ಜೂನ್ 21, 2023ರಂದು ಒಂಭತ್ತನೆಯ “ಅಂತರರಾಷ್ಟ್ರೀಯ ಯೋಗ ದಿನ"ವನ್ನು ಜಗತ್ತಿನಾದ್ಯಂತ ಆಚರಿಸಲಾಯಿತು. ಯೋಗವನ್ನು ಪ್ರತಿ ದಿನ ಶ್ರದ್ಧೆಯಿಂದ ಅಭ್ಯಾಸ ಮಾಡುವುದರಿಂದ ಆಗುವ ಪ್ರಯೋಜನಗಳ ಬಗ್ಗೆ ಜಗತ್ತಿನಾದ್ಯಂತ ಜನಸಾಮಾನ್ಯರಲ್ಲಿ ಅರಿವು ಮೂಡಿಸುವುದೇ ಇದರ ಉದ್ದೇಶ.
ಇಂದಿನ ಶುಭದಿನದಲ್ಲಿ ಜಾಗತಿಕ ಮಟ್ಟದಲ್ಲಿ ಯೋಗದ ಬಗ್ಗೆ ಸಂದೇಶ ನೀಡುವ ಹಿರಿಮೆ ಭಾರತದ ಪ್ರಧಾನ ಮಂತ್ರಿ ಶ್ರೀ ನರೇದ್ರ ಮೋದಿಯವರಿಗೆ ಒದಗಿ ಬಂದದ್ದು ವಿಶೇಷ. ಯು.ಎಸ್.ಎ. ದೇಶದ ಮಹಾನಗರ ನ್ಯೂಯಾರ್ಕಿನಲ್ಲಿ ವಿಶ್ವಸಂಸ್ಥೆಯ ಪ್ರಧಾನ ಕಚೇರಿಯಲ್ಲಿ ಆಯೋಜಿಸಲಾಗಿದ್ದ “ಅಂತರರಾಷ್ಟ್ರೀಯ ಯೋಗ ದಿನ" ಕಾರ್ಯಕ್ರಮದಲ್ಲಿ ಶ್ರೀ ನರೇಂದ್ರ ಮೋದಿಯವರು ತಮ್ಮ ಸಂದೇಶದಲ್ಲಿ ಹೀಗೆಂದು ನುಡಿದರು: "ಯೋಗವು ಜಗತ್ತಿಗೆ ಭಾರತದಿಂದ ಬಂದಿರುವ ಕೊಡುಗೆ. ಯೋಗಕ್ಕೆ ಕಾಪಿರೈಟ್ ಇಲ್ಲ, ಪೇಟೆಂಟ್ ಇಲ್ಲ, ರಾಯಲ್ಟಿ ಇಲ್ಲ. ಇದನ್ನು ಎಲ್ಲರೂ ಅಭ್ಯಾಸ ಮಾಡಬಹುದು. ಮನೆಯಲ್ಲಿ, ಕಚೇರಿಯಲ್ಲಿ ಅಥವಾ ಪ್ರಯಾಣಿಸುವಾಗಲೂ ಯೋಗವನ್ನು ಅಭ್ಯಾಸ ಮಾಡಬಹುದು. ಏಕಾಂಗಿಯಾಗಿ ಅಥವಾ ಇತರರೊಂದಿಗೆ ಅಭ್ಯಾಸ ಮಾಡಬಹುದು. ಯೋಗವನ್ನು ಸ್ವತಃ ಕಲಿಯಬಹುದು ಅಥವಾ ಗುರುವಿನಿಂದ ಕಲಿಯಬಹುದು. ಆದ್ದರಿಂದಲೇ ಯೋಗವು ಸರ್ವಮಾನ್ಯವಾದದ್ದು.”
ಮೇ - ಜೂನ್ ತಿಂಗಳಿನಲ್ಲಿ ಎಸ್.ಎಸ್.ಎಲ್. ಸಿ. ಮತ್ತು ಪಿ.ಯು.ಸಿ. ಪರೀಕ್ಷೆಗಳ ಫಲಿತಾಂಶ ಪ್ರಕಟವಾಗುತ್ತಿದ್ದಂತೆ, ಗರಿಷ್ಠ ಅಂಕ ಗಳಿಸಿದ ವಿದ್ಯಾರ್ಥಿಗಳ ಫೋಟೋಗಳು ಪತ್ರಿಕೆಗಳ ಮುಖಪುಟಗಳಲ್ಲಿ ರಾರಾಜಿಸುತ್ತವೆ. ತಮ್ಮ ಮಕ್ಕಳ ಶಿಕ್ಷಣಕ್ಕಾಗಿ ಏನೆಲ್ಲ ವ್ಯವಸ್ಥೆ ಮಾಡಿದ್ದೆವು ಎಂದು ಆ ವಿದ್ಯಾರ್ಥಿಗಳ ಹೆತ್ತವರು ಹೇಳಿಕೆಗಳನ್ನು ನೀಡುತ್ತಾರೆ.
ಇವೆಲ್ಲ ಗದ್ದಲದಲ್ಲಿ “ಶಿಕ್ಷಣ ಪಡೆಯಲಿಕ್ಕಾಗಿ ಮಕ್ಕಳು ಶಾಲೆಗೆ ಹೋಗಲೇ ಬೇಕೇ?” ಎಂಬ ಪ್ರಶ್ನೆ ಎತ್ತುವವರು ಎಲ್ಲಿಯೂ ಕಾಣಿಸುವುದಿಲ್ಲ. ಎಲ್ಲ ಹೆತ್ತವರೂ ತಮ್ಮ ಮಕ್ಕಳನ್ನು ಯಾವ ಶಾಲೆ ಅಥವಾ ಜ್ಯೂನಿಯರ್ ಕಾಲೇಜಿಗೆ (ಕಿಂಡರ್-ಗಾರ್ಟನ್‌ನಿಂದ ಶುರು ಮಾಡಿ ಪಿಯುಸಿ ತನಕ) ಸೇರಿಸುವುದು ಎಂಬ ಧಾವಂತದಲ್ಲೇ ಮುಳುಗಿರುತ್ತಾರೆ.
ಆದರೆ, ಚೆನ್ನಾಗಿ ಕಲಿಯಲು ಶಾಲೆಗೆ ಹೋಗಬೇಕೆಂದಿಲ್ಲ, ಮನೆಯಲ್ಲೇ ಕಲಿಯಬಹುದು! ಇದು, ತಮ್ಮ ಮಕ್ಕಳ ಶಿಕ್ಷಣಕ್ಕಾಗಿ ಮನೆಯಲ್ಲೇ ಕಲಿಕೆ (ಹೋಮ್ ಸ್ಕೂಲಿಂಗ್) ವಿಧಾನ ಅನುಸರಿಸುತ್ತಿರುವ ಲಕ್ಷಗಟ್ಟಲೆ ಹೆತ್ತವರ ಅನುಭವದ ಮಾತು. ನನ್ನ ಮೊಮ್ಮಕ್ಕಳಿಬ್ಬರೂ ಇದೇ ವಿಧಾನದಲ್ಲಿ ಕಲಿಯುತ್ತಿದ್ದಾರೆ (ಅಂದರೆ, ಒಂದು ದಿನವೂ ಶಾಲೆಗೆ ಹೋಗಿಲ್ಲ.) ಇದು ಹೇಗೆ ಸಾಧ್ಯ?
ಮನೆಯಲ್ಲೇ ಕಲಿಕೆಗಾಗಿ ರಾಷ್ಟ್ರೀಯ ಮುಕ್ತ ಶಿಕ್ಷಣ ಸಂಸ್ಥೆ (ಎನ್.ಐ.ಓ.ಎಸ್.)
ಜೂನ್ 9, 2023ರಂದು ರಾತ್ರಿ 11 ಗಂಟೆಯ ಹೊತ್ತಿಗೆ ಡಿ.ಎನ್. ಪ್ರಕಾಶ್ ನಿಧನರಾದರೆಂಬ ಸುದ್ದಿ ಬಂದೆರಗಿದ್ದು ಮರುದಿನ ಮುಂಜಾನೆ. ಈಗಲೂ ಅದನ್ನು ನಂಬಲಾಗುತ್ತಿಲ್ಲ. ಯಾಕೆಂದರೆ, ಕೆಲವೇ ದಿನಗಳ ಮುಂಚೆ ನನಗೆ ಅವರು ಮೆಸೇಜ್ ಮಾಡಿದ್ದರು.
ಡಿ.ಎನ್. ಪ್ರಕಾಶ್ ಎಂದಾಗ ನಮಗೆ ನೆನಪಾಗುವುದು ಸರಳ ಉಡುಪಿನ, ಎತ್ತರದ ನಿಲುವಿನ, ಗೌರವ ವರ್ಣದ, ಸದಾ ನಗುಮುಖದ, ಮೆಲು ಮಾತಿನ ವ್ಯಕ್ತಿ. ತನ್ನ ಕೆಲಸದಿಂದಲೇ ಎಲ್ಲರಿಗೂ ಉತ್ಸಾಹ ತುಂಬುವ, ಹಿಡಿದ ಕೆಲಸ ಮುಗಿಯುವ ವರೆಗೆ ಬೆನ್ನು ಬಿಡದೆ ಸಾಧಿಸುವ ಅಸಾಮಾನ್ಯ ಮನುಷ್ಯ.
ಬ್ಯಾಂಕ್ ಅಧಿಕಾರಿಗಳ ಸಂಘಟನೆಗಳನ್ನು ಬಲಪಡಿಸಿ, ಮುನ್ನಡೆಸಲಿಕ್ಕಾಗಿ ತನ್ನ ಬದುಕನ್ನೇ ಸಮರ್ಪಿಸಿದ ಡಿ. ಎನ್. ಪ್ರಕಾಶ್ ಆ ಸಂಘಟನೆಗಳ ಉನ್ನತ ಪದಾಧಿಕಾರಿಯ ಸ್ಥಾನಕ್ಕೆ ತನ್ನ ಅರ್ಹತೆ ಹಾಗೂ ಸಮರ್ಪಣೆಗಳ ಬಲದಿಂದಲೇ ಏರಿದ್ದು ಅಸಾಧಾರಣ ಸಾಧನೆ. ಬ್ಯಾಂಕಿನ ಅಧಿಕಾರಿಯ ಶ್ರೇಣಿಯಲ್ಲಿಯೂ ಉನ್ನತ ಹುದ್ದೆಗೇರುವ ಎಲ್ಲ ಅರ್ಹತೆಗಳೂ ಅವರಿಗಿದ್ದವು. ಆದರೆ ಅವರು ಅವನ್ನೆಲ್ಲ ನಿರಾಕರಿಸಿ, ಎಲ್ಲ ಅಧಿಕಾರಿಗಳ ಶ್ರೇಯಸ್ಸಿಗಾಗಿ ಸಂಘಟನೆಯ ಹಾದಿಯಲ್ಲಿ ಸಾಗಿದರು.
ಮೇ 31ರಂದು ಯಕ್ಷಗಾನ ಮೇಳಗಳ ವರುಷದ "ತಿರುಗಾಟ"ಕ್ಕೆ ತೆರೆ ಬಿದ್ದಿದೆ. ಕಳೆದ ವರುಷದ ತಿರುಗಾಟದಲ್ಲಿ ಗಮನಿಸಲಾದ ಸಂಗತಿ: ಕಾಲಮಿತಿ ಯಕ್ಷಗಾನ ಹೆಚ್ಚಿನ ಜನಮನ್ನಣೆ ಗಳಿಸಿದ್ದು. ಈಗ ರಾತ್ರಿ ಸರಿದಂತೆ ಪ್ರೇಕ್ಷಕರು ಎದ್ದು ಹೋಗುವುದನ್ನು ಕಲಾವಿದರು ಕಾಣ ಬೇಕಾಗಿಲ್ಲ. ಬದಲಾಗಿ, ಸಭೆಯಲ್ಲಿ ತುಂಬಿದ ಪ್ರೇಕ್ಷಕರ ಎದುರು ತಮ್ಮ ಯಕ್ಷಗಾನ ಪ್ರದರ್ಶನವನ್ನು ಮುಂದುವರಿಸುವಂತಾಗಿದೆ.
ಅಂದ ಹಾಗೆ, ಯಕ್ಷಗಾನ ಪ್ರದರ್ಶನಗಳೆಂದರೆ ರಾತ್ರಿ 10 ಗಂಟೆಗೆ ಶುರುವಾಗಿ ಮುಂಜಾನೆ 6 ಗಂಟೆ ತನಕ ಜರಗುತ್ತಿತ್ತು; ಇದು ಕಳೆದ 100 ವರುಷಗಳಲ್ಲಿ ನಡೆದು ಬಂದ ಪರಿಪಾಠ. ಅದರ ಬದಲಾಗಿ, ಕೆಲವು ವರುಷಗಳಿಂದೀಚೆಗೆ ಕೆಲವು ಮೇಳಗಳು ಯಕ್ಷಗಾನವನ್ನು “ಕಾಲಮಿತಿ”ಯಲ್ಲಿ ಪ್ರದರ್ಶಿಸಲು ಶುರು ಮಾಡಿದವು. ಅಂದರೆ, ಮುಸ್ಸಂಜೆ 5.45ಕ್ಕೆ ಪ್ರದರ್ಶನ ಶುರು ಮಾಡಿ, ನಡುರಾತ್ರಿ 12.30ಕ್ಕೆ ಮುಗಿಸುವುದು.
ಈ ಬದಲಾವಣೆ ಆರಂಭಿಸಿದವರು (2016ರಿಂದೀಚೆಗೆ) ಶ್ರೀ ಧರ್ಮಸ್ಥಳ ಮೇಳದವರು. 24 ನವಂಬರ್ 2022ರಿಂದ ಶ್ರೀ ಕಟೀಲು ದುರ್ಗಾಪರಮೇಶ್ವರಿ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಲಿಯ ಆರು ಮೇಳಗಳೂ ಈ ಬದಲಾವಣೆ ಅಳವಡಿಸಿಕೊಂಡವು. ವರುಷದ ಮೊದಲನೆಯ ಮತ್ತು ಕೊನೆಯ ಪ್ರದರ್ಶನದ ಹೊರತಾಗಿ, ಕಟೀಲು ಮೇಳಗಳ ಇತರ ಎಲ್ಲ ಪ್ರದರ್ಶನಗಳು ಕಾಲಮಿತಿಯಲ್ಲೇ ಜರಗಿದವು. ಇತರ ಹಲವು ಮೇಳಗಳೂ ಇದೇ ಬದಲಾವಣೆಯ ಪಥದಲ್ಲಿ ಸಾಗಿದ್ದು ಗಮನಾರ್ಹ.
ಪರಿಸರ ಉಳಿಸಲು ಹಾಗೆ ಮಾಡಿ, ಹೀಗೆ ಮಾಡಿ ಎಂದು ಭಾಷಣ ಬಿಗಿಯುವವರನ್ನು ಕಂಡಿದ್ದೇವೆ. ವನಮಹೋತ್ಸವದ ನೆವನದಲ್ಲಿ ಒಂದೆರಡು ಸಸಿ ನೆಟ್ಟು ಫೋಟೋ ತೆಗೆಸಿ, ಎಲ್ಲ ಪತ್ರಿಕೆಗಳಿಗೆ ವರದಿ ಕಳಿಸಿ, ಪ್ರಚಾರ ಗಿಟ್ಟಿಸಿ, ಅನಂತರ ಆ ಸಸಿಗಳಿಗೆ ಒಂದು ಲೋಟ ನೀರು ಎರೆಯದವರನ್ನೂ ನೋಡಿದ್ದೇವೆ.
ಈಗ, ಕೇರಳದ ಕಾಂಡ್ಲ ಕಾಡು ಉಳಿಸಲು ಬದುಕು ಮುಡಿಪಾಗಿಟ್ಟಿರುವ ಟಿ.ಪಿ. ಮುರುಕೇಶನ್ ಅವರ ಬಗ್ಗೆ ತಿಳಿಯೋಣ. ಕೇರಳದ ಪಶ್ಚಿಮ ಕರಾವಳಿಯ ವೈಪಿನ್ ದ್ವೀಪದಲ್ಲಿದೆ ಅವರ ಮನೆ. ತನ್ನ ಮನೆಯ ಒದ್ದೆ ಗೋಡೆಗಳಿಂದ ಕಿತ್ತು ಬರುತ್ತಿರುವ ಬಿಳಿ ಪೈಂಟನ್ನು ನೋಡುತ್ತಾ ಅವರು ಹೇಳುತ್ತಾರೆ, “ಈಗ ನೆರೆ ಬರುವುದು ಜಾಸ್ತಿಯಾಗಿದೆ; ಪ್ರತೀ ಸಲ ನೆರೆ ಬಂದಾಗ ನೆರೆ ಇಳಿಯೋದು ನಿಧಾನವಾಗ್ತಿದೆ." ಕಳೆದ ಸಲ ನೆರೆ ಬಂದಾಗ ಮೊಮ್ಮಗನ ಎದೆ ಮಟ್ಟಕ್ಕೆ ನೀರು ಏರಿದ್ದನ್ನು ನೆನಪು ಮಾಡಿಕೊಳ್ಳುತ್ತಾ ಅವರು ಹೇಳುವ ಮಾತು: “ಪ್ರತೀ ಸಲ ಇಷ್ಟೆತ್ತರಕ್ಕೆ ನೆರೆ ನೀರು ಏರುತ್ತದೆ. ನಾವು ಅದರೊಂದಿಗೆ ಬದುಕಬೇಕು.”
2023 ಎಪ್ರಿಲ್ ತಿಂಗಳಲ್ಲಿ ಮಹಾರಾಷ್ಟ್ರದ ನವಿಮುಂಬೈಯಲ್ಲಿ ಸರಕಾರ ಆಯೋಜಿಸಿದ ಒಂದು ಬೃಹತ್ ಕಾರ್ಯಕ್ರಮದಲ್ಲಿ 12 ಜನರು ಬಿಸಿಲಿನ ಬೇಗೆಯಿಂದಾಗಿ ಸಾವನ್ನಪ್ಪಿದರು ಮತ್ತು ಹಲವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಸೇರಿಸಲಾಯಿತು.
ಗುಜರಾತಿನ ಅಹ್ಮದಾಬಾದಿನಲ್ಲಿ ಉಷ್ಣತೆ 40 ಡಿಗ್ರಿ ಸೆಲ್ಸಿಯಸ್ ದಾಟಿದೆ; ಇದರಿಂದಾಗಿ ರಸ್ತೆಗಳಿಗೆ ಹಾಕಿದ ತಾರು (ಡಾಮಾರು) ಕರಗಿ ವಾಹನಗಳ ಟಯರುಗಳಿಗೆ ಮೆತ್ತಿಕೊಳ್ಳುತ್ತಿದೆ ಎಂಬ ವರದಿಗಳು ಬಂದಿವೆ.
ಜೀವಕ್ಕೇ ಕುತ್ತಾಗುವ ಬಿಸಿಹವೆ ಭಾರತದಲ್ಲಿ ರುದ್ರನರ್ತನ ಮಾಡುತ್ತಿದೆ. ಕರಾವಳಿಯ ನಗರಪಟ್ಟಣಗಳಲ್ಲಿ ಸಮುದ್ರದ ಮೇಲಿನಿಂದ ಗಾಳಿ ಬೀಸುತ್ತಿರುತ್ತದೆ. ಆದರೆ ಕಳೆದ ಮೂರ್ನಾಲ್ಕು ವರುಷಗಳಿಂದ ಆ ಗಾಳಿಯೂ ಬಿಸಿಬಿಸಿಯಾಗಿದೆ. 2050ರ ಹೊತ್ತಿಗೆ ಭಾರತದಲ್ಲಿ ಬಿಸಿ ಹವೆ ಎರಡರಿಂದ ನಾಲ್ಕು ಪಟ್ಟು ಹೆಚ್ಚಲಿದೆ ಎಂದು ಪರಿಣತರು ಎಚ್ಚರಿಸಿದ್ದಾರೆ. ಜೊತೆಗೆ, ಬಿಸಿಹವೆ ಪ್ರತಿ ವರುಷವೂ ಬೇಗನೇ ಶುರುವಾಗಿ, ಹೆಚ್ಚೆಚ್ಚು ಅವಧಿ ಉಳಿಯಲಿದೆ.
ಭಾರತೀಯ ಹವಾಮಾನ ಇಲಾಖೆಯ ಮುನ್ಸೂಚನೆ ಹೀಗಿದೆ: 2023ರ ಮೇ ತಿಂಗಳ ಕೊನೆಯ ವರೆಗೆ ಭಾರತದ ಉದ್ದಗಲದಲ್ಲಿ ಉಷ್ಣತೆ ಸರಾಸರಿಗಿಂತ ಹೆಚ್ಚಾಗಿರುತ್ತದೆ ಮತ್ತು ಬಿಸಿಹವೆ ಮುಂದುವರಿಯಲಿದೆ. 1901ರಿಂದ 2018 ಅವಧಿಯಲ್ಲಿ ಭಾರತದ ಸರಾಸರಿ ಉಷ್ಣತೆ 0.9 ಡಿಗ್ರಿ ಸೆಲ್ಸಿಯಸ್ ಜಾಸ್ತಿಯಾಗಿದೆ. ಇದಕ್ಕೆ ಒಂದು ಕಾರಣ ಹವಾಮಾನ ಬದಲಾವಣೆ.
ಅರೆ, ಇಡ್ಲಿ ಬಗ್ಗೆ ಬರೆಯಲಿಕ್ಕೇನಿದೆ? ನಮಗೆಲ್ಲ ತಿಳಿದಿದೆಯಲ್ಲಾ..... ಎನ್ನುತ್ತೀರಾ? ಸರಿ, ಆದರೆ ಅದರ ಬಗ್ಗೆ ನಮಗೆ ತಿಳಿಯದ ಎಷ್ಟೋ ವಿಷಯಗಳಿವೆ.
ಅಕ್ಕಿ ಮತ್ತು ಉದ್ದು ಹುಳಿ ಬರಿಸಿ, ಆ ಮಿಶ್ರಣದಿಂದ ತಯಾರಿಸುವ ದಕ್ಷಿಣ ಭಾರತದ ಈ ತಿನಿಸು ಈಗ ಜಗತ್ತಿನ ಹಲವೆಡೆಗಳಲ್ಲಿ ಜನಪ್ರಿಯ. ಕೇವಲ ಇಡ್ಲಿ ಸಪ್ಪೆ ಆಹಾರ. ಇದರ ವಿಶೇಷತೆ ಏನೆಂದರೆ ಇದನ್ನು ಬಹುಶಃ ಬೇರೆ ಯಾವುದೇ ನೆಚ್ಚಿಕೊಳ್ಳುವ ಆಹಾರದೊಂದಿದೆ ಬಾಯಿ ಚಪ್ಪರಿಸುತ್ತಾ ಸೇವಿಸಬಹುದು - ವಿಧವಿಧದ ಚಟ್ನಿಗಳು, ಸಾರುಗಳು, ಸಾಂಬಾರುಗಳು, ಕೆಟ್-ಚಪ್‌ಗಳು, ಜಾಮ್‌ಗಳು, ಉಪ್ಪಿನಕಾಯಿಗಳು, ಜೇನು, ಜೋನಿಬೆಲ್ಲ ಇತ್ಯಾದಿ.
ಮನೆಮನೆಗಳಲ್ಲಿ ಮತ್ತು ಹೋಟೆಲುಗಳಲ್ಲಿ ಇಡ್ಲಿಯನ್ನು ತಿನ್ನಲು ನೀಡುವುದು ತೆಂಗಿನಕಾಯಿ ಚಟ್ನಿ ಮತ್ತು ತರಕಾರಿ ಸಾಂಬಾರಿನ ಜೊತೆ. ಹೋಟೆಲುಗಳ ಮೆನುಗಳಲ್ಲಿ ಈಗ ಇಡ್ಲಿ ಜೊತೆಗೆ ಇಡ್ಲಿ-ಡಿಪ್ ಎಂಬುದನ್ನೂ ಪಟ್ಟಿ ಮಾಡಿರುವುದನ್ನು ಗಮನಿಸಿದ್ದೀರಾ? ಎರಡು ಇಡ್ಲಿಗಳನ್ನು ಗುಂಡಿ-ತಟ್ಟೆಗೆ ಸುರಿದ ಸಾಂಬಾರಿಗೆ ಹಾಕಿ ತಿನ್ನಲು ಕೊಡುವುದೇ “ಇಡ್ಲಿ-ಡಿಪ್" (ಇದರ ಜೊತೆಗೆ ಚಟ್ನಿ ಇರೋದಿಲ್ಲ.) ಅದಲ್ಲದೆ, ಹೋಟೆಲ್ ಮೆನುಗಳಲ್ಲಿ "ಬಟನ್ ಇಡ್ಲಿ” ಎಂಬುದೂ ಕಾಣಿಸುತ್ತದೆ. ಒಂದಿಂಚು ವ್ಯಾಸದ 8 - 10 ಪುಟಾಣಿ ಇಡ್ಲಿಗಳನ್ನು ಸಾಂಬಾರಿಗೆ ಹಾಕಿ ಗುಂಡಿ-ತಟ್ಟೆಯಲ್ಲಿ ಕೊಡುವುದೇ ಬಟನ್-ಇಡ್ಲಿ.
ಆತನ ಹೆಸರು ಮಿಥಿಲೇಶ್ ಕುಮಾರ್ ಶ್ರೀವಾಸ್ತವ. ಆದರೆ ಆತ “ನಟವರಲಾಲ್" ಎಂದೇ ಕುಪ್ರಸಿದ್ದ. ಹತ್ತು ಸಲ ಬಂಧಿಸಿ, ಜೈಲಿನಲ್ಲಿ ಇಟ್ಟಿದ್ದರೂ ಹತ್ತು ಸಲ ಜೈಲಿನಿಂದ ತಪ್ಪಿಸಿಕೊಂಡ ಕುಖ್ಯಾತಿ ಆತನದು.
ಯಾವುದೇ ಸೆರೆಮನೆಯಲ್ಲಿ ತನ್ನನ್ನು ಬಂಧನದಲ್ಲಿ ಇಟ್ಟುಕೊಳ್ಳಲಾಗದು, ಯಾಕೆಂದರೆ ಅಲ್ಲೊಬ್ಬ ಅಪ್ರಾಮಾಣಿಕ ಪೊಲೀಸ್ ಇದ್ದೇ ಇರುತ್ತಾನೆ; ಹಾಗಾಗಿ ತಾನು ಎಂತಿದ್ದರೂ ಜೈಲಿನಿಂದ ತಪ್ಪಿಸಿಕೊಳ್ಳುತ್ತೇನೆ ಎಂದಾತ ಬಡಾಯಿ ಕೊಚ್ಚಿಕೊಳ್ಳುತ್ತಿದ್ದ. ಆತನ ಬೆಚ್ಚಿಬೀಳಿಸುವ ವಂಚನೆಯ ಪ್ರಕರಣಗಳೇ “ನಟವರಲಾಲ್", “ರಾಜಾ ನಟವರಲಾಲ್” ಮತ್ತು "ಬಂಟಿ ಔರ್ ಬಬ್ಲಿ” ಎಂಬ ಹೆಸರುವಾಸಿ ಚಲನಚಿತ್ರಗಳಿಗೆ ಪ್ರೇರಣೆ.
ಬಿಹಾರದ ಸಿವಾನ್ ಜಿಲ್ಲೆಯ ಬಾಂಗ್ರಾ ಗ್ರಾಮದಲ್ಲಿ 1913ರಲ್ಲಿ ಹುಟ್ಟಿದ ಮಿಥಿಲೇಶನ ಬಾಲ್ಯದ ಹೆಚ್ಚಿನ ಮಾಹಿತಿ ಲಭ್ಯವಿಲ್ಲ. ಒಂದು ಮಾಹಿತಿಯ ಅನುಸಾರ ಅವನು ಶ್ರೀಮಂತ ಜಮೀನುದಾರ ಕುಟುಂಬದವನು. ಪಾಟ್ನಾದ ಶಾಲೆಯಲ್ಲಿ ಕಲಿಯುತ್ತಿದ್ದಾಗ ಅವನು ಬುದ್ಧಿವಂತ ವಿದ್ಯಾರ್ಥಿಯಾಗಿದ್ದ; ಆದರೆ ಗಣಿತದಲ್ಲಿ ಚತುರನಾಗಿರಲಿಲ್ಲ. ಒಂದು ಕತೆಯ ಪ್ರಕಾರ, ತನ್ನ ತಂದೆ ಭೀಕರವಾಗಿ ಹೊಡೆದ ಕಾರಣ ಅವನು ಮನೆ ತೊರೆದು ಓಡಿಹೋದ.
ಭಾರತೀಯ ರೈಲ್ವೇ 2023ರಲ್ಲಿಯೂ ಹಲವಾರು "ವಂದೇ ಭಾರತ್” ರೈಲುಗಳ ಓಡಾಟ ಶುರು ಮಾಡಿದೆ. ವಿಮಾನಗಳಲ್ಲಿ ಪ್ರಯಾಣಿಸುವವರ ಸಂಖ್ಯೆ ಹೆಚ್ಚುತ್ತಿರುವಂತೆ ರೈಲುಗಳಲ್ಲಿ ಪ್ರಯಾಣಿಸುವವರ ಸಂಖ್ಯೆಯೂ ಹೆಚ್ಚುತ್ತಿದೆ. ಇದಕ್ಕೆ ಒಂದು ಕಾರಣ ವಂದೇ ಭಾರತ್‌ನಂತಹ ಹಲವು ಅತ್ಯಂತ ವೇಗದ ರೈಲುಗಳು ಈಗ ನಮ್ಮ ಪ್ರಯಾಣಕ್ಕೆ ಲಭ್ಯ.
ರೈಲು ಪ್ರಯಾಣವೆಂದರೆ ಅದೇನೋ ಖುಷಿ. ಅದೇನಿದ್ದರೂ ಒಂದು ದಿನಕ್ಕಿಂತ ಜಾಸ್ತಿ ರೈಲಿನಲ್ಲಿ ಪ್ರಯಾಣಿಸುತ್ತಿದ್ದರೆ “ಈ ಪ್ರಯಾಣ ಯಾವಾಗ ಮುಗಿಯುತ್ತದೋ” ಅನಿಸಲು ಶುರುವಾಗುತ್ತದೆ. ಅದಕ್ಕಾಗಿ, ಭಾರತದ ಅತ್ಯಂತ ವೇಗದ ಕೆಲವು ರೈಲುಗಳ ಮಾಹಿತಿ ಇಲ್ಲಿದೆ.
ವಂದೇ ಭಾರತ್ ಎಕ್ಸ್-ಪ್ರೆಸ್
ಬಂಗಾರದ ಅಂಚಿನ ಕೆಂಪು ಸೀರೆಯುಟ್ಟು, ಒಂದು ಕೈಯಲ್ಲಿ ಖಡ್ಗ, ಇನ್ನೊಂದು ಕೈಯಲ್ಲಿ ಗುರಾಣಿ ಹಿಡಿದು ಕಲರಿಪಯಟ್ಟು ಗುರು ಮೀನಾಕ್ಷಿ ಅಮ್ಮನವರ ಚಾಕಚಕ್ಯತೆ ಹಾಗೂ ಆತ್ಮವಿಶ್ವಾಸಗಳನ್ನು ಕಣ್ಣಾರೆ ಕಂಡರೆ ಮಾತ್ರ ನಂಬಲು ಸಾಧ್ಯ. ಯಾಕೆಂದರೆ, ತನ್ನ ಇಮ್ಮಡಿ ಗಾತ್ರದ ಮತ್ತು ಅರ್ಧ ವಯಸ್ಸಿನ ಎದುರಾಳಿಗಳನ್ನು ಕೇರಳದ ವಡಕರದ “ಕಲರಿ"ಯಲ್ಲಿ ಪ್ರತಿಯೊಂದು ಹೊಡೆತಕ್ಕೆ ತಕ್ಕ ಹೊಡೆತ ನೀಡುತ್ತಾ ಸಮರ್ಥವಾಗಿ ಎದುರಿಸುವ ಅವರ ವಯಸ್ಸು 80 ವರುಷ ದಾಟಿದೆ!
ಮೀನಾಕ್ಷಿ ರಾಘವನ್ ಅವರನ್ನು ಕುಟುಂಬದವರೂ ಶಿಷ್ಯರೂ ಪ್ರೀತಿ-ಅಭಿಮಾನಗಳಿಂದ ಕರೆಯುವುದು ಮೀನಾಕ್ಷಿ ಅಮ್ಮ ಎಂಬುದಾಗಿ. ಕಲರಿಪಯಟ್ಟು ಎಂಬ ಪಾರಂಪರಿಕ ಕದನಕಲೆಯನ್ನು ಕಲಿಸುತ್ತಿರುವ ಅತಿ ವೃದ್ಧ ಮಹಿಳಾ ಗುರು ಎಂಬ ಹೆಗ್ಗಳಿಕೆ ಅವರದು. ಜೊತೆಗೆ, ಅಂದೊಮ್ಮೆ ನಿಷೇಧಿಸಲಾಗಿದ್ದ ಈ ಕದನಕಲೆಯನ್ನು ಜನಪ್ರಿಯಗೊಳಿಸುವ ದಿಟ್ಟತನ ಅವರದು. ಅದಲ್ಲದೆ, ಇದಕ್ಕೆ “ಪ್ರವೇಶವೇ ಇಲ್ಲದಿದ್ದ” ಹೆಣ್ಣುಮಕ್ಕಳು ಆತ್ಮರಕ್ಷಣೆಗಾಗಿ ಈ ಕದನಕಲೆ ಕಲಿಯಲು ಅವರೇ ಪ್ರೇರಣೆ.
