ತಲೆ ಬೋಳಾದರೆ ತಲೆಬಿಸಿ ಬೇಡ

ಬೋಳು ತಲೆಯ ವ್ಯಕ್ತಿಗಳು ತಮ್ಮ ನುಣುಪಾದ ತಲೆಯನ್ನು ಕೈಯಿಂದ ಸವರಿಕೊಳ್ಳುವಾಗ, ಅದೆಷ್ಟು ಹಿತವಾದ ಅನುಭವ ಎಂದು ನಮಗನಿಸಬಹುದು. ಆದರೆ ಅವರ ಸಮಸ್ಯೆ ಅವರಿಗೇ ಗೊತ್ತು.

ಆ ಸಮಸ್ಯೆ ಇಂದು ನಿನ್ನೆಯದಲ್ಲ. ಪ್ರಾಚೀನ ಕಾಲದಲ್ಲಿ ತಲೆ ಬೋಳಾಗದೆ ಇರಲಿಕ್ಕಾಗಿ ವಿಧವಿಧದ ತೈಲಗಳನ್ನು ಅಥವಾ ಪ್ರಾಣಿಗಳ ಕೊಬ್ಬನ್ನು ಗಂಡಸರು ತಲೆಗೆ ಉಜ್ಜಿಕೊಳ್ಳುತ್ತಿದ್ದರು. ಈಗಂತೂ ನೂರಾರು ಪ್ರಸಾಧನಗಳು ಲಭ್ಯವಿವೆ. ಕ್ರೀಂಗಳು, ಹಾರ್ಮೋನುಗಳು, ವಿಟಮಿನ್‌ಗಳು ಇತ್ಯಾದಿ. ಬೋಳುತಲೆಯ ಸಮಸ್ಯೆಗೆ ಪರಿಹಾರವಾಗಿ ವಿಗ್ ಮತ್ತು ತಲೆಗೂದಲು ನಾಟಿ ಶಸ್ತ್ರಕ್ರಿಯಾ ವಿಧಾನಗಳೂ ಬಳಕೆಯಲ್ಲಿವೆ. 

ಕಾರಣವೇನು? 
ತಲೆಗೂದಲಿನಲ್ಲಿರುವುದು ಕೆರಾಟಿನ್ ಎಂಬ ಪ್ರೊಟೀನ್. ನಮ್ಮ ಉಗುರು ಮತ್ತು ಚರ್ಮದ ಹೊರಪದರದಲ್ಲಿ ಇರುವುದೂ ಇದೇ ಪ್ರೊಟೀನ್. ಚರ್ಮದ ಕೋಶಗಳಂತೆ ತಲೆಗೂದಲು ಕೂಡ ಬೆಳೆಯುತ್ತದೆ ಮತ್ತು ಕ್ರಮೇಣ ಉದುರಿ ಹೋಗುತ್ತದೆ. ಪ್ರತಿದಿನ 50ರಿಂದ 100 ತಲೆಗೂದಲು ಉದುರುವುದು ಸಾಮಾನ್ಯ ಸಂಗತಿ. 
15ರಿಂದ 30 ವರುಷಗಳ ವಯಸ್ಸಿನ ವರೆಗೆ: ತಲೆಗೂದಲು ಸೊಂಪಾಗಿ ಬೆಳೆಯುತ್ತದೆ.
40ರಿಂದ 50 ವರುಷಗಳ ವಯಸ್ಸಿನ ವರೆಗೆ: ತಲೆಗೂದಲಿನ ಬೆಳವಣಿಗೆ ನಿಧಾನವಾಗುತ್ತದೆ.
ಅನಂತರ ಗಂಡಸರು ಮತ್ತು ಹೆಂಗಸರಲ್ಲಿ ಸುಮಾರು 50 ವರುಷಗಳ ವಯಸ್ಸಿನಲ್ಲಿ ತಲೆಗೂದಲು ಉದುರಲು ಶುರುವಾಗಿ, 70ನೆಯ ವಯಸ್ಸಿನಲ್ಲಿ ಉದುರುವಿಕೆ ಹೆಚ್ಚಾಗುತ್ತದೆ. ಈ ರೀತಿ ತಲೆಗೂದಲು ಉದುರುವುದು ನಮ್ಮನಮ್ಮ ಜೀನ್‌ಗಳು ಮತ್ತು ಹಾರ್ಮೋನುಗಳಿಂದ ನಿರ್ಧರಿತವಾಗುತ್ತದೆ.

ಇದು ವಂಶಪಾರಂಪರ್ಯ
ಭಾಗಶಃ ಅಥವಾ ಎಲ್ಲ ತಲೆಗೂದಲು ಉದುರಿದಾಗ “ತಲೆ  ಬೋಳಾಯಿತು” ಅನ್ನುತ್ತೇವೆ. ಹೆತ್ತವರ ತಲೆಬೋಳಾಗಿದ್ದರೆ ಅವರ ಶೇಕಡಾ 50 ಮಕ್ಕಳೂ ಈ ಗುಣವನ್ನು ವಂಶಪಾರಂಪರ್ಯವಾಗಿ ಪಡೆಯುತ್ತಾರೆ.

ಗಂಡಸರ ತಲೆ ಬೋಳಾಗುವಿಕೆ ಮುಂತಲೆಯಿಂದ ಶುರುವಾಗುತ್ತದೆ. ಹಣೆಯ ಮೇಲ್ಭಾಗದ ಕೂದಲುಗಳು ಹೆಚ್ಚೆಚ್ಚು ಉದುರುತ್ತ, ಕೊನೆಗೆ ನೆತ್ತಿ ಬೋಳಾಗುತ್ತದೆ (ಚಿತ್ರ ನೋಡಿ). ಹೆಂಗಸರಿಗೆ ವಯಸ್ಸಾದಾಗ ತಲೆಯ ಎಲ್ಲ ಭಾಗಗಳಿಂದಲೂ ತಲೆಗೂದಲು ಉದುರುತ್ತದೆ. 

ಇದಕ್ಕೆ ಜೀನ್‌ಗಳ ಮೂಲಕ ಹೆತ್ತವರಿಂದ ಮಕ್ಕಳಿಗೆ ದಾಟಿ ಬರುವ ಗುಣ ಪ್ರಮುಖ ಕಾರಣವಾದರೂ, ನಮ್ಮ ಆಹಾರ ಇದರಲ್ಲಿ ಪ್ರಧಾನ ಪಾತ್ರ ವಹಿಸುತ್ತದೆ. ಈ ಸತ್ಯಾಂಶಕ್ಕೆ ಜಪಾನೀಯರು ಉತ್ತಮ ನಿದರ್ಶನ. ಸಂಶೋಧಕರು ನಡೆಸಿದ ಅಧ್ಯಯನದ ಅನುಸಾರ ಎರಡನೆಯ ಜಾಗತಿಕ ಯುದ್ಧದ ವರೆಗೆ ಜಪಾನೀಯರು ದಟ್ಟವಾದ ಮತ್ತು ಆರೋಗ್ಯಯುತ ತಲೆಗೂದಲು ಹೊಂದಿದ್ದರು. ಅನಂತರ ಅವರು ಪ್ರಾಣಿಗಳ ಕೊಬ್ಬು ಸೇವಿಸಲು ಆರಂಭಿಸಿದರು. ಈ ಆಹಾರ ಬದಲಾವಣೆಯಿಂದಾಗಿ ಅವರ ಎತ್ತರ ಗಣನೀಯವಾಗಿ ಅಧಿಕವಾದರೂ, ಜಪಾನಿನ ಹೆಚ್ಚೆಚ್ಚು ಗಂಡಸರ ತಲೆಗೂದಲು ಉದುರತೊಡಗಿತು. 

ಇತರ ಕಾರಣಗಳು
ತಲೆಗೂದಲು ಉದುರಲು ಇತರ ಕಾರಣಗಳೂ ಇವೆ. ಜ್ವರ, ಒಮ್ಮೆಲೇ ಕಠಿಣ ಪಥ್ಯ ಸೇವನೆ, ಶರೀರದಲ್ಲಿ ಕಬ್ಬಿಣಾಂಶದ ಕೊರತೆ, ಎಕ್ಸ್‌ರೇಗೆ ತಲೆಯೊಡ್ಡುವುದು, ಹಾರ್ಮೋನುಗಳ ಅಸಮತೋಲನದ ಪರಿಣಾಮವಾಗಿ ಅಥವಾ ಹೆರಿಗೆಯ ಬಳಿಕ ತಲೆಗೂದಲು ಉದುರಬಹುದು. 

ಶಿಲೀಂಧ್ರದ ಸೋಂಕು, ಸಿಫಿಲಿಸ್ ಅಥವಾ ಇತರ ರೋಗಗಳಿಂದಾಗಿ ತಲೆಯಲ್ಲಿ ಕೆಲವೆಡೆ ತಲೆಗೂದಲು ಉದುರಿ ಬೋಳಾಗಬಹುದು. ಇಂತಹ ಸಂದರ್ಭಗಳಲ್ಲಿ, ತಲೆಗೂದಲಿನ ಬೇರುಕೋಶಗಳಿಗೆ ಹಾನಿಯಾಗಿರದಿದ್ದರೆ ತಲೆಗೂದಲು ಪುನಃ ಮೂಡಿ ಬರುತ್ತದೆ. 

ಕೆಲವು ಸಂಶೋಧಕರ ಅನುಸಾರ, ತಲೆಬುರುಡೆಗೆ ಸಾಕಷ್ಟು ರಕ್ತಚಲನೆ ಆಗದಿರುವುದೇ ತಲೆಗೂದಲು ಉದುರಲು ಕಾರಣ. 

ತಲೆಗೂದಲಿನ ಜೋಪಾನ
ನಿಮ್ಮ ತಲೆಗೂದಲನ್ನು ನೀವೇ ಜೋಪಾನ ಮಾಡಬೇಕು. ಅದಕ್ಕಾಗಿ ಇವು ನೆನಪಿರಲಿ:
ಸಮತೋಲನ ಆಹಾರ ತಿಂದು, ಚೆನ್ನಾಗಿ ನಿದ್ದೆ ಮಾಡಿ, ಉತ್ತಮ ಆರೋಗ್ಯ ಕಾಪಾಡಿಕೊಳ್ಳಿ.
ದಿನವೂ ಸ್ನಾನ ಮಾಡಿ ತಲೆಯನ್ನು ಶುಚಿಯಾಗಿಟ್ಟುಕೊಳ್ಳಿ.
ಅಜ್ಜಿಮದ್ದಿನ ತೈಲಗಳನ್ನು ವಾರಕ್ಕೊಮ್ಮೆಯಾದರೂ ತಲೆಗೆ ಉಜ್ಜಿಕೊಂಡು, ಒಂದು ತಾಸು ಬಿಟ್ಟು ಸ್ನಾನ ಮಾಡುವುದರಿಂದ ತಲೆಯ ಚರ್ಮ ಹಾಗೂ ತಲೆಗೂದಲು ಆರೋಗ್ಯವಾಗಿರಲು ಸಹಾಯ.
ಯಾವತ್ತೂ ರಭಸದಿಂದ ತಲೆ ಬಾಚಬೇಡಿ. ತಲೆಗೂದಲು ಒದ್ದೆಯಾಗಿರುವಾಗ ತಲೆಬಾಚಬೇಡಿ.
ಉರಿಬಿಸಿಲಿನಿಂದಾಗಿಯೂ ತಲೆಗೂದಲು ಉದುರಬಹುದು. ಬಿಸಿಲಿನಲ್ಲಿ ಹೋಗುವಾಗ ಟೊಪ್ಪಿ ಅಥವಾ ಕೊಡೆ ಬಳಸಿ.
ನಿಮ್ಮ ತಲೆಗೂದಲಿನ ಬಗ್ಗೆ ಕರುಣೆ ಇರಲಿ. ಬಣ್ಣ ಹಾಕುವುದು, ಬಿಗಿಯಾಗಿ ಜಡೆ ಕಟ್ಟುವುದು - ಇಂತಹ ಕಠಿಣ “ಶಿಕ್ಷೆ"ಗಳಿಂದ ನಾಜೂಕಿನ ತಲೆಗೂದಲಿಗೆ ಹಾನಿ ಮಾಡಬೇಡಿ. 

ಔಷಧಿಗಳು ಮತ್ತು ಶಸ್ತ್ರಚಿಕಿತ್ಸೆಗಳು
ಶಾಶ್ವತವಾಗಿ ಉದುರಿ ಹೋದ ತಲೆಗೂದಲು ಮರು ಬೆಳೆಸಲಿಕ್ಕಾಗಿ ಗಂಡು-ಹೆಣ್ಣೆಂಬ ಭೇದವಿಲ್ಲದೆ ನಾವು ಏನು ಮಾಡಲಿಕ್ಕೂ ತಯಾರು, ಅಲ್ಲವೇ? ಇಂತಹ ಆಸೆಯಿರುವವರೆಲ್ಲ ಎರಡು ಸತ್ಯಾಂಶಗಳನ್ನು ತಿಳಿದಿರಬೇಕು:

1)ಆರೋಗ್ಯವಂತ ತಲೆಗೂದಲಿಗೆ ಪೌಷ್ಠಿಕ ಆಹಾರ ಅಗತ್ಯ; ಆದರೆ ನಿರ್ದಿಷ್ಟ ಆಹಾರ ಅಥವಾ ವಿಟಮಿನ್‌ಗಳಿಂದಾಗಿ ತಲೆಗೂದಲು ಮರುಬೆಳೆಯುವುದಿಲ್ಲ.
2) ವಂಶಪಾರಂಪರ್ಯ ಗುಣದಿಂದಾಗಿ ತಲೆ ಬೋಳಾಗಲು ಶುರುವಾದರೆ, ಯಾವುದೇ ಔಷಧಿ ಅಥವಾ ಪ್ರಸಾಧನಕ್ಕೆ ಅದನ್ನು ತಡೆದು, ಪುನಃ ತಲೆಗೂದಲು ಬೆಳೆಯುವಂತೆ ಮಾಡಲು ಸಾಧ್ಯವಿಲ್ಲ.

ಆದ್ದರಿಂದ ಯಾವುದೇ ಉತ್ಪನ್ನದ ಬಗ್ಗೆ “ಇದು ತಲೆಗೂದಲನ್ನು ಸೊಂಪಾಗಿ ಬೆಳೆಸುತ್ತದೆ” ಅಥವಾ “ಇದು ತಲೆ ಬೋಳಾಗುವುದನ್ನು ತಡೆಯುತ್ತದೆ” ಎಂಬ ಪ್ರಚಾರ ಘೋಷಣೆಗಳನ್ನು ನಂಬಬೇಡಿ. ತಲೆಬೋಳಾಗುವುದನ್ನು ತಡೆಗಟ್ಟ ಬಲ್ಲ ಅಥವಾ ಬೋಳು ತಲೆಯಲ್ಲಿ ಕೂದಲು ಮೂಡಿಸಬಲ್ಲ ಯಾವುದೇ ಔಷಧಿ ಇಲ್ಲ.

ಆದರೆ, “ಬೋಳುತಲೆ ನಿರೋಧಿ ಔಷಧಿಗಳು” ಎಂಬ ಹೆಸರಿನಲ್ಲಿ ಕೆಲವು ಔಷಧಿಗಳನ್ನು ಮಾರಾಟ ಮಾಡಲಾಗುತ್ತಿದೆ. ಇವು ದುಬಾರಿ ಹಾಗೂ ಅಡ್ಡ ಪರಿಣಾಮಗಳನ್ನು ಉಂಟು ಮಾಡುತ್ತವೆ. ಬಹಳ ಪ್ರಚಾರ ಪಡೆದ ಇಂತಹ ಒಂದು ವೈದ್ಯಕೀಯ ಔಷಧಿ “ಮಿನೊಕ್ಸಿಡಿಲ್". ಅತಿ ರಕ್ತದೊತ್ತಡಕ್ಕೆ ಚಿಕಿತ್ಸೆ ನೀಡಲು ಇದನ್ನು ತಯಾರಿಸಲಾಯಿತು. ಆದರೆ ಇದರ ಅನಿರೀಕ್ಷಿತ ಅಡ್ಡ ಪರಿಣಾಮ: ರೋಮಗಳ ಬೆಳವಣಿಗೆಗೆ ಪ್ರಚೋದನೆ (ಕೆಲವೊಮ್ಮೆ ಅನಪೇಕ್ಷಿತ ದೇಹ-ಭಾಗಗಳಲ್ಲಿ). ಇದರ ಇತರ ಅಡ್ದ ಪರಿಣಾಮಗಳು: ತುರಿಸುವಿಕೆ, ಚುಚ್ಚುವಿಕೆ, ತಲೆನೋವು, ಮಂಪರು ಮತ್ತು ಕೆಲವರಲ್ಲಿ ಹೃದಯ ಬಡಿತದ ಏರುಪೇರು ಇತ್ಯಾದಿ. 

“ಫಿನಾಸ್ಟಿರೈಡ್" ಎಂಬ ಔಷಧಿಯೂ ಬಳಕೆಯಲ್ಲಿದೆ. ಇದರಿಂದ ವಿಪರೀತ ಅಡ್ಡ ಪರಿಣಾಮಗಳು ಉಂಟಾಗುತ್ತವೆ: ನಪುಂಸಕತ್ವ, ಕಡಿಮೆ ವೀರ್ಯ ಉತ್ಪಾದನೆ ಇತ್ಯಾದಿ. ಇದರ ಪರಿಣಾಮ, ಡೋಸ್, ದೀರ್ಘ ಕಾಲದ ಸುರಕ್ಷಿತತೆ - ಇವನ್ನು ಪರೀಕ್ಷಿಸಲು ಕೆಲವು ಅಧ್ಯಯನಗಳು ನಡೆದಿವೆ. 

ತಲೆಗೂದಲು ಉದುರುವುದನ್ನು ತಡೆಯಲು ಕೆಲವು ಶಸ್ತ್ರಚಿಕಿತ್ಸಾ ವಿಧಾನಗಳನ್ನು ಬಳಸಲಾಗುತ್ತಿದೆ. ತಲೆಗೂದಲಿನ ನಾಟಿ, ಬೋಳು ತಲೆಯ ತುಂಡು ಚರ್ಮ ಕತ್ತರಿಸಿ ತೆಗೆಯುವುದು, ಕೂದಲಿರುವ ಚರ್ಮದ ತುಂಡಿನ ಕಸಿ ಮಾಡುವುದು ಹಾಗೂ ಅಂಗಾಂಶ ವಿಸ್ತರಣೆ ವಿಧಾನಗಳು.

ಇವೆಲ್ಲವೂ ದುಬಾರಿ ವಿಧಾನಗಳು. ಪತ್ರಿಕೆ, ಟಿವಿ ಚಾನೆಲುಗಳು ಮತ್ತು ಮಹಾನಗರಗಳ ಜಾಹೀರಾತು ಫಲಕಗಳಲ್ಲಿ ಈ ವಿಧಾನಗಳ ಜಾಹೀರಾತುಗಳು ಇದ್ದೇ ಇರುತ್ತವೆ. ಅದಲ್ಲದೆ, ಇವನ್ನು ಬಳಸುವವರು ಶಸ್ತ್ರಚಿಕಿತ್ಸೆಯ ನೋವು ಮತ್ತು ಅಪಾಯ ಎದುರಿಸಲು ತಯಾರಿರಬೇಕು. ಮಾತ್ರವಲ್ಲ, ಶಸ್ತ್ರಚಿಕಿತ್ಸೆ ಯಶಸ್ವಿ ಆಗದಿರಲೂ ಬಹುದು. ಆದ್ದರಿಂದ, ಜಾಹೀರಾತುಗಳಿಗೆ ಮರುಳಾಗದೆ, ಅನುಭವಿ ಸರ್ಜನರಿಂದ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳುವುದು ತೀರಾ ಅಗತ್ಯ. 

ವಿಗ್ ಪ್ರಿಯರಿಗಾಗಿ
ಪ್ರಾಚೀನ ಕಾಲಯ ದೇಶದ ರಾಜ ಮೌಸೊಲಸನು ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿದ್ದ. ಕೊನೆಗೆ ಅವನಿಗೊಂದು ಉಪಾಯ ಹೊಳೆಯಿತು. ಗಂಡಸರು ತಮ್ಮ ತಲೆಗೂದಲನ್ನು ಬಹಳ ಇಷ್ಟ ಪಡುತ್ತಾರೆ ಎಂದವನು ತಿಳಿದಿದ್ದ. ಅದಕ್ಕಾಗಿ ಅವನು ಗಂಡಸರೆಲ್ಲರ ತಲೆ ಬೋಳಿಸಬೇಕೆಂದು ರಾಜಾಜ್ಞೆ ಹೊರಡಿಸಿದ. ಅನಂತರ ಅವರವರ ತಲೆಗೂದಲಿನಿಂದ ಮಾಡಿದ ವಿಗ್‌ಗಳನ್ನು ಅವರವರಿಗೇ ಶುಲ್ಕ ಪಡೆದು ಮಾರುವ ವ್ಯವಸ್ಥೆ ಮಾಡಿದ. ಈ ರೀತಿ ರಾಜಭಂಡಾರ ತುಂಬಿಸಿಕೊಂಡ.

ಈಗ ಹಾಗಿಲ್ಲ. ತಲೆಗೂದಲು ಕಳೆದುಕೊಂಡ ಹಲವರು ಅನಿವಾರ್ಯವಾಗಿ ವಿಗ್ ಧರಿಸುತ್ತಾರೆ. ವಿಗ್ ಅನ್ನು ತಯಾರಿಸುವ ವಿಧಾನ ಮತ್ತು ಅದಕ್ಕೆ ಬಳಸಿದ ಫೈಬರುಗಳನ್ನು ಆಧರಿಸಿ ಅದರ ಬೆಲೆ ನಿಗದಿಪಡಿಸಲಾಗುತ್ತದೆ.

ತಿರುಪತಿ ಶ್ರೀ ವೆಂಕಟೇಶ್ವರ ದೇವಸ್ಥಾನದಲ್ಲಿ ದಿನದ 24 ಗಂಟೆಗಳೂ ಕೇಶಮುಂಡನ ನಡೆಯುತ್ತದೆ. ಅಲ್ಲಿ ಸಂಗ್ರಹವಾದ ಟನ್‌ಗಟ್ಟಲೆ ಕೂದಲಿನ ಮಾರಾಟದಿಂದ ತಿರುಪತಿ-ತಿರುಮಲ ದೇವಸ್ಥಾನ ಮಂಡಲಿಗೆ ಕೋಟಿಗಟ್ಟಲೆ ರೂಪಾಯಿ ಆದಾಯ ಬರುತ್ತದೆ. ಈ ಕೂದಲನ್ನು ಹೈದರಾಬಾದಿನ ಮತ್ತು ಚೆನ್ನೈಯ ಎರಡು ಕಂಪೆನಿಗಳು ಖರೀದಿಸುತ್ತವೆ. ಅದನ್ನು ಸಂಸ್ಕರಿಸಿ ವಿಗ್ ತಯಾರಿಸುತ್ತವೆ. ಇಂತಹ ಸಾವಿರಾರು ವಿಗ್‌ಗಳು ಭಾರತದಿಂದ ರಫ್ತಾಗುತ್ತಿವೆ!

ವಿಗ್ ಧರಿಸಿದಾಗ ತಲೆಯ ಮೇಲ್ಮೈಯಲ್ಲಿ ಶಾಖ ಉತ್ಪನ್ನವಾಗುತ್ತದೆ. ಇದರಿಂದಾಗಿ ಹೆಚ್ಚು ಬೆವರುತ್ತದೆ ಮತ್ತು ಚರ್ಮದ ಮೇಲ್ಪದರ ಹೆಚ್ಚು ಕಿತ್ತು ಹೋಗುತ್ತದೆ. ಇದನ್ನು ತಡೆಯಲು ಕೆಲವು ಸೂಚನೆಗಳು ಇಲ್ಲಿವೆ:
ತಲೆಯ ಹೊಟ್ಟು, ತುರಿಕೆ ಮತ್ತು ಸೋಂಕು ತಡೆಯಲಿಕ್ಕಾಗಿ ತಲೆಯ ಚರ್ಮವನ್ನು ದಿನವೂ ಚೆನ್ನಾಗಿ ತೊಳೆಯಿರಿ. 
ವಿಗ್ ಧರಿಸುವುದನ್ನು ಸಾಧ್ಯವಾದಷ್ಟು ಕಡಿಮೆ ಮಾಡಿ. (ರಾತ್ರಿ ವಿಗ್ ಹಾಕಿ ಕೊಳ್ಳಬೇಡಿ.)
ತಲೆಯಲ್ಲಿ ಇರುವಷ್ಟು ಕೂದಲುಗಳನ್ನು ರಾತ್ರಿ ಚೆನ್ನಾಗಿ ತೊಳೆಯಿರಿ.
ವಿಗ್ ಮತ್ತು ತಲೆಯ ಚರ್ಮವನ್ನು ಯಾವಾಗಲೂ ಶುಚಿಯಾಗಿ ಇಟ್ಟುಕೊಳ್ಳಿರಿ.  

ಬೋಳುತಲೆ - ಕೆಲವರ ಭಾಗ್ಯ
ಅಂತಿಮವಾಗಿ, ಬೋಳು ತಲೆಯನ್ನೇ ಇಷ್ಟ ಪಡುವುದು ಅತ್ಯುತ್ತಮ ಪರಿಹಾರ. ಕನ್ನಡಿಯಲ್ಲಿ ನಮ್ಮ ಬೋಳು ತಲೆ ಮಿರಮಿರನೆ ಮಿಂಚಿದಾಗ ಒಮ್ಮೆ ತಲೆಬಿಸಿ ಆಗಬಹುದು. ಆಗ, ಎಷ್ಟು ಜನರಿಗೆ ಹಾಯಾಗಿ ತಮ್ಮ ಬೋಳು ತಲೆ ಸವರಿಕೊಳ್ಳುವ ಭಾಗ್ಯ ಇದೆ ಅಂತ ಯೋಚಿಸಿದರೆ …. ಆದ್ದರಿಂದ “ಬೋಳು ತಲೆ ನಮ್ಮ ಭಾಗ್ಯ” ಅಂದುಕೊಳ್ಳುವುದೇ ಸರಿ. ಯಾಕೆಂದರೆ ಇದು ನಮ್ಮ ಹಳೆಯ ತಲೆಮಾರಿನವರಿಂದ ಹೆತ್ತವರ ಮೂಲಕ ನಮಗೆ ದೊರೆಯುವ ವಂಶಪಾರಂಪರ್ಯ ಬಳುವಳಿ. ಇನ್ನೊಮ್ಮೆ ನಿಮ್ಮ ಬೋಳುತಲೆ ಕಂಡು ಮುದ್ದು ಮಗುವೊಂದು “ಅಜ್ಜಾ” ಎಂದು ಪ್ರೀತಿಯಿಂದ ಕರೆದಾಗ ನೀವು ಕೋಪಿಸಿಕೊಳ್ಳಬೇಕಾಗಿಲ್ಲ; ಬದಲಾಗಿ, ಆ ಮಗುವಿನ ಪ್ರೀತಿಯ ಕರೆಗೆ ನಿಮ್ಮ ಬೋಳು ತಲೆಯೇ ಕಾರಣ ಎಂದು ಮತ್ತೊಮ್ಮೆ ನೀವು ಖುಷಿಯಿಂದ ತಲೆ ಸವರಿಕೊಳ್ಳಬಹುದು, ಅಲ್ಲವೇ? 

ಚಿತ್ರ: ಗಂಡಸಿನ ತಲೆ ಬೋಳಾಗುವ ಹಂತಗಳು … ಕೃಪೆ: “ಇನ್-ಸೈಟ್" ದ್ವೈಮಾಸಿಕ