My Books
ಲೇಖಕರು: ಡಾ. ಕೆ. ಆರ್. ಶ್ರೀಧರ್
ಪ್ರಕಾಶಕರು: ಕರ್ನಾಟಕ ರಾಜ್ಯ ವಿಜ್ನಾನ ಪರಿಷತ್ತು, ಬೆಂಗಳೂರು
ಪ್ರಕಟಣೆ: 2013 ಪುಟ: 80 ಬೆಲೆ: ರೂ. 50/-
ಈಗಿನ ದಿನಗಳಲ್ಲಿ ನಮ್ಮ ಮಕ್ಕಳಿಗೆ ಮನೆಯಲ್ಲಿ ಏನು ಕಲಿಸುತ್ತಿದ್ದೇವೆ? ಶಾಲೆಗಳಲ್ಲಿ ಏನು ಕಲಿಸಲಾಗುತ್ತಿದೆ? ಎಂದು ಒಂದು ಕ್ಷಣ ಯೋಚಿಸಿ. ಈಗ ಶೇಕಡಾ 80ರಷ್ಟು ಕುಟುಂಬಗಳು ಒಂಟಿ ಕುಟುಂಬಗಳಾಗಿವೆ. ಅಲ್ಲಿ ಮಕ್ಕಳಿಗೆ ಒಳ್ಳೆಯ ಮೌಲ್ಯಗಳನ್ನು ಕಲಿಸಲು ಅಜ್ಜ-ಅಜ್ಜಿಯರು ಹಾಗೂ ಹಿರಿಯರು ಆ ಕುಟುಂಬಗಳಲಿಲ್ಲ. ಹೆತ್ತವರಿಗಂತೂ ಮನೆಗೆಲಸಗಳ ನಿರ್ವಹಣೆ ಮತ್ತು ವೃತ್ತಿಯ ಒತ್ತಡದಿಂದಾಗಿ ಮಕ್ಕಳ ಜೊತೆ ನಿರಾಳವಾಗಿ ಸಮಯ ಕಳೆಯಲು ಸಾಧ್ಯವಾಗುತ್ತಿಲ್ಲ. ಶಾಲೆಗಳಲ್ಲಂತೂ ಸಿಲೆಬಸ್ಸಿನಲ್ಲಿ ಕಡ್ಡಾಯ ಮಾಡಿದ್ದನ್ನಷ್ಟೇ ಕಲಿಸಲಾಗುತ್ತಿದೆ.
ಇನ್ನು ವಾರ್ತಾ ಚಾನೆಲುಗಳಲ್ಲಿ, ಅಂತರ್ಜಾಲದಲ್ಲಿ, ಸಾಮಾಜಿಕ ಮಾಧ್ಯಮಗಳಲ್ಲಿ ರಾಶಿರಾಶಿ ಮಾಹಿತಿ ಸ್ಫೋಟವಾಗುತ್ತಿದೆ. ಆದರೆ ಅದರಲ್ಲಿ ಸಮಾಜಮುಖಿಯಾದ ಮಾಹಿತಿ ಹುಡುಕಿದರೂ ಸಿಗದು. ಇದರಿಂದಾಗಿ ಇಂದಿನ ಮಕ್ಕಳಿಗೆ ಜೀವನ ಕೌಶಲಗಳನ್ನು ಕಲಿಯಲು ಅವಕಾಶವೇ ಇಲ್ಲವಾಗಿದೆ.
ಈ ಹಿನ್ನೆಲೆಯಲ್ಲಿ, ಪ್ರಸಿದ್ಧ ಮನೋವೈದ್ಯಕೀಯ ಪರಿಣತರೂ ಕನ್ನಡದ ವೈದ್ಯಸಾಹಿತಿಯೂ ಆಗಿರುವ ಡಾ. ಕೆ. ಆರ್ ಶ್ರೀಧರ್ ಅವರ ಈ ಕೃತಿ ಉಲ್ಲೇಖಿತ ಕೊರತೆಯನ್ನು ನೀಗಲು ಅಗತ್ಯವಾದ ಪ್ರಾಥಮಿಕ ಮಾಹಿತಿಯನ್ನು ಒಳಗೊಂಡಿದೆ. ಇದರಲ್ಲಿ ಲೇಖಕರು ಈ ಕೆಳಗಿನ ಜೀವನ ಕೌಶಲಗಳ ಬಗ್ಗೆ ಸರಳ ಭಾಷೆಯಲ್ಲಿ ಉಪಯುಕ್ತ ಮಾಹಿತಿ ನೀಡಿದ್ದಾರೆ:
1) ಆಹಾ ಇದೇನು ದೊಡ್ಡ ಸಮಸ್ಯೆಯಲ್ಲ (Problem Solving)
2) ಅಂತಿಮ ತೀರ್ಮಾನಕ್ಕೆ ಬೇಕು ಜಾಣತನ (Decision Making)
3) ಏನು? ಎಲ್ಲಿ? ಹೇಗೆ? ಎಂಬುದನ್ನು ಯೋಚಿಸಿ - ವಿಮರ್ಶಾತ್ಮಕ ಆಲೋಚನೆ (Critical Thinking)
ಲೇಖಕರು: ವಿವಿಧ ಲೇಖಕರು; ಪಳಕಳ ಸೀತಾರಾಮ ಭಟ್ಟ ಮತ್ತು ಇತರರು
ಪ್ರಕಾಶಕರು: ನವಕರ್ನಾಟಕ ಪ್ರಕಾಶನ, ಬೆಂಗಳೂರು
ಒಂಬತ್ತನೇ ಮುದ್ರಣ: 2017 ಪುಟ: 124 ಬೆಲೆ: ರೂ. 50/-
ಮಕ್ಕಳಿಗಾಗಿ ಮಕ್ಕಳ ಸಾಹಸ ಕತೆಗಳ ಸಂಕಲನವಿದು. ನವಕರ್ನಾಟಕ ಪ್ರಕಾಶನ ಪ್ರಕಟಿಸಿರುವ ಇದರಲ್ಲಿ ವಿವಿಧ ಲೇಖಕರ 17 ಕತೆಗಳಿವೆ.
ಇವುಗಳ ಲೇಖಕರು ಪಳಕಳ ಸೀತಾರಾಮ ಭಟ್ಟ, ಬೇಬಿ ಎಮ್. ಮಣಿಯಾಟ್, ಮತ್ತೂರು ಸುಬ್ಬಣ್ಣ, ಗಣೇಶ ಪಿ. ನಾಡೋರ, ಎನ್ಕೆ. ಸುಬ್ರಹ್ಮಣ್ಯ, ದು. ನಿಂ. ಬೆಳಗಲಿ, ನೀಲಾಂಬರಿ ಮತ್ತು ಸಹನ.
ಅಮ್ಮ ಹೇಳುತ್ತಿದ್ದ ಶೌರ್ಯದ ಕತೆಗಳನ್ನು ಕೇಳುತ್ತಾ ಬೆಳೆದಿದ್ದ ಶಿವಾಜಿ ಆ ಕತೆಗಳಿಂದ ಬಹಳ ಪ್ರಭಾವಿತನಾಗಿದ್ದ; ಮುಂದೆ ಅವನು ಒಬ್ಬ ಧೀರ ಯೋಧನಾಗಿ ರೂಪುಗೊಂಡು ಮರಾಠಾ ಸಾಮ್ರಾಜ್ಯ ಕಟ್ಟುವ ಸಾಧನೆ ಮಾಡಲು ಆತ ಬಾಲ್ಯದಲ್ಲೇ ಮಾನಸಿಕ ಸಿದ್ಧತೆ ಮಾಡಿದ್ದ ಎಂಬ ಪ್ರತೀತಿಯಿದೆ.
ಈಗಿನ ಮಕ್ಕಳಿಗೆ ಅಂಥ ಕತೆಗಳನ್ನು ಹೇಳಿ ಅವರನ್ನು ಆತ್ಮವಿಶ್ವಾಸದ ಮನುಷ್ಯರನ್ನಾಗಿ ರೂಪಿಸುವವರು ಯಾರು? ಈಗ ನಗರಗಳಲ್ಲಿ ವಾಸವಿರುವ ಕುಟುಂಬಗಳಲ್ಲಿ ಮಕ್ಕಳಿಗೆ ಕತೆ ಹೇಳಲು ಅಜ್ಜ-ಅಜ್ಜಿಯರಿಲ್ಲ. ಹೆತ್ತವರಿಗಂತೂ ಮಕ್ಕಳೊಂದಿಗೆ ಇರಲು ಸಮಯವೇ ಇಲ್ಲ. ಇನ್ನು ಶಾಲೆಗಳಲ್ಲಿ ಏನನ್ನು ಕಲಿಸುತ್ತಾರೆ? ಸಿಲೆಬಸ್‌ನಲ್ಲಿ ನಿಗದಿ ಪಡಿಸಿದ್ದನ್ನು ಕಲಿಸುತ್ತಾರೆ. ಭಾರತದ ಸಾವಿರಾರು ವರುಷಗಳ ಸಮೃದ್ಧ ಪರಂಪರೆಯ ಕತೆಗಳನ್ನು, ಚಾರಿತ್ರಿಕ ವೀರರ ಕತೆಗಳನ್ನು ತಿಳಿಸಲು ಆ ಸಿಲೆಬಸ್‌ಗಳು ಅವಕಾಶ ನೀಡುವುದಿಲ್ಲವೆಂದೇ ಹೇಳಬೇಕು. ಪಠ್ಯಪುಸ್ತಕಗಳದ್ದಂತೂ ದೊಡ್ಡ ರಾದ್ಧಾಂತ. ಒಂದು ಸರಕಾರವಿದ್ದಾಗ ಅವುಗಳಿಗೆ ಸೇರ್ಪಡೆಗೊಳಿಸಿದ ಭಾರತದ ಪಾರಂಪರಿಕ ಹಾಗೂ ಚಾರಿತ್ರಿಕ ಪಠ್ಯಗಳನ್ನೂ ಇನ್ನೊಂದು ಸರಕಾರ ಕಿತ್ತು ಹಾಕುವ ರಾಜಕೀಯ!
ಸಂಪಾದಕರು: ಡಾ. ಸೂರ್ಯನಾಥ ಕಾಮತ
ಪ್ರಕಾಶಕರು: ನ್ಯಾಷನಲ್ ಬುಕ್ ಟ್ರಸ್ಟ್, ನವದೆಹಲಿ
ಎರಡನೇ ಮುದ್ರಣ: 2021 ಪುಟ: 68 ಬೆಲೆ: ರೂ. 40/-
ಭಾರತದ ಸ್ವಾತಂತ್ರ್ಯ ಸಂಗ್ರಾಮದ ಕಾಲದಲ್ಲಿ ಹಲವು ಹಾಡುಗಳು ಹೋರಾಟದ ಕಿಚ್ಚು ಹಚ್ಚಿಸುತ್ತಿದ್ದವು. ಸಭೆಗಳಲ್ಲಿ, ಪ್ರತಿಭಟನೆಗಳಲ್ಲಿ, ಮೆರವಣಿಗೆಗಳಲ್ಲಿ ಜನಸಾಮಾನ್ಯರೂ ಮುಕ್ತಕಂಠದಿಂದ ಹಾಡುತ್ತಿದ್ದ ಗೀತೆಗಳು ನೂರಾರು. ದೀರ್ಘ ಹೋರಾಟದ ಅವಧಿಯಲ್ಲಿ ಜನರ ಉತ್ಸಾಹ ಹೆಚ್ಚುವಂತೆ ಮಾಡುವಲ್ಲಿ ಇಂತಹ ಗೇಯಪದಗಳ ಕೊಡುಗೆಗೆ ಬೆಲೆ ಕಟ್ಟಲಾಗದು. ಕೆಲವು ಗೇಯಪದಗಳಂತೂ ಕೆಲವೇ ನಿಮಿಷಗಳಲ್ಲಿ ಹಾಡುತ್ತಿದ್ದವರ ಮೈಮನಗಳಲ್ಲಿ ರೋಮಾಂಚನ ಹುಟ್ಟಿಸುತ್ತಿದ್ದವು. ಗುಂಪಿನಲ್ಲಿ ಹಾಡುವಾಗಲಂತೂ ಪ್ರತಿಯೊಬ್ಬರಿಗೂ ಹಾಡು ಹಾಡುತ್ತಾ ಭೀಮಬಲ ಬಂದಂತೆ ಅನಿಸುತ್ತಿತ್ತು.
ಕಾಲ ಸರಿದಂತೆ ಅಂತಹ ಅದ್ಭುತ ಗೇಯಪದಗಳು ಸಮುದಾಯದ ನೆನಪಿನಿಂದ ಮರೆಯಾಗುತ್ತಿವೆ. ಆದರೆ, ಅಂದಿನ ಹೋರಾಟದ, ತ್ಯಾಗದ, ಬಲಿದಾನದ ನೆನಪುಗಳನ್ನು ಜೀವಂತವಾಗಿರಿಸಲು ಆ ಗೇಯಪದಗಳನ್ನು ಸಮುದಾಯದ ನೆನಪಿನಲ್ಲಿ ಉಳಿಸುವುದು ಅತ್ಯಗತ್ಯ. ಆ ಪವಿತ್ರ ಕೆಲಸವನ್ನು ಸಮರ್ಥವಾಗಿ ಮಾಡಿದೆ “ಬಿಡುಗಡೆಯ ಹಾಡುಗಳು” ಎಂಬ ಈ ಸಂಕಲನ.
ಲೇಖಕರು: ವಿವಿಧ ಲೇಖಕರು
ಪ್ರಕಾಶಕರು: ನವಕರ್ನಾಟಕ ಪ್ರಕಾಶನ, ಬೆಂಗಳೂರು
ಆರನೇ ಮುದ್ರಣ: 2016 ಪುಟ: 96 ಬೆಲೆ: ರೂ.50/-
ನವಕರ್ನಾಟಕ ಪ್ರಕಾಶನದ “ಕಿರಿಯರ ಕಥಾಮಾಲೆ”ಯಲ್ಲಿ ಪ್ರಕಟವಾಗಿರುವ ಈ ಸಂಕಲನದಲ್ಲಿ ವಿವಿಧ ಲೇಖಕರ 13 ಕತೆಗಳಿವೆ. ಪ. ರಾಮಕೃಷ್ಣ ಶಾಸ್ತ್ರಿ, ಪಳಕಳ ಸೀತಾರಾಮ ಭಟ್ಟ, ಸಂಪಟೂರು ವಿಶ್ವನಾಥ್, ದೊಡ್ಡಬಾಣಗೆರೆ ಪ್ರಕಾಶಮೂರ್ತಿ ಮತ್ತು ವಿ. ರಾಮಚಂದ್ರ ಶಾಸ್ತ್ರಿ ಬರೆದಿರುವ ಕತೆಗಳು.
ಯಾವುದೇ ಸಮಾಜದಲ್ಲಿ ವ್ಯಕ್ತಿಗಳ ನೀತಿ-ನಡತೆಯು ಆ ಸಮಾಜದ ಸಹಜೀವನ, ಶಾಂತಿ ಹಾಗೂ ನೆಮ್ಮದಿಗೆ ಕಾರಣವಾಗುತ್ತದೆ. ಇವುಗಳನ್ನು ಬಾಲ್ಯದಲ್ಲಿಯೇ ರೂಪಿಸುವುದು ಬಹಳ ಅಗತ್ಯ ಮತ್ತು ಇದು ನಿರಂತರವಾಗಿ ನಡೆಯಬೇಕಾದ ಕಾಯಕ. 1950-60ರ ದಶಕದ ವರೆಗೆ ನಮ್ಮ ದೇಶದ ಶೇಕಡಾ 80ರಷ್ಟು ಜನರು ಗ್ರಾಮೀಣ ಪ್ರದೇಶದಲ್ಲಿದ್ದರು. ಅಲ್ಲೆಲ್ಲ ಕೂಡುಕುಟುಂಬಗಳಲ್ಲಿ ಜನರ ಬದುಕು. ಆ ಕುಟುಂಬಗಳ ಅಜ್ಜ-ಅಜ್ಜಿಯರು, ಹಿರಿಯರು ಮಕ್ಕಳಿಗೆ ದಿನದಿನವೂ ಕತೆಗಳನ್ನು ಹೇಳುತ್ತಿದ್ದರು: ರಾಮಾಯಣದ, ಮಹಾಭಾರತದ, ಪಂಚತಂತ್ರದ, ಪುರಾಣಗಳ ಹಾಗೂ ಜನಪದದ ಕತೆಗಳು. ಇವು ಮಕ್ಕಳ ನೀತಿ-ನಡತೆ ರೂಪಿಸಲು ಪೂರಕವಾಗಿದ್ದವು. ಜೊತೆಗೆ ಆ ಹಿರಿಯರ ನಡತೆಯನ್ನೂ ಮಕ್ಕಳು ಸೂಕ್ಷ್ಮವಾಗಿ ಗಮನಿಸುತ್ತಲೇ ಕಲಿಯುತ್ತಿದ್ದರು. ಅದಕ್ಕೇ ಹೇಳೋದು “ಮನೆಯೇ ಮೊದಲ ಪಾಠಶಾಲೆ” ಎಂದು. ಆದರೆ ಈಗ ಶೇಕಡಾ 50ರಷ್ಟು ಜನರು ನಗರಗಳಲ್ಲೇ ವಾಸ ಮಾಡುತ್ತಿದ್ದಾರೆ - ಒಂಟಿ ಕುಟುಂಬಗಳಲ್ಲಿ. ಈ ಕುಟುಂಬಗಳಲ್ಲಿ ಹೆತ್ತವರಿಗೆ ಮಕ್ಕಳೊಂದಿಗೆ ಮಾತನಾಡಲಿಕ್ಕೂ ಸಮಯವಿರುವುದಿಲ್ಲ. ತಮ್ಮ ದಿನನಿತ್ಯದ ಜಂಜಡಗಳಲ್ಲೇ ಅವರು ಹೈರಾಣಾಗಿರುತ್ತಾರೆ. ಇನ್ನು ಮಕ್ಕಳಿಗೆ ಕತೆ ಹೇಳಲು ಪುರುಸೊತ್ತು ಎಲ್ಲಿರುತ್ತದೆ? ಆದ್ದರಿಂದ ಇಂದಿನ ಕಾಲದಲ್ಲಿ ಇಂತಹ ಪುಸ್ತಕಗಳು ಮುಖ್ಯವಾಗುತ್ತವೆ.
ಲೇಖಕ: ಕೆ.ಪಿ. ಪೂರ್ಣಚಂದ್ರ ತೇಜಸ್ವಿ
ಪ್ರಕಾಶಕರು: ಪುಸ್ತಕ ಪ್ರಕಾಶನ, ಸರಸ್ವತಿಪುರಂ, ಮೈಸೂರು
15ನೇ ಮುದ್ರಣ: 2022 ಪುಟ: 82 ಬೆಲೆ: ರೂ. 84/-
ಭಾರತದ ದಟ್ಟ ಕಾಡುಗಳ ಜನರ ಮತ್ತು ನರಭಕ್ಷಕ ಪ್ರಾಣಿಗಳ ಬದುಕನ್ನು ಆಪ್ತವಾಗಿ, ಮನಸೂರೆಗೊಳ್ಳುವ ಸಾಹಿತ್ಯವಾಗಿ ದಾಖಲಿಸಿದ ಕೆನೆತ್ ಆಂಡರ್ಸನ್ ಅವರ ಅನುಭವಗಳ ಸಂಗ್ರಹ ರೂಪಾಂತರ ಇದು.
ಇದರಲ್ಲಿವೆ ನಾಲ್ಕು ಕಥನಗಳು. “ದಿಗುವಮೆಟ್ಟದ ಕೊಲೆಗಡುಕ” ಮೊದಲನೆಯ ಕಥನ. ಆಂಧ್ರಪ್ರದೇಶದ ಗುಂತಕಲ್ ರೈಲ್ವೆ ಜಂಕ್ಷನಿನಿಂದ ಪೂರ್ವಕ್ಕೆ ರೈಲಿನಲ್ಲಿ ಸಾಗಿದರೆ ಸಿಗುವ ಪಟ್ಟಣ ನಂದ್ಯಾಲ್. ಮುಂದುವರಿದರೆ, ಬಸವಪುರ ಸ್ಟೇಷನಿನ ನಂತರ ಒಂದು ಚಿಕ್ಕ ಮತ್ತೊಂದು ಬಹಳ ಉದ್ದದ ಸುರಂಗಗಳು ಸಿಗುತ್ತವೆ. ತದನಂತರ ಸಿಗುವ ಸ್ಟೇಷನ್ ದಿಗುವಮೆಟ್ಟ. ಅದೊಮ್ಮೆ ಆಂಡರ್ಸನ್ ಅಲ್ಲಿಗೆ ಹೋಗಿ, ರೈಲ್ವೆ ಸ್ಟೇಷನಿನಿಂದ ಒಂದು ಮೈಲು ದೂರದ ಅರಣ್ಯ ಇಲಾಖೆಯ ಟಿಬಿಯಲ್ಲಿ ಉಳಿಯುತ್ತಾರೆ. ಅಲ್ಲಿನ ಟಿಬಿ ಮೇಟಿ ಅಲೀಂ ಖಾನ್. ಅವನಿಗೆ ಇಬ್ಬರು ಹೆಂಡತಿಯರು. ಈಗ ಅವನ ವಿಧವೆ ತಂಗಿಯೂ ಇಲ್ಲೇ ವಾಸ. ಆಂಡರ್ಸನ್ ವಿರಮಿಸಿದ ನಂತರ ಅಲೀಂಖಾನ್ ನೆಲದಲ್ಲಿ ಕುಳಿತು ತನ್ನ ಸಂಸಾರ ತಾಪತ್ರಯಗಳನ್ನು ಕೊರೆಯತೊಡಗಿದ. ಅನಂತರ ಅಲ್ಲಿ ಎಲ್ಲರಿಗೂ ಪೀಡೆ ಕೊಡುತ್ತಿದ್ದ ಒಂದು ಚಿರತೆಯ ಬಗ್ಗೆಯೂ ಹೇಳಿದ.
ಮರುದಿನ ರಾತ್ರಿ ಆ ಚಿರತೆ ಅಲೀಂಖಾನನ ತಂಗಿಯ ನಾಯಿಯನ್ನು ಹೊತ್ತೊಯ್ದಿತು. ಆಂಡರ್ಸನ್ ತಕ್ಷಣವೇ ಅದನ್ನು ಹಿಂಬಾಲಿಸಿ ಹೋದರೂ ಅದು ಕಾಡಿನೊಳಗೆ ಓಡಿ ಹೋಯಿತು. ಅನಂತರ ಟಾರ್ಚ್ ಬೆಳಕಿನಲ್ಲಿ ಎರಡು ಗಂಟೆ ಅವರು ಸುತ್ತಮುತ್ತಲೆಲ್ಲ ಹುಡುಕಾಡಿದರೂ ಅದು ಪತ್ತೆಯಾಗಲಿಲ್ಲ. ಮರುದಿನ ರಾತ್ರಿ ಟಿಬಿ ಹತ್ತಿರ ಇನ್ನೊಂದು ನಾಯಿಯನ್ನು ಕಟ್ಟಿ ಚಿರತೆಯ ಬರವಿಗಾಗಿ ಕಾದರೆ ಅದು ಬರಲೇ ಇಲ್ಲ. ಮರುದಿನ ಆಂಡರ್ಸನ್ ಬೆಂಗಳೂರಿಗೆ ಹಿಂತಿರುಗಿದರು.
ಲೇಖಕಿ: ಎಸ್.ಬಿ. ಸರಸ್ವತಿ
ಪ್ರಕಾಶಕರು: ಸಾಹಿತ್ಯ ಪ್ರಕಾಶನ, ಕೊಪ್ಪೀಕರ್ ಬೀದಿ, ಹುಬ್ಬಳ್ಳಿ
2ನೇ ಮುದ್ರಣ: 2013 ಪುಟ: 200 ಬೆಲೆ: ರೂ. 150/-
ಬಾಲ್ಯದಲ್ಲಿ ಅಜ್ಜ ಅಜ್ಜಿಯರಿಂದ ಜಾನಪದ ಕತೆಗಳನ್ನು ಕೇಳಿದವರಿಗೆ ಗೊತ್ತು ಅವುಗಳ ಸೊಗಡು. ಅವು ಚಿರನೂತನ ಕತೆಗಳು. ಈ ಸಂಗ್ರಹದಲ್ಲಿವೆ 42 ಜಾನಪದ ಕತೆಗಳು. “ಸುಮಾರು 70 ವರ್ಷದ ಹಿಂದೆಯೇ ಹುಬ್ಬಳ್ಳಿಯಲ್ಲಿ ಪ್ರಕಟಗೊಂಡಿದ್ದ ಜಾನಪದ ಕಥೆಗಳ ಸಂಕಲನದಲ್ಲಿವನ್ನು ಸಂಗ್ರಹಿಸಿ, ತಿದ್ದಿ, ಒಂದು ಆಕಾರವನ್ನು ಕೊಟ್ಟು, ಈ ಪುಸ್ತಕವನ್ನು ಬರೆದಿದ್ದೇನೆ” ಎಂದು “ನನ್ನುಡಿ"ಯಲ್ಲಿ ತಿಳಿಸಿದ್ದಾರೆ ಲೇಖಕಿ ಎಸ್.ಬಿ. ಸರಸ್ವತಿ.
ಲೇಖಕರು: ಕೆ.ಪಿ. ಪೂರ್ಣಚಂದ್ರ ತೇಜಸ್ವಿ
ಪ್ರಕಾಶಕರು: ಪುಸ್ತಕ ಪ್ರಕಾಶನ, ಸರಸ್ವತಿ ಪುರಂ, ಮೈಸೂರು
18ನೇ ಮುದ್ರಣ: 2022 ಪುಟ: 86 ಬೆಲೆ: ರೂ. 84/-
ನರಭಕ್ಷಕ ಹುಲಿಗಳ ಬೇಟೆಯ ಮೈನವಿರೇಳಿಸುವ ಇನ್ನೊಂದು ಕಥನ ಇದು. ಇಂಗ್ಲಿಷಿನಲ್ಲಿ ಕೆನೆತ್ ಆಂಡರ್ಸನ್ ಬರೆದಿರುವ ಈ ಅನುಭವಗಳನ್ನು ಅನುವಾದಿಸಿ, ಸಂಗ್ರಹ ರೂಪಾಂತರವಾಗಿ ನೀಡಿದ್ದಾರೆ ಪೂರ್ಣಚಂದ್ರ ತೇಜಸ್ವಿ.
ಲೇಖಕರು: ಶಿವಾನಂದ ಕಳವೆ
ಪ್ರಕಾಶಕರು: ಚೇತನಾ ಸಹಕಾರಿ ಪ್ರಕಾಶನ, ಶಿರಸಿ
ಪ್ರಕಟ: 2004 ಪುಟ: 96 ಬೆಲೆ: ರೂ.45/-
ಉತ್ತರ ಕನ್ನಡದ ಪರಿಸರ ಲೇಖಕ ಶಿವಾನಂದ ಕಳವೆಯವರು 1994ರಿಂದೀಚೆಗೆ ಒಂದು ದಶಕದ ಅವಧಿಯಲ್ಲಿ ರಾಜ್ಯದ ವಿವಿಧ ಭಾಗದಲ್ಲಿ ಅಲೆದಾಡಿದಾಗಿನ ಅನುಭವವನ್ನು ಈ ಪುಸ್ತಕದಲ್ಲಿ ದಾಖಲಿಸಿದ್ದಾರೆ. ಇಲ್ಲಿನ 31 ಬರಹಗಳು “ವಿಜಯ ಕರ್ನಾಟಕ” ದಿನಪತ್ರಿಕೆಯಲ್ಲಿ ಅಂಕಣ ಬರಹಗಳಾಗಿ ಪ್ರಕಟವಾಗಿದ್ದವು.
ಶಿವಾನಂದ ಕಳವೆ ಪುಸ್ತಕದ “ಮೊದಲ ಮಾತಿ”ನಲ್ಲಿ “ಚಿಟ್ಟೆ ಹಾರಾಡಿದ್ದರ” ಹಿನ್ನೆಲೆಯನ್ನು ಹೇಳುತ್ತಾರೆ: “ಮರದ ಉಂಗುರ ವಿಶ್ಲೇಷಣೆಯಲ್ಲಿ ನೆಲದ ಪರಿಸರ ಚರಿತ್ರೆ ಸಾಧ್ಯ. ಡೆಂಡ್ರಾಕ್ರೊನಾಲಜಿ ತಜ್ನರ ವರದಿಗಳು ಮರಗಳ ಜೊತೆ ಮಾತಾಡಲು ಹೇಳಿದವು. ಪಾತರಗಿತ್ತಿಯೆಂಬ ಮಕರಂದ ಮೋಹಿನಿ ಸೆರಗಲ್ಲಿ ಮಾಹಿತಿ ಕಣಜವೇ ಇದೆಯೆಂದು ತಿಳಿದಾಗ ಒಡನಾಡಿದ ಅರಣ್ಯ ಮುಖ ಅಪರಿಚಿತ. ಈ ವರೆಗಿನ ಅರಿವು ಕುಬ್ಜ. ವಾರ್ಷಿಕ 4,000 ಮಿಲಿ ಮೀಟರ್ ಅಬ್ಬರದ ಮಳೆಯಲ್ಲಿ ತೋಯ್ದ ಕರಾವಳಿಯಿಂದ ಆರಂಭಿಸಿ 400 ಮಿಲಿ ಮೀಟರ್ ಮಳೆ ನೆಲದ ಸಸ್ಯಜ್ನಾನ ಖುದ್ದು ನೋಡಿದಾಗ ಕಲಿಯುವ ಬೆಟ್ಟ ಬೇಕಾದಷ್ಟಿದೆ. ಸತ್ಯ ದರ್ಶನ, ಮರ, ಗಿಡ ಮುಳ್ಳುಕಂಟಿಗಳೇ ಮೇಷ್ಟ್ರುಗಳಾಗಿ ಪಾಠ ಹೇಳಿದವು. ಸಂರಕ್ಷಣೆ, ಜನಬಲ ಸಂಕಲ್ಪದಲ್ಲಿ ಕಲ್ಲುಗುಡ್ಡಗಳಲ್ಲಿ ಅರಳಿ ಅರಣ್ಯ ಜನನದ ಅಂತರಂಗ ಕೇಳಿ ಬಂತು. ಚಿಟ್ಟೆ ಹಾರಾಡಿತು.”
ಲೇಖಕ: ಸಂದೀಪ ನಾಯಕ
ಪ್ರಕಾಶಕರು: ಛಂದ ಪುಸ್ತಕ, ಬನ್ನೇರುಘಟ್ಟ ರಸ್ತೆ, ಬೆಂಗಳೂರು
ಪ್ರಕಟ: 2009 ಪುಟ: 128 ಬೆಲೆ: ರೂ.60/-
ಛಂದ ಪುಸ್ತಕ 2009ನೇ ಸಾಲಿನ ಬಹುಮಾನ ಪಡೆದ ಕಥಾಸಂಕಲನ ಇದು. ಕಥಾಸ್ಪರ್ಧೆಯ ತೀರ್ಪುಗಾರರಾದ ಅಮರೇಶ ನುಗಡೋಣಿ ಹತ್ತಾರು ಕತೆಗಾರರ ಸುಮಾರು 100 ಕತೆಗಳನ್ನು ಓದಿ, ಇದನ್ನು ಆಯ್ಕೆ ಮಾಡಿದ್ದಾರೆ.
"ತೀರ್ಪುಗಾರರ ಮಾತಿ”ನಲ್ಲಿ ಅವರು ಹೀಗೆ ಬರೆದಿದ್ದಾರೆ: “ಈ ಸಂಕಲನದಲ್ಲಿ ಹನ್ನೆರಡು ಕಥೆಗಳಿವೆ. ಹತ್ತು ವರ್ಷಗಳ ಅವಧಿಯಲ್ಲಿ ಈ ಕಥೆಗಳು ರಚನೆಯಾಗಿವೆ. ಸಂದೀಪ ನಾಯಕರ ಕಥೆಗಳು ಸಮಾನತೆಯನ್ನು ಕಾಯ್ದುಕೊಂಡಿವೆ. ಪಾತ್ರಗಳ ಸೃಷ್ಟಿಯಲ್ಲಾಗಲಿ, ಸನ್ನಿವೇಶಗಳ ನಿರ್ಮಾಣದಲ್ಲಾಗಲಿ, ಉದ್ಭವಿಸುವ ಸಮಸ್ಯೆಯಲ್ಲಾಗಲಿ, ದೃಷ್ಟಿಧೋರಣೆಯಲ್ಲಾಗಲಿ, ಕಥೆಯ ನಿರೂಪಣೆಯಲ್ಲಾಗಲಿ, ಭಾಷೆಯ ಬಳಕೆಯಲ್ಲಾಗಲಿ, ಒಟ್ಟು ಕಥನಕ್ರಮದಲ್ಲಾಗಲಿ ಏಕರೂಪತೆಯನ್ನು ಹೊಂದಿವೆ. ಏರುಗತಿಯಲ್ಲಾಗಲಿ, ಏರುಪೇರಾಗಲಿ ಇಲ್ಲ. ಒಂದು ಹದವನ್ನು ಕಾಯ್ದುಕೊಂಡಿವೆ. ಇದನ್ನು ಒಂದು ಗುಣವೆಂದು ಭಾವಿಸಬಹುದು. ಸಂದೀಪ ನಾಯಕರ ಆರಂಭದ ಈ ಕಥೆಗಳ ಸಾಧನೆ ಮೆಚ್ಚುಗೆಯಾಗುತ್ತದೆ.”
ಇದರಲ್ಲಿರುವ ಕತೆಗಳ ಪಾತ್ರಗಳದ್ದು ಸೀಮಿತ ಲೋಕದ ಸೀಮಿತ ಬದುಕು. ಹಾಗಾಗಿ ಅವುಗಳ ಸಮಸ್ಯೆಗಳೂ ಸೀಮಿತ. ಈ ಸಣ್ಣ ಚೌಕಟ್ಟಿನ ಒಳಗಿರುವ ತವಕ-ತಲ್ಲಣಗಳನ್ನು, ಆಶೆ-ನಿರಾಶೆಗಳನ್ನು ಇವು ಸ್ಪಷ್ಟವಾಗಿ ಕಟ್ಟಿಕೊಡುತ್ತವೆ ಎಂಬುದೇ ಇವುಗಳ ವಿಶೇಷತೆ.










