ಅಂಜಿಕಿನ್ಯಾತಕಯ್ಯಾ (ಕಾದಂಬರಿ)

ಲೇಖಕರು: ಕಾಮರೂಪಿ 
ಪ್ರಕಾಶಕರು: ಮನೋಹರ ಗ್ರಂಥಮಾಲಾ. ಧಾರವಾಡ 
ಪ್ರಕಟ: 1981         ಪುಟ: 108        ಬೆಲೆ: ರೂ. 40/-

ತಮ್ಮ ಮೊದಲ ಕಾದಂಬರಿ “ಕುದುರೆ ಮೊಟ್ಟೆ” ಮೂಲಕ ಪ್ರಸಿದ್ಧರಾದ ಕಾಮರೂಪಿ ಅವರ ಎರಡನೆಯ ಕಾದಂಬರಿ ಇದು. ಗುಡ್ಡಳ್ಳಿ ಎಂಬ ಗ್ರಾಮದ ವಾಗ್ದೇವಿ ವಿದ್ಯಾಲಯ ಶಾಲೆಗೆ ನಗರದ ಪ್ರಾಧ್ಯಾಪಕ ರಾಮಕೃಷ್ಣ ಬಂದು ಸೇರಿಕೊಂಡ ನಂತರ ನಡೆಯುವ ಘಟನೆಗಳ ಸುತ್ತ ಹೆಣೆದಿರುವ ಕಾದಂಬರಿ. 

ಇದರಲ್ಲಿರುವ ಒಂಭತ್ತು ಅಧ್ಯಾಯಗಳ ಆರಂಭದಲ್ಲಿ ಒಂದು ವಾಕ್ಯದಲ್ಲಿ ಅಧ್ಯಾಯದ ಸಾರಾಂಶವನ್ನು ನೀಡಿದ್ದಾರೆ ಲೇಖಕರು.    ಶಾಲೆಯ ಶಿಕ್ಷಕಿಯರು ಮೂವರು: ಸಡಗರಮ್ಮ, ರೂಪ (ಸ್ಕೂಲ್-ನಲ್ಲಿ) ಮತ್ತು ರಾಣಿ (ಜ್ಯೂನಿಯರ್ ಕಾಲೇಜಿನಲ್ಲಿ). ಕಾಲೇಜಿನಲ್ಲಿ ಕಲಿಸುತ್ತಿದ್ದ ಕೇರಳದ ಮ್ಯಾಥ್ಯೂಸ್ - ಈ ನಾಲ್ವರು ಕಾದಂಬರಿಯ ಮುಖ್ಯ ಪಾತ್ರಧಾರಿಗಳು. ಅಲ್ಲಿನ ಕಾಲೇಜಿನಲ್ಲಿ ಪ್ರಿನ್ಸಿಪಾಲ್, ಮ್ಯಾಥ್ಯೂಸ್ ಮತ್ತು ವಯಸ್ಸಾದ ಈಶ್ವರದಾಸ ಹಾಗೂ ಇನ್ನಿಬ್ಬರು - ಒಟ್ಟು ಐವರು ಕಲಿಸುತ್ತಿದ್ದರು. ಇಡೀ ಕಾದಂಬರಿಯನ್ನು ನಿರೂಪಕ ನಿರೂಪಿಸುತ್ತಾ ಹೋಗುತ್ತಾನೆ. 

ಕಾದಂಬರಿಯ ಮೊದಲ ಪುಟದಲ್ಲಿದೆ “ಡಿಮೆನ್ಸಿಯಾ” ಮತ್ತು ಅಪರಾಧದ ಬಗೆಗಿನ ಸಂಬಂಧದ ಬಗ್ಗೆ ಫೋರೆನ್ಸಿಕ್ ಮೆಡಿಸನಿನ ಕೆಯಿತ್ ಸಿಂಪ್ಸನ್ ಅವರ ಒಂದು ಹೇಳಿಕೆ. ಇದು ಕಾದಂಬರಿಯ ಹಂದರದ ಬಗ್ಗೆ ಮತ್ತು ಮುಕ್ತಾಯದ ಮುಖ್ಯ ಘಟನೆಯ ಕುರಿತು ಓದುಗರಿಗೆ ಹೊಳಹನ್ನು ನೀಡುತ್ತದೆ. ಹಾಗೆಯೇ, ಮುನ್ನುಡಿಗೆ ಬದಲಾಗಿ ಲಷ್ಕರ್ಸ್ ಮ್ಯಾನುಯಲ್ ಆಫ್ ಚೆಸ್ ಇದರಿಂದ ಲೇಖಕರು ನೀಡಿರುವ ಇಮ್ಯಾನುಯೆಲ್ ಲಷ್ಕರ್ ಅವರ ಒಂದು ವಾಕ್ಯದ ಹೇಳಿಕೆಯು ಕಾದಂಬರಿಯ ವಿನ್ಯಾಸವನ್ನು ತಿಳಿಯಲು ಓದುಗರಿಗೆ ಸಹಕಾರಿಯಾಗಿದೆ. 

ಮ್ಯಾಥ್ಯೂಸ್ ಜ್ಯೂನಿಯರ್ ಕಾಲೇಜಿಗೆ ಸೇರಿದಾಗಿನಿಂದ ಮನಮೋಹಕ ಸುಂದರಿ ಯುವತಿ ರೂಪಳಿಗೆ ಅವನ ಬಗ್ಗೆ ಆಕರ್ಷಣೆ. ಆದರೆ ಅವನಿಗೆ ಗಂಭೀರ ವ್ಯಕ್ತಿತ್ವದ ಅವಿವಾಹಿತೆ ರಾಣಿಯ ಬಗ್ಗೆ ಆಸಕ್ತಿ. ಇಂತಹ ಪರಿಸ್ಥಿತಿಯಲ್ಲಿ, ತನ್ನ “ಕನಸಿನ ಗ್ರಂಥ” ಬರೆಯಲಿಕ್ಕಾಗಿ ಕಾಲೇಜಿಗೆ ಬಂದು ಸೇರಿಕೊಳ್ಳುವ ರಾಮಕೃಷ್ಣ ಅಲ್ಲಿನ ಕೊಠಡಿಯೊಂದರಲ್ಲಿ ವಾಸ ಹೂಡುತ್ತಾನೆ. ರೂಪ ಮತ್ತು ರಾಣಿಯರ ಜೊತೆ ಸಖ್ಯ ಬೆಳೆಸುವ ರಾಮಕೃಷ್ಣ ತನ್ನದೇ “ಆಟ” ಶುರು ಮಾಡುತ್ತಾನೆ. ರೂಪ ಮತ್ತು ರಾಣಿ - ಇವರಿಬ್ಬರ ಮನಸ್ಸಿನಲ್ಲಿಯೂ ಗೊಂದಲಗಳನ್ನು ಸೃಷ್ಟಿಸುವುದರಲ್ಲಿ ಯಶಸ್ವಿಯಾಗುತ್ತಾನೆ. ಜೊತೆಗೆ, “ಬೆಕ್ಕಿಗೆ ಆಟ, ಇಲಿಗೆ ಪ್ರಾಣಸಂಕಟ” ಎಂಬಂತೆ, ರಾಮಕೃಷ್ಣನ ಪಟ್ಟುಗಳನ್ನು ಅರ್ಥ ಮಾಡಿಕೊಳ್ಳಲಾಗದ ಮ್ಯಾಥ್ಯೂಸ್-ನನ್ನು ತನ್ನ ಕುತಂತ್ರದ ಜಾಲದಲ್ಲಿ ಸಿಲುಕಿಸುತ್ತಾನೆ. 

ಕೊನೆಯ ಅಧ್ಯಾಯದಲ್ಲಿ, ರೂಪ, ರಾಣಿ ಮತ್ತು ಮ್ಯಾಥ್ಯೂಸ್ - ಇವರ ಭವಿಷ್ಯದ ಬದುಕಿನ ಬೆಳವಣಿಗೆಗಳನ್ನು ಸಂಕ್ಷಿಪ್ತವಾಗಿ ತಿಳಿಸುತ್ತಾನೆ ನಿರೂಪಕ. ರಾಮಕೃಷ್ಣನ ಬದುಕಿನ ದುರಂತವನ್ನೂ ನಿರೂಪಿಸುತ್ತಾನೆ. 

ಪುಟ್ಟ ಕಾದಂಬರಿಯೊಂದನ್ನು ಓದಬೇಕೆಂಬ ಆಸಕ್ತಿ ಇರುವವರ ಓದಿಗೆ ಹೇಳಿ ಮಾಡಿಸಿದಂತಿದೆ “ಅಂಜಿಕಿನ್ಯಾತಕಯ್ಯಾ”.