
“ಸಂಪದ"ದಲ್ಲಿ ಬರಹಗಳನ್ನು ಪ್ರಕಟಿಸುವವರಿಗೂ ಓದುವವರಿಗೂ ಒಂದು ಸಂತಸದ ಸುದ್ದಿ: “ಸಂಪದ"ದಲ್ಲಿ ಬರಹಗಳ ಸಂಖ್ಯೆ 60,000 ದಾಟಲಿದೆ! “ಸಂಪದ" ಕನ್ನಡ ಬರಹಗಳ ದೊಡ್ಡ ಖಜಾನೆಯಾಗಿದೆ ಎಂದು ಸಂಭ್ರಮಿಸೋಣ.
ಈ ಬೆಳವಣಿಗೆಯ ಒಂದು ವಿಶೇಷವೆಂದರೆ ಕನ್ನಡ ಜಾಲತಾಣಗಳ ಜಗತ್ತಿನಲ್ಲಿ “ಸಂಪದ"ಕ್ಕೆ ಸಾಟಿಯಾದ ಪೋರ್ಟಲ್ ಹಾಗೂ ಆಪ್ ಇನ್ನೊಂದಿಲ್ಲ. ಇಂಟರ್-ನೆಟ್‌ನಲ್ಲಿ ತಮ್ಮ ಲೇಖನ/ ಬರಹಗಳನ್ನು ತಾವೇ ಪ್ರಕಟಿಸುವ ಅನುಕೂಲ ಒದಗಿಸಿರುವ ಪೋರ್ಟಲ್ ಹಾಗೂ ಆಪ್‌ಗಳಲ್ಲಿ “ಸಂಪದ"ದ ತಂತ್ರಜ್ಞಾನ ಅತ್ಯಂತ ಬಳಕೆದಾರಸ್ನೇಹಿ ಎಂಬುದಕ್ಕೆ ಇದರಲ್ಲಿ ಈ ವರೆಗೆ ಪ್ರಕಟವಾಗಿರುವ ಬರಹಗಳ ಸಂಖ್ಯೆಯೇ ಪುರಾವೆ, ಅಲ್ಲವೇ?
ಗಮನಿಸಬೇಕಾದ ಇನ್ನೊಂದು ಸಂಗತಿ: “ಸಂಪದ"ದಲ್ಲಿ ಬರಹ ಪ್ರಕಟಿಸಿರುವ ಎಲ್ಲರೂ ಫ್ರೀಲ್ಯಾನ್ಸಿಗಳು. ಇಲ್ಲಿ ತಮ್ಮ ಬರಹಗಳ ಮೂಲಕ ಮುನ್ನಡಿಯಿಟ್ಟು, ಹೆಸರುವಾಸಿ ಬರಹಗಾರರಾಗಿ ಬೆಳೆದವರು ಹಲವರು ಎಂಬುದೇ “ಸಂಪದ ಬಳಗ”ದಲ್ಲಿ ಧನ್ಯತೆ ಮೂಡಿಸುತ್ತಿದೆ.
ಫೇಸ್-ಬುಕ್, ಟ್ವಿಟ್ಟರ್-ಗಳ ಕಾಲದಲ್ಲಿ “ಸಂಪದ"ದಂತಹ ಪೋರ್ಟಲುಗಳಿಗೆ ಉಳಿಗಾಲವಿಲ್ಲ ಎಂದವರಿಗೆಲ್ಲ ಸವಾಲಾಗಿ ಮುಂದುವರಿಯುತ್ತಿದೆ “ಸಂಪದ." ಹೊಸಕಾಲದ ಹೊಸ ಪೋರ್ಟಲುಗಳಲ್ಲಿ ಮುಳುಗಿ ಎದ್ದು ಬೇಜಾರಾಗಿ ‘ಸಂಪದ"ಕ್ಕೆ ಮರಳಿ ಬಂದವರು ಹಲವರಿದ್ದಾರೆ.
ಕನ್ನಡದಲ್ಲಿ ಓದುಗರು ಎಂತಹ ಬರಹಗಳನ್ನು ಇಷ್ಟ ಪಡುತ್ತಾರೆ? ಎಂಬ ಪ್ರಶ್ನೆಗೆ ಉತ್ತರವಾಗಿವೆ “ಸಂಪದ"ದಲ್ಲಿ ಪ್ರಕಟವಾಗುತ್ತಿರುವ ಬರಹಗಳು. ಇವನ್ನು ಪ್ರತಿ ತಿಂಗಳೂ ಸಾವಿರಾರು ಜನರು ಓದುತ್ತಿದ್ದಾರೆ ಮತ್ತು ವಾರವಾರವೂ ಹೊಸ ಓದುಗರು “ಸಂಪದ"ಕ್ಕೆ ಬರುತ್ತಿದ್ದಾರೆ ಎಂಬುದನ್ನು ನಾವೆಲ್ಲರೂ ಗಮನಿಸಬೇಕು.
“ಸಂಪದ"ದ ಬರಹಗಾರರ ಮತ್ತು ಓದುಗರ ಸಂಖ್ಯೆ ಹೆಚ್ಚಲಿ ಎಂಬುದೇ ನಮ್ಮ ಆಶಯ. ಈ ನಿಟ್ಟಿನಲ್ಲಿ ಒಂದೆರಡು ಮಾತು: ವಿಷಯ, ಶೈಲಿ ಮತ್ತು ಭಾಷೆಯ ಬಗ್ಗೆ.
-ಲೇಖನಗಳನ್ನು ಬರೆಯಲಿಕ್ಕಂತೂ ಈಗ ವಿಷಯಗಳ ಕೊರತೆಯಿಲ್ಲ. ಆದರೆ, ಹತ್ತು ವರುಷಗಳ ನಂತರವೂ ಪ್ರಸ್ತುತವಾಗಿರುವ ವಿಷಯಗಳ ಆಯ್ಕೆ ಬರಹಗಾರರಿಗೆ ಸವಾಲಾಗಿದೆ.
-ಲೇಖನಗಳ ಶೈಲಿ ಹೇಗಿರಬೇಕು ಎಂಬ ಪ್ರಶ್ನೆಗೆ ಒಂದೇ ಉತ್ತರ: ಸರಾಗವಾಗಿ ಕೊನೆಯ ವರೆಗೆ ಓದಿಸಿಕೊಂಡು ಹೋಗುವಂತಿರಬೇಕು. ಇದಕ್ಕಾಗಿ, ಲೇಖನ ಪ್ರಕಟಿಸುವ ಮುನ್ನ, ನೀವು ಬರೆದದ್ದನ್ನು ನೀವೇ ಓದಿ ನೋಡುವುದು ಒಳ್ಳೆಯ ಅಭ್ಯಾಸ.
-ಭಾಷೆಯ ಬಗ್ಗೆ ಒಂದೇ ಮಾತು: ಬರಹದ ಭಾಷೆ ಶುದ್ಧವಾಗಿರಲಿ; ವ್ಯಾಕರಣ ತಪ್ಪುಗಳು ಇಲ್ಲದಿರಲಿ. ಇದಕ್ಕಾಗಿ ನಿರಂತರ ಓದು ಮತ್ತು ಶಬ್ದಕೋಶದ ಬಳಕೆ ಅತ್ಯಗತ್ಯ.
ಸದ್ಯದಲ್ಲೇ “ಸಂಪದ"ದ ಬರಹಗಳ ಸಂಖ್ಯೆ 60,000 ದಾಟಲಿದೆ. ಆ ದಾಖಲೆಯತ್ತ ಸಾಗುವ ಹಂತಗಳಲ್ಲಿ ಮೌಲಿಕ ಬರಹಗಳ ಸಂಖ್ಯೆ “ಸಂಪದ"ದಲ್ಲಿ ಹೆಚ್ಚಲಿ ಎಂಬ ಹಾರೈಕೆ. ಅದಕ್ಕಾಗಿ ಸಂಪದಿಗರ ಸಹಕಾರ ಹಾಗೂ ಭಾಗವಹಿಸುವಿಕೆಗಾಗಿ ವಿನಂತಿ.
ಫೋಟೋ: ಮಂಗಳೂರಿನ ಪಾಂಡೇಶ್ವರದ ಪ್ರಾದೇಶಿಕ ಕಚೇರಿಯಲ್ಲಿ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಕನ್ನಡ ಬಳಗ (ರಿ.) ಆಯೋಜಿಸಿದ್ದ “ಕನ್ನಡ ರಾಜ್ಯೋತ್ಸವ”ದಲ್ಲಿ ಪ್ರದರ್ಶಿಸಿದ್ದ ರಂಗೋಲಿ
