ನಿಮ್ಮ ಮಹದಾಸೆ ಕೈಗೂಡಲು ಕಾಲ ಕೂಡಿ ಬರಬೇಕು

ಪ್ರಕೃತಿಯನ್ನು ಸೂಕ್ಷ್ಮವಾಗಿ ಗಮನಿಸಿ. ಒಂದು ಹೂ ಅರಳಬೇಕಾದರೆ, ಒಂದು ಹಣ್ಣು ಮಾಗ ಬೇಕಾದರೆ, ಒಂದು ಮಗು ಹುಟ್ಟ ಬೇಕಾದರೆ, ಮೋಡಗಳಿಂದ ಮಳೆ ಸುರಿಯಬೇಕಾದರೆ, ಯಾರಿಗೋ ಜ್ಞಾನೋದಯ ಆಗಬೇಕಾದರೆ - ಇವೆಲ್ಲದಕ್ಕೂ ಕಾಲ ಕೂಡಿ ಬರಲೇ ಬೇಕು. ಯಾವಾಗ ಕಾಲ ಕೂಡಿ ಬರುತ್ತದೆ ಎಂಬುದನ್ನು ಯಾವ ಶಕ್ತಿಯೂ, ಯಾವ ಪ್ರಾರ್ಥನೆಯೂ ಬದಲಾಯಿಸಲಾಗದು

 

ಎಲ್ಲದರಲ್ಲಿಯೂ ವೇಗ, ಇನ್ನಷ್ಟು ವೇಗ ಬಯಸುವ ಜಗತ್ತಿನಲ್ಲಿ ನಾವು ಬದುಕುತ್ತಿದ್ದೇವೆ. ಸಂಪತ್ತು, ಯಶಸ್ಸು, ಉತ್ತಮ ಸಂಬಂಧಗಳು, ಸಂತೋಷ, ಕೀರ್ತಿ - ಇವೆಲ್ಲವೂ ನಮಗೆ ಮುಂದಿನ ಕ್ಷಣದಲ್ಲಿಯೇ ಬೇಕು. ಆದರೆ ವಿಶ್ವಚೇತನ ಇಂತಹ ಅವಸರಕ್ಕೆ ಸ್ಪಂದಿಸುವುದಿಲ್ಲ. ಮಾಗದ ಹಣ್ಣನ್ನು ಕಿತ್ತರೆ ಅದು ಹಾಳಾಗುತ್ತದೆ. ಬೆಳೆಯದ ಚಿಟ್ಟೆಯನ್ನು ಕೋಶದಿಂದ ಹೊರಗೆ ಎಳೆದರೆ ಅದು ಹಾರಲಾಗದು, ಅಲ್ಲವೇ? ಹೀಗೆ ಪ್ರತಿಯೊಂದು ಸಂಗತಿಯಲ್ಲಿಯೂ ಪ್ರಕೃತಿ ಸಮರ್ಪಕ ಸಮಯಕ್ಕಾಗಿ ಕಾಯುತ್ತದೆ - ನಮ್ಮ ಬದುಕು ಕೂಡ

 

1)ಸರಿಯಾದ ಸಮಯಕ್ಕಿಂತ ಮುಂಚೆ ದಕ್ಕುವ ಯಶಸ್ಸು ವಿಪತ್ತಿನ ಸೋಪಾನ 

ನಿಮ್ಮ ಕನಸಿನ ಉದ್ಯೋಗ ಐದು ವರುಷ ಮುಂಚೆಯೇ ಯಾಕೆ ಸಿಗಲಿಲ್ಲ? ಅತ್ಯುತ್ತಮ ಸಂಬಂಧ ಎಂದೆಣಿಸಿದ್ದು ಯಾಕೆ ಮುರಿದು ಬಿತ್ತು? ದೊಡ್ಡ ಅವಕಾಶವೊಂದು ಯಾಕೆ ಕೈತಪ್ಪಿ ಹೋಯಿತು? ಎಂದು ಯಾವತ್ತಾದರೂ ಯೋಚಿಸಿದ್ದೀರಾ? ಕ್ಷಣದಲ್ಲಿ ಅದೊಂದು ಶಿಕ್ಷೆ ಎಂದು ಅನಿಸಿರಬಹುದು. ಆದರೆ, ವರುಷಗಳ ನಂತರ ಹಿಂತಿರುಗಿ ನೋಡಿದಾಗ, “ ಯಶಸ್ಸಿಗೆ ಆಗ ನೀವು ತಯಾರಾಗಿರಲಿಲ್ಲಎಂಬುದು ಅರ್ಥವಾಗಿರುತ್ತದೆ, ಅಲ್ಲವೇ

 

ಒಂದು ಮಗುವಿಗೆ ಬೇಕಾದ್ದು ಆಯುಧವಲ್ಲ, ಆಟಿಕೆ. ಆಯುಧವನ್ನು ಮಗುವಿನ ಕೈಗಿತ್ತರೆ ದುರಂತಕ್ಕೆ ಕಾರಣವಾದೀತು. ಅದೇ ರೀತಿಯಲ್ಲಿ, ಸಂಪತ್ತು, ಅಧಿಕಾರ, ಕೀರ್ತಿ, ಪ್ರೀತಿ ಇವು ಸಿಗಬೇಕಾದ ಸಮಯಕ್ಕಿಂತ ಮುಂಚೆಯೇ ದಕ್ಕಿದರೆ (ಅಂದರೆ ವ್ಯಕ್ತಿಯು ಮಾನಸಿಕವಾಗಿ, ಭಾವನಾತ್ಮಕವಾಗಿ ಮತ್ತು ಅಧ್ಯಾತ್ಮಿಕವಾಗಿ ಅವನ್ನು ಸ್ವೀಕರಿಸಲು ಸನ್ನದ್ಧನಾಗಿರುವ ಮುಂಚೆ) ಇವು ವರವಾಗುವ ಬದಲು ಶಾಪವಾಗುತ್ತವೆ! ಚರಿತ್ರೆಯನ್ನು ಪರಿಶೀಲಿಸಿದರೆ, ಯೌವನದಲ್ಲಿಯೇ ಕೋಟ್ಯಾಧಿಪತಿಗಳಾದರೂ ಕೆಲವೇ ವರುಷಗಳಲ್ಲಿ ಸಂಪತ್ತನೆಲ್ಲ ಕಳೆದುಕೊಂಡು ಭಿಕಾರಿಗಳಾದ ಹಲವರ ಉದಾಹರಣೆಗಳು ಸಿಗುತ್ತವೆ. ಯಾಕೆಂದರೆ, ಅಗಾಧ ಸಂಪತ್ತನ್ನು ಉಳಿಸಿ ಬೆಳೆಸುವ ಕೌಶಲ್ಯಗಳನ್ನು ಅವರು ಕಲಿತಿರಲಿಲ್ಲ. ಇಂಥವರಿಗೆ ಹೋಲಿಸಿದಾಗ, ಹಂತಹಂತವಾಗಿ ಸಂಪತ್ತನ್ನು ಗಳಿಸಿದವರು ಅವನ್ನು ತಮ್ಮ ಮುಂದಿನ ತಲೆಮಾರುಗಳಿಗೆ ದಾಟಿಸಲು ಶಕ್ತರಾದ ಹಲವು ನಿದರ್ಶನಗಳಿವೆ

 

2)ಬದುಕು ನಿಮ್ಮನ್ನು ಮೌನವಾಗಿ ನಿಮ್ಮ ಭವಿಷ್ಯಕ್ಕಾಗಿ ತಯಾರು ಮಾಡುತ್ತದೆ.

ನಿಮ್ಮ ಬದುಕಿನಲ್ಲಿ ಪ್ರಗತಿ ಆಗುತ್ತಿಲ್ಲ ಎನಿಸಿದಾಗ ನಿಜವಾಗಿ ಬದುಕು ನಿಮ್ಮನ್ನು ರೂಪಿಸುತ್ತಾ ಇರುತ್ತದೆ. ಕಷ್ಟದ ಸಮಯಗಳು, ಕಾಯುವ ಅವಧಿಗಳು, ಸೋಲುಗಳು - ಇವೆಲ್ಲ ನಿಮ್ಮನ್ನು ರೂಪಿಸುವ ಸಾಧನಗಳು. ಒಬ್ಬ ಕುಂಬಾರ ಮೌನವಾಗಿ ಮಡಕೆಗೆ ರೂಪ ಕೊಡುವಂತೆ, ನಿಮ್ಮ ವ್ಯಕ್ತಿತ್ವ, ತಾಳ್ಮೆ, ಪುಟಿದೇಳುವ ಗುಣಗಳನ್ನು ಬದುಕು ರೂಪಿಸುತ್ತದೆ.

 

ದೇಶವೇ ಗುರುತಿಸುವಂತಹ ನಾಯಕನಾಗಬೇಕು ಎಂಬುದು ನಿಮ್ಮ ಮಹದಾಸೆ ಆಗಿರಬಹುದು; ಅದಕ್ಕಾಗಿ ನೀವು ಮೊದಲು ಕಲಿಯ ಬೇಕಾದ್ದು ವಿನಯ. ಆತ್ಮಸಂಗಾತಿಯನ್ನು ಪಡೆಯಬೇಕೆಂಬುದು ನಿಮ್ಮ ಮಹದಾಸೆ ಆಗಿರಬಹುದು; ಅದಕ್ಕಾಗಿ ನೀವು ಮೊದಲು ಕಲಿಯಬೇಕಾದ್ದು ನಿಮ್ಮನ್ನೇ ಪ್ರೀತಿಸುವುದನ್ನು. ಯಶಸ್ಸು ಗಳಿಸಬೇಕು ಎಂಬುದು ನಿಮ್ಮ ಮಹದಾಸೆ ಆಗಿರಬಹುದು; ಅದಕ್ಕಾಗಿ ನೀವು ಮೊದಲು ಕಲಿಯಬೇಕಾದ್ದು ಶಿಸ್ತು ಮತ್ತು ಹೊಣೆಗಾರಿಕೆ. ಇವಿಲ್ಲದಿದ್ದರೆ ನಿಮ್ಮ ಯಶಸ್ಸು ಕ್ಷಣಿಕ. ಮರವೊಂದು ಫಲ ಕೊಡಲು ವರುಷಗಟ್ಟಲೆ ಬೆಳೆಯುತ್ತದೆ. ಹಾಗೆಯೇ, ನಿಮ್ಮ ಸಾಮರ್ಥ್ಯ ಅರಳಲು ವರುಷಗಳು ಬೇಕು. ಯಾಕೆಂದರೆ ಅದು ದೀರ್ಘಕಾಲಿಕವೂ ಪರಿಣಾಮಕಾರಿಯೂ ಆಗಿರತಕ್ಕದ್ದು

 

3)ಪರಿಪೂರ್ಣವಾದ ಕಾಲದಲ್ಲಿ ವಿಶ್ವಚೈತನ್ಯವು ನಿಮ್ಮ ಮಹದಾಶೆಯನ್ನು ಕೈಗೂಡಿಸುತ್ತದೆ.

ನಮ್ಮ ಆಶೆಗಳ ಡೆಡ್-ಲೈನುಗಳು ವಿಶ್ವಚೈತನ್ಯಕ್ಕೆ ಅನ್ವಯಿಸುವುದಿಲ್ಲ. ಅದು ನಿಮ್ಮ ಆಶೆಗಳನ್ನಲ್ಲ, ಬದಲಾಗಿ ನಿಮ್ಮ  ವಿಕಾಸವನ್ನು ಅವಲಂಬಿಸಿ ಸೂಕ್ತ ಸಮಯವನ್ನು ನಿರ್ಧರಿಸುತ್ತದೆ. ನಾನು ತಯಾರಾಗಿದ್ದೇನೆಂದು ನೀವು ಭಾವಿಸಬಹುದು; ಆದರೆ ವಿಶ್ವಚೈತನ್ಯಕ್ಕೆ ನಿಮಗಿಂತ ಚೆನ್ನಾಗಿ ಗೊತ್ತಿದೆ.

 

ನೀವು ನಿಮ್ಮ ಮೇರುಸ್ತರವನ್ನು ತಲಪಿದಾಗ ಸೂಕ್ತ ಅವಕಾಶವನ್ನು ಒದಗಿಸಿ ವಿಶ್ವಚೈತನ್ಯ ನಿಮ್ಮ ಪ್ರಗತಿ ಮತ್ತು ಸಂತೋಷದ ಸ್ಫೋಟಕ್ಕೆ ಕಾರಣವಾಗುತ್ತದೆ. ಸಮಯದಲ್ಲಿ, ನಿಮ್ಮ ಕೌಶಲ್ಯಗಳು, ನಿಮ್ಮ ಆತ್ಮಧ್ವನಿ, ನಿಮ್ಮ ತಾಕತ್ತು, ನಿಮ್ಮ ಉದ್ದೇಶ - ಎಲ್ಲವೂ ಸಂಧಿಸುತ್ತವೆ. ಅದುವೇ ಸರಿಯಾದ ಸಮಯ. ಕೆಲವರು ಹಣ, ಪ್ರೀತಿ, ಕೀರ್ತಿ, ಜ್ಞಾನೋದಯ ಎಲ್ಲವನ್ನು ಚಲಿಸುವ ರೈಲನ್ನು ಬೆಂಬತ್ತಿದಂತೆ ಬೆಂಬತ್ತುತ್ತಾರೆ. ಆದರೆ ನಿಮ್ಮ ವಿಧಿಯಲ್ಲಿ ನಿಮಗೆ ದಕ್ಕಬೇಕಾದದ್ದು ನಿಮಗೆ ಸಿಕ್ಕಿಯೇ ಸಿಗುತ್ತದೆ - ಸರಿಯಾದ ಸ್ಥಳದಲ್ಲಿ ಮತ್ತು ಸರಿಯಾದ ಸಮಯದಲ್ಲಿ

 

4)ವಿಶ್ವಚೈತನ್ಯಕ್ಕೆ ಶರಣಾಗತಿಯೇ ಕಾಲ ಕೂಡಿ ಬರುವುದಕ್ಕೆ ಕೀಲಿಕೈ

ಈಗಲೇ ನನಗೆ ಸಂಪತ್ತು, ಕೀರ್ತಿ, ಯಶಸ್ಸು ಯಾಕೆ ಸಿಗುತ್ತಿಲ್ಲ ಎಂದು ಹಲುಬಿದರೆ ಯಾವ ಪ್ರಯೋಜನವೂ ಇಲ್ಲ. ಬದಲಾಗಿ, “ನನ್ನ ಬದುಕು ಯಾವ ಉನ್ನತ ಧ್ಯೇಯಕ್ಕಾಗಿ ನನ್ನನ್ನು ತಯಾರು ಮಾಡುತ್ತಿದೆಎಂದು ಆತ್ಮಾವಲೋಕನ ಮಾಡಿಕೊಳ್ಳಬೇಕು

ವಿಶ್ವಚೈತನ್ಯಕ್ಕೆ ಶರಣಾಗತಿ ಎಂದರೆ ನಿಷ್ಕ್ರಿಯನಾಗ ಬೇಕೆಂದು ಅರ್ಥವಲ್ಲ; ಅದು ಸಕ್ರಿಯ ನಂಬಿಕೆ. ಅಂದರೆ ನೀವು ಮಾಡಬೇಕಾದ್ದನ್ನು ಮಾಡುತ್ತಾ ಇರುವುದು - ಕಲಿಯುವುದು, ಬೆಳೆಯುವುದು, ಸನ್ನದ್ಧನಾಗುವುದು

 

ಗಮನಿಸಿ: ಎಲ್ಲ ಧರ್ಮಗಳು ಮಹಾನ್ ತತ್ವವನ್ನು ಪಾಲಿಸುತ್ತವೆ: ಹಿಂದೂ ಧರ್ಮದ ಕರ್ಮ ಸಿದ್ಧಾಂತ, ಬೌದ್ಧ ಧರ್ಮದ ತಾಳ್ಮೆಯೇ ಪರಮ ಗುಣ ಇತ್ಯಾದಿ

 

5)ನಿಜ ಜೀವನದಲ್ಲಿ ಕಾಲ ಹೇಗೆ ಕೂಡಿ ಬರುತ್ತದೆ ಎಂಬುದನ್ನು ಪರಿಶೀಲಿಸಿ

)ವೃತ್ತಿ ಮತ್ತು ಯಶಸ್ಸು: ಒಬ್ಬ ಯುವ ಡಾಕ್ಟರ್ ತನ್ನನ್ನು ಸಮಾಜ ತಕ್ಷಣವೇ ಗುರುತಿಸಬೇಕು ಎಂದು ಆಶೆ ಪಡಬಹುದು. ಆದರೆ, ಹಲವು ವರುಷಗಳು ವೈದ್ಯನಾಗಿ ಸೇವೆ ಸಲ್ಲಿಸಿದ ನಂತರ, ಸವಾಲಿನ ಪ್ರಕರಣಗಳನ್ನು ಸಮರ್ಥವಾಗಿ ನಿರ್ವಹಿಸಿದ ನಂತರ ಮತ್ತು ತನ್ನ ತಪ್ಪುಗಳಿಂದ ಆತ ಕಲಿತ ನಂತರವೇ ಸಮಾಜ ಆತನನ್ನು ಸಮರ್ಥ ವೈದ್ಯನೆಂದು ಗುರುತಿಸುತ್ತದೆ. ವೃತ್ತಿಯಲ್ಲಿ ತೊಡಗಿದ ಕೂಡಲೇ ಅವನಿಗೆ ಕೀರ್ತಿ ಬಂದರೆ ಅದು ಸೊಕ್ಕು ತಲೆಗೇರಲು ಕಾರಣವಾಗಬಹುದು

 

)ಬದುಕಿನ ತೀವ್ರ ಘಾಸಿಗಳು ಗುಣವಾಗುವುದು ನಿಧಾನ: ಭಾವನಾತ್ಮಕವಾದ ಅಥವಾ ದೈಹಿಕವಾದ ಘಾಸಿಗಳು ಗುಣವಾಗಲು ಸಮಯ ತಗಲುತ್ತದೆ. ಒಂದು ಗಾಯ ಗುಣವಾಗಲು ವಾರಗಳು ಅಥವಾ ತಿಂಗಳುಗಳು ತಗಲಬಹುದು. ಅತ್ಯಾಧುನಿಕ ಜೌಷಧಿ ನೀಡಿದರೂ ದೇಹ ಸ್ಪಂದಿಸಲು ಸಮಯ ಬೇಕಾಗುತ್ತದೆ. ಭಾವನಾತ್ಮಕ ಘಾಸಿಗಳು ವಾಸಿಯಾಗಲು ಕ್ಷಮಾಗುಣ, ಸ್ವೀಕಾರ ಭಾವ ಅತ್ಯಗತ್ಯ

 

6)ಯಶಸ್ಸಿನ ವಿಳಂಬ ಹಲವು ಬಾರಿ ಗುರುತರ ಯಶಸ್ಸಿಗೆ ತಳಹದಿ 

ನಿಮ್ಮ ಉದ್ಯೋಗ ಕಳೆದುಕೊಂಡು ಕಂಗಾಲಾದ ಕೆಲವು ತಿಂಗಳ ನಂತರ ಅದಕ್ಕಿಂತಲೂ ಉತ್ತಮ ಉದ್ಯೋಗ ನಿಮಗೆ ಸಿಕ್ಕಿತ್ತಾ? ನೀವು ಪ್ರೀತಿಸಿದ ವ್ಯಕ್ತಿ ನಿಮ್ಮ ಪ್ರೀತಿಯನ್ನು ತಿರಸ್ಕರಿಸಿದ ಹಲವು ತಿಂಗಳ ನಂತರ ನಿಮ್ಮನ್ನು ನಿಜವಾಗಿಯೂ ಅರ್ಥ ಮಾಡಿಕೊಂಡ ಆತ್ಮಸಂಗಾತಿ ಸಿಕ್ಕಿದ್ದು ಇದೆಯೇ? ಇವು ಕಾಕತಾಳೀಯ ಘಟನೆಗಳಲ್ಲ. ವಿಳಂಬವು ನಿಮ್ಮ ಬದುಕಿನ ಧ್ಯೇಯಕ್ಕೆ ಹೊಂದಿಕೊಳ್ಳುವ ಇನ್ನಷ್ಟು ಉತ್ತಮ ಸಂಗತಿಯ ಪಥಕ್ಕೆ ನಿಮ್ಮನ್ನು ಒಯ್ದಿತು.  

 

7)ಯಶಸ್ಸು ಮುಖ್ಯ, ಯಶಸ್ಸಿನ ಪ್ರಕ್ರಿಯೆ ಅದಕ್ಕಿಂತಲೂ ಮುಖ್ಯ.

ನೀವು ಯಶಸ್ಸಿನ ಮೇಲೆ ಎಷ್ಟು ಗಮನ ಕೆಂದ್ರೀಕರಿಸಿರುತ್ತೀರಿ ಎಂದರೆ, ಯಶಸ್ಸಿನ ಪ್ರಕ್ರಿಯೆಯ ಕಡೆಗೆ ಗಮನ ನೀಡಿರುವುದೇ ಇಲ್ಲ. ನಿಜ ಹೇಳಬೇಕೆಂದರೆ, ಕಾದುಕಾದು ಮಾಗಿದಾಗ ನೀವು ಎಂತಹ ವ್ಯಕ್ತಿ ಆಗಿರುತ್ತೀರಿ ಎಂಬುದೇ ನಿಜವಾದ ಯಶಸ್ಸು. ಕಾಲ ಕೂಡಿ ಬಂದಾಗ ನಿಮ್ಮ ಮಹದಾಸೆಯ ಸಂಪತ್ತು, ಪ್ರೀತಿ, ಕೀರ್ತಿ, ಯಶಸ್ಸು ದುತ್ತೆಂದು ಲಭಿಸುತ್ತದೆ ಮಾತ್ರವಲ್ಲ ನೀವು ಅದ್ಭುತ ವ್ಯಕ್ತಿಯಾಗಿ ಪರಿವರ್ತನೆ ಆಗಿರುತ್ತೀರಿ. ಅದುವೇ ನಿಜವಾದ ಮ್ಯಾಜಿಕ್

 

ವಿಶ್ವಚೈತನ್ಯದ ಆಶೀರ್ವಾದ ನಿಮಗೆ ಇದ್ದೇ ಇದೆ ಎಂಬ ನಂಬಿಕೆ ಇರಲಿ. ನಿಮ್ಮ ಬದುಕಿನ ಅಂತಿಮ ಯಶಸ್ಸುಬಹಳ ತಡಅಥವಾಇಲ್ಲವೇ ಇಲ್ಲಎಂಬ ಸಂಗತಿಯೇ ಇಲ್ಲ. ಅದಕ್ಕಾಗಿ ಕಾಲ ಕೂಡಿ ಬರಬೇಕು, ಅಷ್ಟೇ

 

ಆದ್ದರಿಂದ, ಅಗಾಧ ತಾಳ್ಮೆ ಬೆಳೆಸಿಕೊಳ್ಳಿ; ನಿಮ್ಮ ಪ್ರಗತಿಯ ಮೇಲೆ ಗಮನ ಕೇಂದ್ರೀಕರಿಸಿ; ಅಗತ್ಯವಾದ ಕೌಶಲ್ಯಗಳನ್ನು ಕಲಿಯಿರಿ; ಕ್ಷಣದಲ್ಲಿ ಬದುಕಲು ಶುರು ಮಾಡಿ; ನಿಮ್ಮನ್ನು ಬೇರೆ ಯಾರೊಂದಿಗೂ ಹೋಲಿಸಬೇಡಿ; ನಿಮ್ಮಲ್ಲಿ ಕೃತಜ್ಞತಾ ಭಾವ ತುಂಬಿರಲಿ. ಇಂತಹ ಸಾಧನೆಯ ಪಥದಲ್ಲಿ ಮುನ್ನಡೆಯುತ್ತಿದ್ದರೆ ನೀವು ಪಾಠಗಳನ್ನು ಕಲಿಯುತ್ತಿದ್ದೀರಿ ಎಂಬುದು ವಿಶ್ವಚೈತನ್ಯದ ಆಶೀರ್ವಾದಕ್ಕೆ ಕಾರಣವಾಗುತ್ತದೆ

 

ಆಗ, ನಿಮ್ಮ ಬದುಕಿನ ಮಹದಾಸೆ ಕೈಗೂಡುವ ಕಾಲ ಕೂಡಿ ಬರುತ್ತದೆ. ಸರಿಯಾದ ಸಮಯದಲ್ಲಿ ನಿಮ್ಮ ವಿಧಿಯಂತೆ ನಿಮಗೆ ಸಿಗಬೇಕಾದ್ದು ಸಿಕ್ಕೇ ಸಿಗುತ್ತದೆ. ನಿಮ್ಮ ಸಾಧನೆಯ ಫಲವಾದ ಯಶಸ್ಸು ಪರಿಪೂರ್ಣವಾಗಿರುತ್ತದೆ