ಮೈಸೂರು ಡೈರಿ

ಲೇಖಕರು: ಬಿ.ಜಿ.ಎಲ್. ಸ್ವಾಮಿ
ಪ್ರಕಾಶಕರು: ಕಾವ್ಯಾಲಯ, ಮೈಸೂರು 
2ನೇ ಮುದ್ರಣ: 1996         ಪುಟ: 122         ಬೆಲೆ: ರೂ. 40/-

ಸಸ್ಯಶಾಸ್ತ್ರವನ್ನು “ಹಸುರು ಹೊನ್ನು” ಮತ್ತು ಇತರ ಅತ್ಯಪೂರ್ವ ಪುಸ್ತಕಗಳಲ್ಲಿ ಅದ್ಭುತವಾಗಿ ಪರಿಚಯಿಸಿದ ಬಿ.ಜಿ.ಎಲ್. ಸ್ವಾಮಿಯವರು ಕನ್ನಡದ ಪ್ರಸಿದ್ಧ ಸಾಹಿತಿ. “ಅಮೆರಿಕದಲ್ಲಿ ನಾನು”, “ಕಾಲೇಜುರಂಗ”, “ತಮಿಳುತಲೆಗಳ ನಡುವೆ” ಇತ್ಯಾದಿ ವಿಶಿಷ್ಟ ಪುಸ್ತಕಗಳಿಂದಾಗಿಯೂ ಅವರು ಕನ್ನಡಿಗರಿಗೆ ಚಿರಪರಿಚಿತರು. 2 ನವಂಬರ್ 1980ರಂದು ಅವರು ನಮ್ಮನ್ನು ಅಗಲಿದರು. ಅವರ ನಿಧನಾ ನಂತರ ಪ್ರಕಟವಾದ ಅವರ ಪುಸ್ತಕಗಳು “ಬೆಳದಿಂಗಳಲ್ಲಿ ಅರಳಿದ ಮೊಲ್ಲೆ ಮತ್ತು ಇತರ ಪ್ರಬಂಧಗಳು”, “ಫಲಶ್ರುತಿ”, “ಸಸ್ಯಜೀವಿ - ಪ್ರಾಣಿಜೀವಿ” ಮತ್ತು “ಮೈಸೂರು ಡೈರಿ.” 

ಬಿ.ಜಿ.ಎಲ್. ಸ್ವಾಮಿಯವರು ನಿವೃತ್ತರಾದ ನಂತರ ಅವರನ್ನು ಮೈಸೂರು ವಿಶ್ವವಿದ್ಯಾಲಯ ಒಂದು ಶೈಕ್ಷಣಿಕ ವರುಷದ ಅವಧಿಯಲ್ಲಿ ಎರಡು ಕಂತುಗಳಲ್ಲಿ ಸಂದರ್ಶನ ಪ್ರಾಧ್ಯಾಪಕರನ್ನಾಗಿ ನೇಮಿಸಿತು. ಆ ಅವಧಿಯ ಹತ್ತುಹಲವು ಅನುಭವಗಳನ್ನು ಈ ಪುಸ್ತಕದ 11 ಅಧ್ಯಾಯಗಳಲ್ಲಿ ತಮ್ಮದೇ ಶೈಲಿಯಲ್ಲಿ ಪ್ರಸ್ತುತ ಪಡಿಸಿದ್ದಾರೆ ಸ್ವಾಮಿಯವರು. 

ಮೊದಲ ಅಧ್ಯಾಯ “ಮಾನಸಗಂಗೋತ್ರಿಯಲ್ಲಿ ಋತುಸಂಹಾರ”. ವರುಷದುದ್ದಕ್ಕೂ ಅಲ್ಲಿನ ಪ್ರಕೃತಿಯ ವರ್ಣ ವೈಭವ ಋತುಗಳ ಅನುಸಾರ ಹೇಗೆ ಬದಲಾಗುತ್ತದೆ ಎಂಬುದನ್ನು ಸ್ವಾರಸ್ಯಕರವಾಗಿ ವರ್ಣಿಸಿದ್ದಾರೆ. ವಿವಿಧ ಋತುಗಳಲ್ಲಿ ಪ್ರಕೃತಿಯಲ್ಲಿ ತುಂಬಿರುವ ಲವಲವಿಕೆಯನ್ನು ಪದಗಳಲ್ಲಿ ದಾಖಲಿಸಿದ್ದಾರೆ. “ಜನ ನಿಬಿಡವಾದ ನಗರದಲ್ಲಿದ್ದುಕೊಂಡೇ ಇಂಥ ವನ್ಯ ನೋಟಗಳನ್ನು ಒದಗಿಸುತ್ತದೆ, ಮಾನಸಗಂಗೋತ್ರಿ” ಎಂದು ನಮ್ಮ ಗಮನಕ್ಕೆ ತರುತ್ತಾರೆ ಸ್ವಾಮಿಯವರು. ನಮಗೆ ಅವನ್ನು ನೋಡುವ ಕಣ್ಣಿರಬೇಕು, ಅಷ್ಟೇ. “ಕ್ಯಾಂಪಸಿನಲ್ಲಂತು ಮನುಷ್ಯ ವರ್ಗವೊಂದನ್ನುಳಿದು ಜಡ ಜಗತ್ತೆಲ್ಲ ಚೈತನ್ಯಮಯವಾಗುತ್ತದೆ” ಎಂಬ ಅವರ ಮಾತಿನಲ್ಲಿ ತುಂಬಿರುವ ವ್ಯಂಗ್ಯವನ್ನೂ ನಾವು ಗಮನಿಸಲೇ ಬೇಕು. ಅಲ್ಲಿನ ಪ್ರಕೃತಿಯ ನೋಟಗಳು ನಮ್ಮಲ್ಲಿ ವಿಸ್ಮಯ ಹುಟ್ಟುಸುವುದಲ್ಲದೆ, ನಮ್ಮನ್ನು ಯೋಚಿಸುವಂತೆಯೂ ಮಾಡುತ್ತವೆ. “ಅದೇ ಆಲ ಅಶ್ವತ್ಥಗಳ “ತಲೆಯ ಮೇಗಡೆ ಬೇರು ಕೆಳಗೆ ಕೊಂಬೆಳೆಚಿಗುರ”ನ್ನು ಗಮನಿಸಿದಾಗ ನಮ್ಮ ಉಚ್ಛ ಶಿಕ್ಷಣದ ಗತಿಯು ಹೀಗೆಯೇ ತಲೆಕೆಳಗಾಗುತ್ತಿದೆಯೇನೋ ಎಂಬ ಚಿಂತೆ ಅನಿವಾರ್ಯವಾಗಿ ಎದುರಾಗುತ್ತದೆ” ಸ್ವಾಮಿಯವರಿಗೆ. 

ಈ ಪುಸ್ತಕಕ್ಕೆ ವಿಸ್ತಾರವಾದ ಮುನ್ನುಡಿ ಬರೆದಿದ್ದಾರೆ ಹಾ.ಮಾ. ನಾಯಕ ಅವರು. ಅದರಿಂದ ಆಯ್ದ ಭಾಗ: “ಬಿ.ಜಿ.ಎಲ್. ಸ್ವಾಮಿಯವರ ಕ್ಷೇತ್ರ ಸಸ್ಯಶಾಸ್ತ್ರವಾಗಿದ್ದರೂ, ವಿಜ್ಞಾನ ಬೋಧನೆ ಅವರ ವೃತ್ತಿಯಾಗಿದ್ದರೂ, ಅವರೊಬ್ಬ ಗದ್ಯ ಲೇಖಕರಾಗಿದ್ದರೂ, ಅವರಲ್ಲೊಬ್ಬ ನಿಜವಾದ ಕವಿಯಿದ್ದ ಎಂಬುದನ್ನು ಅವರನ್ನು ಓದುವ ಯಾರೇ ಆದರೂ ಕಂಡುಕೊಳ್ಳಬಹುದು. ಅವರೊಡನೆ ಮಾತನಾಡುತ್ತಿರುವಾಗಂತೂ ಇದು ಸ್ಪಷ್ಟವಾಗಿ ಅನುಭವಕ್ಕೆ ಬರುತ್ತಿತ್ತು. ಅವರ ವರ್ಣನೆಗಳು, ಅವರ ವ್ಯಕ್ತಿಚಿತ್ರಗಳು, ಅವರ ನಿರೂಪಣೆ, ಶೈಲಿ - ಇವೆಲ್ಲ ಇದನ್ನು ದೃಢಪಡಿಸುತ್ತವೆ. ಒಟ್ಟಿನಲ್ಲಿ ಅವರ ಯಾವುದೇ ಬರಹವಾದರೂ ಓದುಗರಿಗೆ ಸಾಹಿತ್ಯದ ಅನುಭವವನ್ನು ಕೊಡುತ್ತದೆ ಎಂಬುದು ಮುಖ್ಯವಾದ ಮಾತು.” ಅದಲ್ಲದೆ, “…ಒಂದು ವಿಶ್ವವಿದ್ಯಾನಿಲಯದ ಆವರಣಕ್ಕೆ ಈ ಕೃತಿ ಸಂಬಂಧಿಸಿರುವುದರಿಂದ, ಶಿಕ್ಷಣ ಕ್ಷೇತ್ರವನ್ನು ಹಾಗೂ ಶಿಕ್ಷಣ ಆಡಳಿತವನ್ನು ಕುರಿತು ಅನೇಕ ಪ್ರಸಂಗಗಳು ಇದರಲ್ಲಿ ದಾಖಲಾಗಿವೆ. ಇವನ್ನು ಓದಿ ನಗಬಹುದು. ಆದರೆ ಇವನ್ನು ಕುರಿತು ಯೋಚಿಸತೊಡಗಿದಾಗ ಮಾತ್ರ ವ್ಯಥೆಯಾಗುತ್ತದೆ” ಎಂದೂ ಹಾ.ಮಾ. ನಾಯಕರು ಬರೆದಿದ್ದಾರೆ. 

“ಗಳಿಸಿಕೊಂಡ ನಾಮಾವಳಿ” ಎಂಬ 3ನೇ ಅಧ್ಯಾಯದಲ್ಲಿ ಮಾನಸಗಂಗೋತ್ರಿ ಕ್ಯಾಂಪಸಿನಲ್ಲಿದ್ದಾಗ ತಾವು ಗಳಿಸಿದ ವಿವಿಧ “ಅಡ್ಡಹೆಸರು”ಗಳನ್ನು ಸ್ವಾರಸ್ಯಕರವಾಗಿ ದಾಖಲಿಸಿದ್ದಾರೆ ಸ್ವಾಮಿಯವರು. ಚಡ್ಡಿ ಹಾಗೂ ಅರ್ಧ ತೋಳಿನ ಷರಟನ್ನು ಧರಿಸುತ್ತಿದ್ದ ಬಿ.ಜಿ.ಎಲ್. ಸ್ವಾಮಿಯವರು ತಮ್ಮ ಉಡುಪಿನಿಂದಾಗಿ “ಚಡ್ಡಿ ಸ್ವಾಮಿ” ಎಂಬ ಹೆಸರು ಗಳಿಸಿದ್ದರು. ಅವರ ಉಡುಪಿನಿಂದಾಗಿಯೇ ವಿದ್ಯಾರ್ಥಿಗಳು ಅವರನ್ನು “ಸ್ಕೌಟ್ ಮಾಸ್ಟರ್” ಎಂದೂ, ಕೆಳದರ್ಜೆಯ ನೌಕರರು “ಎಡ್ ಮೇಸ್ತ್ರಿ” ಎಂದೂ ಕರೆಯುತ್ತಿದ್ದರು! ಅಲ್ಲಿನ ಬ್ಯಾಂಕಿನ ಮೆನೇಜರ್ ಈ ವ್ಯಕ್ತಿ ಪ್ರೊಫೆಸರ್ ಬಿ.ಜಿ.ಎಲ್. ಸ್ವಾಮಿ ಆಗಿರಲು ಸಾಧ್ಯವಿಲ್ಲ ಎಂದು ಭಾವಿಸಿ, ಅವರನ್ನು “ಬಿ.ಜಿ.ಎಲ್. ಸ್ವಾಮಿಯವರ ಪರ್ಸನಲ್ ಕ್ಲರ್ಕ್” ಎಂದೇ ಗುರುತಿಸುತ್ತಿದ್ದರು. ಕ್ಯಾಂಟೀನ್ ಮೆನೇಜರ್ ಕೂಡ ಪ್ರೊಫೆಸರ್ ಸ್ವಾಮಿ ಬೇರೊಬ್ಬರೆಂದು ಭಾವಿಸಿ, ತಮ್ಮ ಲೆಕ್ಕ ಪುಸ್ತಕದಲ್ಲಿ ಇವರನ್ನು “ಇಮ್ಮಡಿ ಬಿ.ಜಿ.ಎಲ್. ಸ್ವಾಮಿ” ಎಂದು ದಾಖಲಿಸಿದ್ದರು. ಬಸ್ ಸ್ಟಾಪಿನಲ್ಲಿ ಜೋರಾಗಿ ಅಳುತ್ತಿದ್ದ ಮಗುವಿಗೆ ಅದರ ತಾಯಿ ಇವರನ್ನು ತೋರಿಸುತ್ತ “ನೀನು ಹೀಗೆ ಅಳುತ್ತಿದ್ದರೆ ಪೋಲಿಸರಿಗೆ ಕೊಟ್ಟುಬಿಡುತ್ತೇನೆ” ಎಂದು ಹೆದರಿಸಿದಳಂತೆ! ಕರ್ನಾಟಕ ವಿಶ್ವವಿದ್ಯಾಲಯ ಸಂಘಟಿಸಿದ್ದ “ಬಸವಪೂರ್ವ ಯುಗದ ಶಿವಶರಣ”ರ ಬಗೆಗಿನ ವಿಚಾರಗೋಷ್ಠಿಯೊಂದರಲ್ಲಿ ಭಾಗವಹಿಸಿದ ಬಿ.ಜಿ.ಎಲ್. ಸ್ವಾಮಿಯವರನ್ನು ಅಲ್ಲಿನವರೊಬ್ಬರು ಕರೆದದ್ದು “ಬಿ.ಜಿ. ಲಿಂಗಸ್ವಾಮಿ” ಎಂಬುದಾಗಿ!      

ಮಾನಸಗಂಗೋತ್ರಿಯ ಹೆಸರುವಾಸಿ ಪ್ರಾಧ್ಯಾಪಕ ವರ್ಗದಲ್ಲಿರುವ ವಿಧವಿಧದ ವ್ಯಕ್ತಿಗಳನ್ನು ಅತ್ಯಂತ ಸಮರ್ಥವಾಗಿ ಹೀಗೆ ವರ್ಣಿಸಿದ್ದಾರೆ ಬಿ.ಜಿ.ಎಲ್. ಸ್ವಾಮಿಯವರು, ಈ ಪುಸ್ತಕದ ಮುಕ್ತಾಯದ ಮಾತುಗಳಲ್ಲಿ: “ಮರೆತಿದ್ದೆ, ಮುಂಬರುವ ದಸರ ಮೆರವಣಿಗೆಗಳ ನಿರ್ವಾಹಕರಿಗೆ ಒಂದು ನಮ್ಮ ಸೂಚನೆ: ಮಾನಸಗಂಗೋತ್ರಿಯ ವಯೋವೃದ್ಧ ಜ್ಞಾನವೃದ್ಧರೆನಿಸಿಕೊಂಡ ಪ್ರಾಧ್ಯಾಪಕರಿಗಾಗಿಯೇ ಮೀಸಲಾದ ಸಜೀವ ಟಾಬ್ಲೋವೊಂದನ್ನು ಮೆರವಣಿಗೆಯಲ್ಲಿ ಜೋಡಿಸಿದರೆ ನಾಡಿನ ಜನ ಅವರೆಲ್ಲರ ದರ್ಶನ ಲಾಭವನ್ನು ಒಟ್ಟಿಗೆ ಪಡೆಯುವ ಸದಾವಕಾಶ ಏರ್ಪಡುತ್ತದೆ (ದಯವಿಟ್ಟು ಇದಕ್ಕೆ ಕೊಂಕುತನವನ್ನು ಆರೋಪಿಸಬೇಡಿ). ಸಾರ್ವಜನಿಕವಾಗಿ ಅವರು ಕಾಣಿಸಿಕೊಳ್ಳುವುದು ದುರ್ಲಭ. ಡಿಪಾರ್ಟ್-ಮೆಂಟುಗಳಲ್ಲಿ ಅವರನ್ನು ಕಾಣುವುದು ಇನ್ನೂ ದುರ್ಲಭ. ತರಗತಿಗಳಲ್ಲಿ ಅವರ ಮುಖದರ್ಶನವಾಗುವುದಂತು ಮತ್ತೂ ದುರ್ಲಭ.” ಬಿ.ಜಿ.ಎಲ್. ಸ್ವಾಮಿಯವರಿಗೆ ಮಾತ್ರ ಸತ್ಯಸಂಗತಿಗಳನ್ನು ಹೀಗೆ ಬರೆಯಲು ಸಾಧ್ಯ. 

ಪುಸ್ತಕದ ಕೊನೆಯ ಲೇಖನ ನೀ. ಕೃ. ರಾಮಶೇಷನ್ ಬರೆದಿರುವ “ಬಹುಮುಖ ಪ್ರತಿಭೆಯ ಬಾಟನಿ ತಜ್ಞ ಬಿ.ಜಿ.ಎಲ್.” ಅದ್ಭುತ ಪ್ರತಿಭೆಯ ಸ್ವಾಮಿಯವರ ಬದುಕಿನ ಮೇರು ಸಾಧನೆಗಳು ಹಾಗೂ ಅವರ ಸರಳ ಸಜ್ಜನ ವ್ಯಕ್ತಿತ್ವದ ಆಪ್ತ ಚಿತ್ರಣ ನೀಡುತ್ತದೆ.