HRM
ನಭದ ಬಯಲೊಳನಂತ, ಮನದ ಗುಹೆಯೊಳನಂತ
ವುಭಯದಾ ನಡುವೆ ಸಾದ್ಯಂತ ಜೀವಕಥೆ
ವಿಭುವೊಬ್ಬನೀ ಗಾಳಿಬುಡ್ಡೆಗಳನೂದುವನು
ಹಬೆಗುಳ್ಳೆಯೋ ಸೃಷ್ಠಿ - ಮಂಕುತಿಮ್ಮ
ಆಕಾಶದ ಬಯಲಿನಲ್ಲಿ ಅನಂತ, ಮನಸ್ಸೆಂಬ ಗುಹೆಯ ಆಳದಲ್ಲಿಯೂ ಅನಂತ. ಕೊನೆಯಿಲ್ಲದ ಈ ಎರಡರ ನಡುವೆ ಆದಿ-ಅಂತ್ಯವಿರುವ ಜೀವಕಥೆ. ಜಗನ್ನಿಯಾಮಕನು (ವಿಭು) ಗಾಳಿಗುಳ್ಳೆಗಳನ್ನು ಸದಾ ಊದುವನು. ಆಗ ಮೂಡುವ ಸೃಷ್ಠಿ ಹಬೆಗುಳ್ಳೆ ಎನ್ನುತ್ತಾರೆ ಮಾನ್ಯ ಡಿ.ವಿ. ಗುಂಡಪ್ಪನವರು.
ಆಕಾಶದ ಬಯಲಿನಲ್ಲಿ ಎಷ್ಟು ಮುಂದಕ್ಕೆ ಬೇಕಾದರೂ ಹೋಗಬಹುದು. ಭೂಮಿಯಿಂದ ಕಳಿಸಿದ ಗಗನನೌಕೆಗಳು ಮಂಗಳ, ಗುರು, ಶನಿ ಗ್ರಹಗಳನ್ನು ದಾಟಿ ಹೋಗಿವೆ. ಆ ದೂರವನ್ನು ಗ್ರಹಿಸುವುದೇ ತ್ರಾಸದಾಯಕ. ಹಾಗಿರುವಾಗ, ಬೆಳೆಯುತ್ತಿರುವ ವಿಶ್ವದ ಅಗಾಧತೆಯನ್ನು ಗ್ರಹಿಸಲು ಸಾಧ್ಯವೇ? ವಿಶ್ವಕ್ಕೆ ಆದಿ-ಅಂತ್ಯವಿಲ್ಲ; ಅದು ಅನಂತ. ಆದರೆ ಈ ವಿಶ್ವದಲ್ಲಿರುವ ಎಲ್ಲದಕ್ಕೂ ಅಂತ್ಯವಿದೆ. ನಕ್ಷತ್ರಗಳು, ಧೂಮಕೇತುಗಳು, ಉಲ್ಕೆಗಳು ಪತನವಾಗುವುದನ್ನು ಕಂಡಿಲ್ಲವೇ?
ಅನಂತ ವಿಶ್ವದಲ್ಲಿರುವ ಎಲ್ಲವನ್ನೂ ಸೃಷ್ಠಿ ಮಾಡುತ್ತಿದ್ದಾನೆ ಭಗವಂತ – ಬಾಲಕನೊಬ್ಬ ತೂತುಕಡ್ಡಿಯಲ್ಲಿ ಸಾಬೂನಿನ ನೀರನ್ನು ಊದುತ್ತಾ ಗಾಳಿಗುಳ್ಳೆಗಳನ್ನು ಹಾರಿಸಿದಂತೆ. ತುಸು ದೂರ ಹಾಗೂ ತುಸು ಎತ್ತರಕ್ಕೆ ಹಾರಿಹೋಗುವ ಆ ಗಾಳಿಗುಳ್ಳೆಗಳು ಫಟಾರನೆ ಒಡೆಯುತ್ತವೆ. ಅದೇ ರೀತಿಯಲ್ಲಿ ಭಗವಂತನ ಎಲ್ಲ ಸೃಷ್ಠಿಯೂ ಕುದಿಯುವ ನೀರಿನಲ್ಲಿ ಮೂಡಿ ಬರುವ ಹಬೆಗುಳ್ಳೆಗಳಂತೆ ಒಡೆದು ಹೋಗುತ್ತವೆ.
ಸಣ್ಣಪುಟ್ಟ ಜೀವಿಗಳು ಹಾಗೂ ಹುಲು ಮಾನವರ ಕತೆ ಹಾಗಿರಲಿ. ಸಾಮ್ರಾಜ್ಯಗಳೇ ಪತನವಾಗಿವೆ: ರೋಮ್ ಸಾಮ್ರಾಜ್ಯ, ಮೊಘಲ್ ಸಾಮ್ರಾಜ್ಯ, ವಿಜಯನಗರ ಸಾಮ್ರಾಜ್ಯ. ಇಪ್ಪತ್ತನೆಯ ಶತಮಾನದ ಎರಡು ಮಹಾಯುದ್ಧಗಳಲ್ಲಿ ನಾಶವಾದ ಹಳ್ಳಿ, ಪಟ್ಟಣ, ನಗರಗಳ ಲೆಕ್ಕ ಇಟ್ಟವರಾರು? ಬಿರುಗಾಳಿ, ಭೂಕಂಪ, ಸುನಾಮಿಯಂತಹ ಪ್ರಾಕೃತಿಕ ವಿಕೋಪಗಳೂ ಸಾವಿರಾರು ಜನವಸತಿಯ ಕೇಂದ್ರಗಳನ್ನು ಅಳಿಸಿ ಹಾಕಿವೆ. ಡೈನೋಸಾರುಗಳಿಂದ ಶುರು ಮಾಡಿ ಮಡಗಾಸ್ಕರಿನ ಡೋಡೋ ಹಕ್ಕಿಯ ವರೆಗೆ ಹಲವಾರು ಜೀವಿಗಳು ಅಳಿದಿವೆ. ಭಗವಂತನ ಸೃಷ್ಠಿಗಳೆಲ್ಲವೂ ಹಬೆಗುಳ್ಳೆಗಳು. ಈ ಕ್ಷಣ ಇದ್ದದ್ದು ಮುಂದಿನ ಕ್ಷಣ ಇಲ್ಲ ಎಂಬುದೇ ಮಹಾಸತ್ಯ. ಇದನ್ನು ಒಪ್ಪಿಕೊಂಡವರ ಜೀವಕಥೆ ನೆಮ್ಮದಿಯ ಕಥೆ. ಇದನ್ನು ಒಪ್ಪಿಕೊಳ್ಳದವರ ಜೀವಕಥೆ ಬೆಂಕಿಯ ಕಥೆ, ಅಲ್ಲವೇ?
ಬೆತ್ತಲೆಯೆ ನೀಂ ಬಂದೆ ಬೆತ್ತಲೆಯೆ ನೀಂ ಪೋಪೆ
ವಸ್ತ್ರವೇಷಗಳೆಲ್ಲ ನಡುವೆ ನಾಲ್ಕು ದಿನ
ಚಟ್ಟಕೆ ನಿನ್ನನೇರಿಪ ಮುನ್ನ ನೀನಾಗಿ
ಕಿತ್ತೆಸೆಯೊ ಕಂತೆಗಳ – ಮರುಳ ಮುನಿಯ
ಈ ಭೂಮಿಗೆ ನೀನು ಬಂದದ್ದು ಬೆತ್ತಲಾಗಿ, ಇಲ್ಲಿಂದ ಹೋಗುವುದೂ ಬೆತ್ತಲಾಗಿ ಎಂಬ ದೊಡ್ಡ ಸತ್ಯವನ್ನು ಜ್ನಾಪಿಸುತ್ತಾರೆ ಮಾನ್ಯ ಡಿವಿಜಿಯವರು. ಹುಟ್ಟು-ಸಾವುಗಳ ನಡುವಿನ ನಾಲ್ಕು ದಿನ ಮಾತ್ರ ನಿನ್ನ ವಸ್ತ್ರವೇಷಗಳ ಸಡಗರ. ಕೊನೆಗೊಂದು ದಿನ ಬಂದೇ ಬರುತ್ತದೆ – ಸಾವಿನ ಮನೆಗೆ ಕಾಲಿಟ್ಟ ನಿನ್ನನ್ನು ಚಟ್ಟಕ್ಕೆ ಏರುಸುವ ದಿನ. ಆ ಮುನ್ನ ನೀನಾಗಿಯೇ ನಿನ್ನ ಬದುಕಿನ ಕಂತೆಗಳನ್ನೆಲ್ಲ ಕಿತ್ತೆಸೆ ಎಂಬ ನೇರನುಡಿ ಡಿವಿಜಿಯವರದು.
ಅವನ ಹೆಸರು ವರ್ಷಿಲ್ ಷಾ. ಆದಾಯ ತೆರಿಗೆ ಅಧಿಕಾರಿ ಜಿಗಾರ್ ಷಾ ಮತ್ತು ಅಮಿ ಬೆನ್ ಅವರ ಮಗ. ಆತ ಕಲಿತದ್ದು ಅಹ್ಮದಾಬಾದಿನ ಶಾರದಾ ಮಂದಿರ ಶಾಲೆಯಲ್ಲಿ. ಹತ್ತನೆಯ ತರಗತಿಯ ನಂತರ ನವ್ಕಾರ್ ಪಬ್ಲಿಕ್ ಶಾಲೆ ಸೇರಿದ. ೧೨ನೆಯ ತರಗತಿ (ಅಂತಿಮ ಪಿಯುಸಿ) ಅಂತಿಮ ಪರೀಕ್ಷೆಗಳ ನಂತರ ೨೧ ಎಪ್ರಿಲ್ ೨೦೧೭ರಂದು ಸೂರತಿಗೆ ಹೋದ. ಅಲ್ಲಿನ ಉಪಾಶ್ರಮದಲ್ಲಿ (ಜೈನ ಮುನಿಗಳು ಮತ್ತು ಸನ್ಯಾಸಿನಿಯರು ವಾಸಿಸುವ ಸ್ಥಳ) ಇರತೊಡಗಿದ.
ಗುಜರಾತಿನ ಎಚ್ಎಸ್ಸಿ ಬೋರ್ಡ್ ಪರೀಕ್ಷೆಗಳ ಫಲಿತಾಂಶ ಪ್ರಕಟವಾದ ದಿನ, ವರ್ಷಿಲ್ ಗುಜರಾತಿನಲ್ಲಿ ಅಗ್ರಸ್ಥಾನ ಪಡೆದಿದ್ದ; ಶೇಕಡಾ ೯೯.೯೯ ಅಂಕ ಗಳಿಸಿದ್ದ. ಅಂದೇನಾಯಿತೆಂದು ನವ್ಕಾರ್ ಪಬ್ಲಿಕ್ ಶಾಲೆಯ ಪ್ರಿನ್ಸಿಪಾಲ್ ವ್ರಜೇಶ್ ಪಾರಿಕ್ ಅವರ ಮಾತುಗಳಲ್ಲೇ ಕೇಳಿ: “ನಾವು ಪತ್ರಿಕಾ ಪ್ರಕಟಣೆ ಕೊಡಲಿಕ್ಕಾಗಿ ಎಲ್ಲವನ್ನೂ ರೆಡಿ ಮಾಡಿದ್ದೆವು: ಅವನ ಫೋಟೋಗ್ರಾಫ್, ಮಾರ್ಕ್ ಕಾರ್ಡ್. ಆದರೆ ಮಾರ್ಕ್ ಕಾರ್ಡ್ ಅಥವಾ ಶಾಲೆಯ ಸರ್ಟಿಫಿಕೇಟ್ ತಗೊಳ್ಳಲು ವರ್ಷಿಲ್ ಬರಲೇ ಇಲ್ಲ….”
ಯಾಕೆಂದರೆ, ೧೭ ವರ್ಷ ವಯಸ್ಸಿನ ವರ್ಷಿಲ್ ಎಲ್ಲವನ್ನೂ ಕಿತ್ತೆಸೆದು, ವೈರಾಗ್ಯದ ಹಾದಿಗೆ ತಿರುಗಿದ್ದ. ಜೈನ ಸನ್ಯಾಸಿಯಾಗಲು ನಿರ್ಧರಿಸಿದ್ದ. ಜೈನ ಸನ್ಯಾಸಿಯರು ಕಠೋರ ಶಿಸ್ತಿನಲ್ಲಿ ಬಾಳಬೇಕು. ಬರಿಗಾಲಿನಲ್ಲಿ ನಡೆಯಬೇಕು. ಹತ್ತಿಯ ಬಿಳಿ ಬಟ್ಟೆ ಮಾತ್ರ ತೊಡಬೇಕು. ಸ್ನಾನ ಮಾಡಬಾರದು. ದಿನಕ್ಕೊಂದೇ ಊಟ ಉಣ್ಣಬೇಕು – ಅದೂ ದಿನಕ್ಕೊಂದೇ ಮನೆಗೆ ಹೋಗಿ, ಆ ಮನೆಯವರು ಕೊಟ್ಟದ್ದನ್ನು ಗುರುಗಳಿಗರ್ಪಿಸಿ, ಅವರಿತ್ತದ್ದನ್ನು ಮಾತ್ರ.
ವರ್ಷಿಲ್ ಷಾ ಜೈನ ಸನ್ಯಾಸಿ ದೀಕ್ಷೆ ಪಡೆದದ್ದು ೮ ಜೂನ್ ೨೦೧೭ರಂದು. ದೀಕ್ಷೆಯ ಅಂಗವಾಗಿ ಆತ ತನ್ನ ತಲೆಗೂದಲನ್ನೆಲ್ಲ ತಾನೇ ಕೈಯಿಂದ ಕಿತ್ತು ಕೊಂಡಿದ್ದ. “..ಕಿತ್ತೆಸೆಯೊ ಕಂತೆಗಳ” ಎಂಬುದಕ್ಕೆ ಎಂತಹ ಉದಾಹರಣೆ!
ಎಡರು ತೊಡರೆನಲೇಕೆ? ಬಿಡಿಸು ಮತಿಗಾದನಿತ
ದುಡಿ ಕೈಯಿನಾದನಿತು; ಪಡು ಬಂದ ಪಾಡು
ಬಿಡು ಮಿಕ್ಕುದನು ವಿಧಿಗೆ; ಬಿಡದಿರುಪಶಾಂತಿಯನು
ಬಿಡುಗಡೆಗೆ ದಾರಿಯದು - ಮಂಕುತಿಮ್ಮ
ಬದುಕಿನಲ್ಲಿ ಎಡರುತೊಡರುಗಳು ಬಂದೇ ಬರುತ್ತವೆ. ಅಯ್ಯೋ, ಅಡ್ಡಿಆತಂಕಗಳು ಎದುರಾದವಲ್ಲಾ ಎನ್ನುವುದೇಕೆ? ನಿಮ್ಮ ಜಾಣ್ಮೆಯಿಂದ ಅವನ್ನು ಸಾಧ್ಯವಾದಷ್ಟು ಪರಿಹರಿಸಿಕೊಳ್ಳಿ. ನಿಮ್ಮ ಕೈಲಾದಷ್ಟು ದುಡಿಯಿರಿ. ಬಂದದ್ದೆಲ್ಲಾ ಬರಲಿ ಎಂದು ಜೀವನದಲ್ಲಿ ಬಂದ ಪಾಡನ್ನು ಅನುಭವಿಸಿ. ನಿಮ್ಮ ಕೈಮೀರಿದ್ದನ್ನು ವಿಧಿಗೆ ಬಿಟ್ಟು ಬಿಡಿ. ಆದರೆ ಬದುಕಿನ ನೆಮ್ಮದಿ (ಉಪಶಾಂತಿ) ಕಳೆದುಕೊಳ್ಳಬೇಡಿ. ಇದುವೇ ನಿಮ್ಮ ಬಿಡುಗಡೆಯ ದಾರಿ ಎನ್ನುತ್ತಾರೆ ಮಾನ್ಯ ಡಿ.ವಿ. ಗುಂಡಪ್ಪನವರು.
ಬ್ರೈಲ್ ಲಿಪಿ, ಕಣ್ಣು ಕಾಣಿಸದವರು ಓದಲು ಮತ್ತು ಬರೆಯಲು ಬಳಸುವ ಲಿಪಿ. ಇದರ ಸಂಶೋಧಕ ಲೂಯಿಸ್ ಬ್ರೈಲಿ. ಫ್ರಾನ್ಸಿನ ರಾಜಧಾನಿ ಪ್ಯಾರಿಸ್ ಹತ್ತಿರದ ಊರಿನವನು. ಮೂರು ವರುಷದ ಮಗುವಾಗಿದ್ದಾಗ ಅವಘಡದಿಂದಾಗಿ ಕಣ್ಣಿನ ದೃಷ್ಠಿ ಕಳೆದುಕೊಂಡವನು. ಹತ್ತು ವರುಷ ವಯಸ್ಸಾದಾಗ, ಪ್ಯಾರಿಸಿನ ರಾಯಲ್ ಇನ್ಸ್ಟಿಟ್ಯೂಟ್ ಫಾರ್ ಬ್ಲೈಂಡ್ ಯೂತ್ನಲ್ಲಿ ಕಲಿಯಲು ಅವನಿಗೆ ವಿದ್ಯಾರ್ಥಿವೇತನ ಸಿಕ್ಕಿತು. ಅಲ್ಲಿ, ತಾಮ್ರದ ತಂತಿಗಳನ್ನು ಒತ್ತಿ ಕಾಗದದಲ್ಲಿ ಮೂಡಿಸಿದ ಅಕ್ಷರಗಳಿಂದ ಮಕ್ಕಳಿಗೆ ಕಲಿಸುತ್ತಿದ್ದರು. ಭಾರವಾದ ಆ ಪುಸ್ತಕಗಳನ್ನು ಓದುವುದು ಬಹಳ ಕಷ್ಟ.
ಚಾರ್ಲ್ಸ್ ಬಾರ್ಬಿಯರ್ ಎಂಬ ಮಾಜಿ ಸೈನಿಕ ಆ ಶಾಲೆಗೆ ೧೮೨೧ರಲ್ಲಿ ಬರುತ್ತಾರೆ. ಹನ್ನೆರಡು ಬಿಂದುಗಳನ್ನು ಆಧರಿಸಿದ “ರಾತ್ರಿ ಬರಹ” ಎಂಬ ತಮ್ಮ ಗುಪ್ತ ಸಂದೇಶ ರವಾನೆಯ ಅನುಶೋಧನೆಯನ್ನು ಮಕ್ಕಳಿಗೆ ಕಲಿಸುತ್ತಾರೆ. (ಇದನ್ನು ಬಳಸಿ ಸೈನಿಕರು ಮಾತುಕತೆಯಿಲ್ಲದೆ ಗುಪ್ತ ಸಂದೇಶಗಳನ್ನು ರವಾನಿಸುತ್ತಿದ್ದರು.) ಅದು ಜಟಿಲವಾಗಿದ್ದರೂ ಹನ್ನೆರಡು ವರುಷ ವಯಸ್ಸಿನ ಲೂಯಿಸ್ ಅದನ್ನು ಬೇಗನೇ ಕಲಿಯುತ್ತಾನೆ. ತನ್ನ ಹದಿನೈದನೇ ವಯಸ್ಸಿನಲ್ಲಿ ಅದನ್ನು ೧೨ ಬಿಂದುಗಳ ಬದಲಾಗಿ ಆರು-ಬಿಂದುಗಳನ್ನು ಆಧರಿಸಿದ ಸಂದೇಶ ರವಾನೆ ವ್ಯವಸ್ಥೆಯಾಗಿ ಸರಳಗೊಳಿಸುತ್ತಾರೆ. ಅನಂತರ, ೧೮೨೯ರಲ್ಲಿ ಮೊತ್ತಮೊದಲ ಬ್ರೈಲ್ ಲಿಪಿಯ ಪುಸ್ತಕ ಪ್ರಕಟಿಸುತ್ತಾರೆ. ಪದವಿ ಶಿಕ್ಷಣದ ನಂತರ, ಲೂಯಿಸ್ ೧೮೨೮ರಲ್ಲಿ ಅದೇ ಸಂಸ್ಥೆಯಲ್ಲಿ ಅಧ್ಯಾಪಕರಾಗುತ್ತಾರೆ. ಕ್ರಮೇಣ ಬ್ರೈಲ್ ಲಿಪಿ ಜಗತ್ತಿನ ಉದ್ದಗಲಕ್ಕೆ ವ್ಯಾಪಿಸಿತು. ಕಣ್ಣಿನ ದೃಷ್ಟಿ ಕಳೆದುಕೊಂಡ ಲೂಯಿಸ್ ತನ್ನ ಬದುಕಿನಲ್ಲಿ ಕತ್ತಲು ತುಂಬಿತೆಂದು ದುಃಖಿಸುತ್ತ ಕೂರಲಿಲ್ಲ. ಅದನ್ನು ಎದುರಿಸಿ, ಕಣ್ಣು ಕಾಣದಿರುವ ಎಲ್ಲರಿಗೂ ಬೆಳಕಾಗುವಂತೆ ಬಾಳಿದರು. ಅವರನ್ನೆಲ್ಲ ಜ್ನಾನದಲೋಕಕ್ಕೆ ಮುನ್ನಡೆಸಿದರು.
ಕಾಲ ಬೇರಾಯ್ತೆಂದು ಗೋಳಾಡುವುದದೇಕೆ?
ಲೀಲೆ ಜಗವೆನ್ನಲದು ಪರಿಪರಿ ಪರೀಕ್ಷೆ
ತಾಳೆಲ್ಲವನು ನಿನ್ನ ಸಂಯಮದ ಸತ್ತ್ವದಿಂ
ಬಾಳುವುದೆ ಗೆಲವೆಲವೊ – ಮರುಳ ಮುನಿಯ
ಕಾಲ ಬದಲಾಗಿದೆಯೆಂದು ಗೋಳಾಡುವುದೇಕೆ? ಎಂಬ ಸರಳ ಪ್ರಶ್ನೆಯ ಮೂಲಕ ಈ ಮುಕ್ತಕದಲ್ಲಿ ಮಾನ್ಯ ಡಿ.ವಿ.ಜಿ. ಅವರು ನೀಡುವ ಸಂದೇಶ: ಈ ಜಗತ್ತು ಪರಮಾತ್ಮನ ಲೀಲೆ ಎನ್ನುವುದಾದರೆ, ಇಲ್ಲಿ ಪರಿ ಪರಿ ಪರೀಕ್ಷೆಗಳು ಇದ್ದೇ ಇರುತ್ತವೆ. ಅವೆಲ್ಲವನ್ನೂ ನಮ್ಮ ಸಂಯಮದ ಸತ್ತ್ವದಿಂದ ತಾಳಿಕೊಂಡು ಬಾಳುವುದೇ ಗೆಲವು.
ಕಳೆದ ೨೧ ವರುಷಗಳಲ್ಲಿ ನಮ್ಮ ದೇಶದಲ್ಲಿ ಆತ್ಮಹತ್ಯೆ ಮಾಡಿಕೊಂಡ ರೈತರ ಸಂಖ್ಯೆ ೩,೧೮,೦೦೦ ದಾಟಿದೆ. ೨೦೧೫ರಲ್ಲಿ, ಒಂದೇ ವರುಷದಲ್ಲಿ, ೮,೦೦೭ ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಇದು ಕೃಷಿರಂಗದ ಗರ್ಭದಲ್ಲಿರುವ ತಲ್ಲಣಗಳ ಸೂಚಕ. ಕಳೆದ ಮೂರು ದಶಕಗಳಲ್ಲಿ ಹೀಗೇಕಾಯಿತು? ಏಕೆಂದರೆ, “ಆರ್ಥಿಕ ಸುಧಾರಣೆ”ಯ ಕ್ರಮಗಳು ಜ್ಯಾರಿ ಆದಾಗಿನಿಂದ ಕೃಷಿರಂಗವು ನಿರ್ಲಕ್ಷ್ಯಕ್ಕೆ ಬಲಿಯಾಗಿದೆ. ನಮ್ಮ ದೇಶಕ್ಕೆ ಜಾಗತಿಕ ಬ್ಯಾಂಕ್ ನೀಡಿದ್ದ ನಿರ್ದೇಶನ: ೨೦೧೫ರ ಹೊತ್ತಿಗೆ ೪೦೦ ದಶಲಕ್ಷ ಜನರು ಗ್ರಾಮೀಣ ಪ್ರದೇಶಗಳಿಂದ ನಗರ ಪ್ರದೇಶಗಳಿಗೆ ವಲಸೆ ಹೋಗುವಂತೆ ಮಾಡಬೇಕು. ಅದಕ್ಕಾಗಿ, ಎಲ್ಲ ಸರಕಾರಗಳು ಕೃಷಿ ಎಂಬುದು ನಷ್ಟದ ವ್ಯವಹಾರ ಆಗುವಂತೆ ಮಾಡಿವೆ.
ಆಹಾರದ ಹಣದುಬ್ಬರ ನಿಯಂತ್ರಿಸಲಿಕ್ಕಾಗಿ ರೈತರ ಫಸಲಿಗೆ ಕಡಿಮೆ ಬೆಲೆ ಪಾವತಿಸುವ ವ್ಯವಸ್ಥೆ ಚಾಲ್ತಿಯಲ್ಲಿದೆ. ಅದು ಎಷ್ಟು ಕಡಿಮೆಯೆಂದರೆ, ಫಸಲಿನ ಉತ್ಪಾದನಾ ವೆಚ್ಚಕ್ಕಿಂತಲೂ ಕಡಿಮೆ. ಇದರಿಂದಾಗಿ, ವರುಷದಿಂದ ವರುಷಕ್ಕೆ ರೈತರ ಹತಾಶೆ ಹೆಚ್ಚುತ್ತಿದೆ. ಕೇಂದ್ರ ಸರಕಾರ ಪ್ರಕಟಿಸಿದ ೨೦೧೬ರ ಆರ್ಥಿಕ ಸಮೀಕ್ಷೆ ಪ್ರಕಾರ, ೧೭ ರಾಜ್ಯಗಳ ಕೃಷಿ ಕುಟುಂಬಗಳ ವಾರ್ಷಿಕ ಆದಾಯ ಕೇವಲ ರೂ.೨೦,೦೦೦. ಅಂದರೆ, ತಿಂಗಳಿಗೆ ರೂ.೧,೭೦೦ಕ್ಕಿಂತ ಕಡಿಮೆ. ಈ ಆದಾಯದಲ್ಲಿ ಒಂದು ಕುಟುಂಬ ಬಾಳಲು ಸಾಧ್ಯವೇ?
ಆದರೆ, ತಮ್ಮ ಕೈಮೀರಿದ ಕಾರಣಗಳಿಂದಾಗಿ ಬದುಕು ದಾರುಣವಾದಾಗ ಆತ್ಮಹತ್ಯೆ ಪರಿಹಾರವಲ್ಲ. ಕಡಿಮೆ ನೀರಿನಿಂದ ಬೆಳೆಸಬಹುದಾದ ಸಿರಿಧಾನ್ಯದ ಬೆಳೆಗಳ ಬೇಸಾಯದಿಂದ ಮನೆಮಂದಿಯ ಊಟಕ್ಕೆ ಬೇಕಾದ ಫಸಲು ಪಡೆಯಲು ಸಾಧ್ಯ. ಬಹುಬೆಳೆಗಳನ್ನು ಬೆಳೆಸಿದರೆ, ಒಂದಾದರೂ ಬೆಳೆ ಕೈಗೆ ಬಂದು, ಆದಾಯ ಸಿಗಲು ಸಾಧ್ಯ. ಫಸಲಿನ ಮೌಲ್ಯವರ್ಧನೆ ಮಾಡಿ (ಹಲಸಿನಿಂದ ಹಪ್ಪಳ, ಮಾವಿನಿಂದ ಮಾಂಬಳ) ಮಾರಿದರೆ ಹೆಚ್ಚಿನ ಆದಾಯ ಗಳಿಸಲು ಸಾಧ್ಯ. ಈ ರೀತಿ ಬದಲಾದ ಪರಿಸ್ಥಿತಿಯನ್ನು ಎದುರಿಸಿ ಬಾಳಬೇಕು. ಇದುವೇ ಜೀವನದ ಗೆಲವು, ಅಲ್ಲವೇ?
ಆಶೆ ಬಲೆಯನು ಬೀಸಿ, ನಿನ್ನ ತನ್ನೆಡೆಗೆಳೆದು
ಘಾಸಿ ನೀಂ ಬಡುತ ಬಾಯ್ಬಿಡಲೋರೆ ನೋಡಿ
ಮೈಸವರಿ ಕಾಲನೆಡವಿಸಿ, ಗುಟ್ಟಿನಲಿ ನಗುವ
ಮೋಸದಾಟವೊ ದೈವ - ಮಂಕುತಿಮ್ಮ
ದೈವ ನಮ್ಮೊಡನೆ ಮೋಸದಾಟ ಆಡುತ್ತಿದೆ ಎಂದು ಈ ಮುಕ್ತಕದಲ್ಲಿ ವಿವರಿಸುತ್ತಾರೆ ಮಾನ್ಯ ಡಿ.ವಿ. ಗುಂಡಪ್ಪನವರು. ಆ ಮೋಸದಾಟದ ಮೊದಲ ಹಂತ ಆಶೆಯ ಬಲೆಯನ್ನು ಬೀಸಿ, ನಿನ್ನನ್ನು ತನ್ನೆಡೆಗೆ ಸೆಳೆದುಕೊಳ್ಳುವುದು. ಈ ಸೆಳೆತದಿಂದ ನೀನು ತೊಂದರೆ (ಘಾಸಿ) ಪಡುತ್ತಾ, ಸಂಕಟದಿಂದ ಬಾಯಿ ಬಿಡುವಾಗ ನಿನ್ನನ್ನು ಓರೆನೋಟದಿಂದ ನೋಡುವುದು ಎರಡನೆಯ ಹಂತ. ಮೂರನೆಯ ಹಂತದಲ್ಲಿ, ದೈವ ನಿನ್ನ ಮೈಸವರಿ ನಿನ್ನನ್ನು ಸಮಾಧಾನ ಪಡಿಸುವ ನಾಟಕ ಮಾಡುತ್ತದೆ; ಜೊತೆಜೊತೆಯಲ್ಲೇ ನಿನ್ನ ಕಾಲನ್ನು ಎಡವಿಸಿ, ನೀನು ಕೆಳಕ್ಕೆ ಬಿದ್ದಾಗ ಗುಟ್ಟಿನಲ್ಲಿ ನಗುತ್ತದೆ ದೈವ.
ನಿಮ್ಮ ಹಣಕ್ಕೆ ವಾರ್ಷಿಕ ಶೇಕಡಾ ೧೮ರಿಂದ ೨೫ ಬಡ್ಡಿ ಪಾವತಿಸುತ್ತೇವೆಂದು ಜಾಹೀರಾತು ನೀಡಿ ಜನರನ್ನು ಸೆಳೆದದ್ದು ಶರವಣಂ ಫೈನಾನ್ಸ್ ಇತ್ಯಾದಿ ಬ್ಲೇಡ್ ಕಂಪೆನಿಗಳು. ಕೊನೆಗೆ, ಅವು ಕಾಣದಂತೆ ಮಾಯವಾದವು. ಆದರೆ ಜನರು ಪಾಠ ಕಲಿಯಲಿಲ್ಲ. ಅಧಿಕ ಬಡ್ಡಿ ಕೊಡುತ್ತೇವೆಂದು ಮಹಾರಾಷ್ಟ್ರ ಅಪೆಕ್ಸ್ ಇತ್ಯಾದಿ ನಾನ್-ಬ್ಯಾಂಕಿಂಗ್ ಫೈನಾನ್ಸ್ ಕಂಪೆನೆಗಳು ಆಮಿಷ ತೋರಿಸಿದವು. ಸಾವಿರಾರು ಜನರು ಅಲ್ಲಿ ಠೇವಣಿಯಿಟ್ಟು ಕೈಸುಟ್ಟುಕೊಂಡರು. ಆದರೂ ಜನರು ಪಾಠ ಕಲಿಯಲಿಲ್ಲ. ಅನಂತರ, ಮೋಸದಾಟದಲ್ಲಿ ಪ್ಲಾಂಟೇಷನ್ ಕಂಪೆನಿಗಳ ಸರದಿ. ೬೨೫ ಪ್ಲಾಂಟೇಷನ್ ಕಂಪೆನಿಗಳು, ಪತ್ರಿಕೆ ಹಾಗೂ ಟಿವಿ ಜಾಹೀರಾತು ಮೂಲಕ ಇಪ್ಪತ್ತು ವರುಷಗಳಲ್ಲಿ ಠೇವಣಿ ಹಣ ಹಲವು ಪಟ್ಟು ವೃದ್ಧಿಯಾಗುವ ಕನಸು ಬಿತ್ತಿದವು. ಕೊನೆಗೆ ಸುಪ್ರೀಂ ಕೋರ್ಟ್ ಅವುಗಳ ಮೋಸದಾಟಕ್ಕೆ ಕಡಿವಾಣ ಹಾಕಿದಾಗ ಲಕ್ಷಗಟ್ಟಲೆ ಜನರು ರೂ.೨೫,೦೦೦ ಕೋಟಿ ಕಳೆದುಕೊಂಡಾಗಿತ್ತು. ಇತ್ತೀಚೆಗಿನ ಇಂಥ ಮೋಸದಾಟ ಕರ್ನಾಟಕದ ಕಲಘಟಗಿಯ ಹರ್ಷ ಎಂಟರ್-ಟೈನ್-ಮೆಂಟ್ ಪ್ರೈ.ಲಿ. ಕಂಪೆನಿಯದ್ದು. ಅದರ ಮಾಲೀಕ ಸತ್ಯಬೋಧ ಖಾಸ್ನೀಸ್ ಮತ್ತು ಆತನ ಇಬ್ಬರು ಸೋದರರು ಸಾರ್ವಜನಿಕರಿಂದ ಸಂಗ್ರಹಿಸಿದ್ದು ಸಾವಿರಾರು ಕೋಟಿ ರೂಪಾಯಿ. ಕೊನೆಗೆ ೯ ಎಪ್ರಿಲ್ ೨೦೧೭ರಂದು ಅವರು ಪರಾರಿಯಾದರು (೩೦ ಮೇ ೨೦೧೭ರಂದು ಅವರ ಬಂಧನವಾಗಿದೆ.)
ಉದ್ಯೋಗದ ಆಕಾಂಕ್ಷಿಗಳೂ ಹಾಗೆಯೇ ಸುಲಭದಲ್ಲಿ ಮೋಸದಾಟಕ್ಕೆ ಬಲಿಯಾಗುತ್ತಾರೆ. ಯಾವುದೋ ನಕಲಿ ನೇಮಕಾತಿ ಪತ್ರಕ್ಕಾಗಿ ಹಿಂದೆಮುಂದೆ ಯೋಚಿಸದೆ ರೂಪಾಯಿ ಒಂದು ಲಕ್ಷದಿಂದ ರೂ.೨೫ ಲಕ್ಷ ಪಾವತಿಸಿ, ಕೊನೆಗೆ ಉದ್ಯೋಗ ಸಿಗದೆ, ಹಣವನ್ನೂ ಕಳಕೊಂಡು ಹಣೆ ಚಚ್ಚಿಕೊಳ್ಳುತ್ತಾರೆ. ಗಲ್ಫ್ ದೇಶಗಳಲ್ಲಿ ಉದ್ಯೋಗದ್ದು ಇನ್ನೊಂದು ಕತೆ. ಅಲ್ಲಿ ಒಳ್ಳೆಯ ಉದ್ಯೋಗ ಕೊಡಿಸುತ್ತೇವೆಂಬ ಏಜೆಂಟರ ಮಾತನ್ನು ನಂಬಿ, ಅಲ್ಲಿಗೆ ಹೋಗಿದ್ದ ದಕ್ಷಿಣ ಕನ್ನಡದ ನಾಲ್ವರು ಮರುಭೂಮಿಯಲ್ಲಿ ಕುರಿ ಕಾಯುವ ಕೆಲಸ ಮಾಡಬೇಕಾದದ್ದು ಇತ್ತೀಚೆಗಿನ ಪ್ರಕರಣ. ಅವರ ಪಾಸ್-ಪೋರ್ಟ್ ಮಾಲೀಕನ ವಶದಲ್ಲಿದ್ದ ಕಾರಣ ಅವರು ಅಸಹಾಯಕರು. ಅಂತೂ ಮೇ ೨೦೧೭ರಲ್ಲಿ ವಾಪಾಸು ಬಂದು ನಿಟ್ಟುಸಿರು ಬಿಡುತ್ತಿದ್ದಾರೆ. ದೈವದ ಮೋಸದಾಟದ ಬಗ್ಗೆ ಸದಾ ಜಾಗೃತರಾಗಿದ್ದು, ಅದಕ್ಕೆ ಬಲಿಯಾಗದಿರಲು ಪ್ರಯತ್ನಿಸಬೇಕು, ಅಲ್ಲವೇ?
ದೈವ ತೋರುವುದು ಕರವಾಳ ವರದಾನಗಳ
ಆವಂದದಾವುದೋ ನಿನಗೆ ಗೊತ್ತಿಲ್ಲ
ನೋವಲ್ತೊಡಲಗಟ್ಟಿಯನಳೆವುಪಾಯವದು
ದೈವ ಸತ್ತ್ವಪರೀಕ್ಷೆ - ಮರುಳ ಮುನಿಯ
ದೈವವು ನಿನಗೆ ಕರವಾಳ (ಕತ್ತಿ) ಮತ್ತು ವರದಾನ - ಎರಡನ್ನೂ ತೋರುತ್ತದೆ. ಆದರೆ ದೈವ ಯಾವಾಗ ನಿನ್ನ ಮೇಲೆ ಕತ್ತಿ ಘಳಪಿಸುತ್ತದೆ ಅಥವಾ ಅನುಗ್ರಹ ತೋರುತ್ತದೆ ಎಂದು ನಿನಗೆ ಗೊತ್ತಿಲ್ಲ. ದೈವ ಕತ್ತಿ ಬೀಸಿದಾಗ ನೋವು ಅಂದುಕೊಳ್ಳಬೇಡ (ನೋವು ಅಲ್ತೆ); ಅದು ದೈವ ನಿನ್ನೊಡಲ ಗಟ್ಟಿತನ ಅಳೆಯುವ ಉಪಾಯ. ಹೀಗೆ ದೈವ ನಿನ್ನ ಸತ್ತ್ವಪರೀಕ್ಷೆ ಮಾಡುತ್ತಲೇ ಇರುತ್ತದೆ ಎಂದು ವಿವರಿಸುತ್ತಾರೆ ಡಿ.ವಿ.ಜಿ.ಯವರು.
ದಿವಂಗತ ಎ.ಪಿ.ಜೆ. ಅಬ್ದುಲ್ ಕಲಾಂ ಅವರ ಆತ್ಮಕತೆ “ಅಗ್ನಿಯ ರೆಕ್ಕೆಗಳು”. ಅದರಲ್ಲೊಂದು ಪ್ರಸಂಗವನ್ನು ಬರೆದಿದ್ದಾರೆ. ಅವರು ಎಚ್.ಎ.ಎಲ್.ನಿಂದ ವೈಮಾನಿಕ ಎಂಜಿನಿಯರ್ ಪದವಿ ಪಡೆಯುತ್ತಾರೆ. ಆಗ ಅವರಿಗೆ ಎರಡು ಉದ್ಯೋಗದ ಅವಕಾಶಗಳು ಒದಗಿ ಬರುತ್ತವೆ. ಒಂದು, ಭಾರತೀಯ ವಾಯುದಳದಲ್ಲಿ ಪೈಲಟ್ ಆಗುವುದು. ಇನ್ನೊಂದು, ರಕ್ಷಣಾ ಇಲಾಖೆಯಲ್ಲಿ ವಿಜ್ನಾನಿ ಆಗುವುದು. ಅವರು ಎರಡೂ ಸಂದರ್ಶನಗಳಿಗೆ ಹಾಜರಾಗುತ್ತಾರೆ. ಆದರೆ ವಾಯುದಳಕ್ಕೆ ಅವರು ಆಯ್ಕೆ ಆಗಲಿಲ್ಲ. ಪೈಲಟ್ ಆಗಬೇಕೆಂಬ ಆಶೆ ಕೈಗೂಡದ್ದರಿಂದ ಅವರಿಗೆ ಭಾರಿ ನಿರಾಶೆ. ಅನಂತರ ೧೯೫೮ರಲ್ಲಿ ಅವರು ಸೇರಿಕೊಂಡದ್ದು ರಕ್ಷಣಾ ಇಲಾಖೆಯ ಹಿರಿಯ ವೈಜ್ನಾನಿಕ ಸಹಾಯಕ ಹುದ್ದೆಗೆ. ಅದು ತನ್ನ ವಿಧಿ ಆಗಿದ್ದರೆ ಅದನ್ನು ಸ್ವೀಕರಿಸುತ್ತೇನೆ ಎಂಬ ಮನೋಭಾವದಿಂದ ಮುನ್ನಡೆದರು. ಮುಂದೆ ಅವರು ರಾಕೆಟ್ ಉಡಾವಣೆ ತಂತ್ರಜ್ನಾನದಲ್ಲಿ ಭಾರತವನ್ನು ಮುಂಚೂಣಿಗೆ ತಂದದ್ದು; ಭಾರತದ ಅತ್ಯುನ್ನತ ಅಧಿಕಾರ ಸ್ಥಾನಕ್ಕೇರಿ ರಾಷ್ಟ್ರಪತಿ ಆದದ್ದು; ಲಕ್ಷಗಟ್ಟಲೆ ಯುವಜನರಿಗೆ ಸ್ಫೂರ್ತಿ ಆದದ್ದು - ಇವೆಲ್ಲ ಈಗ ಚರಿತ್ರೆ.
ಉತ್ತರಪ್ರದೇಶದ ಲಕ್ನೋದ ಡಾ. ಸರೋಜಿನಿ ಅಗ್ರವಾಲ್ ಅವರ ಬದುಕಿನಲ್ಲಿಯೂ ಹೀಗೆಯೇ ಆಯಿತು. ಅವರಿಗಿಬ್ಬರು ಗಂಡು ಮಕ್ಕಳ ಜನನ. ಮೂರನೆಯ ಬಾರಿ ಗರ್ಭವತಿಯಾದಾಗ ತನಗೆ ಹೆಣ್ಣು ಮಗುವಾಗಲಿ ಎಂದು ಎಲ್ಲ ದೇವರಿಗೂ ಕೈಮುಗಿದರು. ಆಗ ಹುಟ್ಟಿದ್ದು ಅವಳಿಜವಳಿ ಮಕ್ಕಳು - ಒಂದು ಗಂಡು, ಒಂದು ಹೆಣ್ಣು. ಆ ಹೆಣ್ಣು ಮಗು ಮನೀಷಾ. ದೈವಕೃಪೆಗಾಗಿ ಪಾರವಿಲ್ಲದ ಸಂತೋಷ ಅವರಿಗೆ. ಅದೆಲ್ಲ ಕೆಲವೇ ವರುಷ. ಎಪ್ರಿಲ್ ೧, ೧೯೭೮ರಂದು ಅಪಘಾತದಲ್ಲಿ ಮನೀಷಾಳ ಸಾವು. ಡಾ. ಸರೊಜಿನಿ ಅವರಿಗೆ ಬದುಕೇ ಬೇಡವಾಯಿತು. ಅದಾಗಿ ಕೆಲವೇ ವರುಷಗಳಲ್ಲಿ, ಹೆರಿಗೆಯಾಗಿ ತೀರಿಕೊಂಡಿದ್ದ ತಾಯಿಯೊಬ್ಬಳ ಹೆಣ್ಣುಮಗುವನ್ನು ವೈದ್ಯರೊಬ್ಬರ ಸಹಕಾರದಿಂದ ದತ್ತು ಪಡೆದರು. ಅನಂತರ ಇನ್ನೂ ಹಲವು ಅನಾಥ ಹೆಣ್ಣುಮಕ್ಕಳನ್ನು ಸಲಹತೊಡಗಿದರು. ಅದಕ್ಕಾಗಿ ೧೯೮೪ರಲ್ಲಿ ಮನೀಷಾ ಮಂದಿರ ಎಂಬ ಅನಾಥಾಶ್ರಮವನ್ನೇ ಸ್ಥಾಪಿಸಿದರು. ಒಂದು ಹೆಣ್ಣು ಮಗುವನ್ನು ದೈವ ಕಿತ್ತು ಕೊಂಡರೇನಂತೆ? ಕಳೆದ ೩೩ ವರುಷಗಳಲ್ಲಿ ೮೦೦ಕ್ಕಿಂತ ಅಧಿಕ ಹೆಣ್ಣು ಮಕ್ಕಳಿಗೆ “ತಾಯಿ"ಯಾಗುವ ಅವಕಾಶವನ್ನು ಸರೋಜಿನಿ ಅವರಿಗೆ ದೈವ ಒದಗಿಸಿತು, ಅಲ್ಲವೇ?
ಉಪ್ಪಿಷ್ಟು ಹುಳಿಯಿಷ್ಟು ಕಾರ ಸಿಹಿಯಷ್ಟಿಷ್ಟು
ಒಪ್ಪಿರ್ದೊಡದು ಭೋಜ್ಯವಂತು ಜೀವಿತಮುಂ
ತಪ್ಪು ಸರಿ ಬೆಪ್ಪು ಜಾಣಂದಕುಂದುಗಳ ಬಗೆ
ಯಿಪ್ಪತ್ತು ಸೇರೆ ರುಚಿ - ಮಂಕುತಿಮ್ಮ
ಉಪ್ಪು, ಹುಳಿ, ಕಾರ ಮತ್ತು ಸಿಹಿ - ಇವು ಇಷ್ಟಿಷ್ಟು ಹಿತಮಿತವಾಗಿ ಸೇರಿದರೆ ರುಚಿಯಾಗಿ ಊಟಕ್ಕೆ ಯೋಗ್ಯ (ಭೋಜ್ಯ) ಆಗುತ್ತದೆ; ಹಾಗೆಯೇ ತಪ್ಪು, ಸರಿ, ಬೆಪ್ಪು, ಜಾಣತನ, ಅಂದಚಂದ, ಕುಂದುಕೊರತೆ - ಇಂತಹ ಹಲವಾರು ಗುಣಗಳು ಸೇರಿದರೆ ಬದುಕು ಸೊಗಸಾಗುತ್ತದೆ ಎನ್ನುತ್ತಾರೆ ಮಾನ್ಯ ಡಿ.ವಿ. ಗುಂಡಪ್ಪನವರು ಈ ಮುಕ್ತಕದಲ್ಲಿ. ಬದುಕಿನ ಬಗೆಗಿನ ಈ ಸರಳ ವಿವರಣೆ ಮನದಟ್ಟಾಗ ಬೇಕಾದರೆ ನಾವು ಓದಬೇಕು ಆತ್ಮಕತೆಗಳನ್ನು ಹಾಗೂ ಜೀವನಕತೆಗಳನ್ನು. ಬಹುಪಾಲು ಆತ್ಮಕತೆಗಳು ೨೦೦ - ೩೦೦ ಪುಟಗಳ ಪುಸ್ತಕಗಳು.
ವಿಠ್ಠಲ ವೆಂಕಟೇಶ ಕಾಮತರದು ಹೋಟೆಲ್ ಉದ್ಯಮದಲ್ಲಿ ದೊಡ್ಡ ಹೆಸರು. ಈ ಉದ್ಯಮದ ಒಳಹೊರಗನ್ನು ತಿಳಿಯಲು ಪಟ್ಟ ಪಾಡನ್ನು ಅವರು ದಾಖಲಿಸಿದ್ದಾರೆ ತಮ್ಮ ಆತ್ಮಕತೆ “ಇಡ್ಲಿ, ಆರ್ಕಿಡ್ ಮತ್ತು ಆತ್ಮಬಲ”ದಲ್ಲಿ. ಮುಂಬೈ ಅಂತರರಾಷ್ಟ್ರೀಯ ವಿಮಾನನಿಲ್ದಾಣದ ಹತ್ತಿರದ ಆರ್ಕಿಡ್ ಹೋಟೆಲನ್ನು ಕಟ್ಟಲು ಶುರು ಮಾಡಿದಾಗ ತನ್ನ ತಮ್ಮನಿಂದಾಗಿ ಅನುಭವಿಸಬೇಕಾದ ಸಂಕಟಗಳನ್ನೂ ಬರೆದುಕೊಂಡಿದ್ದಾರೆ. ಬದುಕಿನಲ್ಲಿ ನುಗ್ಗಿ ಬಂದ ಹತಾಶೆ; ಜೀವನವೇ ಬೇಡವೆನಿಸಿದ್ದು; ಕೊನೆಗೆ ಆರ್ಕಿಡ್ ಹೋಟೆಲನ್ನು ಜಗತ್ತಿನ ಅತ್ಯುತ್ತಮ ಹೋಟೆಲನ್ನಾಗಿ ಮಾಡುತ್ತೇನೆಂಬ ಸಂಕಲ್ಪ ತೊಟ್ಟು, ಆ ಗುರಿ ಸಾಧಿಸಿದ್ದು - ಇವನ್ನೆಲ್ಲ ಮನಮುಟ್ಟುವಂತೆ ಹಂಚಿಕೊಂಡಿದ್ದಾರೆ.
ಮನೆಮಾತಾಗಿರುವ ಕವಿ ಎಚ್.ಎಸ್. ವೆಂಕಟೇಶಮೂರ್ತಿಯವರ ಆತ್ಮಕತೆ "ಅನಾತ್ಮ ಕಥನ”. ಅದರ ಒಂದು ಪ್ರಸಂಗ ಹೀಗಿದೆ: ಅವರ ಪತ್ನಿಗೆ ಮಾರಕ ಕಾಯಿಲೆ ತಗಲಿದೆಯೆಂದು ತಿಳಿಯುತ್ತದೆ. ಅವರಿಗಿನ್ನು ಆರು ತಿಂಗಳಷ್ಟೇ ಆಯುಸ್ಸು ಎಂದು ಆಪ್ತರಾದ ಡಾ. ಮೂರ್ತಿ ಹೇಳುತ್ತಾರೆ. ಇದನ್ನು ಯಾರಿಗೂ ತಿಳಿಸಬಾರದೆಂದು ನಿರ್ಧರಿಸಿದ ವೆಂಕಟೇಶ ಮೂರ್ತಿಯವರ ಬಿಚ್ಚು ಮಾತು, "ಮನೆಯಲ್ಲಿ ಯಾರಿಗೂ ಈ ವಿಷಯ ತಿಳಿಸಲಿಲ್ಲ. ಹೊಟ್ಟೆಯಲ್ಲಿ ಬೆಂಕಿ ಇಟ್ಟುಕೊಂಡು ಹೇಗೋ ದಿನ ತಳ್ಳಿದೆ….."
ಕನ್ನಡದ ಮಹಾನ್ ಸಾಹಿತಿ ಪೂರ್ಣಚಂದ್ರ ತೇಜಸ್ವಿಯವರು. “ಪರಿಸರದ ಕತೆಗಳು”, “ಕರ್ವಾಲೋ", "ಜುಗಾರಿ ಕ್ರಾಸ್", "ಚಿದಂಬರ ರಹಸ್ಯ” ಇತ್ಯಾದಿ ಕತೆಕಾದಂಬರಿಗಳು ಹಾಗೂ ಮಿಲಿನಿಯಂ ಸರಣಿಯ ಪುಸ್ತಕಗಳ ಮೂಲಕ ಕನ್ನಡ ಸಾಹಿತ್ಯಕ್ಕೆ ಅಮೂಲ್ಯ ಕೊಡುಗೆಯಿತ್ತವರು. ಹುಟ್ಟು ಪ್ರತಿಭಾವಂತರಾದ ತೇಜಸ್ವಿಯವರು ಸಾಂಪ್ರದಾಯಿಕ ಶಿಕ್ಷಣ ಪದ್ಧತಿಯಲ್ಲಿ ಹಲವಾರು ಎಡರುತೊಡರುಗಳನ್ನು ಎದುರಿಸಿದರು. ಅವನ್ನು "ಅಣ್ಣನ ನೆನಪು" ಪುಸ್ತಕದಲ್ಲಿ ಹೀಗೆ ಮುಕ್ತವಾಗಿ ಬರೆದಿದ್ದಾರೆ: “ನನಗೆ ಮೊದಲಿನಿಂದಲೂ ಲೆಕ್ಕ ಎಂದರೆ ಆಗುವುದೇ ಇಲ್ಲ. ಅಂಕಗಣಿತದಲ್ಲಿ ಏನು ಮಾಡಿದರೂ ಪಾಸ್ ಮಾಡಲು ಸಾಧ್ಯವಾಗದೆ ಎಸ್.ಎಸ್.ಎಲ್.ಸಿ.ಯಲ್ಲಿ ಎರಡು ಸಾರಿ ಡುಮ್ಕಿ ಹೊಡೆದೆ…… ಮತ್ತೆ ಜೂನಿಯರ್ ಇಂಟರಿನಲ್ಲೇ ಡುಮ್ಕಿ. ನನಗೆ ರೇಜಿಗೆ ಹತ್ತಿಹೋಯ್ತು. ವಿದ್ಯಾಭ್ಯಾಸದ ಮೇಲೇ ಬೇಸರ ಬಂದು ನಾನು ಡಿಗ್ರಿ ಪಡೆಯಬಹುದೆಂಬ ಆತ್ಮವಿಶ್ವಾಸವೇ ಹೋಯ್ತು….." ಎಂದು ಮುಕ್ತವಾಗಿ ಬರೆದುಕೊಂಡಿದ್ದಾರೆ.
ಎಲ್ಲರ ಬದುಕು ಹೀಗೆಯೇ…. ವಿವಿಧ ರುಚಿಗಳು ಸೇರಿ ಸವಿಯಾದ ಊಟವಾಗುವಂತೆ, ವಿಭಿನ್ನ ಅನುಭವಗಳು ಸೇರಿ ಬದುಕು ಹಣ್ಣಾಗುತ್ತದೆ, ಅಲ್ಲವೇ?
ಸಿಹಿಯಾಗಿ ನಾಲಗೆಗೆ ಹುಳಿಯಾಗಿ ಹಲ್ಗಳಿಗೆ
ಕಹಿಯಾಗಿ ಗಂಟಲಿಗೆ ಮೆಣಸಾತ್ಮಕಾಗಿ
ಬಹುವಿಧದ ಸವಿ ನೋಡು ಸಂಸಾರ ವೃಕ್ಷಫಲ
ಸಹಿಸದನು ವಹಿಸದನು - ಮರುಳ ಮುನಿಯ
ನಮ್ಮ ಬದುಕಿನಲ್ಲಿ ನಾಲಗೆಗೆ ಸಿಹಿ, ಹಲ್ಲುಗಳಿಗೆ ಹುಳಿ, ಗಂಟಲಿಗೆ ಕಹಿ, ಆತ್ಮಕ್ಕೆ ಮೆಣಸಿನಂತೆ ಖಾರ - ಇಂತಹ ಬಹುವಿಧದ ಸವಿ ನೀಡುತ್ತದೆ ಸಂಸಾರವೆಂಬ ವೃಕ್ಷಫಲ. ಇವನ್ನೆಲ್ಲ ಸಹಿಸಿಕೊಳ್ಳಬೇಕು, ಜೊತೆಗೆ ಸಂಸಾರ ವೃಕ್ಷದ ಜವಾಬ್ದಾರಿ ವಹಿಸಿಕೊಳ್ಳಬೇಕು ಎಂದು ಮಾನ್ಯ ಡಿ.ವಿ.ಜಿ.ಯವರು ಸಂಸಾರದ ಬಗೆಗಿನ ನಮ್ಮ ಧೋರಣೆ ಹೇಗಿರಬೇಕೆಂದು ಸರಳವಾಗಿ ವಿವರಿಸುತ್ತಾರೆ.
ಮಹಾನ್ ಕಾದಂಬರಿಕಾರ ಎಸ್.ಎಲ್. ಭೈರಪ್ಪನವರ ಆತ್ಮಕತೆ “ಭಿತ್ತಿ" ಓದಿದರೆ ಈ ಮುಕ್ತಕದ ಭಾವ ನಮ್ಮನ್ನು ತಟ್ಟುತ್ತದೆ. ಅವರ ತಾಯಿ ತೀರಿಕೊಂಡ ಸಂದರ್ಭದಲ್ಲಿ ಅವರ ತಂದೆಯ ನಡವಳಿಕೆ, ಅವರ ತಾಯಿಯ ಅಂತ್ಯಕ್ರಿಯೆಯ ವಿವರ ನಮ್ಮನ್ನು ಬೆಚ್ಚಿಬೀಳಿಸುತ್ತದೆ. “ಸಹಿಸದನು ವಹಿಸದನು” ಎಂಬ ಮಾತಿನ ಆಳ-ಅಗಲ ತಿಳಿಯುತ್ತದೆ.
ಚಿಂತಕ ರಾಮದಾಸ್ ಅವರ ಆತ್ಮಕತೆ “ಎಳನಿಂಬೆ". ಇದನ್ನು ಓದಿದಾಗಲೂ ಅದೇ ಮಾತಿನ ವ್ಯಾಪ್ತಿ ಅಂದಾಜಾಗುತ್ತದೆ. ಮೈಸೂರಿನ ದಸರಾ ಸಮಯದಲ್ಲಿ ಇವರೂ ತಮ್ಮನೂ ಪೆಂಡಾಲ್ ಹೋಟೆಲಿನಲ್ಲಿ ದಿನಗೂಲಿಗಾಗಿ ದುಡಿಯುತ್ತಿದ್ದರು. ಅದೊಂದು ದಿನ, ಇವರ ತಮ್ಮ ಕುದಿಯುತ್ತಿದ್ದ ಹಾಲಿನ ಕಡಾಯಿಯೊಳಗೆ ಬಿದ್ದು, ಮೈಯೆಲ್ಲಾ ಸುಟ್ಟು ಹೋಗುತ್ತದೆ. ಆತನನ್ನು ಸರಕಾರಿ ಆಸ್ಪತ್ರೆಗೆ ಸೇರಿಸಿದರೂ ಅಲ್ಲಿನ ವೈದ್ಯರು ಎರಡು ದಿನ ಚಿಕಿತ್ಸೆ ನೀಡುವುದಿಲ್ಲ - ಲಂಚ ಕೊಡಲಿಲ್ಲ ಎಂಬ ಕಾರಣಕ್ಕಾಗಿ. ಆ ವೈದ್ಯರಿಗೆ ಕೊಡಲಿಕ್ಕೆ ದುಡ್ಡು ಬೇಕೆಂದು ಅಮ್ಮ ಕೇಳಿದಾಗ, ಎಸ್.ಎಸ್.ಎಲ್.ಸಿ. ಪರೀಕ್ಷೆಯ ಶುಲ್ಕಕ್ಕಾಗಿ ತೆಗೆದಿಟ್ಟಿದ್ದ ದುಡ್ಡನ್ನೇ ಕೊಟ್ಟು, ಆ ವರುಷವೂ ಪರೀಕ್ಷೆಗೆ ಹಾಜರಾಗುವ ಅವಕಾಶವನ್ನು ಕಳೆದುಕೊಳ್ಳುತ್ತಾರೆ ರಾಮದಾಸ್.
ನವಕರ್ನಾಟಕ ಪ್ರಕಾಶನದ “ವಿಶ್ವಕಥಾ ಕೋಶ”ದ ೨೫ ಸಂಪುಟಗಳಲ್ಲಿ ವಿವಿಧ ದೇಶಗಳ ಕತೆಗಳಿವೆ. ಅವನ್ನು ಓದುತ್ತ ಹೋದಂತೆ ಎಲ್ಲ ದೇಶಗಳಲ್ಲಿಯೂ ಜನಸಾಮಾನ್ಯರ ಬದುಕು ನೋವುನಲಿವುಗಳಿಂದ ತುಂಬಿದೆ ಎಂಬುದು ಸ್ಪಷ್ಟವಾಗುತ್ತದೆ. ಎಲ್ಲ ದೇಶಗಳಲ್ಲಿ ಎಲ್ಲ ಕಾಲದಲ್ಲಿಯೂ ಸಂಸಾರ ವೃಕ್ಷಫಲದ ವಿಭಿನ್ನ “ಸವಿ"ಗಳನ್ನು ಜನಸಾಮಾನ್ಯರು ಸಹಿಸಿಕೊಂಡು, ಸಂಸಾರದ ಜವಾಬ್ದಾರಿ ವಹಿಸಿಕೊಂಡ ಕಾರಣ ಅಲ್ಲಿ ಜನಜೀವನವು ನಿರಂತರವಾಗಿ ನದಿಯಂತೆ ಹರಿದು ಬಂದಿದೆ ಎಂಬುದು ಅರ್ಥವಾಗುತ್ತದೆ.
ಬರಿಯೋದು ಬರಿವಾದ ಬರಿಬುದ್ಧಿ ದೊರಕಿಸದು
ಪರತತ್ವವನು; ಬೇಕು ಬೇರೆ ಕಣ್ಣದಕೆ
ಚಿರದ ಮಮತಾವೇಷ್ಟಿತದ ಪೊರೆಯ ಪರಿದಂದು
ಅರಳ್ವುದರಿವಿನಕ ಕಣ್ಣು - ಮಂಕುತಿಮ್ಮ
ಕೇವಲ ಓದು, ವಾದ, ಬುದ್ಧಿಶಕ್ತಿಯಿಂದ ಪರತತ್ವವನ್ನು (ಪರಮಾತ್ಮನ ತತ್ವವನ್ನು) ಪಡೆಯಲಾಗದು. ಅದಕ್ಕೆ ಬೇರೆಯೇ ಕಣ್ಣು ಬೇಕು ಎಂಬ ದೊಡ್ಡ ಸತ್ಯವನ್ನು ಈ ಮುಕ್ತಕದಲ್ಲಿ ಹೇಳಿದ್ದಾರೆ ಮಾನ್ಯ ಡಿ.ವಿ. ಗುಂಡಪ್ಪನವರು. ದೀರ್ಘಕಾಲದಿಂದ (ಚಿರದ) “ನಾನು, ನನ್ನದು” ಎಂಬ ಮಮಕಾರದ (ಮಮತಾವೇಷ್ಟಿತದ) ಪೊರೆ ನಮ್ಮ ದೃಷ್ಟಿಗೆ ಕವಿದಿದೆ. ಅದು ಹರಿದು ಹೋದಾಗಲೇ ಅರಿವಿನ (ತಿಳಿವಿನ) ಕಣ್ಣು ಅರಳುತ್ತದೆ ಎಂಬ ಸರಳ ಸತ್ಯವನ್ನೂ ಅವರು ತಿಳಿಸಿದ್ದಾರೆ.
ಮಹಾವೀರ ಜೈನಧರ್ಮದ ೨೪ನೆಯ ತೀರ್ಥಂಕರ. ವೈಶಾಲಿ ಸಾಮ್ರಾಜ್ಯದ ಸಾಮ್ರಾಟ ಸಿದ್ಧಾರ್ಥ ಮತ್ತು ರಾಣಿ ತ್ರಿಕಲಾ ಅವರ ಮಗ. ಅರಮನೆಯಲ್ಲಿ ಬೆಳೆಯುತ್ತಿದ್ದರೂ ಅವನಿಗೆ ಐಶ್ವರ್ಯದಲ್ಲಿ ಆಡಂಬರದಲ್ಲಿ ನಿರಾಸಕ್ತಿ. ಎಳೆಯ ಪ್ರಾಯದಿಂದಲೇ ಧ್ಯಾನ ಹಾಗೂ ಅಂತರೀಕ್ಷಣೆಯಲ್ಲಿ ಆತನಿಗೆ ಆಸಕ್ತಿ; ಜೈನಧರ್ಮದ ಮೂಲತತ್ವಗಳ ಅಧ್ಯಯನದಲ್ಲಿ ಮುಳುಗಿದ. ೩೦ನೆಯ ವಯಸ್ಸಿನಲ್ಲಿ ತನ್ನದೆಲ್ಲವನ್ನು ಮಹಾವೀರ ತೊರೆದ. ೧೨ ವರುಷಗಳು ಸನ್ಯಾಸಿಯಾಗಿ ಸಾಧನೆ ಮಾಡಿದ. ಮಹಾವೀರನ ಅರಿವಿನ ಕಣ್ಣು ತೆರೆಯಿತು. ಮುಂದಿನ ಬದುಕನ್ನೆಲ್ಲ ಜನಸಮುದಾಯಕ್ಕೆ ಅಧ್ಯಾತ್ಮದ ಶಾಶ್ವತ ತತ್ವಗಳನ್ನು ತನ್ನ ಅರಿವಿನ ಬೆಳಕಿನಲ್ಲಿ ಉಪದೇಶಿಸುತ್ತ ಕಳೆದ.
ಕಪಿಲವಸ್ತುವಿನ ರಾಜ ಶುದ್ಧೋಧನನ ಮಗನಾದ ಸಿದ್ಧಾರ್ಥನೂ ಬಾಲ್ಯದಲ್ಲಿ ಸಂಪತ್ತಿನ ಸಾಗರದಲ್ಲಿ ತೇಲಾಡಿದವನು. ಬದುಕಿನ ಗೊಂದಲ, ದುಃಖ, ನೋವುಗಳಿಂದ ಬೇಸತ್ತ ಸಿದ್ಧಾರ್ಥ ಮಡದಿ, ಮಗು, ಸಾಮ್ರಾಜ್ಯವನ್ನು ತೊರೆದು “ಸತ್ಯ”ದ ಹುಡುಕಾಟದಲ್ಲಿ ಹೊರಟ. ಹಲವು ತಪಸ್ವಿಗಳ ಸೇವೆ, ಉಪವಾಸ, ಧ್ಯಾನ ಮಾಡುತ್ತಾ ಹಲವು ವರುಷ ಕಳೆದ. ಎಲ್ಲ ಆಸೆಗಳನ್ನು ಗೆದ್ದು ಮನಸ್ಸಿನ ಮೇಲೆ ಪ್ರಭುತ್ವ ಸಾಧಿಸುವುದು ಅವನ ಉದ್ದೇಶವಾಗಿತ್ತು. ಕ್ರಿಸ್ತಪೂರ್ವ ೫೨೮ರ ಮೇ ತಿಂಗಳಿನಲ್ಲಿ ವೃಕ್ಷದ ನೆರಳಿನಲ್ಲಿ ಧ್ಯಾನ ಮಾಡುತ್ತ ಕುಳಿತಿದ್ದ ಆತನಿಗೆ ಜ್ನಾನೋದಯ. ಅಂದಿನಿಂದ ಆತ “ಬುದ್ಧ”ನಾದ. “ಆಸೆಯೇ ದುಃಖಕ್ಕೆ ಮೂಲ” ಇತ್ಯಾದಿ ಸರಳ ವಿವರಣೆಗಳ ಮೂಲಕ ಜನಸಾಮಾನ್ಯರ ಮನಗೆದ್ದ. ತಾನು ಕಂಡುಕೊಂಡ ತತ್ವಗಳನ್ನು ಜನರಿಗೆ ತಿಳಿಸುತ್ತ ಯಾತ್ರೆ ಮಾಡಿದ. ಬುದ್ಧನ ಬೌದ್ಧ ಧರ್ಮ ಏಷ್ಯಾ ಖಂಡದ ಉದ್ದಗಲದಲ್ಲಿ ವ್ಯಾಪಿಸಿತು. ನಮ್ಮ ಅರಿವಿನ ಕಣ್ಣು ತೆರೆದರೆ ಏನು ಸಾಧಿಸಬಹುದು ಎಂಬುದಕ್ಕೆ ನಿದರ್ಶನ ಇವರಿಬ್ಬರ ಬದುಕು.
ಆವೊಂದು ವಸ್ತುವಂ ಪೂರ್ಣದಿಂ ತಿಳಿದಿರಲು
ಜೀವಿತದ ಮಿಕ್ಕೆಲ್ಲಮಂ ತಿಳಿಯಲಹುದೋ
ಆ ವಿದ್ಯೆಯಂ ಗಳಿಸು ಮೊದಲೆಲ್ಲಕಿಂತಲದು
ದೀವಿಗೆಯೊ ಬಾಳಿರುಳ್ಗೆ – ಮರುಳ ಮುನಿಯ
ಯಾವ ಒಂದು ವಸ್ತುವನ್ನು ನೀನು ಸಂಪೂರ್ಣವಾಗಿ ತಿಳಿದುಕೊಂಡರೆ, ಜೀವನದ ಮಿಕ್ಕೆಲ್ಲವನ್ನು ತಿಳಿಯಲು ಸಾಧ್ಯವೋ, ಆ ವಿದ್ಯೆಯನ್ನು ಎಲ್ಲದಕ್ಕಿಂತಲೂ ಮುಂಚೆ ಗಳಿಸು; ಅದು ನಿನ್ನ ಬಾಳಿನ ಕತ್ತಲಿಗೆ (ಇರುಳಿಗೆ) ಬೆಳಕು ಬೀರುವ ದೀವಿಗೆಯಾಗುತ್ತದೆ ಎನ್ನುತ್ತಾರೆ ಮಾನ್ಯ ಡಿ.ವಿ.ಗುಂಡಪ್ಪನವರು. ವೇದ, ಉಪನಿಷತ್ತುಗಳ ರೂಪದಲ್ಲಿರುವ ಭರತಖಂಡದ ಪ್ರಾಚೀನಜ್ನಾನ ಅಗಾಧ. ಇಂತಹ ಜ್ನಾನಸಾಗರದಲ್ಲಿ ಯಾವುದೋ ಒಂದನ್ನು ಆಮೂಲಾಗ್ರವಾಗಿ ಅರ್ಥ ಮಾಡಿಕೊಂಡರೆ, ಉಳಿದ ಎಲ್ಲವನ್ನೂ ಅರ್ಥ ಮಾಡಿಕೊಳ್ಳಲು ಸಾಧ್ಯ. ಜ್ನಾನಾರ್ಜನೆಯ ಈ ಗುಟ್ಟನ್ನು ಅರಿತವರು ತಮ್ಮ ಪುಟ್ಟ ಬದುಕಿನಲ್ಲಿಯೇ ಅಗಾಧ ಸಾಧನೆ ಮಾಡಿದರು.
ಕೇರಳದ ಕಲಡಿಯಲ್ಲಿ ಕ್ರಿಶ ೭೮೮ರಲ್ಲಿ ಹುಟ್ಟಿದ ಆದಿ ಶಂಕರಾಚಾರ್ಯರು ಅವರಲ್ಲೊಬ್ಬರು. ಬಾಲ್ಯದಿಂದಲೇ ಅಧ್ಯಾತ್ಮದಲ್ಲಿ ಆಸಕ್ತರಾಗಿದ್ದ ಶಂಕರಾಚಾರ್ಯರು, ಸನ್ಯಾಸಿಯಾಗಿ ಬದುಕಿದರು. ಗೋವಿಂದ ಭಗವತ್ಪಾದರನ್ನು ತನ್ನ ಗುರುವಾಗಿ ಸ್ವೀಕರಿಸಿ, ಯೋಗದ ಅಧ್ಯಯನದಲ್ಲಿ ತೊಡಗಿದರು. ಬ್ರಹ್ಮಜ್ನಾನ ಪಡೆದು ಆದಿ ಶಂಕರಾಚಾರ್ಯ ಎಂದೆನಿಸಿದರು. ಎಲ್ಲ ವೇದಗಳು ಮತ್ತು ಉಪವೇದಗಳಿಗೆ ಭಾಷ್ಯ ಬರೆದವರು ಅವರೊಬ್ಬರೇ ಎಂಬುದು ಅವರ ಪ್ರಗಲ್ಭ ಪಾಂಡಿತ್ಯದ ಪುರಾವೆ. ಅದ್ವೈತ ಸಿದ್ಧಾಂತವನ್ನು ಪ್ರಚಾರ ಮಾಡಲಿಕ್ಕಾಗಿ ಭಾರತದಲ್ಲಿ ಯಾತ್ರೆ ಮಾಡಿದರು; ಕೇರಳದಿಂದ ಕಾಶ್ಮೀರದ ವರೆಗೆ ಮತ್ತು ಮಧ್ಯಭಾರತದಿಂದ ಅಸ್ಸಾಂನ ವರೆಗೆ. ಭಾರತದ ೪ ಮೂಲೆಗಳಲ್ಲಿ ನಾಲ್ಕು ಶಂಕರಪೀಠಗಳನ್ನು ಸ್ಥಾಪಿಸಿದರು. ಕ್ರಿಶ ೮೨೦ರಲ್ಲಿ ೩೨ನೆಯ ವಯಸ್ಸಿನಲ್ಲೇ ಇಹಲೋಕದ ಯಾತ್ರೆ ಮುಗಿಸಿದರು.
ಇನ್ನೊಬ್ಬ ಮಹಾನ್ ಸಾಧಕ ಸ್ವಾಮಿ ವಿವೇಕಾನಂದ. ಭಾರತದ ಅತ್ಯಂತ ಪ್ರಭಾವಿ ಅಧ್ಯಾತ್ಮಿಕ ಗುರು. ನರೇಂದ್ರನಾಥ ದತ್ತರ ಮಗನಾಗಿ ೧೨.೧.೧೮೬೩ರಲ್ಲಿ ಕಲ್ಕತ್ತಾದಲ್ಲಿ ಅವರ ಜನನ. ಮೆಟ್ರಿಕ್ ಪಾಸಾದ ಬಳಿಕ ಅವರು ಕಲಿತದ್ದು ತತ್ವಶಾಸ್ತ್ರ. ಅನಂತರ ರಾಮಕೃಷ್ಣ ಪರಮಹಂಸರನ್ನು ಗುರುವಾಗಿ ಸ್ವೀಕಾರ. ಗುರುವಿನ ಮರಣಾನಂತರ ರಾಮಕೃಷ್ಣ ಮಠ ಸ್ಥಾಪಿಸಿ, ೧೮೯೦ರಲ್ಲಿ ಹಿಂದೂ ಧರ್ಮದ ಪುನರುಜ್ಜೀವನಕ್ಕಾಗಿ ಭಾರತದ ಉದ್ದಗಲದಲ್ಲಿ ಸುತ್ತಾಟ. ೧೮೯೩ರಲ್ಲಿ ಅಮೆರಿಕದ ಚಿಕಾಗೋದಲ್ಲಿ ಜಾಗತಿಕ ಧಾರ್ಮಿಕ ಸಮ್ಮೇಳನದಲ್ಲಿ ತಮ್ಮ ಪ್ರಖರ ಭಾಷಣದಿಂದಾಗಿ ವಿಶ್ವವಿಖ್ಯಾತ. ಭಾರತಕ್ಕೆ ಮರಳಿದ ಬಳಿಕ ೧೮೯೭ರಲ್ಲಿ ರಾಮಕೃಷ್ಣ ಮಿಷನಿನ ಸ್ಥಾಪನೆ. ೪.೭.೧೯೦೨ರಲ್ಲಿ ೩೯ನೆಯ ವಯಸ್ಸಿನಲ್ಲೇ ವಿಧಿವಶರಾಗುತ್ತಾರೆ. ಇವರಿಬ್ಬರು ಮಹಾನ್ ಚೇತನಗಳು ಈ ಮುಕ್ತಕದ ಸಂದೇಶದ ಅದ್ಭುತ ನಿದರ್ಶನಗಳು.
ಎಷ್ಟು ನೀನುಂಡರೇಂ? ಪುಷ್ಟಿ ಮೈಗಾಗುವುದು
ಹೊಟ್ಟೆ ಜೀರ್ಣಿಸುವಷ್ಟೆ; ಮಿಕ್ಕುದೆಲ್ಲ ಕಸ
ಎಷ್ಟು ಗಳಿಸಿಟ್ಟೊಡಂ ನಿನಗೆ ದಕ್ಕುವುದೆಷ್ಟು?
ಮುಷ್ಟಿ ಪಿಷ್ಟವು ತಾನೆ? - ಮಂಕುತಿಮ್ಮ
ನೀನೆಷ್ಟು ಉಂಡರೇನು? ಅದರಲ್ಲಿ ನಿನ್ನ ದೇಹದ ಪುಷ್ಟಿಗೆ ಒದಗುವುದು ನಿನ್ನ ಹೊಟ್ಟೆ ಜೀರ್ಣಿಸುವಷ್ಟೇ; ಮಿಕ್ಕಿದ್ದೆಲ್ಲ ಕಸವಾಗಿ ನಿನ್ನ ಶರೀರದಿಂದ ಹೊರಗೆ ಹೋಗುತ್ತದೆ - ಈ ಸಾರ್ವಕಾಲಿಕ ಸರಳ ವಿಷಯವನ್ನು ಎತ್ತಿ ಹೇಳುತ್ತಾ, ಅದರ ಆಧಾರದಿಂದ ಗಹನ ವಿಚಾರವೊಂದನ್ನು ಈ ಮುಕ್ತಕದಲ್ಲಿ ಮಾನ್ಯ ಡಿ.ವಿ. ಗುಂಡಪ್ಪನವರು ಹೀಗೆ ಮಂಡಿಸುತ್ತಾರೆ: ನೀನೆಷ್ಟು ಗಳಿಸಿದರೂ ನಿನಗೆ ದಕ್ಕುವುದೆಷ್ಟು? ಒಂದು ಮುಷ್ಟಿ ಪಿಷ್ಟ, ಅಲ್ಲವೇ?
ಈ ಮುಕ್ತಕದ ಮೊದಲನೆಯ ಸರಳ ವಿಷಯವನ್ನು ನಾವೆಲ್ಲರೂ ಅನುಭವಿಸಿ ಅರಿತಿದ್ದೇವೆ. ಊಟ ರುಚಿಯಾಗಿತ್ತೆಂದು ಹೆಚ್ಚು ತಿಂದರೆ ಏನಾಗುತ್ತದೆ? ಆರೋಗ್ಯ ಹದಗೆಡುತ್ತದೆ; ಅಜೀರ್ಣವಾಗಿ ವಾಂತಿ ಭೇದಿಯಾಗುತ್ತದೆ ಎಂದು ನಮಗೆಲ್ಲರಿಗೂ ಗೊತ್ತಿದೆ. ಹಾಗಾಗಿ, ಆಹಾರ ಎಷ್ಟೇ ರುಚಿಯಾಗಿದ್ದರೂ ನಮ್ಮ ಹೊಟ್ಟೆಯ ಹದವರಿತು ತಿನ್ನುತ್ತೇವೆ.
ಹಣ ಗಳಿಸುವ ವಿಚಾರದಲ್ಲಿಯೂ, ನಮಗೆ ಸಲ್ಲಬೇಕಾದ್ದಕ್ಕಿಂತ ಹೆಚ್ಚಿಗೆ ಗಳಿಸಿದರೆ ಅದನ್ನು ದಕ್ಕಿಸಿಕೊಳ್ಳಲಾಗದು ಎಂಬುದು ನಮಗೆ ಗೊತ್ತಿದೆ. ಆದರೆ, ನಮ್ಮ ದುರಾಶೆ ನಮ್ಮ ವಿವೇಕಕ್ಕೆ ಮಂಕು ಕವಿಸುತ್ತದೆ. ನಮ್ಮ ರಾಜ್ಯದ ಕಬ್ಬಿಣದ ಅದಿರನ್ನು ಕೊಳ್ಳೆ ಹೊಡೆದು ಗಳಿಸಿದ ಕೋಟಿಗಟ್ಟಲೆ ಹಣವನ್ನು ಕರ್ನಾಟಕದ ಮಾಜಿ ಮಂತ್ರಿಯೊಬ್ಬರಿಗೆ ದಕ್ಕಿಸಿಕೊಳ್ಳಲಾಯಿತೇ? ತಿರುಪತಿ ತಿಮ್ಮಪ್ಪನಿಗೆ ೪೫ ಕೋಟಿ ರೂಪಾಯಿಯ ಕಿರೀಟ ಒಪ್ಪಿಸಿದರೂ ಅನ್ಯಾಯದ ಹಣವನ್ನೆಲ್ಲ ದಕ್ಕಿಸಿಕೊಳ್ಳಲಾಗಲಿಲ್ಲ. ನ್ಯಾಯಾಧೀಶರಿಗೆ ೧೦ ಕೋಟಿ ರೂಪಾಯಿ ಲಂಚ ಕೊಟ್ಟರೂ ಅವರು ಜೈಲುವಾಸ ತಪ್ಪಿಸಿಕೊಳ್ಳಲಾಗಲಿಲ್ಲ.
ಗ್ರೀಕ್ ಸಾಮ್ರಾಟ ಅಲೆಗ್ಸಾಂಡರ್, ಜಗತ್ತಿನ ದೇಶಗಳನ್ನೆಲ್ಲ ಗೆಲ್ಲಬೇಕೆಂಬ ಮಹತ್ವಾಕಾಂಕ್ಷೆಯಿಂದ ದಂಡಯಾತ್ರೆ ಹೊರಟ; ಹಲವು ಸಾಮ್ರಾಜ್ಯಗಳನ್ನು ಗೆದ್ದ. ಕೊನೆಗೆ, ತನ್ನ ಸಾವಿನ ಸೂಚನೆ ಸಿಕ್ಕಾಗ ತನ್ನ ಸಹವರ್ತಿಗಳಿಗೆ ಹೀಗೆಂದು ಆದೇಶ ನೀಡಿದನಂತೆ: "ನನ್ನ ಶವಯಾತ್ರೆಯಲ್ಲಿ, ನನ್ನ ಎರಡೂ ಕೈಗಳು ಶವಪೆಟ್ಟಿಗೆಯಿಂದ ಹೊರಗೆ ನೇತಾಡುತ್ತಿದ್ದು, ನೆರೆದ ಜನರಿಗೆಲ್ಲ ಕಾಣಿಸಬೇಕು. ಚಕ್ರಾಧಿಪತಿ ಅಲೆಗ್ಸಾಂಡರ್ ಈ ಭೂಮಿ ಬಿಟ್ಟು ಹೋಗುವಾಗ ತನ್ನ ಸಂಪತ್ತಿನಲ್ಲಿ ಏನನ್ನೂ ಒಯ್ಯಲಿಲ್ಲ; ಎಲ್ಲವನ್ನೂ ಇಲ್ಲೇ ಬಿಟ್ಟು ಬರಿಗೈಯಲ್ಲೇ ಹೋದ ಎಂಬುದು ಎಲ್ಲ ಜನರಿಗೂ ತಿಳಿಯಲಿ."
ಈ ಸಾರ್ವಕಾಲಿಕ ಸತ್ಯವನ್ನು ಒಪ್ಪಿಕೊಳ್ಳೋಣ. ನಮಗೆ ಸಲ್ಲಬೇಕಾದ್ದಕ್ಕಿಂತ ಹೆಚ್ಚು ಗಳಿಸಿ, ಸಂಪತ್ತನ್ನು ಕೂಡಿ ಹಾಕುವ ಚಟ ಬಿಟ್ಟು ಬಿಡೋಣ.
ಧಾನ್ಯವುಂಡಿಹ ಹೊಟ್ಟೆ ತುಂಬಿ ತೇಗುವುದೊಡನೆ
ನಾಣ್ಯ ಸಂಚಿಕೆಗಂತು ತಣಿವಪ್ಪುದುಂಟೆ
ಪಣ್ಯವಾಗಿಸಿತೆಲ್ಲ ಮನುಜ ಬಂಧುತೆಯ ಹಣ
ಸನ್ನೆಯದು ಕಲಿದೊರೆಗೆ - ಮರುಳ ಮುನಿಯ
ಆಹಾರ ತಿಂದು ಹೊಟ್ಟೆ ತುಂಬಿದೊಡನೆ ತೃಪ್ತಿಯಿಂದ ತೇಗು ಬರುತ್ತದೆ. ಆದರೆ ಕೋಟಿಗಟ್ಟಲೆ ರೂಪಾಯಿ ಹಣ - ಸಂಪತ್ತು ಸಂಗ್ರಹಿಸಿ(ನಾಣ್ಯ ಸಂಚಿಕೆ)ದರೂ ಮನುಷ್ಯನಿಗೆ ತೃಪ್ತಿ (ತಣಿವು) ಸಿಗುತ್ತದೆಯೇ? ಈ ಹಣ (ಸಂಪತ್ತು) ಎಂಬುದು ಮನುಷ್ಯ-ಮನುಷ್ಯರ ಸಂಬಂಧಗಳನ್ನೇ ವ್ಯಾಪಾರ(ಪಣ್ಯ)ವನ್ನಾಗಿ ಮಾಡಿದೆ. ಇದು ಕಲಿಯುಗದ ಕಲಿದೊರೆಯ ಪ್ರವೇಶಕ್ಕೆ ದಾರಿಯೊದಗಿಸಿದೆ ಎಂದು ಸಂಪತ್ತು ಸಂಗ್ರಹದ ಅನಾಹುತವನ್ನು ಈ ಮುಕ್ತಕದಲ್ಲಿ ವಿವರಿಸಿದ್ದಾರೆ ಮಾನ್ಯ ಡಿವಿಜಿಯವರು.
ಇಂದು ಮಾನವ ಸಂಬಂಧಗಳಲ್ಲಿ ಆತ್ಮೀಯತೆ ಕಡಿಮೆಯಾಗುತ್ತಿದೆ ಅಥವಾ ಮಾಯವಾಗುತ್ತಿದೆ. ಬಹುಪಾಲು ಸಂಬಂಧಗಳನ್ನು ವ್ಯವಹಾರದ ರೀತಿಯಲ್ಲಿ ಮುಂದುವರಿಸಲಾಗುತ್ತಿದೆ. ಇವನಿಂದ ಅಥವಾ ಇವಳಿಂದ ನನಗೇನು ಲಾಭ? ಎಂಬ ಲೆಕ್ಕಾಚಾರವೇ ಮುಖ್ಯವಾಗುತ್ತಿದೆ. ಯಾಕೆಂದರೆ ಎಲ್ಲದರಲ್ಲಿಯೂ ಲಾಭ ಮಾಡಿಕೊಂಡು ಸಂಪತ್ತು ಗುಡ್ದೆ ಹಾಕುವ ಹುನ್ನಾರ.
ಫೆಬ್ರವರಿ ೧, ೨೦೧೭ರಂದು ಕೇಂದ್ರ ಸರಕಾರದ ವಿತ್ತ ಸಚಿವರು ಮಂಡಿಸಿದ ಕೇಂದ್ರ ಬಜೆಟಿನ ಕೆಲವು ಆರ್ಥಿಕ ನಿಯಂತ್ರಣದ ಕ್ರಮಗಳಿಂದಾಗಿ ಇಂತಹ ಪ್ರವೃತ್ತಿಗಳಿಗೆ ಕಡಿವಾಣ ಬೀಳಬಹುದು. ರೂ.೫೦ ಲಕ್ಷದಿಂದ ರೂಪಾಯಿ ಒಂದು ಕೋಟಿ ವಾರ್ಷಿಕ ಆದಾಯ ಹೊಂದಿದವರಿಗೆ ಶೇಕಡಾ ೩೦ ಆದಾಯ ತೆರಿಗೆ ಮತ್ತು ಶೇಕಡಾ ೧೦ ಹೆಚ್ಚುವರಿ ತೆರಿಗೆ (ಸರ್ಚಾರ್ಜ್) ವಿಧಿಸಲಾಗಿದೆ. ರೂಪಾಯಿ ಒಂದು ಕೋಟಿಗಿಂತ ಅಧಿಕ ಅಧಿಕ ವಾರ್ಷಿಕ ಆದಾಯ ಇರುವವರಿಗೆ ಶೇಕಡಾ ೩೦ ಆದಾಯ ತೆರಿಗೆ ಮತ್ತು ಶೇಕಡಾ ೧೫ ಹೆಚ್ಚುವರಿ ತೆರಿಗೆ ಮುಂದುವರಿಸಲಾಗಿದೆ.
ರೂಪಾಯಿ ಮೂರು ಲಕ್ಷಕ್ಕಿಂತ ಹೆಚ್ಚಿನ ಹಣವನ್ನು ನಗದು ರೂಪದಲ್ಲಿ ಪಾವತಿಸುವುದನ್ನು ನಿಷೇಧಿಸಲಾಗುವುದು. ಇದರಿಂದಾಗಿ, ಜಮೀನು ಹಾಗೂ ಸ್ಥಿರ ಆಸ್ತಿ ಖರೀದಿಗಾಗಿ ಲಕ್ಷಗಟ್ಟಲೆ ಕೋಟಿಗಟ್ಟಲೆ ರೂಪಾಯಿಗಳನ್ನು ನಗದು ರೂಪದಲ್ಲಿ ಪಾವತಿಸುವುದು ಮತ್ತು ಬೇನಾಮಿ ವ್ಯವಹಾರ ಮಾಡುವುದು ಇನ್ನು ಸುಲಭವಿಲ್ಲ. ಹಾಗೆಯೇ ಉದ್ಯಮಿ ವಿಜಯ ಮಲ್ಯ ಅವರಂತೆ (ಬ್ಯಾಂಕುಗಳಿಗೆ ಸುಮಾರು ರೂ.೭,೦೦೦ ಕೋಟಿ ಸಾಲ ಬಾಕಿ ಮಾಡಿದ್ದಾರೆ.) ಹಣಕಾಸು ವಂಚನೆ ಆರೋಪಿಗಳು ದೇಶ ಬಿಟ್ಟು ಪಲಾಯನ ಮಾಡುವುದನ್ನು ತಡೆಯುವುದಕ್ಕಾಗಿ ಅಂಥವರ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲು ಸರಕಾರ ಕಾಯಿದೆ ರೂಪಿಸಲಿದೆ. ರಾಜಕೀಯ ಪಕ್ಷಗಳು ದೇಣಿಗೆಯಾಗಿ ಕೋಟಿಗಟ್ಟಲೆ ರೂಪಾಯಿ ಕೂಡಿ ಹಾಕುವುದಕ್ಕೂ ಈ ಬಜೆಟಿನ ಪ್ರಸ್ತಾಪದಿಂದಾಗಿ ಲಗಾಮು ಬಿದ್ದಿದೆ. ಯಾಕೆಂದರೆ, ರಾಜಕೀಯ ಪಕ್ಷಗಳು ರೂ.೨,೦೦೦ಕ್ಕಿಂತ ಹೆಚ್ಚಿನ ದೇಣಿಗೆಯನ್ನು ಚೆಕ್ ಅಥವಾ ಡಿಜಿಟಲ್ ಪಾವತಿ ಮೂಲಕ ಮಾತ್ರ ಪಡೆಯತಕ್ಕದ್ದು. ಜೊತೆಗೆ ರೂ.೨೦,೦೦೦ಕ್ಕಿಂತ ಅಧಿಕ ದೇಣಿಗೆ ನೀಡುವವರ ಮಾಹಿತಿ ಕೊಡುವುದು ಕಡ್ಡಾಯ. ಎಲ್ಲ ರಾಜಕೀಯ ಪಕ್ಷಗಳು ವಾರ್ಷಿಕ ತೆರಿಗೆ ರಿಟರ್ನ್ ಸಲ್ಲಿಸಬೇಕು. ಈ ಕ್ರಮಗಳಿಂದಾಗಿ, ಅಪಾರ ಸಂಪತ್ತು ಸಂಗ್ರಹಿಸುವ ಪ್ರವೃತ್ತಿ ಕಡಿಮೆಯಾಗಲೆಂದು ಹಾರೈಸೋಣ.
ಗ್ರಹಗತಿಯ ತಿದ್ದುವನೆ ಜೋಯಿಸನು ಜಾತಕದಿ?
ವಿಹಿತವಾಗಿಹುದದರ ಗತಿ ಸೃಷ್ಟಿವಿಧಿಯಿಂ
ಸಹಿಸಿದಲ್ಲದೆ ಮುಗಿಯದಾವ ದಶೆ ಬಂದೊಡಂ
ಸಹನೆ ವಜ್ರದ ಕವಚ - ಮಂಕುತಿಮ್ಮ
ನಾವು ಹುಟ್ಟಿದ ಕ್ಷಣವೇ ನಿರ್ಧಾರವಾಗಿರುತ್ತದೆ ನಮ್ಮ ಗ್ರಹಗತಿ – ಆ ಕ್ಷಣದಲ್ಲಿ ಗುರು, ಶನಿ, ಶುಕ್ರ, ಬುಧ, ಮಂಗಳ ಇತ್ಯಾದಿ ಗ್ರಹಗಳ ಸ್ಥಾನ ಅವಲಂಬಿಸಿ. ಅದು ನಮ್ಮ ಜನ್ಮಕ್ಷಣದ ವಿಧಿನಿರ್ಣಯ. ಆ ಗ್ರಹಗತಿ ಅಂತಿಮ. ನಮ್ಮ ಜಾತಕ ತಿದ್ದಿ, ನಮ್ಮ ಗ್ರಹಗತಿ ಸರಿಪಡಿಸಲು ಯಾವ ಜ್ಯೋತಿಷಿಗೂ ಸಾಧ್ಯವಿಲ್ಲ. ನಮಗೆ ಯಾವ ದಶೆ (ಸ್ಥಿತಿ) ಬಂದರೂ ಅದನ್ನು ಸಹಿಸಿಸಹಿಸಿ ಮುಗಿಸಬೇಕು – ಶನಿದಸೆಯನ್ನೂ. ಬೇರೆ ದಾರಿಯೇ ಇಲ್ಲ. ಹಾಗೆ ಬದುಕಲಿಕ್ಕಾಗಿ ವಜ್ರದಂತಹ ಸಹನೆ ಬೆಳೆಸಿಕೊಳ್ಳಬೇಕು ಎಂದು ಈ ಮುಕ್ತಕದಲ್ಲಿ ಸರಳವಾಗಿ ತಿಳಿಸುತ್ತಾರೆ ಮಾನ್ಯ ಡಿ.ವಿ. ಗುಂಡಪ್ಪನವರು.
ಸ್ವರ್ಗದಂತಹ ವೈಭವವಿದ್ದ ನೌಕೆ ಟೈಟಾನಿಕ್. ೧೯೧೨ರಲ್ಲಿ ಅದರಲ್ಲಿ ಸಾವಿರಾರು ಜನರು ಸಾಗರಯಾನ ಹೊರಟರು. ಸೌತಾಂಪ್ಟನಿನಿಂದ ಹೊರಟ ಆ ಮಹಾಹಡಗು ಕೆಲವೇ ಗಂಟೆಗಳಲ್ಲಿ ಮುಳುಗಿ, ೧,೫೦೦ಕ್ಕಿಂತ ಅಧಿಕ ಪ್ರಯಾಣಿಕರ ಬಲಿ ತೆಗೆದುಕೊಂಡಿತು. ಮಹಾಮಂಜುಗಡ್ಡೆಗೆ ಢಿಕ್ಕಿ ಹೊಡೆದದ್ದರಿಂದ ಟೈಟಾನಿಕ್ ನೌಕೆಯ ತಳಕ್ಕೆ ಘಾಸಿಯಾಗಿ ನೌಕೆ ಮುಳುಗಿತೆಂದು ಈ ವರೆಗೆ ನಂಬಲಾಗಿತ್ತು. ಆದರೆ, ೨ ಜನವರಿ ೨೦೧೭ರ ಪತ್ರಿಕಾವರದಿಯಲ್ಲಿದೆ ಬೇರೊಂದು ಸತ್ಯ. ಆ ನೌಕೆ ಬೆಲ್-ಫಾಸ್ಟಿನ ಷಿಪ್ ಯಾರ್ಡಿನಿಂದ ಹೊರಟಾಗಿನಿಂದ ಅದರ ಕಲ್ಲಿದ್ದಲು ಕೋಣೆಯಲ್ಲಿ ಅಕಸ್ಮಾತ್ ಹುಟ್ಟಿಕೊಂಡ ಬೆಂಕಿಯನ್ನು ನಂದಿಸಲು ಸಾಧ್ಯವಾಗಿರಲಿಲ್ಲ. ಆ ಬೆಂಕಿಯಿಂದಾಗಿ ನೌಕೆಯ ತಳ (ಹಲ್) ದುರ್ಬಲವಾಗಿತ್ತು. ಅದನ್ನು ಸರಿಪಡಿಸಿದ ನಂತರವೇ ನೌಕೆ ಯಾನ ಆರಂಭಿಸಬೇಕಿತ್ತು. ಆ ನೌಕೆ ನಿರ್ಮಿಸಿದ ಕಂಪೆನಿಯ ಅಧ್ಯಕ್ಷ ಜೆ. ಬ್ರೂಸ್ ಇಸ್ಮೇ ಅದೇ ನೌಕೆಯಲ್ಲಿದ್ದ; ಅದನ್ನು ಸರಿಪಡಿಸುವ ಹೊಣೆಗಾರಿಕೆ ಆತ ನಿರ್ವಹಿಸಲಿಲ್ಲ. ಅಂತೂ, ಬೆಂಕಿ, ಮಹಾಮಂಜುಗಡ್ಡೆ ಮತ್ತು ಕ್ರಿಮಿನಲ್ ಬೇಜವಾಬ್ದಾರಿತನದಿಂದಾಗಿ ಮಹಾಹಡಗು ನಾಶ ಹಾಗೂ ೧,೫೦೦ ಮಿಕ್ಕಿ ಯಾನಿಗಳ ಸಾವು.
ಮೊದಲನೇ ಮತ್ತು ಎರಡನೇ ಮಹಾಯುದ್ಧ, ಜಪಾನಿನ ಮೇಲೆ ಮೊದಲ ಅಣುಬಾಂಬುಗಳ ಧಾಳಿ, ವಿಯೆಟ್ನಾಂ ಯುದ್ಧ, ಶ್ರೀಲಂಕಾದ ಅಂತರ್ ಯುದ್ಧ, ಆಫ್ರಿಕಾದ ಜನಾಂಗೀಯ ಕಲಹ, ಜಗತ್ತಿನ ವಿವಿಧೆಡೆಗಳಲ್ಲಿ ಭಯೋತ್ಪಾದಕರ ಧಾಳಿ – ಇವುಗಳಿಂದಾಗಿ ಸತ್ತವರ ಲೆಕ್ಕ ಉಂಟೇ? ಅವರೆಲ್ಲರ ಸಾವು ವಿಧಿಲಿಖಿತ ಎಂದು ಒಪ್ಪಿಕೊಳ್ಳಲೇ ಬೇಕಾಗುತ್ತದೆ. ಹಾಗೆ ಸತ್ತವರ ಕುಟುಂಬದವರ, ಬಂಧುಬಾಂಧವರ ಸಂಕಟಕ್ಕೆ ಕೊನೆಯುಂಟೇ? ಅವರದನ್ನು ಸಹಿಸಲೇ ಬೇಕು, ಅಲ್ಲವೇ?
ಬೇವು ಬೆಲ್ಲಗಳುಂಡೆ ದಿನದಿನದ ನಮ್ಮೂಟ
ಪೂರ್ವಕರ್ಮದ ಫಲಿತಶೇಷದಿಂದ ಕಹಿ
ದೈವಪ್ರಸಾದದಿಂದ ಸಿಹಿಯೀ ದ್ವಂದ್ವದಲಿ
ಆವೇಶವೇತಕೋ – ಮರುಳ ಮುನಿಯ
ದಿನದಿನದ ನಮ್ಮ ಊಟದಲ್ಲಿ ಬೇವಿನ ಉಂಡೆಯೂ ಇದೆ; ಬೆಲ್ಲದ ಉಂಡೆಯೂ ಇದೆ. ಪೂರ್ವಜನ್ಮಗಳ ಕರ್ಮದ ಫಲವೇ ನಮಗೆ ಈ ಜನ್ಮದಲ್ಲಿ ಸಿಗುವ ಕಹಿ. ದೇವರ ಕೃಪೆಯಿಂದಾಗಿ ಸಿಹಿಯೂ ಸಿಗುತ್ತದೆ. ಹೀಗೆ ಕಹಿ ಮತ್ತು ಸಿಹಿ, ಅಂದರೆ ನೋವು ಹಾಗೂ ನಲಿವನ್ನು ನಾವು ಜೀವನದಲ್ಲಿ ಅನುಭವಿಸಲೇ ಬೇಕು. ಹಾಗಿರುವಾಗ, ಈ ವಿಷಯದಲ್ಲಿ ಆವೇಶ ಏತಕ್ಕೆ? ಎಂದು ಪ್ರಶ್ನಿಸುತ್ತಾರೆ ಮಾನ್ಯ ಡಿ.ವಿ.ಜಿ.
ಜನವರಿ ತಿಂಗಳಲ್ಲಿ ಎಲ್ಲೆಡೆ ಸಂಕ್ರಾತಿಯ ಸಂಭ್ರಮ. ಸಂಕ್ರಾತಿಯಂದು ಬೇವುಬೆಲ್ಲ ಸೇವಿಸುವ ಸಂಪ್ರದಾಯ. ಇದು ನಮ್ಮ ಬದುಕಿನುದ್ದಕ್ಕೂ ಸಾಗಿ ಬರುವ ಕಹಿ-ಸಿಹಿಗಳ ಸಂಕೇತ. ಬಾಳಿನಲ್ಲಿ ಸಿಹಿ ಸಿಕ್ಕಿದಾಗೆಲ್ಲ ನಲಿದಾಡುವ ನಾವು, ಕಹಿ ಸಿಕ್ಕಿದಾಗ ಸಂಕಟ ಪಡುತ್ತೇವೆ. ನಲಿವು ಬಂದಾಗ, ಇದ್ಯಾಕೆ? ಎಂದು ಕೇಳದ ನಾವು ನೋವು ಬಂದಾಗ ಇದ್ಯಾಕೆ? ಎಂದು ಕೇಳಿಯೇ ಕೇಳುತ್ತೇವೆ. ಈ ಎರಡೂ ಪ್ರಶ್ನೆಗಳಿಗೆ ನೇರ ಉತ್ತರ ಈ ಮುಕ್ತಕದಲ್ಲಿದೆ. ಈ ಹಿನ್ನೆಲೆಯಲ್ಲಿ, ಭಯೋತ್ಪಾದಕರ ಬಾಂಬ್ ಧಾಳಿಗಳಿಂದ ಪಾರಾದ ಕೆಲವರ ಕತೆ ತಿಳಿಯೋಣ.
ಪುಣೆಯ ಜರ್ಮನ್ ಬೇಕರಿಯಲ್ಲಿ ೨೦೧೦ರಲ್ಲಿ ಬಾಂಬ್ ಸಿಡಿದಾಗ ನಲುಗಿದವರು ಸುಮೀತ್ ಸಿಂಗ್ (೩೧). ಅವರು ೨೮ ದಿನ ಐಸಿಯುನಲ್ಲಿದ್ದು ಚೇತರಿಸಿಕೊಂಡರು. ಅವರ ಶರೀರದಲ್ಲಿರುವ ಸುಟ್ಟ ಗಾಯಗಳ ಬಗ್ಗೆ ಕೇಳಿದರೆ ಈಗ ಅವರ ಉತ್ತರ: “ಅವೆಲ್ಲ ದೀಪಾವಳಿಯಲ್ಲಿ ಸುಡುಮದ್ದು ಸಿಡಿದು ಆದ ಗಾಯಗಳು.” ಮುಂಬೈಯ ಲಿಯೋಪೊಲ್ಡ್ ಕೆಫೆಗೆ ೨೦೧೧ರಲ್ಲಿ ಭಯೋತ್ಪಾದಕರ ಧಾಳಿ. ಆಗ ಅಲ್ಲಿದ್ದ ಸೌರವ್ ಮಿಶ್ರಾ (೩೭) ಎದೆಗೆ ಬುಲೆಟ್ ತಗಲಿತ್ತು. ಅವರು ಬದುಕಿ ಉಳಿದದ್ದೇ ಪವಾಡ. “ಮುಂಚೆ ನಾನು ಹಣಕ್ಕಾಗಿ ದುಡಿಯುತ್ತಿದ್ದೆ, ಈಗ ಕೇವಲ ಸಂತೋಷಕ್ಕಾಗಿ” ಅಂತಾರೆ. ೨೦೦೫ರಲ್ಲಿ ದೀಪಾವಳಿಯ ಹೊತ್ತಿನಲ್ಲಿ ದೆಹಲಿಯ ಸರೋಜಿನಿ ನಗರದಲ್ಲಿ ಬಾಂಬ್ ಸ್ಫೋಟ, ೪೮ ಜನರ ಸಾವು. ಅಂದು ಮನಿಷಾ ಮೈಕೇಲ್ ಎಂಬ ೮ ವರುಷದ ಬಾಲಕಿ ತತ್ತರಿಸಿದಳು. ಅವಳ ಅಪ್ಪ ಮತ್ತು ಅಣ್ಣ ಮೃತರಾದರು. ತೀವ್ರ ಗಾಯಗಳಾಗಿದ್ದ ಅವಳ ಅಮ್ಮ ಸಫ್ದರ್ಜಂಗ್ ಆಸ್ಪತ್ರೆಯಲ್ಲಿ ಎರಡು ತಿಂಗಳು ಚಿಕಿತ್ಸೆ ನೀಡಿದರೂ ತೀರಿಕೊಂಡರು. ಅಜ್ಜ-ಅಜ್ಜಿ ಜೊತೆ ಇರುವ ಮನಿಷಾ “ಕಳೆದ ೧೧ ವರುಷ ಬದುಕು ನನಗೆ ಬಹಳಷ್ಟು ಕಲಿಸಿದೆ. ನಾನೀಗ ಹೊಸ ಜೀವನ ಆರಂಭಿಸುತ್ತಿದ್ದೇನೆ. ಜಗತ್ತನ್ನೇ ಗೆಲ್ಲಲು ಸಜ್ಜಾಗಿದ್ದೇನೆ” ಎನ್ನುತ್ತಾಳೆ. ಇವರ ಮಾತು ಕೇಳುತ್ತಾ, “ಆವೇಶವೇತಕೋ” ಎಂಬ ಮಾತಿನ ಧ್ವನಿ ಅರ್ಥವಾಗುತ್ತದೆ, ಅಲ್ಲವೇ?
ಹಾಗೆಯೋ ಹೀಗೆಯೋ ಹೇಗೆ ಹೇಗೆಯೊ ಜನುಮ
ಸಾಗಿ ಮುಗಿವುದು; ಮುಗಿದು ಮರೆವುದದೆ ಸುಕೃತ
ಈಗಲೊ ಆಗಲೋ ಎಂದೊ ಮುಗಿವುಂಟೆಂಬ
ಭಾಗ್ಯವನು ನೆನೆದು ನಲಿ - ಮಂಕುತಿಮ್ಮ
ಮನುಷ್ಯರಾಗಿ ಹುಟ್ಟಿದ ನಮಗೆ ಸಾವು ನಿಶ್ಚಿತ. ನಿಜ ಹೇಳಬೇಕೆಂದರೆ, ನಮ್ಮ ಹುಟ್ಟಿನೊಂದಿಗೇ ಸಾವು ಬೆನ್ನಟ್ಟಿಕೊಂಡು ಬರುತ್ತದೆ. ಅಂತಿಮ ಕ್ಷಣದ ವರೆಗೆ ನಮ್ಮ ಬದುಕು ಹಾಗೆಯೋ ಹೀಗೆಯೋ ಅಂದರೆ ಯಾವುದೋ ಒಂದು ರೀತಿಯಲ್ಲಿ ಸಾಗುತ್ತದೆ. ಒಬ್ಬ ವ್ಯಕ್ತಿಯ ಆಯುಸ್ಸು ಮುಗಿದು, ಜೀವನ ಅಂತ್ಯವಾಗುತ್ತದೆ ಎಂಬುದೇ ಒಳ್ಳೆಯ ಸಂಗತಿ (ಸುಕೃತ). ಯಾರೂ ನಿರಂತರವಾಗಿ ಬದುಕಬೇಕಾಗಿಲ್ಲ, ಯಾವಾಗಲೋ ಬಾಳಿಗೆ ಮುಕ್ತಾಯ (ಮುಗಿವು) ಬಂದೇ ಬರುತ್ತದೆ ಎಂಬ ಭಾಗ್ಯವನ್ನು ನೆನೆದು ನಲಿ ಎಂದು ಬದುಕಿನ ಬಗ್ಗೆ ಸಕಾರಾತ್ಮಕ ಅರಿವು ನೀಡಿದ್ದಾರೆ ಮಾನ್ಯ ಡಿ.ವಿ. ಗುಂಡಪ್ಪನವರು.
ಇತ್ತೀಚೆಗೆ ೨೦೧೬ನೇ ವರುಷ ಮುಗಿದಿದೆ. ಈ ವರುಷದಲ್ಲಿ ನಮ್ಮನ್ನು ಅಗಲಿದವರಲ್ಲಿ ಸಾಂಸೃತಿಕ ರಂಗಕ್ಕೆ ಅಮೋಘ ಕೊಡುಗೆಯನ್ನಿತ್ತ ಹಲವರಿದ್ದಾರೆ. ಗಾಯಕ ಬಾಲಮುರಳಿಕೃಷ್ಣ, ನೃತ್ಯವಿಶಾರದೆ ಮೃಣಾಲಿನಿ ಸಾರಾಭಾಯ್, ಕವಿ ಅಕಬರ ಅಲಿ, ಸಾಹಿತಿ ಓ.ಎನ್.ವಿ. ಕುರುಪ್, ಪತ್ರಕರ್ತ ಚೋ ರಾಮಸ್ವಾಮಿ, ಚಿತ್ರ ನಿರ್ದೇಶಕ ಗೀತಪ್ರಿಯ. ಮರೆಯಲಾಗದ ಈ ಮಹನೀಯರನ್ನು ಶಾಶ್ವತವಾಗಿ ಕಳೆದುಕೊಂಡೆವಲ್ಲಾ ಎಂದು ದುಃಖವಾಗುತ್ತದೆ. ಆದರೆ ಇವರೆಲ್ಲರೂ ನಮ್ಮ ದೇಶದ ಜನರ ಪ್ರೀತಿ, ಆದರ ಗಳಿಸಿದವರು; ಭೌತಿಕವಾಗಿ ನಮ್ಮೊಂದಿಗೆ ಇಲ್ಲವಾದರೂ, ಶಾಶ್ವತವಾಗಿ ನಮ್ಮ ಮನದಲ್ಲಿ ನೆಲೆಸಿದವರು. ಅವರ ಗಾಯನ, ಗೀತೆ, ಕವನ, ಕತೆ, ಕಾದಂಬರಿ, ಚುಟುಕು, ಬರಹ, ಸಾಹಿತ್ಯ, ನೃತ್ಯ, ಚಲನಚಿತ್ರ – ಇವೆಲ್ಲವೂ ಅವರೆಲ್ಲರ ನೆನಪನ್ನು ಅಮರವಾಗಿಸಿವೆ.
೨೦೧೬ರಲ್ಲಿ ಇಹಲೋಕ ತೊರೆದವರಲ್ಲಿ ರಾಜಕೀಯರಂಗದಲ್ಲಿ ಪ್ರಮುಖರು: ಐದು ಬಾರಿ ತಮಿಳ್ನಾಡಿನ ಮುಖ್ಯಮಂತ್ರಿ ಸ್ಥಾನಕ್ಕೇರಿದ ಜಯಲಲಿತಾ ಮತ್ತು ಎರಡು ಬಾರಿ ಜಮ್ಮು-ಕಾಶ್ಮೀರದ ಮುಖ್ಯಮಂತ್ರಿಯಾದ ಮುಫ್ತಿ ಮೊಹಮ್ಮದ್ ಸಯೀದ್. ೨೦೧೬ನೇ ವರ್ಷಾಂತ್ಯದಲ್ಲಿ, ಎರಡು ತಿಂಗಳ ಅನಾರೋಗ್ಯದ ಬಳಿಕ ಜಯಲಲಿತಾ ತೀರಿಕೊಂಡಾಗ ತಮಿಳ್ನಾಡಿನ ಜನತೆಗೆ ಆಘಾತ. ಈ ಆಘಾತ ತಾಳಲಾಗದೆ ಸಾವಿಗೀಡಾದವರು ನೂರಕ್ಕಿಂತ ಅಧಿಕ ಜನರು.
ಆಪ್ತರು ಮೃತರಾದಾಗ ಒಮ್ಮೆ ದುಃಖವಾಗುತ್ತದೆ ನಿಜ. ಆದರೆ, ಪ್ರತಿಯೊಬ್ಬರ ಜೀವನಕ್ಕೂ ಅಂತ್ಯವುಂಟೆಂಬುದು ನಿಜಕ್ಕೂ ಭಾಗ್ಯ. ಇದನ್ನು ನೆನೆದು ನಲಿಯಲೇ ಬೇಕು, ಅಲ್ಲವೇ?
ನಾಳೆಯೊಂದಿಹುದು ನಿನ್ನೆಯವೊಲೆ ಬಾಳಿನಲಿ
ಬೀಳಾಯ್ತು ನಿನ್ನೆಯದೆಂದಳುವುದೇಕೆ?
ಮೇಲು ಮಾಡಲ್ಕಂದು ಸಮಯವದಕಾಣೆಯೇಂ
ಪಾಳೊಂದುಮಿಲ್ಲವೆಲೊ – ಮರುಳ ಮುನಿಯ
ನಿನ್ನೆ ಮುಗಿದಿದೆ. ಆದರೆ ನಾಳೆ ಕಾದಿದೆ ಎಂಬುದು ನೆನಪಿರಲಿ. ಬಾಳಿನಲ್ಲಿ ನಿನ್ನೆಯ ದಿನ ಹಾಳಾಗಿ ಹೋಯಿತು ಎಂದು ಅಳುವುದೇಕೆ? ಅದನು ಮೇಲು ಮಾಡಲಿಕ್ಕೆ, ಅಂದರೆ ಅದರಿಂದ ಒಳಿತು ಮಾಡಲಿಕ್ಕೆ, ಸೂಕ್ತ ಸಮಯಕ್ಕಾಗಿ ವಿಧಿ ಕಾಯುತ್ತಿದೆ ಎಂಬುದು ನಿನಗೆ ಕಾಣಿಸುತ್ತಿಲ್ಲವೇ? ಈ ಜಗತ್ತಿನಲ್ಲಿ ಹಾಳು ಎಂಬುದು ಯಾವುದೂ ಇಲ್ಲ ಎಂದು ಈ ಮುಕ್ತಕದಲ್ಲಿ ತಿಳಿಸುವ ಡಿವಿಜಿಯವರು ನಮ್ಮನ್ನು ಗಹನವಾದ ಚಿಂತನೆಗೆ ಒಡ್ಡುತ್ತಾರೆ.
೨೦೧೭ಕ್ಕೆ ಕಾಲಿಟ್ಟ ಈ ಹೊತ್ತಿನಲ್ಲಿ ೨೦೧೬ನೇ ವರುಷವೇ ಕಳೆದು ಹೋಯಿತೆಂದು ನಾವು ಚಿಂತಿಸಬೇಕಾಗಿಲ್ಲ. ಒಳ್ಳೆಯ ಕೆಲಸಗಳನ್ನು ಆರಂಭಿಸಲು ಯಾವುದೇ ದಿನ ಸೂಕ್ತ. ಈ ಕ್ಷಣವೇ ಸುಮುಹೂರ್ತ. ಪ್ರತಿ ದಿನದ ನಡಿಗೆ ಅಥವಾ ವ್ಯಾಯಾಮ ಇಂದೇ ಶುರು ಮಾಡೋಣ. ನಾಳೆಗೆ ಮುಂದೂಡಿದರೆ, ನಮ್ಮ ಆರೋಗ್ಯ ಸುಧಾರಿಸುವ ಕಾಯಕವನ್ನೇ ಒಂದು ದಿನ ತಡ ಮಾಡಿದಂತೆ, ಅಲ್ಲವೇ? ಸಮುದಾಯದ ಕೆಲಸಗಳಿಗೂ ಇದೇ ನಿಯಮ ಅನ್ವಯ. ನಮ್ಮೂರನ್ನು ಅಥವಾ ನಮ್ಮ ಬೀದಿಯನ್ನು ಸ್ವಚ್ಛವಾಗಿಡುವ ಕೆಲಸ. ಇದಕ್ಕಾಗಿ ಮನೆಮನೆಯವರನ್ನು ವಠಾರ ಸ್ವಚ್ಛವಾಗಿಡಲು ಆಗ್ರಹಿಸುವುದು, ವಿದ್ಯಾರ್ಥಿಗಳನ್ನು ಹುರಿದುಂಬಿಸುವುದು, ಸಂಘಸಂಸ್ಥೆಗಳ ಸಹಕಾರದಿಂದ ಸ್ವಚ್ಛತಾ ಆಂದೋಲನ ಮುನ್ನಡೆಸುವುದು – ಇಂತಹ ಜನಪರ ಕೆಲಸಗಳನ್ನು ಯಾರೂ ಸಂಘಟಿಸಬಹುದು. ಕಳೆದ ವರುಷ ಇದನ್ನು ಮಾಡಲಿಲ್ಲ ಎಂಬ ನಿರಾಶೆ ಬೇಡ. ಈ ವರುಷವಾದರೂ ಇದನ್ನು ಮಾಡೋಣ ಎಂಬ ಹುಮ್ಮಸ್ಸು ಬೇಕು.
೮ ನವಂಬರ್ ೨೦೧೬ರಂದು ರೂ.೫೦೦ ಮತ್ತು ರೂ.೧,೦೦೦ ಬೆಲೆಯ ನೋಟುಗಳನ್ನು ಅಮಾನ್ಯಗೊಳಿಸಿದ ಬಳಿಕ, ನಮ್ಮ ದೇಶದಲ್ಲಿ ಕಡಿಮೆ ಮೌಲ್ಯದ ನೋಟುಗಳಿಗಾಗಿ ಜನರು ಕಾಯಬೇಕಾಯಿತು. ಬ್ಯಾಂಕಿನ ಬ್ರಾಂಚುಗಳಲ್ಲಿ ಹಾಗೂ ಎಟಿಎಂಗಳಲ್ಲಿ ತಮ್ಮದೇ ಹಣ ಪಡೆಯಲಿಕ್ಕಾಗಿ ಸರತಿಸಾಲಿನಲ್ಲಿ ಸಾವಿರಾರು ಜನರು ನಿಲ್ಲಬೇಕಾಯಿತು. ಇದೆಲ್ಲ ಬೇಕಾಗಿರಲಿಲ್ಲ; ಇದರಿಂದ ತೊಂದರೆಯಾಯಿತು ಎಂದು ಒಮ್ಮೆ ಅನಿಸಿತು. ಆದರೆ “ಹಾಳು ಎಂಬುದು ಇಲ್ಲ” ಎಂಬುದು ಈ ಸನ್ನಿವೇಶದಲ್ಲಿಯೂ ಸಾಬೀತಾಯಿತು. ಇದರಿಂದಾಗಿ, ಈ ವರೆಗೆ ಬ್ಯಾಂಕಿಗೆ ಜಮೆಯಾಗದಿದ್ದ ಕೋಟಿಗಟ್ಟಲೆ ರೂಪಾಯಿ ಹಣ ಬ್ಯಾಂಕುಗಳಿಗೆ ಬಂತು. ಈ ಅಗಾಧ ಹಣ ಬಳಸಿ, ಜನಸಾಮಾನ್ಯರಿಗೆ ಮನೆ ಕಟ್ಟಲು ಕಡಿಮೆ ಬಡ್ಡಿಯ ಸಾಲ ನೀಡುವುದಾಗಿ ಕೆಲವು ಬ್ಯಾಂಕುಗಳು ಈಗಾಗಲೇ ಘೋಷಿಸಿವೆ. ಅಂದರೆ, ಹಾಳು ಎಂದು ತೋರಿದ ಕ್ರಮದಿಂದಾಗಿ ಸೂಕ್ತ ಸಮಯ ಬಂದಾಗ ಒಳಿತಾಗಿದೆ, ಅಲ್ಲವೇ?
ಅನ್ನವುಣುವಂದು ಕೇಳ್: ಅದನು ಬೇಯಿಸಿದ ನೀರ್
ನಿನ್ನ ದುಡಿತದ ಬೆಮರೊ, ಪೆರರ ಕಣ್ಣೀರೋ?
ತಿನ್ನು ನೀಂ ಜಗಕೆ ತಿನಲಿತ್ತನಿತ; ಮಿಕ್ಕೂಟ
ಜೀರ್ಣಿಸದ ಋಣಶೇಷ - ಮಂಕುತಿಮ್ಮ
“ನಾನೀಗ ಉಣ್ಣುತ್ತಿರುವ ಊಟ ನನ್ನದೇ ಬೆವರಿನ ದುಡಿಮೆಯಿಂದ ಗಳಿಸಿದ್ದೋ? ಅಥವಾ ಈ ಊಟ ಇತರರನ್ನು ಕಣ್ಣೀರು ಹಾಕಿಸಿ ಸಂಪಾದಿಸಿದ್ದೋ?” ಈ ಪ್ರಶ್ನೆಯನ್ನು ಪ್ರತಿ ದಿನವೂ ಊಟ ಮಾಡುವಾಗ ನಿನಗೆ ನೀನೇ ಕೇಳಿಕೋ ಎಂದು ಈ ಮುಕ್ತಕದಲ್ಲಿ ನಮ್ಮನ್ನು ಬಡಿದೆಬ್ಬಿಸುತ್ತಾರೆ ಮಾನ್ಯ ಡಿ.ವಿ. ಗುಂಡಪ್ಪನವರು. ಈ ಜಗತ್ತಿನ ಜನರಿಗೆ ತಿನ್ನಲು ಏನಾದರೂ ಕೊಟ್ಟಿದ್ದೀಯಾ? ಅಥವಾ ಇತರರ ಹಸಿವು ನೀಗಲು ಏನಾದರೂ ದಾನ ಮಾಡಿದ್ದೀಯಾ? ಹಾಗೆ ಕೊಟ್ಟಿದ್ದರೆ, ಅಷ್ಟನ್ನು ಮಾತ್ರ ಉಣ್ಣುವ ಹಕ್ಕು ನಿನಗುಂಟು ಎಂದು ಅವರು ಎಚ್ಚರಿಸುತ್ತಾರೆ. ಮಿಕ್ಕೂಟ ಅಂದರೆ ಅದಕ್ಕಿಂತ ಮಿಗಿಲಾಗಿ ನೀನು ತಿಂದದ್ದೆಲ್ಲಾ “ಜೀರ್ಣಿಸದ ಋಣಶೇಷ” ಎಂಬುದು ಅವರು ನೀಡುವ ಅಂತಿಮ ಎಚ್ಚರಿಕೆ. ಆ ಋಣಶೇಷ ನಿನ್ನ ಬೆಂಬಿಡದು; ಇಂದಲ್ಲದಿದ್ದರೆ ನಾಳೆ ನೀನು ಅದನ್ನು ತೀರಿಸಲೇ ಬೇಕು ಎಂದು ಸ್ಪಷ್ಟಪಡಿಸುತ್ತಾರೆ ಡಿ.ವಿ.ಜಿ.ಯವರು
ಎಂತಹ ಮಹಾನ್ ಸತ್ಯ! ಈ ಸತ್ಯವನ್ನು ಒಪ್ಪದವರು ಮೋಸದಿಂದ, ಅಕ್ರಮದಿಂದ ಹಾಗೂ ಅನೈತಿಕವಾಗಿ ರಾಶಿರಾಶಿ ಹಣ ಲೂಟಿ ಮಾಡಿ ಶೇಖರಿಸಿಟ್ಟರು. ಉದಾಹರಣೆಗೆ, ಕರ್ನಾಟಕದ ಗ್ರಾಮೀಣಾಭಿವೃದ್ಧಿ ಇಲಾಖೆಯಲ್ಲಿ ೨೦೦೯ರಿಂದ ೨೦೧೩-೧೪ರ ವರೆಗೆ ಐದು ವರುಷಗಳಲ್ಲಿ ೧೦೬ ಬೇನಾಮಿ ಬ್ಯಾಂಕ್ ಖಾತೆಗಳ ಮೂಲಕ ರೂಪಾಯಿ ೧೦,೦೦೦ ಕೋಟಿ ಲೂಟಿಯಾಗಿದೆ. ಇದು ಪುರಾವೆಗಳ ಸಹಿತ ಸಾಬೀತಾಗಿದೆ. ಇದನ್ನು ಪತ್ರಿಕಾಗೋಷ್ಠಿಯಲ್ಲಿ ಬಹಿರಂಗ ಪಡಿಸಿದವರು ಕರ್ನಾಟಕದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರು.
ಗಮನಿಸಿ, ಒಂದೆರಡಲ್ಲ ೧೦,೦೦೦ ಕೋಟಿ ರೂಪಾಯಿ ಲೂಟಿ! ಹಾಗಾದರೆ, ೧೯೪೭ರಲ್ಲಿ ದೇಶಕ್ಕೆ ಸ್ವಾತಂತ್ರ್ಯ ಬಂದಾಗಿನಿಂದ ಈ ವರೆಗೆ ಅದೆಷ್ಟು ಕೋಟಿ ರೂಪಾಯಿ ಲೂಟಿಯಾಗಿದೆ? ಬೇರೆ ರಾಜ್ಯಗಳಲ್ಲಿ, ಕೇಂದ್ರ ಸರಕಾರದ ಮಂತ್ರಾಲಯಗಳಲ್ಲಿ, ಸಾವಿರಾರು ನಿಗಮ-ಮಂಡಲಿಗಳಲ್ಲಿ ಅದೆಷ್ಟು ಲಕ್ಷಲಕ್ಷ ಕೋಟಿ ರೂಪಾಯಿ ಲೂಟಿಯಾಗಿದೆ?
ಕೋಟಿಗಟ್ಟಲೆ ಜನರಿಗೆ ಅನ್ಯಾಯ ಮಾಡಿ, ಅವರ ಕಣ್ಣೀರು ಹಾಕಿಸಿ ಕೊಳ್ಳೆ ಹೊಡೆದ ಈ ಕೋಟಿಕೋಟಿ ರೂಪಾಯಿ “ಕಪ್ಪುಹಣ” ಲೂಟಿಕೋರರಿಗೆ ದಕ್ಕೀತೇ? ೮ ನವಂಬರ್ ೨೦೧೬ರಂದು ಭಾರತದಲ್ಲಿ ರೂ.೫೦೦ ಮತ್ತು ರೂ.೧೦೦೦ ಮುಖಬೆಲೆಯ ನೋಟುಗಳನ್ನು ಪ್ರಧಾನಮಂತ್ರಿ ರದ್ದು ಮಾಡಿದಾಗ, ಈ ಕಪ್ಪುಹಣದ ಬಹುಪಾಲು ಕೇವಲ ಕಾಗದದ ಕಸವಾಯಿತು, ಅಲ್ಲವೇ? ಪೆರರ ಕಣ್ಣೀರು ಹಾಕಿಸಿ, ಶೇಖರಿಸಿದ ಸಂಪತ್ತನ್ನು ದಕ್ಕಿಸಿಕೊಳ್ಳುವೆನೆಂಬ ಭ್ರಮೆಯಲ್ಲಿ ಇರುವವರು ಇನ್ನಾದರೂ “ಆ ಸಂಪತ್ತು ಜೀರ್ಣಿಸದ ಋಣಶೇಷ” ಎಂಬ ಮಹಾನ್ ಸತ್ಯಕ್ಕೆ ಶರಣಾಗಲಿ.
ಸಜ್ಜೀವನಕೆ ಸೂತ್ರವೆರಡು ಮೂರದು ಸರಳ
ಹೊಟ್ಟೆಪಾಡಿಗೆ ವೃತ್ತಿ ಸತ್ಯ ಬಿಡದಿಹುದು
ಚಿತ್ತವೀಶನೊಳದುವೆ ಚಿಂತೆಗಳ ಬಿಟ್ಟಿಹುದು
ಮೈತ್ರಿ ಲೋಕಕ್ಕೆಲ್ಲ – ಮರುಳ ಮುನಿಯ
ಒಳ್ಳೆಯ ಜೀವನ ನಡೆಸಲು ಎರಡು ಮೂರು ಸರಳ ಸೂತ್ರಗಳ ಪಾಲನೆಯೇ ಸಾಕೆಂದು ಈ ಮುಕ್ತಕದಲ್ಲಿ ಸಾರಿದ್ದಾರೆ ಡಿವಿಜಿಯವರು. ಆ ಮೂಲಕ ಒಳ್ಳೆಯ ಬದುಕು ಎಷ್ಟು ಸರಳ ಎಂಬದನ್ನು ಮನಗಾಣಿಸಿದ್ದಾರೆ. ಮೊದಲ ಸೂತ್ರ: ಹೊಟ್ಟೆಪಾಡಿಗೊಂದು ವೃತ್ತಿ ಮಾಡುವುದು. ಅದು ಕೃಷಿಯಂತಹ ಸ್ವ-ಉದ್ಯೋಗ ಆಗಿರಬಹುದು ಅಥವ ಕಚೇರಿ ಕೆಲಸದಂತಹ ಸಂಬಳದ ಉದ್ಯೋಗ ಆಗಿರಬಹುದು. ಅಂತೂ, ಮನುಷ್ಯನಿಗೆ ಏನಾದರೂ ಉದ್ಯೊಗ ಬೇಕೇಬೇಕು. ಇಲ್ಲವಾದರೆ, ನಮ್ಮ ಮನಸ್ಸೆಂಬುದು ದೆವ್ವಗಳ ಮನೆಯಂತೆ ಅನಗತ್ಯ ಹಾಗೂ ದಿಕ್ಕೆಟ್ಟ ಯೋಚನೆಗಳ ಗೂಡಾದೀತು.
ಸತ್ಯವನ್ನು ಬಿಡದಿರುವುದು ಒಳ್ಳೆಯ ಜೀವನದ ಎರಡನೇ ಸೂತ್ರ. ಬಸವಣ್ಣನವರೂ ತಮ್ಮ ಪ್ರಸಿದ್ಧ ವಚನದಲ್ಲಿ ಇದನ್ನೇ ಹೇಳಿದ್ದಾರೆ: ಹುಸಿಯ ನುಡಿಯಲು ಬೇಡ…. ಇದುವೇ ಕೂಡಲಸಂಗಮ ದೇವನೊಲಿಸುವ ಪರಿ. ಮಹಾತ್ಮ ಗಾಂಧಿ ಸತ್ಯವೇ ದೇವರೆಂದು ನಂಬಿ ಬದುಕಿದವರು. ಸುಳ್ಳಿನ ಹಾದಿ ಹಿಡಿದವನಲ್ಲಿ ಯಶಸ್ಸಿನ ಸಾಧನೆಗೆ ಅದು ಸುಲಭದ ದಾರಿ ಎಂಬ ಭ್ರಮೆ ಹುಟ್ಟುತ್ತದೆ. ಆದರೆ, ಆ ದಾರಿಯಿಂದ ಎಂದಿಗೂ ಗುರಿ ಮುಟ್ಟಲಾಗದು ಎಂಬುದೇ ಸತ್ಯ. ಈಗ ಹಲವರ ಜೀವನವೇ ಸುಳ್ಳಿನ ಕಂತೆಯಾಗಿದೆ. ಹಾಗಾಗಿ, ಯಾರು ಸತ್ಯದ ದಾರಿಯಲ್ಲಿದ್ದಾರೆ ಎಂದು ತಿಳಿಯುವುದೇ ಸವಾಲಾಗಿದೆ. ಬ್ಯಾಂಕಿನಿಂದ ಪಡೆದ ಸಾಲದ ನಿಯತ್ತಿನ ಮರುಪಾವತಿಯ ಷರತ್ತನ್ನು ಒಪ್ಪಿಕೊಂಡಿದ್ದ ವಿಜಯ ಮಲ್ಯ, ರೂ.೭,೦೦೦ ಕೋಟಿ ಸಾಲ ಮರುಪಾವತಿಸದೆ, ದೇಶ ಬಿಟ್ಟು ಹೋಗಿದ್ದಾರೆ! ರೈತರಿಗೆ ಸಾವಿರಾರು ಕೋಟಿ ರೂಪಾಯಿ ಸಬ್ಸಿಡಿ ಕೊಡುತ್ತಿದ್ದೇವೆ ಎನ್ನುವ ಸರಕಾರ ಅದನ್ನು ನಿಜವಾಗಿ ಕೊಡುತ್ತಿರುವುದು ರಾಸಾಯನಿಕ ಗೊಬ್ಬರ ಉತ್ಪಾದಿಸುವ ಕಾರ್ಖಾನೆಗಳಿಗೆ!
ಡಿವಿಜಿಯವರು ತಿಳಿಸುವ ಮೂರನೇ ಸೂತ್ರ “ಈಶನೊಳು ಚಿತ್ತ” ಇರಿಸುವುದು ಅಂದರೆ ದೇವರನ್ನು ನಂಬುವುದು; ಆ ಮೂಲಕ ಚಿಂತೆ ಬಿಟ್ಟು ಬದುಕುವುದು. ದೇವರ ಬಗೆಗಿನ ಚರ್ಚೆಯ ಬದಲಾಗಿ, ದೇವರು ಇದ್ದಾನೆ ಎಂಬಂತೆ ಬದುಕುವುದು ನಿರಾಳ. ಈ ಭೂಮಿಯನ್ನು ಆಧರಿಸಿರುವ ಶಕ್ತಿ ಇರುವುದು ಸತ್ಯ. ಆ ಸತ್ಯಕ್ಕೆ ಶರಣಾದರೆ, ಈ ಲೋಕದ ಎಲ್ಲದರೊಂದಿಗೆ ಮೈತ್ರಿಯಿಂದ ಬಾಳಲು ಸಾಧ್ಯ. ಇವು ಮೂರೇ ನೆಮ್ಮದಿಯ ಬದುಕಿಗೆ ಬೇಕಾದ ಸರಳ ಸೂತ್ರಗಳು.
ದಿವಸದಿಂ ದಿವಸಕ್ಕೆ, ನಿಮಿಷದಿಂ ನಿಮಿಷಕ್ಕೆ
ಭವಿಷಿಯವ ಚಿಂತಿಸದೆ ಬದುಕ ನೂಕುತಿರು
ವಿವರಗಳ ಜೋಡಿಸುವ ಯಜಮಾನ ಬೇರಿಹನು
ಸವೆಸು ನೀಂ ಜನುಮವನು - ಮಂಕುತಿಮ್ಮ
ದಿವಸದಿಂದ ದಿವಸಕ್ಕೆ, ನಿಮಿಷದಿಂದ ನಿಮಿಷಕ್ಕೆ ಭವಿಷ್ಯವನ್ನು ಚಿಂತಿಸದೆ ಬದುಕನ್ನು ನೂಕುತ್ತಿರು. ಯಾಕೆಂದರೆ ನಿನ್ನ ಬದುಕಿನ ವಿವರಗಳನ್ನು ಜೋಡಿಸುವ ಯಜಮಾನ ಬೇರೆ ಇದ್ದಾನೆ. ನಿನ್ನ ಮುಂದಿನ ದಿನ ಅಥವಾ ನಿಮಿಷ ಹೇಗಿರಬೇಕು ಎಂದು ನಿರ್ಧರಿಸುವವನು ಅವನು, ನೀನಲ್ಲ. ಆದ್ದರಿಂದ ಆ ಜಗನ್ನಿಯಾಮಕನ ಮೇಲೆ ನಂಬಿಕೆಯಿಟ್ಟು ನಿನ್ನ ಜನ್ಮವನ್ನು ನೀನು ಸವೆಸು ಎಂದಿದ್ದಾರೆ ಈ ಮುಕ್ತಕದಲ್ಲಿ ಮಾನ್ಯ ಡಿ.ವಿ. ಗುಂಡಪ್ಪನವರು.
ಹೆತ್ತವರು ಕೆಲವರು ತಮ್ಮ ಮಗ/ ಮಗಳನ್ನು ಡಾಕ್ಟರ್ ಮಾಡಲೇ ಬೇಕೆಂಬ ಹಟಕ್ಕೆ ಬೀಳುತ್ತಾರೆ. ಆದರೆ ಮಗ/ ಮಗಳಿಗೆ ಅದರಲ್ಲಿ ಆಸಕ್ತಿಯೇ ಇಲ್ಲ. ಆತ/ ಆಕೆಯ ಆಸಕ್ತಿ ಸಂಗೀತ, ನೃತ್ಯ, ಚಿತ್ರಕಲೆ ಅಥವಾ ಸಾಹಿತ್ಯ ಆಗಿರ ಬಹುದು. ಆದರೂ ಅಪ್ಪಅಮ್ಮನ ಒತ್ತಾಯಕ್ಕಾಗಿ ವೈದ್ಯಕೀಯ ಶಿಕ್ಷಣಕ್ಕೆ ಸೇರುತ್ತಾರೆ. ಒಂದೆರಡು ವರುಷಗಳಲ್ಲಿ “ಅದು ನನ್ನಿಂದ ಸಾಧ್ಯವೇ ಇಲ್ಲವೆಂದು” ಅದನ್ನು ತೊರೆದು, ತಮ್ಮ ಆಸಕ್ತಿಯ ವಿಷಯದ ಶಿಕ್ಷಣದಲ್ಲಿ ಮುಂದುವರಿಯುತ್ತಾರೆ.
ಹಾಗೆಯೇ ಮಗ/ ಮಗಳು ತಮ್ಮ ಜಾತಿಯವರನ್ನೇ ಮದುವೆಯಾಗಬೇಕು ಎಂಬುದು ಬಹುಪಾಲು ಹೆತ್ತವರ ನಿರೀಕ್ಷೆ. ಆದರೆ ಆಧುನಿಕ ಶಿಕ್ಷಣ ಪಡೆದು, ಜಗತ್ತಿನ ವಿವಿಧ ಪ್ರಭಾವಗಳಿಗೆ ಒಳಗಾಗಿ, ಎಲ್ಲಿಯೋ ದುಡಿಯುವ ಮಗ/ ಮಗಳು ಬೇರೆ ಜಾತಿಯ ಸಂಗಾತಿಯನ್ನು ಪ್ರೀತಿಸಲು ತೊಡಗುತ್ತಾರೆ; ಅನಂತರ ಪ್ರೀತಿಸಿದವರನ್ನೇ ಮದುವೆಯಾಗುತ್ತಾರೆ. ಅಲ್ಲಿಗೆ ಹೆತ್ತವರ ಭವಿಷ್ಯದ ಕನಸು ನುಚ್ಚುನೂರು. ತಮ್ಮ ಮಕ್ಕಳು ಕೊನೆಗಾಲದ ವರೆಗೂ ತಮ್ಮೊಂದಿಗೇ ಇರಬೇಕೆಂಬ ಯೋಜನೆ ಕೆಲವು ಹೆತ್ತವರದ್ದು. ಅದಕ್ಕಾಗಿ ದೊಡ್ಡ ಮನೆ ಕಟ್ಟುತ್ತಾರೆ. ಕೊನೆಗೆ, ದೂರದ ಊರಿನಲ್ಲಿ/ ದೇಶದಲ್ಲಿ ಉದ್ಯೋಗದಲ್ಲಿರುವ ಮಕ್ಕಳು, ತಮ್ಮ ಶಿಕ್ಷಣದ ಬಳಿಕ ಒಂದು ತಿಂಗಳೂ ಈ ಮನೆಯಲ್ಲಿ ವಾಸವಿರುವುದಿಲ್ಲ. ಅದರಿಂದಾಗಿ ಈ ದೊಡ್ಡ ಮನೆ ಖಾಲಿಖಾಲಿ. ಇನ್ನು ಕೆಲವು ಹೆತ್ತವರದ್ದು ಇನ್ನೊಂದು ದೊಡ್ಡ ಕನಸು: ತಮ್ಮ ಮಕ್ಕಳು ಕೊನೆಗಾಲದಲ್ಲಿ ತಮ್ಮೊಂದಿರುತ್ತಾರೆ ಎಂದು. ಆದರೆ, ಅದೇ ಊರಿನಲ್ಲಿದ್ದರೂ ಕೆಲವು ಮಕ್ಕಳು ವೃದ್ಧ ತಂದೆತಾಯಿಯನ್ನು ಭೇಟಿ ಮಾಡುವುದು ಅಪರೂಪ. ವಿದೇಶಕ್ಕೆ ಹೋದರಂತೂ ಮಕ್ಕಳು ಹೆತ್ತವರಿಂದ ದೂರವಾದಂತೆಯೇ. ಪಿಎಚ್-ಡಿ ಮಾಡಲಿಕ್ಕಾಗಿ ಅಮೆರಿಕಾಕ್ಕೆ ಹೋಗುವ ಯುವಜನರಲ್ಲಿ ಶೇ.೯೫ ಜನರು ಹಿಂತಿರುಗಿ ಭಾರತಕ್ಕೆ ಬರುವುದಿಲ್ಲ; ಅಲ್ಲೇ ನೆಲೆಸುತ್ತಾರೆ. ಆದ್ದರಿಂದ ೨ ಕೂಡಿಸು ೨ ಎಂದರೆ ನಾಲ್ಕು ಎಂಬ ಲೆಕ್ಕಾಚಾರ ಗಣಿತಕ್ಕೆ ಸರಿ; ಆದರೆ ಬದುಕಿಗಲ್ಲ. ಬದುಕಿಗೆ ಬೇಕಾದ್ದು ಡಿವಿಜಿಯವರು ಇಲ್ಲಿ ತಿಳಿಸಿರುವ ಸರಳ ತತ್ವದ ಪಾಲನೆ, ಅಲ್ಲವೇ?
ದೇವನುದ್ದೇಶವೇನಿಂದೆನಲು ನೀನಾರು?
ಆವಶ್ಯಕವೆ ನಿನ್ನನುಜ್ನೆಯಾತಂಗೆ?
ಆವುದೋ ಪ್ರಭುಚಿತ್ತವೇನೊ ಅವನ ನಿಮಿತ್ತ
ಸೇವಕಂಗೇತಕದು? – ಮರುಳ ಮುನಿಯ
ದೇವರ ಉದ್ದೇಶ ಏನು ಎಂದು ಕೇಳಲು ನೀನು ಯಾರು? ಯಾವುದೇ ಕಾಯಕಕ್ಕೆ ನಿನ್ನ ಒಪ್ಪಿಗೆ (ಅನುಜ್ನೆ) ದೇವರಿಗೆ ಆವಶ್ಯಕವೇ? ಆ ಮಹಾಪ್ರಭುವಿನ ಮನಸ್ಸಿನಲ್ಲಿ ಏನಿರುವುದೋ, ಆತನಿಗೆ ಯಾವುದೇ ಕಾಯಕಕ್ಕೆ ಏನು ಕಾರಣಗಳು ಇವೆಯೋ, ಅವೆಲ್ಲ ಸೇವಕನಾದ ನಿನಗೆ ಯಾತಕ್ಕೆ? ಎಂದು ಮಾನ್ಯ ಡಿವಿಜಿಯವರು ಜಿಜ್ನಾಸೆ ಮಾಡುತ್ತಾರೆ.
ಸುನಾಮಿ, ಭೂಕಂಪ, ಬಿರುಗಾಳಿ, ಮಹಾನೆರೆ, ಅಗ್ನಿ ಪರ್ವತ ಸ್ಫೋಟ, ಮೇಘಸ್ಫೋಟ, ಭೀಕರ ಅಪಘಾತಗಳು ಇವನ್ನೆಲ್ಲ ಗಮನಿಸಿ. ಅದರಿಂದಾಗುವ ಸಾವುನೋವು, ಅನಾಹುತಗಳನ್ನು ಪರಿಗಣಿಸಿ. ೩೧.೧೦.೨೦೧೬ರಂದು ಇಟೆಲಿಯ ಭೂಕಂಪದಿಂದಾಗಿ ೧೫,೦೦೦ ಜನರು ಮನೆ ಕಳೆದುಕೊಂಡರು. ಈಗ ನಮ್ಮಲ್ಲಿ ಮೂಡುವ ಪ್ರಶ್ನೆ: ಇಷ್ಟೆಲ್ಲ ಸಾವುನೋವು ಉಂಟು ಮಾಡುವ ದೇವರ ಉದ್ದೇಶವೇನು? ಆದರೆ ಮೂಲಭೂತ ಪ್ರಶ್ನೆ: ಇದನ್ನು ಕೇಳಲು ನಾವು ಯಾರು? ಹೌದಲ್ಲ, ದೇವರಿಗೆ ದೇವರದ್ದೇ ಆದ ಲೆಕ್ಕಾಚಾರ ಇರಬಹುದು. ಉದಾಹರಣೆಗೆ ಈ ಭೂಮಿಯಲ್ಲಿ ಮನುಷ್ಯರ ಸಂಖ್ಯೆ ಮಿತಿ ಮೀರಿದಾಗ, ಅದನ್ನು ನಿಯಂತ್ರಿಸಲು ದೇವರು ಯಾವುದೋ ಕ್ರಮ ಕೈಗೊಳ್ಳಬಹುದು, ಅಲ್ಲವೇ? ಭೂಮಿಯ ಸಮತೋಲನದ ಮರುಸ್ಥಾಪನೆಗಾಗಿ ಸಾವುನೋವೂ ಅಗತ್ಯವಾದೀತು, ಅಲ್ಲವೇ?
ಈ ಭೂಮಿಯಲ್ಲಿದ್ದ ಡೈನಾಸಾರುಗಳು ಅಳಿದೇ ಹೋದವು. ಯಾಕೆ? ಅದು ದೇವರ ನಿರ್ಧಾರ ಎಂದಿರಲಿ. ಈ ಮುಂದಿನ “ಮನುಷ್ಯ” ನಿರ್ಧಾರ ಗಮನಿಸಿ. ಕೆಲವು ವರುಷಗಳ ಮುಂಚೆ, ಯುರೋಪಿನಲ್ಲಿ ಲಕ್ಷಗಟ್ಟಲೆ ದನಗಳನ್ನು ಕೊಲ್ಲಲಾಯ್ತು. ಯಾಕೆ? ಅವುಗಳಿಗೆ “ಹುಚ್ಚು ದನದ ಕಾಯಿಲೆ”ಯ ಸೋಂಕು ತಗಲಿದ್ದ ಕಾರಣ. ಇತ್ತೀಚೆಗೆ ಆಫ್ರಿಕಾದ ನೈಜೀರಿಯದಲ್ಲಿ ಸಾವಿರಾರು ಆನೆಗಳನ್ನು ಸರಕಾರದ ಆದೇಶದಂತೆ ಕೊಂದು ಹಾಕಲಾಯಿತು. ಯಾಕೆ? ಆನೆಗಳ ಸಂಖ್ಯೆ ಹೆಚ್ಚಾಯಿತೆಂದು. ಇದೇ ವರುಷ, ಬಿಹಾರದಲ್ಲಿ ಸರಕಾರದ ಆದೇಶದಂತೆ ನೂರಾರು ಕಾಡುಜಿಂಕೆಗಳನ್ನು ಗುಂಡಿಟ್ಟು ಕೊಲ್ಲಲಾಯಿತು. ಯಾಕೆ? ಅವುಗಳ ಸಂಖ್ಯೆ ಮಿತಿ ಮೀರಿತೆಂದು. ಇವು ಮೂರು ಮನುಷ್ಯ ನಿರ್ಧಾರಗಳು ಸರಿಯೇ?
ಹಾಗಾದರೆ, ಮನುಷ್ಯ ಎಂಬ ಪ್ರಾಣಿಯ ಸಂಖ್ಯೆ ನಿಯಂತ್ರಿಸಲಿಕ್ಕಾಗಿ ವಿಶ್ವನಿಯಾಮಕ ತನ್ನ ಕ್ರಮ ಜ್ಯಾರಿಗೊಳಿಸಿದಾಗ ಅದನ್ನು “ಭಗವಂತನ ನಿಯಮ” ಎಂದು ಸ್ವೀಕರಿಸಬೇಕಲ್ಲವೇ? ನಾವು ಕೇವಲ ಸೇವಕರು. ಆತನ ವಿಧಿವಿಧಾನಗಳನ್ನು ಪ್ರಶ್ನಿಸುವ ಅಧಿಕಾರ ನಮಗಿಲ್ಲ, ಅಲ್ಲವೇ?




