ಕಷ್ಟ ಬಂದಾಗಲೆಲ್ಲ ಸಾಂತ್ವನಕ್ಕಾಗಿ ಅವನು ಹನುಮಂತನ ದೇವಸ್ಥಾನಕ್ಕೆ ಬಂದು ಪ್ರಾರ್ಥಿಸುತ್ತಿದ್ದ. ಇವತ್ತೂ ಅಲ್ಲಿಗೆ ಬಂದು, ಅವನು ದೇವಸ್ಥಾನದ ಗಂಟೆ ಬಾರಿಸಿದ. ಹಣೆಗೆ ಕುಂಕುಮ ಹಚ್ಚಿಕೊಂಡ. ಕೈಗಳನ್ನು ಮುಗಿದು, ಹನುಮಂತನಿಗೆ ತನ್ನ ಕೊನೆಯ ಪ್ರಾರ್ಥನೆ ಸಲ್ಲಿಸಲು ತಲೆ ಬಾಗಿಸುತ್ತಲೇ ಅವನು ಅಲ್ಲೇ ಪ್ರಜ್ಞೆ ತಪ್ಪಿ ಬಿದ್ದ.
ಬದುಕಿನ ಬೆಳಕೇ ಆರಿ ಹೋದಂತೆ ಅವನನ್ನು ಕತ್ತಲೆ ಆವರಿಸಿತು. ಕೆಲವು ಕ್ಷಣ ಅವನ ಕಣ್ಣು ರೆಪ್ಪೆಗಳು ಅಲುಗಾಡಿದವು. ಭ್ರಮಾಲೋಕದಲ್ಲಿ ವಿಹರಿಸಿದಂತೆ ಅವನ ತಲೆ ಹಗುರಾಯಿತು. ಪರ್ವತದಂತಹ ಅವನ ಚಿಂತೆಗಳೆಲ್ಲ ಕರಗಿ ಹೋದವು. ಎಚ್ಚರವಾಗಿರಬೇಕೆಂಬ ಹಂಬಲದ ಜೊತೆ ಗುದ್ದಾಡುತ್ತಿದ್ದ ಅವನ ಮೆದುಳು ತಣ್ಣಗಾಯಿತು.
ಅನಂತರ ಅವನು ಕಣ್ಣು ಬಿಡಿಸಿದಾಗ, ಚಾವಣಿಯಲ್ಲಿ ನಿಶ್ಚಲವಾಗಿದ್ದ ಒಂದು ಫ್ಯಾನ್ ಕಾಣಿಸಿತು. ಅದರ ರೆಕ್ಕೆಗಳು ಜೇಡನ ಬಲೆ ಮತ್ತು ಧೂಳು ತುಂಬಿ ಕಪ್ಪಗಾಗಿದ್ದವು. ಅದನ್ನು ಸ್ವಚ್ಛ ಮಾಡದೆ ವರುಷಗಳಾಗಿದ್ದವು. ಮಂಪರಿನಲ್ಲಿದ್ದ ಅವನಿಗೆ ಎಲ್ಲವೂ ಮಸುಕುಮಸುಕಾಗಿ ಕಾಣಿಸಿತು. ನಿಧಾನವಾಗಿ ಅವನ ಪ್ರಜ್ಞೆ ಮರುಕಳಿಸಿತು.
ಒಂದು ಮಂಚದಲ್ಲಿ ನಜ್ಜುಗುಜ್ಜಾದ ಹಾಸಿಗೆಯಲ್ಲಿ ಹರಿದ ಹೊದಿಕೆ ಹಾಸಿ ತನ್ನನ್ನು ಮಲಗಿಸಲಾಗಿದೆ ಎಂದು ಅವನಿಗೆ ಅರಿವಾಯಿತು. ಪಕ್ಕದಲ್ಲಿದ್ದ ಕಬ್ಬಿಣದ ಸ್ಟ್ಯಾಂಡಿಗೆ ಒಂದು ಸಲೈನ್ ಬಾಟಲಿಯನ್ನು ನೇತಾಡಿಸಲಾಗಿತ್ತು. ಅದರಿಂದ ದ್ರಾವಣಗಳು ಮತ್ತು ಔಷಧಿಗಳು ಅವನ ರಕ್ತನಾಳಕ್ಕೆ ಹನಿಹನಿಯಾಗಿ ಇಳಿದು ಬರುತ್ತಿದ್ದವು. ಅವನ ಮಂಚದ ಹಿಂಭಾಗದಲ್ಲಿ ಇರಿಸಲಾಗಿದ್ದ ಇಸಿಜಿ ಮೊನಿಟರ್ ಸ್ಕ್ರೀನಿನಲ್ಲಿ ಒಂದಾದ ಮೇಲೋಂದರಂತೆ ವಾರೆಕೋರೆ ಗೆರೆಗಳು ಮೂಡುತ್ತಿದ್ದಂತೆ, ಲಯಬದ್ಧವಾದ ಟಿಕ್-ಟಿಕ್-ಟಿಕ್ ಸದ್ದು ಕೇಳಿಬರುತ್ತಿತ್ತು. ಡಿಜಿಟಲ್ ಸ್ಕ್ರೀನಿನಲ್ಲಿ ಅವನ ರಕ್ತದೊತ್ತಡ ಮತ್ತು ಹೃದಯ ಬಡಿತದ ದರ ಮೂಡಿ ಬರುತ್ತಿತ್ತು. ಆ ದೊಡ್ಡ ಕೋಣೆಯುದ್ದಕ್ಕೂ ಅವನೊಮ್ಮೆ ಕಣ್ಣಾಡಿಸಿದ. ತಾನು ಮಲಗಿದ್ದೇನೆ ಎಂಬುದು ಅವನಿಗೆ ಸ್ಪಷ್ಟವಾಯಿತು. ಅಷ್ಟರಲ್ಲಿ ಅವನ ಆತಂಕ ನುಗ್ಗಿ ಬಂತು. ಅವನಿಗೆ ಸುಸ್ತಾಯಿತು. ಅವನ ಹೃದಯ ಮುದುಡಿತು.
ಅದೇ ಕೋಣೆಯಲ್ಲಿ ಅವನಲ್ಲದೆ ಇನ್ನೂ ಎಂಟು-ಹತ್ತು ಜನರಿದ್ದರು. ಅವರಲ್ಲಿ ಕೆಲವರು ತಮ್ಮ ಹಾಸಿಗೆಯಲ್ಲೇ ನೋವಿನಿಂದ ಒದ್ದಾಡುತ್ತಿದ್ದ ದೃಶ್ಯ ಕಾಣಿಸಿತು. ಇನ್ನು ಕೆಲವರು ನಿಶ್ಚಲವಾಗಿ, ಸತ್ತವರಂತೆ ಮಲಗಿದ್ದರು. ಬಿಳಿ ಉಡುಪು ತೊಟ್ಟಿದ್ದ ಇಬ್ಬರು ಕುಳ್ಳಗಿನ, ದಪ್ಪಗಿನ ಮಹಿಳೆಯರು ಕೋಣೆಯಿಂದ ಆಗಾಗ ಹೊರಗೆ ಹೋಗಿ, ಒಳಗೆ ಬರುತ್ತಿದ್ದರು. ಅವರು ರೋಗಿಗಳ ಉಷ್ಣತೆ ದಾಖಲಿಸುತ್ತಾ, ಔಷಧಿಗಳನ್ನು ಕೊಡುತ್ತಾ, ಕೋಣೆಯೊಳಗೆ ನೆರೆದಿದ್ದ ಜನರಿಗೆ ಹೊರಗೆ ಹೋಗಬೇಕೆಂದು ಹೇಳುತ್ತಿದ್ದರು.
ಇದನ್ನೆಲ್ಲ ನೋಡುತ್ತಿದ್ದ ಅವನು ಗಾಬರಿಯಾದ. ಅಷ್ಟರಲ್ಲಿ, ತನ್ನ ಪಕ್ಕದಲ್ಲಿ ಮದುವೆಯಾಗಿದ್ದ ತನ್ನ ಇಬ್ಬರು ಮಗಳಂದಿರನ್ನು ಮತ್ತು ಪರಿಚಯದ ಕೆಲವರನ್ನು ಕಂಡು ಅವನಿಗೆ ಸಮಾಧಾನವಾಯಿತು. ಇದು ಮರಣಾನಂತರದ ಜೀವನವಲ್ಲ, ಬದಲಾಗಿ ಇದೊಂದು ಆಸ್ಪತ್ರೆ ಎಂದು ಅವನಿಗೆ ಅರಿವಾಯಿತು.
ಅವನು ಇನ್ನೂ ಬದುಕಿದ್ದ! ಅವನಿಗೆ ಜೋರಾಗಿ ಅಳಬೇಕು ಅನಿಸಿತು; ಆದರೆ ಅವನು ಅಳುವಂತಿರಲಿಲ್ಲ. ಯಾಕೆಂದರೆ ಅವನ ಸುತ್ತಲೂ ಹಲವಾರು ಜನರಿದ್ದರು. ಅವನು ರಾಮರಾವ್ ಪಂಚ್‌ಲೆನಿವಾರ್, ಐವತ್ತು ಹತ್ತಿರ ವಯಸ್ಸಿನ ಹತ್ತಿ ಬೆಳೆಗಾರ. ಅವನು ಪೆಸ್ಟಿಸೈಡ್ ಕುಡಿದು, ಸಾಯಲು ಪ್ರಯತ್ನಿಸಿದ್ದ.
“ನೀವ್ಯಾಕೆ ಹಾಗೆ ಮಾಡಿದಿರಿ?” ಎಂದು ಅವನ ಮಗಳು ಅಲಕ್ಯಾ ಅವನನ್ನು ಪ್ರಶ್ನಿಸಿದಳು. ದಣಿದು ಹೋಗಿದ್ದ ಅವನು ಕಂಪಿಸುವ ಸ್ವರದಲ್ಲಿ ಮರುಪ್ರಶ್ನಿಸಿದ: "ಎರಡು ಬಾಟಲಿ ಪೆಸ್ಟಿಸೈಡ್ ಕುಡಿದಿದ್ದರೂ ನಾನು ಬದುಕಿ ಉಳಿದದ್ದು ಹೇಗೆ?”
ಅವನು ಖರೀದಿಸಿದ್ದ ಪೆಸ್ಟಿಸೈಡ್‌ಗಳನ್ನು ಉತ್ಪಾದಕ ಕಂಪೆನಿ ಕಲಬೆರಕೆ ಮಾಡಿರಬೇಕು. ಆ ಕಂಪೆನಿಯ ವಿರುದ್ಧ ಮೊಕದ್ದಮೆ ಹೂಡುತ್ತೇನೆ ಎಂದು ಹಾಸ್ಯ ಚಟಾಕಿ ಹಾರಿಸಿದ ರಾಮರಾವ್! ಇದನ್ನು ಕೇಳಿದ ಅವನ ಹೊಲದ ಕೆಲಸಗಾರ ಭಾಸ್ಕರ ಸಣ್ಣದಾಗಿ ನಗುತ್ತಾನೆ. “ಓ, ಇನ್ನೇನು ಪ್ರಾಣ ಹೋಗುವುದರಲ್ಲಿತ್ತು. ಪರಿಸ್ಥಿತಿ ಕೈಮೀರಿ ಹೋಗಿತ್ತು” ಎನ್ನುತ್ತಾನೆ ಆತ.
ಈಗ ರಾಮರಾವ್ ಏಳಲಾಗದೆ ಮಲಗಿದ್ದಾನೆ. ಈ ಪರಿಸ್ಥಿತಿಯಲ್ಲಿ, ಭಾಸ್ಕರ ಮತ್ತು ಇತರ ಕೆಲವು ಕೆಲಸಗಾರರು ರಾಮರಾವ್ ಹೊಲದಲ್ಲಿ ಕೆಲಸ ಮಾಡುತ್ತಿದ್ದಾರೆ. ರಾಮರಾವ್ ಬೆಳೆಸಿದ್ದ ಹೆಸರುಕಾಳು ಮತ್ತು ಬದನೆಗಳನ್ನು ಅವರು ಕೊಯ್ದು, ಫಸಲನ್ನು ವರ್ತಕರಿಗೆ ಮಾರಿದ್ದಾರೆ; ತಮ್ಮ ಮಜೂರಿ ಮುರಿದುಕೊಂಡು ಉಳಿದ ಹಣವನ್ನು ರಾಮರಾವ್‌ಗೆ ಕೊಟ್ಟಿದ್ದಾರೆ. ಈ ಹಣದಿಂದ ರಾಮರಾವ್ ತನ್ನ ಭಾರೀ ಸಾಲದಲ್ಲಿ ಒಂಚೂರು ಮರುಪಾವತಿಸಲು ಸಾಧ್ಯವಾಗಿದೆ.
ರಾಮರಾವ್‌ಗೆ ಕ್ಲಪ್ತ ಕಾಲದಲ್ಲಿ ಅವಶ್ಯವಾದ ವೈದ್ಯಕೀಯ ಚಿಕಿತ್ಸೆ ಸಿಕ್ಕಿತು. ಆದರೆ, ಆತ್ಮಹತ್ಯೆಗೆ ಪ್ರಯತ್ನಿಸುವ ಹಲವು ರೈತರು ಅವನಷ್ಟು ಅದೃಷ್ಟವಂತರಲ್ಲ. ರಾಮರಾವ್‌ಗೆ 24 ತಾಸುಗಳಲ್ಲಿ ಪ್ರಜ್ಞೆ ಮರಳಿತು. ಆಸ್ಪತ್ರೆಯ ಐಸಿಯು ಘಟಕದಲ್ಲಿ, ಪ್ರಜ್ಞೆ ಮರಳುತ್ತಲೇ ಅವನಲ್ಲಿ ಮೊದಲು ಮೂಡಿದ ಯೋಚನೆ: ಅವನ ಬೃಹತ್ ಸಾಲದ ಹೊರೆ ಮತ್ತು ಸಾಲವಿತ್ತವರ ಬಗ್ಗೆ. ಅವನು ಮರುಪಾವತಿಸಲಾಗದಷ್ಟು ಸಾಲ ತಗೊಂಡಿದ್ದ - ಹೊಲದಲ್ಲಿ ಬೆಳೆ ಬೆಳೆಸಲಿಕ್ಕಾಗಿ ಮತ್ತು ರೋಗಿ ಪತ್ನಿಯ ಚಿಕಿತ್ಸೆಗಾಗಿ (ಕೊನೆಗೂ ಅವನಿಗೆ ಪತ್ನಿಯನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ.) ತನ್ನ ಇಬ್ಬರು ಮಗಳಂದಿರ ಮದುವೆಗಾಗಿ ತನ್ನ ಸೊತ್ತುಗಳನ್ನೆಲ್ಲ ಅವನು ಕಳೆದುಕೊಂಡಿದ್ದ. ಅವನೀಗ ಪೂರ್ತಿ ಸೋತಿದ್ದ.
“ನಿನ್ನ ಸಾಲ ಎಷ್ಟಿದೆ?” ಎಂಬ ಪ್ರಶ್ನೆಗೆ ಅವನ ಉತ್ತರ: “ಇಪ್ಪತ್ತೈದು ಲಕ್ಷ ರೂಪಾಯಿ ಇರಬೇಕು." ರೈತನೊಬ್ಬನಿಗೆ ಒಂದು ಲಕ್ಷ ರೂಪಾಯಿ ಸಾಲವೇ ಮಣ್ಣು ಮುಕ್ಕಿಸಲು ಸಾಕು ಎಂದಿರುವಾಗ, ಇದು ಬೃಹತ್ ಮೊತ್ತದ ಸಾಲ.
ರಾಮರಾವ್‌ನ ಬದುಕು ಮತ್ತು ಆರ್ಥಿಕ ಪರಿಸ್ಥಿತಿ - ಎರಡೂ ದಿಕ್ಕುಗೆಟ್ಟಿವೆ. ಅವನ ಹೊಲದ ಆದಾಯದಿಂದ ಅವನಿಗೆ ತನ್ನ ವೆಚ್ಚಗಳನ್ನು ಭರಿಸಲು ಸಾಧ್ಯವಾಗುತ್ತಿಲ್ಲ. ಅವನು ತನ್ನ ಜಮೀನನ್ನು ಮಾರುವಂತೆಯೂ ಇಲ್ಲ; ಯಾಕೆಂದರೆ ಅದನ್ನು ಅಡಮಾನ ಮಾಡಿದ್ದಾನೆ. ಅವನ ಬಳಿ ಬೇರೆ ಯಾವ ಸೊತ್ತುಗಳೂ ಇಲ್ಲ.
ಇದನ್ನೆಲ್ಲ ತಾಳ್ಮೆಯಿಂದ ಕೇಳಿಸಿಕೊಂಡ ಅವನ ತಂಗಿ ಸುಮನ್ ಪರಿಸ್ಥಿತಿ ಸುಧಾರಿಸುತ್ತದೆ ಎಂದು ಹೇಳುತ್ತಾಳೆ. ಅಷ್ಟಕ್ಕೆ ಸುಮ್ಮನಾಗದೆ, “ನೀನು ತಕ್ಷಣವೇ ಸಾಲ ತೀರಿಸಬೇಕೆಂದು ನಿನಗೆ ಯಾರೂ ಒತ್ತಾಯಿಸುತ್ತಿಲ್ಲ. ಅವರೆಲ್ಲರಿಗೂ ನೀನು ಮೋಸ ಮಾಡುವವನಲ್ಲ ಅನ್ನೋದು ಗೊತ್ತಿದೆ. ನೀನೊಬ್ಬ ಪ್ರಾಮಾಣಿಕ ಮನುಷ್ಯ. ನೀನು ಬಾಕಿ ಮಾಡಿರುವ ಸಾಲದ ಒಂದೊಂದು ಪೈಸೆಯನ್ನೂ ತೀರಿಸುತ್ತಿ” ಎಂದು ಅವಳು ತನ್ನ ಮಾತನ್ನು ಅವನಿಗೆ ವಿವರಿಸಲು ಪ್ರಯತ್ನಿಸುತ್ತಾಳೆ.
“ಸಾಲ ಬಾಕಿಯಿಟ್ಟುಕೊಂಡು ನಾನು ಸಾಯುವುದಿಲ್ಲ. ನನ್ನ ಸಾಲಗಳನ್ನು ತೀರಿಸಲು ನಾನು ಈ ನಶ್ವರ ಜಗತ್ತಿಗೆ ವಾಪಾಸು ಬರಬೇಕೆಂಬುದು ದೇವರ ಇಚ್ಛೆಯಾಗಿತ್ತು ಅನಿಸುತ್ತದೆ” ಎಂದು ಉದ್ಗರಿಸುತ್ತಾನೆ ರಾಮರಾವ್.
ಇದು, ವಿಷ ಕುಡಿದು ಸಾವಿನ ದವಡೆಯಿಂದ ಪಾರಾಗಿ ಬಂದ ರಾಮರಾವ್‌ನ ಬದುಕಿನ ಕತೆ. ನಮ್ಮ ದೇಶದಲ್ಲಿ ಪ್ರತಿದಿನ 28ಕ್ಕಿಂತ ಜಾಸ್ತಿ ರೈತರು ಮತ್ತು ಕೃಷಿ ಕೆಲಸಗಾರರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. 2014ರಲ್ಲಿ ಒಂದು ದಿನ ಮಹಾರಾಷ್ಟ್ರದ ವಿದರ್ಭದ ರೈತ ರಾಮರಾವ್ ಪಂಚ್‌ಲೆನಿವಾರನದೂ ಅಂತಹ ಒಂದು ಪ್ರಕರಣ ಆಗುವುದರಲ್ಲಿತ್ತು. ಅದೃಷ್ಟವಶಾತ್ ಹಾಗಾಗಲಿಲ್ಲ; ಅವನು ಬದುಕುಳಿದ.
ಪತ್ರಿಕಾಕರ್ತ ಜೈದೀಪ್ ಹರ್ಡಿಕರ್ ಬರೆದಿರುವ, ರಾಮರಾವ್‌ನ ಬದುಕಿನ ಏರಿಳಿತಗಳನ್ನು ದಾಖಲಿಸುತ್ತಾ, ಆ ಮೂಲಕ ಭಾರತದ ಕೃಷಿಕರ ಮತ್ತು ಕೃಷಿ ಅವಲಂಬಿತ ಕುಟುಂಬಗಳ ಪಡಿಪಾಟಲನ್ನು ತೆರೆದಿಟ್ಟಿರುವ ಇಂಗ್ಲಿಷ್ ಪುಸ್ತಕದ ಸಾರಾಂಶ ಇದು (ಪ್ರಕಟ: 2021).
ನಮ್ಮೆಲ್ಲರ ಹೊಟ್ಟೆ ತಣ್ಣಗಿಡಲಿಕ್ಕಾಗಿ ದುಡಿಯುತ್ತಿರುವ ಕೋಟಿಗಟ್ಟಲೆ ಅನ್ನದಾತರ ಬದುಕು ಸುಧಾರಿಸಲಿಕ್ಕಾಗಿ ನಾನೇನು ಮಾಡಬೇಕಾಗಿದೆ ಎಂದು ನಮ್ಮ ದೇಶದ ಪ್ರತಿಯೊಬ್ಬರೂ ಚಿಂತಿಸಬೇಕಾಗಿದೆ, ಅಲ್ಲವೇ?
ಪುಸ್ತಕದ ಶೀರ್ಷಿಕೆ: “ರಾಮರಾವ್: ದ ಸ್ಟೋರಿ ಆಫ್ ಇಂಡಿಯಾಸ್ ಫಾರ್ಮ್ ಕ್ರೈಸಿಸ್”
ಲೇಖಕರು: ಜೈದೀಪ್ ಹರ್ಡಿಕರ್, ಪತ್ರಿಕಾಕರ್ತ
ಪ್ರಕಾಶಕರು: ಹಾರ್ಪರ್ ಕೊಲಿನ್ಸ್
ಬೆಲೆ: ರೂ.399/-

