1)ದಕ್ಷಿಣ ಅಮೇರಿಕಾದ ಅಮೆಜಾನ್ ನದಿ ಎಷ್ಟು ಅಗಲವಾಗಿದೆಯೆಂದರೆ, ಅದು ಭೂಮಿಯಲ್ಲಿ ಚಲಿಸುತ್ತಿರುವ ಒಟ್ಟು ನೀರಿನ ಐದನೆಯ ಒಂದು ಭಾಗದಷ್ಟು ನೀರನ್ನು ಕ್ಷಣಕ್ಷಣವೂ ಅಟ್ಲಾಂಟಿಕ್ ಸಾಗರಕ್ಕೆ ಸುರಿಯುತ್ತಿದೆ! ಜೊತೆಗೆ ಅಮೆಜಾನ್ ಭೂಮಿಯ ಅತ್ಯಂತ ಉದ್ದವಾದ ನದಿಯೂ ಆಗಿದೆ (ಅದರ ಉದ್ದ ೪,೨೦೦ ಮೈಲುಗಳೆಂದು ಅಂದಾಜಿಸಲಾಗಿದೆ.) ಈ ಅಗಾಧ ನದಿ ೨೭,೭೨,೦೦೦ ಚದರ ಮೈಲು ಜಾಗವನ್ನು ಆವರಿಸಿದೆ. ಹಾಗೂ ಅತ್ಯಧಿಕ ನೀರನ್ನು (ಸೆಕೆಂಡಿಗೆ ೭೨,೦೦,೦೦೦ ಘನ ಅಡಿ) ಸಾಗರಕ್ಕೆ ಸೇರಿಸುತ್ತಿದೆ! ಯು.ಎಸ್.ಎ. ದೇಶದ ವಿಸ್ತೀರ್ಣಕ್ಕೆ ಸಮಾನವಾದ ಪ್ರದೇಶದಿಂದ ನೀರನ್ನು ಅಮೆಜಾನ್ ನದಿ ಸಾಗರಕ್ಕೆ ಒಯ್ಯುತ್ತಿದೆ. (ಫೋಟೋ ನೋಡಿ)
2)ದಕ್ಷಿಣ ರಷ್ಯಾದ ಮರುಭೂಮಿಯ ಬಲ್ಕಾಶ್ ಸರೋವರದ ಉದ್ದ ೩೬೦ ಮೈಲು. ಅದರ ಪಶ್ಚಿಮ ತುದಿಯ ನೀರು ತಾಜಾ ಆಗಿದೆ; ಆದರೆ ಪೂರ್ವ ತುದಿಯ ನೀರು ಉಪ್ಪಾಗಿದೆ. ಸರೋವರದ ಎರಡು ಭಾಗಗಳು ಮರಳಿನ ದಿಬ್ಬದಿಂದ ಪ್ರತ್ಯೇಕಿಸಲ್ಪಟ್ಟಿವೆ. ಪಶ್ಚಿಮ ಭಾಗಕ್ಕೆ “ಲಿ" ಎಂಬ ನದಿ ನೀರು ಸುರಿಯುತ್ತಿದೆ. ಉಳಿದರ್ಧ ಭಾಗದ ವಿಸ್ತೀರ್ಣ ನೀರಿನ ಭಾಷ್ಪೀಭವನದಿಂದಾಗಿ ಕಡಿಮೆಯಾಗುತ್ತಿದೆ; ಖನಿಜಗಳ ಪ್ರಮಾಣ ಹೆಚ್ಚುತ್ತಿರುವುದೂ ನೀರು ಉಪ್ಪಾಗಲು ಒಂದು ಕಾರಣ.
3)ಅಮೆಜಾನ್ ನದಿಗೆ ೧,೧೦೦ ಉಪನದಿಗಳಿವೆ!
27)ಭೂಮಿಯ ಅಯಸ್ಕಾಂತ ಕ್ಷೇತ್ರವು ಕನಿಷ್ಠ ೧೧೭ ಬಾರಿ ಉತ್ತರ ಮತ್ತು ದಕ್ಷಿಣ ಧ್ರುವಗಳನ್ನು ಬದಲಾಯಿಸಿಕೊಂಡಿದೆ! ಭೂಮಿಯ ವಿವಿಧ ಸ್ಥಳಗಳಲ್ಲಿ ಶಿಲೆಗಳಲ್ಲಿ ಇದಕ್ಕೆ ಪುರಾವೆ ಸಿಕ್ಕಿವೆ; ಪಳೆಯುಳಿಕೆ ಮತ್ತು ರೇಡಿಯೋ ಸಮಸ್ಥಾನಿ (ಐಸೊಟೋಪ್) ಬಳಸಿ ಈ ಬದಲಾವಣೆಗಳ ಕಾಲಮಾನ ಪತ್ತೆ ಮಾಡಲಾಗಿದೆ.
28)ಅಂಟಾರ್ಕಟಿಕಾದಲ್ಲಿ ಹಿಮವಿಲ್ಲದ ಸ್ಥಳಗಳೂ ಇವೆ! ಇಂತಹ ಸ್ಥಳಗಳ ಒಟ್ಟು ವಿಸ್ತೀರ್ಣ ೨,೯೦೦ ಚದರ ಮೈಲು (ಅಂಟಾರ್ಕಟಿಕಾದ ಒಟ್ಟು ಪ್ರದೇಶದ ಶೇಕಡಾ ೦.೦೬ ಭಾಗ). ಬೀಸುವ ಗಾಳಿಯಿಂದಾಗಿ ಈ ಸ್ಥಳಗಳಲ್ಲಿ ಹಿಮ ಇಲ್ಲ.
ಅದೇ ಅಂಟಾರ್ಕಟಿಕಾದಲ್ಲಿ ಪುಟ್ಟ ನೀರಿನ ಕೊಳಗಳೂ ಇವೆ! ಆ ಸ್ಥಳಗಳಲ್ಲಿ ನೆಲದಾಳ ಬಿಸಿಯಾಗಿರುವುದು ಇದಕ್ಕೆ ಕಾರಣ ಆಗಿರಬಹುದು. ಸಾನ್ ಜುವಾನ್ ಹೆಸರಿನ ಕೊಳದಲ್ಲಿ ಅಮೇರಿಕಾದ ಮನೆಗಳ ಆರು ಕೋಣೆಗಳಲ್ಲಿ ತುಂಬುವಷ್ಟು ನೀರಿದೆ. ಈ ನೀರಿನಲ್ಲಿ ಬದುಕಿರುವ ಒಂದೇ ಒಂದು ಜೀವಿ ಬ್ಯಾಕ್ಟೀರಿಯಾದ ಒಂದು ಸ್ಪೀಷೀಸ್. (ಫೋಟೋ ನೋಡಿ)
29)ಭೂಮಿಯ ಕಂಪನಗಳನ್ನು ಅಳತೆ ಮಾಡುವ ಸಾಧನಗಳು ಪ್ರತಿ ವರುಷ ಐದು ಲಕ್ಷ ಭೂಕಂಪ ಅಥವಾ ಸೂಕ್ಷ್ಮ ಭೂಕಂಪಗಳನ್ನು ದಾಖಲಿಸುತ್ತವೆ. ಇವುಗಳಲ್ಲಿ ಸುಮಾರು ಒಂದು ಲಕ್ಷ ಭೂಕಂಪಗಳು ನಿವಾಸಿಗಳ ಗಮನಕ್ಕೆ ಬರುತ್ತವೆ ಮತ್ತು ಒಂದು ಸಾವಿರ ಭೂಕಂಪಗಳು ಹಾನಿ ಮಾಡುತ್ತವೆ.
21)ಭೂಮಿಯ ಅತ್ಯಂತ ಪುರಾತನ ಶಿಲೆಗಳನ್ನು ನ್ಯೂಝಿಲೆಂಡಿನ ವಿಕ್ ಮ್ಯಾಕ್-ಗ್ರೆಗರ್ ೧೯೬೬ ಮತ್ತು ೧೯೬೭ರಲ್ಲಿ ಪತ್ತೆ ಮಾಡಿದರು. ಗ್ರೀನ್-ಲ್ಯಾಂಡಿನಲ್ಲಿ ಕೆಲಸ ಮಾಡುತ್ತಿದ್ದಾಗ ಈ ಪುರಾತನ ಶಿಲೆಗಳು ಅವರಿಗೆ ಸಿಕ್ಕಿದವು. ಪರಮಾಣು ಕಾಲನಿರ್ಣಯದ ಪ್ರಕಾರ ಈ ಶಿಲೆಗಳು ೩.೭ರಿಂದ ೨.೯ ಬಿಲಿಯನ್ ವರುಷ ಹಳೆಯವು.
22)ಭೂಮಿಯಲ್ಲಿ ಮನುಷ್ಯರ ಜನಸಂಖ್ಯೆ ಸ್ಫೋಟವಾಗುತ್ತಿದೆ: ೩೧-೧೨-೨೦೨೩ರಂದು ಜನಸಂಖ್ಯೆ ೭೯೧.೭೫ ಕೋಟಿ. ಇದರ ಶೇಕಡಾ ೫೦ ಜನರು ವಾಸ ಮಾಡುತ್ತಿರುವುದು ಕೇವಲ ಈ ನಾಲ್ಕು ದೇಶಗಳಲ್ಲಿ: ಚೀನಾ, ಭಾರತ, ರಷ್ಯಾ ಮತ್ತು ಯು.ಎಸ್.ಎ. ಉಳಿದವರು ಸುಮಾರು ೧೬೦ ದೇಶಗಳಲ್ಲಿ ಬದುಕುತ್ತಿದ್ದಾರೆ. (ಫೋಟೋ: ಮುಂಬೈಯಲ್ಲಿ ಜನಸಾಗರ … ಕೃಪೆ: ಗೆಟ್ಟಿ ಇಮೇಜಸ್)
23)ಭೂಮಿಯ ಅತ್ಯಂತ ಉದ್ದದ ಪರ್ವತಶ್ರೇಣಿ ಯಾರಿಗೂ ಕಾಣಿಸುವುದಿಲ್ಲ ಎನ್ನಬಹುದು. ಯಾಕೆಂದರ ಅದು ಸಾಗರದೊಳಗಿದೆ. ಅದುವೇ ಮಿಡ್-ಅಟ್ಲಾಂಟಿಕ್ ರಿಡ್ಜ್. ಐರ್ಲೆಂಡಿನಿಂದ ಅಂಟಾರ್ಕ್‌ಟಿಕ್ ತನಕ ಅದರ ಉದ್ದ ೧೦,೦೦೦ ಮೈಲುಗಳು. ಆ ಶ್ರೇಣಿಯ ಅತ್ಯಂತ ಎತ್ತರದ ಪರ್ವತ ಶಿಖರದ ಎತ್ತರ ಐದು ಮೈಲು. ಆ ಪರ್ವತಶ್ರೇಣಿಯಲ್ಲಿ ನೀರಿನಿಂದ ಮೇಲಕ್ಕೆ ಕಾಣಿಸುವ ಅತ್ಯಂತ ಎತ್ತರದ ಶಿಖರದ ಎತ್ತರ ಒಂದು ಮೈಲು; ಅದುವೇ ಪಿಕೊ ದ್ವೀಪ.
14)ಭೂಮಿಯಲ್ಲಿ ಅಥವಾ ವಿಶ್ವದಲ್ಲಿ ಎಲ್ಲೇ ಆದರೂ “ಜೀವ" ಇರುವುದಕ್ಕೆ ಒಂದು ಕಾರಣ: ನಕ್ಷತ್ರಪುಂಜಗಳು ಭೂಮಿಯಿಂದ ದೂರಕ್ಕೆ ಸರಿಯುತ್ತಿರುವುದು. ಇದರ ಪರಿಣಾಮವಾಗಿ, ಅವುಗಳಿಂದ ಭೂಮಿಗೆ ಬರುವ ಬೆಳಕು “ಕೆಂಪಾಗುತ್ತಿದೆ" (ಡೊಪ್ಪ್ಲರ್ ಪರಿಣಾಮದಿಂದಾಗಿ) ಮತ್ತು ತನ್ನ ಶಕ್ತಿ ಹಾಗೂ ಉಷ್ಣತೆಯನ್ನು ಕಳೆದುಕೊಳ್ಳುತ್ತಿದೆ. ಇದ್ದಂತೆಯೇ ಇರುವ ಅಥವಾ ಕಿರಿದಾಗುವ ವಿಶ್ವದಲ್ಲಿ, ಅಂತಿಮವಾಗಿ ಎಲ್ಲೆಡೆಗಳಲ್ಲಿಯೂ ಅಧಿಕ ಉಷ್ಣತೆ (ಲಕ್ಷಗಟ್ಟಲೆ ಡಿಗ್ರಿ) ಇರುತ್ತದೆ; ಇದರಿಂದಾಗಿ ಎಲ್ಲಿಯೂ "ಜೀವ" ಇರಲು ಸಾಧ್ಯವೇ ಇಲ್ಲ.
15)ಬಹುಶಃ ಭೂಮಿಯಲ್ಲಿ ಆಮ್ಲಜನಕ-ರಹಿತ ವಾತಾವರಣದಲ್ಲಿ ಜೀವ ಅಭಿವೃದ್ಧಿ ಹೊಂದಿತು. ಈಗಲೂ, ಆಮ್ಲಜನಕ-ರಹಿತ ವಾತಾವರಣದಲ್ಲಿ ಮಾತ್ರ ಜೀವಿಸಬಲ್ಲ ಸೂಕ್ಷ್ಮಜೀವಿಗಳು ಭೂಮಿಯಲ್ಲಿವೆ.
16)ಒಂದು ನೂರು ಮೈಲು ಉದ್ದದ ಮತ್ತು ೧೫,೦೦೦ ಚದರ ಮೈಲು ವಿಸ್ತೀರ್ಣದ ದ್ವೀಪವೊಂದು ಬೃಹತ್ ನದಿ ಅಮೆಜಾನ್ ಸಾಗರ ಸೇರುವಲ್ಲಿಯೇ ಇದೆ. (ಇದರ ವಿಸ್ತೀರ್ಣ ನ್ಯೂಯಾರ್ಕ್ ಪ್ರಾಂತ್ಯದ ಮೂರನೆಯ ಒಂದು ಭಾಗಕ್ಕೆ ಸಮ.) ಮರಾಜೋ ಹೆಸರಿನ ಈ ದ್ವೀಪದಲ್ಲಿ ಜನವಸತಿ ಇಲ್ಲ. ಇದು ಭೂಮಧ್ಯರೇಖೆಯಲ್ಲೇ ಇರುವುದು ವಿಶೇಷ. (ಫೋಟೋ ನೋಡಿ)
17)ಮುಸ್ಸಂಜೆಯಲ್ಲಿ ದಿಗಂತದಲ್ಲಿ ಮುಳುಗುವ ಸೂರ್ಯ ಕೆಂಪಾಗಿ ಕಾಣಿಸುವುದು ಯಾಕೆ? ಯಾಕೆಂದರೆ, ಬೆಳಗ್ಗೆಯ ಗಾಳಿಗೆ ಹೋಲಿಸಿದಾಗ ಸಂಜೆಯ ಗಾಳಿಯಲ್ಲಿ ಧೂಳು ಹೆಚ್ಚಾಗಿರುತ್ತದೆ.
7)ನದಿಗಳ ಹರಿವು ಮತ್ತು ಯುರೇಷ್ಯಾ, ಆಫ್ರಿಕಾ, ಅಮೇರಿಕಾ ಹಾಗೂ ಆಸ್ಟ್ರೇಲಿಯಾಗಳಲ್ಲಿ ಹಿಮದ ಪ್ರಕ್ರಿಯೆಯಿಂದ ಭೂಮಿಯ ಸವಕಳಿ ವರುಷಕ್ಕೆ ಚದರ ಮೈಲಿಗೆ ೩೫೦ ಟನ್ ಎಂದು ಲೆಕ್ಕ ಹಾಕಲಾಗಿದೆ. ಅಂದರೆ ೨೨,೦೦೦ ವರುಷಗಳಿಗೊಮ್ಮೆ ಭೂಮಿಯ ಮೇಲ್ಮೈ ೪೦ ಇಂಚು ತಗ್ಗುತ್ತಿದೆ. ಇದೇ ವೇಗದಲ್ಲಿ ಸವಕಳಿ ಮುಂದುವರಿದರೆ, ಇನ್ನು ೨೦ ಮಿಲಿಯ ವರುಷಗಳಲ್ಲಿ ಭೂಮಿಯ ಮೇಲ್ಮೈ ಸಮುದ್ರ ಮಟ್ಟಕ್ಕೆ ಸಮವಾಗುತ್ತದೆ. ಭೂಮಿಯ ಆಯುಷ್ಯಕ್ಕೆ ಹೋಲಿಸಿದಾಗ ಈ ಅವಧಿ ಬಹಳ ಕಡಿಮೆ.
8)ಗಾಳಿಯ ಬೀಸುವಿಕೆಯಿಂದಾಗಿ ಮರಳಿನ ಕಣಗಳು ಉರುಟುರುಟು ಆಗುತ್ತವೆ. ಅಂದರೆ, ಗಾಳಿ ಬೀಸುವಾಗ ಮರಳಿನ ಕಣಗಳು ಒಂದಕ್ಕಿನ್ನೊಂದು ಮತ್ತು ಅಕ್ಕಪಕ್ಕದ ಇತರ ವಸ್ತುಗಳ ಮೇಲ್ಮೈಗೆ ಉಜ್ಜಿಕೊಳ್ಳುತ್ತವೆ. ಒಮ್ಮೆ ಮರಳಿನ ಕಣ ಗೋಲಾಕೃತಿ ಆಕಾರ ಪಡೆದರೆ, ಅನಂತರ ಮಿಲಿಯಗಟ್ಟಲೆ ವರುಷ ಆಕಾರ ಬದಲಾಯಿಸದೆ ಉಳಿಯುತ್ತದೆ.
9)ಪ್ರತಿಯೊಬ್ಬ ಆಧುನಿಕ ಮನುಷ್ಯನ ಅಗತ್ಯಗಳನ್ನು ಮತ್ತು ಐಷಾರಾಮಿ ಜೀವನದ ಸೌಲಭ್ಯಗಳನ್ನು ಪೂರೈಸಲಿಕ್ಕಾಗಿ, ಪ್ರತಿ ವರುಷ ಕನಿಷ್ಠ ಇಪ್ಪತ್ತು ಟನ್ ಕಚ್ಚಾ ಸಾಮಗ್ರಿಗಳನ್ನು ಭೂಮಿಯಿಂದ ಅಗೆದು ತೆಗೆಯಬೇಕಾಗುತ್ತದೆ.
1)ಭೂಮಿಯ ಆಯಸ್ಕಾಂತ ಕ್ಷೇತ್ರ ದುರ್ಬಲವಾಗುತ್ತಿದೆ. ೧೬೭೦ರಿಂದೀಚೆಗೆ ಅದು ತನ್ನ ಶಕ್ತಿಯ ಶೇಕಡಾ ೧೫ರಷ್ಟನ್ನು ಕಳೆದುಕೊಂಡಿದೆ. ಇದೇ ರೀತಿ ದುರ್ಬಲವಾಗುತ್ತಿದ್ದರೆ, ಇನ್ನು ೨,೦೦೦ ವರುಷಗಳಲ್ಲಿ ಅದು ತನ್ನ ಎಲ್ಲ ಶಕ್ತಿಯನ್ನು ಕಳೆದುಕೊಳ್ಳುತ್ತದೆ. ಇಸವಿ ೩೫೦೦ರಿಂದ ೪೫೦೦ ಅವಧಿಯಲ್ಲಿ ಭೂಮಿಯ ಆಯಸ್ಕಾಂತ ಕ್ಷೇತ್ರವು ಬಾಹ್ಯ ವಿಶ್ವದಿಂದ ನುಗ್ಗಿ ಬರುವ ವಿಕಿರಣವನ್ನು ತಡೆದುಕೊಳ್ಳುವಷ್ಟು ಸಮರ್ಥವಾಗಿರುವುದಿಲ್ಲ.
2)ಭೂಮಿಯ ಅತಿ ದೊಡ್ಡ ಮರುಭೂಮಿ “ಸಹಾರಾ"ದ ವಿಸ್ತೀರ್ಣ ಯು.ಎಸ್.ಎ. ದೇಶದ ವಿಸ್ತೀರ್ಣಕ್ಕೆ ಸಮಾನ. (ಅರಾಬಿಕ್ ಭಾಷೆಯ ಪದ ಸಹಾರಾದ ಅರ್ಥ ಮರುಭೂಮಿ) ಒಂದಾನೊಂದು ಕಾಲದಲ್ಲಿ ಇದು ಮರುಭೂಮಿ ಆಗಿರಲಿಲ್ಲ ಎಂದರೆ ನಂಬುತ್ತೀರಾ? ೨೦,೦೦೦ ವರುಷಗಳ ಮುಂಚೆ, ಯುರೋಪಿನ ಬಹುಭಾಗವನ್ನು ಹಿಮ ಆವರಿಸಿತ್ತು. ಆ ಕಾಲದಲ್ಲಿ, ಅಲ್ಲಿಂದ ಬೀಸಿ ಬರುತ್ತಿದ್ದ ತಂಪಾದ ಗಾಳಿ ಉತ್ತರ ಆಫ್ರಿಕಾಕ್ಕೆ ತೇವಾಂಶವನ್ನು ಹೊತ್ತು ತರುತ್ತಿತ್ತು. ಈಗ ಮರುಭೂಮಿಯಾಗಿರುವ ಭೂಭಾಗ ಆಗ ನದಿಗಳು ಮತ್ತು ಸರೋವರಗಳು , ಕಾಡು ಮತ್ತು ಹುಲ್ಲುಗಾವಲುಗಳಿದ್ದ ಚೇತೋಹಾರಿ ನೆಲವಾಗಿತ್ತು.
3)ಭೂಮಿಯ ಅತ್ಯಂತ ಒಣ ಪ್ರದೇಶ ಚಿಲಿ ದೇಶದ ಅಟಕಾಮಾ ಮರುಭೂಮಿಯ ಕಲಾಮಾ. ಅಲ್ಲಿ ಈ ತನಕ ಒಂದು ಹನಿ ಮಳೆಯೂ ಬಿದ್ದಿಲ್ಲ.
11)ಇರುವೆಗಳು ಮನುಷ್ಯರಂತೆಯೇ ಹಲವು ಕೆಲಸಗಳನ್ನು ಮಾಡುತ್ತವೆ. ಡಾ. ಲೂಯಿಸ್ ಥೋಮಸ್ ಎಂಬ ವಿಜ್ನಾನಿ ಹೀಗೆ ಬರೆಯುತ್ತಾರೆ: “ಇರುವೆಗಳು ಬೂಸ್ಟ್ (ಫಂಗಸ್) ಬೆಳೆಸುತ್ತವೆ. ಗಿಡಹೇನುಗಳನ್ನು (ಅಫಿಡ್) ನಾವು ದನಗಳನ್ನು ಸಾಕಿದಂತೆ ಸಾಕುತ್ತವೆ. ತಮ್ಮ ಸೈನ್ಯಗಳಿಂದ ಯುದ್ಧ ಮಾಡುತ್ತವೆ. ವೈರಿಗಳನ್ನು ಬೆದರಿಸಲಿಕ್ಕಾಗಿ ಮತ್ತು ಗೊಂದಲ ಪಡಿಸಲಿಕ್ಕಾಗಿ ರಾಸಾಯನಿಕ ಸಿಂಪಡಿಸುತ್ತವೆ. ಗುಲಾಮರನ್ನು ಸೆರೆಹಿಡಿಯುತ್ತವೆ. ನೇಕಾರ-ಇರುವೆಗಳು ಬಾಲಕಾರ್ಮಿಕರನ್ನು ದುಡಿಸಿಕೊಳ್ಳುತ್ತವೆ. ದಾರವನ್ನು ಎಳೆದು, ಅದರಿಂದ ಎಲೆಗಳನ್ನು ಜೋಡಿಸಿ, ತಮ್ಮ ಬೂಸ್ಟ್ ಉದ್ಯಾನಗಳನ್ನು ನಿರ್ಮಿಸುತ್ತವೆ. ಟೆಲಿವಿಷನ್ ನೋಡುವುದರ ಹೊರತಾಗಿ ಹತ್ತುಹಲವು ಮನುಷ್ಯ ಸಹಜ ಕೆಲಸಗಳನ್ನು ಅವು ಮಾಡುತ್ತವೆ."
12)ಬಸವನಹುಳಗಳು ಬಣ್ಣವಿಲ್ಲದ, ಅಂಟುಅಂಟಾದ ದ್ರವವನ್ನು ಸ್ರವಿಸುತ್ತವೆ. ಇದು ಬಸವನಹುಳಗಳು ಮುಂದಕ್ಕೆ ಚಲಿಸುವಾಗ ಅವುಗಳ ದೇಹದಡಿಯಲ್ಲಿ ಜಮಖಾನೆಯಂತೆ ಹಾಸುತ್ತದೆ. ಅವುಗಳ ಮೃದು ಶರೀರದ ರಕ್ಷಣೆಗೆ ಇದು ಬಹಳ ಸಹಕಾರಿ. ಬಸವನಹುಳಗಳು ರೇಜರ್ ಬ್ಲೇಡಿನ ಅಂಚಿನಲ್ಲಿ ಸರಿದರೂ ಈ ಸ್ರಾವದಿಂದಾಗಿ ಅವುಗಳ ಶರೀರಕ್ಕೆ ಕಿಂಚಿತ್ತೂ ಧಕ್ಕೆಯಾಗೋದಿಲ್ಲ.
1)ಸಸ್ಯಗಳ ಮತ್ತು ಪ್ರಾಣಿಗಳ ಲಕ್ಷಣಗಳನ್ನು ಹೊಂದಿರುವ ಏಕಕೋಶ ಜೀವಿಗಳಿವೆ ಎಂದರೆ ನಂಬುತ್ತೀರಾ? ಉದಾಹರಣೆಗೆ ಯೂಗ್ಲಿನಾ ಎಂಬ ಏಕಕೋಶ ಜೀವಿ. ಇದು ನೀರಿನಲ್ಲಿದ್ದಾಗ ಪ್ರಾಣಿಯಂತೆ ಅಂದರೆ ಹಾವಿನ ಚಲನೆಗಳನ್ನು ಮಾಡುತ್ತಾ ಮುಂದಕ್ಕೆ ಸರಿಯುತ್ತದೆ. ಜೊತೆಗೆ, ಇದರಲ್ಲಿದೆ ಸಸ್ಯಗಳ ಪ್ರಧಾನ ಗುಣಲಕ್ಷಣವಾದ ಪತ್ರಹರಿತ್ತು.
2)ರೇಷ್ಮೆಹುಳಗಳನ್ನು (ಬೊಮ್-ಬಿಕ್ಸ್ ಮೊರಿ) ಮನುಷ್ಯ ಸಾವಿರಾರು ವರುಷ ಸಾಕಿರುವ ಕಾರಣ, ಅದಕ್ಕೆ ಮನುಷ್ಯನ ಆರೈಕೆಯಿಲ್ಲದೆ ಬದುಕಲು ಸಾಧ್ಯವಿಲ್ಲದಾಗಿದೆ. ಅದೊಂದು ಸಾಕುಹುಳವಾಗಿ ಬದಲಾದ ಕಾರಣ, ಹಾರುವ ಶಕ್ತಿಯನ್ನೂ ಕಳೆದುಕೊಂಡಿದೆ.
3)ಸಮುದ್ರಹಾವುಗಳಲ್ಲಿ ಸುಮಾರು ಐವತ್ತು ಸ್ಪಿಷೀಸ್‌ಗಳನ್ನು ಗುರುತಿಸಲಾಗಿದೆ. ಅವೆಲ್ಲವೂ ವಿಷದ ಹಾವುಗಳು. ಪರ್ಷಿಯನ್ ಕೊಲ್ಲಿಯಿಂದ ತೊಡಗಿ ಜಪಾನಿನ ವರೆಗೆ ಮತ್ತು ಆಸ್ಟ್ರೇಲಿಯಾ ಹಾಗೂ ಮೆಲಾನೆಸಿಯಾದ ಸುತ್ತಲೂ ಸಮುದ್ರತೀರಗಳಲ್ಲಿ ಅವನ್ನು ಬಹುಸಂಖ್ಯೆಯಲ್ಲಿ ಕಾಣಬಹುದು. ಅವುಗಳ ವಿಷ ನಾಗರಹಾವಿನ ವಿಷಕ್ಕಿಂತ ಹತ್ತು ಪಟ್ಟು ತೀಕ್ಷ್ಣ. ಸಮುದ್ರಹಾವು ಕಚ್ಚಿದ ಮನುಷ್ಯರು ಕೇವಲ ಎರಡೂವರೆ ಗಂಟೆಗಳಲ್ಲಿ ಸತ್ತುಹೋದ ನಿದರ್ಶನಗಳಿವೆ.
4)ಬೇರೆಲ್ಲ ಜಾತಿಯ ಪ್ರಾಣಿಗಳ ವಿವಿಧ ನಮೂನೆಗಳ ಒಟ್ಟು ಸಂಖ್ಯೆಗಿಂತ ಜಾಸ್ತಿ ಸಂಖ್ಯೆಯ ಕೀಟಗಳ ನಮೂನೆಗಳಿವೆ. ಅಂದರೆ ಕೀಟಪ್ರಭೇದಗಳ ಸಂಖ್ಯೆ ಅಷ್ಟು ಅಗಾಧ.
1)ಬೆಂಕಿಕಡ್ಡಿಗಳನ್ನು ಸಂಶೋಧಿಸಿದ ಬ್ರಿಟಿಷ್ ರಾಸಾಯನಿಕ ವಿಜ್ನಾನಿ ಜಾನ್ ವಾಕರ್ ತನ್ನ ಸಂಶೋಧನೆಗೆ ಪೇಟೆಂಟ್ ಪಡೆದುಕೊಳ್ಳಲಿಲ್ಲ. ಯಾಕೆಂದರೆ, ಇಂತಹ ಮುಖ್ಯವಾದ ಸಾಧನ ಜನಸಾಮಾನ್ಯರ ಸೊತ್ತು ಆಗಿರಬೇಕೆಂದು ಆತ ನಂಬಿದ್ದ.
2)ಪ್ಯಾರಿಸಿನ ಪ್ರಯೋಗಾಲಯದಲ್ಲಿ 1902ರಲ್ಲಿ ರೇಡಿಯಮ್ ಸಂಶೋಧಿಸಿದ ಪಿಯರ್ರೆ ಮತ್ತು ಮೇರಿ ಕ್ಯೂರಿ ರೇಡಿಯಮ್ ಮಾಡುವ ವಿಧಾನಕ್ಕೆ ಪೇಟೆಂಟ್ ಪಡೆಯಲು ನಿರಾಕರಿಸಿದರು. ರೇಡಿಯಮ್ ಜಗತ್ತಿಗೆ ಸೇರಿದ ಸೊತ್ತು ಮತ್ತು ಅದರಿಂದ ಲಾಭ ಮಾಡಿಕೊಳ್ಳಲು ಯಾರಿಗೂ ಅಧಿಕಾರವಿಲ್ಲವೆಂದೂ ಅವರು ಘೋಷಿಸಿದರು.
3)”ದ ಓಲ್ಡ್ ಮ್ಯಾನ್ ಆಂಡ್ ದ ಸೀ” ಎಂಬ ತನ್ನ ಕಾದಂಬರಿಗೆ ಗಳಿಸಿದ ನೊಬೆಲ್ ಪ್ರಶಸ್ತಿಯ ಹಣವನ್ನು ಅರ್ನೆಸ್ಟ್ ಹೆಮಿಂಗ್‌ವೇ ಪೂರ್ವ ಕ್ಯೂಬಾದ ಶ್ರೈನ್ ಆಫ್ ದಿ ವರ್ಜಿನ್‌ಗೆ ದಾನವಾಗಿತ್ತ.
4)ಜಾನ್ ಡಿ. ರಾಕ್‌ಫೆಲ್ಲರ್ 1855ರಲ್ಲಿ, ತನ್ನ ಹದಿನಾರನೆಯ ವಯಸ್ಸಿನಲ್ಲಿ, ಮೊತ್ತಮೊದಲ ದಾನ ನೀಡಿದ. ಅದಾಗಿ ಎಂಬತ್ತೆರಡು ವರುಷಗಳ ನಂತರ ಆತ ತೀರಿಕೊಳ್ಳುವ ವರೆಗೆ ಅವನು 53,13,26,842 ಡಾಲರ್ ಹಣವನ್ನು ದಾನವಿತ್ತಿದ್ದ.
11)ಜಪಾನಿನ ನಾರಾ ಎಂಬಲ್ಲಿರುವ ತೊಡೈಜಿ ಬೌದ್ಧ ಗುರುಕುಲದ ವಿಶಾಲ ಸಭಾಂಗಣವನ್ನು ಎಂಟನೆಯ ಶತಮಾನದ ಮಧ್ಯಕಾಲದಲ್ಲಿ ನಿರ್ಮಿಸಲಾಯಿತು. ಐವತ್ತಮೂರು ಅಡಿ ಎತ್ತರದ ಬುದ್ಧನ ಭವ್ಯ ಕಂಚಿನ ಮೂರ್ತಿ ಅಲ್ಲಿದೆ. ಹತ್ತು ಲಕ್ಷ ಪೌಂಡುಗಳಿಗಿಂತ ಅಧಿಕ ತೂಕದ ಈ ಮೂರ್ತಿಗೆ ಕಾಲು-ಟನ್ ತೂಕದ ಚಿನ್ನದಿಂದ ಲೇಪ ನೀಡಲಾಗಿದೆ.
12)“ವೆಲ್‌ಕಮ್ ಸ್ಟ್ರೇಂಜರ್” ಎಂಬ ಹೆಸರಿನ ಚಿನ್ನದ ತುಂಡು ಈ ವರೆಗೆ ಸಿಕ್ಕಿದ ಅತ್ಯಧಿಕ ತೂಕದ ಚಿನ್ನದ ತುಂಡು. ಅದರ ತೂಕ ೨೦೦ ಪೌಂಡುಗಳಿಗಿಂತ ಜಾಸ್ತಿ. ಆಸ್ಟ್ರೇಲಿಯಾದ ಬಲ್ಲಾರಾಟ್ ಎಂಬಲ್ಲಿ ೧೮೬೯ರಲ್ಲಿ ಇದನ್ನು ಪತ್ತೆ ಮಾಡಿದವರು ಜಾನ್ ಡೀಸನ್ ಮತ್ತು ರಿಚರ್ಡ್ ಓಟ್ಸ್.
13)ಈಗ ಸಿಕ್ಕಿರುವ ಪ್ರತಿಯೊಂದು ಔನ್ಸ್ ಚಿನ್ನಕ್ಕಾಗಿ ಗಣಿಗಾರರು ೨.೫ ಮೈಲು ಆಳದ ವರೆಗೂ ಭೂಮಿಯನ್ನು ಅಗೆದಿದ್ದಾರೆ!
14)ಬ್ರಿಟಿಷ್ ಪರ್ಯಟನಗಾರ ಮಾರ್ಟಿನ್ ಫ್ರೊಬಿಷರ್ ೧೫೭೮ರಲ್ಲಿ ಬಾಫಿನ್ ದ್ವೀಪದಿಂದ ೨೦೦ ಟನ್ ಹೊಳೆಯುವ ಚಿನ್ನದ ಅದಿರಿನೊಂದಿಗೆ ಹಿಂತಿರುಗಿದಾಗ, ಅವನಿಂದಾಗಿ ಬ್ರಿಟನಿನಲ್ಲಿ "ಚಿನ್ನದ ಹುಚ್ಚು” ಹಬ್ಬಿತು. ಅದರಿಂದ ಹೆಚ್ಚೆಚ್ಚು ಚಿನ್ನ ಪಡೆಯಲಿಕ್ಕಾಗಿ ಭಾರೀ ಪ್ರಯತ್ನ ಮಾಡಲಾಯಿತು. ಆದರೆ ಆ ಅದಿರು ಕಬ್ಬಿಣದ ಪೈರೈಟ್ (“ಮೂರ್ಖರ ಚಿನ್ನ”) ಆಗಿತ್ತು. ಕೊನೆಗೆ ಅದನ್ನು ಪುಡಿಪುಡಿ ಮಾಡಿ ರಸ್ತೆಗಳ ರಿಪೇರಿಗೆ ಬಳಸಲಾಯಿತು.
