My Books

Monday, January 26, 2026 - 07:25

ಲೇಖಕರು: ಆರ್.ಕೆ. ನಾರಾಯಣ್ 
ಪ್ರಕಾಶಕರು: ನ್ಯಾಷನಲ್ ಬುಕ್ ಟ್ರಸ್ಟ್, ನವದೆಹಲಿ 
ಐದನೆಯ ಮರುಮುದ್ರಣ: 2015         ಪುಟ: 194         ಬೆಲೆ: ರೂ.75/-

ಭಾರತೀಯ ಇಂಗ್ಲಿಷ್ ಸಾಹಿತ್ಯದ ಅಗ್ರ ಲೇಖಕರಲ್ಲಿ ಒಬ್ಬರಾದ ಆರ್.ಕೆ. ನಾರಾಯಣ್ ಅವರ ಜಗತ್ಪ್ರಸಿದ್ಧ ಕೃತಿ “ಸ್ವಾಮಿ ಮತ್ತು ಅವನ ಸ್ನೇಹಿತರು”. ಇದನ್ನು ಕನ್ನಡಕ್ಕೆ ಅನುವಾದಿಸಿದವರು ಎಚ್.ವೈ. ಶಾರದಾ ಪ್ರಸಾದ್. 19 ಅಧ್ಯಾಯಗಳಿರುವ ಈ ಕೃತಿಗೆ ಚಂದದ ಚಿತ್ರಗಳನ್ನು ಬರೆದಿದ್ದಾರೆ ಮನೋಭೀರಾಮ್ ಚಕ್ರವರ್ತಿ. 

ಈ ಕೃತಿಯನ್ನು ಓದುತ್ತಾ ಹೋದಂತೆ, 1950-70ರ ದಶಕಗಳಲ್ಲಿ ಭಾರತದ ಹಳ್ಳಿಗಳಲ್ಲಿ ಹಾಗೂ ಸಣ್ಣ ಪಟ್ಟಣಗಳಲ್ಲಿ ಹುಟ್ಟಿ ಬೆಳೆದ ಎಲ್ಲರಿಗೂ ತಮ್ಮ ಬಾಲ್ಯಕಾಲಕ್ಕೆ ಹೋದಂತೆ ಅನಿಸುತ್ತದೆ. ಅಂದಿನ ದಿನಗಳ ಗ್ರಾಮೀಣ ಭಾರತದ ಬದುಕನ್ನು ಕಣ್ಣಿಗೆ ಕಟ್ಟುವಂತೆ ಚಿತ್ರಿಸುತ್ತವೆ ಇಲ್ಲಿನ ಅಧ್ಯಾಯಗಳು. ಆ ಬದುಕನ್ನು ನೋಡುವುದು ಸ್ವಾಮಿ ಎಂಬ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಯ ದೃಷ್ಟಿಯಿಂದ. ಅವನ ಮುಗ್ಧತೆ, ಪೆದ್ದುತನ, ಗೊಂದಲಗಳು, ತುಂಟಾಟಗಳು ಹಾಗೂ ಭಾವನೆಗಳು ಎಲ್ಲ ಅಧ್ಯಾಯಗಳಲ್ಲಿಯೂ ಸಮರ್ಥವಾಗಿ ಮೂಡಿ ಬಂದಿವೆ. ಒಬ್ಬ ಬಾಲಕನ ಕಣ್ಣಿನಿಂದಲೇ ಸುತ್ತಲಿನ ಜಗತ್ತನ್ನು ಆರ್. ಕೆ. ನಾರಾಯಣರು ಚಿತ್ರಿಸಿದ ಪರಿ ಕಂಡಾಗ ಅಚ್ಚರಿಯಾಗುತ್ತದೆ. 

“ಮಾಲ್ಗುಡಿ ಡೇಸ್” ಎಂಬ ಹೆಸರಿನಲ್ಲಿ ಈ ಚಿತ್ರಕತೆಗಳ ಸರಣಿ ದೂರದರ್ಶನದಲ್ಲಿ ಪ್ರಸಾರವಾಗ ತೊಡಗಿದಾಗಲಂತೂ ಸ್ವಾಮಿ ಮತ್ತು ಅವನ ಗೆಳೆಯರು ಭಾರತದ ಉದ್ದಗಲದಲ್ಲಿ ಮನೆಮಾತಾದರು. “ಮಾಲ್ಗುಡಿ” ಎಂಬ ಹಳ್ಳಿಯೊಂದು ಭಾರತದ ಕರ್ನಾಟಕದಲ್ಲಿ ನಿಜಕ್ಕೂ ಇದೆಯೆಂದೇ ಹಲವರು ನಂಬಿದರು. 

Monday, January 26, 2026 - 07:22

ಲೇಖಕಿಯರು: ಶರದಿನಿ ದಹನೂಕರ್ ಮತ್ತು ಊರ್ಮಿಳಾ ತಟ್ಟೆ 
ಕನ್ನಡಾನುವಾದ: ಡಾ. ಎಚ್.ಡಿ. ಚಂದ್ರಪ್ಪ ಗೌಡ 
ಪ್ರಕಾಶಕರು: ನ್ಯಾಷನಲ್ ಬುಕ್ ಟ್ರಸ್ಟ್, ನವದೆಹಲಿ 
ಮೊದಲ ಮುದ್ರಣ: 2003         ಪುಟ:150           ಬೆಲೆ: ರೂ.85/-  

ಸುಮಾರು ಐದು ಸಾವಿರ ವರುಷಗಳ ಪರಂಪರೆ ಇರುವ ಭಾರತದ ಆಯುರ್ವೇದದ ಬಗ್ಗೆ ನಮ್ಮೆಲ್ಲರ ಕಣ್ಣು ತೆರೆಸಬಲ್ಲ ಪುಸ್ತಕ ಇದು. ಮುಂಬೈ ವೈದ್ಯರಾದ ಶರದಿನಿ ದಹನೂಕರ್ ಮತ್ತು ಊರ್ಮಿಳಾ ತಟ್ಟೆ ಬರೆದಿರುವ ಈ ಪುಸ್ತಕವನ್ನು ಡಾ. ಎಚ್.ಡಿ. ಚಂದ್ರಪ್ಪ ಗೌಡ ಕನ್ನಡಕ್ಕೆ ಅನುವಾದಿಸಿದ್ದಾರೆ. 

ಇದರಲ್ಲಿರುವ 14 ಅಧ್ಯಾಯಗಳು:
1)ಪ್ರಸ್ತಾವನೆ                         8)ನಾಲ್ಕನೆಯ ಆಯಾಮ: ಕಾಲ 
2)ಒಂದು ಪಕ್ಷಿನೋಟ               9)ಪಥ್ಯಾಹಾರ 
3)ಆಳುವವರು: ದೋಷಗಳು     10)ಮೊದಲನೆ ಮತ್ತು ಎರಡನೆ ಬಾಲ್ಯಾವಸ್ಥೆ 
4)ಜನತೆ: ಧಾತುಗಳು             11)ಮಾಂತ್ರಿಕ ಗುಂಡು 
5)ಪ್ರೇರಕ ಶಕ್ತಿ: ಅಗ್ನಿ                12)ಮೈಗೆ ಸ್ವಲ್ಪ ಹುಷಾರಿಲ್ಲವೇ?
6)ಆಮ ಎಂಬ ಶತ್ರು               13)ಪಂಚಕರ್ಮ 
7)ನಿಮ್ಮ ದೇಹ ಪ್ರಕೃತಿ             14)ಅಂತಿಮವಾಗಿ…. 

Monday, January 26, 2026 - 07:18

ಸಂಪಾದಕರು: ವೈ. ಎನ್. ಗುಂಡೂರಾವ್ 
ಪ್ರಕಾಶಕರು: ಅಂಕಿತ ಪುಸ್ತಕ, ಬೆಂಗಳೂರು 
ಪ್ರಕಟ: 2005          ಪುಟ: 192          ಬೆಲೆ: ರೂ. 95/-  

ನಾ. ಕಸ್ತೂರಿ ಅವರು ಕನ್ನಡದ ಸುಪ್ರಸಿದ್ಧ ಹಾಸ್ಯ ಲೇಖಕರು. ಅವರ ಪೂರ್ಣ ಹೆಸರು ಕಸ್ತೂರಿ ರಂಗನಾಥ ನಾರಾಯಣ ಶರ್ಮ. ಅವರ ಹಾಸ್ಯ ಬರಹಗಳು ಸುಲಭಲಭ್ಯವಿಲ್ಲದ ಸಮಯದಲ್ಲಿ, ಅವರ ಉತ್ತಮ ಹಾಸ್ಯಬರಹಗಳನ್ನು ವೈ. ಎನ್. ಗುಂಡೂರಾಯರು ಆಯ್ದು “ಬೆಸ್ಟ್ ಆಫ್ ಕಸ್ತೂರಿ” ಎಂಬ ಪುಸ್ತಕವಾಗಿ ಹಾಸ್ಯಪ್ರಿಯರ ಕೈಗಿತ್ತಿದ್ದಾರೆ. 

ಇದರಲ್ಲಿವೆ ನಾ. ಕಸ್ತೂರಿಯವರ ಹಾಸ್ಯ ಬರಹಗಳು, ಕವನಗಳು, ಅನರ್ಥಕೋಶ, ನಗೆ ಚಟಾಕಿಗಳು ಮತ್ತು ಒಂದು ನಾಟಕ. 
ಉದ್ಯೋಗ ಹುಡುಕಿ, ಕರ್ನಾಟಕಕ್ಕೆ ಬಂದ ನಾ. ಕಸ್ತೂರಿಯವರು ಕನ್ನಡ ಕಲಿತು, ಕನ್ನಡ ಸಾಹಿತ್ಯಕ್ಕೆ ಸಲ್ಲಿಸಿದ ಸೇವೆ ಅಮೋಘ. ಯಾರಿಗೂ ನೋವಾಗದಂತೆ ಹಾಸ್ಯ ಬರಹಗಳನ್ನು ಹೇಗೆ ಬರೆಯಬೇಕು ಎಂಬುದಕ್ಕೆ ಅವರ ಒಂದೊಂದು ಬರಹವೂ ಮಾದರಿ. 

ಡೊಂಕುಬಾಲ, ಅಲ್ಲೋಲಕಲ್ಲೋಲ, ಉಪಾಯ ವೇದಾಂತ, ಗಾಳಿಗೋಪುರ, ಶಂಖವಾದ್ಯ ಇತ್ಯಾದಿ ಕೃತಿಗಳು ಮತ್ತು ಗಗ್ಗಯ್ಯನ ಗಡಿಬಿಡಿ, ವರಪರೀಕ್ಷೆ, ಕಾಡಾನೆ, ತಾಪತ್ರಯ ತಪ್ಪಿತು, ಬ್ಯಾಂಕಿನ ದಿವಾಳಿ, ರಾಮಕೃಷ್ಣಯ್ಯನ ದರ್ಬಾರು ಮುಂತಾದ ನಾಟಕಗಳನ್ನು ರಚಿಸಿರುವ ನಾ. ಕಸ್ತೂರಿ ಅವರು ವಿಡಂಬನಾಚಾರ್ಯ ಎಂದೇ ಹೆಸರಾಗಿದ್ದಾರೆ. 

ನಾ. ಕಸ್ತೂರಿ ಅವರ “ಅನರ್ಥ ಕೋಶ”ವಂತೂ ಕನ್ನಡ ಸಾಹಿತ್ಯಕ್ಕೆ ಅಪರೂಪದ ಕೊಡುಗೆ. ಹಲವಾರು ಸಾಮಾನ್ಯ ಪದಗಳಿಗೆ ವಕ್ರಾರ್ಥ ಅಥವಾ ವ್ಯಂಗ್ಯಾರ್ಥ ಕಲ್ಪಿಸಿ, ಈ ಕೋಶ ರಚಿಸಿದ್ದಾರೆ ಅವರು. ಕೆಲವು ಉದಾಹರಣೆಗಳು:
ಅಂಧರ್ವರು: ಕುರುಡು ಸಂಗೀತಗಾರರು 
ಅಂಬೆಗೋಲು: ಮುದಿತನದಲ್ಲಿ ಹಿಡಿಯಬೇಕಾದ ಊರುಗೋಲು 
ಕಜ್ಜಿ: ಲಜ್ಜೆಯನ್ನು ಹೋಗಲಾಡಿಸಲು ಒಂದು ಉಪಾಯ 
ಕಡಲೆ: ಹಲ್ಲಿದ್ದಾಗ ಸಿಗದ ಪದಾರ್ಥ 

Monday, January 26, 2026 - 07:15

ಲೇಖಕರು: ಟಿ. ಪದ್ಮನಾಭನ್ 
ಪ್ರಕಾಶಕರು: ನ್ಯಾಷನಲ್ ಬುಕ್ ಟ್ರಸ್ಟ್, ನವದೆಹಲಿ 
ಪ್ರಕಟ: 2006          ಪುಟ: 132         ಬೆಲೆ: ರೂ. 65/-

ಮಲಯಾಳಂ ಭಾಷೆಯ ಪ್ರಮುಖ ಕಥೆಗಾರ ಟಿ. ಪದ್ಮನಾಭನ್ ಅವರ 12 ಕಥೆಗಳ ಸಂಕಲನವಿದು. ಡಾ. ಅಶೋಕ್ ಕುಮಾರ್ ಇವನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. 

ಪದ್ಮನಾಭನ್ ಅವರ ಕತೆಗಳಲ್ಲಿ ಶೋಷಿತರ, ನೊಂದವರ, ಅಸಹಾಯಕರ ಬದುಕಿನ ಚಿತ್ರಣವಿದೆ. ಕತೆಗಳ ಸನ್ನಿವೇಶ, ಪಾತ್ರಚಿತ್ರಣ, ಸಂವಾದ ಹಾಗೂ ಭಾವತೀವ್ರತೆ ಓದುಗರ ಮನತಟ್ಟುತ್ತವೆ. 

ಟಿ. ಪದ್ಮನಾಭನ್ ಅವರ ಜನನ 1931ರಲ್ಲಿ ಕೇರಳದ ಕಣ್ಣೂರಿನಲ್ಲಿ. ಮಂಗಳೂರಿನ ಸರಕಾರಿ ಕಲಾ ಕಾಲೇಜಿನಿಂದ           1952ರಲ್ಲಿ ಬಿ. ಎ. ಪದವಿ ಮತ್ತು ಮದ್ರಾಸಿನ ಕಾನೂನು ಕಾಲೇಜಿನಿಂದ 1955ರಲ್ಲಿ ಕಾನೂನು ಪದವಿ ಪಡೆದರು. ಒಂದು ದಶಕ ಕಾಲ ಕಣ್ಣೂರಿನಲ್ಲಿ ವಕೀಲರಾಗಿ ಕೆಲಸ ಮಾಡಿದ ನಂತರ 1966ರಲ್ಲಿ ಅಲುವಾದಲ್ಲಿರುವ ಫ್ಯಾಕ್ಟ್ ಸಂಸ್ಥೆಗೆ ಸೇರಿದರು. ಅದರಿಂದ 1989ರಲ್ಲಿ ಡೆಪ್ಯುಟಿ ಮ್ಯಾನೇಜರಾಗಿ ನಿವೃತ್ತರಾದರು. 

Monday, January 26, 2026 - 07:12

ಲೇಖಕರು: ವಳ್ಳಿ ಕಣ್ಣನ್ ಮತ್ತು ಇತರರು 
ಪ್ರಕಾಶಕರು: ನ್ಯಾಷನಲ್ ಬುಕ್ ಟ್ರಸ್ಟ್, ನವದೆಹಲಿ 
3ನೇ ಮರುಮುದ್ರಣ : 2020         ಪುಟ: 145          ಬೆಲೆ: ರೂ.80/-

ಇದು ಯುನೆಸ್ಕೋದ ಏಷ್ಯಾ ಸಾಂಸ್ಕೃತಿಕ ಕೇಂದ್ರ ಪ್ರಾಯೋಜಿಸಿದ ಏಷ್ಯಾದ ಸಹ ಪ್ರಕಟಣಾ ಕಾರ್ಯಕ್ರಮದ ಅನುಸಾರ ಪ್ರಕಟಿಸಿದ ಏಷ್ಯಾದ 14 ದೇಶಗಳ ಸಮಕಾಲೀನ ಕತೆಗಳ ಸಂಕಲನ. 

ಮೊದಲ ಕತೆ ಅಫಘಾನಿಸ್ತಾನದ್ದು: ಗಿಡುಗ ಮತ್ತು ಮರ. ಒಂದೂರಿನಲ್ಲೊಂದು ಮೋಚಿಯ ಸಣ್ಣ ಅಂಗಡಿ. ಆತ ಬೆಳಗ್ಗೆ ಅಂಗಡಿ ತೆರೆದರೆ ಸಂಜೆಯ ವರೆಗೆ ಕೂತಿರುತ್ತಿದ್ದ. ಅವನ ಅಂಗಡಿಗೆ ಪ್ರತಿ ದಿನ ಇಬ್ಬರು ಸೋಮಾರಿಗಳು ಬಂದು ಹರಟೆ ಹೊಡೆಯುತ್ತಾ ಇರುತ್ತಿದ್ದರು. ಅದೊಂದು ದಿನ ಮೋಚಿ ಖಿನ್ನನಾಗಿದ್ದ. ಯಾಕೆಂದು ಕೇಳಿದಾಗ “ನನ್ನ ಗಿಡುಗ ತಪ್ಪಿಸಿಕೊಂಡಿದೆ” ಎಂದ. ಮುಂದುವರಿದು ಅವನು ಹೇಳಿದ: “ಅದಕ್ಕೇನೋ ಸಾಯುವ ಕಾಲ ಬಂದಿದೆ. ಅದರ ಕಾಲಿಗೆ ಕಟ್ಟಿದ ಹಗ್ಗ ಹಾಗೇ ಇದೆ. ಆ ಅನಿಷ್ಟ ಗಿಡುಗ ಮರದ ಮೇಲೆ ಕುಳಿತೊಡನೆ ಆ ದಾರ ಕೊಂಬೆಗಳಿಗೆ ಸಿಕ್ಕಿಕೊಳ್ಳುತ್ತದೆ. ಅದು ಸಾಯುವ ವರೆಗೂ ಅಲ್ಲೇ ನೇತಾಡುತ್ತಿರುತ್ತದೆ.” ಹಾಗೇ ಆಯಿತು; ಮರುದಿನ ಹತ್ತಿರದ ಮರದಿಂದ ಸತ್ತ ಗಿಡುಗ ನೇತಾಡುತ್ತಿತ್ತು. 

Monday, January 26, 2026 - 07:08

ಲೇಖಕರು: ಶ್ರೀನಿವಾಸ ವೈದ್ಯ 
ಪ್ರಕಾಶಕರು: ಮನೋಹರ ಗ್ರಂಥಮಾಲಾ, ಧಾರವಾಡ
ಪ್ರಕಟ: 2014          ಪುಟ: 110         ಬೆಲೆ: ರೂ. 100/- 

ಶ್ರೀನಿವಾಸ ವೈದ್ಯರು ಧಾರವಾಡದಲ್ಲಿ ಎಂ.ಎ. ಪದವಿ ಗಳಿಸಿದ ನಂತರ, 1959ರಲ್ಲಿ ಮುಂಬಯಿಯಲ್ಲಿ ಕೆನರಾ ಬ್ಯಾಂಕಿನಲ್ಲಿ ಉದ್ಯೋಗಕ್ಕೆ ಸೇರಿದರು. ಮುಂಬಯಿ, ಬೆಂಗಳೂರು ಇತ್ಯಾದಿ ಸ್ಥಳಗಳಲ್ಲಿ 37 ವರುಷ ಸೇವೆ ಸಲ್ಲಿಸಿ, ಉನ್ನತ ಹುದ್ದೆಗೇರಿ 1996ರಲ್ಲಿ ಬೆಂಗಳೂರಿನಲ್ಲಿ ನಿವೃತ್ತರಾದರು. ಈ ಸೇವಾವಧಿಯ ಹಲವಾರು ಅನುಭವಗಳನ್ನು ಈ ಪುಸ್ತಕದಲ್ಲಿ ಹಂಚಿಕೊಂಡಿದ್ದಾರೆ. ಎಂಟು ಪುಸ್ತಕಗಳನ್ನು ಬರೆದಿರುವ ಶ್ರೀನಿವಾಸ ವೈದ್ಯರು “ಹಳ್ಳ ಬಂತು ಹಳ್ಳ” ಕಾದಂಬರಿಗೆ ಕರ್ನಾಟಕ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದವರು. 

ನಿವೃತ್ತಿಯ ನಂತರ ತಮ್ಮ ಸೇವಾವಧಿಯ ಸಿಂಹಾವಲೋಕನ ಮಾಡಿ, ನೆನಪಿನಲ್ಲಿ ಅಚ್ಚಳಿಯದೆ ಉಳಿದ ಅನುಭವಗಳನ್ನು ಓದುಗರ ಮನಮುಟ್ಟುವಂತೆ ಬರೆದಿರುವುದು ವೈದ್ಯರ ಹೆಚ್ಚುಗಾರಿಕೆ. ಯಾವುದೇ ಅತಿರೇಕವಿಲ್ಲದೆ ಮಾನವೀಯ ಸಂಬಂಧಗಳ ನಿರೂಪಣೆ ಮಾಡಿರುವುದು ಅವರ ವಿಶೇಷತೆ. ಇದರಲ್ಲಿನ ಎಲ್ಲ ಪ್ರಸಂಗಗಳೂ ಸರಾಗವಾಗಿ ಓದಿಸಿಕೊಂಡು ಹೋಗುತ್ತವೆ. 

ಪುಸ್ತಕದ ಆರಂಭದ ಬರಹದಲ್ಲಿ “ನನ್ನ ಉದ್ದೇಶ ಆತ್ಮಚರಿತ್ರೆ ಬರೆಯುವದಾಗಿರದೇ, ನನ್ನನ್ನು ಬೆಳೆಸಿದ ನನ್ನ ವೃತ್ತಿಜೀವನದ ಅನುಭವಗಳ ರೋಚಕತೆಯನ್ನು ಓದುಗರೊಡನೆ ಹಂಚಿಕೊಳ್ಳುವದಾಗಿದೆ. ಅದು ಬಿಟ್ಟು, ಇಲ್ಲಿ “ನನ್ನ ಆತ್ಮ”ಕ್ಕಾಗಲೀ ಅದರ “ಚರಿತ್ರೆ”ಗಾಗಲಿ ಹೆಚ್ಚಿನ ಮಹತ್ವವಿಲ್ಲ” ಎಂದು ಶ್ರೀನಿವಾಸ ವೈದ್ಯರು ಸ್ಪಷ್ಟ ಪಡಿಸಿದ್ದಾರೆ. 

Monday, January 26, 2026 - 07:05

ಲೇಖಕಿ: ಸುರೇಖಾ ಪನಂಡಿಕರ್ 
ಪ್ರಕಾಶಕರು: ನ್ಯಾಷನಲ್ ಬುಕ್ ಟ್ರಸ್ಟ್, ನವದೆಹಲಿ 
ಕನ್ನಡಾನುವಾದ: ಕೆ. ಸುಧಾ ರಾವ್ 
ಪ್ರಕಟ: 2007         ಪುಟ: 15          ಬೆಲೆ: ರೂ.15/-  

ಗೋವಾದ ಮೀನುಗಾರ ದಂಪತಿಗಳ ಮಗ ಜುಜೆ ಎಂಬಾತನ ಬದುಕಿನ ಘಟನೆಗಳ ಮೂಲಕ ಗೋವಾದ ಸ್ವಾತಂತ್ರ್ಯ ಹೋರಾಟದ ಕತೆ ಹೇಳುವ ಪುಸ್ತಕ ಇದು. ಸುರೇಖಾ ಪನಂಡಿಕರ್ ಬರೆದಿರುವ ಕತೆಯನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ ಕೆ. ಸುಧಾ ರಾವ್. 

ಅಲ್ಲಿನ ಸಮುದ್ರತೀರದಲ್ಲಿ ಆಟವಾಡುತ್ತಾ, ಅಪ್ಪ ಪೆಡ್ರೊ ಮತ್ತು ಅಮ್ಮ ಮರಿಯಾಳಿಗೆ ಬೆಳಗ್ಗೆ ಮೀನು ವಿಂಗಡಿಸುವ ಕೆಲಸದಲ್ಲಿ ಸಹಾಯ ಮಾಡುತ್ತಾ ದಿನಗಳೆಯುತ್ತಿದ್ದ ಜುಜೆ. ಶಾಲೆಗೆ ಹೋಗಬೇಕೆಂಬುದು ಅವನ ಕನಸು. ಅದು ಕನಸಾಗಿಯೇ ಉಳಿಯಲು ಕಾರಣ ಅವನ ಹೆತ್ತವರ ಬಡತನ. ಹತ್ತಿರದ ಶಾಲೆಯ ಶುಲ್ಕ ಪಾವತಿಸಲು ಅವರಿಗೆ ಸಾಧ್ಯವಿರಲಿಲ್ಲ. 

ಒಮ್ಮೆ ವಯಸ್ಕರೊಬ್ಬರು ಸಮುದ್ರತೀರಕ್ಕೆ ಬರುತ್ತಾರೆ. ಅಲ್ಲಿ ಅಡ್ಡಾಡುತ್ತಿದ್ದ ಜುಜೆಗೆ ವಿವಿಧ ಸಮುದ್ರ ಚಿಪ್ಪುಗಳ ಬಗ್ಗೆ ತಿಳಿಸಿ, ಅವನ್ನು ಸಂಗ್ರಹಿಸಬೇಕೆಂದೂ ಅವನ್ನೆಲ್ಲ ಪಡೆಯಲು ತಾನು ಬರುತ್ತೇನೆಂದೂ ಆಶ್ವಾಸನೆ ನೀಡುತ್ತಾರೆ ಎಂದು ಕತೆ ಶುರು. ಅವರೊಬ್ಬ ಸ್ವಾತಂತ್ರ್ಯ ಹೋರಾಟಗಾರ ಎಂಬುದು ಜುಜೆಗೆ ಕೊನೆಗೆ ಗೊತ್ತಾಗುತ್ತದೆ.   

Monday, January 26, 2026 - 07:03

ಲೇಖಕರು: ಜೀತ್ ರಾಯ್ 
ಪ್ರಕಾಶಕರು: ನ್ಯಾಷನಲ್ ಬುಕ್ ಟ್ರಸ್ಟ್, ನವದೆಹಲಿ 
ಆರನೇ ಮರುಮುದ್ರಣ: 2021          ಪುಟ: 64             ಬೆಲೆ: ರೂ.45/-

ಮನುಷ್ಯರ ಬದುಕಿನಲ್ಲಿ ಹಾಸುಹೊಕ್ಕಾಗಿರುವ ಕಾಡಿನ ವಿವಿಧ ಮುಖಗಳನ್ನು ಸರಳವಾಗಿ ಪರಿಚಯಿಸುವ ಪುಸ್ತಕ ಇದು. ಇಂಗ್ಲೀಷಿನಲ್ಲಿ “ವೈಲ್ಡ್ ವುಡ್-ನೋಟ್ಸ್” ಎಂಬ ಶೀರ್ಷಿಕೆ ಹೊಂದಿರುವ ಇದನ್ನು ಕನ್ನಡಕ್ಕೆ ಅನುವಾದಿಸಿದವರು ಎಂ.ಆರ್. ಆನಂದರಾಮಯ್ಯ.

ಇದರಲ್ಲಿರುವ 17 ಪುಟ್ಟ ಅಧ್ಯಾಯಗಳು ಸರಾಗವಾಗಿ ಓದಿಸಿಕೊಂಡು ಹೋಗುತ್ತವೆ. ಮೊದಲ ಅಧ್ಯಾಯ “ವನ್ಯ ಆಕರ್ಷಣೆ”, ನಾವೆಲ್ಲರೂ ಮನೆಯಿಂದ ಹೊರಗೆ ವನಭೋಜನ ಅಥವಾ ರಜಾದಿನವನ್ನು ಏಕೆ ಪ್ರೀತಿಸುತ್ತೇವೆ? ಎಂಬ ಪ್ರಶ್ನೆಯಿಂದ ಶುರು. ಇದಕ್ಕೆ ಹಲವು ಉತ್ತರಗಳನ್ನು ಕೊಟ್ಟಿದ್ದಾರೆ ಲೇಖಕರು. ಗ್ರಾಮಾಂತರ ಪ್ರದೇಶಗಳಲ್ಲಿ ನಾವು ಕಾಣಬಹುದಾದ ಸಸ್ಯಗಳು, ಹೂಗಳು, ಹಣ್ಣುಗಳು, ಪ್ರಾಣಿಗಳು, ಪಕ್ಷಿಗಳು, ಕೀಟಗಳು ಇತ್ಯಾದಿಗಳನ್ನು ಪ್ರಸ್ತಾಪಿಸಿದ್ದಾರೆ. 

“ಕಾಡುತನ ನಮ್ಮಲ್ಲಿ ಇನ್ನೂ ಜೀವಂತವಾಗಿದೆ” ಎಂಬ 2ನೇ ಅಧ್ಯಾಯದಲ್ಲಿ, ನಮ್ಮಲ್ಲಿನ ಅನೇಕ ಸ್ವಭಾವಸಿದ್ಧ ಹೆದರಿಕೆ ಮತ್ತು ಸುಖಾನುಭವಗಳು, ಮಾನವಕುಲದ ಆದಿ ಜೀವನದ ಅಸ್ಪಷ್ಟ ಭಾವನೆಗಳಿಂದಾಗಿ ಮೂಡಿ ಬರುತ್ತವೆ ಎಂದು ವಿವರಿಸಿದ್ದಾರೆ. ಉದಾಹರಣೆಗೆ, ಕತ್ತಲೆಯ ಹೆದರಿಕೆ; ಮಕ್ಕಳಿಗೆ ಉಯ್ಯಾಲೆ ಮತ್ತು ಮರ ಹತ್ತುವ ಬಗೆಗಿನ ಒಲವು. 

Monday, January 26, 2026 - 06:41

ಲೇಖಕರು: ಗೊರೂರು ರಾಮಸ್ವಾಮಿ ಅಯ್ಯಂಗಾರ್
ಪ್ರಕಾಶಕರು: ಐಬಿಎಚ್ ಪ್ರಕಾಶನ, ಬೆಂಗಳೂರು 
ಮೊದಲ ಮುದ್ರಣ: 1966       ಪುಟ: 154       ಬೆಲೆ: ರೂ. 70/- 

ಗೊರೂರು ರಾಮಸ್ವಾಮಿ ಅಯ್ಯಂಗಾರರ ವೈವಿಧ್ಯಮಯವಾದ 10 ಕತೆಗಳು ಈ ಸಂಗ್ರಹದಲ್ಲಿವೆ. ಹಳ್ಳಿಯ ಬದುಕನ್ನು ತನ್ನ  ಬರಹದಲ್ಲಿ ಸೊಗಸಾಗಿ ಚಿತ್ರಿಸಿದವರು ಇವರು. ಸುಲಲಿತವಾಗಿ ಓದಿಸಿಕೊಂಡು ಹೋಗುವುದೇ ಗೊರೂರರ ಕತೆಗಳ ವಿಶೇಷತೆ. ಜೊತೆಗೆ ಇವು ಸುಮಾರು 60 ವರುಷಗಳ ಮುಂಚೆ ಬರೆದ ಕಥೆಗಳಾದರೂ ಇವೆಲ್ಲದರ ಸಂದೇಶಗಳು ಇಂದಿಗೂ ಪ್ರಸ್ತುತ. 

ಮೊದಲನೆಯ ಕತೆ “ಕನ್ಯಾಕುಮಾರಿ”. ಚಂದ್ರವಳ್ಳಿಯ ಶ್ರೀಧರ ಬೆಂಗಳೂರಿನಲ್ಲಿ ಬಿ.ಎ. ಓದುತ್ತಿದ್ದ. ಅವನಿಗೆ ಸಂಗೀತ ಒಲಿದಿತ್ತು. ರಜೆಯಲ್ಲಿ ಹಳ್ಳಿಗೆ ಬಂದಾಗ ಅಲ್ಲಿನ ಶಾಲೆಯ ಹೆಣ್ಣುಮಕ್ಕಳಿಗೆ ಸಂಗೀತ ಕಲಿಸುತ್ತಿದ್ದ. ಅವರಲ್ಲಿ ಒಬ್ಬಾಕೆ ಕಲ್ಯಾಣಿ. ರೂಪದಲ್ಲಿ ಅಪ್ಸರೆ. ಅವಳ ಕಂಠವೂ ಚೆನ್ನಾಗಿತ್ತು. ಶ್ರೀಧರನಿಗೆ ಅವಳಲ್ಲಿ ಅನುರಾಗ ಮೂಡಿತು. ಆಕೆಯ ತಂದೆ ತೀರಿಕೊಂಡಿದ್ದು, ಮಗಳನ್ನು ತಾಯಿ ಕಷ್ಟದಿಂದ ಸಲಹುತ್ತಿದ್ದಳು. ಆ ತಾಯಿಯೊಂದಿಗೆ ಕಲ್ಯಾಣಿಯ ಜೊತೆ ಶ್ರೀಧರ ತನ್ನ ಮದುವೆಯ ಪ್ರಸ್ತಾಪ ಮಾಡಿದಾಗ ಆಕೆ ಒಪ್ಪಿದಳು. ಆದರೆ ಶ್ರೀಧರನ ತಂದೆತಾಯಿ ಸುತಾರಾಂ ಒಪ್ಪಲಿಲ್ಲ. ತನ್ನ ಓದು  ಮುಗಿಸಲಿಕ್ಕಾಗಿ ಶ್ರೀಧರ ಬೆಂಗಳೂರಿಗೆ ಬಂದಾಗ ಕಲ್ಯಾಣಿಗೆ 45 ವರುಷ ವಯಸ್ಸಿನವನ ಜೊತೆ ಮದುವೆ ಮಾಡಲಾಯಿತು.  

Monday, January 26, 2026 - 06:35

ಲೇಖಕರು: ಬೀchi
ಪ್ರಕಾಶಕರು: ಸಮಾಜ ಪುಸ್ತಕಾಲಯ, ಧಾರವಾಡ 
 ಮುದ್ರಣ: 2015         ಪುಟ: 152           ಬೆಲೆ: ರೂ. 60/-        

ಕನ್ನಡದ ಹೆಸರುವಾಸಿ ಸಾಹಿತಿ ಬೀchi ಅವರ 26ನೆಯ ಪುಸ್ತಕ ಇದು. ಹಾಸ್ಯ ಸಾಹಿತಿ ಹಾಗೂ ವಿಡಂಬನಾ ಸಾಹಿತಿ ಎಂದೇ ಅವರು ಜನಪ್ರಿಯರು. 

ಇದು ಅವರ 108 ಪುಟ್ಟ ಬಿಡಿ ಬರಹಗಳ ಸಂಕಲನ. ಎಂಟರಿಂದ ಹದಿನೈದು ಸಾಲುಗಳ ಹಲವು ಬರಹಗಳು ಇದರಲ್ಲಿವೆ. ಅದಲ್ಲದೆ, ಪ್ರತಿಯೊಂದು ಬರಹದ ಪುಟದ ಕೆಳಭಾಗದಲ್ಲಿ ಸಣ್ಣ ಅಕ್ಷರಗಳಲ್ಲಿ ಚಿಂತನೆಗೆ ಹಚ್ಚುವ ಇನ್ನೊಂದು ಚುಟುಕು ಬರಹವೂ ಇದೆ. 

ಇವು ಓದಿ ಮರೆಯಬಹುದಾದ ಬರಹಗಳಲ್ಲ ಎಂಬುದೇ ಇವುಗಳ ವಿಶೇಷತೆ. ಓದಿದಾಗ ಕಚಗುಳಿ ಇಡುವ ಈ ಬರಹಗಳು ಅನಂತರ ನಮ್ಮನ್ನು ಚಿಂತನೆಗೆ ಹಚ್ಚುತ್ತವೆ. ಮೂರ್ತಿಯವರ ವ್ಯಂಗ್ಯಚಿತ್ರಗಳು ಮತ್ತು ಎಸ್.ಆರ್. ಸ್ವಾಮಿಯವರ ರೇಖಾಚಿತ್ರಗಳು ಚೇತೋಹಾರಿಯಾಗಿವೆ.

ಪುಸ್ತಕದ ಆರಂಭದಲ್ಲಿ ತಾನು ಹಾಸ್ಯ ಸಾಹಿತಿಯಾಗಿ ಬೆಳೆದು ಬಂದ ಬಗೆಯನ್ನು “ತಿರುಗಿ ನೋಡಿದಾಗ” ಎಂದು ದಾಖಲಿಸಿದ್ದಾರೆ ಬೀchiಯವರು. “ನನ್ನ ಬರವಣಿಗೆಯ ಆರಂಭವೆಲ್ಲಿ?” ಎಂದು ತಿರುಗಿ ನೋಡಿದಾಗ ಅದನ್ನು  ಗುರುತಿಸುವುದು ಕಷ್ಟ ಎನ್ನುತ್ತಾರೆ. ತಾನು ಬರೆದಿಟ್ಟುದನ್ನು ಶಂ.ಬಾ. ಜೋಶಿಯವರಿಗೆ ತೋರಿಸಿದಾಗ ಬೆನ್ನು ಚಪ್ಪರಿಸಿ, “ನಿನಗೂ ಮೂಗು ಇದೆ, ಉಸಿರಾಡು” ಎಂದು ಅವರು ಮೊದಲು ಹೇಳಿದವರೆಂದು ನೆನಪು ಮಾಡಿಕೊಂಡಿದ್ದಾರೆ. 

Pages