ರಜಾಕಾಲದ ಚಟುವಟಿಕೆ 2: ಮಂಡಲ ಚಿತ್ರಗಳಿಗೆ ಬಣ್ಣ ತುಂಬುವುದು

ರಜಾಕಾಲದಲ್ಲಿ ಸಾಮಾನ್ಯವಾಗಿ ಕೈಗೆತ್ತಿಕೊಳ್ಳುವ ಹತ್ತುಹಲವು ಚಟುವಟಿಕೆಗಳ ಬಗ್ಗೆ ಈ ಸರಣಿಯ ಮೊದಲ ಬರಹದಲ್ಲಿ ಪ್ರಸ್ತಾಪಿಸಿದ್ದೆ. ಅವುಗಳ ಜೊತೆಗೆ ಚದುರಂಗ, ಚೆನ್ನಮಣೆ, ಇಸ್ಪೀಟ್ ಆಟಗಳು ಇಂತಹ ಒಳಾಂಗಣದ ಆಟಗಳನ್ನೂ ಕಲಿತು ಆಡಬಹುದು.

ಬೀಜಗಳಿಂದ ಚಿತ್ರಾಕೃತಿಗಳ ರಚನೆ ಎಂಬ ಚಟುವಟಿಕೆಯ ಬಗ್ಗೆ ಮುಂಚಿನ ಬರಹದಲ್ಲಿ ತಿಳಿದುಕೊಂಡಿದ್ದೇವೆ. ಈಗ ಬೇರೊಂದು ಚಟುವಟಿಕೆಯ ಬಗ್ಗೆ ತಿಳಿಯೋಣ. 

ಮಂಡಲ ಚಿತ್ರಗಳಿಗೆ ಬಣ್ಣ ತುಂಬುವುದು
ಕಳೆದ ಐದಾರು ವರುಷಗಳಿಂದ “ಮಂಡಲಗಳು" ಎಂಬ ಚಿತ್ರಗಳು ಜನಪ್ರಿಯವಾಗುತ್ತಿವೆ. ಚೌಕ, ಆಯತ, ತ್ರಿಕೋನ, ವೃತ್ತ, ಸರಳ ರೇಖೆ, ವಕ್ರ ರೇಖೆಗಳು - ಇವನ್ನೆಲ್ಲ ಬಳಸಿ ಈ ಚಿತ್ರಗಳನ್ನು ರಚಿಸಲಾಗುತ್ತದೆ. ಹಾಗೆಯೇ, ಸಸ್ಯಗಳು, ಹೂಗಳು, ಹಣ್ಣುಗಳು, ಪಕ್ಷಿಗಳು, ಪ್ರಾಣಿಗಳು, ಕೀಟಗಳ ಆಕಾರಗಳನ್ನು ಅನುಸರಿಸಿ ಮಂಡಲಗಳನ್ನು ಚಿತ್ರಿಸಲಾಗುತ್ತದೆ. ಗಮನಿಸಿ: ಭಾರತದ ಪಾರಂಪರಿಕ "ಮಂಡಲಗಳು" (ಪೂಜಾವಿಧಿಗಳ ಅಂಗವಾಗಿ ಬರೆಯುವ ವಿನ್ಯಾಸಗಳು) ಇವೆಲ್ಲದಕ್ಕೆ ಪ್ರೇರಣೆ. 

ಇಂತಹ ರೇಖಾಚಿತ್ರಗಳಿರುವ ಪುಸ್ತಕಗಳು ಪುಸ್ತಕದ ಮಳಿಗೆಗಳಲ್ಲಿ ಲಭ್ಯ. ಅವುಗಳಲ್ಲಿ ನಿಮಗೆ ಬೇಕಾದ್ದನ್ನು ಖರೀದಿಸಿ ತಂದರಾಯಿತು. ಅನಂತರ ಬಣ್ಣಬಣ್ಣದ ಪೆನ್ಸಿಲುಗಳು ಅಥವಾ ಬಣ್ಣದ ಪೆಟ್ಟಿಗೆ - ಬ್ರಷ್ ಬಳಸಿ ಅವುಗಳಿಗೆ ಬಣ್ಣ ತುಂಬುವುದು ಚೇತೋಹಾರಿ ಕೆಲಸ. ಪ್ರತಿಯೊಂದು ಮಂಡಲಕ್ಕೆ ಬಣ್ಣ ತುಂಬುತ್ತಿದ್ದಂತೆ ನಿಮ್ಮ ಉಲ್ಲಾಸ ಹೆಚ್ಚಬೇಕು.  

ಆರಾಮವಾಗಿ ಕುಳಿತು, ಪುಸ್ತಕದ ಯಾವುದೇ ಪುಟವನ್ನು ಆಯ್ದುಕೊಳ್ಳಿ. ಅಲ್ಲಿನ ವಿನ್ಯಾಸದ ಚಿಂತನೆ ಮಾಡುತ್ತಾ, ಅದಕ್ಕೆ ಖುಷಿ ಬಂದಂತೆ ಬಣ್ಣ ತುಂಬಿ. ಬಣ್ಣ ತುಂಬುವಾಗ ನೀವು ಯಾವುದೇ ನಿಯಮ ಅನುಸರಿಸ ಬೇಕಾಗಿಲ್ಲ. ಉದಾಹರಣೆಗೆ ಸಸ್ಯಗಳ ಎಲೆಗಳಿಗೆ ಹಸುರು ಬಣ್ಣವನ್ನೇ ತುಂಬ ಬೇಕೆಂದಿಲ್ಲ (ಬಣ್ಣಬಣ್ಣದ ಎಲೆಗಳ ಕ್ರೋಟನ್ ಗಿಡಗಳನ್ನು ನೋಡಿದ್ದೀರಿ ತಾನೇ?) 

ಇಂತಹ ಎರಡು ಪುಟ್ಟ ಇಂಗ್ಲಿಷ್ ಪುಸ್ತಕಗಳ (ಅಳತೆ: 15 ಸೆ.ಮೀ. ೱ 15 ಸೆ.ಮೀ.) ವಿವರ ಇಲ್ಲಿದೆ:
ಅ) ಮಂಡಲಾಸ್ ಫಾರ್ ಮೈಂಡ್ ಫುಲ್‌ನೆಸ್ (ಕ್ರಮಸಂಖ್ಯೆ ಐಎಸ್-ಬಿಎನ್ 978-1-78557-911-0) 
ಆ) ಕಾಮಿಂಗ್ ನೇಚರ್ (ಕ್ರಮಸಂಖ್ಯೆ ಐಎಸ್-ಬಿಎನ್ 978-1-78557-910-3) 
ಈ ಎರಡೂ ಪುಸ್ತಕಗಳ ಪ್ರಕಾಶಕರು: ಐಗ್ಲೂ ಬುಕ್ಸ್ ಪ್ರೈ.ಲಿ.
ವಿಳಾಸ: ಕೊಟೇಜ್ ಫಾರ್ಮ್, ಸೈವೆಲ್ (Sywell)  ಎನ್‌ಎನ್6 0ಬಿಜೆ 
ಪ್ರಕಟಣೆ: 2016          ಪುಟಗಳು: 90     ಬೆಲೆ: 6.95 ಡಾಲರ್
ಇಂತಹ ಬೇರೆ ಹತ್ತಾರು ದೊಡ್ಡ ಅಳತೆಯ ಪುಸ್ತಕಗಳೂ ಲಭ್ಯವಿವೆ.