ರಜಾಕಾಲದ ಚಟುವಟಿಕೆ 1: ಬೀಜಗಳಿಂದ ಚಿತ್ರಾಕೃತಿಗಳ ರಚನೆ

ಶಾಲೆಕಾಲೇಜುಗಳ ಪಾಠಪರೀಕ್ಷೆಗಳು ಮುಗಿದು ಬೇಸಗೆ ರಜೆ ಆರಂಭವಾಗುತ್ತಿದ್ದಂತೆ ಹಲವರಿಗೆ "ರಜೆಯಲ್ಲಿ ಏನು ಮಾಡುವುದು?" ಎಂಬ ಚಿಂತೆ. ಪ್ರವಾಸ ಹೋಗುವುದು; ಜಾತ್ರೆಗಳಲ್ಲಿ ತಿರುಗಾಡುವುದು; ಬಂಧುಗಳ ಮನೆಗೆ ಹೋಗುವುದು; ಓದುವುದು; ಬರೆಯುವುದು; ಸಂಗೀತ, ಚಿತ್ರಕಲೆ, ನೃತ್ಯ, ಈಜು, ಸಂಗೀತ ಸಾಧನಗಳನ್ನು ನುಡಿಸುವುದು; ಈಜು - ಇವನ್ನು ಕಲಿಯುವುದು ರಜಾಕಾಲಕ್ಕೆ ಸೂಕ್ತವಾದ ಕೆಲವು ಚಟುವಟಿಕೆಗಳು. 

ಇವಲ್ಲದೆ ಸರಳವಾದ ಚೇತೋಹಾರಿಯಾದ ಹತ್ತಾರು ಇತರ ಚಟುವಟಿಕೆಗಳೂ ಇವೆ. ಅಂತಹ ಕೆಲವು ಚಟುವಟಿಕೆಗಳ ಬಗ್ಗೆ ತಿಳಿಯೋಣ. 
ಬೀಜಗಳಿಂದ ಚಿತ್ರಾಕೃತಿಗಳ ರಚನೆ
ಅಗತ್ಯವಾದ ವಸ್ತುಗಳು: ವಿವಿಧ ಬೀಜಗಳು; ಅಂಟು; ದಪ್ಪ ಕಾಗದ. ವಸಂತ ಕಾಲದಲ್ಲಿ ವಿವಿಧ ಸಸ್ಯಗಳ ಕಾಯಿ/ ಕೋಡು ಒಣಗಿದಾಗ ಅವುಗಳ ಬೀಜಗಳನ್ನು ಸಂಗ್ರಹಿಸಿ ಇಟ್ಟುಕೊಳ್ಳಬೇಕು. 
ವಿಧಾನ: ಬೀಜಗಳನ್ನು 3 - 5 ದಿನ ಬಿಸಿಲಿನಲ್ಲಿ ಚೆನ್ನಾಗಿ ಒಣಗಿಸಬೇಕು. 
ಅನಂತರ, ಕಾಗದದಲ್ಲಿ ನಮಗೆ ಇಷ್ಟವಾದ ಆಕೃತಿಗಳ ರೇಖಾಚಿತ್ರ ಬಿಡಿಸಬೇಕು. 
ಆ ರೇಖಾಚಿತ್ರಗಳನ್ನು ಸೂಕ್ತವಾದ ಅಳತೆಯ ಮತ್ತು ಬಣ್ಣಬಣ್ಣದ ಬೀಜಗಳಿಗೆ ಅಂಟು ಹಾಕಿ ಕಲಾತ್ಮಕವಾಗಿ ತುಂಬಬೇಕು. 

ನನ್ನ ಮಗಳ ಮಾರ್ಗದರ್ಶನದಲ್ಲಿ ಮೊಮ್ಮಗಳು ರಚಿಸಿದ ಎರಡು ಹೂಗಳ ಕಲಾಕೃತಿಯ ಫೋಟೋ ಇಲ್ಲಿದೆ. ಇದೇ ರೀತಿಯಲ್ಲಿ ಮೀನು, ಹುಳ, ನವಿಲು ಇತ್ಯಾದಿ ಕಲಾಕೃತಿಗಳನ್ನು ಅವರು ರಚಿಸಿದ್ದಾರೆ. ಒಣ ಬೀಜಗಳಿಂದ ಇಂತಹ ಸೃಜನಾತ್ಮಕ ಕಲಾಕೃತಿಗಳನ್ನು ಯಾರೂ ರಚಿಸಬಹುದು. ಅವನ್ನು ಹೀಗೆ ಚೌಕಟ್ಟು ಹಾಕಿಟ್ಟರೆ, ಹಲವು ವರುಷ ಅವು ಉಳಿಯುತ್ತವೆ. ಅವುಗಳನ್ನು ಸೃಷ್ಟಿಸಿದ ನೆನಪುಗಳು ಯಾವತ್ತೂ ಚೇತೋಹಾರಿ, ಅಲ್ಲವೇ? 

ಫೋಟೋ: ಬೀಜಗಳಿಂದ ರಚಿಸಿದ ಹೂಗಳು … ಕಲಾಕಾರರು: ಸಮನ ಮತ್ತು ಸುಮ