದರೆ, ಅಮೇರಿಕದ ಆಹಾರ ಮತ್ತು ಔಷಧಿ ಪ್ರಾಧಿಕಾರಕ್ಕೆ 1997ರಲ್ಲಿ ಒಂದೇ ತಿಂಗಳಿನಲ್ಲಿ ಇವುಗಳ ಹಾನಿಕರ ಪರಿಣಾಮಗಳ್ ಬಗ್ಗೆ 100 ದೂರುಗಳು ಬಂದವು! ಈ ಆಸಿಡ್‌ಗಳಿದ್ದ ಸೌಂದರ್ಯ ಪ್ರಸಾಧನಗಳು ತುರಿಕೆ, ಚರ್ಮದಲ್ಲಿ ಗುಳ್ಳೆ ಹಾಗೂ ಚರ್ಮ ಸುಟ್ಟು ಹೋಗಲು ಕಾರಣವಾಗಿದ್ದವು. 

ಕೊಲ್ಲಾಜೆನ್ ಮತ್ತು ಇಲಾಸ್ಟಿನ್: ಇವು ಚರ್ಮದ ಕೆಳಪದರದಲ್ಲಿರುವ ಅಂಗಾಂಶಗಳು. ಯೌವನ ಕಳೆಯುವ ತನಕ ಇವುಗಳಿಂದಾಗಿ ಚರ್ಮ ದೃಢವಾಗಿ ಮತ್ತು ರಬ್ಬರಿನಂತೆ ಇರುತ್ತದೆ. ವಯಸ್ಸಾದಂತೆ ಅವುಗಳ ಸ್ಥಿತಿಸ್ಥಾಪಕತ್ವ ಕಡಿಮೆಯಾಗಿ, ಸುಕ್ಕುಗಳು ಮೂಡುತ್ತವೆ. ಪ್ರಸಾಧನಗಳ ಮೂಲಕ ಅವನ್ನು ಚರ್ಮಕ್ಕೆ ಲೇಪಿಸಿದರೆ, ಚರ್ಮದ ಕೆಳಪದರ್ದಲ್ಲಿರುವ ಅವುಗಳ ಪರಿಮಾಣ ಹೆಚ್ಚುಕಡಿಮೆಯಾಗುವುದಿಲ್ಲ. ಯಾಕೆಂದರೆ ಅವು ಚರ್ಮವನ್ನು ತೂರಿಕೊಂಡು ಒಳ ಹೋಗಲು ಸಾಧ್ಯವೇ ಇಲ್ಲ. ಈ ವೈಜ್ನಾನಿಕ ಸತ್ಯ ಇವುಗಳಿಂದ ಏನೇನೂ ಪ್ರಯೋಜನವಿಲ್ಲ ಎಂದು ತೋರಿಸಿಕೊಡುತ್ತದೆ. 

ರೆಟಿನೋಲ್: ಇದು ವಿಟಮಿನ್-“ಎ"ಯ ವೈಜ್ನಾನಿಕ ಹೆಸರು. ನಮ್ಮ ದೇಹ ಆರೋಗ್ಯವಂತ ಜೀವಕೋಶಗಳನ್ನು ರಚಿಸಲು ಮತ್ತು ಕಾಯ್ದುಕೊಳ್ಳಲು ವಿಟಮಿನ್-ಎಯನ್ನು ಬಳಸುತ್ತದೆ ಎಂಬುದೇನೋ ನಿಜ. ಆದರೆ ಇದರಿಂದ ಅಪಾಯಗಳೂ ಇವೆ. ಇದು ಚರ್ಮವನ್ನು ಶುಷ್ಕವಾಗಿಸಿ, ಕೆಂಪಾಗಿಸುತ್ತದೆ. ಹುಟ್ಟುವ ಮಕ್ಕಳ ನ್ಯೂನತೆಗಳಿಗೂ ಇದಕ್ಕೂ ಸಂಬಂಧ ಇದೆಯೆಂದು ತಿಳಿದು ಬಂದಿದೆ. ಹಾಗಾಗಿ ಗರ್ಭಿಣಿಯರು ಇದನ್ನು ಬಳಸಲೇ ಬಾರದು. ಗರ್ಭ ಧರಿಸುವ ಕಿಂಚಿತ್ ಸಂಭವವಿದ್ದರು ಇದನ್ನು ಬಳಸಬಾರದೆಂದು ವಿಜ್ನಾನಿಗಳು ಎಚ್ಚರಿಸಿದ್ದಾರೆ.  

ಜಾಗರೂಕರಾಗಿರಿ
ಚಿರಯೌವನದ ಸೌಂದರ್ಯ ಪ್ರಸಾಧನಗಳ ಇನ್ನೊಂದು ಟೊಳ್ಳು ಜಾಹೀರಾತು: “ಅಲರ್ಜಿ ಪರೀಕ್ಷೆಗೆ ಒಳಗಾಗಿದೆ” ಅಥವಾ “ಚರ್ಮ ತಜ್ನರಿಂದ ಪರೀಕ್ಷಿಸಲಾಗಿದೆ” ಎಂಬ ಹೇಳಿಕೆ. ಆದರ ಅಂತಹ ಪರೀಕ್ಷೆಗಳ ಫಲಿತಾಂಶ ಏನೆಂದು ಈ ಜಾಹೀರಾತುಗಳು ತಿಳಿಸುವುದೇ ಇಲ್ಲ!

ಸೌಂದರ್ಯ ಪ್ರಸಾಧನಗಳನ್ನು ನಿಯಂತ್ರಿಸುವ ಕಾಯಿದೆಗಳು ನಮ್ಮ ದೇಶದಲ್ಲಿ ಹಲ್ಲಿಲ್ಲದ ಹುಲಿಗಳಾಗಿವೆ. ಆದ್ದರಿಂದ ಬಳಕೆದಾರರು ಜಾಗರೂಕರಾಗಬೇಕಾದು ಅತ್ಯಗತ್ಯ. ಅವುಗಳ ಪೊಟ್ಟಣಗಳ ಲೇಬಲ್ ಮತ್ತು ಮಾಹಿತಿಪತ್ರ (ಒಂದು ವೇಳೆ ಕೊಟ್ಟಿದ್ದರೆ)ದಲ್ಲಿ ಮುದ್ರಿಸಿದ್ದನ್ನು ಎಚ್ಚರಿಕೆಯಿಂದ ಓದಿರಿ. ಯಾವುದೇ ಪ್ರಸಾಧನದಿಂದ ತುರಿಕೆ ಅಥವಾ ದಡಿಕೆ ಉಂಟಾದರೆ ತತ್‌ಕ್ಷಣ ಅದರ ಬಳಕೆ ನಿಲ್ಲಿಸಿರಿ. 

ಪ್ರಖರ ಸೂರ್ಯ ಕಿರಣಗಳಿಂದ ನಿಮ್ಮನ್ನು ಯಾವತ್ತೂ ರಕ್ಷಿಸಿಕೊಳ್ಳಿರಿ. ಯಾಕೆಂದರೆ ಅತಿ-ನೇರಳೆ ಕಿರಣಗಳು ಚರ್ಮ ಸುಕ್ಕಾಗಲು ಕಾರಣವಾಗುತ್ತವೆ. ಬಿಸಿಲಿನಲ್ಲಿ ಹೋಗಲೇ ಬೇಕೆಂದಾದರೆ, ಟೊಪ್ಪಿ ಅಥವಾ ಕೊಡೆಯ ಮೂಲಕ ಅತಿ-ನೇರಳೆ ಕಿರಣಗಳಿಂದ ರಕ್ಷಣೆ ಪಡೆಯಿರಿ. 
ವಯಸ್ಸಾಗುವುದು ಸಹಜ
ನಮ್ಮ ಮುಖದಲ್ಲಿ ಅಥವಾ ಕೈಗಳಲ್ಲಿ ಕೆಲವು ಸುಕ್ಕುಗಳು ಮೂಡಿದರೆ ನಾವೇಕೆ ಭಯ ಪಡಬೇಕು? ಕನ್ನಡಿಯಲ್ಲಿ ಕಾಣುವ ವಯಸ್ಸಿನ ಚಿಹ್ನೆಗಳಿಗೆ ನಾವು ಹೆದರಬೇಕಾಗಿಲ್ಲ. ಯಾಕೆಂದರೆ, ಅವು ಬದುಕಿನಲ್ಲಿ ನಮ್ಮ ಪಕ್ವತೆಯ ಚಿಹ್ನೆಗಳು. ಒಂದೊಂದು ಸುಕ್ಕಿನ ಹಿನ್ನೆಲೆಯಲ್ಲೂ ದಶಕಗಳ ನೋವು ನಲಿವುಗಳ ಖಜಾನೆಯೇ ಹುದುಗಿರುತ್ತದೆ. ಅದನ್ನು ತೆರೆದು ನೋಡಬೇಕಾದರೆ ನಾವು ಕನ್ನಡಿಗಿಂತಲೂ ಆಚೆ ನೋಡಲು ಕಲಿಯಬೇಕು.

ನಮಗೆಲ್ಲರಿಗೂ ವಯಸ್ಸಾಗುವುದು ಸಹಜ. ಆದರೆ, ವಯಸ್ಸಿನಲ್ಲಿ ದೊಡ್ಡವರಾದಂತೆ ಜೀವನದಲ್ಲಿಯೂ ದೊಡ್ಡವರು ಎನಿಸಿಕೊಳ್ಳುವುದು ಸುಲಭವಲ್ಲ. ಯಾಕೆಂದರೆ ನಮ್ಮ ತಲೆಗೂದಲು ಹಣ್ಣಾದರೆ ಸಾಲದು, ನಾವು ಬದುಕಿನಲ್ಲೂ ಹಣ್ಣಾಗಬೇಕು. ಅದಕ್ಕೆ ಬೇಕಾಗಿರುವುದು ಸೌಂದರ್ಯ ಪ್ರಸಾಧನಗಳಲ್ಲ; ಬದುಕಿನ ಬಗ್ಗೆ ಪ್ರೀತಿ. ಚಿರಯೌವನಕ್ಕೆ ಅಗತ್ಯವಾದದ್ದು ನಮ್ಮ ಶರೀರದ ಹೊರಗಿಲ್ಲ, ಒಳಗೇ ಇದೆ - ಅದು ಚಿರನೂತನ ಮನಸ್ಸು, ಅಲ್ಲವೇ? 

ಫೋಟೋ 1: ವಯಸ್ಸಾಗುವುದೂ ಚಂದ 
ಫೋಟೋ 2: ಮುಖಕ್ಕೆ ಹಚ್ಚುವ ದುಬಾರಿ ಕ್ರೀಮ್