11)ವ್ಯಾಂಪೈರ್ ಬಾವಲಿಗಳನ್ನೂ ಭಯಂಕರ ಪ್ರಾಣಿಗಳೆಂದು ಜನರು ಭಾವಿಸಿದ್ದಾರೆ. ಆದರೆ, ರಕ್ತ ಹೀರುವ ಈ ಬಾವಲಿ, ಇತರ ಪ್ರಾಣಿಗಳ ಕುತ್ತಿಗೆಯ ಚರ್ಮವನ್ನು ಕಚ್ಚಿ ಸೀಳುವುದಿಲ್ಲ. ಬದಲಾಗಿ, ಬಟ್ಟೆಯಿಂದ ಮುಚ್ಚದಿರುವ ಚರ್ಮವನ್ನು ರಕ್ತ ಸಿಗುವ ವರೆಗೆ ತನ್ನ ಹಲ್ಲುಗಳಿಂದ ಕೆರೆಯುತ್ತದೆ. ಅದರ ಕೆರೆಯುವಿಕೆ ಎಷ್ಟು ನಯವಾಗಿರುತ್ತದೆ ಎಂದರೆ, ನಿದ್ದೆಯಲ್ಲಿರುವ ಬಲಿಪ್ರಾಣಿಗೆ ಎಚ್ಚರವಾಗುವುದೇ ಇಲ್ಲ!

12)ಕುದುರೆ ಬಹಳ ಸಣ್ಣ ಪ್ರಾಣಿಯಾಗಿತ್ತು. ಒಬ್ಬ ಸವಾರನನ್ನು ಹೆಚ್ಚು ಸಮಯ ಹೊತ್ತುಕೊಂಡು ಹೋಗುವಷ್ಟು ಅದು ಶಕ್ತಿಶಾಲಿಯಾಗಿರಲಿಲ್ಲ. ಅಲೆಮಾರಿ ಜನಾಂಗದವರು ಯುದ್ಧಕ್ಕಾಗಿ ಪಳಗಿಸಿದ ಸಂಕರ ತಳಿಯ ದೊಡ್ಡ ಕುದುರೆಗಳನ್ನು  ಮಧ್ಯಪ್ರಾಚ್ಯ ಮತ್ತು ಯುರೋಪಿನಲ್ಲಿ ಜನರು ಮೊದಲ ಬಾರಿ ಕಂಡಾಗ ಹೆದರಿದ್ದರು!

13)ಕರಡಿ (ಗ್ರಿಜ್ಲಿ ಬೇರ್) ಒಳ್ಳೆಯ ಓಟಗಾರ. ಅದು ಕುದುರೆಯಷ್ಟೇ ವೇಗದಲ್ಲಿ ಓಡಬಲ್ಲದು.

14)ಆಫ್ರಿಕಾದ ಗೊಲಿಯಾಥ್ ಕಪ್ಪೆ (ರಾನಾ ಗೊಲಿಯಾತ್) ಎರಡೂವರೆ ಅಡಿಗಳಿಗಿಂತ ಜಾಸ್ತಿ ಉದ್ದವಿರುತ್ತದೆ! ಮೂಗಿನಿಂದ ಕಾಲಿನ ತುದಿಯ ವರೆಗೆ ಅವುಗಳ ಉದ್ದ ೩೨.೦೮ ಇಂಚಿನ ವರೆಗೆ ದಾಖಲಾಗಿದೆ. ಅವುಗಳ ತೂಕವೂ ಭರ್ಜರಿ - ೩.೧೫ ಕಿಲೋ ತನಕ! (ಫೋಟೋ)

6)ಅಳಿಲಿನ ಕುಟುಂಬಕ್ಕೆ ಸೇರಿದ ವುಡ್‌ಚಕ್ (ಅಥವಾ ಗ್ರೌಂಡ್‌ಹೊಗ್) ಮರಗಳನ್ನು ಹತ್ತುತ್ತದೆ. ಇದರ ಪ್ರಾಣಿಶಾಸ್ತ್ರೀಯ ಹೆಸರು ಮರ್ಮೊಟಾ ಮೊನಾಕ್ಸ್. ಉತ್ತರ ಅಮೇರಿಕಾದ ಯುಎಸ್‌ಎ ಹಾಗೂ ಕೆನಡಾ ದೇಶಗಳಲ್ಲಿ ವಾಸಿಸುವ ಇದು ಗಂಟೆಗೆ ೨,೧೦೦ ಸಲ ಉಸಿರಾಡುತ್ತದೆ. ಆದರೆ, ಶಿಶಿರ ನಿದ್ದೆ ಮಾಡುವಾಗ ಗಂಟೆಗೆ ಕೇವಲ ಹತ್ತು ಸಲ ಉಸಿರಾಡುತ್ತದೆ! (ಫೋಟೋ)

7)ಶ್ರೂ ಎಂಬ ಉತ್ತರ ಅಮೇರಿಕಾದ ಅತಿ ಸಣ್ಣ ಸಸ್ತನಿ ಭಯಂಕರ ಪ್ರಾಣಿ. ಈ ಗುಂಪಿನ ಸಣ್ಣ ಬಾಲದ ಶ್ರೂ, ತನ್ನ ಮೈತೂಕದ ಎರಡು ಪಟ್ಟು ತೂಕವಿರುವ ಪ್ರಾಣಿಗಳಿಗೂ ಧಾಳಿ ಮಾಡುತ್ತದೆ; ತನ್ನ ಜೊಲ್ಲುರಸದ ಗ್ರಂಥಿಗಳ ವಿಷಪೂರಿತ ಸ್ರಾವದಿಂದ ಅವನ್ನು ಕೊಂದು, ಅವುಗಳ ಎಲುಬು ಸಹಿತವಾಗಿ ತಿಂದು ಬಿಡುತ್ತದೆ. ಇದರ ಆ ಗ್ರಂಥಿಗಳಲ್ಲಿರುವ ವಿಷ ೨೦೦ ಇಲಿಗಳನ್ನು ಕೊಲ್ಲಲು ಸಾಕು ಎಂಬುದನ್ನು ಪ್ರಯೋಗಗಳು ತೋರಿಸಿ ಕೊಟ್ಟಿವೆ.

8)ನೀರಾನೆಗಳು ತಮ್ಮ ಮರಿಗಳಿಗೆ ನೀರಿನೊಳಗೆ ಜನ್ಮ ನೀಡುತ್ತವೆ; ತಮ್ಮ ಮರಿಗಳನ್ನು ನದಿಗಳಲ್ಲೇ ಸಾಕುತ್ತವೆ. ಎಳೆಯ ನೀರಾನೆಗಳು ಗಾಳಿಗಾಗಿ ಆಗಾಗ್ಗೆ ನೀರಿನೊಳಗಿನಿಂದ ಮೇಲಕ್ಕೆ ಬರುತ್ತವೆ.

9)ರಾಜ ಕುಬ್‌ಲಾಯ್ ಖಾನ್ ಆಳ್ವಿಕೆಯ ಕಾಲದಲ್ಲಿ ಚೀನೀಯರು ಬೇಟೆಗಾಗಿ ಸಿಂಹಗಳನ್ನು ಪಳಗಿಸಿದ್ದರು. ಈ ಸಿಂಹಗಳು ಕಾಡುಕೋಣಗಳು ಮತ್ತು ಕರಡಿಗಳಂತಹ ದೊಡ್ದ ಪ್ರಾಣಿಗಳನ್ನು ಬೆನ್ನಟ್ಟಿ, ಕೊಂದು, ಬೇಟೆಗಾರರು ಬರುವ ವರೆಗೆ ಕಾಯುತ್ತಿದ್ದವು.

1)ಜಿರಾಫೆಯ ರಕ್ತದ ಒತ್ತಡ, ಆರೋಗ್ಯವಂತ ಮನುಷ್ಯನ ರಕ್ತದ ಒತ್ತಡಕ್ಕಿಂತ ಎರಡು ಅಥವಾ ಮೂರು ಪಟ್ಟು ಜಾಸ್ತಿ. ಅದು ಉಳಿದೆಲ್ಲ ಪ್ರಾಣಿಗಳಿಗಿಂತ ಅಧಿಕ ರಕ್ತದೊತ್ತಡ ಇರುವ ಪ್ರಾಣಿ ಎನ್ನಲಾಗಿದೆ. ಇದಕ್ಕೆ ಕಾರಣ ಹತ್ತರಿಂದ ಹನ್ನೆರಡು ಅಡಿ ಉದ್ದವಿರುವ ಅದರ ಕತ್ತು; ಅದರ ಮೆದುಳಿಗೆ ಕರೊಟಿಡ್ ರಕ್ತನಾಳದ ಮೂಲಕ ರಕ್ತ ಪಂಪ್ ಮಾಡಲಿಕ್ಕೆ ಭಾರೀ ಒತ್ತಡ ಅಗತ್ಯ. ಜಿರಾಫೆಯ ಹೃದಯವೂ ದೊಡ್ಡದೇ - ಅದರ ಉದ್ದ ಎರಡು ಅಡಿ, ಭಿತ್ತಿಯ ದಪ್ಪ ಮೂರು ಇಂಚು ಮತ್ತು ತೂಕ ೧೧.೫ ಕಿಗ್ರಾ.

2)ಜಾನುವಾರುಗಳಿಗೆ ಗುರುತಿಗಾಗಿ "ಬರೆ" ಹಾಕುವ ಪರಿಪಾಠ ೪,೦೦೦ ವರುಷಗಳ ಹಿಂದೆಯೂ ಬಳಕೆಯಲ್ಲಿತ್ತು. ಈಜಿಪ್ಟಿನ ಜನರು ಅವರ ಜಾನುವಾರುಗಳಿಗೆ ಬರೆ ಹಾಕುತ್ತಿದ್ದರು ಎಂಬುದನ್ನು ಅಲ್ಲಿನ ಪ್ರಾಚೀನ ಚಿತ್ರಗಳಲ್ಲಿ ಕಾಣಬಹುದು.

3)ಕೆಂಪು ಸ್ಪಂಜ್ ಎಂಬ ಸ್ಪಂಜಿಗೆ ಒಂದು ವಿಶೇಷ ಗುಣವಿದೆ. ಅದನ್ನು ಒಂದು ಬಟ್ಟೆಯ ಮೂಲಕ ತಳ್ಳಿದಾಗ, ಅದು ಸಾವಿರಾರು ಸೂಕ್ಷ್ಮ ಕಣಗಳಾಗಿ ಒಡೆಯುತ್ತದೆ. ಆದರೆ ಅದು ಸಾಯುವುದಿಲ್ಲ. ಬದಲಾಗಿ, ಆ ಎಲ್ಲ ಕಣಗಳೂ ಪುನಃ ಒಗ್ಗೂಡಿ, ಮುಂಚಿನಂತೆಯೇ ಆಗಿ, ಸ್ಪಂಜು ತನ್ನ ಜೀವನ ಮುಂದುವರಿಸುತ್ತದೆ.

4)ಅಲಾಸ್ಕದಲ್ಲಿ ೧೨,೦೦೦ ವರುಷಗಳ ಮುಂಚೆ ಆನೆಗಳು, ಸಿಂಹಗಳು ಮತ್ತು ಒಂಟೆಗಳು ಅಡ್ಡಾಡುತ್ತಿದ್ದವು!

11)ಯು.ಎಸ್.ಎ. ದೇಶದ ಚರಿತ್ರೆಯಲ್ಲಿ ಅತ್ಯಂತ ಜಾಸ್ತಿ ನಷ್ಟ ಆದದ್ದು ೧೮ ಎಪ್ರಿಲ್ ೧೯೦೬ರ ಭೂಕಂಪದಿಂದ. ಆಗ ಭೂಮಿ ಕಂಪಿಸಿದ್ದು ಕೇವಲ ೪೭ ಸೆಕುಂಡು! ಅನಂತರ ಭುಗಿಲೆದ್ದ ಬೆಂಕಿ ಸಾನ್‌ಫ್ರಾನ್ಸಿಸ್ಕೋ ನಗರಕ್ಕೆ ಅಪಾರ ಹಾನಿ ಮಾಡಿತು. ಈ ಅನಾಹುತದಿಂದ ಸತ್ತವರು ಮತ್ತು ಕಾಣೆಯಾದವರು ೫೦೦ಕ್ಕಿಂತ ಅಧಿಕ. ಇದರಿಂದಾದ ಸೊತ್ತು ಹಾನಿ ೨೫೦ - ೩೦೦ ಮಿಲಿಯನ್ ಡಾಲರ್!

12)ಇಪ್ಪತ್ತನೆಯ ಶತಮಾನದ ಅತ್ಯಂತ ದೊಡ್ಡ ಪ್ರಾಕೃತಿಕ ವಿಕೋಪ ಘಟಿಸಿದ್ದು ನವಂಬರ ೧೯೭೦ರಲ್ಲಿ - ಬಂಗಾಳ ಕೊಲ್ಲಿಯಿಂದ ನುಗ್ಗಿದ ಬಿರುಗಾಳಿ ಪೂರ್ವ ಪಾಕಿಸ್ಥಾನಕ್ಕೆ ಅಪ್ಪಳಿಸಿದಾಗ. ಇದಕ್ಕೆ ಬಲಿಯಾದವರು ಐದು ಲಕ್ಷಕ್ಕಿಂತ ಅಧಿಕ!

6)ಯು.ಎಸ್.ಎ. ದೇಶದ ಚರಿತ್ರೆಯಲ್ಲಿ ಅತ್ಯಂತ ಭೀಕರ ಭೂಕಂಪ ಆದದ್ದು ೧೬ ಡಿಸೆಂಬರ್ ೧೮೧೧ರಂದು. ಎರಡು ವಾರ ಮತ್ತು ಏಳು ವಾರಗಳ ನಂತರ ಇನ್ನೆರಡು ಸಲ ಅಲ್ಲಿ ಭೂಮಿ ಕಂಪಿಸಿತು. ಭೂಕಂಪದ ಕೇಂದ್ರ ಮಿಸ್ಸೋರಿಯ ನ್ಯೂ ಮ್ಯಾಡ್ರಿಡ್ ಆಗಿತ್ತು; ಇದು ಮಿಸ್ಸಿಸಿಪ್ಪಿ ಮತ್ತು ಓಹಿಯೋ ನದಿಗಳು ಸೇರುವ ಸ್ಥಳದಿಂದ ೫೦ ಮೈಲುಗಳ ದೂರದಲ್ಲಿದೆ. ಹತ್ತು ಲಕ್ಷ ಚದರ ಮೈಲು ಪ್ರದೇಶ ಭೂಕಂಪದಿಂದ ನಡುಗಿತ್ತು (ಇದು ೧೯೦೬ರಲ್ಲಿ ಕ್ಯಾಲಿಫೋರ್ನಿಯಾ ಭೂಕಂಪದಿಂದ ನಡುಗಿದ್ದ ಪ್ರದೇಶಕ್ಕಿಂತ ಜಾಸ್ತಿ.) ಭೂಕಂಪದಿಂದಾಗಿ ೪೦೦ ಮೈಲು ದೂರದ ಸಿನ್‌ಸಿನ್ನಾಟಿಯ ಕಾರ್ಖಾನೆಗಳ ಚಿಮಿಣಿಗಳು ನೆಲಕ್ಕೆ ಉರುಳಿದ್ದವು. ೫೦೦ ಮೈಲು ದೂರದ ನ್ಯೂ ಆರ್ಲಿಯನ್ಸ್ ಮತ್ತು ೧,೧೦೦ ಮೈಲು ದೂರದ ಬೋಸ್ಟನಿನಲ್ಲಿಯೂ ಭೂಮಿ ಕಂಪಿಸಿತ್ತು! ಮಿಸ್ಸಿಸಿಪ್ಪಿ ನದಿಯ ಹರಿವು ಬದಲಾಯಿತು, ಕೆಲವು ದ್ವೀಪಗಳೇ ಕಣ್ಮರೆಯಾದವು ಮತ್ತು ಹೊಸ ಸರೋವರಗಳು ಮೂಡಿದವು!

7)ಹದಿನೇಳನೇ ಶತಮಾನದಲ್ಲಿ, “ಮೂವತ್ತು ವರುಷಗಳ ಯುದ್ಧ"ದಲ್ಲಿ (೧೬೧೮ರಿಂದ ೧೬೪೮) ಯುರೋಪಿನಲ್ಲಿ ಸುಮಾರು ೬೦ ದಶಲಕ್ಷ ಜನರು ಸಿಡುಬು ರೋಗದಿಂದ ಸತ್ತರು.

1)ಇಪ್ಪತ್ತನೆಯ ಶತಮಾನದಲ್ಲಿ ಎರಡು ಬೃಹತ್ ಕಾಯಗಳು ಆಕಾಶದಿಂದ ಭೂಮಿಗೆ ಬಿದ್ದವು. ಅವುಗಳ ಆಘಾತ ಒಂದು ನಗರವನ್ನೇ ಧ್ವಂಸ ಮಾಡಲು ಸಾಕಾಗಿತ್ತು. ೧೯೦೮ರಲ್ಲಿ ಮತ್ತು ೧೯೪೭ರಲ್ಲಿ ಸೈಬೀರಿಯಾದ ನಿರ್ಜನ ಪ್ರದೇಶಕ್ಕೆ ಅವು ಅಪ್ಪಳಿಸಿದ ಕಾರಣ ಯಾವ ಮನುಷ್ಯನೂ ಸಾಯಲಿಲ್ಲ.

2)ಹಿಮಪರ್ವತಗಳಲ್ಲಿ ರೂಪುಗೊಂಡಿರುವ ಹಿಮಪಾತವು, ಒಂದು ದೊಡ್ಡ ಶಬ್ದದಿಂದುಂಟಾಗುವ ವಾಯುಕಂಪನಗಳಿಂದಾಗಿ ತಕ್ಷಣವೇ ಸಂಭವಿಸಬಹುದು. ಮೊದಲ ಮಹಾಯುದ್ಧದಲ್ಲಿ  ೧೯೧೬ರಲ್ಲಿ ಹೀಗಾಯಿತು: ಆಲ್ಫ್ ಪರ್ವತಗಳಲ್ಲಿ ಠಿಕಾಣಿ ಹೂಡಿದ್ದ ಆಸ್ಟ್ರಿಯನ್ ಸೈನ್ಯ ಫಿರಂಗಿಗಳನ್ನು ಉಡಾಯಿಸಲು ಶುರು ಮಾಡಿದಾಗ ಭಾರೀ ಹಿಮಪಾತವಾಯಿತು. ಇದರಿಂದಾಗಿ ಸಾವಿರಾರು ಸೈನಿಕರು ಹಿಮದಲ್ಲಿ ಹೂತು ಸತ್ತು ಹೋದರು.

3)ಸರಾಸರಿ ವೇಗದಲ್ಲಿ ಸಾಗುತ್ತಿರುವ, ಪೂರ್ಣ ಭಾರ ಹೊತ್ತಿರುವ ಒಂದು ಸೂಪರ್ ಟ್ಯಾಂಕರನ್ನು ನಿಲ್ಲಿಸಲು ಎಷ್ಟು ಸಮಯ ತಗಲುತ್ತದೆ? ಕನಿಷ್ಠ ೨೦ ನಿಮಿಷಗಳು ಬೇಕು. ಈ ಅವಧಿಯಲ್ಲಿ, ಅತ್ತಿತ್ತ ದಿಕ್ಕು ಬದಲಾಯಿಸಲು ಅವಕಾಶ ಇಲ್ಲದಿದ್ದರೆ ಮತ್ತು ಫಕ್ಕನೆ ಸಮುದ್ರದಲ್ಲಿ ಶಿಲೆಯಂತಹ ವಸ್ತುವೊಂದು ಮೂರು ಮೈಲು ದೂರದಲ್ಲಿ ಕಾಣಿಸಿಕೊಂಡರೂ ಟ್ಯಾಂಕರ್ ಮುನ್ನುಗ್ಗಿ ಅದಕ್ಕೆ ಬಡಿಯುತ್ತದೆ. ಚರಿತ್ರೆಯಲ್ಲಿ ಇಂತಹ ಹಲವಾರು ಅವಘಡಗಳು ಘಟಿಸಿವೆ. (ಫೋಟೋ: ತೈಲ ಟ್ಯಾಂಕರ್ ಹಡಗು)

25)ಉತ್ತರ ಅಮೇರಿಕಾದ ಅತ್ಯಂತ ಉದ್ದದ ನದಿಗೆ ಒಂದೇ ಹೆಸರಿಲ್ಲ. ಮೊಂಟಾನಾದಿಂದ ಒಂದೊಂದು ಹನಿ ನೀರೂ ಮಿಸ್ಸೋರಿ ನದಿಯಲ್ಲಿ ೨,೪೬೬ ಮೈಲು ಹರಿಯುತ್ತದೆ. ಸೈಂಟ್ ಲೂಯಿಸ್ ನಗರವನ್ನು ದಾಟಿದ ನಂತರ ಆ ನೀರು ಮಿಸ್ಸಿಸಿಪ್ಪಿ ಎಂಬ ಹೆಸರಿನಲ್ಲಿ ೧,೨೯೪ ಮೈಲು ಸಾಗುತ್ತದೆ. ಇವೆರಡು ನದಿಗಳ ಒಟ್ಟು ಉದ್ದ ೩,೭೬೦ ಮೈಲು. (ಇದಕ್ಕಿಂತ ಉದ್ದವಾದ ನದಿಗಳು ದಕ್ಷಿಣ ಅಮೇರಿಕಾದ ಅಮೆಜಾನ್ ಮತ್ತು ಆಫ್ರಿಕಾದ ನೈಲ್.) (ಫೋಟೋ: ಮಿಸ್ಸಿಸಿಪ್ಪಿ ನದಿ)

26)ಸಾಗರಗಳಲ್ಲಿರುವ ನೀರನ್ನು ಭೂಮಿಯ ಮನುಷ್ಯರಿಗೆ ಹಂಚಿದರೆ, ಪ್ರತಿಯೊಬ್ಬ ವ್ಯಕ್ತಿಗೂ ಸುಮಾರು ೧೦೦ ಬಿಲಿಯನ್ ಗ್ಯಾಲನ್ ನೀರು ಸಿಗುತ್ತದೆ. ಭೂಮಿಯ ತಾಜಾ ನೀರನ್ನು (ಒಟ್ಟು ನೀರಿನ ಶೇಕಡಾ ೧.೬ ಭಾಗ) ಹಂಚಿದರೆ, ಪ್ರತಿಯೊಬ್ಬ ವ್ಯಕ್ತಿಗೂ ೪೦ ಗ್ಯಾಲನ್ ನೀರು ಸಿಗುತ್ತದೆ.

27)ವಾಯುವಿನ ಒತ್ತಡಕ್ಕೆ ಅನುಗುಣವಾಗಿ ನೀರಿನ ಕುದಿಯುವ ಬಿಂದು ಬದಲಾಗುತ್ತದೆ. ಸಮುದ್ರ ಮಟ್ಟದಲ್ಲಿ ೨೧೨ ಡಿಗ್ರಿ ಫ್ಯಾರನ್‌ಹೀಟ್ (೧೦೦ ಡಿಗ್ರಿ ಸೆಲ್ಸಿಯಸ್) ಉಷ್ಣತೆಯಲ್ಲಿ ನೀರು ಕುದಿಯುತ್ತದೆ. ಆದರೆ, ಅಧಿಕ ಒತ್ತಡದಲ್ಲಿರುವ ನೀರು ಕುದಿಯಲು ಹೆಚ್ಚಿನ ಉಷ್ಣತೆ ಅಗತ್ಯ. "ನೀರಿನ ಕುದಿಯುವ ಬಿಂದು ಹೆಚ್ಚಿಸಲು ವಾಯು ಒತ್ತಡ ಹೆಚ್ಚಿಸಬೇಕು” ಎಂಬ ತತ್ವವನ್ನೇ ಬಳಸಿ, ಪ್ರೆಶರ್ ಕುಕ್ಕರ್ ಮೂಲಕ ಶೀಘ್ರವಾಗಿ ಅಡುಗೆ ಮಾಡಲಾಗುತ್ತದೆ.

19)ಮಿಚಿಗನ್ ಸ್ಟೇಟ್ ವಿಶ್ವವಿದ್ಯಾಲಯದ ವಿಜ್ನಾನಿಯೊಬ್ಬರು ಮಾಡಿರುವ ಲೆಕ್ಕಾಚಾರದ ಅನುಸಾರ ಕೆಲವು ಆಹಾರ ವಸ್ತುಗಳ ಉತ್ಪಾದನೆಗೆ ಅಗತ್ಯವಾದ ನೀರಿನ ಪರಿಮಾಣ ಹೀಗಿದೆ: ಒಂದು ಕೋಳಿ ಮೊಟ್ಟೆಗೆ ೧೨೦ ಗ್ಯಾಲನ್, ಒಂದು ತುಂಡು (ಲೋಫ್) ಬ್ರೆಡ್ ೩೦೦ ಗ್ಯಾಲನ್ ಹಾಗೂ ಒಂದು ಪೌಂಡ್ ದನದ ಮಾಂಸಕ್ಕೆ ೩,೫೦೦ ಗ್ಯಾಲನ್.

20)ಒಂದು ಬಿಂದು ನೀರಿನಲ್ಲಿ ಅಗಾಧ ಸಂಖ್ಯೆಯ ಅಣುಗಳಿವೆ - ೧.೭ ಕ್ವಿನ್‌ಟಿಲಿಯನ್ (೧,೭೦೦,೦೦೦,೦೦೦,೦೦೦,೦೦೦,೦೦೦) ಇದು ಎಷ್ಟೆಂದು ಅಂದಾಜು ಮಾಡಲಿಕ್ಕಾಗಿ ಒಂದು ಸೂಚನೆ: ಒಂದು ಬಿಂದು ನೀರಿಗೆ ಎಲ್ಲ ಸಾಗರಗಳ ನೀರನ್ನು ಸೇರಿಸಿದರೆ, ಆಗ ಈ “ಮಿಶ್ರಣ"ದ ಒಂದು ಪಿಂಟ್ (ಗ್ಯಾಲನಿನ ಒಂದು ಎಂಟನೆಯ ಭಾಗ)ನಲ್ಲಿರುವ ಅಣುಗಳ ಸಂಖ್ಯೆ ಸುಮಾರು ೨೪.

21)ಅಮೆಜಾನ್ ನದಿಯು ಅಟ್ಲಾಂಟಿಕ್ ಸಾಗರಕ್ಕೆ ಎಷ್ಟು ತಾಜಾ ನೀರನ್ನು ಸುರಿಯುತ್ತದೆ? ಇದನ್ನು ಗ್ರಹಿಸಲಿಕ್ಕೊಂದು ಸೂಚನೆ: ಅಮೆಜಾನ್ ನದಿ ಸಾಗರ ಸೇರುವ ಜಾಗದಿಂದ ಒಂದು ನೂರು ಮೈಲು ದೂರದಲ್ಲಿಯೂ ವ್ಯಕ್ತಿಯೊಬ್ಬ ಲೋಟದಲ್ಲಿ ತಾಜಾ ನೀರನ್ನು ಎತ್ತಿ ಕುಡಿಯಬಹುದು!

13)ಸಮುದ್ರದ ಸ್ಪಂಜು ತನ್ನ ತೂತುಗಳಿಂದ ಹಾದು ಹೋಗುವ ಸಮುದ್ರದ ನೀರಿನಿಂದ ಆಹಾರದ ಕಣಗಳನ್ನು ಸೋಸುತ್ತದೆ. ತನ್ನ ತೂಕವು ಒಂದು ಔನ್ಸ್ ಜಾಸ್ತಿಯಾಗಲು ಅಗತ್ಯವಾದ ಆಹಾರದ ಕಣಗಳನ್ನು ಪಡೆಯಲಿಕ್ಕಾಗಿ, ಒಂದು ಟನ್ ಸಮುದ್ರದ ನೀರನ್ನು ಸ್ಪಂಜು ಸೋಸ ಬೇಕಾಗುತ್ತದೆ! (ಫೋಟೋ ನೋಡಿ)

14)ಸಾಗರಗಳ ಅತ್ಯಂತ ಆಳವಾದ ಜಾಗದ ಆಳವು, ಭೂಮಿಯ ಅತ್ಯಂತ ಎತ್ತರದ ಪರ್ವತಗಳಿಗಿಂತಲೂ ಅಧಿಕ. ಉದಾಹರಣೆಗೆ, ಶಾಂತ ಸಾಗರದ ಕಣಿವೆಯೊಂದರ ಆಳ ೩೬,೧೯೮ ಅಡಿ (ಫಿಲಿಫೈನ್ಸ್ ದ್ವೀಪಗಳ ಹತ್ತಿರ). ಇದು, ಹಿಮಾಲಯ ಶ್ರೇಣಿಯ ಅತ್ಯಂತ ಎತ್ತರದ ಪರ್ವತ ಶಿಖರ ಮೌಂಟ್ ಎವರೆಸ್ಟಿನ ಎತ್ತರ (೨೯,೦೨೮ ಅಡಿ)ಕ್ಕಿಂತ ಜಾಸ್ತಿ.

15)ಭೂಮಿಯಲ್ಲಿರುವ ೨೩ ಮಿಲಿಯನ್ ಘನ ಕಿಲೋಮೀಟರ ಹಿಮವನ್ನು ಕರಗಿಸಿದರೆ, ಸಾಗರಗಳ ಘನ ಪರಿಮಾಣವು ಕೇವಲ ಶೇಕಡಾ ೧.೭ರಷ್ಟು ಹೆಚ್ಚಾಗುತ್ತದೆ. ಇದರ ಪರಿಣಾಮ ಊಹಿಸುವುದು ಸುಲಭವಲ್ಲ. ಯಾಕೆಂದರೆ, ಆ ನೀರಿನ ಅಗಾಧತೆ ಎಷ್ಟೆಂದರೆ ನ್ಯೂಯಾರ್ಕಿನ ಎಂಪೈಯರ್ ಸ್ಟೇಟ್ ಕಟ್ಟಡದ ೨೦ನೆಯ ಮಹಡಿ ಈ ನೀರಿನಲ್ಲಿ ಮುಳುಗುತ್ತದೆ!

16)ಮೊದಲನೆಯ “ಐಸ್ ಏಜ್” ಕಾಲಮಾನದಲ್ಲಿ ಭೂಮಿಯ ಸಾಗರಗಳ ನೀರಿನ ಮಟ್ಟ ೪೦೦ ಅಡಿ ಕುಸಿಯಿತು. ಈ ನೀರಿನ ಬಹುಪಾಲು ಭೂಮಿಯ ಧ್ರುವಗಳಲ್ಲಿರುವ ಹಿಮಗಡ್ಡೆಗಳಾಗಿ ಪರಿವರ್ತನೆಯಾಯಿತು.

7)ಭೂಮಿಯಲ್ಲಿರುವ ಒಟ್ಟು ನೀರಿನ ಶೇಕಡಾ ೧.೬ ಭಾಗ ಮಾತ್ರ ತಾಜಾ ಆಗಿದೆ! ಇದರ ಬಹುಪಾಲು ಹಿಮ ಮತ್ತು ಮಂಜುಗಡ್ದೆ ರೂಪದಲ್ಲಿ (ಜೀವಿಗಳು ಉಪಯೋಗಿಸಲು ಆಗದಂತೆ) ಭೂಮಿಯ ಉತ್ತರ ಹಾಗೂ ದಕ್ಷಿಣ ಧ್ರುವಗಳಲ್ಲಿ ಮತ್ತು ಅತಿ ಎತ್ತರದ ಪರ್ವತಗಳ ತುದಿಗಳಲ್ಲಿದೆ.

8)ಸಮುದ್ರ ತೀರಗಳ ಆಕಾರವನ್ನು ಅವಲಂಬಿಸಿ, ಸಮುದ್ರದ ಅಲೆಗಳ ಉಬ್ಬರ ಮತ್ತು ಇಳಿತಗಳ ಅಂತರ ಬದಲಾಗುತ್ತದೆ. ಲಾಳಿಕೆ ಆಕಾರದ ಬೇ ಆಫ್ ಫಂಡಿಯಲ್ಲಿ ಈ ಅಂತರ ೬೦ ಅಡಿ ಆಗಿದ್ದರೆ, ಬಹುಪಾಲು ಭೂಪ್ರದೇಶದಿಂದ ಆವರಿಸಲ್ಪಟ್ಟಿರುವ ಮೆಡಿಟರೇನಿಯನ್ ಸಮುದ್ರದಲ್ಲಿ ಈ ಅಂತರ ಕೆಲವೇ ಇಂಚುಗಳಷ್ಟು!

9)ದೊಡ್ಡ ಓಕ್ ಮರವು, ಬೆಳೆಯುವ ಹಂಗಾಮಿನಲ್ಲಿ, ೨೮,೦೦೦ ಗ್ಯಾಲನ್ ತೇವಾಂಶವನ್ನು ವಾತಾವರಣಕ್ಕೆ ಸೇರಿಸುತ್ತದೆ! (ಫೋಟೋ ನೋಡಿ)

10)ನೀರನಲ್ಲಿ ಕರಗದೆ ಇರುವ ವಸ್ತುವಿನ ರುಚಿ ಅಥವಾ ವಾಸನೆ ಗ್ರಹಿಸಲು ಮನುಷ್ಯರಿಗೆ ಸಾಧ್ಯವಿಲ್ಲ! ಒಣ ನಾಲಗೆಯಲ್ಲಿ ಸಕ್ಕರೆ ಹಾಕಿದರೆ, ಅದರ ರುಚಿಯೇನೆಂದು ತಿಳಿಯೋದಿಲ್ಲ. ಹಾಗೆಯೇ, ಒಣ ಮೂಗಿಗೆ ಹೂವಿನ ಪರಿಮಳ ಗ್ರಹಿಸಲಾಗದು. ಯಾವುದೇ ವಸ್ತುವಿನ ವಾಸನೆಯನ್ನು ಮೂಗು ಗ್ರಹಿಸಬೇಕಾದರೆ, ಆ ವಾಸನೆ ಗಾಳಿಯಲ್ಲಿ ತೇಲಿಕೊಂಡು ಬರಬೇಕು.

Pages