೪೬.ರತ್ನ ಮತ್ತು ಬೆಲೆಬಾಳುವ ಮುತ್ತುಮಾಣಿಕ್ಯಗಳ ಉದ್ಯಮದಲ್ಲಿ ಭಾರತಕ್ಕೆ ಅಗ್ರಗಣ್ಯ ಸ್ಥಾನ
ಪುರಾತನ ಕಾಲದಿಂದಲೂ ಭಾರತವು ಅದ್ಭುತ ರತ್ನಗಳು, ಮುತ್ತುಮಾಣಿಕ್ಯಗಳಿಗೆ ಜಗತ್ತಿನಲ್ಲೇ ಪ್ರಸಿದ್ಧ. ಭಾರತದ ರತ್ನದ ಗಣಿಗಳು ವಿಶ್ವವಿಖ್ಯಾತವಾದ ರತ್ನಗಳನ್ನು ಉತ್ಪಾದಿಸಿವೆ.
ಈಗ ಭಾರತದ ರತ್ನ ಕತ್ತರಿಸುವ ಮತ್ತು ಪಾಲಿಷ್ ಮಾಡುವ ಉದ್ಯಮ ಜಗತ್ತಿನಲ್ಲಿ ಅತಿ ದೊಡ್ಡದು. ಅದರಲ್ಲಿ ಆಧುನಿಕ ತಂತ್ರಜ್ನಾನ ಮತ್ತು ಪಾರಂಪರಿಕ ಕೌಶಲ್ಯಗಳನ್ನು ಸಮರ್ಥವಾಗಿ ಬಳಸಲಾಗಿದೆ.
ಈ ಕಸುಬಿನಲ್ಲಿ ಪರಿಣತರಾಗಿರುವ ಭಾರತದ ಕುಶಲಕರ್ಮಿಗಳ ಸಂಖ್ಯೆ ೧೦ ಲಕ್ಷಕ್ಕಿಂತ ಅಧಿಕ. ಇದುವೇ ಅಂತರರಾಷ್ಟ್ರೀಯ ಆಭರಣ ತಯಾರಕರು ಭಾರತದಲ್ಲಿ ತಮ್ಮ ಮಳಿಗೆಗಳನ್ನು ತೆರೆಯಲು ಕಾರಣ. ಅಂತೂ ಜಗತ್ತಿನ ಅತಿ ದೊಡ್ಡ ರತ್ನ ಉತ್ಪಾದನಾ ಕೇಂದ್ರವಾಗಿ ಭಾರತ ಹೆಸರುವಾಸಿ.
ಫೋಟೋ ಕೃಪೆ: ಐಸ್ಟಾಕ್ ಫೋಟೋಸ್
೪೫.ಹಾಸುಗಂಬಳಿ ಉತ್ಪಾದನೆ: ಭಾರತದ ಮಗದೊಂದು ಮುಂಚೂಣಿ ರಂಗ
ಪ್ರಾಚೀನ ಕಾಲದಿಂದಲೂ ಭಾರತದ ಹಲವಾರು ಮನೆಗಳನ್ನು ಉಣ್ಣೆ, ಹತ್ತಿ, ಸೆಣಬು, ತೆಂಗಿನನಾರು ಮತ್ತು ಹುಲ್ಲುಗಳ ಹಾಸುಗಂಬಳಿಗಳು ಅಲಂಕರಿಸಿವೆ. ಪರ್ಷಿಯನ್ ಹಾಸುಗಂಬಳಿಗಳನ್ನು ಭಾರತಕ್ಕೆ ಮೊದಲಾಗಿ ತಂದವರು ಮೊಘಲರು. ಮಹಾರಾಜ ಅಕ್ಬರ್ ಆಗ್ರಾದಲ್ಲಿ ಹಾಸುಗಂಬಳಿ ನೇಯ್ಗೆ ಉದ್ಯಮವನ್ನು ಆರಂಭಿಸಿದ. ಅಂದಿನಿಂದ ಭಾರತದ ಹಾಸುಗಂಬಳಿಗಳು ಅದ್ಭುತ ವಿನ್ಯಾಸಗಳು, ಬಣ್ಣ ಸಂಯೋಜನೆ ಮತ್ತು ಕುಶಲ ನೇಯ್ಗೆಗಾಗಿ ಜಗತ್ತಿನಲ್ಲೇ ಪ್ರಸಿದ್ಧವಾಗಿವೆ.
ಉಣ್ಣೆ ಮತ್ತು ಸಿಲ್ಕ್ ಹಾಸುಗಂಬಳಿ ಹೆಣಿಗೆಗೆ ಬಳಸುವ ಪ್ರಧಾನ ವಸ್ತುಗಳು. ಇವುಗಳ ವಿನ್ಯಾಸಗಳು ಬಳ್ಳಿ ಮತ್ತು ಹೂಗಳ ನಮೂನೆಗಳು, ಪ್ರಾಣಿ ಮತ್ತು ಹಕ್ಕಿಗಳ ಚಿತ್ರಗಳು ಹಾಗೂ ಕ್ಯಾಲಿಗ್ರಾಫಿ ವಿನ್ಯಾಸಗಳನ್ನು ಒಳಗೊಂಡಿರುತ್ತವೆ.
ಈಗ ಕೈಗಳಿಂದ ನೇಯ್ದ ಹಾಸುಗಂಬಳಿಗಳ ಜಾಗತಿಕ ಮಾರುಕಟ್ಟೆಯಲ್ಲಿ ಭಾರತದ ಪಾಲು ಶೇಕಡಾ ೩೫. ತಂತ್ರಜ್ನಾನದ ಬಳಕೆ ಮತ್ತು ಗುಣಮಟ್ಟ ಸುಧಾರಣೆಯಿಂದ ಈ ಪಾಲು ಹೆಚ್ಚಾಗಲು ಸಾಧ್ಯವಿದೆ.
ಫೋಟೋ: ವೃತ್ತಾಕಾರದ ಹಾಸುಗಂಬಳಿ; ಕೃಪೆ: ಯೇಹೈಇಂಡಿಯಾ.ಕೋಮ್
೪೪.ಹಲವು ರಂಗಗಳಲ್ಲಿ ಜಗತ್ತಿನ ಮುಂಚೂಣಿಯಲ್ಲಿದೆ ಭಾರತ
ಸಕ್ಕರೆ, ಮಿಲ್ಲೆಟ್, ಬಾಳೆಹಣ್ಣು ಮತ್ತು ಲಿಂಬೆಹಣ್ಣು ಉತ್ಪಾದನೆಯಲ್ಲಿ ಭಾರತಕ್ಕೆ ಜಗತ್ತಿನಲ್ಲಿ ಪ್ರಥಮ ಸ್ಥಾನ. ಅಡಿಕೆ, ಸಾಂಬಾರವಸ್ತುಗಳು, ಫೆನ್ನೆಲ್, ಶುಂಠಿ, ತೊಗರಿ, ಲೆಂಟಿಲ್ ಮತ್ತು ಸೆಣಬು - ಇವುಗಳ ಉತ್ಪಾದನೆಯಲ್ಲಿಯೂ ಭಾರತಕ್ಕೆ ಜಗತ್ತಿನಲ್ಲಿ ಮೊದಲ ಸ್ಥಾನ.
ಅತ್ಯಧಿಕ ಸಂಖ್ಯೆಯ ಆಕಳುಗಳು ಮತ್ತು ಎಮ್ಮೆ ಹಾಗೂ ಕೋಣಗಳು ಇರುವುದು ಭಾರತದಲ್ಲಿ. ಹಾಲು ಮತ್ತು ಹಾಲಿನ ಉತ್ಪನ್ನಗಳ ಉತ್ಪಾದನೆಯಲ್ಲಿಯೂ ಜಗತ್ತಿನಲ್ಲಿ ಭಾರತವೇ ಮುಂಚೂಣಿಯಲ್ಲಿದೆ.
ಜಗತ್ತಿನಲ್ಲಿ ಅತ್ಯಧಿಕ ಸಂಖ್ಯೆಯ ವಿಶ್ವವಿದ್ಯಾಲಯಗಳು ಇರುವುದೂ ಭಾರತದಲ್ಲಿ; 54 ಕೇಂದ್ರೀಯ ವಿಶ್ವವಿದ್ಯಾಲಯಗಳು, 411 ರಾಜ್ಯ ವಿಶ್ವವಿದ್ಯಾಲಯಗಳು 123 ಡೀಮ್ಡ್ ವಿಶ್ವವಿದ್ಯಾಲಯಗಳು ಮತ್ತು 288 ಖಾಸಗಿ ವಿಶ್ವವಿದ್ಯಾಲಯಗಳು (ಒಟ್ಟು 875). ಅಂತೂ ತನ್ನ ಸರ್ವತೋಮುಖ ಅಭಿವೃದ್ಧಿಯಿಂದಾಗಿ ಜಗತ್ತಿನಲ್ಲಿ ಭಾರತವು ಹಲವು ರಂಗಗಳಲ್ಲಿ ಅಗ್ರಸ್ಥಾನ ಗಳಿಸಿದೆ.
ಫೋಟೋ: ಭಾರತದ ನಕ್ಷೆ; ಕೃಪೆ: ಕ್ಲಿಪಾರ್ಟ್.ಮಿ
೪೩.ಸೆಣಬು ಉತ್ಪಾದನೆಯಲ್ಲಿಯೂ ಭಾರತಕ್ಕೆ ಮೊದಲ ಸ್ಥಾನ
ಸೆಣಬಿನ ಚೀಲ ಮತ್ತು ಹಗ್ಗವನ್ನು ನಾವೆಲ್ಲರೂ ಬಳದಿದ್ದೇವೆ. ಸಸ್ಯಮೂಲದ ಈ ಉದ್ದನೆಯ, ಮೃದುವಾದ ನಾರನ್ನು ಬಲವಾದ ಹಗ್ಗವಾಗಿ ಹೊಸೆಯಬಹುದು. ಬಹುಪಯೋಗಿ ನೈಸರ್ಗಿಕ ನಾರುಗಳಲ್ಲಿ ಹತ್ತಿಯ ನಂತರ ಸೆಣಬಿಗೆ ಎರಡನೇ ಸ್ಥಾನ. ಪರಿಸರ ರಕ್ಷಣೆಯ ತುರ್ತಿನ ಇಂದಿನ ಕಾಲಮಾನದಲ್ಲಿ ಪರಿಸರಸ್ನೇಹಿ ಸೆಣಬಿಗೆ “ಬಂಗಾರದ ನಾರು" ಎಂಬುದು ಅನ್ವರ್ಥ ಹೆಸರು.
ಜಗತ್ತಿನ ಒಟ್ಟು ಸೆಣಬು ಉತ್ಪಾದನೆಯಲ್ಲಿ ಶೇಕಡಾ ೮೫ ಗಂಗಾ ನದಿಯ ಬಯಲಿನ ಕೊಡುಗೆ. ಆದ್ದರಿಂದಲೇ ಸೆಣಬಿನ ಉತ್ಪಾದನೆಯಲ್ಲಿ ಭಾರತಕ್ಕೆ ಜಗತ್ತಿನಲ್ಲಿ ಮೊದಲ ಸ್ಥಾನ. ಸೆಣಬಿನ ಉದ್ಯಮ ಸುಮಾರು ೪೦ ಲಕ್ಷ ಕುಟುಂಬಗಳಿಗೆ ಆಸರೆಯಾಗಿದೆ. ಜೊತೆಗೆ ೨೦ ಲಕ್ಷ ಕೈಗಾರಿಕಾ ಕಾರ್ಮಿಕರಿಗೆ ನೇರ ಉದ್ಯೋಗವನ್ನೂ, ಹತ್ತು ಲಕ್ಷ ಜನರಿಗೆ ಜೀವನೋಪಾಯವನ್ನೂ ಸೆಣಬು ಉದ್ಯಮ ಒದಗಿಸಿದೆ.
ಫೋಟೋ: ಸೆಣಬು ನೂಲು ಮತ್ತು ಚಾಪೆ; ಕೃಪೆ: ಡ್ರೀಮ್ಸ್ ಟೈಮ್.ಕೋಮ್
೪೧.ಸಕ್ಕರೆ ಬಳಕೆಯಲ್ಲಿ ಭಾರತಕ್ಕೆ ಜಗತ್ತಿನಲ್ಲೇ ಮೊದಲ ಸ್ಥಾನ
ಕಬ್ಬು ಮತ್ತು ಸಕ್ಕರೆಯ ತವರು ಭಾರತ ಎಂದು ಪರಿಗಣಿಸಲಾಗಿದೆ. ಪ್ರಾಚೀನ ಭಾರತದ ಧಾರ್ಮಿಕ ಗ್ರಂಥಗಳಲ್ಲಿ ಕಬ್ಬು ಕೃಷಿಯ ಬಗ್ಗೆ ಉಲ್ಲೇಖಗಳಿವೆ. ಚಕ್ರವರ್ತಿ ಅಲೆಗ್ಸಾಂಡರನ ಜೊತೆಗಿದ್ದ ಲೇಖಕರು, ಜೇನ್ನೊಣಗಳ ಸಹಾಯವಿಲ್ಲದೆ ಜೇನು ಉತ್ಪಾದಿಸುವ ಅದ್ಭುತ ಹುಲ್ಲು ಎಂದು ಕಬ್ಬನ್ನು ವರ್ಣಿಸಿದ್ದಾರೆ!
ಭಾರತದಲ್ಲಿ ಸಕ್ಕರೆ ಉದ್ಯಮ ಫ್ರೆಂಚರಿಂದ ೧೯ನೇ ಶತಮಾನದಲ್ಲಿ ಆರಂಭವಾಯಿತು. ಭಾರತ ೧೯೪೭ರಲ್ಲಿ ಸ್ವಾತಂತ್ರ್ಯ ಗಳಿಸಿದ ನಂತರ ವ್ಯವಸ್ಥಿತವಾದ ರೀತಿಯಲ್ಲಿ ಸಕ್ಕರೆ ಉದ್ಯಮದ ಅಭಿವೃದ್ಧಿ ಶುರುವಾಯಿತು. ಈಗ ಭಾರತದ ಆರ್ಥಿಕರಂಗದಲ್ಲಿ ಸಕ್ಕರೆ ಉದ್ಯಮಕ್ಕೆ ಪ್ರಧಾನ ಸ್ಥಾನ. ಅದಲ್ಲದೆ, ಸಕ್ಕರೆ ಉತ್ಪಾದನೆಯಲ್ಲಿ ಜಗತ್ತಿನಲ್ಲಿ ೨ನೇ ಸ್ಥಾನ ಪಡೆದಿರುವ ಭಾರತಕ್ಕೆ ಸಕ್ಕರೆ ಬಳಕೆಯಲ್ಲಿ ಜಗತ್ತಿನಲ್ಲೇ ಮೊದಲ ಸ್ಥಾನ.
೪೦.ಭಾರತದ ಕೃಷಿಗೆ ಜಾಗತಿಕ ಮಹತ್ವ
ಭಾರತ ಪ್ರಾಕೃತಿಕವಾಗಿ ಸಂಪನ್ನ ದೇಶ. ಇಲ್ಲಿನ ಫಲವತ್ತಾದ ಮಣ್ಣು, ವಿಸ್ತಾರವಾದ ಬಯಲುಗಳು, ಮುಂಗಾರು ಮತ್ತು ಹಿಂಗಾರು ಮಳೆ, ನೂರಾರು ನದಿಗಳು, ವಿಭಿನ್ನ ಹವಾಮಾನ, ಸಮೃದ್ಧ ಸೂರ್ಯನ ಬಿಸಿಲು - ಇವೆಲ್ಲವೂ ಹಲವು ವಿಧದ ಆಹಾರ ಬೆಳೆಗಳನ್ನೂ, ಹಣ್ಣು-ತರಕಾರಿ ಬೆಳೆಗಳನ್ನು ಬೆಳೆಸಲು ಸೂಕ್ತ ಪರಿಸರ ಒದಗಿಸಿವೆ. ಆದ್ದರಿಂದಲೇ ದೇಶದ ಬಹುಪಾಲು ಜನರಿಗೆ ಕೃಷಿ ಆದಾಯದ ಮುಖ್ಯ ಮೂಲವಾಗಿದೆ.
ಭಾರತದ ಆರ್ಥಿಕತೆಯ ಪ್ರಧಾನ ಅಂಗ ಕೃಷಿ. ಯಾಕೆಂದರೆ, ಆಹಾರ, ಹೈನಪಶುಗಳಿಗೆ ಮೇವು, ಹಲವು ಕೈಗಾರಿಕೆಗಳಿಗೆ ಕಚ್ಚಾವಸ್ತು ಮತ್ತು ಕೋಟಿಗಟ್ಟಲೆ ಜನರಿಗೆ ಉದ್ಯೋಗ ಒದಗಿಸುತ್ತಿದೆ.
ಕೃಷಿ ಉತ್ಪನ್ನಗಳಾದ ಸಕ್ಕರೆ, ಟೀ, ಕಾಫಿ, ಅಕ್ಕಿ, ತಂಬಾಕು ಮತ್ತು ಸಾಂಬಾರ ವಸ್ತುಗಳನ್ನು ಟನ್ನುಗಟ್ಟಲೆ ರಫ್ತು ಮಾಡಿ, ಕೋಟಿಗಟ್ಟಲೆ ರೂಪಾಯಿ ವಿದೇಶಿ ವಿನಿಮಯವನ್ನು ಗಳಿಸುತ್ತಿದೆ ಭಾರತ.
ಫೋಟೋ: ಹೊಲದಲ್ಲಿ ರೈತ
೩೯.ಜಗತ್ತಿನ ಆಹಾರ ಮತ್ತು ತರಕಾರಿ ವಹಿವಾಟಿನಲ್ಲಿ ಭಾರತದ ಪ್ರಧಾನ ಪಾತ್ರ
ಭಾರತದಲ್ಲಿ ವಿಭಿನ್ನ ಭೌಗೋಳಿಕ ಮತ್ತು ಹವಾಮಾನ ವಲಯಗಳು ಇರುವ ಕಾರಣ ಇಲ್ಲಿ ಉತ್ಪಾದನೆಯಾಗುವ ಹಣ್ಣು ಮತ್ತು ತರಕಾರಿಗಳ ವೈವಿಧ್ಯತೆ ಬೆರಗು ಹುಟ್ಟುಸುತ್ತದೆ. ಹಣ್ಣು ಉತ್ಪಾದನೆಯಲ್ಲಿ ಭಾರತಕ್ಕೆ ಜಗತ್ತಿನಲ್ಲೇ ಪ್ರಥಮ ಸ್ಥಾನ - ಜಗತ್ತಿನ ಒಟ್ಟು ಹಣ್ಣು ಉತ್ಪಾದನೆಯಲ್ಲಿ ಭಾರತದ ಪಾಲು ಶೇಕಡಾ ೮.
ತರಕಾರಿ ಉತ್ಪಾದನೆಯಲ್ಲಿ ಭಾರತಕ್ಕೆ ಜಗತ್ತಿನಲ್ಲಿ ಚೀನಾದ ನಂತರ ಎರಡನೇ ಸ್ಥಾನ - ಜಗತ್ತಿನ ಒಟ್ಟು ಉತ್ಪಾದನೆಯಲ್ಲಿ ಭಾರತದ ಪಾಲು ಶೇಕಡಾ ೧೫.
ಬಾಳೆಹಣ್ಣು, ಪಪ್ಪಾಯಿ, ಮಾವು, ಪೇರಳೆ ಮತ್ತು ಮ್ಯಾಂಗೋಸ್ಟೀನ್ ಹಣ್ಣುಗಳ ಉತ್ಪಾದನೆಯಲ್ಲಿ ಭಾರತಕ್ಕೆ ಜಗತ್ತಿನಲ್ಲೇ ಮೊದಲ ಸ್ಥಾನ. ಪ್ರತಿ ವರುಷ ಭಾರತದಿಂದ ರಫ್ತಾಗುವ ಹಣ್ಣು ಮತ್ತು ತರಕಾರಿಗಳ ಒಟ್ಟು ಮೌಲ್ಯ ರೂ.೬,೦೦೦ ಕೋಟಿಗಿಂತ ಅಧಿಕ.
೩೮.”ಆಪರೇಷನ್ ಫ್ಲಡ್” ಎಂಬ ಭಾರತದ ಮಹಾನ್ ಕ್ಷೀರ ಕ್ರಾಂತಿ
ಅದೊಂದು ಕಾಲವಿತ್ತು - ಭಾರತದ ಹಲವು ನಗರಗಳಲ್ಲಿ ಒಂದು ಲೀಟರ್ ಹಾಲಿಗಾಗಿ ಪರದಾಡಬೇಕಾದ ಕಾಲ. ಆದರೆ ಈಗ ಭಾರತದ ಎಲ್ಲ ಮಹಾನಗರ, ನಗರ ಮತ್ತು ಹಳ್ಳಿಗಳಲ್ಲಿ ಎಷ್ಟು ಬೇಕಾದರೂ ಹಾಲು ಲಭ್ಯ. ಇದಕ್ಕೆ ಕಾರಣ ಕ್ಷೀರಕ್ರಾಂತಿ.
ಇದೆಲ್ಲ ಶುರುವಾದದ್ದು ಹಾಲಿನ ಉತ್ಪಾದನೆ ಹೆಚ್ಚಿಸಲಿಕ್ಕಾಗಿ ರಾಷ್ಟ್ರೀಯ ಡೈರಿ ಅಭಿವೃದ್ಧಿ ನಿಗಮ (ಎನ್.ಡಿ.ಡಿ.ಬಿ.) ೧೯೭೦ರಲ್ಲಿ “ಆಪರೇಷನ್ ಫ್ಲಡ್” ಎಂಬ ಮಹಾಯೋಜನೆ ಜ್ಯಾರಿ ಮಾಡಿದಾಗ. ಇದು ಹಾಲಿನ ಕೊರತೆಯ ದೇಶವಾಗಿದ್ದ ಭಾರತವನ್ನು ಜಗತ್ತಿನ ಅತ್ಯಂತ ದೊಡ್ಡ ಹಾಲು ಉತ್ಪಾದಕ ದೇಶವಾಗಿ ಬದಲಾಯಿಸಿತು. ಇದರಿಂದಾಗಿ ಮಹಾನ್ ದೇಶ ಭಾರತದಲ್ಲಿ ಕೇವಲ ೩೦ ವರುಷಗಳಲ್ಲಿ ತಲಾ ಹಾಲಿನ ಲಭ್ಯತೆ ಇಮ್ಮಡಿಯಾಯಿತು; ಜೊತೆಗೆ ಹಾಲಿನ ಉತ್ಪಾದನೆ ಭಾರತದ ರೈತರ ಪ್ರಧಾನ ಆದಾಯದ ಮೂಲವಾಯಿತು.
ಗುಜರಾತಿನ ಆನಂದ್‌ನಲ್ಲಿ ಶುರುವಾದ ಹಾಲು ಉತ್ಪಾದಕರ ಸಹಕಾರಿ ಆಂದೋಲನದ ಮಾದರಿಯಲ್ಲೇ “ಆಪರೇಷನ್ ಫ್ಲಡ್” ಅನ್ನು ರೂಪಿಸಲಾಗಿತ್ತು. ಇದರ ಯಶಸ್ಸಿಗೆ ಎನ್.ಡಿ.ಡಿ.ಬಿ.ಯ ಅಧ್ಯಕ್ಷರಾಗಿದ್ದ ಡಾ. ವರ್ಗೀಸ್ ಕುರಿಯನ್ ಅವರ ಮುಂದಾಳುತನ ಪ್ರಧಾನ ಕಾರಣ. “ಅಮುಲ್" ಸ್ಥಾಪಕ ಚೇರ್-ಮನ್ ಆಗಿದ್ದ ಅವರು ಅದನ್ನು ೩೦ ವರುಷ ಮುನ್ನಡೆಸಿದವರು.
೩೭.ಅಮುಲ್: ಹಾಲು ಉತ್ಪಾದಕರ ಬೃಹತ್ ಒಕ್ಕೂಟ
ಅಮುಲ್ ಎಂದರೆ ಆನಂದ್ ಮಿಲ್ಕ್ ಯೂನಿಯನ್ ಲಿಮಿಟೆಡ್. ಗುಜರಾತಿನ ಆನಂದ್ ಎಂಬ ಊರಿನಲ್ಲಿ ಶುರುವಾದ ಹಾಲು ಉತ್ಪಾದಕರ ಪುಟ್ಟ ಸಂಘಟನೆ ಜಗತ್ತಿನ ಮುಂಚೂಣಿ ಹಾಲು ಮತ್ತು ಹಾಲಿನ ಉತ್ಪನ್ನಗಳ ಕೈಗಾರಿಕೆಯಾಗಿ ಬೆಳೆದ ಕಥೆ. ಈ ಸಹಕಾರಿ ಸಂಘಟನೆಯ ಯಶಸ್ಸಿಗೆ ಕಾರಣರು ಡಾ. ವರ್ಗೀಸ್ ಕುರಿಯನ್. ಅವರು ಇದನ್ನು ಮೂವತ್ತು ವರುಷಗಳ ಕಾಲ ಮುನ್ನಡೆಸಿದರು. ಅವರ ಪುಸ್ತಕ "ಐ ಹ್ಯಾಡ್ ಎ ಡ್ರೀಮ್” ಈ ವಿಸ್ಮಯದ ಯಶೋಗಾಥೆಯ ಕಥನ.
“ಅಮುಲ್" ಹಲವು ಜಾಗತಿಕ ದಾಖಲೆಗಳ ಸರದಾರ. ಇದು ಜಗತ್ತಿನ ಅತಿ ದೊಡ್ಡ ಪ್ಯಾಕೆಟ್ ಹಾಲಿನ ಬ್ರಾಂಡ್ ಮತ್ತು ಅತಿ ದೊಡ್ಡ ಸಸ್ಯಾಹಾರಿ ಚೀಸ್ ಬ್ರಾಂಡ್. ಜೊತೆಗೆ, ಭಾರತದ ಅತ್ಯಂತ ದೊಡ್ಡ ಆಹಾರ ವಸ್ತುಗಳ ಬ್ರಾಂಡ್ ಅಮುಲ್.
“ಅಮುಲ್" ೨.೮ ದಶಲಕ್ಷ ಉತ್ಪಾದಕ-ಸದಸ್ಯರನ್ನು ಹೊಂದಿದ್ದು, ಸರಾಸರಿ ಹಾಲಿನ ಸಂಗ್ರಹ ದಿನಕ್ಕೆ ೧೦.೬ ದಶಲಕ್ಷ ಲೀಟರ್. ಆನಂದ್‌ನಲ್ಲಿ “ಅಮುಲ್" ಸ್ಥಾಪನೆ ಭಾರತದಂತಹ ಮಹಾನ್ ದೇಶದಲ್ಲಿ “ಹಾಲಿನ ಕ್ರಾಂತಿ”ಗೆ ನಾಂದಿಯಾಯಿತು. “ಅಮುಲ್" ಮಾದರಿಯಲ್ಲೇ ಆಂಧ್ರಪ್ರದೇಶ, ಕರ್ನಾಟಕ, ಕೇರಳ, ತಮಿಳ್ನಾಡು ಇತ್ಯಾದಿ ರಾಜ್ಯಗಳು ಹಾಲು ಉತ್ಪಾದಕರ ಒಕ್ಕೂಟಗಳನ್ನು ಸ್ಥಾಪಿಸಿ, ಅವೆಲ್ಲವೂ ಯಶಸ್ವಿಯಾಗಿವೆ. ಇದರಿಂದಾಗಿ, ಭಾರತ ಜಗತ್ತಿನಲ್ಲೇ ಅತ್ಯಂತ ಬೃಹತ್ ಹಾಲು ಮತ್ತು ಹಾಲಿನ ಉತ್ಪನ್ನಗಳ ದೇಶವಾಗಿದೆ.
ಫೋಟೋ: ಅಮುಲ್ ಉತ್ಪನ್ನಗಳು
೩೬.ಎಮ್ಮೆ- ಭಾರತದ ಹೆಮ್ಮೆ
ಎಮ್ಮೆ ಮತ್ತು ಕೋಣಗಳು ಬಹಳ ಉಪಯೋಗಿ ಸಾಕುಪ್ರಾಣಿಗಳು. ಎಮ್ಮೆ ದನಕ್ಕಿಂತ ಹೆಚ್ಚು ಹಾಲು ಕೊಡುತ್ತದೆ; ಮಾಂಸವನ್ನೂ ಕೊಡುತ್ತದೆ. ಕೋಣಗಳನ್ನು ಉಳುಮೆ ಇತ್ಯಾದಿ ಕೃಷಿ ಕೆಲಸಗಳಲ್ಲಿ ಬಳಸುತ್ತಾರೆ.
ಎಮ್ಮೆಯ ಹಾಲನ್ನು ಮೊಸರು, ಬೆಣ್ಣೆ, ಚೀಸ್, ಯೋಗರ್ಟ್, ಹಾಲಿನ ಪುಡಿ ಇತ್ಯಾದಿ ಹೈನೋದ್ಯಮ ಉತ್ಪನ್ನಗಳನ್ನು ತಯಾರಿಸಲು ಬಳಸುತ್ತಾರೆ.
ಭಾರತದ ಎಮ್ಮೆ ಮತ್ತು ಕೋಣಗಳ ಸಂಖ್ಯೆ ಜಗತ್ತಿನಲ್ಲೇ ಅತ್ಯಧಿಕ. ಭಾರತದ ಪ್ರಸಿದ್ಧ ಎಮ್ಮೆ ತಳಿಗಳಾದ ಮುರಾ ಮತ್ತು ಮೆಹ್‌ಸಾನಾ ವಾಣಿಜ್ಯ ಡೈರಿಗೂ ಸೂಕ್ತವಾಗಿವೆ. ಕರ್ನಾಟಕದ ದಕ್ಷಿಣ ಕನ್ನಡದಲ್ಲಿ ಕೋಣಗಳ ಓಟದ ಸ್ಪರ್ಧೆ “ಕಂಬಳ" ಜನಪ್ರಿಯ ಕ್ರೀಡೆ ಮತ್ತು ಜಗತ್-ಪ್ರಸಿದ್ಧ. ಮಳೆಗಾಲದ ನಂತರ ವರುಷವಿಡೀ ಅಲ್ಲಲ್ಲಿ ಕಂಬಳ ನಡೆಯುತ್ತಲೇ ಇರುತ್ತದೆ.
