೨೩.ಪ್ರವಾಸಿಗಳ ಆಕರ್ಷಣೆಯ ತಾಣ ಭಾರತ
ವಿಶಾಲ ಭಾರತದ ಮನಮೋಹಕ ಪ್ರಾಕೃತಿಕ ತಾಣಗಳು ಮತ್ತು ವೈವಿಧ್ಯಮಯ ಪಾರಂಪರಿಕ ತಾಣಗಳು ವಿವಿಧ ದೇಶಗಳ ಲಕ್ಷಗಟ್ಟಲೆ ಪ್ರವಾಸಿಗಳನ್ನು ಪ್ರತಿ ವರುಷವೂ ಆಕರ್ಷಿಸುತ್ತವೆ.
ಹಿಮ ಆವರಿಸಿದ ಪರ್ವತಗಳು, ದೀರ್ಘ ಸಮುದ್ರ ತೀರಗಳು, ಹಿನ್ನೀರಿನ ಪ್ರದೇಶಗಳು, ಹಚ್ಚಹಸುರಿನ ಕಾಡುಗಳು, ನದಿದಡಗಳು, ಸರೋವರಗಳು - ಇವೆಲ್ಲ ಪ್ರಾಕೃತಿಕ ತಾಣಗಳು ಪ್ರವಾಸಿಗಳನ್ನು ದಂಗುಬಡಿಸುತ್ತವೆ. ವನ್ಯಜೀವಿ ರಕ್ಷಣಾ ಅರಣ್ಯಗಳು, ರಾಷ್ಟ್ರೀಯ ಉದ್ಯಾನಗಳು, ಚಾರಿತ್ರಿಕ ಸ್ಥಳಗಳು, ಯುನೆಸ್ಕೋ ಪಾರಂಪರಿಕ ತಾಣಗಳು - ಇವೆಲ್ಲವೂ ಭಾರತದ ಆಕರ್ಷಣೆಯನ್ನು ಹಲವು ಪಟ್ಟು ಹೆಚ್ಚಿಸಿವೆ.
ಅಧ್ಯಾತ್ಮ ಸಾಧನೆಗಾಗಿಯೂ ಸಾವಿರಾರು ಪ್ರವಾಸಿಗಳು ಭಾರತಕ್ಕೆ ಬರುತ್ತಾರೆ. ಯೋಗ ಮತ್ತು ಧ್ಯಾನ ಕಲಿಯಲಿಕ್ಕಾಗಿ ಬರುವ ಪ್ರವಾಸಿಗಳಲ್ಲಿ ಕೆಲವರು ಆಶ್ರಮಗಳಲ್ಲಿ ವರುಷಗಟ್ಟಲೆ ಉಳಿದು ನೆಮ್ಮದಿಯ ಬದುಕಿನ ಹುಡುಕಾಟದಲ್ಲಿ ತೊಡಗುತ್ತಾರೆ.
೨೨.ಜಗತ್ತಿನ ಅತ್ಯಂತ ಉದ್ದದ ಪರ್ವತಶ್ರೇಣಿ ಹಿಮಾಲಯ
ಹಿಮಾಲಯ ಪರ್ವತಶ್ರೇಣಿ ಜಗತ್ತಿನ ಅತ್ಯಂತ ಉದ್ದದ ಹಿಮಾಚ್ಛಾದಿತ ಪರ್ವತಸಾಲು. ಭಾರತದ ಉತ್ತರ ಗಡಿಯ ಉದ್ದಕ್ಕೂ ಹಬ್ಬಿರುವ ಇದರ ಉದ್ದ ಸುಮಾರು ೨,೩೦೦ ಕಿ.ಮೀ. ಇದರ ಸರಾಸರಿ ಎತ್ತರ ಸಮುದ್ರಮಟ್ಟದಿಂದ ೬,೧೦೦ ಮೀ. ಜಗತ್ತಿನ ಅತ್ಯಂತ ಎತ್ತರದ ಪರ್ವತ ಶಿಖರಗಳಾದ ಮೌಂಟ್ ಎವರೆಸ್ಟ್, ನಂಗಾ ಪರ್ವತ, ಕಾಂಚನಜಂಗಾ ಮತ್ತು ಅನ್ನಪೂರ್ಣ ಇಲ್ಲಿವೆ.
ಹಿಮಾಲಯ ಪರ್ವತ ವಲಯದಲ್ಲಿ ೧೯ ಪ್ರಮುಖ ನದಿಗಳು ಹುಟ್ಟಿ ಹರಿಯುತ್ತವೆ. ಚಳಿಗಾಲದಲ್ಲಿ ಉತ್ತರದಿಂದ ಬೀಸಿ ಬರುವ ಚಳಿಗಾಳಿಗಳು ಭಾರತಕ್ಕೆ ನುಗ್ಗುವುದನ್ನು ಹಿಮಾಲಯ ಕುಂಠಿತಗೊಳಿಸುತ್ತದೆ ಮತ್ತು ಮಳೆಗಾಲದಲ್ಲಿ ನೈಋತ್ಯ ಮಾರುತಗಳನ್ನು ತಡೆದು, ಅವು ಹೊತ್ತು ತರುವ ತೇವಾಂಶದ ಬಹುಪಾಲು ಈ ಪರ್ವತಶ್ರೇಣಿಯನ್ನು ದಾಟುವ ಮೊದಲೇ ಮಳೆಯಾಗಿ ಸುರಿಯುವಂತೆ ಮಾಡುತ್ತದೆ. ಹಿಮಾಲಯದ ತಪ್ಪಲಿನಲ್ಲಿ ಭಾರೀ ಬೆಲೆಬಾಳುವ ಮರಗಳಿರುವ ಕಾಡುಗಳಿವೆ.
ಅಲ್ಲಿನ ಭಯಂಕರ ಚಳಿಯಲ್ಲಿ ದೇಶದ ಗಡಿಗಳನ್ನು ಕಾಯುತ್ತಿರುವ ಭಾರತೀಯ ಭೂಸೈನ್ಯದ ಸೈನಿಕರಿಗೆ ಮತ್ತು ಗಡಿ ರಕ್ಷಣಾ ಪಡೆಯ ಯೋಧರಿಗೆ ನಾವು ಸಲಾಮ್ ಹೇಳಲೇ ಬೇಕು. ಮನುಷ್ಯರು ಜೀವಿಸುವುದೇ ಕಷ್ಟ ಎಂಬಂತಹ ಸನ್ನಿವೇಶದಲ್ಲಿ ಅವರು ವರುಷಗಟ್ಟಲೆ ತಮ್ಮ ಕರ್ತವ್ಯ ನಿರ್ವಹಿಸುತ್ತಿರುವುದೇ ವಿಸ್ಮಯ.
ಫೋಟೋ: ಹಿಮಾಲಯದ ವಿಹಂಗಮ ನೋಟ
೨೧.ಭಾರತದ ಅದ್ಭುತ ವನ್ಯಜೀವಿಗಳು
ಭಾರತದ ವನ್ಯಜೀವಿ ಸಂಪತ್ತು ಅದರ ವೈವಿಧ್ಯತೆಯಿಂದಾಗಿಯೇ ಅದ್ಭುತ. ಇದಕ್ಕೆ ಕಾರಣ ಭಾರತದ ವೈವಿಧ್ಯಮಯ ಮಣ್ಣು, ಹವಾಮಾನ ಮತ್ತು ಭೂಲಕ್ಷಣಗಳು.
ಗಮನಿಸಿ: ಜಗತ್ತಿನ ಸುಮಾರು ಶೇಕಡಾ ೭೦ರಷ್ಟು ಜೀವವೈವಿಧ್ಯತೆಗೆ ಭಾರತವೇ ತವರೂರು. ಹಾಗೆಯೇ, ಜಗತ್ತಿನ ಸುಮಾರು ಶೇಕಡಾ ೩೩ರಷ್ಟು ಸಸ್ಯ ಪ್ರಭೇದಗಳು (ಸ್ಪಿಷೀಸ್) ಭಾರತದಲ್ಲಿ ಮಾತ್ರ ಇವೆ.
ಭಾರತದಲ್ಲಿ ೩೭೨ ಸಸ್ತನಿಗಳ ಸ್ಪಿಷೀಸ್‌ಗಳಿವೆ. ಆನೆ, ಭಾರತೀಯ ಕಾಡುಕೋಣ, ಖಡ್ಗಮೃಗ, ಹಿಮಾಲಯದ ಕುರಿ ಇವುಗಳಲ್ಲಿ ಸೇರಿವೆ. ದೊಡ್ಡ ಬೆಕ್ಕುಗಳಾದ ಹುಲಿ ಮತ್ತು ಸಿಂಹಗಳೂ ಭಾರತದಲ್ಲಿವೆ.
ಭಾರತದಲ್ಲಿರುವ ೧,೨೨೮ ಹಕ್ಕಿಗಳ ಸ್ಪಿಷೀಸ್‌ಗಳಲ್ಲಿ ನವಿಲುಗಳು, ಗಿಳಿಗಳು,, ಕೊಕ್ಕರೆಗಳು ಮತ್ತು ಮಂಗಟ್ಟೆಹಕ್ಕಿಗಳು ಸೇರಿವೆ. ಹಲವು ಜಾತಿಯ ಮಂಗಗಳಿಗೂ ಭಾರತವೇ ತವರೂರು. ಇಲ್ಲಿವೆ ಸರೀಸೃಪಗಳ ೪೪೬ ಸ್ಪಿಷೀಸ್‌ಗಳು - ಮೊಸಳೆ ಮತ್ತು ಘರಿಯಲ್‌ಗಳ (ಸಪೂರ ಮೂತಿಯ ಮೊಸಳೆಗಳು) ಸಹಿತ.
ಭಾರತದ ಸಂಪನ್ನ ಮತ್ತು ಮನಮೋಹಕ ವನ್ಯಜೀವಿಗಳನ್ನು ಭಾರತ ಸರಕಾರ ಸ್ಥಾಪಿಸಿರುವ ೮೦ ರಾಷ್ಟ್ರೀಯ ಉದ್ಯಾನಗಳು, ೪೪೦ ವನ್ಯಜೀವಿ ಸಂರಕ್ಷಣಾ ಕಾಡುಗಳು ಮತ್ತು ೨೩ ಹುಲಿ ಸಂರಕ್ಷಣಾ ರಕ್ಷಿತಾರಣ್ಯಗಳಲ್ಲಿ ಕಾಣಬಹುದು.
ಫೋಟೋ: ಭಾರತದ ರಾಷ್ಟ್ರಪಕ್ಷಿ - ನವಿಲು
ಪ್ರಕೃತಿ ಮತ್ತು ವನ್ಯಜೀವಿಗಳು
೨೦.ಭಾರತದ ಪ್ರಾಕೃತಿಕ ಸಂಪತ್ತಿನ ಖಜಾನೆ: ಪಶ್ಚಿಮ ಘಟ್ಟಗಳು
ಭಾರತದ ಪಶ್ಚಿಮ ಕರಾವಳಿಯ ಉದ್ದಕ್ಕೆ ೧,೬೦೦ ಕಿ.ಮೀ. ವ್ಯಾಪಿಸಿರುವ ಪರ್ವತ ಶ್ರೇಣಿಯೇ ಪಶ್ಚಿಮ ಘಟ್ಟಗಳು. ಇಲ್ಲಿನ ಅಗಾಧ ಜೀವವೈವಿಧ್ಯತೆಯಿಂದಾಗಿ ಇವನ್ನು ಭಾರತದ ಪ್ರಧಾನ ಪ್ರಾಕೃತಿಕ ಸಂಪತ್ತಿನ ಖಜಾನೆ ಎಂದು ಪರಿಗಣಿಸಲಾಗಿದೆ.
ಭಾರತದ ಒಟ್ಟು ಸಸ್ಯ ಮತ್ತು ಪ್ರಾಣಿ ಪ್ರಭೇದಗಳ ದೊಡ್ಡ ಪಾಲು ಪಶ್ಚಿಮ ಘಟ್ಟಗಳಲ್ಲಿ ಕಂಡುಬರುತ್ತದೆ. ಇಲ್ಲಿರುವ ಕೆಲವು ಪ್ರಭೇದಗಳು ಜಗತ್ತಿನಲ್ಲಿ ಬೇರೆಲ್ಲಿಯೂ ಕಾಣ ಸಿಗುವುದಿಲ್ಲ. ಭಾರತದ ಆನೆಗಳ, ಹುಲಿಗಳ ಮತ್ತು ಸಿಂಹ-ಬಾಲದ ಕೋತಿಗಳ
ಬಹುಪಾಲು ಪಶ್ಚಿಮ ಘಟ್ಟಗಳಲ್ಲಿದೆ.
ಅದಲ್ಲದೆ, ಭಾರತದ ಸುಮಾರು ಮೂವತ್ತು ಕೋಟಿ ಜನರು ವಾಸ ಮಾಡುವ ರಾಜ್ಯಗಳಿಗೆ ನೀರು ಸಿಗುತ್ತಿರುವುದು ಪಶ್ಚಿಮ ಘಟ್ಟಗಳಲ್ಲಿ ಹುಟ್ಟಿ ಪಶ್ಚಿಮ ಅಥವಾ ಪೂರ್ವಕ್ಕೆ ಹರಿಯುವ ವಿವಿಧ ನದಿಗಳಿಂದ. ಅಂದರೆ ಕೋಟಿಗಟ್ಟಲೆ ಜನರು ತಮ್ಮ ಜೀವನೋಪಾಯಕ್ಕಾಗಿ ಪಶ್ಚಿಮ ಘಟ್ಟಗಳನ್ನು ಅವಲಂಬಿಸಿದ್ದಾರೆ.
ಫೋಟೋ: ಪಶ್ಚಿಮ ಘಟ್ಟಗಳ ವಿಹಂಗಮ ನೋಟ; ಕೃಪೆ: ದಬ್ಲ್ಯು.ಎಚ್.ಸಿ. ಯುನೆಸ್ಕೋ
೧೯.ಜಗತ್ತಿನ ಅಪ್ರತಿಮ ಕಲಾರಚನೆ ಆಗ್ರಾದ ತಾಜಮಹಲ್
ಆಗ್ರಾದ ತಾಜಮಹಲನ್ನು ಜಗತ್ತಿನ ಅತ್ಯಂತ ಸುಂದರ ಮತ್ತು ಭವ್ಯ ಸ್ಮಾರಕ ಎನ್ನಬಹುದು. ಇದು ಮೊಘಲ್ ರಾಜ ಷಾಜಹಾನ್, ತನ್ನ ಪ್ರೀತಿಯ ಪತ್ನಿ ಮಮ್ತಾಜಳ ನೆನಪಿಗಾಗಿ ನಿರ್ಮಿಸಿದ ಸ್ಮಾರಕ. ತನ್ನ ಮಗ ಔರಂಗಜೇಬನಿಂದಲೇ
ಬಂಧಿಸಲ್ಪಟ್ಟ ರಾಜ ಷಾಜಹಾನ್ ತನ್ನ ಕೊನೆಗಾಲವನ್ನು ತಾಜಮಹಲನ್ನು ಖಿನ್ನತೆಯಿಂದ ನೋಡುತ್ತ ಕಳೆಯ ಬೇಕಾಯಿತು ಎಂಬುದು ದುರಂತ. ಅವನ ಮರಣಾ ನಂತರ ಅವನನ್ನೂ ಮಮ್ತಾಜಳ ಸಮಾಧಿ ಪಕ್ಕದಲ್ಲೇ ಸಮಾಧಿ ಮಾಡಲಾಯಿತು.
ಯಮುನಾ ನದಿಯ ದಡದಲ್ಲಿರುವುದೇ ತಾಜಮಹಲಿನ ಭವ್ಯತೆಯ ಗುಟ್ಟು! ಹಿಂಭಾಗದಲ್ಲಿ ನದಿ ಹರಿಯುತ್ತಿರುವ ಕಾರಣ, ತಾಜಮಹಲಿಗೆ ಯಾವಾಗಲೂ ಅಗಾಧ ಆಕಾಶವೇ ಹಿನ್ನೆಲೆ. ಅದರಿಂದಾಗಿ ತಾಜಮಹಲಿಗೊಂದು ಭವ್ಯ ನೋಟ ಲಭ್ಯ. ಸುಮಾರು ೨೦,೦೦೦ ಕೆಲಸಗಾರರೂ ಕುಶಲಕರ್ಮಿಗಳೂ ೨೦ ವರುಷ ಹಗಲೂರಾತ್ರಿ ದುಡಿದು ತಾಜಮಹಲನ್ನು ನಿರ್ಮಿಸಿದರು. ಅವರ ಶ್ರದ್ಧೆ, ದುಡಿಮೆ, ಕುಸುರಿ ಕೆಲಸ ಅಲ್ಲಿನ ಒಂದೊಂದು ಕಲ್ಲಿನಲ್ಲಿಯೂ ಎದ್ದು ಕಾಣುತ್ತದೆ.
ತಾಜಮಹಲಿನ ಶಿಲೆಗಳ ಕುಸುರಿ ಕೆಲಸ ನೋಡಲು ಒಂದು ದಿನ ಸಾಲದು. ಬೆಳದಿಂಗಳಿನಲ್ಲಿ ತಾಜಮಹಲನ್ನು ನೋಡುವುದು ಒಂದು ಅದ್ಭುತ ಅನುಭವ. ಎತ್ತರಿಸಿದ ಅಡಿಪಾಯದ ನಾಲ್ಕು ಮೂಲೆಗಳಲ್ಲಿರುವ ನಾಲ್ಕು ಗೋಪುರಗಳು ಮತ್ತು ಮುಖ್ಯ ಕಟ್ಟಡದ ಮಧ್ಯದಲ್ಲಿರುವ ಮುಗಿಲೆತ್ತರದ ಗೋಲ, ಇಡೀ ಶಿಲಾರಚನೆಗೊಂದು ವಿಲಕ್ಷಣ ರೂಪ ನೀಡಿವೆ.
೧೮. ವಿಶ್ವ ನಾಯಕ ಮಹಾತ್ಮಾ ಗಾಂಧಿ
ಮಹಾತ್ಮಾ ಗಾಂಧಿ ಭಾರತದ ಮಹಾನ್ ಮುಂದಾಳು. ಮಾತ್ರವಲ್ಲ, ಅವರು ವಿಶ್ವದ ಅಗ್ರಮಾನ್ಯ ನಾಯಕರಲ್ಲಿ ಒಬ್ಬರು.
ಸುಮಾರು ಎರಡು ಶತಮಾನಗಳ ದುರುಳ ವಿದೇಶಿಯರ ಆಳ್ವಿಕೆಯಿಂದ ಭಾರತ ಸ್ವಾತಂತ್ರ್ಯ ಗಳಿಸಲು ಅವರು ಮುನ್ನಡೆಸಿದ ಅಹಿಂಸಾತ್ಮಕ ಸ್ವಾತಂತ್ರ್ಯ ಹೋರಾಟವೇ ಕಾರಣ. ಸತ್ಯ ಮತ್ತು ನ್ಯಾಯದ ಮೌಲ್ಯಗಳನ್ನು ಜೀವನವಿಡೀ ಎತ್ತಿ ಹಿಡಿದವರು.
ಗುಜರಾತಿನ ಪೋರ್-ಬಂದರಿನಲ್ಲಿ ೨ ಅಕ್ಟೋಬರ್ ೧೮೬೯ರಲ್ಲಿ ಜನಿಸಿದ ಮೋಹನದಾಸ ಕರಮಚಂದ ಗಾಂಧಿ, ಬ್ರಿಟನಿನಲ್ಲಿ ಶಿಕ್ಷಣ ಪಡೆದು ವಕೀಲರಾದರು. ಅನಂತರ, ದಕ್ಷಿಣ ಆಫ್ರಿಕಾ ದೇಶದಲ್ಲಿ ವಕೀಲರಾಗಿದ್ದಾಗ ವರ್ಣಭೇದದ ವಿರುದ್ಧ ಅಹಿಂಸಾತ್ಮಕ ಹೋರಾಟವನ್ನು ಸಂಘಟಿಸಿದರು. ಅಲ್ಲಿನ ಅನುಭವವನ್ನು ಭಾರತದಲ್ಲಿ ಬ್ರಿಟಿಷ್ ಆಡಳಿತದ ವಿರುದ್ಧ ಜನಾಂದೋಲನ ಸಂಘಟಿಸಲು ಪರಿಣಾಮಕಾರಿಯಾಗಿ ಬಳಸಿದರು.
ಮಹಾತ್ಮ ಗಾಂಧಿಯವರನ್ನು ಹಲವು ಸಲ ಸೆರೆಮನೆಗೆ ತಳ್ಳಿ ಶಿಕ್ಷೆ ನೀಡಲಾಯಿತು. ಆದರೆ ಅವರು ತಮ್ಮ ಹೋರಾಟದ ಪಥದಿಂದ ಹಿಂಜರಿಯಲಿಲ್ಲ; ತಮ್ಮ ಮೌಲ್ಯಗಳ ಪಾಲನೆಯಲ್ಲಿ ಕಿಂಚಿತ್ತೂ ತಪ್ಪಲಿಲ್ಲ. ಅಂತಿಮವಾಗಿ ಅವರ ಸಂಕಲ್ಪ ಬಲ ಮತ್ತು ಮುಂದಾಳುತನ ಭಾರತವು ಸ್ವಾತಂತ್ರ್ಯ ಹೋರಾಟದಲ್ಲಿ ಜಯ ಗಳಿಸಲು ಬಹು ದೊಡ್ಡ ಒತ್ತಾಸೆಯಾಯಿತು.
೧೭.ಜಗತ್ತಿನಲ್ಲಿ ಅತ್ಯಂತ ಜಾಸ್ತಿ ಹಣ ಒಳರವಾನೆ (ರೆಮಿಟೆನ್ಸ್) ಆಗುವ ದೇಶ ಭಾರತ
ಒಬ್ಬ ವ್ಯಕ್ತಿ ವಿದೇಶದಲ್ಲಿ ಉದ್ಯೋಗ ಮಾಡುತ್ತಾ, ತಾನು ಗಳಿಸಿದ ಹಣವನ್ನು ತನ್ನ ಮಾತೃದೇಶಕ್ಕೆ ರವಾನಿಸಿದಾಗ, ಹಾಗೆ ರವಾನಿಸಿದ ಹಣವನ್ನು “ಒಳರವಾನೆ" (ರೆಮಿಟೆನ್ಸ್) ಎನ್ನುತ್ತಾರೆ.
ವಿದೇಶಗಳಲ್ಲಿ ದುಡಿಯುತ್ತಿರುವ ಭಾರತೀಯರು ಭಾರತಕ್ಕೆ ಒಳರವಾನೆ ಮಾಡುತ್ತಿರುವ ಹಣ ಜಗತ್ತಿನಲ್ಲೇ ಅತ್ಯಧಿಕ. ಕಳೆದ ಕೆಲವು ವರುಷಗಳಲ್ಲಿ ವಿದೇಶಗಳಲ್ಲಿ ದುಡಿಯುವ ಭಾರತೀಯರು ಭಾರತಕ್ಕೆ ಪ್ರತಿ ಆರ್ಥಿಕ ವರುಷದಲ್ಲಿ ಸುಮಾರು ೮೦ ಬಿಲಿಯನ್ ಡಾಲರ್ ಹಣವನ್ನು ಒಳರವಾನೆ ಮಾಡಿದ್ದಾರೆ!
ಈ ಹಣವನ್ನು ಬ್ಯಾಂಕ್ ಡಿಮಾಂಡ್ ಡ್ರಾಫ್ಟ್ ಮೂಲಕ ಅಥವಾ ವಿದ್ಯುನ್ಮಾನ ರೂಪದಲ್ಲಿ ಒಳರವಾನೆ ಮಾಡಲಾಗುತ್ತದೆ. ಇತ್ತೀಚೆಗಿನ ವರುಷಗಳಲ್ಲಿ ಇಂತಹ ಹಣದ ಒಳರವಾನೆ ದೊಡ್ಡ ವ್ಯವಹಾರವಾಗಿ ಬೆಳೆದಿದೆ. ಭಾರತಕ್ಕೆ ಒಳರವಾನೆ ಆಗುತ್ತಿರುವ ಹಣದ ಶೇಕಡಾ ೪೦ರಷ್ಟು ಕೇರಳ, ಪಂಜಾಬ್ ಮತ್ತು ಗೋವಾ - ಈ ಮೂರು ರಾಜ್ಯಗಳಿಗೆ ಬರುತ್ತಿದೆ.
ಹೀಗೆ ಒಳರವಾನೆ ಆಗುತ್ತಿರುವ ಹಣವು, ಅದನ್ನು ರವಾನಿಸಿದವರ ಕುಟುಂಬಗಳಿಗೆ ಆರ್ಥಿಕ ಭದ್ರತೆ ಒದಗಿಸುತ್ತಿದೆ. ಜೊತೆಗೆ ಆಯಾ ರಾಜ್ಯಗಳಲ್ಲಿ ಮನೆನಿರ್ಮಾಣ, ಸಣ್ಣಪುಟ್ಟ ವ್ಯಾಪಾರ ಇತ್ಯಾದಿ ಆರ್ಥಿಕ ಚಟುವಟಿಕೆಗಳಲ್ಲಿ ಹೂಡಿಕೆಯಾಗುತ್ತಿದೆ.
೧೬.ಜಗತ್ತಿನ ಅತಿ ದೊಡ್ಡ ಬಂಗಾರದ ಮಾರುಕಟ್ಟೆ ಭಾರತ
ಪ್ರಾಚೀನ ಕಾಲದಿಂದಲೂ ಭಾರತೀಯರಿಗೆ ಬಂಗಾರದ ಮೋಹ. ಶತಮಾನಗಳಿಂದಲೂ ಬಂಗಾರ ಎಂಬುದು ನಮ್ಮ ಸಮಾಜದ ಅವಿಭಾಜ್ಯ ಅಂಗವಾಗಿದೆ. ಬಂಗಾರದ ಒಡವೆ ಧರಿಸದ ಮಹಿಳೆ ಭಾರತದಲ್ಲಿ ತೀರಾ ಅಪರೂಪ. ಬಂಗಾರದ ಆಭರಣಗಳು ಸಂಪತ್ತಿನ, ಸಮೃದ್ಧಿಯ ಮತ್ತು ಸಾಮಾಜಿಕ ಸ್ಥಿತಿಗತಿಯ ಸಂಕೇತವಾಗಿವೆ.
ಭಾರತವನ್ನು ಆಳಿದ ನೂರಾರು ರಾಜಮಹಾರಾಜರು, ಚಕ್ರವರ್ತಿಗಳು ಮತ್ತು ರಾಜಮನೆತನಗಳು ತಮ್ಮ ಸಂಪತ್ತನ್ನು ಬಂಗರದ ರೂಪದಲ್ಲೇ ಶೇಖರಿಸಿ ಇಡುತ್ತಿದ್ದರು. ಹಲವು ರಾಜಮನೆತನಗಳ ನಡುವೆ ಸಂಪತ್ತಿನ ವಿನಿಮಯಕ್ಕೆ ಬಳಕೆ ಆಗುತ್ತಿದ್ದದ್ದು ಬಂಗಾರ. ಮೊಘಲ ರಾಜರ ಮತ್ತು ಹೈದರಾಬಾದಿನ ನಿಜಾಮರ ಬಂಗಾರದ ಸಂಗ್ರಹವಂತೂ ಕಣ್ಣು ಕೋರೈಸುವಂತಿತ್ತು.
ನೆರೆ, ಭೂಕಂಪ, ಬಿರುಗಾಳಿಯಂತಹ ಪ್ರಾಕೃತಿಕ ವಿಕೋಪಗಳ ಸಂದರ್ಭಗಳಲ್ಲಿ ಸಂಪತ್ತನ್ನು ರಕ್ಷಿಸಿಕೊಳ್ಳಲು ಅದನ್ನು ಬಂಗಾರದ ರೂಪದಲ್ಲಿ ಶೇಖರಿಸುವುದು ಅಗತ್ಯವಾಗಿತ್ತು. ಅದಲ್ಲದೆ, ಶತಮಾನಗಳ ಕಾಲ, ಗ್ರಾಮೀಣ ಭಾರತದಲ್ಲಿ, ಜಮೀನಿನ ಹೊರತಾಗಿ ಉಳಿತಾಯದ ಒಂದೇ ಒಂದು ವಿಧಾನ ಬಂಗಾರದ ರೂಪದಲ್ಲಿ ಕಾದಿಡುವುದು.
ಭಾರತೀಯ ಸಮಾಜದಲ್ಲಿ ಮದುವೆಯ ಸಂದರ್ಭದಲ್ಲಿ ಮದುಮಗ-ಮದುಮಗಳಿಗೆ ಬಂಗಾರ ಕೊಡುವುದು ಪದ್ಧತಿ. ಸಾಮಾನ್ಯ ಆದಾಯದ ಕುಟುಂಬಗಳು ಮಕ್ಕಳು ಹುಟ್ಟಿದ ನಂತರ ಆಗಾಗ ಬಂಗಾರ ಖರೀದಿಸಿ, ಸಂಗ್ರಹಿಸಿ ಇಟ್ಟು ಕೊಳ್ಳುತ್ತಾರೆ.
೧೫. ಭಾರತದ ಉಡುಪುಗಳ ವೈವಿಧ್ಯತೆಗೆ ಜಗತ್ತಿನಲ್ಲಿ ಸಾಟಿಯಿಲ್ಲ.
ಭಾರತದಲ್ಲಿ ಸಾಂಪ್ರದಾಯಿಕ ಉಡುಪು ಪ್ರದೇಶದಿಂದ ಪ್ರದೇಶಕ್ಕೆ, ಉತ್ತರದಿಂದ ದಕ್ಷಿಣಕ್ಕೆ ಮತ್ತು ಪೂರ್ವದಿಂದ ಪಶ್ಚಿಮಕ್ಕೆ ಬದಲಾಗುತ್ತದೆ. ಭಾರತದ ಹಲವು ಬುಡಕಟ್ಟಿನವರ ಮತ್ತು ಈಶಾನ್ಯ ರಾಜ್ಯಗಳ ಜನರ ಉಡುಪುಗಳಂತೂ ವರ್ಣಮಯ.
ಪ್ರತಿಯೊಬ್ಬನು ಧರಿಸುವ ಉಡುಪು ಆತನ/ ಆಕೆಯ ವಾಸಸ್ಥಳ, ಸ್ಥಳೀಯ ಪದ್ಧತಿ, ಹವಾಮಾನ ಮತ್ತು ಸಾಮಾಜಿಕ ಅಂತಸ್ತು ಅವಲಂಬಿಸಿ ಬದಲಾಗುತ್ತದೆ. ಭಾರತದ ಉದ್ದಗಲದಲ್ಲಿ ಮಹಿಳೆಯರು ಸೀರೆ ಧರಿಸುವುದು ಸಾಮಾನ್ಯ; ಆದರೆ ಅದನ್ನು ಉಡುವ ರೀತಿ ಪ್ರದೇಶದಿಂದ ಪ್ರದೇಶಕ್ಕೆ ಬದಲಾಗುತ್ತದೆ!
ಉತ್ತರ ಭಾರತದಲ್ಲಿ ಮಹಿಳೆಯರು ಸಲ್ವಾರ ಕಮೀಜ್ ಮತ್ತು ದುಪ್ಪಟ್ಟಾ ಧರಿಸುವುದು ಸಾಮಾನ್ಯ. ದಕ್ಷಿಣ ಭಾರತದ ಹುಡುಗಿಯರು ಉದ್ದಲಂಗ ಮತ್ತು ರವಕೆ ಧರಿಸುವುದು ಸಾಮಾನ್ಯ.
ಪುರುಷರು ಧರಿಸುವುದು ಪೈಜಾಮಾ, ಕುರ್ತಾ; ಪ್ಯಾಂಟ್ ಅಥವಾ ಧೋತಿ ಮತ್ತು ಷರಟು. ಪುರುಷರ ತಲೆಗೆ ಕೆಲವು ಪ್ರದೇಶಗಳಲ್ಲಿ ಮುಂಡಾಸು; ಕೆಲವು ಸಮುದಾಯಗಳಲ್ಲಿ ಟೋಪಿ. ನಗರಗಳಲ್ಲಿ ಪಾಶ್ಚಾತ್ಯ ಉಡುಗೆ ಧರಿಸುವುದು ಸಾಮಾನ್ಯ.
೧೪.”ಹಬ್ಬಗಳ ದೇಶ” ಭಾರತ
ಹಲವಾರು ಧರ್ಮಗಳ ಮತ್ತು ಸಮುದಾಯಗಳ ದೇಶ ಭಾರತ. ಪ್ರತಿಯೊಂದು ಧರ್ಮ ಮತ್ತು ಸಮುದಾಯಕ್ಕೆ ಅದರದೇ ಹಬ್ಬಗಳು ಇರುತ್ತವೆ. ಇದರಿಂದಾಗಿ, ಪ್ರತೀ ವಾರ, ಭಾರತದಲ್ಲಿ ಎಲ್ಲಾದರೂ ಒಂದಲ್ಲ ಒಂದು ಹಬ್ಬ ಆಚರಿಸಲ್ಪಡುತ್ತದೆ. ಹಾಗಾಗಿ ಭಾರತ “ಹಬ್ಬಗಳ ದೇಶ” ಎನಿಸಿಕೊಂಡಿದೆ.
ಬಹುಪಾಲು ಹಬ್ಬಗಳು ಧಾರ್ಮಿಕ ಆಚರಣೆಗೆ ಸಂಬಂಧಿಸಿವೆ. ಉದಾಹರಣೆಗೆ, ದಸರಾ, ಹೋಳಿ, ಗಣೇಶ ಚತುರ್ಥಿ, ಜನ್ಮಾಷ್ಟಮಿ, ದೀಪಾವಳಿ, ಶಿವರಾತ್ರಿ, ಮಹಾವೀರ ಜಯಂತಿ, ಬುದ್ಧ ಜಯಂತಿ, ಗುರು ನಾನಕ್ ಜಯಂತಿ, ಕ್ರಿಸ್ಮಸ್, ಈದ್. ಇನ್ನು ಕೆಲವು ಹಬ್ಬಗಳು ಆಯಾ ಪ್ರದೇಶದ ಬಿತ್ತನೆ, ಬೆಳೆ-ಕೊಯ್ಲಿಗೆ ಸಂಬಂಧಿಸಿವೆ. ಉದಾಹರಣೆಗೆ, ಮಕರ ಸಂಕ್ರಾಂತಿ, ಹುತ್ತರಿ ಹಬ್ಬ. ಸ್ವಾತಂತ್ರ್ಯ ದಿನ, ಪ್ರಜಾಪ್ರಭುತ್ವ ದಿನ ಮತ್ತು ಮಹಾತ್ಮಗಾಂಧಿ ಜಯಂತಿ - ಇವು ರಾಷ್ಟ್ರೀಯ ಹಬ್ಬಗಳಾಗಿವೆ.
ಭಾರತದ ದಿನಸೂಚಿ (ಕೆಲೆಂಡರ್) ಒಂದು ರೀತಿಯಲ್ಲಿ ವಿವಿಧ ಹಬ್ಬಗಳ ಮೆರವಣಿಗೆಯ ದಾಖಲಾತಿ. ಪ್ರತಿಯೊಂದು ಹಬ್ಬಕ್ಕೂ ಅದರದ್ದೇ ಆದ ಆಚರಣೆಗಳು, ಕಟ್ಟುಕಟ್ಟಲೆಗಳು, ಸಂಪ್ರದಾಯಗಳು, ನಂಬಿಕೆಗಳು ಥಳಕು ಹಾಕಿಕೊಂಡಿವೆ. ಮನೆಮಂದಿಗೆಲ್ಲ ಹಬ್ಬವೆಂದರೆ, ಬಹುದಿನಗಳ ತಯಾರಿ, ಸಂಭ್ರಮ, ಬಂಧುಬಳಗದ ಜೊತೆ ಸಮ್ಮಿಳನ. ಆಯಾ ಹಬ್ಬಗಳ ಆಹಾರವಂತೂ ಹೊಟ್ಟೆಗೂ ತಂಪು, ಮನಕ್ಕೂ ಮುದ.
