ಭಾರತದ ಹಲವು ರಾಜ್ಯಗಳಲ್ಲಿ ಹೈನಪಶುಗಳ ಮೇವಿನ ದರ ಏರುತ್ತಲೇ ಇದೆ. ಇದರಿಂದಾಗಿ ದನಗಳನ್ನು ಸಾಕುತ್ತಿರುವ ಹಲವು ರೈತರ ತಮ್ಮ ದನಗಳನ್ನು ಮಾರುತ್ತಿದ್ದಾರೆ. ಉದಾಹರಣೆಗೆ, ಹರಿಯಾಣದ ಗುರುಗ್ರಾಮ ಜಿಲ್ಲೆಯ ಲೋಕ್ರಾ ಗ್ರಾಮದ ಮಂಗತ್ ರಾಮ್ ಕಳೆದ ವರುಷ 39 ದನ, ಕರು ಮತ್ತು ಹೋರಿಗಳನ್ನು ಸಾಕುತ್ತಾ, ಹಾಲು ಮಾರಾಟದಿಂದ ತಿಂಗಳಿಗೆ ರೂ.2.43 ಲಕ್ಷ ಗಳಿಸುತ್ತಿದ್ದರು. ಆದರೆ, ನವಂಬರ್ 2021ರಲ್ಲಿ ಮೇವಿನ ಬೆಲೆ ಟನ್ನಿಗೆ ರೂ.4,250 ಇದ್ದದ್ದು ಮೇ 2022ರಲ್ಲಿ ರೂ.15,000ಕ್ಕೆ ಏರಿತು. ಅಂದರೆ, ಕೇವಲ ಆರು ತಿಂಗಳಲ್ಲಿ ಮೂರು ಪಟ್ಟು ಬೆಲೆ ಹೆಚ್ಚಳ!
ಆದರೆ, ಹಾಲಿನ ಬೆಲೆ ಹೆಚ್ಚಾಗಿಲ್ಲ. ಆದ್ದರಿಂದ, ಅವರಿಗೆ ಡಿಸೆಂಬರ್ 2021ರಿಂದ ಮಾರ್ಚ್ 2022 ಅವಧಿಯಲ್ಲೇ ಸುಮಾರು ಮೂರು ಲಕ್ಷ ರೂಪಾಯಿ ನಷ್ಟ. ಹೆಚ್ಚುತ್ತಿರುವ ನಷ್ಟ ಭರಿಸಲಾಗದೆ, ಮೇ ತಿಂಗಳ ಹೊತ್ತಿಗೆ ಅವರು ಕೆಲವು ದನಗಳನ್ನು ದಾನ ಮಾಡಿದರು ಮತ್ತು ಹಲವು ದನಕರುಗಳನ್ನು ಕೇವಲ 5,000 ರೂಪಾಯಿ ಬೆಲೆಗೆ ಮಾರಾಟ ಮಾಡಿದರು (ಆ ಮುಂಚೆ ಅಲ್ಲಿ ದನಗಳ ಮಾರಾಟ ಬೆಲೆ ತಲಾ ರೂ.80,000)
ಅವರು ಮಾತ್ರವಲ್ಲ, ಅಲ್ಲಿ ಬಹುಪಾಲು ದನ ಸಾಕಣೆದಾರರು ದನಕರು ಮಾರಿದ್ದಾರೆ. ಹಾಗಾಗಿ ಒಂದು ವರುಷದ ಮುಂಚೆ 450 ದನಕರುಗಳಿದ್ದ ಹಳ್ಳಿಯಲ್ಲಿ ಈಗ ಉಳಿದಿರುವುದು ಕೇವಲ 150 ದನಕರುಗಳು.
ಹರಿಯಾಣ ಮಾತ್ರವಲ್ಲ, ರಾಜಸ್ಥಾನ, ಉತ್ತರ ಪ್ರದೇಶ, ಪಂಜಾಬ್, ಹಿಮಾಚಲ ಪ್ರದೇಶ, ಉತ್ತರಖಂಡ ಮತ್ತು ಮಧ್ಯಪ್ರದೇಶ - ಈ ಆರು ರಾಜ್ಯಗಳಲ್ಲಿಯೂ ದನಸಾಕಣೆದಾರರದ್ದು ಇದೇ ಕಥೆವ್ಯಥೆ. ಹಸುರುಮೇವು ಮತ್ತು ಒಣಮೇವು - ಎರಡರ ಬೆಲೆಯಲ್ಲಿಯೂ ತೀವ್ರವಾಗಿ ಏರಿಕೆಯಾಗಿದ್ದು ಅವರು ತತ್ತರಿಸಿದ್ದಾರೆ.
ದನಸಾಕಣೆಯ ಒಟ್ಟು ವೆಚ್ಚದ ಶೇಕಡಾ 60ರಷ್ಟು ದನಗಳ ಆಹಾರದ ವೆಚ್ಚ. ಆದ್ದರಿಂದಲೇ ಹೈನಪಶುಗಳಿಗೆ ಬದಲಿಮೇವು ಶೋಧಿಸಲಿಕ್ಕಾಗಿ ಕಳೆದ 50 ವರುಷಗಳಿಂದ ಅಖಿಲ ಭಾರತ ಸಂಯೋಜಿತ ಸಂಶೋಧನಾ ಯೋಜನೆ ಚಾಲ್ತಿಯಲ್ಲಿದೆ – ನವದೆಹಲಿಯ ಭಾರತೀಯ ಕೃಷಿ ಸಂಶೋಧನಾ ಮಂಡಲಿ (ಐಸಿಎಆರ್) ಮತ್ತು ಝಾನ್ಸಿಯ ಭಾರತೀಯ ಹುಲ್ಲುಗಾವಲು ಮತ್ತು ಮೇವು ಸಂಶೋಧನಾ ಸಂಸ್ಥೆಗಳ ಆಶ್ರಯದಲ್ಲಿ. ಆ ಯೋಜನೆಯಲ್ಲಿ ಅಭಿವೃದ್ಧಿ ಪಡಿಸಲಾದ ಸುಮಾರು 200 ಬದಲಿ ಮೇವುಗಳಲ್ಲಿ ಹೈಡ್ರೊಫೋನಿಕ್ಸ್ “ದಿಡೀರ್ ಜೋಳ”ವೂ ಒಂದಾಗಿದೆ. ಆದರೆ, ಇದರ ಉತ್ಪಾದನಾ ಘಟಕ ಶುರು ಮಾಡಲು ರೂ.20,000ದಿಂದ ರೂ.25,000 ವೆಚ್ಚ ಮಾಡಬೇಕು: ಪ್ಲಾಸ್ಟಿಕ್ ಟ್ರೇಗಳು, ಸ್ಟ್ಯಾಂಡ್ಗಳು, ಗೊಬ್ಬರ ಮತ್ತು ಬೀಜಗಳಿಗಾಗಿ. ಪ್ರತಿಯೊಂದು ದನಕ್ಕೆ ತಿನ್ನಲು ದಿನಕ್ಕೆ 15-20 ಕಿಗ್ರಾ ಜೋಳ ಅಗತ್ಯ. ಹಲವು ದನಸಾಕಣೆದಾರರು ಹೈಡ್ರೋಫೋನಿಕ್ಸ್ ವಿಧಾನದಲ್ಲಿ “ದಿಢೀರ್ ಜೋಳ" ಬೆಳೆಸಲು ಶುರು ಮಾಡಿದ್ದರೂ ಬಿತ್ತಿದ ಬೀಜಗಳು ಮೊಳಕೆ ಬಾರದೆ ಕೊನೆಗೆ ಅದನ್ನು ತೊರೆದಿದ್ದಾರೆ.
ಆ ಯೋಜನೆಯ ಬಹುಪಾಲು ಅನುಶೋಧನೆಗಳ ಉದ್ದೇಶ ಮೇವಿನ ಬೆಳೆಗಳ ಪೋಷಕಾಂಶ ಪ್ರಮಾಣ ಮತ್ತು ಉತ್ಪಾದಕತೆ ಹೆಚ್ಚಿಸುವುದು. ಉದಾಹರಣೆಗೆ ಅಜೋಲಾ. ನೀರು ನಿಂತ ಹೊಂಡಗಳಲ್ಲಿ ಮತ್ತು ಭತ್ತದ ಹೊಲಗಳಲ್ಲಿ ಬೆಳೆಯುತ್ತದೆ ಈ ಸಸ್ಯ. ಇತರ ಹಲವು ಮೇವಿನ ಬೆಳೆಗಳಿಗೆ ಹೋಲಿಸಿದಾಗ ಇದರಲ್ಲಿ ಪ್ರೊಟೀನಿನ ಪ್ರಮಾಣ ಶೇಕಡಾ 19ರಿಂದ ಶೇ.30ರಷ್ಟು ಜಾಸ್ತಿ. ಇದರ ತಾಜಾ ಅಥವಾ ಒಣಗಿಸಿದ ಎಲೆಗಳನ್ನು ಹೈನಪಶುಗಳಿಗೆ ಆಹಾರವಾಗಿ ತಿನ್ನಿಸಬಹುದು. ಆದರೆ ಇದನ್ನು ದೀರ್ಘಾವಧಿ ಸಂಗ್ರಹಿಸಿಡಲು ಸಾಧ್ಯವಿಲ್ಲ.
ಎರಡನೆಯ ಬದಲಿಮೇವು ಮೆಸ್-ಕ್ವಟ್ ಕೋಡುಗಳು. ಈ ಸಸ್ಯ ಒಣ ಮತ್ತು ಅರೆಒಣ ಪ್ರದೇಶಗಳಲ್ಲಿ ಬೆಳೆಯುತ್ತದೆ. ಶೇ.12ರಷ್ಟು ಪ್ರೊಟೀನ್ ಮತ್ತು ಶೇ.15ರಷ್ಟು ಸಕ್ಕರೆಯಂಶ ಹೊಂದಿರುವ ಇದರ ಕೋಡುಗಳನ್ನು ಧಾನ್ಯದ ಹುಡಿಗಳ ಬದಲಾಗಿ ಹೈನಪಶುಗಳಿಗೆ ತಿನಿಸಬಹುದು. ಆದರೆ ಇದನ್ನು ಬೆಳೆಯಲು ಜಾಸ್ತಿ ನೀರು ಅಗತ್ಯ.
ಅದೇನಿದ್ದರೂ, ತಮಿಳ್ನಾಡಿನ ಮಂಗಳಗಿರಿಯಿಂದ ಕೆಲವೇ ಕಿಮೀ ದೂರದಲ್ಲಿರುವ ವಿಲಾತಿಕುಲಂ ತಾಲೂಕಿನ ರೈತರು ಮೆಸ್-ಕ್ವಟ್ ಸೃಷ್ಟಿಸಿದ ವಿಷಮಚಕ್ರದಲ್ಲಿ ಸಿಲುಕಿದರು. ಈ ಸಸ್ಯವು ತನ್ನ ಬೇರುಗಳನ್ನು ಮಣ್ಣಿನಾಳಕ್ಕೆ ಇಳಿಸುವ ಮೂಲಕ ಅಂತರ್ಜಲಮಟ್ಟ ಕ್ಷಿಪ್ರವಾಗಿ ಕುಸಿಯುವಂತೆ ಮಾಡುವ ಅನಾಹುತಕಾರಿ ಸಸ್ಯ. “ದನಗಳಿಗೆ ಬಲಿತ ಮೆಸ್-ಕ್ವಟ್ ಕೋಡುಗಳೆಂದರೆ ಪಂಚಪ್ರಾಣ. ಆದರೆ ಅದರ ಗಡುಸಾದ ಬೀಜಗಳನ್ನು ದನಗಳು ಜೀರ್ಣಿಸಿಕೊಳ್ಳಲಾರವು. ಹಾಗಾಗಿ ಆ ಬೀಜಗಳು ಸೆಗಣಿಯಲ್ಲಿ ಹೊರಕ್ಕೆ ಬಂದು, ಆ ಸಸ್ಯದ ಪ್ರಸಾರಕ್ಕೆ ಕಾರಣವಾಗುತ್ತವೆ” ಎಂದು ಮಾಹಿತಿ ನೀಡುತ್ತಾರೆ ವಿ. ಶ್ರೀನಿವಾಸನ್, ಹಿರಿಯ ವಿಜ್ನಾನಿ, ಕೃಷಿ ವಿಜ್ನಾನ ಕೇಂದ್ರ, ತೂತುಕುಡಿ. ಅಲ್ಲಿನ ಸಮುದ್ರತೀರ ಪ್ರದೇಶದಲ್ಲಿ ವೇಗವಾಗಿ ಹರಡುತ್ತಿದೆ ಮೆಸ್-ಕ್ವಟ್. ಈ ವಿಷಮಚಕ್ರವನ್ನು ಕೊನೆಗಾಣಿಸಲಿಕ್ಕಾಗಿ 2007ರಲ್ಲಿ ಅಲ್ಲಿನ ವಿಜ್ನಾನಿಗಳು ಶೋಧಿಸಿದ ತಂತ್ರ: ಬಲಿತ ಮೆಸ್-ಕ್ವಟ್ ಕೋಡುಗಳನ್ನು ಹುಡಿ ಮಾಡಿ ಪಶುಗಳಿಗೆ ಆಹಾರವಾಗಿ ನೀಡುವುದು.
ಇತರ ದೇಶಗಳು ಪಶುಮೇವಿನ ಕೊರತೆ ನಿವಾರಿಸಲು ಕೆಲವು ಬದಲಿಮೇವುಗಳನ್ನು ಬಳಸುತ್ತಿವೆ. ಅವುಗಳ ಬಗ್ಗೆಯೂ ಸಂಶೋಧನೆಗಳು ನಡೆಯುತ್ತಿವೆ. ಉದಾಹರಣೆಗೆ ಮುಳ್ಳಿಳ್ಳದ ಕಳ್ಳಿ ಗಿಡ. ಪುಣೆಯ ಲಾಭರಹಿತ ಸಂಸ್ಥೆ ಬೈಫ್ ಅಭಿವೃದ್ಧಿ ಸಂಶೋಧನಾ ಪ್ರತಿಷ್ಠಾನವು 2015ರಲ್ಲಿ ಇದರ ಬಗ್ಗೆ ಸಂಶೋಧನೆ ಆರಂಭಿಸಿತು. ಈ ಕಳ್ಳಿ ತಿಂದರೆ ದನಗಳು ಕಡಿಮೆ ನೀರು ಕುಡಿಯುತ್ತವೆ ಎಂಬುದು ಗಮನಾರ್ಹ.
1970ರಲ್ಲಿ ಅಖಿಲ ಭಾರತ ಸಂಶೋಧನಾ ಯೋಜನೆಯನ್ನು ಐಸಿಎಆರ್ ಶುರು ಮಾಡಿದಾಗ ಅದರ ಉದ್ದೇಶ: ವಿಭಿನ್ನ ಕೃಷಿಪ್ರದೇಶಗಳಲ್ಲಿ ಮೇವಿನ ಬೆಳೆಗಳ ಉತ್ಪಾದನೆ ಹೆಚ್ಚಿಸುವುದು. ಆದರೆ, ಅರ್ಧ-ಶತಮಾನದ ನಂತರವೂ ಪರಿಸ್ಥಿತಿ ಸುಧಾರಿಸಿಲ್ಲ. ಝಾನ್ಸಿಯ ಸಂಶೋಧನಾ ಸಂಸ್ಥೆಯ ಅಂಕೆಸಂಖ್ಯೆಗಳ ಅನುಸಾರ ನಮ್ಮ ದೇಶದಲ್ಲಿ ಮೇವಿನ ಕೊರತೆ ಬೇಡಿಕೆಯ ಶೇ.63ರಷ್ಟು.
ನಮ್ಮಲ್ಲಿ ಬದಲಿಮೇವಿನ ಬಗ್ಗೆ ನಡೆಸಲಾದ ಅರ್ಧ-ಶತಮಾನದ ಸಂಶೋಧನೆಯಿಂದ ಗ್ರಾಮಮಟ್ಟದಲ್ಲಿ ಯಾವುದೇ ಪ್ರಯೋಜನ ಆಗಿಲ್ಲ. ಇಂತಹ ತಳಮಟ್ಟದ ಸಮಸ್ಯೆಗಳನ್ನು ಪರಿಹರಿಸ ಬೇಕಾದರೆ, ಬದಲಿಮೇವಿನ ಕೃಷಿ ಬಗ್ಗೆ ಲಕ್ಷಗಟ್ಟಲೆ ಕೃಷಿಕರಿಗೆ ತರಬೇತಿ ನೀಡಬೇಕು. ಅದಕ್ಕೆ ಅಡ್ಡಿಯಾಗಿದೆ ಅನುದಾನದ ಕೊರತೆ. ಅಂತೂ, ಅಖಿಲ ಭಾರತ ಸಂಶೋಧನಾ ಯೋಜನೆಗೆ ಐವತ್ತು ವರುಷ ದಾಟಿದ್ದರೂ ಮೇವಿನ ಕೊರತೆಯ ಸಮಸ್ಯೆ ಬಗೆಹರಿದಿಲ್ಲ.
ಫೋಟೋ: ಮುಳ್ಳಿಲ್ಲದ ಕಳ್ಳಿ ಗಿಡ

