
ಪರಿಸರ ಉಳಿಸಲು ಹಾಗೆ ಮಾಡಿ, ಹೀಗೆ ಮಾಡಿ ಎಂದು ಭಾಷಣ ಬಿಗಿಯುವವರನ್ನು ಕಂಡಿದ್ದೇವೆ. ವನಮಹೋತ್ಸವದ ನೆವನದಲ್ಲಿ ಒಂದೆರಡು ಸಸಿ ನೆಟ್ಟು ಫೋಟೋ ತೆಗೆಸಿ, ಎಲ್ಲ ಪತ್ರಿಕೆಗಳಿಗೆ ವರದಿ ಕಳಿಸಿ, ಪ್ರಚಾರ ಗಿಟ್ಟಿಸಿ, ಅನಂತರ ಆ ಸಸಿಗಳಿಗೆ ಒಂದು ಲೋಟ ನೀರು ಎರೆಯದವರನ್ನೂ ನೋಡಿದ್ದೇವೆ.
ಈಗ, ಕೇರಳದ ಕಾಂಡ್ಲ ಕಾಡು ಉಳಿಸಲು ಬದುಕು ಮುಡಿಪಾಗಿಟ್ಟಿರುವ ಟಿ.ಪಿ. ಮುರುಕೇಶನ್ ಅವರ ಬಗ್ಗೆ ತಿಳಿಯೋಣ. ಕೇರಳದ ಪಶ್ಚಿಮ ಕರಾವಳಿಯ ವೈಪಿನ್ ದ್ವೀಪದಲ್ಲಿದೆ ಅವರ ಮನೆ. ತನ್ನ ಮನೆಯ ಒದ್ದೆ ಗೋಡೆಗಳಿಂದ ಕಿತ್ತು ಬರುತ್ತಿರುವ ಬಿಳಿ ಪೈಂಟನ್ನು ನೋಡುತ್ತಾ ಅವರು ಹೇಳುತ್ತಾರೆ, “ಈಗ ನೆರೆ ಬರುವುದು ಜಾಸ್ತಿಯಾಗಿದೆ; ಪ್ರತೀ ಸಲ ನೆರೆ ಬಂದಾಗ ನೆರೆ ಇಳಿಯೋದು ನಿಧಾನವಾಗ್ತಿದೆ." ಕಳೆದ ಸಲ ನೆರೆ ಬಂದಾಗ ಮೊಮ್ಮಗನ ಎದೆ ಮಟ್ಟಕ್ಕೆ ನೀರು ಏರಿದ್ದನ್ನು ನೆನಪು ಮಾಡಿಕೊಳ್ಳುತ್ತಾ ಅವರು ಹೇಳುವ ಮಾತು: “ಪ್ರತೀ ಸಲ ಇಷ್ಟೆತ್ತರಕ್ಕೆ ನೆರೆ ನೀರು ಏರುತ್ತದೆ. ನಾವು ಅದರೊಂದಿಗೆ ಬದುಕಬೇಕು.”
ಮುರುಕೇಶನ್ ಅವರ ಮನೆಯ ಅಕ್ಕಪಕ್ಕದಲ್ಲಿ ವಾಸವಾಗಿದ್ದವರು ಈಗ ದ್ವೀಪದ ಎತ್ತರದ ಸ್ಥಳಗಳಲ್ಲಿ ವಾಸ ಮಾಡುತ್ತಿದ್ದಾರೆ. ಮೀನುಗಾರಿಕೆಯೇ ವೃತ್ತಿಯಾಗಿದ್ದ ಮುರುಕೇಶನ್ ಅವರು ಈಗ ಮೀನುಗಾರಿಕೆಗೆ ಹೋಗುತ್ತಿಲ್ಲ. ಬದಲಾಗಿ ವೈಪಿನ್ ದ್ವೀಪದ ತೀರದಲ್ಲಿ ಮತ್ತು ಸುತ್ತಮುತ್ತಲಿನ ಕೇರಳದ ಕೊಚ್ಚಿ ಪ್ರದೇಶದಲ್ಲಿ ಏಕಾಂಗಿಯಾಗಿ ಕಾಂಡ್ಲಾ ಸಸಿಗಳನ್ನು ನೆಡುವ ಕಾಯಕದಲ್ಲಿ ನಿರತರಾಗಿದ್ದಾರೆ - ವರುಷದಿಂದ ವರುಷಕ್ಕೆ ಏರುತ್ತಿರುವ ಸಾಗರದ ನೀರಿನ ನೆರೆಯ ಹೊಡೆತ ಎದುರಿಸಲಿಕ್ಕಾಗಿ.
ಸಮುದ್ರದ ನೀರಿನ ಮಟ್ಟ ಸಾಮಾನ್ಯ ಮಟ್ಟಕ್ಕಿಂತ ಹೆಚ್ಚಾದಾಗ ನೆರೆ ಬರುತ್ತದೆ. ಸಮುದ್ರ ಮಟ್ಟದ ಹೆಚ್ಚಳ, ಅಲೆಗಳ ಮತ್ತು ಗಾಳಿಯ ಹೊಡೆತದ ವಿರುದ್ಧ ಕಾಂಡ್ಲಾ ಕಾಡುಗಳು ರಕ್ಷಣೆ ಒದಗಿಸುತ್ತವೆ. ಎಲ್ಲರೂ ಸೇರಿ ಅವನ್ನು ಉಳಿಸಬೇಕಾಗಿತ್ತು. ಆದರೆ, ಮುರುಕೇಶನ್ ತನ್ನ ಜೀವಮಾನದಲ್ಲಿ ಕಾಂಡ್ಲಾ ಕಾಡುಗಳ ವಿಸ್ತೀರ್ಣ ಕಡಿಮೆ ಆಗುತ್ತಿರುವುದನ್ನು ಗಮನಿಸಿದ್ದಾರೆ.
ದ್ವೀಪವನ್ನು ಸಮುದ್ರದಿಂದ ಪ್ರತ್ಯೇಕಿಸಿದ್ದ ದಟ್ಟ ಕಾಂಡ್ಲಾ ಕಾಡುಗಳ ನಡುವೆ ತಾನು ಬೆಳೆದದ್ದನ್ನು ನೆನಪು ಮಾಡಿಕೊಳ್ಳುತ್ತಾರೆ ಮುರುಕೇಶನ್. ಆದರೆ ಈಗ ಕೇರಳದ ಆರ್ಥಿಕ ರಾಜಧಾನಿಯಾದ ಕೊಚ್ಚಿಯ ಸಮುದ್ರ ತೀರದಲ್ಲಿ ಅಲ್ಲಲ್ಲಿ ಮಾತ್ರ ಕಾಂಡ್ಲಾ ಗಿಡಗಳನ್ನು ಕಾಣಬಹುದು ಎನ್ನುತ್ತಾರೆ ಅವರು. “ನಮ್ಮ ಮನೆಯನ್ನು ನೆರೆ, ಬಿರುಗಾಳಿ ಮತ್ತು ಸಮುದ್ರದ ಕೊರೆತದಿಂದ ರಕ್ಷಿಸುತ್ತಿದ್ದ ಕಾಂಡ್ಲಾ ಕಾಡುಗಳು ನಮ್ಮ ಜೀವನದ ಅವಿಭಾಜ್ಯ ಅಂಗ. ಈಗಲೂ ಅವು ಮಾತ್ರ ನಮ್ಮನ್ನು ರಕ್ಷಿಸಬಲ್ಲವು” ಎಂಬುದು ಅವರ ನಂಬಿಕೆ.
ಈ ವರೆಗೆ ಒಂದು ಲಕ್ಷಕ್ಕಿಂತ ಅಧಿಕ ಕಾಂಡ್ಲಾ ಸಸಿಗಳನ್ನು ನೆಟ್ಟಿದ್ದೇನೆ ಎನ್ನುತ್ತಾರೆ ಮುರುಕೇಶನ್ - ಬಹುಪಾಲು ಅವರೇ ತನ್ನ ಮನೆಯ ನರ್ಸರಿಯಲ್ಲಿ ಬೆಳೆಸಿದ ಸಸಿಗಳು. ದಿನ ಬಿಟ್ಟು ದಿನ ಕಾಂಡ್ಲಾ ಸಸಿಗಳನ್ನು ನೆಡುವುದು ಅವರ ಕಾಯಕ. ಚೆನ್ನೈಯ ಸರಕಾರೇತರ ಸಂಸ್ಥೆ ಎಂ.ಎಸ್. ಸ್ವಾಮಿನಾಥನ್ ಸಂಶೋಧನಾ ಪ್ರತಿಷ್ಠಾನ ಕೆಲವು ಕಾಂಡ್ಲಾ ಸಸಿಗಳನ್ನು ಅವರಿಗೆ ಒದಗಿಸುತ್ತದೆ. ಉಳಿದಂತೆ, ಎಲ್ಲ ಕೆಲಸಗಳನ್ನೂ ಅವರೊಬ್ಬರೇ ಮಾಡುತ್ತಿದ್ದಾರೆ. ಆದರೆ, ಅವರು ಎದುರಿಸುತ್ತಿರುವ ಸಮಸ್ಯೆ - ಕಾಂಡ್ಲಾ ಕಾಡುಗಳ ನಾಶ - ಬೃಹತ್ ಸಮಸ್ಯೆಯಾಗಿ ಬೆಳೆದಿದೆ.
ಭಾರತದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಮತ್ತು ಕೇರಳದ ಮೀನುಗಾರಿಕೆ ಮತ್ತು ಸಾಗರ ಅಧ್ಯಯನ ವಿಶ್ವವಿದ್ಯಾಲಯ 2022ರಲ್ಲಿ ಪ್ರಕಟಿಸಿದ ಅಧ್ಯಯನ ವರದಿಯಿಂದ ತಿಳಿದು ಬಂದಿರುವ ಸಂಗತಿ: ಕೊಚ್ಚಿ ಸಹಿತವಾದ ಎರ್ನಾಕುಲಂ ಜಿಲ್ಲೆಯಲ್ಲಿ ಶೇ. 42ರಷ್ಟು ಕಾಂಡ್ಲಾ ಕಾಡುಗಳು ನಾಶವಾಗಿವೆ. ವೈಪಿನ್ ದ್ವೀಪದ ದಕ್ಷಿಣ ಭಾಗವಾದ ಪುತುವೈಪಿನಿನಲ್ಲಿ ವ್ಯಾಪಕ ಹಾನಿಯಾಗಿದೆ.
ಕೇರಳ ಅರಣ್ಯ ಇಲಾಖೆಯ ಅನುಸಾರ 1975ರಿಂದೀಚೆಗೆ, ಕೇರಳದಲ್ಲಿ ಕಾಂಡ್ಲಾ ಕಾಡುಗಳ ವಿಸ್ತೀರ್ಣ 700 ಚದರ ಕಿಮೀ.ಗಳಿಂದ ಕೇವಲ 24 ಚದರ ಕಿಮೀ.ಗಳಿಗೆ ಕುಸಿದಿದೆ.
“ಸಮುದ್ರ ತೀರದ ರಸ್ತೆಗಳು ಮತ್ತು ಹೆದ್ದಾರಿಗಳ ನಿರ್ಮಾಣಕ್ಕಾಗಿ ಕಾಂಡ್ಲಾ ಕಾಡುಗಳಿಗೆ ವಿಪರೀತ ಹಾನಿಯಾಗಿದೆ” ಎನ್ನುತ್ತಾರೆ
ಕೇರಳ ಸಮುದ್ರತೀರ ವಲಯ ನಿರ್ವಹಣಾ ಪ್ರಾಧಿಕಾರದ ಸದಸ್ಯ-ಕಾರ್ಯದರ್ಶಿಯಾಗಿದ್ದ ಕೆ.ಕೆ. ರಾಮಚಂದ್ರನ್. ಕಾಂಡ್ಲಾ ಕಾಡುಗಳ ರಕ್ಷಣೆಗಾಗಿ ಕೆಲಸ ಮಾಡುವವರಿಗೆ ಬೆಂಬಲ ನೀಡಬೇಕು ಎಂಬುದು ಅವರ ಅಭಿಪ್ರಾಯ.
ಆದರೆ ಮುರುಕೇಶನ್ ಅವರಿಗೆ ಹೊಗಳಿಕೆ ಮತ್ತು ಕೆಲವು ಪ್ರಶಸ್ತಿಗಳು ಲಭಿಸಿವೆ ವಿನಃ ಯಾವುದೇ ಬೆಂಬಲ ಲಭಿಸಿಲ್ಲ. ಅದೇನಿದ್ದರೂ 2014ರಲ್ಲಿ ತಾನು ನೆಟ್ಟ ಕಾಂಡ್ಲಾ ಸಸಿಗಳು ಈಗ ದಟ್ಟ ಅರಣ್ಯದಂತೆ ಬೆಳೆದಿರುವುದನ್ನು ಕಾಣುತ್ತಾ ತನ್ನ ಕಾಯಕವನ್ನು ನಿಸ್ವಾರ್ಥ ಭಾವದಿಂದ ಮುಂದುವರಿಸಿದ್ದಾರೆ ಮುರುಕೇಶನ್.
ಸಾವಿರಾರು ಹೊಸ ಕಾಂಡ್ಲಾ ಸಸಿಗಳು ಬೆಳೆದಿದ್ದರೂ, ಸಮುದ್ರದ ಅಲೆಗಳ ನೆರೆ ಹೆಚ್ಚೆದ್ದು ಸಲ ಬರುತ್ತಿದೆ ಮತ್ತು ಅಬ್ಬರದಿಂದ ಬರುತ್ತಿದೆ. ಇದರಿಂದಾಗಿ ಶಾಲೆಗೆ ಹೋಗುವ ಮಕ್ಕಳಿಗೂ ಕೆಲಸಕ್ಕೆ ಹೋಗುವವರಿಗೂ ಬಹಳ ತೊಂದರೆಯಾಗಿದೆ.
"ಕಾಂಡ್ಲಾ ಬೀಜಗಳನ್ನು ಸಂಗ್ರಹಿಸಲಿಕ್ಕಾಗಿ ನಾನು ದೂರದೂರದ ಪ್ರದೇಶಗಳಿಗೆ ಹೋಗಬೇಕಾಗಿದೆ. ನನ್ನ ಹೆಂಡತಿ ನನಗೆ ನರ್ಸರಿಯಲ್ಲಿ ಸಾಧ್ಯವಾದಷ್ಟು ಸಹಾಯ ಮಾಡುತ್ತಾಳೆ. ನಾನು ದಣಿದಿದ್ದೇನೆ. ಆದರೆ ನಾನು ನನ್ನ ಕಾಯಕ ನಿಲ್ಲಿಸುವಂತಿಲ್ಲ” ಎನ್ನುತ್ತಾರೆ ಮುರುಕೇಶನ್.
"ನಾವು ಮಾಡುತ್ತಿರುವುದು ಕಷ್ಟದ ಕೆಲಸ ಹೌದು. ಇದನ್ನು ನಮ್ಮ ಮಕ್ಕಳಿಗಾಗಿ ಮಾಡುತ್ತಿದ್ದೇವೆ” ಎಂದು ದನಿಗೂಡಿಸುತ್ತಾರೆ ಅವರ ಪತ್ನಿ ಗೀತಾ.
ಸಮುದ್ರದ ನೀರಿನ ಮಟ್ಟ ಹೆಚ್ಚಾಗಿ, ಕುಡಿಯುವ ನೀರಿನ ಒದಗಣೆ ಸಮಸ್ಯೆಯಾಗಿದೆ. ಸಮುದ್ರ ಕೊರೆತ ಮತ್ತು ಸಮುದ್ರದ ಅಲೆಗಳ ಹೊಡೆತ ಜಾಸ್ತಿಯಾಗಿದೆ. ಸಮುದ್ರ ತೀರ ಪ್ರದೇಶಗಳಲ್ಲಿ ನೆರೆ ಎಂಬುದು ದೊಡ್ಡ ಸಮಸ್ಯೆಯಾಗಿದೆ. ಹಿನ್ನೀರು ಪ್ರದೇಶದಲ್ಲಿ ಹೂಳು ತುಂಬುತ್ತಿರುವ ಕಾರಣ ನೆರೆ ನೀರು ಜನರು ವಾಸಿಸುವ ಪ್ರದೇಶಗಳಿಗೆ ನುಗ್ಗುತ್ತಿದೆ - ಎಂಬುದು ತಜ್ನರು ನೀಡುವ ಮಾಹಿತಿ.
ಕೇರಳದಲ್ಲಿ ಹಿನ್ನೀರು ಎಂಬುದು ಕಾಲುವೆ, ಜಲಾವೃತ ಜಮೀನು ಮತ್ತು ಜಲಾಶಯಗಳ ವಿಸ್ತಾರವಾದ ಜಾಲ. ಇದು ಸಮುದ್ರ ತೀರಕ್ಕೆ ಸಮಾಂತರವಾಗಿದೆ. ಈ ವಿಶೇಷ ಇಕೋ ವ್ಯವಸ್ಥೆಯು ಏರುತ್ತಿರುವ ಸಮುದ್ರ ಮಟ್ಟದ ವಿರುದ್ಧ ಕಾಪುತಡೆ (ಬಫರ್) ಒದಗಿಸುತ್ತಿದೆ ಎಂಬುದನ್ನು ನಾವು ಗಮನಿಸಬೇಕು.
ಜಾಗತಿಕ ಮೆಟಿರೊಲೋಜಿಕಲ್ ಸಂಸ್ಥೆಯ ಅನುಸಾರ, 2013 -2022 ಅವಧಿಯಲ್ಲಿ ಜಾಗತಿಕ ಸರಾಸರಿ ಸಮುದ್ರ ಮಟ್ಟವು ವರುಷಕ್ಕೆ 4.5 ಮಿಲಿಮೀಟರ್ ಏರಿತು. ಇದು ಭಾರತ, ಚೀನಾ, ನೆದರ್-ಲ್ಯಾಂಡ್ಸ್ ಮತ್ತು ಬಾಂಗ್ಲಾದೇಶದಂತಹ (ದೊಡ್ಡ ಸಂಖ್ಯೆಯ ಜನರು ಸಮುದ್ರ ತೀರದಲ್ಲಿ ವಾಸ ಮಾಡುತ್ತಿರುವ) ದೇಶಗಳಿಗೆ ದೊಡ್ಡ ಅಪಾಯ.
ಕೊಚ್ಚಿಯಲ್ಲಿ ಸಮುದ್ರ ಮಟ್ಟದ ಏರಿಕೆಯ ಅಪಾಯದ ಮುನ್ಸೂಚನೆ ಏನು? “ನಾಸಾ" ಸಂಸ್ಥೆಯ ಅನುಸಾರ, ಕೊಚ್ಚಿಯ ಸಮುದ್ರ ಮಟ್ಟದ ಏರಿಕೆ 2050ರಲ್ಲಿ 0.22 ಮೀಟರ್ ಮತ್ತು 2100ರಲ್ಲಿ ಅರ್ಧ ಮೀಟರ್!
ಸಮುದ್ರ ಮಟ್ಟ ಏರುತ್ತಿದೆ ಎಂಬುದು ಮುರುಕೇಶನರಿಗೂ ಅಲ್ಲಿನ ಜನರಿಗೂ ಚೆನ್ನಾಗಿ ಗೊತ್ತಿದೆ. ಆದ್ದರಿಂದಲೇ ಹಲವರು ದ್ವೀಪ ತೊರೆದು ಹೋಗಿದ್ದಾರೆ. ಕೆಲವರು ಸರಕಾರದ ಆರ್ಥಿಕ ನೆರವಿನಿಂದ ಸ್ಥಳಾಂತರ ಆಗಿದ್ದಾರೆ. ಉಳಿದವರು ಮಳೆಗಾಲದಲ್ಲಿ ಸರಕಾರ ಒದಗಿಸುವ ವಸತಿಗಳಲ್ಲಿ ವಾಸ ಮಾಡಿ, ಮಳೆಗಾಲ ಕಳೆದಾಗ ತಮ್ಮ ಮನೆಗಳಿಗೆ ಮರಳುತ್ತಾರೆ.
"ನಾವು ಸಮುದ್ರ ಮತ್ತು ಹಿನ್ನೀರು ನಡುವೆ ಸಿಕ್ಕಿ ಬಿದ್ದಿದ್ದೇವೆ, ಕೆಲವೇ ವರುಷಗಳಲ್ಲಿ ಅವು ನಮ್ಮ ದ್ವೀಪವನ್ನು ನುಂಗಿ ಬಿಡುತ್ತವೆ. ಆದರೆ ನಾನು ಈ ಜಾಗ ಬಿಟ್ಟು ಎಲ್ಲಿಗೂ ಹೋಗುವುದಿಲ್ಲ. ಯಾಕೆಂದರೆ ನಾನು ಹುಟ್ಟಿದ್ದೂ ಇಲ್ಲೇ, ಸಾಯುವುದೂ ಇಲ್ಲೇ” ಎನ್ನುತ್ತಾರೆ ಮುರುಕೇಶನ್ ನಿರ್ಧಾರದ ಧ್ವನಿಯಲ್ಲಿ.
ಫೋಟೋ: ಕಾಂಡ್ಲಾ ಸಸಿಗಳನ್ನು ನೆಡಲಿಕ್ಕಾಗಿ ದೋಣಿಯಲ್ಲಿ ಒಯ್ಯುತ್ತಿರುವ ಟಿ.ಪಿ. ಮುರುಕೇಶನ್
