ಭಾರತದ ಬಹುಪಾಲು ಮನೆಗಳಲ್ಲಿ ಮನೆಯವರೆಲ್ಲರ ಮನಗೆದ್ದ ಪಾನೀಯ ಚಹಾ. ಸಸ್ಯದ ಎಳೆ ಎಲೆಗಳನ್ನು ನಾಜೂಕಾಗಿ ಸಂಸ್ಕರಿಸಿ ಉತ್ಪಾದಿಸುವ ಚಹಾ ಹುಡಿಯಿಂದ ತಯಾರಿಸುವ ಪಾನೀಯ ಇದು. ಈಗ ನಮ್ಮ ದೇಶ ಉತ್ಪಾದಿಸುವ ಚಹಾ ಹುಡಿಯ ಪರಿಮಾಣ ಎಷ್ಟು? ವರುಷಕ್ಕೆ 9 ಲಕ್ಷ ಟನ್! ಆದರೆ, ಈ ಸಸ್ಯದ ಮೂಲ ಭಾರತ ಅಲ್ಲ.
ಚಹಾಕ್ಕಿಂತ ಮುಂಚೆ ಭಾರತದಲ್ಲಿ ಬಳಕೆಯಲ್ಲಿದ್ದ ಚೇತೋಹಾರಿ ಪಾನೀಯ ಕಾಫಿ. ಹದಿನಾರನೆಯ ಶತಮಾನದಲ್ಲಿ ಭಾರತಕ್ಕೆ ತರಲಾದ ಕಾಫಿ, ನಾಲ್ಕು ಶತಮಾನಗಳ ಕಾಲ ಜನಪ್ರಿಯ ಪಾನೀಯವಾಗಿ ಮುಂದುವರಿಯಿತು. ಅನಂತರ, ಇಪ್ಪತ್ತನೆಯ ಶತಮಾನದ ಆರಂಭದಲ್ಲಿ ಬ್ರಿಟಿಷರು ಚೇತೋಹಾರಿ ಪಾನೀಯವಾಗಿ ಚಹಾವನ್ನು ಭಾರತದಲ್ಲಿ ಪ್ರಚುರಪಡಿಸಿದರು. (ಅದಕ್ಕಿಂತ ಮುಂಚೆ, ಅಸ್ಸಾಮಿನ ಕೆಲವು ಬುಡಕಟ್ಟಿನ ಜನರು ಚಹಾ ಸೇವಿಸುತ್ತಿದ್ದ ದಾಖಲೆಗಳಿವೆ.)
ಡಾಕ್ಟರ್ ಕ್ಯಾಂಪ್‌ಬೆಲ್ ಎಂಬ ಸರಕಾರಿ ಸರ್ಜನ್ ವರ್ಗಾವಣೆಯಾಗಿ 1841ರಲ್ಲಿ ಕಾಠ್ಮಂಡುವಿನಿಂದ ಡಾರ್ಜಿಲಿಂಗಿಗೆ ಬಂದ. ಕಳ್ಳಸಾಗಣೆ ಮೂಲಕ ಚೀನಾದಿಂದ ಚಹಾ ಬೀಜಗಳನ್ನು ತರಿಸಲು ಆತ ಗುಪ್ತ ಯೋಜನೆ ರೂಪಿಸಿ, ಅಂತೂ ಕೆಲವು ಬೀಜಗಳನ್ನು “ಕದ್ದು" ತರಿಸಿದ. ಅವನ್ನು ಡಾರ್ಜಿಲಿಂಗಿನ ಬೆಟ್ಟಗಳಲ್ಲಿ ಬೆಳೆಸಿದ. ಹೀಗೆ ಚಹಾ ಉತ್ಪಾದನೆಯಲ್ಲಿ ಚೀನಾದ ಏಕಸ್ವಾಮಿತ್ವವನ್ನು ತೊಡೆದು ಹಾಕಲಿಕ್ಕಾಗಿ ಬ್ರಿಟಿಷರು ಹೂಡಿದ ತಂತ್ರ ಕೊನೆಗೂ ಯಶಸ್ವಿಯಾಯಿತು.
ಬ್ರಿಟಿಷರು ಭಾರತದಲ್ಲಿ ತಮಿಳ್ನಾಡು, ಅಸ್ಸಾಮ್ ಮತ್ತು ಇತರೆಡೆಗಳಲ್ಲಿ ಚಹಾ ತೋಟಗಳನ್ನು ಬೆಳೆಸಿದರು. ಆದರೆ, ಆ ಪ್ರದೇಶಗಳ ಸಮುದಾಯಗಳು ಚಹಾವನ್ನು ಪಾನೀಯವಾಗಿ ಸ್ವೀಕರಿಸಲಿಲ್ಲ. ಇದು, ಬ್ರಿಟಿಷ್ ಮಹಿಳೆಯರ ಮೆಚ್ಚಿನ ಪಾನೀಯವಾಗಿತ್ತು. ಪ್ರತಿ ದಿನ ಸಂಜೆ, “ಚಹಾ ಕೂಟ”ಗಳನ್ನು ಏರ್ಪಡಿಸುವುದು ಅವರ ಖಯಾಲಿಯಾಗಿತ್ತು. ಆದರೆ, 1930ರ ಆರ್ಥಿಕ ಕುಸಿತದಿಂದಾಗಿ, ಬಹುಪಾಲು ಬ್ರಿಟಿಷ್ ಕುಟುಂಬಗಳಿಗೆ ಚಹಾಹುಡಿ ಖರೀದಿ ಮುಂದುವರಿಸಲು ಸಾಧ್ಯವಾಗಲಿಲ್ಲ. ಇದರಿಂದಾಗಿ, ಬ್ರಿಟಿಷರಿಗೆ ಶೇಖರಿಸಿಟ್ಟ ಚಹಾಹುಡಿಯ ದಾಸ್ತಾನನ್ನು ವಿಲೇವಾರಿ ಮಾಡಬೇಕಾದ ಅನಿವಾರ್ಯತೆ ಉಂಟಾಯಿತು. ಆದ್ದರಿಂದ ಬ್ರಿಟಿಷರು ಭಾರತದ ಮಾರುಕಟ್ಟೆಗೆ ಚಹಾಹುಡಿ ಬಿಡುಗಡೆ ಮಾಡಬೇಕಾಯಿತು.
ಬ್ರಿಟಿಷರು ತಯಾರಿಸುತ್ತಿದ್ದ ಚಹಾದ ಬಣ್ಣ ನಸುಗಪ್ಪು. ಅದು ಭಾರತೀಯರಿಗೆ ಇಷ್ಟವಾಗಲೇ ಇಲ್ಲ. ಆದ್ದರಿಂದ ಭಾರತೀಯರು ಚಹಾ ಪಾನೀಯಕ್ಕೆ ಹಾಲಿನ ಜೊತೆಗೆ ಶುಂಠಿ, ಏಲಕ್ಕಿ ಇತ್ಯಾದಿ ಮಸಾಲೆಗಳನ್ನು ಸೇರಿಸತೊಡಗಿದರು. ಹಾಗೆ ನಮ್ಮ ದೇಶದಲ್ಲಿ ಬಳಕೆಗೆ ಬಂತು ಮಸಾಲೆ ಚಹಾ.
ಈಗ ಹಲವು ಮನೆಗಳಲ್ಲಿ ಚಹಾ ಕುದಿಸುವಾಗ ತಮಗೆ ಬೇಕಾದ ರುಚಿ ನೀಡಲಿಕ್ಕಾಗಿ ಒಂದೆರಡು ಮಸಾಲೆ ಸೇರಿಸುತ್ತಾರೆ: ಶುಂಠಿ, ಏಲಕ್ಕಿ, ಕರಿಮೆಣಸು, ದಾಲ್ಚಿನ್ನಿ ಚಕ್ಕೆ, ಅಥವಾ ಮಜ್ಜಿಗೆಸೊಪ್ಪು. ಆದ್ದರಿಂದಲೇ, ‘ಒಂದು ಮನೆಯ ಚಹಾದ ರುಚಿ ಇನ್ನೊಂದು ಮನೆಯ ಚಹಾದ ರುಚಿಯಂತೆ ಇರೋದಿಲ್ಲ” ಎಂಬ ಮಾತು ಬಳಕೆಯಲ್ಲಿದೆ. ಇನ್ನು ಕೆಲವು ಮನೆಗಳಲ್ಲಿ ಮಾರುಕಟ್ಟೆಯಲ್ಲಿ ಲಭ್ಯವಿರುವ “ಚಹಾದ ಮಸಾಲೆ ಮಿಶ್ರಣ” ತಂದು, ಚಹಾ ತಯಾರಿಸುವಾಗ ಅದನ್ನು ಸೇರಿಸುತ್ತಾರೆ. ಕುದಿಯುವ ಚಹಾಹುಡಿಯ ನೀರಿಗೆ ನಿಂಬೆರಸ ಬೆರೆಸಿದ "ಹಸುರು ಚಹಾ” ಕೂಡ ಭಾರತದಲ್ಲಿ ಜನಪ್ರಿಯ.
ಭಾರತದ ಜನಪ್ರಿಯ ಚಹಾ ಬ್ರಾಂಡ್‌ಗಳಲ್ಲೊಂದಾದ "ಬ್ರೂಕ್ ಬಾಂಡ್ ರೆಡ್ ಲೇಬಲ್” ಜೂನ್ 2022ರಲ್ಲಿ “ರೆಡ್ ಲೇಬಲ್ ನ್ಯಾಚುರಲ್ ಕೇರ್” ಎಂಬ ಚಹಾ ಹುಡಿಯನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿತು. ಇದರಲ್ಲಿ “ರೋಗನಿರೋಧಕ ಶಕ್ತಿ" ಹೆಚ್ಚಿಸುವ ಐದು ಆಯುರ್ವೇದ ಅಂಶಗಳಿವೆ ಎಂಬುದು ಕಂಪೆನಿಯ ಘೋಷಣೆ: ಏಲಕ್ಕಿ, ಶುಂಠಿ, ಮುಲೆಥಿ, ಅಶ್ವಗಂಧ ಮತ್ತು ತುಳಸಿ. ರೆಡ್ ಲೇಬಲ್ ಚಹಾ ಹುಡಿಯ 100 ಗ್ರಾಮ್ ಪ್ಯಾಕೆಟಿನ ಬೆಲೆ ರೂ.50 ಆಗಿದ್ದರೆ, ಈ ಹೊಸ ಚಹಾ ಹುಡಿಯ 100 ಗ್ರಾಮ್ ಪ್ಯಾಕೆಟಿನ ಬೆಲೆ ರೂ.55. ಅದಲ್ಲದೆ, ಆರಂಭದಲ್ಲಿ ರೆಡ್ ಲೇಬಲ್ ಚಹಾ ಹುಡಿಯ 250 ಗ್ರಾಮ್ ಪ್ಯಾಕೆಟಿನ ಜೊತೆಗೆ 40 ಗ್ರಾಮ್ ಹೊಸ ಚಹಾ ಹುಡಿ ಕೊಡುಗೆ ನೀಡಲಾಗಿತ್ತು. ಹೇಗಿದೆ ನೋಡಿ, ಚಹಾ ಹುಡಿಯ ಮಾರಾಟ ತಂತ್ರ!
ಈಗ ಚಹಾ ತೋಟಗಳು ನೀಲಗಿರಿ ಮತ್ತು ಚಿಕ್ಕಮಗಳೂರಿನ ಬೆಟ್ಟಗಳಲ್ಲೂ ಇವೆ. ಆದರೆ ಡಾರ್ಜಿಲಿಂಗ್ ಚಹಾದ ವಿಶೇಷ ಕಂಪು ಬೇರೆ ಯಾವುದೇ ಸ್ಥಳದಲ್ಲಿ ಬೆಳೆಯುವ ಚಹಾಕ್ಕೆ ಇಲ್ಲ. ಆದ್ದರಿಂದಲೇ ಮಿತವಾದ ಪರಿಮಾಣದಲ್ಲಿ ಉತ್ಪಾದನೆಯಾಗುವ ಡಾರ್ಜಿಲಿಂಗ್ ಚಹಾ ಜಾಗತಿಕ ಮಾರುಕಟ್ಟೆಯಲ್ಲಿ ಭಾರೀ ಬೆಲೆಗೆ ಮಾರಾಟವಾಗುತ್ತದೆ - ಕಿಲೋಗ್ರಾಮಿಗೆ ರೂಪಾಯಿ ಒಂದು ಲಕ್ಷಕ್ಕಿಂತ ಜಾಸ್ತಿ ಬೆಲೆಗೆ. ಅಲ್ಲಿನ ಚಹಾದ ವಾರ್ಷಿಕ ಉತ್ಪಾದನೆ ಸುಮಾರು 10,000 ಟನ್. ಸ್ಥಳೀಯ ಬೇಡಿಕೆ ಪೂರೈಸಿ ರಫ್ತಾಗುವುದು ಕೇವಲ 6,000 ಟನ್. ಆದರೆ, ಡಾರ್ಜಿಲಿಂಗ್ ಚಹಾದ ಹೆಸರಿನಲ್ಲಿ ಜಗತ್ತಿನಲ್ಲಿ ಮಾರಾಟವಾಗುವ ಚಹಾದ ಒಟ್ಟು ಪರಿಮಾಣ 40,000 ಟನ್!
ಈ ಅವಾಂತರವನ್ನು ತಡೆಯಲಿಕ್ಕಾಗಿ, ಭಾರತದ ಚಹಾ ಮಂಡಲಿ ಡಾರ್ಜಿಲಿಂಗ್ ಚಹಾಕ್ಕೆ ಭೌಗೋಲಿಕ ಸೂಚಕ (ಜಿ.ಐ.) ಛಾಪು ಪಡೆಯಿತು. ಈ ಛಾಪು ಪಡೆದ ಭಾರತದ ಮೊತ್ತಮೊದಲ ಕೃಷಿ ಉತ್ಪನ್ನ ಡಾರ್ಜಿಲಿಂಗ್ ಚಹಾ. ಇದರಿಂದಾಗಿ, ಪಶ್ಚಿಮ ಬಂಗಾಳದ ಡಾರ್ಜಿಲಿಂಗ್ ಜಿಲ್ಲೆಯ ನಾಲ್ಕು ಸಬ್-ಡಿವಿಜನಿನ (ಸದಾರ್, ಕಾಲಿಮ್‌ಪೋಂಗ್, ಕುರ್ಸೆಯೋಂಗ್ ಮತ್ತು ಸಿಲಿಗುರಿ) ಬೆಟ್ಟಗಳಲ್ಲಿರುವ 87 ಚಹಾ ಎಸ್ಟೇಟುಗಳಲ್ಲಿ ಬೆಳೆಯುವ ಚಹಾಕ್ಕೆ ಮಾತ್ರ “ಡಾರ್ಜಿಲಿಂಗ್ ಚಹಾ” ಎಂಬ ಲೇಬಲ್ ನೀಡಿ, ಮಾರಾಟ ಮಾಡುವುದು ಕಾನೂನುಸಮ್ಮತ. ಇನ್ನಾದರೂ “ಡಾರ್ಜಿಲಿಂಗ್ ಚಹಾ” ಎಂಬ ಹೆಸರಿನ ದುರುಪಯೋಗಕ್ಕೆ ಕಡಿವಾಣ ಬೀಳುತ್ತದೆ ಎಂದು ನಿರೀಕ್ಷಿಸೋಣ.
ಹಲವು ಹಿಂದಿ ಚಲನಚಿತ್ರಗಳಲ್ಲಿ ಚಹಾ ಸೇವನೆಯ ದೃಶ್ಯಗಳಿವೆ. ಚಹಾ ಸೇವನೆಗೆ ಸಂಬಂಧಿಸಿದ ಕೆಲವು ಹಿಂದಿ ಚಲನಚಿತ್ರ ಹಾಡುಗಳು ಜನಪ್ರಿಯವಾಗಿವೆ. ಉದಾಹರಣೆಗೆ, 90ರ ದಶಕದಲ್ಲಿ ಲಕ್ಷಗಟ್ಟಲೆ ಜನರು ಗುಣುಗುಣಿಸಿದ ಬಾಲಿವುಡ್ ಹಾಡು: “ಏಕ್ ಗರಮ್ ಚಾಯ್ ಕಿ ಪಿಯಾಲಿ ಹೊ, ಕೊಯಿ ಉಸ್ಕೊ ಪಿಲಾನೆ ವಾಲಿ ಹೊ”. ಇದನ್ನು ಯೂ-ಟ್ಯೂಬಿನಲ್ಲಿ ವೀಕ್ಷಿಸಿದವರ ಸಂಖ್ಯೆ ಸುಮಾರು 60 ಲಕ್ಷ!

