
ಮೇ - ಜೂನ್ ತಿಂಗಳಿನಲ್ಲಿ ಎಸ್.ಎಸ್.ಎಲ್. ಸಿ. ಮತ್ತು ಪಿ.ಯು.ಸಿ. ಪರೀಕ್ಷೆಗಳ ಫಲಿತಾಂಶ ಪ್ರಕಟವಾಗುತ್ತಿದ್ದಂತೆ, ಗರಿಷ್ಠ ಅಂಕ ಗಳಿಸಿದ ವಿದ್ಯಾರ್ಥಿಗಳ ಫೋಟೋಗಳು ಪತ್ರಿಕೆಗಳ ಮುಖಪುಟಗಳಲ್ಲಿ ರಾರಾಜಿಸುತ್ತವೆ. ತಮ್ಮ ಮಕ್ಕಳ ಶಿಕ್ಷಣಕ್ಕಾಗಿ ಏನೆಲ್ಲ ವ್ಯವಸ್ಥೆ ಮಾಡಿದ್ದೆವು ಎಂದು ಆ ವಿದ್ಯಾರ್ಥಿಗಳ ಹೆತ್ತವರು ಹೇಳಿಕೆಗಳನ್ನು ನೀಡುತ್ತಾರೆ.
ಇವೆಲ್ಲ ಗದ್ದಲದಲ್ಲಿ “ಶಿಕ್ಷಣ ಪಡೆಯಲಿಕ್ಕಾಗಿ ಮಕ್ಕಳು ಶಾಲೆಗೆ ಹೋಗಲೇ ಬೇಕೇ?” ಎಂಬ ಪ್ರಶ್ನೆ ಎತ್ತುವವರು ಎಲ್ಲಿಯೂ ಕಾಣಿಸುವುದಿಲ್ಲ. ಎಲ್ಲ ಹೆತ್ತವರೂ ತಮ್ಮ ಮಕ್ಕಳನ್ನು ಯಾವ ಶಾಲೆ ಅಥವಾ ಜ್ಯೂನಿಯರ್ ಕಾಲೇಜಿಗೆ (ಕಿಂಡರ್-ಗಾರ್ಟನ್‌ನಿಂದ ಶುರು ಮಾಡಿ ಪಿಯುಸಿ ತನಕ) ಸೇರಿಸುವುದು ಎಂಬ ಧಾವಂತದಲ್ಲೇ ಮುಳುಗಿರುತ್ತಾರೆ.
ಆದರೆ, ಚೆನ್ನಾಗಿ ಕಲಿಯಲು ಶಾಲೆಗೆ ಹೋಗಬೇಕೆಂದಿಲ್ಲ, ಮನೆಯಲ್ಲೇ ಕಲಿಯಬಹುದು! ಇದು, ತಮ್ಮ ಮಕ್ಕಳ ಶಿಕ್ಷಣಕ್ಕಾಗಿ ಮನೆಯಲ್ಲೇ ಕಲಿಕೆ (ಹೋಮ್ ಸ್ಕೂಲಿಂಗ್) ವಿಧಾನ ಅನುಸರಿಸುತ್ತಿರುವ ಲಕ್ಷಗಟ್ಟಲೆ ಹೆತ್ತವರ ಅನುಭವದ ಮಾತು. ನನ್ನ ಮೊಮ್ಮಕ್ಕಳಿಬ್ಬರೂ ಇದೇ ವಿಧಾನದಲ್ಲಿ ಕಲಿಯುತ್ತಿದ್ದಾರೆ (ಅಂದರೆ, ಒಂದು ದಿನವೂ ಶಾಲೆಗೆ ಹೋಗಿಲ್ಲ.) ಇದು ಹೇಗೆ ಸಾಧ್ಯ?
ಮನೆಯಲ್ಲೇ ಕಲಿಕೆಗಾಗಿ ರಾಷ್ಟ್ರೀಯ ಮುಕ್ತ ಶಿಕ್ಷಣ ಸಂಸ್ಥೆ (ಎನ್.ಐ.ಓ.ಎಸ್.)
ಮಕ್ಕಳು ಮನೆಯಲ್ಲೇ ಖುಷಿಯಿಂದ ಹತ್ತು ವರುಷ (ಅಂದರೆ ಒಂದನೇ ತರಗತಿಯಿಂದ ಹತ್ತನೇ ತರಗತಿಯ ವಯಸ್ಸಿನ ವರೆಗೆ) ಕಲಿತರಾಯಿತು. ಹತ್ತನೇ ತರಗತಿಯ ವಯಸ್ಸಿಗೆ ಬಂದಾಗ, ಈ ರಾಷ್ಟ್ರೀಯ ಸಂಸ್ಥೆಯಲ್ಲಿ ನೋಂದಾಯಿಸಿಕೊಂಡು, ನೇರವಾಗಿ ಹತ್ತನೆಯ ತರಗತಿಯ ಪರೀಕ್ಷೆಗೆ ಹಾಜರಾದರಾಯಿತು. ಅನಂತರ, ಮನೆಯಲ್ಲೇ ಕಲಿಕೆ ಮುಂದುವರಿಸಿ, 12ನೇ ತರಗತಿಯ ಪರೀಕ್ಷೆಗೆ ಹಾಜರಾಗಲು ಸಾಧ್ಯ.
ಆದರೆ, ಆ ಶಿಕ್ಷಣಕ್ಕೆ ಮಾನ್ಯತೆ ಇದೆಯೇ? ಮಕ್ಕಳ ಭವ್ಯ ಭವಿಷ್ಯಕ್ಕೆ ತೊಂದರೆ ಆಗುವುದಿಲ್ಲವೇ? ಹೆತ್ತವರು ಇಂತಹ ಪ್ರಶ್ನೆಗಳನ್ನು ಕೇಳುವುದು ಸಹಜ.
ಇಂತಹ ಎಲ್ಲ ಪ್ರಶ್ನೆಗಳಿಗೂ ಉತ್ತರ ಲಭ್ಯ - ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಓಪನ್ ಸ್ಕೂಲಿಂಗ್ (ಎನ್.ಐ.ಓ.ಎಸ್.) ಇದರ ವೆಬ್‌ಸೈಟಿನಲ್ಲಿ: www.nios.ac.in ಇದರ ಮಾತೃ ಮಂತ್ರಾಲಯ ಭಾರತ ಸರಕಾರದ ಶಿಕ್ಷಣ ಮಂತ್ರಾಲಯ. ಇದನ್ನು ನವಂಬರ್ 1989ರಲ್ಲಿ ಸ್ವಾಯತ್ತ ಸಂಸ್ಥೆಯಾಗಿ ಸ್ಥಾಪಿಸಲಾಯಿತು. ಸಮಾಜದ ಎಲ್ಲ ವರ್ಗಗಳಿಗೂ ಮುಕ್ತ ಶಿಕ್ಷಣದ ಅವಕಾಶ ಒದಗಿಸುವುದು ಹಾಗೂ ದೇಶದಲ್ಲಿ ಸಾಕ್ಷರತೆಯ ಪ್ರಮಾಣ ಹೆಚ್ಚಿಸುವುದು ಇದರ ಪ್ರಧಾನ ಉದ್ದೇಶ.
ಇದು ಯಾವುದೇ ಶಾಲೆ-ಕಾಲೇಜುಗಳನ್ನು ನಡೆಸುವ ಸಂಸ್ಥೆಯಲ್ಲ; ಬದಲಾಗಿ, ವಿವಿಧ ಪರೀಕ್ಷೆಗಳನ್ನು ನಡೆಸುವ ಸಂಸ್ಥೆ. ಇದು ಮುಖ್ಯವಾಗಿ (1) ಹತ್ತನೆಯ ತರಗತಿಗೆ ಸಮಾನವಾದ ಸೆಕೆಂಡರಿ ಕೋರ್ಸ್ ಮತ್ತು (2) ಹನ್ನೆರಡನೆಯ ತರಗತಿಗೆ ಸಮಾನವಾದ ಸೀನಿಯರ್ ಸೆಕೆಂಡರಿ ಕೋರ್ಸ್ ಪರೀಕ್ಷೆಗಳನ್ನು ಜರಗಿಸುವ ರಾಷ್ಟ್ರೀಯ ಮಂಡಲಿ (ಅಂದರೆ ಸಿ.ಬಿ.ಎಸ್.ಇ. ಮಂಡಲಿ ತರಹ)
ಗಮನಿಸಿ: ಅಸೋಸಿಯೇಷನ್ ಆಫ್ ಇಂಡಿಯನ್ ಯುನಿವರ್ಸಿಟೀಸ್ 25 ಜುಲಾಯಿ 1991ರ ತನ್ನ ಪತ್ರದಲ್ಲಿ (ಸಂಖ್ಯೆ: ಇವಿ/ 11 (354)/ 91) ಹೀಗೆಂದು ಘೋಷಿಸಿದೆ: “ಎನ್.ಐ.ಓ.ಎಸ್. ಜರಗಿಸುವ ಸೀನಿಯರ್ ಸೆಕೆಂಡರಿ ಸರ್ಟಿಫಿಕೇಟ್ ಪರೀಕ್ಷೆ 12ನೆಯ ತರಗತಿಯ (ಅಂದರೆ 2ನೇ ಪಿಯುಸಿ) ಪರೀಕ್ಷೆಗೆ ಸಮಾನ”.
ಆದ್ದರಿಂದ, ಮಕ್ಕಳು ಮನೆಯಲ್ಲೇ ಕಲಿತು, ಈ ಸಂಸ್ಥೆಯ 10ನೆಯ ತರಗತಿಯ ಪರೀಕ್ಷೆಗೆ, ಅನಂತರ 12ನೆಯ ತರಗತಿಯ ಪರೀಕ್ಷೆಗೆ ನೋಂದಾಯಿಸಿಕೊಂಡು, ನೇರವಾಗಿ ಪರೀಕ್ಷೆಗೆ ಹಾಜರಾಗಬಹುದು. ವರುಷಕ್ಕೆ ಎರಡು ಬಾರಿ (ಎಪ್ರಿಲ್ - ಮೇ ಮತ್ತು ಅಕ್ಟೋಬರ್ - ನವಂಬರಿನಲ್ಲಿ) ಜರಗುವ ಪರೀಕ್ಷೆಗಳ ಫಲಿತಾಂಶಗಳನ್ನು ಅನಂತರ ಆರು ವಾರದೊಳಗೆ ಪ್ರಕಟಿಸಲಾಗುತ್ತದೆ. ಈ ಪರೀಕ್ಷೆಗಳ ಫಲಿತಾಂಶಗಳನ್ನು ಪದವಿ ಮತ್ತು ಅದಕ್ಕೆ ಸಮಾನವಾದ ಕೋರ್ಸುಗಳನ್ನು ನಡೆಸುವ (ವಿವಿಧ ವಿಶ್ವವಿದ್ಯಾಲಯಗಳಿಂದ ಮಾನ್ಯತೆ ಪಡೆದ) ಎಲ್ಲ ಕಾಲೇಜುಗಳು ಮಾನ್ಯ ಮಾಡಬೇಕಾದದ್ದು ಕಡ್ಡಾಯ. ಹಾಗಾಗಿ, 12ನೆಯ ತರಗತಿಯ ತನಕ ಯುವಜನರು ಮನೆಯಲ್ಲೇ ಕಲಿತು, ಅನಂತರ ಯಾವುದೇ ಕಾಲೇಜಿಗೆ ಸೇರಿ, ತಮ್ಮ ಶಿಕ್ಷಣವನ್ನು ಮುಂದುವರಿಸಬಹುದು. ಇವೆರಡು ಪರೀಕ್ಷೆಗಳಲ್ಲದೆ, ಇತರ ಹಲವು ಮುಕ್ತ ಶಿಕ್ಷಣ ಕೋರ್ಸುಗಳ ಪರೀಕ್ಷೆಗಳನ್ನೂ ಎನ್.ಐ.ಓ.ಎಸ್. ಜರಗಿಸುತ್ತದೆ.
ರಾಷ್ಟ್ರೀಯ ಮುಕ್ತ ಶಿಕ್ಷಣ ಸಂಸ್ಥೆಯ ಪ್ರಧಾನ ಕಚೇರಿ ಉತ್ತರ ಪ್ರದೇಶದ ನೋಯಿಡಾದಲ್ಲಿದೆ. ಭಾರತದಲ್ಲಿ ಬೆಂಗಳೂರಿನ ಸಹಿತ 18 ಸ್ಥಳಗಳಲ್ಲಿ ಇದರ ಪ್ರಾದೇಶಿಕ ಕಚೇರಿಗಳಿವೆ. ಹಲವಾರು ವಿದೇಶಗಳಲ್ಲಿ ಭಾರತೀಯ ಮೂಲದ ವ್ಯಕ್ತಿಗಳ ಅನುಕೂಲಕ್ಕಾಗಿ ಕಚೇರಿಗಳನ್ನು ನಡೆಸುತ್ತಿದೆ. ಕಾಮನ್ವೆಲ್ತ್ ಆಫ್ ಲರ್ನಿಂಗ್ ಮತ್ತು ವಿಶ್ವಸಂಸ್ಥೆಯ ಯುನೆಸ್ಕೋ ಜೊತೆ ಸಹಯೋಗ ಹೊಂದಿದೆ.
ಇದರ ವಿವಿಧ ಪರೀಕ್ಷೆಗಳಿಗಾಗಿ ಪ್ರತಿ ವರುಷ ಸುಮಾರು 3,50,000 ವ್ಯಕ್ತಿಗಳು ನೋಂದಾಯಿಸಿಕೊಳ್ಳುತ್ತಾರೆ. ಇದರಿಂದಾಗಿ ಎನ್.ಐ.ಓ.ಎಸ್. ಜಗತ್ತಿನಲ್ಲಿ ಅತ್ಯಧಿಕ ಸಂಖ್ಯೆಯ ಯುವಜನರಿಗೆ ಮುಕ್ತ ಶಿಕ್ಷಣ ಒದಗಿಸುವ ಸಂಸ್ಥೆಯಾಗಿದೆ. ಇದರ ವೆಬ್‌ಸೈಟಿಗೆ ಈ ವರೆಗೆ ಭೇಟಿಯಿತ್ತ ವ್ಯಕ್ತಿಗಳ ಸಂಖ್ಯೆ ಸುಮಾರು 50 ಕೋಟಿ!
ಮನೆಯಲ್ಲೇ ಕಲಿಕೆ ಬಗ್ಗೆ ಹೆಚ್ಚಿನ ಮಾಹಿತಿಗಾಗಿ: ಅರುಣಾ ರಾಘವನ್ ಬರೆದ ಇಂಗ್ಲಿಷ್ ಪುಸ್ತಕ “ಯುವರ್ ಚೈಲ್ಡ್ ಕ್ಯಾನ್ ಬಿ ಎ ಜೀನಿಯಸ್” (ನಿಮ್ಮ ಮಗು ಒಬ್ಬ ಜೀನಿಯಸ್ ಆಗಲು ಸಾಧ್ಯ) ಓದಬಹುದು (ಪ್ರಕಾಶಕರು: ಇಂಡಿಯನ್ ಎಕ್ಸ್-ಪ್ರೆಸ್ ದಿನಪತ್ರಿಕೆ). ಇದರಲ್ಲಿ ತಮ್ಮ ಮಗಳಿಗೆ ಮನೆಯಲ್ಲೇ ಶಿಕ್ಷಣ ನೀಡಿದ್ದನ್ನು ಅವರು ಮನಮುಟ್ಟುವಂತೆ ವಿವರಿಸಿದ್ದಾರೆ. ಅವರ ಮಗಳು ಮುಂದೆ "ಮನೆಯಲ್ಲೇ ಕಲಿಕೆ" ಬಗ್ಗೆ ಅಂತರಾಷ್ಟ್ರಿಯ ಮಟ್ಟದ ಸಂಪನ್ಮೂಲ ವ್ಯಕ್ತಿಯಾಗಿ ಗುರುತಿಸಿಕೊಳ್ಳುತ್ತಾಳೆ.
ಮಕ್ಕಳಲ್ಲಿ ಸ್ವಯಂ ಕಲಿಕೆಯ ಅಗಾಧ ತಾಕತ್ತಿದೆ; ಅದ್ಭುತ ಪ್ರತಿಭೆಯಿದೆ. ನಮ್ಮ ದೇಶದ ಪ್ರಾಚೀನ ಗುರುಕುಲಗಳಲ್ಲಿ, ಮುಕ್ತ ಶಿಕ್ಷಣದ ಮೂಲಕ (ಅಂದರೆ ಪಾಠವನ್ನು ಕಾಯಕದ ನೆಲೆಗಟ್ಟಿನಲ್ಲಿ ಕಲಿಸಿ) ಮಕ್ಕಳನ್ನು ಆತ್ಮವಿಶ್ವಾಸದ ವ್ಯಕ್ತಿಗಳನ್ನಾಗಿ, ಮೌಲ್ಯಧಾರಿತ ಬದುಕಿಗಾಗಿ ರೂಪಿಸಲಾಗುತ್ತಿತ್ತು. ಬ್ರಿಟಿಷರು ಆ ಶ್ರೇಷ್ಠ ಗುರುಕುಲ ಪದ್ಧತಿಯನ್ನು ಧ್ವಂಸ ಮಾಡಿ, ಭಾರತದಲ್ಲಿ ತಮ್ಮ ಆಡಳಿತ ನಡೆಸಲಿಕ್ಕಾಗಿ “ಸಂಬಳದ ಗುಲಾಮ”ರನ್ನು ತಯಾರಿಸುವ ಶಿಕ್ಷಣ ಪದ್ಧತಿಯನ್ನು ಜ್ಯಾರಿಗೆ ತಂದರು. ಈಗಲೂ ಅದೇ ಶಿಕ್ಷಣ ಪದ್ಧತಿಯನ್ನು ಮುಂದುವರಿಸಲಾಗುತ್ತಿದೆ. ಅದರ ಫಲವನ್ನು ಉದ್ಯೋಗ ಆಯ್ಕೆ ಪರೀಕ್ಷೆಯಿಂದ ತೊಡಗಿ, ಭ್ರಷ್ಟಾಚಾರದ ಕೂಪವಾಗಿರುವ ಆಡಳಿತ ವ್ಯವಸ್ಥೆಯಲ್ಲಿ ನಾವೆಲ್ಲರೂ ಅನುಭವಿಸುತ್ತಿದ್ದೇವೆ, ಅಲ್ಲವೇ?
ನಿಮ್ಮ ಮಕ್ಕಳ ಭವಿಷ್ಯ ಭವ್ಯವಾಗಲು, ಅವರನ್ನು ನಮ್ಮ ಮಹಾನ್ ದೇಶದ ಸತ್ಪ್ರಜೆಗಳಾಗಿ ರೂಪಿಸಲು ಖಂಡಿತ ಸಾಧ್ಯ. ಅದಕ್ಕೊಂದು ಸುವರ್ಣ ಅವಕಾಶ ಮನೆಯಲ್ಲೇ ಕಲಿಯುವುದು. ದಿನದಿನವೂ ಶಾಲೆಗೆ ಹೋಗಿ ಬರುವ ಅಗತ್ಯವಿಲ್ಲದೆ, ಟ್ಯೂಷನಿನ ಕಾಟವಿಲ್ಲದೆ, ಮನೆಯಲ್ಲೇ ಖುಷಿಯಿಂದ ಕಲಿಯುವ ಅವಕಾಶ. ಇದನ್ನು ಬಳಸಿಕೊಳ್ಳುವುದು ನಿಮ್ಮ ಕೈಯಲ್ಲೇ ಇದೆ, ಅಲ್ಲವೇ?
ಫೋಟೋ: ರಾಷ್ಟ್ರೀಯ ಮುಕ್ತ ಶಿಕ್ಷಣ ಸಂಸ್ಥೆಯ ಪ್ರಧಾನ ಕಚೇರಿ
