ಒಬ್ಬ ಮರ ಕಡಿಯುವವನು ಪ್ರತಿ ದಿನ ಕಾಡಿಗೆ ಹೋಗಿ, ಕಟ್ಟಿಗೆ ಕಡಿದು ತಂದು ಮಾರುಕಟ್ಟೆಯಲ್ಲಿ ಮಾರಿ, ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದ. ಆದರೆ ಕೆಲವು ದಿನಗಳು ಅವನು ಉಪವಾಸ ಇರಬೇಕಾಗುತ್ತಿತ್ತು. ಯಾಕೆಂದರೆ ವಿಪರೀತ ಮಳೆ ಅಥವಾ ಚಳಿಯಿಂದಾಗಿ ಅವನಿಗೆ ಕಾಡಿಗೆ ಹೋಗಲು ಸಾಧ್ಯವಾಗುತ್ತಿರಲಿಲ್ಲ.
ಆ ಕಾಡಿನಲ್ಲಿ ವಾಸ ಮಾಡುತ್ತಿದ್ದ ಸಂತನೊಬ್ಬ ಮರ ಕಡಿಯುವವನು ದಿನವಿಡೀ ಕಷ್ಟ ಪಡುವುದನ್ನು ಗಮನಿಸುತ್ತಿದ್ದ. ಒಂದು ದಿನ ಮರ ಕಡಿಯುವವನನ್ನು ಕರೆದು ಸಂತ ಕೇಳಿದ, “ನೀನ್ಯಾಕೆ ಕಾಡಿನೊಳಗೆ ಇನ್ನಷ್ಟು ಮುಂದಕ್ಕೆ ಹೋಗಬಾರದು?” ಈ ಮಾತಿಗೆ ಮರ ಕಡಿಯುವವ ಉತ್ತರಿಸಿದ, “ಕಾಡಿನೊಳಗೆ ಇನ್ನಷ್ಟು ಮುಂದಕ್ಕೆ ಹೋದರೆ ಹೆಚ್ಚು ಕಟ್ಟಿಗೆ ಸಿಗುವುದೇ? ಆದರೆ ಅವನ್ನು ಅಷ್ಟು ದೂರದಿಂದ ನಾನು ಹೊತ್ತು ತರಬೇಕಾಗುತ್ತದೆಯಲ್ಲ.” ಆಗ ಸಂತ “ಹಾಗೇನಿಲ್ಲ. ನೀನು ಇನ್ನಷ್ಟು ಮುಂದಕ್ಕೆ ಹೋದರೆ ನಿನಗೆ ತಾಮ್ರದ ನಿಧಿ ಸಿಗುವುದು. ಅದನ್ನು ನೀನು ಪಟ್ಟಣದಲ್ಲಿ ಮಾರಾಟ ಮಾಡಿದರೆ ನಿನಗೆ ಏಳು ದಿನಗಳಿಗೆ ಸಾಕಾಗುವಷ್ಟು ಹಣ ಸಿಗುತ್ತದೆ. ಇದರಿಂದಾಗಿ ನಿನಗೆ ಪ್ರತಿ ದಿನವೂ ಕಟ್ಟಿಗೆ ಕಡಿಯಲು ಕಾಡಿಗೆ ಬರಬೇಕಾದ ಕಷ್ಟ ತಪ್ಪುತ್ತದೆ” ಎಂದು ತಿಳಿಸಿದ. ಇದನ್ನು ಕೇಳಿದ ಮರ ಕಡಿಯುವವನು ತಾನ್ಯಾಕೆ ಇನ್ನಷ್ಟು ಮುಂದಕ್ಕೆ ಹೋಗಬಾರದು ಎಂದು ಯೋಚಿಸಿದ.
ಅವನು ಕಾಡಿನೊಳಗೆ ಇನ್ನಷ್ಟು ಮುಂದಕ್ಕೆ ಹೋದ. ತಾಮ್ರದ ನಿಧಿ ಕಾಣಿಸಿದಾಗ ಅವನಿಗೆ ಬಹಳ ಸಂತೋಷವಾಯಿತು. ಅವನು ಹಿಂತಿರುಗಿ ಬಂದು ಸಂತನಿಗೆ ನಮಿಸಿ, ಕೃತಜ್ಞತೆ ತಿಳಿಸಿದ. ಆಗ ಸಂತ ಸಲಹೆಯಿತ್ತ: “ಈಗಲೇ ಬಹಳ ಸಂತೋಷ ಪಡಬೇಡ. ಕಾಡಿನೊಳಗೆ ಇನ್ನಷ್ಟು ಮುಂದಕ್ಕೆ ಹೋಗು.”
ಮರ ಕಡಿಯುವವ ಪ್ರಶ್ನಿಸಿದ, “ಅದರಿಂದೇನು ಪ್ರಯೋಜನ? ಏಳು ದಿನಗಳಿಗೆ ಬೇಕಾದಷ್ಟು ಹಣ ಈಗಾಗಲೇ ನನ್ನ ಕೈಯಲ್ಲಿದೆ.” ಸಂತ ಉತ್ತರಿಸಿದ, “ಕಾಡಿನೊಳಗೆ ಇನ್ನಷ್ಟು ಮುಂದಕ್ಕೆ ಹೋಗಿ ನೋಡು.” ಕಾಡಿನೊಳಗೆ ಇನ್ನಷ್ಟು ಮುಂದಕ್ಕೆ ಹೋದರೆ, ತನಗೆ ಈಗ ಸಿಕ್ಕಿರುವ ತಾಮ್ರದ ನಿಧಿ ಕಳೆದುಹೋದಿತೆಂದು ಮರ ಕಡಿಯುವವ ಆತಂಕ ವ್ಯಕ್ತ ಪಡಿಸಿದ.
“ಕಾಡಿನೊಳಗೆ ಇನ್ನಷ್ಟು ಮುಂದಕ್ಕೆ ಹೋದರೆ ಬೆಳ್ಳಿಯ ನಿಧಿ ಸಿಗುತ್ತದೆ. ಅದನ್ನು ತಂದು ಮಾರಾಟ ಮಾಡಿದರೆ ಮೂರು ತಿಂಗಳಿಗೆ ಸಾಕಾಗುವಷ್ಟು ಹಣ ಗಳಿಸಬಹುದು” ಎಂದು ಸಂತ ಒತ್ತಾಯಿಸಿದ. ಮರ ಕಡಿಯುವವ ಯೋಚಿಸಿದ: ಸಂತ ಹೇಳಿದಂತೆ ಕಾಡಿನೊಳಗೆ ತಾಮ್ರದ ನಿಧಿ ಸಿಕ್ಕಿದೆ. ಹಾಗೆಯೇ ಬೆಳ್ಳಿಯ ನಿಧಿಯೂ ಸಿಗಬಹುದು.
ಮರ ಕಡಿಯುವವನು ಕಾಡಿನೊಳಗೆ ಇನ್ನಷ್ಟು ಮುಂದಕ್ಕೆ ಹೋದಾಗ ಅವನಿಗೆ ಬೆಳ್ಳಿಯ ನಿಧಿ ಸಿಕ್ಕಿತು. ಅವನಿಗೆ ಖುಷಿಯೋ ಖುಷಿ. ಆತ ಸಂತನಲ್ಲಿಗೆ ಮರಳಿ, “ನೀವು ಹೇಳಿದಂತೆ ನನಗೆ ಬೆಳ್ಳಿಯ ನಿಧಿ ಸಿಕ್ಕಿತು. ನಿಮ್ಮ ಉಪಕಾರ ಹೇಗೆ ತೀರಿಸಲಿ?” ಎಂದ. ಆಗ ಸಂತ ಶಾಂತನಾಗಿ ಹೇಳಿದ, “ಈಗಲೇ ಕುಣಿದಾಡಬೇಡ. ಕಾಡಿನೊಳಗೆ ಮತ್ತಷ್ಟು ಮುಂದಕ್ಕೆ ಹೋಗು.” ಮರ ಕಡಿಯುವವ ಈ ಸಲಹೆ ಒಪ್ಪದೆ, ಮತ್ತಷ್ಟು ಮುಂದಕ್ಕೆ ಹೋದರೆ, ಈಗ ಕೈಯಲ್ಲಿರುವ ಬೆಳ್ಳಿಯ ನಿಧಿ ಕೈತಪ್ಪಿ ಹೋದಿತೆಂದ. ಆಗ ಸಂತ ಮತ್ತಷ್ಟು ಮುಂದಕ್ಕೆ ಹೋದರೆ ಚಿನ್ನದ ಗಣಿ ಸಿಗುವುದೆಂದು ಆಗ್ರಹಿಸಿದ.
ನೋಡೇ ಬಿಡೋಣ ಎಂದು ಕಾಡಿನೊಳಗೆ ಮತ್ತಷ್ಟು ಮುಂದಕ್ಕೆ ಹೋದ ಮರ ಕಡಿಯುವವನಿಗೆ ಚಿನ್ನದ ನಿಧಿ ಸಿಕ್ಕಿತು. “ಇನ್ನು ವರುಷಕ್ಕೊಮ್ಮೆ ಕಾಡಿಗೆ ಬಂದರೆ ಸಾಕು” ಎಂದು ಆತ ಭಾವಿಸಿದ. ಇದನ್ನು ಸಂತನಿಗೆ ತಿಳಿಸಿದಾಗ, ಸಂತ ಒತ್ತಾಯಿಸಿದ, “ಒಂದು ವರುಷ ಕಳೆದಾಗ ನನಗೆ ಇನ್ನಷ್ಟು ವಯಸ್ಸಾಗುತ್ತದೆ. ನೀನು ಬಂದಾಗ ನಾನು ಬದುಕಿ ಇರುತ್ತೇನೋ ಇಲ್ಲವೋ? ಹಾಗಾಗಿ ನೀನು ಚಿನ್ನದ ಗಣಿಗೆ ತೃಪ್ತನಾಗದೆ ಕಾಡಿನೊಳಗೆ ಮತ್ತಷ್ಟು ಮುಂದಕ್ಕೆ ಹೋಗು.”
ಇದನ್ನು ಕೇಳಿದ ಮರ ಕಡಿಯುವವನಿಗೆ ಅಚ್ಚರಿ. ಅವನು ಪ್ರಶ್ನಿಸಿದ, “ಯಾಕೆ? ನೀವು ನನಗೆ ಒಂದು ನಿಧಿ ಪಡೆಯಲು ಹೇಳುತ್ತೀರಿ. ಅದು ಸಿಕ್ಕಿದಾಗ, ಅದನ್ನು ಬಿಟ್ಟು ಇನ್ನೂ ಮುಂದಕ್ಕೆ ಹೋಗಲು ಒತ್ತಾಯಿಸುತ್ತೀರಿ !”
ಈಗ ಸಂತ ಸಮಾಧಾನದಿಂದ ನುಡಿದ, “ನೀನು ಕಾಡಿನೊಳಗೆ ಮತ್ತಷ್ಟು ದೂರ ಹೋದರೆ ನಿನಗೆ ವಜ್ರದ ನಿಧಿ ಸಿಗುತ್ತದೆ.” ಮರ ಕಡಿಯುವವನಿಗೆ ಸಂತನ ಮಾತಿನಲ್ಲಿ ನಂಬಿಕೆ ಬಂದಿತ್ತು. ಆದ್ದರಿಂದ ಪುನಃ ಕಾಡಿನೊಳಗೆ ಬಹು ದೂರ ಹೋದ. ಅವನಿಗಲ್ಲಿ ವಜ್ರದ ನಿಧಿ ಸಿಕ್ಕಿತು! ವಜ್ರದ ಹರಳುಗಳನ್ನು ತಗೊಂಡು ಹಿಂತಿರುಗಿದ ಅವನು ಹೇಳಿದ, “ಇವು ನನ್ನ ಇಡೀ ಜೀವಮಾನಕ್ಕೆ ಸಾಕು.”
ಆಗ ಸಂತ ಮುಗುಳ್ನಗುತ್ತಾ ಹೇಳಿದ, “ಇದು ನಮ್ಮ ಕೊನೆಯ ಭೇಟಿ ಅನಿಸುತ್ತದೆ. ಹಾಗಾಗಿ ನಿನಗೆ ನನ್ನ ಕೊನೆಯ ಸಂದೇಶ ಏನೆಂದರೆ - ಈಗಾಗಲೇ ನಿನ್ನ ಜೀವಮಾನಕ್ಕೆ ಸಾಕಾಗುವಷ್ಟು ನಿಧಿ ಸಿಕ್ಕಿದೆ. ಇನ್ನು ನೀನು ನಿನ್ನ ಅಂತರಾಳಕ್ಕೆ ಹೋಗು. ಈ ಕಾಡು, ತಾಮ್ರದ ನಿಧಿ, ಬೆಳ್ಳಿಯ ನಿಧಿ, ಚಿನ್ನದ ನಿಧಿ, ವಜ್ರದ ನಿಧಿ - ಇವನ್ನೆಲ್ಲ ಬಿಟ್ಟು ಬಿಡು. ಈಗ ನಿನ್ನೊಳಗೇ ಇರುವ ಮಹಾನ್ ಸಂಪತ್ತನ್ನು ನಿನಗೆ ನಾನು ತೋರಿಸಿ ಕೊಡುತ್ತೇನೆ. ನಿನ್ನ ಬಾಹ್ಯ ಅಗತ್ಯಗಳೆಲ್ಲ ಪೂರೈಸಿವೆ. ಈಗ ನಾನು ಕುಳಿತಂತೆ ಕುಳಿತುಕೋ.”
ಆ ಮರ ಕಡಿಯುವವನು ಕೇಳಿದ, “ನನಗೆ ಆಶ್ಚರ್ಯವಾಗುತ್ತಿತ್ತು, ನೀವು ಹೀಗೇಕೆ ಕುಳಿತಿದ್ದೀರಿ ಎಂದು. ಈ ಬೆಳ್ಳಿ, ಚಿನ್ನ, ವಜ್ರಗಳು ಅಲ್ಲಿ ಕಾಡಿನೊಳಗೆ ಇರುವುದು ತಿಳಿದಿದ್ದರೂ ಮರದಡಿಯಲ್ಲಿ ಹೀಗೆ ಯಾಕೆ ಕುಳಿದಿದ್ದೀರಿ?”
ಸಂತ ಉತ್ತರಿಸಿದ, “ಇಲ್ಲಿ ಕೇಳು. ನಾನು ವಜ್ರದ ನಿಧಿ ಪಡೆದ ನಂತರ ನನ್ನ ಗುರು ನನಗೆ ಹೇಳಿದ, “ಇನ್ನು ನೀನು ಈ ಮರದಡಿಯಲ್ಲಿ ಕುಳಿತು ನಿನ್ನೊಳಗೆ ಹೋಗು.”
ಮರ ಕಡಿಯುವವ ತಕ್ಷಣವೇ ತನ್ನಲ್ಲಿದ್ದ ವಜ್ರದ ಹರಳುಗಳನ್ನು ದೂರಕ್ಕೆ ಎಸೆದ. “ಸ್ವಾಮಿ, ಪುನಃ ನಾವು ಒಬ್ಬರನ್ನೊಬ್ಬರು ಕಾಣಲಿಕ್ಕಿಲ್ಲ. ನಾನು ಮನೆಗೆ ಹೋಗುವುದಿಲ್ಲ. ನಿಮ್ಮ ಪಕ್ಕದಲ್ಲಿಯೇ ಕುಳಿತುಕೊಳ್ಳುತ್ತೇನೆ. ನನಗೆ ಕಾಡಿನೊಳಗೆ ದೂರಕ್ಕೆ ಹೋಗುವುದು ಹೇಗೆಂದು ತಿಳಿದಿದೆ. ಆದರೆ ಅಂತರಂಗದೊಳಗೆ ಹೋಗುವುದು ಹೇಗೆಂದು ತಿಳಿದಿಲ್ಲ. ಅದನ್ನು ನನಗೆ ತಿಳಿಸಿ.”
ಆಗ ಸಂತ ಮರ ಕಡಿಯುವವನ ಕಣ್ಣೊಳಗೆ ನೋಡುತ್ತಾ ನುಡಿದ, “ನೀನು ನಿನ್ನ ಅಂತರಂಗದೊಳಗೆ ಹೋದರೆ ಈ ತಾಮ್ರ, ಬೆಳ್ಳಿ, ಚಿನ್ನ, ವಜ್ರಗಳೆಲ್ಲ ಮೌಲ್ಯ ಕಳೆದುಕೊಳ್ಳುತ್ತವೆ.” ಅದಕ್ಕೆ ಮರ ಕಡಿಯುವವ ಹೇಳಿದ, “ಅದರ ಯೋಚನೆ ಬಿಟ್ಟು ಬಿಡಿ. ಇಲ್ಲಿಯ ವರೆಗೆ ನೀವು ನನಗೆ ಸರಿಯಾಗಿಯೇ ದಾರಿ ತೋರಿಸಿದ್ದೀರಿ. ಈಗ ಕೊನೆಯ ಹಂತದಲ್ಲಿಯೂ ನೀವು ನನಗೆ ಸೂಕ್ತವಾದದ್ದನ್ನೇ ಸೂಚಿಸುತ್ತೀರೆಂದು ನನಗೆ ನಂಬಿಕೆ ಇದೆ.”
ಗುರುವಿನ ಮೂಲ ಕರ್ತವ್ಯ ನಿಮ್ಮನ್ನು ಶರೀರದ ಅರಿವಿನಿಂದ ಮನಸ್ಸಿನ ಅರಿವಿಗೆ ತಿರುಗುವಂತೆ ಮನಃಪರಿವರ್ತನೆ ಮಾಡುವುದು. ಅನಂತರ ಮನಸ್ಸಿನ ಅರಿವಿನಿಂದ ಹೃದಯದ ತಿಳಿವಿಗೆ ದಾರಿ ತೋರುವುದು. ಕೊನೆಗೆ ಹೃದಯದ ತಿಳಿವಿನಿಂದ ಆತ್ಮಜ್ಞಾನದೆಡೆಗೆ ಮುನ್ನಡೆಯುವಂತೆ ಮಾಡುವುದು. ಅಂತಹ ಉದಾತ್ತ ಗುರುಗಳಿಗೆಲ್ಲ ನಮೀಸೋಣ.

